ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ ಅವರ ಲೇಖನಿಯಿಂದ

ಕಮಲಾಕ್ಷಿ ಕೌಜಲಗಿಯವರ

ಗಜಲುಗಳಲ್ಲಿ ಜೀವನ ಸಂಘರ್ಷ

ದಿನೇ ದಿನೇ ಬೇಸಿಗೆಯ ಕಾವು ಹೆಚ್ಚಾಗುತ್ತಿದೆ, ಸಿಡಿಮಿಡಿ ಅನಿಸುತ್ತಿದೆ; ತಂಪಿನ ತಾವನ್ನು ಹುಡುಕಿಕೊಂಡು ಹೋಗಲು ಪ್ರೇರೇಪಿಸುತ್ತಿದೆ. ಇಂಥಹ ಹೊತ್ತಿನಲ್ಲಿ ಗಜಲ್ ‘ಚಾಮರ’ದೊಂದಿಗೆ ಬರುತ್ತಿದ್ದೇನೆ, ಝಳವನ್ನು ತುಸು ಕಡಿಮೆಗೊಳಿಸಲು. ಪ್ರತಿ ಗುರುವಾರದಂತೆ ಈ ಗುರುವಾರವೂ ಸಹ ಒಬ್ಬ ಗಜಲ್ ಗೋ ಅವರ ಪರಿಚಯದೊಂದಿಗೆ ಬಂದಿದ್ದೀನಿ, ತಮ್ಮೆಲ್ಲರ ನಿರೀಕ್ಷೆಯನ್ನು ಸಾಕಾರಗೊಳಿಸಲು. ಮತ್ತೇಕೆ ಮೀನಾಮೇಷ ಎಣಿಸುವುದು, ಜಾಗತಿಕ ಗಜಲ್ ಲೋಕದ ಒಂದು ಷೇರ್ ನೊಂದಿಗೆ ಮುಂದಡಿ ಇಡೋಣವೇ…!!

ನಿನ್ನ ಹೃದಯ ನನ್ನ ಹೃದಯಕ್ಕೆ ಸಮ ಆಗಲಾರದು
ಅದು ಗಾಜು ಆಗಲಾರದು, ಇದು ಕಲ್ಲು ಆಗಲಾರದು”
-ದಾಗ್ ದೇಹಲವಿ

    ಪ್ರೀತಿಯು ವಿಶ್ವದಲ್ಲಿ ಅತ್ಯಂತ ಶಕ್ತಿಶಾಲಿ ಶಕ್ತಿಯಾಗಿದೆ. ಪರಸ್ಪರ ಪ್ರೀತಿಸುವ ಎರಡು ಜೀವಿಗಳು ತುಸು ಸಮಯಕ್ಕೆ ಪ್ರತ್ಯೇಕ ಆಗಬಹುದು, ಆದರೆ ಅದು ತಾತ್ಕಾಲಿಕವಾಗಿರುತ್ತದೆಯಷ್ಟೇ! ಆಕರ್ಷಣೆಯ ಹಲವು ನಿಯಮಗಳಿಂದ ಪ್ರೇಮಿಗಳು ಆಯಸ್ಕಾಂತಗಳಂತೆ ಮತ್ತೆ ಒಟ್ಟಿಗೆ ಜೊತೆ ಜೊತೆಗೆ ಉಸಿರಾಡುತ್ತಾರೆ. ಹಾಗಂಥ ಇದರಲ್ಲಿ ನೋವು, ದುಃಖ ಇರಲ್ಲ ಎಂದಲ್ಲ. ದುಃಖವನ್ನು ಪೋಷಿಸಬೇಕು, ಅದರ ಒಂದು ಹನಿಯನ್ನು ಚೆಲ್ಲಿದಂತೆ. ಏಕೆಂದರೆ ಅದು ಉತ್ತುಂಗವನ್ನು ತಲುಪಲು ನಮಗೆ ಸಹಾಯ ಮಾಡುತ್ತದೆ. ಬದುಕಿನ ನಡುವೆ ಉಸಿರಾಡುವುದನ್ನೇ ಮರೆತ ಕ್ಷಣವೇ ಸಾವು ಸಂಭವಿಸುವುದು. ಜೀವನದಲ್ಲಿ ದುಃಖಿಸುವವರು ಹಗಲಿನಲ್ಲಿ ನೀಲಿ ಆಕಾಶವನ್ನು, ರಾತ್ರಿಯಲ್ಲಿ ನಕ್ಷತ್ರಗಳನ್ನು ನೋಡಲು ಕಲಿಯುತ್ತಾರೆ ಎನ್ನಲಾಗುತ್ತದೆ. ಸಾವು ಕೆಲವೊಮ್ಮೆ ಪ್ರೀತಿಗಿಂತಲೂ ಸೌಮ್ಯವಾಗಿರುತ್ತದೆ, ಕಾರಣ ಸಾವಿನ ಭಯ ಪ್ರೇಮಿಗಳ ಎದೆಯೊಳಗೆ ಆಳವಾಗಿ ಸಮಾಧಿ ಮಾಡಿದಾಗ. ನಿಜವಾದ ಪ್ರೀತಿ ಸಾವಿನ ಕ್ಷೇತ್ರವನ್ನು ವಿರೋಧಿಸುತ್ತದೆ. ಆದಾಗ್ಯೂ "ಸಾವು ಓಯಸಿಸ್ ಇದ್ದಂತೆ; ಜೀವನದ ಶಾಶ್ವತ ರಜೆ" ಎಂಬ

ಏಪ್ರಿಲ್ ಸೈಬಲ್ಕಿವಿಚ್ ರವರ ಮಾತು ಅಷ್ಟೇ ಸತ್ಯ. ಜೀವನವು ಕೇವಲ ಸಾವಿನ ನಿಟ್ಟುಸಿರು. ಅಂದರೆ ಜೀವನವು ಆಹ್ಲಾದಕರವಾಗಿರುತ್ತದೆ. ಸಾವು ಶಾಂತಿಯುತವಾಗಿದೆ. “Death is not the opposite of life, but a part of it” ಎಂಬ ಜಪಾನ್ ಸಾಹಿತಿ ಹರುಕಿ ಮುರಾಕಮಿಯವರ ಹೇಳಿಕೆ ಸಾವಿನ ಸಾರ್ವತ್ರಿಕತೆಯನ್ನು ಬಿಂಬಿಸುತ್ತದೆ. ಸಾವಿಗೆ ಹೆದರುವವರು ಅದನ್ನು ಹೆಗಲ ಮೇಲೆ ಹೊತ್ತುಕೊಂಡು ತಿರುಗುತ್ತಾರೆ. ಇಂಥಹ ಜೀವನ, ಸಾವು ಮತ್ತು ಪ್ರೀತಿಯ ತ್ರಿಕೋನ ಕಥಾಹಂದರವನ್ನು ತನ್ನ ಮಡಿಲಲ್ಲಿಟ್ಟುಕೊಂಡು ಬಂದಿದ್ದು, ಬರುತ್ತಿರುವುದು ಸಾಹಿತ್ಯ. ಅದೂ ವಿಶೇಷವಾಗಿ ಪ್ರೀತಿಯ ನೆರಳಾಗಿರುವ ಸಾವು, ನೋವನ್ನು ತನ್ನ ಅಶಅರ್ ನಲ್ಲಿ ಕಾಪಿಟ್ಟುಕೊಂಡು ಬಂದಿರುವ ಗಜಲ್ ಕಾವ್ಯ ಪ್ರಕಾರ ಇಂದು ಕರುನಾಡಿನ, ಕನ್ನಡಿಗರ ನಾಲಿಗೆಯ ತುದಿಯಲ್ಲಿ ನಳನಳಿಸುತ್ತಿದೆ. ಇಂಥಹ ಗಜಲ್ ಕೃಷಿ ನಮ್ಮಲ್ಲಿ ಯಥೇಚ್ಛವಾಗಿ ಸಾಗುತ್ತಿದೆ, ಅಸಂಖ್ಯಾತ ಬರಹಗಾರರು ಕೃಷಿ ಮಾಡುತ್ತಿದ್ದಾರೆ. ಅವರುಗಳಲ್ಲಿ ಶ್ರೀಮತಿ ಕಮಲಾಕ್ಷಿ ಕೌಜಲಗಿಯವರೂ ಒಬ್ಬರು.

   ಶ್ರೀಮತಿ ಕಮಲಾಕ್ಷಿ ಕೌಜಲಗಿಯವರು ವಿಜಯಪುರದಲ್ಲಿ (ಗುಮ್ಮಟ ನಗರಿ) ೧೯೭೭ ಅಕ್ಟೋಬರ್ ೧೦ ರಂದು ಶ್ರೀ ಗಂಗಾಧರ ಹಾಗೂ ಶ್ರೀಮತಿ ಕಲಾವತಿ ಇವರ ಸುಪುತ್ರಿಯಾಗಿ ಜನಿಸಿದರು. ಇವರ ತಾಯಿಯವರು ಆರೋಗ್ಯ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಅವರಿಗೆ ಎಲ್ಲೆಲ್ಲಿ ವರ್ಗಾವಣೆ ಆಗುತ್ತಿತ್ತೋ ಅಲ್ಲಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಬೇಕಾಯಿತು. ಒಂದರಿಂದ ನಾಲ್ಕನೇ ತರಗತಿಯವರೆಗೂ ಹೂವಿನ ಹಿಪ್ಪರಗಿಯಲ್ಲಿ, ಐದರಿಂದ ಪಿ.ಯು.ಸಿ ವರೆಗೂ ಬಸವನ ಬಾಗೇವಾಡಿಯಲ್ಲಿ, ಜಿ.ಎನ್.ಎಂ, ಪದವಿಯನ್ನು ವಿಜಯಪುರದಲ್ಲಿ ಹಾಗೂ HCWM ಕೋರ್ಸನ್ನು ಬೆಂಗಳೂರಿನ ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ಮುಗಿಸಿದ್ದಾರೆ. ಪ್ರಸ್ತುತವಾಗಿ ಆರೋಗ್ಯ ಇಲಾಖೆಯಲ್ಲಿ ಶುಶ್ರೂಷಾಧಿಕಾರಿಯಾಗಿ (ನರ್ಸಿಂಗ್ ಆಫೀಸರ್) ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಸಾಹಿತ್ಯವನ್ನು ಪ್ರೀತಿಸುತ್ತ, ಆರಾಧಿಸುತ್ತ ಬಂದಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುತ್ತ "ಕಾವ್ಯ ಸುಧೆಯ ಸಿಂಚನ" (ಕವನ ಸಂಕಲನ) ಹಾಗೂ "ಅಂತರಂಗದ ಅಲೆಗಳು" (ಗಜಲ್ ಸಂಕಲನ) ಎನ್ನುವ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. 

  ಕಮಲಾಕ್ಷಿ ಕೌಜಲಗಿಯವರು ಬರೆದ ಸುಮಾರು ಕವನ, ಗಜಲ್, ಭಾವಗೀತೆ, ಜಾನಪದ ಗೀತೆ (ತ್ರಿಪದಿಯಲ್ಲಿ), ಹನಿಗವನ, ಶಿಶು ಗೀತೆ, ತಂಕಾ, ಹೈಕು... ಮುಂತಾದ ಸಾಹಿತ್ಯದ ಹಲವು ಪ್ರಕಾರಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅಕ್ಷರದೀಪ ಸಾಹಿತ್ಯ ವೇದಿಕೆಯ ಆಯೋಜಕರಲ್ಲಿ ಇವರೂ ಒಬ್ಬರಾಗಿದ್ದು ಪ್ರತಿ ಶನಿವಾರ ಶಿಶು ಗೀತೆ ರಚನೆ ಸ್ಪರ್ಧೆಯ ಆಯೋಜನೆಯನ್ನು ಮಾಡುತ್ತಿದ್ದಾರೆ. ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷತೆ ಹಾಗೂ ರಾಜ್ಯ ಘಟಕದ ಪದಾಧಿಕಾರಿಯಾಗಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರುವ ಇವರಿಗೆ ಹಲವಾರು ಸಂಘ, ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ೨೦೨೧ರಲ್ಲಿ ಆರ್ ಜೆ ಪಿ ಪಕ್ಷ ನೀಡಿರುವ 'ಕೆಳದಿ ಚೆನ್ನಮ್ಮ ಪ್ರಶಸ್ತಿ' ಹಾಗೂ ೨೦೨೨ರಲ್ಲಿ "ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ" ವತಿಯಿಂದ ನೀಡಲ್ಪಟ್ಟಿರುವ 'ರವಿ ಬೆಳಗೆರೆ ಪ್ರಶಸ್ತಿ' ಮುಖ್ಯವಾಗಿವೆ. 

   ಬಿಟ್ಟು ಹೋದವರಿಗೆ ನಮ್ಮಲ್ಲಿರುವ ನೆನಪುಗಳೇ ನಮಗೆ ಅಂತಿಮ ಸಾಂತ್ವನ. ನಾವು ಸಾಯುವ ದಿನ, ಒಂದು ಕಾಲದಲ್ಲಿ ನಮ್ಮದಾಗಿದ್ದೆಲ್ಲವೂ ಇನ್ಯಾರದೊ ಆಗಿ ಬಿಡುತ್ತವೆ. ಆದರೆ ನಮ್ಮ ಕನಸುಗಳನ್ನು ಹೊರತುಪಡಿಸಿ ಎಂಬುದನ್ನು ಗಜಲ್ ಅನಾದಿಕಾಲದಿಂದಲೂ ಸಾರುತ್ತ ಬಂದಿದೆ. "ನಮ್ಮ ಕನಸುಗಳ ನಿಶ್ಚಲತೆಯಲ್ಲಿ, ನಮ್ಮ ಪ್ರೀತಿಪಾತ್ರರು ಮಾತನಾಡುತ್ತಾರೆ" ಎಂಬ ಎಂಜಿ ಕಾರ್ಬೆಟ್-ಕೈಪರ್ ರವರ ಮಾತು ಪ್ರೀತಿಯ ಪಾವಿತ್ರ್ಯತೆಯನ್ನು ಸಾರುತ್ತದೆ. ಎದೆಯಲ್ಲಿನ ನೋವಿಗೆ ಕಾವು ಕೊಟ್ಟು ತುಟಿಯಂಚಿನಲ್ಲಿ ನಗುವ ಕಲೆಯೇ ಗಜಲ್ ನ ಜೀವಾಳ. ಇಲ್ಲಿ ನೋವಿದೆ, ಆದರೆ ಆತ್ಮಹತ್ಯೆಯತ್ತ ಸುಳಿಯುವ ದುರ್ಬಲ ನೋವಲ್ಲ. ಬದಲಿಗೆ ಜೀವನವನ್ನು ಕಂಡುಕೊಳ್ಳುವ ದೃಢವಾದ ನೋವು. ಈ ದಿಸೆಯಲ್ಲಿ ಗಜಲ್ ಗೋ ಶ್ರೀಮತಿ ಕಮಲಾಕ್ಷಿ ಕೌಜಲಗಿಯವರ ಗಜಲ್ ಗಳಲ್ಲಿ ಸಂಸ್ಕೃತಿಯ ಹೂರಣ, ಸೈನಿಕರ ನಿಷ್ಠೆ, ನೈತಿಕ ಮೌಲ್ಯಗಳ ಹುಡುಕಾಟ, ರೈತನ ಬವಣೆ, ಅನುಷಂಗೀಕವಾಗಿ ಪೌರಾಣಿಕ ಪಾತ್ರಗಳ ಚರ್ಚೆ, ಸಾಮಾಜಿಕ ಕಳಕಳಿ, ಪ್ರೀತಿ, ಪ್ರೇಮ, ಪ್ರಣಯ, ವಿರಹ, ಕನವರಿಕೆ, ಸಿಹಿ-ಕಹಿಯ ಸಂಗಮ, ಸ್ತ್ರೀ ಸಂವೇದನೆಯ ಮೂಕವೇದನೆ, ಪುರುಷ ಪ್ರಧಾನ ಸಮಾಜದ ಅಟ್ಟಹಾಸ, ಬಡತನದ ಬೇಗುದಿ, ಧಾರ್ಮಿಕ ಡಾಂಭಿಕತೆ.... ಎಲ್ಲವೂ ಇಲ್ಲಿ ಮುಪ್ಪರಿಗೊಂಡಿವೆ. 

 ಜೀವನವು ಯಾರಿಗೆ ಪವಿತ್ರವೆನಿಸುತ್ತದೆಯೋ ಅವರು ಮಾತ್ರ ಜೀವನದಲ್ಲಿ ನೈತಿಕತೆಯನ್ನು ಹೊಂದಿರಲು ಸಾಧ್ಯ. ನೈತಿಕತೆ ಎಂಬುದು ತನ್ನ ಸ್ವಂತ ವ್ಯಕ್ತಿತ್ವದ ಆಂತರಿಕ ಪರಿಪೂರ್ಣತೆಯನ್ನು ಭದ್ರಪಡಿಸಿಕೊಳ್ಳಲು ನಿರ್ದೇಶಿಸಿದ ಮನುಷ್ಯನ ಚಟುವಟಿಕೆಯಾಗಿದೆ. ನೈತಿಕತೆ ಇಲ್ಲದ ಮನುಷ್ಯನು ಈ ಪ್ರಪಂಚದಲ್ಲಿರುವ ಕಾಡು ಪ್ರಾಣಿಯೆ ಸರಿ! ಇಂದು ದೈಹಿಕ ಧೈರ್ಯವು ಜಗತ್ತಿನಲ್ಲಿ ತುಂಬಾ ಸಾಮಾನ್ಯವಾಗುತ್ತಿದೆ ಮತ್ತು ನೈತಿಕ ಧೈರ್ಯವು ತುಂಬಾನೇ ವಿರಳವಾಗುತ್ತಿದೆ. ಇಲ್ಲಿ ಶಾಯರಾ ಶ್ರೀಮತಿ ಕಮಲಾಕ್ಷಿ ಕೌಜಲಗಿಯವರು ತಮ್ಮ ಷೇರ್ ನಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತುವ, ಬೆಳೆಸುವ ಸದಾಶಯವನ್ನು ವ್ಯಕ್ತಪಡಿಸಿದ್ದಾರೆ. ಕಿತ್ತುಕೊಳ್ಳುವ ಸಂಸ್ಕೃತಿ ಹೆಚ್ಚುತ್ತಿರುವ ಈ ದಿನಗಳಲ್ಲಿ ಹಂಚುವ ಸಾತ್ವಿಕತೆ ಮರೆಯಾಗುತ್ತಿರುವುದಕ್ಕೆ ಆತಂಕವನ್ನು ಸೂಚಿಸಿದ್ದಾರೆ. 

“ಹಸಿವಿದ್ದರೂ ಕಸಿಯದಿರು ಇನ್ನೊಬ್ಬರ ತುತ್ತು
ಕಸುವಿದ್ದರೂ ಬಸಿಯದಿರು ಮತ್ತೊಬ್ಬರ ಸೊತ್ತು”

ರೈತನು ಇಂದು ಅನುಕಂಪದ ಕೇಂದ್ರಬಿಂದು ಆಗುತ್ತಿರುವುದು ಶೋಚನೀಯ. ರೈತ ಸ್ವಾಭಿಮಾನಿಯ ಧಣಿ. ಯಾರ ಮುಂದೆಯೂ ಕೈ ಚಾಚದೆ ಹಗಲಿರುಳು ತನ್ನ ಶ್ರಮವನ್ನೇ ನಂಬಿ ಬದುಕುತ್ತಿರುವವನು. ಇಂಥಹ ರೈತನ ಮನೋಬಲವನ್ನು ನಾವುಗಳು ಅರ್ಥೈಸಿಕೊಳ್ಳಬೇಕಿದೆ, ವಾಸ್ತವದ ನೆಲೆಯಲ್ಲಿ ಅವನಿಗೆ ಸಾಥ್ ಕೊಡಬೇಕಾಗಿದೆ. ಇಲ್ಲಿ ಸುಖನವರ್ ಶ್ರೀಮತಿ ಕಮಲಾಕ್ಷಿ ಕೌಜಲಗಿಯವರು ತಮ್ಮ ಒಂದು ಗಜಲ್ ನಲ್ಲಿ ರೈತರ ಜೀವನ ಕುರಿತು ತುಂಬಾ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ರೈತ ದೇಶದ ಬೆನ್ನೆಲುಬು ಎಂದು ಸಭೆ, ಸಮಾರಂಭಗಳಲ್ಲಿ, ಪುಸ್ತಕಗಳಲ್ಲಿ ಹಾಡಿ ಹೊಗಳುತ್ತೇವೆ. ನಿಜ ಜೀವನದಲ್ಲಿ ಅವನ ಸ್ಥಿತಿ ದಯನೀಯ. ಜಾಗತಿಕ ಶೋಕಿಲಾಲರ ಮುಂದೆ ಬದುಕುವುದು ಒಂದು ಬಹುದೊಡ್ಡ ಚಾಲೆಂಜ್ ಆಗಿದೆ. ನಮ್ಮ ರೈತರು ಇಂದಿನ ವೈಜ್ಞಾನಿಕ ಯುಗದಲ್ಲಿ ವಿಜ್ಞಾನದೊಂದಿಗೆ ಹೆಜ್ಜೆ ಹಾಕಬೇಕಿದೆ ಎಂಬುದನ್ನು ಈ ಷೇರ್ ಹೇಳುತ್ತಿದೆ. ರೈತರು ಮಾನ್ಸೂನ್ ಮಳೆಯನ್ನು ಮಾತ್ರ ನಂಬದೆ, ಪರ್ಯಾಯ ವ್ಯವಸ್ಥೆಯೊಡನೆ ಕೃಷಿ ಮಾಡುವ ಜರೂರತ್ತು ಇದೆ.  

ಬೆನ್ನೆಲುಬು ಇವನು ದೇಶಕೆ ಅನ್ನದಾತ ಎನಿಸಿಕೊಂಡಿರುವನು
ಹಲುಬುವನು ವರುಣ ಕೈಕೊಡಲು ನಿರಾಸೆಯ ಬಾಧೆಗೆ ಮಡಿದನು ನೋಡು”

  ಯಾರಾದರೂ ನಮ್ಮನ್ನು ನೋಯಿಸಿದಾಗ ಇನ್ನೂ ಅವರ ಬಗ್ಗೆ ಸುಂದರವಾಗಿ ಮಾತನಾಡಲು ದುಃಖವು ನಮಗೆ ಕಲಿಸಿ ಕೊಡುತ್ತದೆ ಎಂಬುದು ಗಜಲ್ ನ ಮೂಲ ಆಶಯ. ಈ ಹಿನ್ನೆಲೆಯಲ್ಲಿ ಗಜಲ್ ಗೋ ಶ್ರೀಮತಿ ಕಮಲಾಕ್ಷಿ ಕೌಜಲಗಿಯವರಿಂದ ಇನ್ನೂ ಹೆಚ್ಚು ಹೆಚ್ಚು ಗಜಲ್ ಗಳು ಮೂಡಿಬರಲಿ, ಅವುಗಳು ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ. 

ಹೇಳಿ ಬಿಡು ಒಂದು ದಿನ ನಿನ್ನ ಹೃದಯದಲ್ಲಿ ಏನಿದೆಯೆಂದು
ಕೇಳಿ ಬಿಡು ಒಂದು ದಿನ ನನ್ನ ಹೃದಯದಲ್ಲಿ ಏನಿದೆಯೆಂದು”
-ಜೋಶ್ ಮಲೀಹಬಾದಿ

ಗಜಲ್ ಗುಂಗು ಎಂಥಹ ಮನಸ್ಸಿಗಾದರೂ, ಯಾವ ಸಮಯದಲ್ಲಾದರೂ ಮುದ ನೀಡುತ್ತದೆ ಎಂಬುದನ್ನು ನಾನು ಬಲ್ಲೆ. ಆದರೆ ಏನು ಮಾಡುವುದು, ಸಮಯ ಯಾರ ಅಪ್ಪನ ಸ್ವತ್ತಲ್ಲ; ಅದರ ಮೌನಾಜ್ಞೆಯನ್ನು ಮೀರಲಾದಿತೆ? ಇವಾಗ ತೆರಳಿ ಮತ್ತೇ ಮುಂದಿನ ಗುರುವಾರದಂದು ತಮ್ಮ ಸಮಕ್ಷಮ ಹಾಜರಿರುವೆ. ಬಾಯ್…!!
ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

One thought on “

  1. Pingback: -

Leave a Reply

Back To Top