ನಯನ ಭಟ್ ಜುಲ್ ಕಾಫಿಯಾ ಗಜಲ್

ಕಾವ್ಯ ಸಂಗಾತಿ

ನಯನ ಭಟ್

ಜುಲ್ ಕಾಫಿಯಾ ಗಜಲ್

ನಿಡುಸೊಯ್ವ ಉಸಿರ ಬಿಸಿ ವೇದ್ಯವಾಗುತ್ತಿಲ್ಲ ಆವರಿಸಿಬಿಡು ನೀನೊಮ್ಮೆ
ಬಂಜೆಯಾಗುತಿಹ ನೋವ ಸಹಿಸಲಾಗುತ್ತಿಲ್ಲ ಹರ್ಷಿಸಿಬಿಡು ನೀನೊಮ್ಮೆ

ಬಿರುಕುಗಳ ಪಾರುಪತ್ಯ ಬಿರುಸಾಗಿ ಸಾಗುತಿರಲು ಮೌನದಿ ಇರಲೆಂತು
ಕ್ಷಣಗಳ ಕಗ್ಗೊಲೆಗೆ ಭಾವಗಳು ಸಮನಿಸುತ್ತಿಲ್ಲ ವರ್ಷಿಸಿಬಿಡು ನೀನೊಮ್ಮೆ

ನಿರಾಸೆಯ ತಾಸುಗಳು ಬಿತ್ತುತ್ತಿವೆ ದುರ್ಭಿಕ್ಷತೆಯ ಕಿಚ್ಚು ಹಬ್ಬುವ ಭೀತಿ
ತುಂಬು ತೆನೆಗಳ ಲಾಸ್ಯವ ಕಾಣುವಾಸೆ ಬತ್ತುತ್ತಿಲ್ಲ ನಕ್ಕುಬಿಡು ನೀನೊಮ್ಮೆ

ನಿಯತಿ ಇತ್ತಿಹ ಸದ್ವಿಚಾರಗಳಿಗೆ ಕಪ್ಪು ಚುಕ್ಕೆಯ ಹಚ್ಚಿ ಮೆರೆವೆ ಏಕೆ ಹೇಳು
ಕರ್ಮಗಳ ನಿಯತ್ತನ್ನು ಮೀರಿ ನಡೆಯಲಾಗುತ್ತಿಲ್ಲ ನಲಿಸಿಬಿಡು ನೀನೊಮ್ಮೆ

ನಿಸ್ಸಾರಗೊಳಿಸದಿರು ಬಾನತ್ತ ನೆಟ್ಟ ಮಡಿಲ ಕಂದಮ್ಮಗಳ ನಯನಗಳನು
ಶ್ರಮದ ಹೃದ್ಯ ನೆನವರಿಕೆಗಳನು ನಶಿಸಲಾಗುತ್ತಿಲ್ಲ ಇಳಿದುಬಿಡು ನೀನೊಮ್ಮೆ


ನಯನ ಭಟ್

Leave a Reply

Back To Top