ತರಹಿ ಗಜಲ್ಅನಸೂಯ ಜಹಗೀರದಾರ

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ತರಹಿ ಗಜಲ್
ಹೈ ತೋ ಸರ್..ಅವರ ಮಿಶ್ರಾ
(ಎದೆಯೊಳಗೆ‌…)

ಕಣ್ಣಿವೆ ಸೀಳಿ ಹರಿದ ಕಂಬನಿ ಬಿಂದುಗಳೆಷ್ಟೋ
ಎದೆಯೊಳಗೆ ಕಮರಿಹೋದ ಕನಸುಗಳೆಷ್ಟೋ

ಮುಚ್ಚಿಟ್ಟ ಸತ್ಯಗಳು ಕೊಳೆತು ನಾರುತ್ತಿವೆ ಇಲ್ಲಿ
ಬಣ್ಣ ಹಚ್ಚಿ ಅಭಿನಯಿಸಿದ ನಾಟಕಗಳೆಷ್ಟೋ

ಆರದ ಗಾಯಕೆ ನಿತ್ಯ ಮುಲಾಮು ಸವರುತ್ತಿರುವೆ
ತೇಪೆ ಹಾಕಿದ ಹೊಂದಿಕೆಯ ಹೊದಿಕೆಗಳೆಷ್ಟೋ

ಕಾರ್ಮೋಡ ಆವರಿಸಿ ತಾರೆಗಳು ಮೌನವಾಗಿವೆ
ಬೆಳದಿಂಗಳು ಕಾಣದೆ ಸರಿದ ಇರುಳುಗಳೆಷ್ಟೋ

ಮತಲಬ್ಬಿ ದುನಿಯಾದಲಿ ಒಳಸಂಚಿನ ನೋವಿದೆ
ಕಾಸಿದ ತನ್ನ ಕಬ್ಬಿಣವನೇ ಬಡಿದ ಸುತ್ತಿಗೆಗಳೆಷ್ಟೋ

ದೌಲತ್ತಿನ ಶಹರದಲಿ ಹಕೀಕತ್ತು ಎಲ್ಲೋ ಅಡಗಿದೆ
ಶೋಧನೆಯಲಿ ನಡೆದ ಕಾವ್ಯದ ನಡಿಗೆಗಳೆಷ್ಟೋ

ಮಸಣದಲಿ ಉರಿದುರಿದು ಚಿತೆಗಳು ನರ್ತಿಸುತ್ತಿವೆ
ಎದೆಯ ಗರ್ಭದಿ ಅಡಗಿದ ಅವಮಾನಗಳೆಷ್ಟೋ

ಯಾವ ಆತ್ಮ ಯಾವ ದೇಹ ಧರಿಸಿದೆಯೋ ಕಾಣೆ ಅನು
ನಾನು ನನ್ನದೆಂದು ಅಂದುಕೊಂಡ ಮಿಥ್ಯಗಳೆಷ್ಟೋ


Leave a Reply

Back To Top