ಅಂಕಣ ಗಜಲ್ ಲೋಕ

admin

ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ಆನಂದ ಪಾಟೀಲ ರವರ ಗಜಲ್ ಗಳಲ್ಲಿ ಜೀವನ ಶ್ರದ್ಧೆ..

ಎಲ್ಲರಿಗೂ ಮಲ್ಲಿಯ ಮನದಾಳದ ನಮಸ್ಕಾರಗಳು.

    ‘ಗಜಲ್’ ಎಂದರೆ ಕೇವಲ ಕಾವ್ಯ ಪ್ರಕಾರವಲ್ಲ, ಅದೊಂದು ಹೃದಯದ ಬಡಿತ, ಮನಸುಗಳ ಕನವರಿಕೆ, ಪಿಸುಮಾತುಗಳ ದಿಬ್ಬಣ. ಗಜಲ್ ಬರೆಯಲು, ಗಜಲ್ ಬಗ್ಗೆ ಮಾತನಾಡಲು ಹಾಗೂ ಗಜಲ್ ಕಾರರ ಪರಿಚಯ ಮಾಡಲು ಅತೀವ ಸಂತಸ ಎನಿಸುತ್ತದೆ. ಗುರುವಾರವೆಂದರೆ ನನಗೆ ಗಜಲ್ ವಾರವಿದ್ದಂತೆ! ಅಂತೆಯೇ ಈ ವಾರವೂ ಸಹ ಪ್ರತಿ ವಾರದಂತೆ ಸುಖನವರ್ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ಬಂದಿರುವೆ. ಮತ್ತೇಕೆ ಒಣ ಮಾತುಗಳು, ಬನ್ನಿ.. ಷೇರ್ ನೊಂದಿಗೆ ಮುಂದಡಿ ಇಡೋಣ…!!

ನಿನ್ನೆ ಬೆಳದಿಂಗಳ ರಾತ್ರಿಯಿತ್ತು ಇರುಳಿಡಿ ನಡೆದಿತ್ತು ವಾದ ನಿನ್ನದೇ
ಕೆಲವರು ಚಂದಿರ ಎಂದರೆ ಕೆಲವರು ಎಂದರು ಮುಖ ನಿನ್ನದೇ”
-ಇಬ್ರ-ಎ-ಇನ್ಶಾ

      ಜೀವನ ಎನ್ನುವುದೊಂದು ಸುಂದರವಾದ ಪ್ರಯಾಣ. ಇದು ಪ್ರತಿ ಕ್ಷಣವೂ ಹೊಸ ಆರಂಭದೊಂದಿಗೆ ಚಲಿಸುತ್ತದೆ. ಇಲ್ಲಿ ಯಾವುದೂ ಮುಖ್ಯವಲ್ಲ, ಅಮುಖ್ಯವೂ ಅಲ್ಲ. ಇದು ಒಂದು ಸಣ್ಣ ವ್ಯವಹಾರ; ನಾವು ಇದನ್ನು ಸಾಧ್ಯವಾದಷ್ಟು ಸುಗಮವಾಗಿಸಲು ಪ್ರಯತ್ನಿಸಬೇಕು, ಮತ್ತು ಕಲಹದಿಂದ ಮುಕ್ತಗೊಳಿಸಬೇಕು. ಅಂದಾಗಲೇ ಬದುಕು ಹಸನಾಗುವುದು. “ಜೀವನವು ಪರಿಹರಿಸಬೇಕಾದ ಸಮಸ್ಯೆಯಲ್ಲ, ಆದರೆ ಅನುಭವಿಸಬೇಕಾದ ವಾಸ್ತವ” ಎಂಬ ಪಾಶ್ಚಾತ್ಯ ತತ್ವಶಾಸ್ತ್ರಜ್ಞರಾದ ಸೋರೆನ್ ಕೀರ್ಕೆಗಾರ್ಡ್ ರವರ ಮಾತು ಬದುಕಿನ ದಾರಿಗೆ ಆಟೋಗ್ರಾಫ್ ಹಾಕಿದಂತಿದೆ. ಟೀಕೆಗಳನ್ನು ಸ್ವೀಕರಿಸಿದಾಗ ಬಾಳು ಬಲಗೊಳ್ಳುತ್ತದೆ.‌ ಮನುಷ್ಯನ ಜೀವನವು ದಿನನಿತ್ಯ ಬಳಸುವ ಒಂದು ನಾಣ್ಯದಂತಿದೆ. ಇದನ್ನು ಯಾವುದೇ ರೀತಿಯಲ್ಲಿ ಖರ್ಚು ಮಾಡಬಹುದಾದರೂ ಒಮ್ಮೆ ಮಾತ್ರ ಎಂಬುದು ಇದರ ಟ್ಯಾಗ್ ಲೈನ್ ಆಗಿದೆ. ಜೀವನದ ಅತ್ಯುತ್ತಮ ಭಾಗವೆಂದರೆ ಚಿಕ್ಕ ಹೆಸರಿಲ್ಲದೆ ತೋರಿಸುವ ದಯೆ ಮತ್ತು ಪ್ರೀತಿ ಆಗಿದೆ. ಮಾನವೀಯತೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳದೆ ಜೀವಿಸುವ ಕಲೆಯನ್ನು ರೂಢಿಸಿಕೊಳ್ಳಬೇಕಿದೆ. ಕಾರಣ, ಮಾನವೀಯತೆ ಎಂಬುದು ಒಂದು ಸಾಗರದಂತೆ; ಸಮುದ್ರದ ಕೆಲವು ಹನಿಗಳು ಕೊಳಕಾಗಿದ್ದರೆ, ಸಾಗರವು ಕೊಳಕಾಗುವುದಿಲ್ಲ. “ಸಂತೋಷವು ಚಿಟ್ಟೆಯಂತೆ ; ನೀವು ಅದನ್ನು ಹೆಚ್ಚು ಬೆನ್ನಟ್ಟಿದರೆ, ಅದು ನಿಮ್ಮನ್ನು ತಪ್ಪಿಸುತ್ತದೆ, ಆದರೆ ನೀವು ಇತರ ವಿಷಯಗಳತ್ತ ಗಮನ ಹರಿಸಿದರೆ, ಅದು ಬಂದು ನಿಮ್ಮ ಭುಜದ ಮೇಲೆ ಮೃದುವಾಗಿ ಕುಳಿತುಕೊಳ್ಳುತ್ತದೆ” ಎಂಬ ಅಮೇರಿಕನ್ ನೈಸರ್ಗಿಕವಾದಿ, ಪ್ರಬಂಧಕಾರ, ಕವಿ ಮತ್ತು ತತ್ವಜ್ಞಾನಿ ಹಾಗೂ ಪ್ರಮುಖ ಅತೀಂದ್ರಿಯತಾವಾದಿಯಾದ ಹೆನ್ರಿ ಡೇವಿಡ್ ಥೋರೊ ಅವರ ಮಾತು ಜೀವನವನ್ನು ಸಾಕ್ಷಾತ್ಕಾರಗೊಳಿಸುತ್ತದೆ. ನಾವು ಬದುಕುವ ಜೀವನವನ್ನು ನಾವೇ ಆರಿಸಿಕೊಳ್ಳಬೇಕು. ನಮಗೆ ಇಷ್ಟವಿಲ್ಲದಿದ್ದರೆ, ಇದನ್ನು ಬದಲಾಯಿಸುವ ಜವಾಬ್ದಾರಿಯೂ ನಮ್ಮ ಮೇಲೆಯೇ ಇರುತ್ತದೆ. ಏಕೆಂದರೆ ಬೇರೆ ಯಾರೂ ಇದನ್ನು ನಮಗಾಗಿ ಮಾಡುವುದಿಲ್ಲ. ಸತ್ಯವೆಂದರೆ ನಾಳೆ ಏನಾಗಲಿದೆ ಎಂದು ನಮಗೆ ತಿಳಿದಿಲ್ಲ, ಜೀವನವು ಹುಚ್ಚುತನದ ಸವಾರಿ. ಇಲ್ಲಿ ಯಾವುದಕ್ಕೂ ಖಾತರಿಯಿಲ್ಲ. ಇಂಥಹ ವಿರಾಟರೂಪದ ದರ್ಶನವನ್ನು ನಾವು ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಜೀವನವನ್ನು ಪ್ರತಿಬಿಂಬಿಸುವ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಜೀವನದ ಸ್ಥಾಯಿ ಭಾವವಾದ ಪ್ರೀತಿಯನ್ನೇ ಉಸಿರಾಡುತ್ತಿರುವ, ಆ ಪ್ರೀತಿಯನ್ನೇ ಹಾಸಿಕೊಂಡು, ಹೊದ್ದುಕೊಂಡಿರುವ ‘ಗಜಲ್’ ವಿಭಿನ್ನವೂ, ಅನುಪಮವೂ ಅನಿಸುತ್ತದೆ. ಇಂದು ಗಜಲ್ ಜಾಗತಿಕವಾಗಿ ಎಲ್ಲಾ ಭಾಷೆಗಳಲ್ಲಿ ತನ್ನ ಪರಿಮಳವನ್ನು ಸೂಸುತ್ತಿದೆ. ಕನ್ನಡದಲ್ಲಂತೂ ತುಸು ಹೆಚ್ಚೇ ಎನ್ನಬಹುದು. ಅಂತೆಯೇ ಅಗಣಿತವೆಂಬಂತೆ ನೂರಾರು ಜನರು ಗಜಲ್ ಮಧುಶಾಲೆಯಲ್ಲಿ ಮಧುಬಟ್ಟಲು ಹಿಡಿದು ಕುಳಿತಿದ್ದಾರೆ. ಅವರುಗಳಲ್ಲಿ ಶ್ರೀ ಆನಂದ ಪಾಟೀಲ ರವರೂ ಒಬ್ಬರು.

         ಶ್ರೀ ಆನಂದ ಪಾಟೀಲ ರವರು ೧೯೭೮ರ ಸೆಪ್ಟೆಂಬರ್ ೨೧ ರಂದು ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಕಳಸಕೊಪ್ಪದಲ್ಲಿ ಶ್ರೀ ಅಪ್ಪಾಸಾಹೇಬ ಹಾಗೂ ಪಾರ್ವತೆವ್ವ ದಂಪತಿಗಳ ಮಗನಾಗಿ ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಬಾದಾಮಿ ತಾಲೂಕಿನ ಕಾಡರಕೊಪ್ಪದಲ್ಲಿ, ಮಾಧ್ಯಮಿಕ ಶಿಕ್ಷಣ ಕಲಾದಗಿಯ ಗುರುಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಪೂರ್ಣಗೊಳಿಸಿದರು. ಮುಂದೆ ಬಿ.ಎ. ಪದವಿಯನ್ನು ಸಕ್ರಿ ಮಹಾವಿದ್ಯಾಲಯದಿಂದ ತೇರ್ಗಡೆ ಹೊಂದಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಕನ್ನಡ ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದು, ಬಿ.ಇಡಿ ಪದವಿಯನ್ನು ಜಮಖಂಡಿಯಲ್ಲಿ ಮುಗಿಸಿದ್ದಾರೆ. ಪ್ರಸ್ತುತದಲ್ಲಿ ಬೆಳಗಾವಿಯ ರಾಮದುರ್ಗದ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಕಳೆದ ೨೦ ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಕನ್ನಡ ಸಾಹಿತ್ಯ ಪರಂಪರೆಯ ಓದುಗರಾಗಿ ಹಾಗೂ ಕವಿತೆ, ಸಂಪಾದನೆ, ಇತರೆ ಬಿಡಿ ಲೇಖನಗಳನ್ನು ಬರೆಯುವುದರ ಮೂಲಕ ಗಜಲ್ ಪರಂಪರೆಯತ್ತ ವಾಲಿದ್ದಾರೆ. ‘ಅಂತರಂಗದ ಗುಲಾಬಿ’ ಎಂಬ ಕವನ ಸಂಕಲನ, ಹೊಸಗನ್ನಡ ವ್ಯಾಕರಣ, ‘ಉದ್ಭವ’ ಎನ್ನುವ ಸಂಪಾದಿತ ಕೃತಿ ಹಾಗೂ ‘ಆನಂದನ ಗಜಲ್ ಗಳು’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

      ವೃತ್ತಿಯಿಂದ ಶಿಕ್ಷಕರಾಗಿರುವ ಶ್ರೀ ಆನಂದ ಪಾಟೀಲರು ಸದಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಅನೇಕ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇವರ ಬರವಣಿಗೆಯ ಹಲವು ಪ್ರಕರಣಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಹಲವಾರು ಸಂಘ, ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ, ಸತ್ಕರಿಸಿವೆ.

      ಒಂದು ಪದವು
ನಮ್ಮ ಜೀವನದ ಎಲ್ಲಾ ಭಾರ ಮತ್ತು ನೋವಿನಿಂದ ನಮ್ಮನ್ನು ಮುಕ್ತಗೊಳಿಸುತ್ತದೆ, ಆ ಪದವೆಂದರೆ ಪ್ರೀತಿ. ಹಾಗಂತ ಈ ಪ್ರೀತಿ ನಿರಾಯಾಸವಾಗಿ ಎಲ್ಲರಿಗೂ ದಕ್ಕುವಂತದ್ದಲ್ಲ. ಇಲ್ಲಿ ಶೋಕವು ಪ್ರೀತಿಯ ಅಭಿವ್ಯಕ್ತಿಯಾಗಿ ನಮ್ಮನ್ನು ಆವರಿಸಿದೆ, ಆವರಿಸುತ್ತದೆ. ಇಂಥಹ ಪ್ರೀತಿ, ನೋವಿನ ಸುಂದರ ಅಭಿವ್ಯಕ್ತಿಗೆ ಗಜಲ್ ನಷ್ಟು ಸಶಕ್ತವಾದ ಕಾವ್ಯ ಪ್ರಕಾರ ಮತ್ತೊಂದಿಲ್ಲ. ನೋವಿನ ಚಿಕಿತ್ಸೆ ನೋವಿನಲ್ಲಿದೆ ಎಂಬುದನ್ನು ಗಜಲ್ ತನ್ನ ಅಶಅರ್ ಮೂಲಕ ಪ್ರಚುರಪಡಿಸುತ್ತಲೇ ಬಂದಿದೆ. ಮಾನವ ಹೃದಯದ ಸಂಕೀರ್ಣತೆ ಮತ್ತು ಸೌಂದರ್ಯಕ್ಕಿಂತ ಹೆಚ್ಚು ಸ್ಪೂರ್ತಿದಾಯಕವಾದದ್ದು ನಮ್ಮ ಸುತ್ತಮುತ್ತಲು ಏನೂ ಇಲ್ಲ. ನೋವನ್ನು ಮರೆಯುವುದು ತುಂಬಾ ಕಷ್ಟ, ಆದರೆ ಸಿಹಿಯನ್ನು ನೆನಪಿಟ್ಟುಕೊಳ್ಳುವುದು ಇನ್ನೂ ಕಷ್ಟ ಎಂಬುದನ್ನು ಗಜಲ್ ಅನಾದಿಕಾಲದಿಂದಲೂ ಸಾರುತ್ತ ಬಂದಿದೆ. ‘ಆನಂದನ ಗಜಲ್ ಗಳು’ ಸಂಕಲನದಲ್ಲಿ ತಣ್ಣಗಿನ ಪ್ರತಿರೋಧದ ನೆಲೆಯಲ್ಲಿ ಅರಳಿರುವ ಗಜಲ್ ಗಳು ಬದುಕಿನ ವಿವಿಧ ಮಜಲುಗಳನ್ನು ದಾಖಲಿಸುವುದಲ್ಲದೆ ಮನುಷ್ಯ ಪ್ರೀತಿ, ಮಾನವೀಯತೆ, ಜೀವದೊಲವನ್ನು ಪ್ರತಿಪಾದಿಸುತ್ತವೆ. ಪ್ರಭುತ್ವದ ಅರಾಜಕತೆ, ಧರ್ಮದ ಗೇಲಿ, ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ವ್ಯಕ್ತಿ ಪೂಜೆಯ ವ್ಯಂಗ್ಯ, ಸಂಬಂಧಗಳ ತಾಕಲಾಟ, ಪ್ರೇಮದ ನವಿರು ಭಾವ… ಹೀಗೆ ವಿಭಿನ್ನ ವಿಷಯ ವಸ್ತುಗಳನ್ನು ಸಾರುತ್ತಿವೆ. ಮನುಷ್ಯ ಹೆಚ್ಚೆಚ್ಚು ಬುದ್ಧಿವಂತನಾಗುತಿದ್ದಂತೆ ಮುಖವಾಡದ ಲೋಕವನ್ನು ಸೃಷ್ಟಿಸಿ, ಕಪಟವನ್ನೆ ಉಸಿರಾಡುತಿದ್ದಾನೆ. ಸಂದರ್ಭವನ್ನು ಹುಟ್ಟು ಹಾಕಿಯೋ, ಅಸಹಾಯಕತೆಯನ್ನು ಬಿತ್ತಿಯೋ ನಂಬಿಕೆಯ ಫಸಲನ್ನು ಬೆಳೆಯುತಿದ್ದಾನೆ. ಈ ಕೆಳಗಿನ ಷೇರ್ ನಲ್ಲಿ ಗಜಲ್ ಗೋ ಆನಂದ ಪಾಟೀಲ ರವರು ನಯವಾದ ಕ್ರೂರತನವನ್ನು ಬಯಲಿಗೆಳೆದಿದ್ದಾರೆ.

ದಿನಕ್ಕೊಂದು ನವರಂಗಿ ಆಟವಾಡಿ ನೋಡುಗರನ್ನು ನಂಬಿಸುತ್ತಿದ್ದಾನೆ
ನೋಡಿದ್ದನ್ನೆ ನಂಬುವ ಅವರ ಮೂತಿಗೊಂದಿಷ್ಟು ಬೆಣ್ಣೆ ಸವರುತ್ತಿದ್ದಾನೆ”

ಬದುಕು ಎನ್ನುವುದು ರಂಗಭೂಮಿಯ ಆಗಿದೆ. ಇಲ್ಲಿ ಎಲ್ಲರೂ ಬಣ್ಣ ಹಚ್ಚುವವರು. ಆದರೆ ಕಾರಣ ಮಾತ್ರ ಭಿನ್ನ ಭಿನ್ನ. ನಂಬಿಕೆಯ ವಿವಿಧ ರೂಪಗಳು ಮನುಷ್ಯನ ಜೀವನವನ್ನು ಹೇಗೆ ರೂಪಿಸುತ್ತವೆ, ಹೇಗೆ ದಾರಿ ತಪ್ಪಿಸುತ್ತವೆ ಎಂಬುದನ್ನು ಶಾಯರ್ ಆನಂದ ಪಾಟೀಲ ರವರು ತುಂಬಾ ಸರಳವಾಗಿ ಹಾಗೂ ವ್ಯಂಗ್ಯವಾಗಿ ಇಲ್ಲಿ ದಾಖಲಿಸಿದ್ದಾರೆ.

ಒಂದು ತುಂಡು ರೊಟ್ಟಿಗಾಗಿ ಅಳುವಾಗ ಎಲ್ಲಿದ್ದೆ ನೀನು
ಬೊಗಸೆ ನೀರಿಗಾಗಿ ಕೈಚಾಚಿ ನಿಂತಾಗ ಎಲ್ಲಿದ್ದೆ ನೀನು”

ಈ ಮೇಲಿನ ಷೇರ್ ನಲ್ಲಿ ‘ಎಲ್ಲಿದ್ದೆ ನೀನು’ ಎನ್ನುವ ರದೀಫ್ ತುಂಬಾ ಸಶಕ್ತವಾಗಿ ಬಳಸಲ್ಪಟ್ಟಿದೆ. ಇದು ಬಹು ಆಯಾಮವನ್ನು ಹೊಂದಿದೆ. ಇಲ್ಲಿ ವಾಚ್ಯವಾಗಿ ಮೇಲ್ನೋಟಕ್ಕೆ ದೇವರು ಎಂಬಂತೆ ಭಾಸವಾದರೂ ಅದುವೆ ಕೊನೆಯಲ್ಲ. ಇಲ್ಲಿ ಸುಖನವರ್ ಆನಂದ ಪಾಟೀಲ ರವರು ಸಾಮಾಜಿಕ ವ್ಯವಸ್ಥೆಯಲ್ಲಿ ಬೇರು ಬಿಟ್ಟಿರುವ ಬಡತನ, ಅರಾಜಕತೆ, ಅಸಹಾಯಕತೆ, ಮೋಸ, ವಂಚನೆ ಕುರಿತು ಸಾತ್ವಿಕ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಷೇರ್ ಸಮಾಜದಲ್ಲಿ ಪ್ರೀತಿ ಹಂಚುವ ಹಂಬಲವನ್ನು ತನ್ನ ಒಡಲೊಳಗೆ ಗರ್ಭಿಕರಿಸಿಕೊಂಡಿದೆ.

     ಕ್ರೂರ ಹಲ್ಲುಗಳ ಮಧ್ಯೆ ಕೋಮಲವಾದ ನಾಲಿಗೆ ತನ್ನ ಜೀವಂತಿಕೆಯನ್ನು ಕಾಪಾಡಿಕೊಂಡು ಬಂದಿರುವಂತೆ, ಗಜಲ್ ಕೋಮಲತೆಗೆ ಸಾಕ್ಷಿಯಾಗಿದೆ. ಇಂಥಹ ಮೃದು ಮಂದಾರದಂತಹ ಗಜಲ್ ಗಳು ಶಾಯರ್ ಶ್ರೀ ಆನಂದ ಪಾಟೀಲ ರವರಿಂದ ಮತ್ತಷ್ಟು, ಮೊಗೆದಷ್ಟೂ ರಚನೆಯಾಗಲಿ, ಅವುಗಳು ಸಂಕಲನ ರೂಪ ಪಡೆದು ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.

ಪ್ರಾರ್ಥನೆಗಾಗಿ ಕೈ ಎತ್ತುವಾಗ ನಾನು ನಡುಗುತ್ತೇನೆ
ತಾಯಿ ಇರುವವರೆಗೆ ಯಾವತ್ತೂ ಪ್ರಾರ್ಥನೆಯೇ ಮಾಡಿಲ್ಲ”
-ಇಫ್ತೀಖಾರ್ ಆರೀಫ್

ಗಜಲ್ ಗುಂಗು ಎಂಬುದು ಎಂಥಹ ಮನಸ್ಸಿಗಾದರೂ, ಯಾವ ಸಮಯದಲ್ಲಾದರೂ ಮುದ ನೀಡದೆ ಇರದು! ಆದರೆ ಏನು ಮಾಡುವುದು, ಸಮಯ ಯಾರ ಅಪ್ಪನ ಸ್ವತ್ತಲ್ಲ; ಅದರ ಮೌನಾಜ್ಞೆಯನ್ನು ಮೀರಲಾದಿತೆ? ನನಗೂ ಹೋಗಲು ಇಷ್ಟವಿಲ್ಲ, ಬೇಸರ ಮಾಡಿಕೊಳ್ಳಬೇಡಿ. ಇವಾಗ ತೆರಳಿ ಮತ್ತೇ ಮುಂದಿನ ಗುರುವಾರದಂದು ತಮ್ಮ ಮುಂದೆ ಹಾಜರಿರುವೆ. ಹೋಗಿ ಬರುವೆ, ಬಾಯ್, ಸಿಯುವ್…!!
ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top