ಅರುಣಾ ರಾವ್ ರವರ ಹೊಸ ಕಥೆ-ತಿರುವು

ಕಥಾ ಸಂಗಾತಿ

ಅರುಣಾ ರಾವ್

ತಿರುವು

ಬಸ್ಸಿನಲ್ಲಿ ಕುಳಿತಿರುವ ಮಾನಸಾಳ ಮನಸು ಬಸ್ಸಿಗಿಂತಲೂ ವೇಗವಾಗಿ ಚಲಿಸಿ,ಆಗಲೇ ಅಂತರಗಂಗೆ ಬೆಟ್ಟದ ಕಾಲ ಬುಡದಲ್ಲಿ ತನಗಾಗಿ ಕಾದು ನಿಂತಿರುವ ಸ್ವೀಕಾರ್ ನನ್ನು ಸೇರಿಯೇ ಬಿಟ್ಟಿತ್ತು. ಗಳಿಗೆಗೊಮ್ಮೆ ತನ್ನ ಕೈಗಡಿಯಾರ ವನ್ನು ನೋಡಿ ಕೊಳ್ಳುತ್ತಾ, ಬಸ್ಸನ್ನು ನಿಧಾನವಾಗಿ ಚಲಾಯಿಸುತ್ತಿರುವ ಚಾಲಕನನ್ನು ನಿಂದಿಸಿಕೊಂಡಳು. ಆ ದಿನ 10.00 ಗಂಟೆಗೆ ಸರಿಯಾಗಿ ಅಂತರಗಂಗೆಗೆ ಬರುವುದಾಗಿ ಶುಕ್ರವಾರವೇ ಮಾತು ಕೊಟ್ಟಿದ್ದಳು. ಅಂದು ಅವಳನ್ನು ಬಸ್ಸು ಹತ್ತಿಸಲು ಬಂದು, ಬಸ್ಸಿನ ಕಿಟಕಿಯ ಬಳಿಯೇ ನಿಂತು ಮಾತನಾಡಿದ್ದ ಅವನು, ನೀನು ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬರಿತ್ತೀಯ ತಾನೇ…….. ಎಂದು ಪದೇ ಪದೇ ಪ್ರಶ್ನಿಸಿದ ್ದ.

ಕೋಲಾರದಿಂದ ಐದು ಮೈಲಿ ದೂರದ ಹುದುಕುಳ ಎಂಬ ಕುಗ್ರಾಮ ಮಾನಸಾಳದು. ಮಧ್ಯಮ ಬಡ ವರ್ಗದ ಮರ್ಯಾದಸ್ಥ ಕುಟುಂಬ. ಪಿಯುಸಿ ಓದುವಾಗ ಶ್ರೀಮಂತ ಕುಟುಂಬಕ್ಕೆ ಸೇರಿದ ಸ್ವೀಕಾರ್ ನ ಪರಿಚಯವಾಯಿತು. ಪರಿಚಯ ಕ್ರಮೇಣ ಪ್ರೇಮಕ್ಕೆ ತಿರುಗಿದ್ದು ತಿಳಿಯುವಷ್ಟರಲ್ಲಿ ಇಬ್ಬರೂ ಪಿಯುಸಿ ಮುಗಿಸಿ, ಪದವಿಗಾಗಿ ಬೇರೆ ಬೇರೆ ಕಾಲೇಜನ್ನು ಸೇರಿದ್ದರು. ಆದರೇನಂತೆ, ಮನಸುಗಳು ಹತ್ತಿರವಾಗಿರುವವಾಗ ಯಾವುದೂ ದೂರವಲ್ಲ.
ಮಾನಸಾಳ ಕಾಲೇಜು ಬಿಡುವ ವೇಳೆಗೆ ಪ್ರತಿದಿನ ಸ್ವೀಕಾರ್ ಅವಳ ಕಾಲೇಜಿನ ಗೇಟಿನ ಬಳಿ ಹಾಜರಾಗಿರುತ್ತಿದ್ದ. ಇಬ್ಬರೂ ಸರ್ಕಾರಿ ಮಹಿಳಾ ಪದವಿ ಕಾಲೇಜಿನಿಂದ, ಕೋಲಾರಮ್ಮನ ದೇವಾಲಯದ ಮಾರ್ಗವಾಗಿ ನಡೆಯುತ್ತಾ, ಬಸ್ ನಿಲ್ದಾಣವನ್ನು ಸೇರಿ, ಅವಳ ಬಸ್ ಬರುವವರೆಗೂ ಕಾದು, ಅವಳು ಅದರಲ್ಲಿ ಕುಳಿತ ಬಳಿಕ, ತಾನು ಬಸ್ ಹೊರಡುವವರೆಗೆ ಕಿಟಕಿಯ ಬಳಿ ನಿಂತು ಮಾತನಾಡುತ್ತಾ, ಬಸ್ ಹೊರಟ ಮೇಲೆ ತಾನು ಮನೆಯ ಹಾದಿ ಹಿಡಿಯುತ್ತಿದ್ದ. ತಾನು ಬೈಕ್ ತಂದರೆ ನಡೆಯುವ ತೊಂದರೆ ಇರದಲ್ಲಾ, ಎಂದು ಎಷ್ಟೋ ಸಾರಿ ಕೇಳಿದ್ದರೂ ಮಾನಸ ಇದಕ್ಜೆ ಒಪ್ಪುತ್ತಿರಲ್ಲಿಲ್ಲ. ಇಷ್ಟು ವರ್ಷಗಳೇ ಅಯ್ತು, ಇನ್ನು ಆರು ತಿಂಗಳು ಕಳೆದರೆ ನಮ್ನಿಬ್ಬರ ಡಿಗ್ರಿ ಕೊನೆಗೊಳ್ಳುತ್ತೆ. ಆಗ ನೀನು, ನಿಮ್ಮ ಮನೆಯವರಿಗೆ ನಮ್ಮ ಮನೆಗೆ ಬಂದು ಮಾತನಾಡಲು ಹೇಳು, ಆಮೇಲೆ ಜಾಂ ಜಾಂ ಅಂತ ಕೋಲಾರದ ಪೇಟೆಯೆಲ್ಲಾ ಬೈಕ್ನಲ್ಲಿ ಸುತ್ತೋಣ ಎನ್ನುತ್ತಿದ್ದಳು. ಅಷ್ಟೇಕೆ ಕಡೆಗೆ ಕಾಲೇಜ್ ಬಂಕ್ ಮಾಡಿ ಎಲ್ಲಾದರೂ ಹೋಗಿ ಬರೋಣವೆಂದರೂ ಅವಳು ಒಪ್ಪುತ್ರಿರಲ್ಲಿಲ್ಲ. ಈ ದಿನ ಸೋಮವಾರ ಅವನ ಹುಟ್ಟು ಹಬ್ಬ. ಆದ್ದರಿಂದ ಅಂತರಗಂಗೆಗೆ ಹೋಗಿಬರೋಣವೆಂದು ಅವಳನ್ನು ಬಹಳ ಕಷ್ಟ ಪಟ್ಟು ಒಪ್ಪಿಸಿದ್ದ.

ಬಸ್ಸು ಕೋಲಾರನ್ನು ತಲುಪಿದ ಕೂಡಲೇ ಮಾನಸ ಒಂದು ಆಟೋ ಹಿಡಿದು, “‘ಅಂತರಗಂಗೆಗೆ ನಡೆಯಪ್ಪ”‘ ಎಂದಳು. ಅಲ್ಲಿಗೆ ಸೇರಿಕೊಳ್ಳುವ ವೇಳೆಗೆ ಅವಳ ಕೈಗಡಿಯಾರ ಹತ್ತೂವರೆ ತೋರಿಸುತ್ತಿತ್ತು. ಆಟೋದವನಿಗೆ ಹಣ ನೀಡಿ ಹಿಂದಿರುಗುವ ವೇಳೆಗೆ, ತನ್ನ ಹಿಂದೆ ಆಕಾಶ ನೀಲಿ ಬಣ್ಣದ ಅಂಗಿಯನ್ನು ತೊಟ್ಟು, ಅದಕ್ಕೆ ಒಪ್ಪುವಂತಹ ಜೀನ್ಸ್ ಹಾಕಿಕೊಂಡು, ಎದೆಯ ಮೇಲೆ ಕೈ ಕಟ್ಟಿಕೊಂಡು ನಿಂತಿದ್ದ ಅವನನ್ನು ಕಂಡು ಮುಗುಳು ನಕ್ಕಳು.ಸದ್ಯ ಈ ವರ್ಷವಾದರೂ ಬಂದೆಯಲ್ಲಾ ಎಂದು ಹರ್ಷದಿಂದ ನುಡಿದ. ‘ಹ್ಯಾಪಿ ಬರ್ತಡೇ’ ಕೈ ನೀಡಿ, ಅವನ ಕೈ ಕುಲುಕಿದಳು. ಇಬ್ಬರೂ ಅಂತರಗಂಗೆಯ ದೇವಾಲಯಕ್ಕೆ ಹೋಗುವ
ಮೆಟ್ಟಿಲುಗಳನ್ನು ಏರತೊಡಗಿದರು. “ನನಗೇನೂ ಉಡುಗೊರೆ ತರಲಿಲ್ಲವೇ?” ಮೆಟ್ಟಿಲನ್ನು ಏರುತ್ತ, ಏದುಸಿರು ಬಿಡುತ್ತಲೇ, ಅವಳೆಡೆಗೆ ತುಂಟ ನೋಟವನ್ನು ಬೀರಿ ಪ್ರಶ್ನಿಸಿದ ಸ್ವೀಕಾರ್.
ಬೇಂದ್ರೆಯವರ ಕವನ ಕೇಳಿಲ್ಲವೇ…… ‘ನಾನು ಬಡವಿ, ನೀನು ಬಡವ, ಒಲವೆ ನಮ್ಮ ಬದುಕು’ ಎಂದು ಹೇಳಿ ಮಾನಸ ನಕ್ಕಾಗ, ಅವಳ ದಾಳಿಂಬೆಯಂತ ದಂತ ಪಂಕ್ತಿ ಇಣುಕಿ ನೋಡಿತು. ಅಷ್ಟರಲ್ಲಿ ಅವರು ದೇವಾಲಯದ ಬಳಿಗೆ ಬಂದಿದ್ದರು. ಹನ್ನೊಂದುಗಂಟೆ ಆಗಿದ್ದುದರಿಂದ ದೇವಾಲಯದ ಬಾಗಿಲು ಮುಚ್ಚಿತ್ತು. ದೇಗುಲದ ಹೊರಗೇ ನಿಂತು, ಕಾಶಿ ವಿಶ್ವೇಶ್ವರನಿಗೆ ಕೈ ಮುಗಿದರು. ನಂತರ ಕಲ್ಯಾಣಿಯ ಬಳಿ ಬಂದು, ಬಸವನ ಬಾಯಿಂದ ಬರುತ್ತಿರುವ ತೀರ್ಥವನ್ನು ಕುಡಿದು, ತಲೆಯ ಮೇಲೂ ಪ್ರೋಕ್ಷಿಸಿಕೊಂಡರು.

“ಬಾ ಈ ಬೆಟ್ಟದ ಮೇಲೆ ಸ್ವಲ್ಪ ದೂರ ಏರಿ ಹೋಗೋಣ” ಎಂದು ಮುಂದೆ ಹೊರಟ ಅವನನ್ನು ಹಿಂಬಾಲಿಸಿದಳು ಮಾನಸ. ಸುಮಾರು ದೂರ ಏರಿದ ಬಳಿಕ ಇನ್ನು ಸಾಕೆಂದು ತೀರ್ಮಾನಿಸಿ, ಅಲ್ಲಿಯೇ ವಿಶಾಲವಾಗಿ ಬೆಳೆದಿರುವ ನೇರಳೇ ಮರದ ನೆರಳಿನಲ್ಲಿನ ದೊಡ್ಡ ಬಂಡೆಯೊಂದರ ಮೇಲೆ ಕುಳಿತರು. ಆ ನಿರ್ಜನ ಸ್ಥಳವನ್ನು ಕಂಡೇ ಮಾನಸ ಹೆದರಿದಂತೆ ಕಾಣುತ್ತಿದ್ದಳು. ” ನೀನೇನೂ ಹೆದರಬೇಡ, ಇಲ್ಕಿ ಹುಲಿ ಚಿರತೆಗಳೇನೂ ಬರುವುದಿಲ್ಲ ” ನಕ್ಕು ನುಡಿದ ಸ್ವೀಕಾರ್. “ಅವುಗಳದಲ್ಲ ನನಗೆ ಭಯ, ಭಯವಿರುವುದೆಲ್ಲಾ ನಿನ್ನದೇ.” ಎಂದ ಮಾನಸಾಳ ಮಾತಿಗೆ, ” ಹೌದಾ, ನಾನು ಅಷ್ಟೊಂದು ಭಯಂಕರವಾಗಿದ್ದೇನೆಯೇ? ನೋಡಿ ಹೇಳು….. ಎಂದು ಅವಳ ಕಡೆಗೆ ತಿರುಗಿ, ತನ್ನ ಬೊಗಸೆಯಲ್ಲಿ ಅವಳ ಮುಖವನ್ನು ಹಿಡಿದುಕೊಂಡನು‌ . ಒಂದು ಕ್ಷಣ ಕಣ್ಣುಗಳೆರಡೂ ಬೆರೆತವು. ಅವನ ಸ್ಪರ್ಶದಿಂದ ಮುಖ ರಕ್ತ ವರ್ಣಕ್ಕೆ ತಿರುಗಿ, ಕತ್ತಿನ ಸುತ್ತಲೂ ಬೆವರ ಹನಿಗಳು ಮೂಡಿದವು. ಒಂದರೆಗಳಿಗೆ ಮೈ ಮರೆತಿದ್ದ ಮಾನಸಾ, ಅವನ ಕೈಗಳನ್ನು ಮೃದುವಾಗಿ ದೂರ ತಳ್ಳಿ ,ಇದಕ್ಕೆ ನಾನು ನಿನ್ನ ಕಂಡರೇನೆ ಭಯ ಎಂದದ್ದು” ಎಂದಳು.

“ಅಷ್ಟೇ ತಾನೆ………ನಾನು ಹತ್ತಿರ ಬಂದರೆ ತಾನೆ ನಿನಗೆ ಭಯ, ನಾನು ದೂರ ಕುಳಿತಿದ್ದರೆ ನಿನಗೇನೂ ಅಭ್ಯಂತರವಿಲ್ಲವಲ್ಲಾ” ಎನ್ನುತ್ತಾ, ಆ ದೊಡ್ಡ ಬಂಡೆಯ ಪಕ್ಕದಲ್ಲಿದ್ದ ಸಣ್ಣದೊಂದು ಬಂಡೆಯ ಮೇಲೆ ಕುಳಿತ ಸ್ವೀಕಾರ್. “ಓ…… ಬಹಳ ದೂರ ಆಗೋಯ್ತು,” ಛೇಡಿಸಿದಳು ಮಾನಸಾ. ಇನ್ನೇನು ಈ ನೇರಳೆ ಮರದ ಮೇಲೆ ಹತ್ತಿ ಕುಳಿತುಕೊಂಡು ಬಿಡಲೇ? ಎಂಬ ಅವನ ಮಾತಿಗೆ ಕಿಲಕಿಲನೆ ನಕ್ಕಳು. ಅವಳ ನಗು ಆ ಇಡೀ ಬೆಟ್ಟ ಮಾರ್ದನಿಸಿತು. ಅವರ ಮಾತು ಮತ್ತು ನಗುವಿಗೆ ಅಲ್ಲಿದ್ದ ಬೆಟ್ಟ ಗುಡ್ಡಗಳು ಮೂಕ ಸಾಕ್ಷಿಯಾದವು. ಕಾಲ ಸರಿದದ್ದೇ ತಿಳಿಯಲಿಲ್ಲ.. ಮಧ್ಯೆ ಮಧ್ಯೆ ಅಂತರಗಂಗೆ ಗೆ ಬರುವ ಪ್ರವಾಸಿಗರ ಮಾತುಗಳೂ ಎಲ್ಲೋ ದೂರದಲ್ಲಿ ಕೇಳಿ ಬರುತ್ತಿತ್ತು.

ಸುಮಾರು ಒಂದು ಗಂಟೆಯ ವೇಳೆಗೆ ಮಾನಸಾಳ ಮೊಬೈಲ್ ಬಾರಿಸಿತು. ತನ್ಬ ಕಾಲೇಜು ಬ್ಯಾಗಿನಿಂದ ಅದನ್ನು ಹೊರತೆಗೆದ ಮಾನಸಾ, ‘ ಅಮ್ಮ’ ಎಂದಳು ಗಾಬರಿಯಿಂದ. “ಪರವಾಗಿಲ್ಲಾ ಮಾತಾಡು….”.ಧೈರ್ಯ ಹೇಳಿದ ಸ್ವೀಕಾರ್. ಹಲೋ, ಅಮ್ಮ, ಹೇಳಮ್ಮ! …………ಹೂ……..ಹೂ…,…..ಹೂ …………ಸರಿ., ಫೋನ್ ಇಟ್ಟು, ಮೌನವಾಗಿ ಕುಳಿತಳು. ತನ್ನ ಎದುರಿಗೆ ಕುಳಿತು ಪ್ರಶ್ನಾರ್ಥಕವಾಗಿ ನೋಡುತ್ತಿರುವವಸ್ವೀಕಾರ್ ನ ಕಣ್ಣುಗಳನ್ನು ಎದುರಿದಲಾರದೆ ತಲೆ ತಗ್ಗಿಸಿದಳು. ಅವಳ ಕಣ್ಣುಗಳಿಂದ ಜಾರಿದ ಕಣ್ಣೀರ ಹನಿ , ತೊಡೆಯ ಮೇಲಿಟ್ಟು ಕೊಂಡಿದ್ದ ಬ್ಯಾಗ್ ಮೇಲೆ ಬಿದ್ದುದ್ದನ್ಬು ಕಂಡ ಸ್ವೀಕಾರ್, ತಾನು ಕುಳಿತಲ್ಲಿಂದ ಎದ್ದು ಬಂದು, ಅವಳ ಪಕ್ಕದಲ್ಲಿ ಕುಳಿತು, ಅವಳನ್ನು ತನ್ನ ತೋಳುಗಳಿಂದ ಬಳಸಿದ. ಯಾವಾಗಲೂ ಕೊಸರಿಕೊಳ್ಳುತ್ತಿದ್ದ ಅವಳು ಈ ದಿನ , ಮರದ ಆಸರೆ ಬಯಸುವ ಬಳ್ಳಿಯಂತೆ ಅವನ ಹೆಗಲಿನ ಮೇಲೆ ತಲೆ ಇಟ್ಟು, ಬಿಕ್ಕಳಿಸಿದಳು. ಏನಾಯ್ತು? ಅಮ್ಮ ಏನು ಹೇಳಿದರು? ನಿಮ್ಮ ತಾತ ಏನಾದ್ರೂ…….” ಇಲ್ಲವೆಂದು ತಲೆಯಾಡಿಸಿದಳು ಮಾನಸಾ. ಇಂದು ಸಂಜೆಗೇ ತನ್ನ ನಿಶ್ಚಿತಾರ್ಥ ನಿಶ್ಚಯವಾಗಿರುವುದನ್ನು ಹೇಗೆ ತಾನೇ ಅವನಿಗೆ ಹೇಳಿಯಾಳು?

” ಹಲೋ ಮಾನಸಾ, ನಿಮ್ಮ ತಾತನಿಗೆ ಕಾಯಿಲೆ ವಿಪರೀತವಾಗಿದೆ. ಅವರ ಕೊನೆಯ ಆಸೆ ನಿನ್ನ ಮದುವೆ ನೋಡುವುದು…..ಅದಕ್ಕೆ, ನಾವು ನಿನಗೆ ಗಂಡು ಹುಡುಕುತ್ತಿದ್ದೇವಲ್ಲಾ, ನಿನಗೂ ವಿಷಯ ತಿಳಿದಿದೆಯಲ್ಲಾ, ಈ ವರ್ಷದ ಓದಾದರೂ ಮುಗಿಯಲಿ ಎಂದು ಕೊಂಡಿದ್ದೆವು. ಆದರೆ ನೀನು ಕಾಲೇಜಿಗೆ ಹೊರಟ ಬಳಿಕ ತಾತನ ಪರಿಸ್ಥಿತಿ ಬಿಗಡಾಯಿಸಿತು. ನಿಮ್ಮಪ್ಪ ,” ನನ್ನ ತಂದೆಯ ಕೊನೆಯ ಆಸೆಯನ್ಬಾದರೂ ತೀರಿಸೋಣವೆಂದರೆ ಆಗುತ್ತಿಲ್ಲವಲ್ಲ” ಎಂದು ಪೇಚಾಡುತ್ತಿದ್ದರು. ನಿನಗೆ ಅಜಯ್ ಗೊತ್ತಲ್ಲಾ, ಅದೇ…. ನಮ್ಮ ಪಕ್ಕದ ಮನೆಯ ಸರೋಜಮ್ಮನವರ ಮಗ. ಆ ಹುಡುಗ ನಿನ್ನನ್ನು ಇಷ್ಟ ಪಟ್ಟಿದ್ದನಂತೆ. ಅವರಮ್ಮ ಇಂದು ಬೆಳಗ್ಗೆ ನಮ್ಮ ಮನೆಗೇ ಬಂದು ಕೇಳಿದರು. ನಾವು ನಿನಗೆ ಗಂಡು ಹುಡುಕುತ್ತಿರುವ ವಿಷಯ ಅವರ ಕಿವಿಗೂ ಬಿತ್ತಂತೆ. ಇನ್ನು ತಡ ಮಾಡಬಾರದೆಂದು ಅವರು ಈ ದಿನವೇ ನಮ್ಮ ಮನೆಗೆ ಬಂದಿದ್ದರು. ಹುಡುಗ ಅಪ್ಪಟ ಚಿನ್ನ, ಮೇಲಾಗಿ ಆಯುರ್ವೇದದ ಡಾಕ್ಟರ್. ಅವರ ಮನೆಗೆ ಕೊಟ್ಟರೆ ನೀನೂ ನಮ್ಮ ಕಣ್ಣ ಮುಂದೆಯೇ ಇರುತ್ತೀಯ, ಮೇಲಾಗಿ ಅತ್ತಿಗೆ, ನಾದಿನಿಯರ ಕಾಟ ಇಲ್ಲ….. ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು, ತುಪ್ಪಕ್ಕಾಗಿ ಊರೆಲ್ಲಾ ಹುಡುಕಿದರಂತೆ ಅಂದಂತಾಯ್ತು ನಮ್ಮ ಪರಿಸ್ಥಿತಿ. ಅಪ್ಪನಿಗೂ ಈ ಸಂಬಂಧ ಒಪ್ಪಿಗೆಯಾಯ್ತು. ಇಂದು ಸಂಜೆಯೇ ನಿನ್ನ ನಿಶ್ಚಿತಾರ್ಥ. ತಾತನ ಕಣ್ಣೆದುರಿಗೆ ನಿನ್ನ ನಿಶ್ಚಿತಾರ್ಥವಾದರೂ ಜರುಗಲಿ ಎಂದು….. ಮೂರು ಗಂಟೆಗೆ ಸರಿಯಾಗಿ ಬಸ್ ಸ್ಟಾಪಿಗೆ ಬಾ. ಅಪ್ಪಾನೂ ಪೇಟೆಯಲ್ಲೇ ಇದ್ದಾರೆ. ಹೂವು,ಹಣ್ಣು, ಸ್ವೀಟು… ಎಲ್ಲಾ ತಗೊಂಡು ಅವರೂ ಅಷ್ಟೊತ್ತಿಗೆ ಬಸ್ ಸ್ಟಾಪಿಗೆ ಬರುತ್ತಾರಂತೆ. ಇಬ್ಬರೂ ಒಟ್ಟಿಗೇ ಬಂದು ಬಿಟ್ಟರೆ ಸಂಜೆಯ ವೇಳೆಗೆ ಎಲ್ಲವೂ ಸಿದ್ಧವಾಗಿ ಬಿಡುತ್ತೆ. ಏನೋ ಅಮ್ಮ, ನಿನ್ನ ಅದೃಷ್ಟ. ಒಳ್ಳೆ ಮನೆನೇ ಸೇರುತ್ತಿದ್ದೀಯಾ, ಎಲ್ಲಾ ಆ ರಾಯರ ಮಹಿಮೆ. ಸರಿ, ಫೋನ್ ಇಡ್ತೀನಿ……. ಒಂದೇ ಉಸಿರಿಗೆ ಹೇಳಿ ಮುಗಿಸಿದ್ದರು ನಾಗವೇಣಿ.

ಅವನಿಗೆ ಒರಗಿ ಕುಳಿತ ಮಾನಸಾ ನಿಧಾನವಾಗಿ ತನ್ನ ತಲೆಯನ್ನು ಅವನ ಭುಜದ ಮೇಲಿಂದ ತೆಗೆದಳು. “ನಾವಿನ್ನು ಹೊರಡೋಣವೇ?” ಎಂದ ಅವಳ ಸ್ವರ ಬಾವಿಯೊಳಗೆ ಹೂತು ಹೋದಂತಿತ್ತು.. ” “ಏನಂದರು ನಿಮ್ಮಮ್ಮ ಎಂದು ಹೇಳಬಾರದೇ? ನಮ್ಮಿಬ್ಬರ ವಿಷಯ ಏನಾದರೂ ಮನೆಯಲ್ಲಿ ಗೊತ್ತಾಗಿ……..”. “ಹಾಗೇನೂ ಇಲ್ಲ….. “. ಮಾನಸ ಉತ್ತರಿಸಿದಳು. ಮತ್ತೆ ನೀನೇನೂ ಹೇಳದಿದ್ದರೆ ನಾನು ಏನು ತಿಳಿಯಲಿ, ಸಹನೆ ಮೀರಿದ ಸ್ವೀಕಾರ್ ನ ದ್ವನಿ ಅಗತ್ಯಕ್ಕಿಂತಲೂ ಜೋರಾಗಿಯೇ ಇತ್ತು. ನಿರ್ಭಾವುಕಳಾದ ಮಾನಸಾ “ಹೊರಡೋಣವೇ” ಎಂದು ಹೇಳಿ , ತನ್ನ ಕಾಲೇಜು ಚೀಲವನ್ನು ಹೆಗಲಿಗೇರಿಸಿ ಹೊರಡಲನುವಾದಳು. ಇನ್ನು ತಾನು ಕೇಳಿ ಪ್ರಯೋಜನವಿಲ್ಲವೆಂದು ಅರಿತ ಸ್ವೀಕಾರ್, ನಾಳೆ ಮನಸ್ಸಿಗೆ ಸಮಾಧಾನವಾದ ಮೇಲೆ ಅವಳೇ ಹೇಳುತ್ತಾಳೆ ಎಂದು ಕೊಂಡು, ಬಲಗೈಯನ್ನು ಬಂಡೆಯ ಮೇಲೆ ಊರಿ ಮೇಲೆದ್ದು ನಿಂತ. ಇಬ್ಬರೂ ಜಾಗರೂಕವಾಗಿ ಬೆಟ್ಟವನ್ನು ಇಳಿಯುತ್ತಾ, ದೇವಾಲಯದ ಮುಂಭಾಗಕ್ಕೆ ಬಂದರು. ದೇಗುಲದ ಮುಂದೆ ನಿಂತ ಅವಳ ಕೈ ಅಪ್ರಯತ್ನವಾಗಿ ಕಾಶಿ ವಿಶ್ವೇಶ್ವರನಿಗೆ ಮುಗಿಯಿತು. ಅವಳ ಮನಸ್ಸು
” ದೇವರೇ ಈ ನಿಶ್ಚಿತಾರ್ಥವನ್ನು ಹೇಗಾದರೂ ಮಾಡಿ ನಿಲ್ಲಿಸು” ಎಂದು ಬೇಡಿಕೊಂಡಿತು. ಆದರೆ ಅದು ಸಾಧ್ಯವಿಲ್ಲವೆಂದು ಅವಳ ಮನಸ್ಸೇ ಪ್ರತಿ ನುಡಿಯಿತು.

ಮೆಟ್ಟಿಲುಗಳನ್ನು ಇಳಿದು, ಅಲ್ಲಿಯೇ ಸಾಲಾಗಿ ನಿಂತಿದ್ದ ಆಟೋ ಒಂದನ್ನೇರಿದರು. ರಸ್ತೆ ಮೌನವಾಗಿಯೇ ಸಾಗಿತು. ಬಸ್ ಸ್ಟ್ಯಾಂಡ್ ಗಿಂತ ಅರ್ಧ ಫರ್ಲಾಂಗ್ ಹಿಂದೆಯೇ ಇಳಿದು, ಇಬ್ಬರೂ ಜೊತೆಜೊತೆಯಾಗಿ ಹೆಜ್ಜೆ ಹಾಕತೊಡಗಿದರು. ಇನ್ನು ಇವನ ಜೊತೆ ನಡೆಯುವ ಭಾಗ್ಯ ತನಗೆ ಇಲ್ಲವಾಗುತ್ತದೆ, ಇಂದೇ ಇದಕ್ಕೆ ಕೊನೆ ಎಂಬ ಭಾವನೆಯೇ ಅವಳನ್ನು ಹಣ್ಣು ಮಾಡಿತ್ತು. ಬಸ್ ನಿಲ್ದಾಣ ಸಮೀಪಿಸಿದಂತೆ ಅವಳನ್ನು ಮುಂದೆ ಬಿಟ್ಟು, ತನ್ಬ ಹೆಜ್ಜೆಗಳ ವೇಗವನ್ನು ಕಡಿಮೆ ಮಾಡಿದ ಸ್ವೀಕಾರ್. ದೂರದಿಂದಲೇ ಅವಳನ್ನು ಗುರುತಿಸಿದ ಅವಳ ತಂದೆ, ನಾನಿಲ್ಲೇ ಇದ್ದೇನೆ ಎಂಬಂತೆ ಕೈ ಬೀಸಿದರು. ಬಲವಂತದ ಮುಗುಳು ನಗುವನ್ನು ಮುಖದ ಮೇಲೆ ತಂದುಕೊಂಡು ತಂದೆಯನ್ನು ಸಮೀಪಿಸಿದಳು. ಅವರ ಬಳಿ ನಾಲ್ಕಾರು ಚೀಲಗಳು….. ಆಯಾಸವಾಗಿದ್ದರೂ ಏನೋ ಗೆದ್ದ ಸಂಭ್ರಮ ಅವರಲ್ಲಿ ಮನೆ ಮಾಡಿತ್ತು. ತಂದೆಯ ಉತ್ಸಾಹ ಅವಳ ಬಾಯಿಗೆ ಬೀಗ ಜಡಿಯಿತು.

“ಬಂದೆಯಾ ತಾಯಿ, ಅಮ್ಮ ಎಲ್ಲಾ ಹೇಳಿದ್ದಾಳೆ ತಾನೆ, ಎಲ್ಲಾ ಆ ದೇವರ ದಯೆ” ಎಂದು ತಲೆ ನೇವರಿಸಿದ ಮಾನಸಾಳ ತಂದೆಯನ್ನು ಕಂಡ ಸ್ವೀಕಾರ್, ದೂರದಲ್ಲೇ ಒಂದು ಕಂಬವನ್ನೊರಗಿ ಕೈಕಟ್ಟಿ ನಿಂತ. ಕಣ್ಣು ತುಂಬ ನೀರು ತುಂಬಿದ್ದರಿಂದಲೋ ಏನೋ, ಅವನ ಆಕಾರ ಮಸುಕು ಮಸುಕಾಗಿ ಕಾಣಿಸುತ್ತಿತ್ತು. ಅಷ್ಟರಲ್ಲಿ ಬಂಗಾರ ಪೇಟೆಯ ಕಡೆಗೆ ಹೋಗುವ ಸೆಟಲ್ ಗಾಡಿ ಬಂದಿದ್ದರಿಂದ ಮಾನಸಾ ಳ ತಂದೆ ಚೀಲಗಳನ್ನು ಹೊತ್ರು, ಬಸ್ ಹತ್ತಲು ತಯಾರಾಗುತ್ತಿದ್ದರು. “ಇಲ್ಲಿ ಕೊಡಿ ಅಪ್ಪಾ” ಎಂದು ಬಾಗಿ ಅವರ ಕೈಗಳಲ್ಲಿನ ಚೀಲಗಳಲ್ಲಿ ಎರಡನ್ನು ತೆಗೆದುಕೊಂಡ ಮಾನಸಾ ತಲೆ ತಗ್ಗಿಸಿಕೊಂಡು ತಂದೆಯನ್ನು ಹಿಂಬಾಲಿಸಿದ ಳು. ಮನಸ್ಸು ಮೌನವಾಗಿ ಸ್ವೀಕಾರ್ ನ ಕ್ಷಮೆ ಯಾಚಿಸುತ್ತಿತ್ತು. ನನ್ನೊಬ್ಬಳ ಸ್ವಾರ್ಥಕ್ಕಾಗಿ ನಗುನಗುತ್ತಿರುವ ಹೆತ್ತವರ ನೆಮ್ಮದಿ ಹಾಳು ಮಾಡಬೇಕೇ? ಎಂಬ ಪ್ರಶ್ನೆ ಅವಳನ್ನು ಕಾಡಿ ಕಣ್ಮರೆಯಾಯಿತು. ಬಸ್ನಲ್ಲಿ ತಂದೆಯ ಪಕ್ಕ ಕುಳಿತ ಅವಳು ತನ್ನ ಬ್ಯಾಗಿನಿಂದ ಶಬ್ದಮಣಿ ದರ್ಪಣದ ಪುಸ್ತಕವನ್ನು ತೆಗೆದು, ಹಾಳೆಗಳನ್ನು ತಿರುವತೊಡಗಿದಳು. ಕಣ್ಣಿನಿಂದ ಜಾರಿದ ಹನಿಗಳು ಆ ಪುಸ್ತಕದ ಹಾಳೆಗಳನ್ನು ತೊಯ್ಸಿದವು. ಬಸ್ ಸ್ಟಾರ್ಟ್ ಆಗಿ ನಿಧಾನವಾಗಿ ಮುಂದಕ್ಕೆ ಚಲಿಸಿತು. ಕಂಬದ ಬಳಿ ಸ್ವೀಕಾರ್ ನಿಂತೇ ಇದ್ದನು

—————————–


ಅರುಣ ರಾವ್

Leave a Reply

Back To Top