ಜ್ಯೋತಿ ಡಿ. ಬೊಮ್ಮಾ ಲಲಿತ ಪ್ರಬಂಧ-ಬೇಸಿಗೆಯ ಬಿಸಿಲೂ ಮತ್ತು ಬದುಕೆಂಬ ಜಟಕಾ ಬಂಡಿಯು

ಪ್ರಬಂಧ ಸಂಗಾತಿ

ಜ್ಯೋತಿ ಡಿ. ಬೊಮ್ಮಾ

ಬೇಸಿಗೆಯ ಬಿಸಿಲೂ ಮತ್ತು ಬದುಕೆಂಬ ಜಟಕಾ ಬಂಡಿಯು.

ನಮ್ಮ ಉತ್ತರಕರ್ನಾಟಕದ ಕಡೆ ವರ್ಷದ ಎಲ್ಲಾ ತಿಂಗಳು ಬಹುತೇಕ ಬೇಸಿಗೆಯೆ . ಎಪ್ರಿಲ್ ಮೇ ತಿಂಗಳು ಮತ್ತೊಂದಿಷ್ಟು ಹೆಚ್ಚಿಗೆ ಬಿಸಿಲಿರುತ್ತೆ ಅಷ್ಟೆ . ವರ್ಷದ ಎಲ್ಲಾ ತಿಂಗಳು ನಮಗೆ ಪ್ಯಾನ್ ಜೊರಾಗಿ ತಿರುಗುತ್ತಿರಬೇಕು , ನೀರಿನ ಮಣ್ಣಿನ ಗಡಿಗೆಗಳು ವರ್ಷದ ಎಲ್ಲಾ ದಿನಗಳಲ್ಲೂ ನಮ್ಮ ಮನೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಒಣಗಿ ಹಾಕಿದ ಬಟ್ಟೆಗಳು ತಡವಿಲ್ಲದೆ ಎಲ್ಲಾ ಕಾಲಕ್ಕೂ ಒಣಗುತ್ತವೆ.ದವಸ ಧಾನ್ಯ ಗಳಿಗೆ ಥಂಡಿಯಿಂದ ಹುಳ ಹಿಡಿಯುವ ಉದಾಹರಣೆಗಳು ಬಹಳ ಕಮ್ಮಿ. ನಮ್ಮ ಕಡೆಯವರಿಗೆ ಬಿಸಿಲು ಚುರುಕಾಗಿದ್ದರೆ ಮಾತ್ರ ಬುದ್ದಿಯು ಚುರುಕಾಗಿರುತ್ತದೆ. ಚಳಿಗಾಲದ ಚಳಿಗೆ ಅಥವಾ ಮಳೆಗಾಲದ ಮೋಡ ಮುಸುಕಿದ ವಾತಾವರಣಕ್ಕೆ ನಮ್ಮ ಮನಸ್ಸು ಮಿದುಳುಗಳು ಮಬ್ಬು ಕವಿದಂತೆ ಇರುತ್ತವೆ.ಅದಕ್ಕೆ ಬಿಸಿಲು ಹೆಚ್ಚಾದಷ್ಟು ನಮ್ಮ ಕಾರ್ಯಚಟುವಟಿಕೆಗಳು ಹೆಚ್ಚುತ್ತವೆ.ನಮ್ಮ ಕಡೆ ಮದುವೆಗಳು ಬೇಸಿಗೆಯಲ್ಲಿ ಮಾತ್ರ ಜರುಗುತ್ತವೆ.ಮಳೆಗಾಲ ಚಳಿಗಾಲದಲ್ಲಿ ಯಾವದಾದರೂ ಮದುವೆಯ ಕರೆಯೋಲೆ ಬಂದರೆ ಆಶ್ಚರ್ಯ ಪಡುತ್ತೆವೆ ನಾವು.

ನಮಗೆ ಬಿಸಿಲಿಗೂ ಮತ್ತು ಚಹಕ್ಕೂ ಅವಿನಾಭಾವ ನಂಟು . ಬಿಸಿಲು ಹೆಚ್ಚಾದಷ್ಟೂ ಚಹ ಸೇವನೆಯು ಹೆಚ್ಚಾಗುತ್ತದೆ ವಿನಃ ಕಡಿಮೆಯಾದದ್ದೆ ಇಲ್ಲ.ಹೊರಗೆ ಉಷ್ಣತೆ ನಲವತ್ತು ಡಿಗ್ರಿ ಇದ್ದರೂ ಮನೆಗಳಲ್ಲಿ ಚಹ ಕುದಿಸಿ ಕುಡಿಯುವದು ಬಿಡುವದಿಲ್ಲ.ಹೊರಗೆ ಬಿಸಿಲೆಂದು ಮನೆಯಲ್ಲಿಯೇ ಕುಳಿತು ಮಾಡಲೇನು ತೋಚದೆ ದಿನಕ್ಕೆ ನಾಲ್ಕೈದು ಸಲ ಚಹ ಕುಡಿದು ಬೇಸರ ನೀಗಿಸಿಕೊಳ್ಳುವವರು ನಾವು.

ಮಲನಾಡಿಗರು ಮಳೆಯಲ್ಲಿ ಕಾಫಿ ಅಸ್ವಾದಿಸಿ ಕುಡಿದಂತೆ ನಾವು ಬಿಸಿಲಿನೊಂದಿಗೆ ಚಹ ಅಸ್ವಾದಿಸುವೆವು. ರಣ ಬಿಸಿಲಲ್ಲಿ ಉಷ್ಣೋದಕ ಚಹ ಅಸ್ವಾದಿಸಿ ಕುಡಿಯುವದು ಯಾವ ಕವಿಗಳು ವರ್ಣನೆ ಮಾಡದಿರುವದು ವಿಷಾದ. ಎಷ್ಟೆ ಬಿಸಿಲಿದ್ದರೂ ಧಗೆ ಸುಡುತಿದ್ದರೂ ಚಹ ವನ್ನು ತಿರಸ್ಕರಿಸಲಾರೆವು. ಸುಡು ಬಿಸಿಲಲ್ಲಿ ಸುಡುವ ಚಹ ಕುಡಿದು ಮೈ ಮುಖವೆಲ್ಲ ಬೆವರಿದರೂ ಬಿಡದೆ ಚಹಾಪಾನ ಮಾಡುವ ನಮಗೆ ಬಿಸಿಲೆಂಬುವದು ಬರಿ ಬಿಸಿಲು ಮಾತ್ರ. ಹಾಗೆ ತಂಪು ಪಾನೀಯಗಳಾದ ಮಜ್ಜಿಗೆ ಮೊಸರು ಸೇವಿಸಬೇಕು ಚಹ ಬಿಡಬೇಕು ಎಂದು ಒಬ್ಬರಿಗೊಬ್ಬರು ಸಲಹೆ ನೀಡುತ್ತ , ರಣ ಬಿಸಿಲಿಗೆ ಶಪಿಸುತ್ತ , ಬಿಸಿಲಿನ ಅವಾಂತರದ ಬಗ್ಗೆ ಮಾತಾಡುತ್ತ ಚಹ ಕುಡಿಯುತ್ತೆವೆ. ಈ ಬಿಸಿಲೆಂಬುದು ಮಳೆ ಚಳಿಯಷ್ಟು ಪ್ರಾಮುಖ್ಯತೆ ಪಡೆಯದೆ ಇರುವದು ವರ್ಣಿಸಿಕೊಳ್ಳದಿರುವದು ನಮ್ಮ ಬಿಸಿಲ ನಾಡಿನವರಿಗೆ ಬೇಜಾರಾಗುತ್ತದೆ.ಬಿಸಿಲಿಗೂ ಅದರದೇ ಆದ ಮಹತ್ವ ವಿದೆ.ಪಾಶ್ಚಿಮಾತ್ಯರು ಬಿಸಿಲಿಗಾಗಿ ನಮ್ಮ ದೇಶ ಹುಡುಕಿಕೊಂಡು ಬಂದು ಉಚಿತವಾಗಿ ವಿಟಾಮಿನ್ ಡಿ ಪಡದುಕೊಳ್ಳುತ್ತಾರೆಂದರೆ ಬಿಸಿಲೆಂದರೆ ಸಾಮಾನ್ಯವೇ..! ಒಂದ್ ನಾಲ್ಕು ದಿನ ಸೂರ್ಯ ಮುಖ ತೋರದಿದ್ದರೆ ದಿಗಿಲುಗೊಳ್ಳುವವರು ನಾವು.

ವರ್ಷವೆಲ್ಲ ಬಿಸಿಲಿದ್ದರೂ ನಮಗೂ ಬೇಸಿಗೆಯಲ್ಲಿ ಕೈತುಂಬಾ ಕೆಲಸ , ಕುವೆಂಪು ಕಾರಂತರ ಪುಸ್ತಕಗಳಲ್ಲಿ ಮಲ್ ನಾಡವರಿಗೆ ಬೇಸಿಗೆಯಲ್ಲಿ ಎಷ್ಟೆಲ್ಲ ಕೆಲಸಗಳಿರುತ್ತವೆ ಎಂದು ಓದಿದ ನನಗೆ ನಮ್ಮ ಬಿಸಿಲ ನಾಡಿನವರ ಬೇಸಿಗೆ ಕೆಲಸಗಳೆನು ಕಮ್ಮಿ ಇರುತ್ತವೆಯೇ ಅನಿಸಿತು.ಅವರು ವರ್ಷದ ಕೆಲ ತಿಂಗಳು ಮಾತ್ರ ಬಿಸಿಲು ನೋಡುವುದರಿಂದ ಅವರು ಹಾಗೆ ಬರೆದಿರಬಹುದು , ವರ್ಷವೆಲ್ಲ ಬಿಸಿಲೆ ಹಾಸಿ ಹೊದೆಯುವಷ್ಟಿದ್ದ ನಮ್ಮ ಕಡೆಗೂ ಬೇಸಿಗೆ ಬಂದರೆ ಸಾಕು ಹೆಣ್ಣುಮಕ್ಕಳಿಗೆ ಕೈತುಂಬಾ ಕೆಲಸ.


ಒಂದು ವರ್ಷಕ್ಕಾಗುವಷ್ಟು ಹಪ್ಪಳ ಸಂಡಿಗೆ ಶಾವಿಗೆ ಇತ್ಯಾದಿ ಮಾಡಿಟ್ಟುಕೊಳ್ಳುವ ಧಾವಂತ. ನನಗೆ ಈಗೀಗ ಇವೆಲ್ಲವೂ ಮಾಡಿಕೊಳ್ಳುವ ಆಸಕ್ತಿ ಯೇ ಕುಂದಿದೆ.ಎಲ್ಲವೂ ರೇಡಿಮೇಡ್ ಸಿಗುತ್ತಿರುವಾಗ ವೃಥಾ ಹೈರಾಣಾಗುವದು ವ್ಯರ್ಥ ವೆಂದು ನನ್ನ ಭಾವನೆ. ಆದರೆ ನಮ್ಮ ರತ್ನಳಿಗೆ ಇವೆಲ್ಲ ಮಾಡಿಟ್ಟುಕೊಳ್ಳಲು ಬಲು ಆಸಕ್ತಿ.

ಅಕ್ಕೋರೆ , ಈ ವರ್ಷ ಹಪ್ಪಳ ಸಂಡಿಗಿ ಎಲ್ಲಾ ಮನ್ಯಾಗೆ ಮಾಡ್ಕೋರಿ , ನಾನು ಹೆಲ್ಪ ಮಾಡತಿನಿ ನಿಮಗ , ಎಂದು ಪಿಠಿಕೆ ಶುರು ಮಾಡಿದಳು ,

ಬ್ಯಾಡ ಬಿಡೆ , ಎಲ್ಲಾ ಮಾಡಿದ್ದೆ ಸಿಗಲತಾವ , ಮತ್ಯಾಕ ಮಾಡಕ್ಕೊಳ್ಳೋದು , ಗೃಹ ಉದ್ಯಮ ಮಾಡುವವರು ಇವೆಲ್ಲ ಮನ್ಯಾಗೆ ಮಾಡಿ ಮಾರಲತಾರ , ರುಚಿನೂ ಚಂದ ಇರತಾವ , ಅಂದೆ ಉದಾಸೀನ ದಿಂದ .

ಐ , ಅಕ್ಕೋರೇ ,ಖರೀದಿ ತಂದದ್ದು ಮನ್ಯಾಗ ಮಾಡಿದ್ದು ಬಿಡಸತದ , ಮನ್ಯಾಗ್ ಮಾಡಿದ್ದ ಟೇಸ್ಟ ಬ್ಯಾರೇನೆ ಇರತದ , ನೀವೇನ ಚಿಂತಿ ಮಾಡಬ್ಯಾಡ್ರೀ,ನಾ ಎಲ್ಲ ಮಾಡಕೊಡತಿನಿ , ಮುಂಜಾನಿ ಒಂದೆರಡ ಗ್ಲಾಸ್ ಅಕ್ಕಿ ನೆನಿ ಇಡ್ರೀ , ನಾ ನಸಕಿನಾಗೆ ಬಂದು ಮಾಡಕೊಡತೀನಿ ಅಂದು ಲಗುಬಗೆಯಿಂದ ತೆರಳಿದಳು.

ಮಹಾ ಮೈಗಳ್ಳಿಯಾದ ನನಗೆ ಇವ್ಯಾವದರ ಮೇಲು ಆಸಕ್ತಿ ಇಲ್ಲ , ಆದರೂ ಅವಳು ಅಷ್ಟೊಂದು ಉತ್ಸಾಹದಿಂದ ನನಗೆ ಸಹಾಯ ಮಾಡಲು ಆಸಕ್ತಿ ತೋರಿದ್ದರಿಂದ , ಅಕ್ಕಿ ನೆನಸಿ ರಾತ್ತಿ ಹಿಟ್ಟು ರುಬ್ಬಿ ಇಟ್ಟೆ.ಬೆಳಗಾಗುವಷ್ಟರಲ್ಲಿ ರತ್ನ ಹಾಜರ್ , ನೀರಿಗೆ ಎಸರಿಟ್ಟು ಕುದಿಯುವ ನೀರಿಗೆ ರುಬ್ಬಿದ ಹಿಟ್ಟು ಹಾಕಿ ಗಂಟಿಲ್ಲದಂತೆ ಕಲೆಸುತ್ತ ಹದವಾಗಿ ಹಿಟ್ಟು ಕುದಿಸಿದೆವು. ಅಂಗಳದಲ್ಲಿ ಒದ್ದೆ ಬಟ್ಟೆ ಹರವಿ ಅಕ್ಕಿ ಹಿಟ್ಟಿನ ಸಂಡಿಗೆ ಇಡುವಷ್ಟರಲ್ಲಿ ಬಿಸಿಲು ಚುರುಕಾಗಿತ್ತು.
ಅಕ್ಕೋರೆ ಈಗ ಇವು ಒಣಗ್ಲಿ , ನಾಳಿಗಿ ರವಾ ಹಪ್ಪಳ ಮಾಡರಿ , ರಾತ್ರಿನೇ ರವಾ ನೆನಿಹಾಕಿ ಇಡ್ರೀ , ನಾಳಿಗಿ ಹಿಟ್ಟು ಕುದಿಸುವಾಗ ಅದರಾಗ ಉಳಾಗಡ್ಡಿ , ಹಸಿಮೆಣಸಿನಕಾಯಿ ,ಜೀರಿಗಿ ಹಾಕಿ ಕುದಸರಿ , ಹಪ್ಪಳ ಖಮ್ಮಗ ಆಗತಾವ , ಎಂದು ನನಗೆ ಆದೇಶ ನೀಡಿ ತೆರಳಿದಳು . ರತ್ನನ ಸಹಾಯದಿಂದ ಅಕ್ಕಿ ಸಂಡಿಗೆ ,ರವೆ ಹಪ್ಪಳ , ಆಲೂಗಡ್ಡೆ ಚೀಪ್ಸ ಮಾಡಿಕೊಂಡು ಒಣಗಿಸಿ ಡಬ್ಬಿ ತುಂಬಿಟ್ಟಾಗ ಏನೋ ಸಾರ್ಥಕತೆ ಭಾವ , ರತ್ನನೆಡೆಗೆ ಮೆಚ್ಚುಗೆಯಿಂದ ನೋಡುತ್ತ , ಹೌದ ನೋಡೆ ರತ್ನ ಮನ್ಯಾಗ ಮಾಡಕೊಂಡದ್ದರ ಮಾತೆ ಬ್ಯಾರೆ ಇರತದ ನೋಡು , ಅಂದೆ.
ಹುಂ , ಮತ್ತ ..ಖರಿದಿ ತಂದ ತಿಂದದ್ದು ಬರಕತ್ತ ಆಗಲ್ಲ , ಅದಕ್ಕ ಬ್ಯಾಸಗ್ಯಾಗ ಇವೆಲ್ಲ ಮಾಡಿ ಇಟ್ರ ಒಂದು ವರ್ಷತನಾ ಏಟ ಬೇಕಾದ್ರೂ ತಿನ್ನಬಹುದು . ಖರದಿ ತಂದ್ರ ಒಂದು ಪಾಕೇಟ್ ದಾಗ ಎಣಿಸಿ ನಾಕು ಹಪ್ಪಳ ಇರತಾವ , ಈಗ ಮನ್ಯಾಗೇ ಮಾಡಿಟ್ಟರ ನೋಡ್ರೀ ಎರಡ ಡಬ್ಬಿ ಪುಲ್ ತುಂಬ್ಯಾವ , ಎಂದು ನನಗೆ ಬೋಧಿಸಿದಳು.ಒಪ್ಪಿಕೊಂಡೆ.

ಅಕ್ಕೋರೆ ಹಪ್ಪಳ ಸಂಡಿಗಿ ಆಯ್ತು, ಶಾವಿಗಿನೂ ಮಾಡಕೋರಿ.ನಮ್ಮನಿಸಲುವಾಗೂ ಮಾಡುಸೋದದ , ಹಂಗ ನಿಮಗೂ ಮಾಡಿಸ್ಕೊಂಡು ಬರತಿನಿ ,

ಬ್ಯಾಡ ಬಿಡೆ , ಖರಿದಿ ಶ್ಯಾವೀಗಿನೆ ತರತೀನಿ , ನಮಗೆಷ್ಟು ಬೇಕಾಗತಾವ , ಬೇಕಾದಾಗ ಒಂದೊಂದು ಪಾಕೆಟ್‌ ತಂದರಾಯಿತು, ಅಂದೆ.

ಬರೀ ಹೊರಗಿಂದೇ ತಂದ ತಿಂತೀವಿ ಅಂತಿರಲ್ಲರೀ ಅಕ್ಕೋರೇ , ಕೈಲಾಗದವರಂಗ , ಅಂಗಡ್ಯಾಗ ಸಿಗವು ಅವ್ಯಾವ್ಯಾವ ಹಿಟ್ಟಿನಿಂದ ಮಾಡಿರತಾರೋ ಏನೋ , ಒಂದ ಸೈ ಇರಲ್ಲ ಸಪ್ಪಗ ಇರಲ್ಲ , ಗೋಧಿ ತರಸ್ರೀ , ನಾ ಎಲ್ಲಾ ಮಾಡಕೊಂಡ ಬರತಿನಿ , ಅಂತ ಆರ್ಡರ್ ಮಾಡಿ ಹೋದಳು .

ಅವಳೆ ಎಲ್ಲಾ ಮಾಡಸ್ಕೊಂಡು ಬರತಿನೀ ಅಂತ ಅಶ್ವಾಸನೆ ಕೊಟ್ಟ ಮೇಲೂ ಬೇಡ ಅನ್ನಲು ಮನಸ್ಸು ಬರಲಿಲ್ಲ.ಅವಳೊಂದಿಗೆ ನಾನು ಉತ್ಹಾಹಿತಳಾಗಿ ಶ್ಯಾವಿಗೆಯ ಕೈಂಕರ್ಯದಲ್ಲಿ ಭಾಗವಹಿಸಲೇ ಬೇಕಾಯ್ತು. ಗೋಧಿ ನೆನೆಸಿ ನೆರಳಲ್ಲಿ ಒಣಗಿಸಿ ಹಿಟ್ಟು ಮಾಡಿಸಲಾಯಿತು.ನುಣುಪಾದ ಹಿಟ್ಟನ್ನು ತೆಳುವಾದ ಕಾಟನ್ ಬಟ್ಟೆ ಮೇಲೆ
ಹರಡಿ ಸೋಸಲಾಯಿತು . ಈಗೆಲ್ಲ ಹಿಂದಿನಂತೆ ಮನೆಯಲ್ಲಿ ಶ್ಯಾವಿಗೆ ಮಾಡುವ ಪ್ರಸಂಗವಿಲ್ಲ.ನಾವು ಚಿಕ್ಕವರಿದ್ದಾಗ ಮನೆಯಲ್ಲಿ ಶ್ಯಾವಿಗೆ ಮಾಡುವದೆಂದರೆ ಒಂದು ಮದುವೆ ಸಂಭ್ರಮದಂತೆ , ಮನೆತುಂಬಾ ಜನವೋ ಜನ. ಈಗ ಗೃಹ ಉದ್ಯಮದಡಿ ಸ್ವಸಹಾಯ ಸಂಘದಿಂದ ಲೋನ್ ತಗೊಂಡು ಶ್ಯಾವಿಗಿ ಮಿಷನ್‌ , ಖಾರ ಕುಟ್ಟುವ ,ಹಪ್ಪಳ ಮಾಡುವ ಉದ್ಯೋಗ ದಿಂದ ಅನೇಕ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ.
ಮನೆಯ ಪಕ್ಕದಲ್ಲೆ ಇರುವ ಶ್ಯಾವಿಗಿ ಮಿಷನ್ ನಲ್ಲಿ ರತ್ನ ಶ್ಯಾವಿಗಿ ಮಾಡಿಸಿಕೊಂಡು ಬಂದಳು , ಅವುಗಳನ್ನು ಒಂದೆರಡು ದಿನ ಬಿಸಿಲಲ್ಲಿ ಒಣಗಿಸಿ ಡಬ್ಬಿ ತುಂಬಿಟ್ಟಾಯಿತು.ಪೂರ್ಣ ಒಂದು ವರ್ಷ ಶ್ಯಾವಿಗೆಯ ಒಂದೆಸಳು ಖರಿದಿಸದಂತೆ ಮನೆ ತುಂಬಾ ಶ್ಯಾವಿಗೆ.

ಎಲ್ಲಾ ಮಾಡಕೊಂಡಾಯಿತು ಎಂದು ನೀರಾಳಾಗುವಷ್ಟರಲ್ಲೇ ಅಕ್ಕೋರೇ ಎಂದು ಶುರು ಮಾಡಿದಳು ರತ್ನ. ಅವಳು ಮತ್ತೊಂದು ಕೆಲಸದ ಫರ್ಮಾನು ಇಡುವ ಮೊದಲೆ ತಪ್ಪಿಸಿಕೊಳ್ಳುವ ಹವಣಿಕೆ ನನ್ನದು. ಬಡಪೆಟ್ಟಿಗೆ ಬಿಟ್ಟರೆ ತಾನೆ .

ಅಕ್ಕೋರೇ ಅಲ್ಲಿ ಮೂಲಿ ಮನೇರು ಹುಣಸಿಕಾಯಿ ಮಾರಲತಾರ್ರೀ , ಕಾಯಿ ದಪ್ಪ ದಪ್ಪ ಚಂದ ಅವ , ಇಬ್ಬರೂ ಕೂಡಿ ತಗೊಂಡು ಒಡದ ಇಟ್ಟಕೊಳ್ಳೊಣ.ಒಂದು ವರ್ಷ ಬರತದ..

ಬ್ಯಾಡೆವ್ವ , ಆ ಹುಣಸಿಕಾಯಿ ಸಹವಾಸ , ಒಂದೆರಡ ತಿಂಗಳ ಮನ್ಯಾಗ ಇಟ್ಟರ ಕರ್ರಗ ಆಗಿ ಬಿಡಲತದ , ಸುಮ್ನ ಬೇಕಾದಷ್ಟೆ ಆಗಿಂದಾಗ್ಗೆ ಖರೀದಿ ತಂದರಾಯಿತು , ಎಂದು ನನ್ನ ಎಂದಿನ ಪ್ರವರ ಒಪ್ಪಿಸಿದೆ.

ಕರ್ರಗ ಆಗಲ್ಲರಿ ಅಕ್ಕೋರೆ , ಹುಣಸಿ ಹಣ್ಣಿನಾಗ ಒಂದಿಟು ಕಲ್ಲುಪ್ಪು ಸೇರಸಿ ಪ್ಲಾಸ್ಟಿಕ್ ಡಬ್ಬಿದಾಗ ಇಟ್ಟರ ಕರ್ರಗ ಅಗಲ್ಲ ಮಣ್ಣ ಆಗಲ್ಲ , ಒಂದು ಆರು ತಿಂಗಳಾದಮ್ಯಾಲ್ ಕರ್ರಗ ಆದಂಗ ಅನಸಿದ್ರ ಪ್ರೀಜ್ ನಾಗ ಇಡಬೇಕಪ್ಪ , ಅಂದಳು.
ಸದಾ ತುಂಬಿ ತುಳುಕುವ ನನ್ನ ಪ್ರೀಜ್ ನಲ್ಲಿ ಈ ಹುಣಸೆ ಹಣ್ಣಿಗೆಲ್ಲಿ ಜಾಗ ಕೊಡೋದು ಎಂದು ತಲೆ ಕೆದರಿಕೊಳ್ಳುವಂತಾಯಿತು. ಆಕಿ ಹ್ಯಾಂಗೂ ನನ್ನ ಬಿಡೋದಿಲ್ಲ ಅಂತ ಅರಿತು , ಆಯ್ತು ನನಗಂತೂ ಒಂದ್ ನಾಲ್ಕು ಕೇಜಿ ಸಾಕ್ ನೋಡು , ಎಂದೆ.

ಸರಿ , ರತ್ನ ನನಗೆ ಅವಳಿಗೆ ಕೂಡಿಸಿ ಹತ್ತು ಕೇಜಿ ಹುಣಸೆಕಾಯಿ ತಂದಳು. ಅವನ್ನು ಚನ್ನಾಗಿ ಬಿಸಲಲ್ಲಿ ಒಣಗಿಸಿ ಕುಟ್ಟಿ ಅದರೊಳಗಿನ ಬೀಜ ಬೆರ್ಪಡಿಸುವ ಕೆಲಸ ಶುರುವಾಯಿತು.ರತ್ನ ಅಕ್ಕ ಪಕ್ಕದವರನ್ನೆಲ್ಲ ಕರೆದು ಅಂಗಳದಲ್ಲಿ ಜಮಾಯಿಸಿದಳು.ಸಂಜೆ ಹೊತ್ತಿಗಷ್ಟೆ ಸ್ವಲ್ಪ ಪುರುಸೊತ್ತಿರುವ ನಮ್ಮ ಹೆಂಗಳೆಯರೆಲ್ಲ ಒಂದೇ ಕಡೆ ಕುಳಿತು ಹರಟುತ್ತ ಹುಣಸೆ ಬೀಜವನ್ನು ಬೇರ್ಪಡಿಸುವ ಕೆಲಸ ಪ್ರಾರಂಭಿಸಿದೆವು , ಬೀಜವನ್ನು ಮಾತ್ರ ಬೆರ್ಪಡಿಸಿ ನಾರು ಹಾಗೆ ಇಡಬೇಕು. ಹುಣಸೆ ರಸ ಕಿವಿಚಬೇಕಾದರೆ ನಾರು ಕೈಗೆ ಬರಬೇಕು , ಆಗ ಮಾತ್ರ ರಸ ಸಪ್ಪೆಯಿಂದ ಪೂರ್ಣ ಪ್ರಮಾಣದಲ್ಲಿ ಹೊರಬರುತ್ತದೆ. ಇವೆಲ್ಲ ವಿಷಯಗಳು ಯಾವ ಯುನಿವರ್ಸಿಟಿ ಯಲ್ಲೂ ಕಲತದ್ದಲ್ಲ , ಅನುಭವದಿಂದ ದೊರತದ್ದು.

ರತ್ನಳ ದಯೆಯಿಂದ ಬೀಜ ಬೇರ್ಪಟ್ಟ ಗರಿಗರಿಯಾಗ ಹುಣಸೆ ಹಣ್ಣು ಬಾಯಲ್ಲಿ ನೀರೂರಿಸಿತ್ತು.ಕಲ್ಲುಪ್ಪಿನೊಂದಿಗೆ ಬೆರೆತು ತನ್ನ ಸ್ಥಳದಲ್ಲಿ ಬೀಡುಬಿಟ್ಟಿತ್ತು.

ಈಗ ಮುಂದಿನ ಕೆಲಸ ಬೇಳೆಕಾಳನ್ನು ಒಡೆಯುವದು.ತೊಗರಿಯ ಕಣಜವಾಗಿರುವ ನಮ್ಮ ಕಲ್ಬುರ್ಗಿ ಮಂದಿಗೆ ದಿನಾಲೂ ಊಟಕ್ಕೆ ತೊಗರಿಬೇಳೆ ಸಾರೇ ಆಗಬೇಕು. ಬಹಳ ಜನ ಸಿದ್ದ ಪಡಿಸಿದ ಬೇಳೆಯನ್ನೆ ಉಪಯೋಗಿಸುತ್ತಾರೆ.ನನಗೆ ಬೇಳೆ ಕಾಳುಗಳನ್ನು ಮನೆಯಲ್ಲಿ ಸಿದ್ದ ಪಡಿಸಿದ್ದು ಇಷ್ಟ ವಾಗುತ್ತದೆ. ಅಂಗಡಿಯಲ್ಲಿ ಸಿಗುವ ಕಾಳುಗಳು ಪಾಲಿಷ್ ಮಾಡಿ ಹೊಳಪು ಬರಿಸಿರುತ್ತಾರೆ. ಕಾಳುಗಳನ್ನು ತಯಾರಿಸುವದು ಬಹು ಶ್ರಮದ ಕೆಲಸ , ಬಿಸುವ ಕಲ್ಲಿನಲ್ಲಿ ಬೇಳೆ ಒಡೆಯುವದು ಈಗ ಅಸಾದ್ಯ.ಮಿಲ್ಲಿಗೆ ಹಾಕಿಸಬೇಕಾದರೆ ಜಾಸ್ತಿ ಪಾಲಿಷ್ ಬೇಡವೆಂದೂ ಹೇಳಿ ಒಡೆಸಬೇಕು.ನಾನು ರತ್ನ ಕೂಡಿ ತೊಗರಿ ಬೇಳೆ ತಯ್ಯಾರಿಯಲ್ಲಿ ತೊಡಗಿದೆವು. ತೋಗರಿಯನ್ನು ಎರಡ್ಮೂರು ಗಂಟೆ ನೆನಸಿ ರಾತ್ರಿ ಎಲ್ಲ ಸೆಣಬಿನ ಚೀಲದಲ್ಲಿ ಕಟ್ಟಿಡಲ್ಪಡುತ್ತದೆ.ಮರುದಿನ ಬಿಸಿಲಲ್ಲಿ ಒಣಗಿಸಬೇಕು , ಒಣಗಿಸುವದಕ್ಕೂ ಒಂದು ಹದವಿದೆ.ಹೆಚ್ಚು ಒಣಗಿಸಿದರೆ ಒಡೆಸುವಾಗ ಬೇಳೆಗಳು ಚೂರಾಗುವ ಸಂಭವವಿರುತ್ತದೆ.ಒಣಗಿಸಿದ ಬೇಳೆಯನ್ನು ಹದಿನೈದು ದಿನ ಇಲ್ಲವೇ ಒಂದು ತಿಂಗಳು ಇಟ್ಟು ಮಿಲ್ಲಲ್ಲಿ ಒಡೆಸಬೇಕು.ಮನೆಯಲ್ಲಿ ಒಡೆಯುವದು ಬಹಳ ಶ್ರಮ ವಿರುವದರಿಂದ ನಾವೂ ಬೇಳೆ ಒಡೆಯುವ ಮಿಷನ್ನಿನ ಮೋರೆ ಹೋಗಬೇಕಾಯಿತು . ಬೇಳೆಯನ್ನು ಪಾಲಿಷ್ ಮಾಡದಂತೆ ಒಡೆದ ಬೇಳೆಯನ್ನು ಹೊಟ್ಟು ಕಾಳು ಬೇರ್ಪಡಿಸಿ ಸಿದ್ದ ಪಡಿಸಿಟ್ಟುಕೊಳ್ಳುವದು ಮುಗಿದಾಗ ಒಂದು ಯುದ್ದ ಗೆದ್ದಷ್ಟೆ ಸಂತೋಷ ಕೊಡದೆ ಇರದು.
ತೊಗರಿಬೇಳೆ ಅಷ್ಟೆ ಅಲ್ಲ , ಉದ್ದು ಕಾಳು , ಹೆಸರು ಕಾಳು , ಕಡಲೇಕಾಳು ಗಳನ್ನೆಲ್ಲ ಒಡೆದು ಬೇಳೆ ಮಾಡಿಟ್ಟುಕೊಳ್ಳುವದರಲ್ಲಿ ಬೇಸಿಗೆ ಮುಗಿಯುತ್ತ ಬಂದಿರುತ್ತದೆ. ಇದರೊಂದಿಗೆ ವರ್ಷಕ್ಕಾಗುವಷ್ಟು ಜೋಳವನ್ನು ಒಣಗಿಸಿ ಹಸನು ಮಾಡಿಟ್ಟುಕೊಳ್ಳಬೇಕು.

ಆಹಾರ ಕೂಡಿಟ್ಟುಕೊಂಡರಷ್ಟೆ ಆಗದು , ನಮ್ಮ ಕಡೆಗೆ ಕಲ್ಲಿನ ಮನೆಗಳು ಅಧಿಕ.ಮಳೆಗಾಲದ ಆಗಮನಕ್ಕೂ ಮುಂಚೆ ತಾರಸಿ ಸೋರದಂತೆ ಭದ್ರಪಡಿಸಿಕೊಳ್ಳಬೇಕು.ಮಳೆಗಾಲಕ್ಕಾಗುವಷ್ಟು ಸೌದೆ ಬೆರಣಿ ಶೇಖರಿಸುವ ಕಾರ್ಯವೂ ಆಗಬೇಕು.

ಈ ಎಲ್ಲಾ ಕಾರ್ಯಗಳ ಸಾಗುವಳಿಗೆ ರತ್ನಳಂತ ಆಪತ್ಬ್ಬಾಂಧವರ ಅತಿ ಅಗತ್ಯವಿರುತ್ತದೆ.
ಅವಳಿದ್ದುದ್ದರಿಂದ ಹಪ್ಪಳ ಸಂಡಿಗೆ ಶ್ಯಾವಿಗೆಯೊಂದಿಗೆ , ಖಾರ ಪಡಿ ಅರಶಿನ ಪುಡಿ , ಮಸಾಲೆ ಪುಡಿಗಳನ್ನು ಮಾಡಿಟ್ಟುಕೊಂಡದ್ದಾಯಿತು.ಇನ್ನೇನಿದ್ದರೂ ಉಪ್ಪಿನ ಕಾಯಿಯ ಸಂಭ್ರಮ ಒಂದು ಬಾಕಿ. ಹೀಗೆ ಬೇಸಿಗೆಯ ಬಿಸಿಲಿಗೂ ಬದುಕಿಗೂ ಅವಿನಾಭಾವ ಸಂಭಂಧ.ಮಳೆಗಾಲದಲ್ಲಿ ಉತ್ತಿ ಬಿತ್ತಿದ್ದನ್ನು ಕೆಡದಂತೆ ಶೆಖರಿಸಿಡಲೂ ಬಿಸಿಲಿನ ಅವಶ್ಯಕತೆ ಅಧಿಕವಾಗಿರುತ್ತದೆ.

ಹಪ್ಪಳ ಸಂಡಿಗೆ ಶಾವಿಗೆ ಇವೆಲ್ಲ ತಯಾರಿಸುವಾಗ ಅಕ್ಕಪಕ್ಕದವರ ಬಾಂದ್ಯವ್ಯ ವೃದ್ಧಿಸುತ್ತದೆ. ಅವರ ಮನೆಗೆ ಇವರು ಇವರ ಮನೆಗೆ ಅವರು ಹೋಗಿ ಸಹಾಯಹಸ್ತ ನೀಡುವದರಿಂದ ಅನೊನ್ಯತೆ ಬೆಳೆಯುತ್ತದೆ.ಬೇಸಿಗೆಯ ಇಂತಹ ಕೆಲಸಗಳು ಹೈರಾಣದೊಂದಿಗೆ ಆತ್ಮತೃಪ್ತಿಯನ್ನು ದೊರಕಿಸಿ ಕೊಡುತ್ತವೆ, ಅದಕ್ಕೆ ನಮ್ಮ ಹೆಂಗಳೆಯರಿಗೆ ಬೇಸಿಗೆ ಎಂದರೆ ಸಂಭ್ರಮವೆಂದು ಹೇಳಬಹುದು.


ಜ್ಯೋತಿ ಡಿ. ಬೊಮ್ಮಾ.

Leave a Reply

Back To Top