ಕಾವ್ಯ ಸಂಗಾತಿ
ಡಾ. ಪುಷ್ಪಾ ಶಲವಡಿಮಠ
ಸೋಜುಗದ ಸೂಜು ಮಲ್ಲಿಗೆ
ತುಳುಕುವ ಕಣ್ಣ ನೀರ
ತುಳುಕದಂತೆ ತಡೆದು
ತುಟಿಯoಚಲಿ
ನಗುವ ತುಳುಕಿಸುವ
ಸೋಜುಗದ ಸೂಜು ಮಲ್ಲಿಗೆ ನೀನು
ನೂರಾರು ಕನಸು ಕಾಣುತ್ತಾ
ಬದುಕಿನ ಕೌದಿಗೆ
ನವಿಲುಗರಿಯ ಚಿತ್ತಾರ ಹೆಣೆದ
ಸೋಜುಗದ ಸೂಜು ಮಲ್ಲಿಗೆ ನೀನು
ನೂರಾರು ಮುಳ್ಳುಗಳ ನಡುವೆ
ಸಾವಿರಾರು ಕಲ್ಲುಗಳ ನಡುವೆ
ನಿಲ್ಲದ ಪಯಣ ನಿನ್ನದಾದರೂ
ಎಲೆಯ ಮರೆಗಂಟಿ ನಗುವ
ಸೋಜುಗದ ಸೂಜು ಮಲ್ಲಿಗೆ ನೀನು
ಹೊತ್ತಾರೆ ಎದ್ದು
ಚಿತ್ತಾರದ ರಂಗವಲ್ಲಿಗೆ ಬೆವರಿಳಿಸಿ
ಎದೆಯಾಕಾಶದ ತುಂಬಾ
ನಗುವ ನಕ್ಷತ್ರಗಳನ್ನರಳಿಸಿ
ಮಮತೆಯ ಹಾಲುಣಿಸಿ ತಣಿಸಿದ
ಸೋಜುಗದ ಸೂಜು ಮಲ್ಲಿಗೆ ನೀನು
ನಾಳಿನ ಒಲೆಯಾರದಂತೆ
ಕಟ್ಟಿಗೆಯನಿಕ್ಕುತ್ತ
ಹಸಿದ ಹೊಟ್ಟೆಯ
ಹಸಿವ ನೀಗಿಸಿ
ನಿಗಿನಿಗಿ ಕೆಂಡದಲೂ
ಅರಳಿ ಘಮಘಮಿಸಿದ
ಸೋಜುಗದ ಸೂಜು ಮಲ್ಲಿಗೆ ನೀನು
ನದಿಯಂತೆ ಹರಿದು ಕಡಲ ಸೇರಿ
ಸಿಹಿಯೆಲ್ಲ ಕಳೆದುಕೊಂಡು
ಉಪ್ಪದರೂ ನೀನು
ಉಪ್ಪಿಲ್ಲದೇ ರುಚಿಯಿಲ್ಲವೆಂಬ
ತತ್ವಜ್ಞಾನ ಕಲಿಸಿದ
ಸೋಜುಗದ ಸೂಜು ಮಲ್ಲಿಗೆ ನೀನು
ಶತಶತಮಾನಗಳಿಂದ
ಕತ್ತಲ ಗುಹೆಯಲ್ಲಿ
ಬೆಳಕನರಸುತ್ತ ಬೆಳಕಿನೂರಿಗೆ ಬಂದ
ಸೋಜುಗದ ಸೂಜು ಮಲ್ಲಿಗೆ ನೀನು
ಬಂಧನದ ಸರಳುಗಳ ನಡುವಲ್ಲಿಯೂ
ಜೋಳಿಗೆ ಕಟ್ಟಿ
ಬಿಡದೇ ತಣ್ಣನೆಯ ಜೋಗುಳ ಹಾಡಿ
ಜಗವ ತೂಗಿ ನಗಿಸಿದ
ಸೋಜುಗದ ಸೂಜು ಮಲ್ಲಿಗೆ ನೀನು
ಜಗದ ಕಣ್ಣಾಗಿ
ದುಡಿದು ಹಣ್ಣಾಗಿ
ಜೀವ ದನಿಯಾಗಿ ಕಾಡಿದ
ಸೋಜುಗದ ಸೂಜು ಮಲ್ಲಿಗೆ ನೀನು…..
ಡಾ. ಪುಷ್ಪಾ ಶಲವಡಿಮಠ
ಕಾವ್ಯ ಪ್ರತಿಮೆಗಳು ಅದ್ಭುತ ವಾಗಿವೆ ಅಭಿನಂದನೆಗಳು ಮೇಡಮ್
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
Sulalitawada mansigemuttuwa kawana medam
ತಮ್ಮ ಓದಿನ ಪ್ರೀತಿಗೆ ಧನ್ಯವಾದಗಳು