ನಂಜನಗೂಡು ತಿರುಮಲಾಂಬಾ ಇಂದು ಜನ್ಮದಿನದ ನಿಮಿತ್ತ

ನೆನಪು

ಎಲ್. ಎಸ್. ಶಾಸ್ತ್ರಿ

ನಂಜನಗೂಡು ತಿರುಮಲಾಂಬಾ

ನಂಜನಗೂಡು ತಿರುಮಲಾಂಬಾ

೧೮- ೧೯ ನೇ ಶತಮಾನದಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆ ಹೇಗಿತ್ತು ಎಂದು ಗೊತ್ತಿದ್ದವರಿಗೆ ಓರ್ವ ಬಾಲ ವಿಧವೆ, ಅದೂ ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯಲ್ಲಿ ಜನಿಸಿದ ಮಹಿಳೆ ಪತ್ರಿಕೆ ಹೊರಡಿಸುವದು, ಪುಸ್ತಕ ಬರೆಯುವದು , ಮಹಿಳಾ ಉದ್ಧಾರದ ಕೆಲಸ ಮಾಡುವದು ಅದೆಷ್ಟು ಕಷ್ಟದ ಕೆಲಸ ಎನ್ನುವದು ಗೊತ್ತೇ ಇರುತ್ತದೆ. ಸಮಾಜದ ಮುಖ್ಯ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಈಜುವದು ದೊಡ್ಡ ಸಾಹಸವೇ ಸರಿ. ಅಂತಹ ಸಾಹಸವನ್ನು ಮಾಡಿದ ಶ್ರೀಮತಿ ತಿರುಮಲಾಂಬಾ ಅವರ ಬಗ್ಗೆ ತಿಳಿದವರು ಕಡಿಮೆ.
ತಿರುಮಲಾಂಬಾ ಅವರು‌ ೧೮೮೭, ಮಾರ್ಚ್ ೨೫ ರಂದು ನಂಜನಗೂಡಿನಲ್ಲಿ ಜನಿಸಿದರು. ತಂದೆ ವೆಂಕಟಕೃಷ್ಣ ಅಯ್ಯಂಗಾರ್ ಅವರು ಅಲ್ಲಿಯ ಪ್ರಸಿದ್ಧ ವಕೀಲರು. ತಾಯಿ ಅಲಮೇಲಮ್ಮ. ೫ನೇ ವಯಸ್ಸಿನಲ್ಲೇ ತಿರುಮಲಾಂಬಾ ಅವರಿಗೆ ಮಾತೃವಿಯೋಗ. ಮಲತಾಯಿಯ ಆರೈಕೆ. ಮೂವರು ಸೋದರಿಯರು. ಒಬ್ಬ ತಮ್ಮ. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬವಾದರೂ ತಂದೆ ಹೊಸ ವಿಚಾರಗಳಿಂದ ಕೂಡಿದವರು. ಅದರಿಂದಾಗಿ ತಿರುಮಲಾಂಬಾ ಅವರಿಗೆ ಪ್ರಾಥಮಿಕ ಶಿಕ್ಷಣ ದೊರಕಿತು. ಆದರೆ ಪದ್ಧತಿಯಂತೆ ಹತ್ತನೇ ವಯಸ್ಸಿನಲ್ಲೇ ಮದುವೆ. ಹದಿನಾಲ್ಕನೇ ವಯಸ್ಸಿಗೆ ಗಂಡ ಸತ್ತು ವಿಧವೆಯ ಪಟ್ಟ. ತಿರುಮಲಾಂಬಾ ಗಂಡನ ಮುಖ ನೋಡಿದ್ದು ಮದುವೆ ಮಂಟಪದಲ್ಲಿ ಮಾತ್ರ.
ಹಾಗಿದ್ದರೂ ತಂದೆಯ ಪ್ರೋತ್ಸಾಹದಿಂದ ತಿರುಮಲಾಂಬಾ ಓದಲು ಬರೆಯಲು ಆರಂಭಿಸಿದರು. ೧೬ ನೇ ವಯಸ್ಸಿನಲ್ಲಿ ಮೊದಲ ಹಾಡು ಬರೆದರು. ಮುಂದೆ ಅದು ಅನೇಕ ಕೃತಿಗಳ ರಚನೆಗೆ ದಾರಿ ಮಾಡಿಕೊಟ್ಟಿತು. ಆಧುನಿಕ ಕನ್ನಡ ಸಾಹಿತ್ಯ ಯುಗದ ಮೊದಲ ಲೇಖಕಿಯಾದರು, ಮೊದಲ ಪತ್ರಕರ್ತೆಯೂ ಆದರು.
೧೯೧೩ ರಲ್ಲಿ ” ಸತೀಹಿತೈಷಿಣಿ ಗ್ರಂಥಮಾಲೆಯನ್ನು ಆರಂಭಿಸಿದ ಅವರು ತಮ್ಮ ಮೊದಲ ಕಾದಂಬರಿ ” ಸುಶೀಲೆ” ಪ್ರಕಟಿಸಿದರು. ನಭ, ವಿರಾಗಿಣಿ, ದಕ್ಷಕನ್ಯೆ, ಮಣಿಮಾಲಾ , ವಿದ್ಯುಲ್ಲತಾ ಅವರ ಇತರ ಕಾದಂಬರಿಗಳು. ಸಾವಿತ್ರೆ ಚರಿತ್ರೆ ಎಂಬ ಯಕ್ಷಗಾನ ಕೃತಿ, ಜಾನಕಿ ಕಲ್ಯಾಣ ಅವರ ನಾಟಕಗಳು. ಭದ್ರಗೀತಾವಳಿ ಎಂಬ ಉರುಟಣೆ ಹಾಡುಗಳ ಸಂಗ್ರಹವನ್ನೂ ಬರೆದಿದ್ದಾರೆ. ಲೇಖನಗಳು ಸಾಕಷ್ಟು.
೧೯೧೩ ರಲ್ಲಿ ಸ್ತ್ರೀಯರಿಗಾಗಿ “ಕರ್ನಾಟಕ ನಂದಿನಿ” ಎಂಬ ಮಾಸ ಪತ್ರಿಕೆಯನ್ನು, ಮಕ್ಕಳಿಗಾಗಿ ” ಸನ್ಮಾರ್ಗದರ್ಶಿನಿ” ಎಂಬ ಮಾಸಿಕವನ್ನು ಹೊರತರತೊಡಗಿದರು. ಆದರೆ ಆ ಕಾಲದಲ್ಲಿ ಪತ್ರಿಕೆ ಹೊರಡಿಸುವದು ಎಷ್ಟು ಕಷ್ಟ ಎಂದು ಬೇರೆ ಹೇಳಬೇಕಿಲ್ಲ. ಅವರೇ ಒಂದು ಕಡೆ ಲೆಕ್ಕ ಕೊಡುತ್ತಾರೆ -” ಸನ್ಮಾರ್ಗದರ್ಶಿಯ ಒಂದು ವರ್ಷದ ಖರ್ಚು ೮೭೮ ರೂ. ೮ ಆಣೆ. ಬಂದ ಹಣ‌‍‌ ೨೮೨ ರೂ. , ಹಾನಿ ೫೯೬ ರೂ. ” . ನಷ್ಟದಲ್ಲಿ ಎಷ್ಟು ಕಾಲ ಪತ್ರಿಕೆ ನಡೆಸಲು ಸಾಧ್ಯ? ಹತ್ತು ರೂ. ಗೆ ಒಂದು ನೂರು ಸೇರು ಒಳ್ಳೆಯ ಅಕ್ಕಿ ಸಿಗುವ ಕಾಲ ಅದು.
ತಿರುಮಲಾಂಬಾ ಬರೆಯುತ್ತಾರೆ ” ನಿಮ್ಮಹೆಣ್ಣು ಮಕ್ಕಳಿಗೆ ಚಿನ್ನ ಕೊಡಿಸುವ ಬದಲು ವಿದ್ಯೆ ಕಲಿಸಿ”. ಆಗಿನ ಕಾಲದ ದೃಷ್ಟಿಯಿಂದ ನೋಡಿದಾಗ ತಿರುಮಲಾಂಬ ಓರ್ವ ಬಂಡಾಯಗಾರ್ತಿಯೇ. ಆದರೆ ಅವರಿಗೆ ಸಮಾಜದ ಬೆಂಬಲವಿರಲಿಲ್ಲ‌ . ಪರಂಪರಾಗತ ಕಟ್ಟುಪಾಡುಗಳಿಂದ ಹೊರಬಂದು ಪ್ರತಿಭಟನೆ ನಡೆಸುವಂತಹ ಮನೋಭಾವ ಜನರಲ್ಲಿರಲಿಲ್ಲ. ಮಹಿಳೆಯರಿಂದಂತೂ ಅದನ್ನು ನಿರೀಕ್ಷಿಸುವದು ಕಷ್ಟವಾಗಿತ್ತು. ತಿರುಮಲಾಂಬ ಒಬ್ಬಂಟಿಯೇ ಆಗಿದ್ದರು.
ತಂದೆ ತೀರಿಕೊಂಡ ನಂತರ ತಿರುಮಲಾಂಬಾ ಅವರು ಸಮಾಜದಿಂದ ಮರೆಯಾದರು. ಅವರು ಮೃತಪಟ್ಟಿದ್ದಾರೆಂದೇ ಜನ ಭಾವಿಸಿದ್ದರು. ಹತ್ತು ವರ್ಷ ಅವರು ಅಜ್ಞಾತವಾಸದಲ್ಲೇ ಇದ್ದರು. ಕೊನೆಗೆ ಅವರು ಮದ್ರಾಸಿನಲ್ಲಿದ್ದಾರೆಂದು ತಿಳಿದುಬಂತು. ೧೯೭೯-೮೦ ರಲ್ಲಿ ಕಸಾಪ , ಸಾಹಿತ್ಯ ಅಕಾಡೆಮಿಗಳು ಅವರನ್ನು ಗೌರವಿಸಿದವು. ಅವರ ನೆನಪಿನಲ್ಲಿ ಶಾಶ್ವತೀ ಎಂಬ ಟ್ರಸ್ಟ್ ಸ್ಥಾಪನೆಯಾಗಿ ಪ್ರಶಸ್ತಿಗಳನ್ನು ನೀಡುತ್ತಿದೆ. ಅವರ ಸುಶೀಲೆ ಕಾದಂಬರಿ ನಾಲ್ಕು ಆವೃತ್ತಿಗಳಲ್ಲಿ ಸುಮಾರು ಏಳು ಸಾವಿರ ಪ್ರತಿಗಳು ಮಾರಾಟವಾಗಿವೆ‌ ಎನ್ನುವದು ಗಮನಿಸಬೇಕಾದ ಅಂಶ. ಅವರು ತಮ್ಮ ೯೫ ನೇ ವಯಸ್ಸಿನಲ್ಲಿ ತೀರಿಕೊಂಡರು.
ನಂಜನಗೂಡು ತಿರುಮಲಾಂಬಾ ಅವರು ಬದುಕಿ ಬಾಳಿದ ಕಾಲಪರಿಸ್ಥಿತಿಯನ್ನು ನೋಡಿದಾಗ ಅವರ ಸಾಹಸ ಅದೆಷ್ಟು ದೊಡ್ಡದು ಎನ್ನುವದು ಅರ್ಥವಾಗುತ್ತದೆ. ಆ ಮಹಾಮಹಿಳೆಗೆ ಶತ ನಮನಗಳು.

——————————–


ಎಲ್. ಎಸ್. ಶಾಸ್ತ್ರಿ

Leave a Reply

Back To Top