ಕುವೆಂಪುರವರ ಕಥೆಗಳಲ್ಲಿ ಆಧುನೀಕರಣದ ಚಿತ್ರಣ.

ವಿಶೇಷ ಲೇಖನ

ಭಾರತಿ ಅಶೋಕ್

ಕುವೆಂಪುರವರ ಕಥೆಗಳಲ್ಲಿ ಆಧುನೀಕರಣದ ಚಿತ್ರಣ.

( ಪ್ರಾತಿನಿಧಿಕವಾಗಿ ಸಾಲದ ಮಗು,ಆದರ್ಶ ಸಾಧನೆ,ಮತ್ತು ಧನ್ವಂತರಿಯ ಚಿಕಿತ್ಸೆ ಕಥೆಗಳು)

ಬದುಕನ್ನು ಕುರಿತ ಗ್ರಹಿಕೆಗಳನ್ನು ದಾಖಲಿಸುವ ಸೃಜನಶೀಲ ಕಲಾತ್ಮಕ ವಿಧಾನವಾಗಿ ಸಾಹಿತ್ಯ ಕೃತಿಗಳು ರಚನೆಯಾಗಿರುತ್ತವೆ. ಪ್ರತಿಬಿಂಬದಂತಿರುವ ಈ ಆಕಾರವನ್ನು ಮತ್ತೆ ಮೂಲ ಸ್ವರೂಪದಲ್ಲಿ ಗ್ರಹಿಸಲು ಆಳವಾದ ಅಧ್ಯಯನವನ್ನು ನಡಸಬೇಕಾಗುತ್ತದೆ. ಸಾಹಿತ್ಯ ಕೃತಿಯನ್ನು ಅರ್ಥಮಾಡಿಕೊಳ್ಳುವ ವಿಧಾನಾಗಿ ವಿಮರ್ಶಾತ್ಮಕ ಅಧ್ಯಯನಗಳು ನಡೆಯುತ್ತಿದ್ದವು. ಇಂದು ಕೃತಿಯು ಬದುಕನ್ನು ಗ್ರಹಿಸುವ ಬಗೆಯನ್ನು ಶೋಧಿಸುವ ವಿಧಾನವಾಗಿಯು ಅಧ್ಯಯನಗಳ ಆಶಯವು ವಿಸ್ತರಿಸಿದೆ. ಪಠ್ಯದಿಂದಾಚೆಗೂ ಸಾಗಿ ಶೋಧಗಳು ನಡೆಯುತ್ತಿವೆ, ಕೃತಿಯ ವೈಚಾರಿಕ ಆಕೃತಿಯನ್ನು ಗ್ರಹಿಸಲು ಯತ್ನಗಳು ನಡೆಯುತ್ತವೆ.
ಕುವೆಂಪುರವರ ಸಾಹಿತ್ಯ ಕೃತಿಗಳನ್ನು, ಅದರಲ್ಲಿಯು- ಗದ್ಯ ಕೃತಿಗಳನ್ನು ಅವಲೋಕಿಸಿದಾಗ, ವಾಸ್ತವದ ಮಾರ್ಗದಲ್ಲಿ ಬಂದಿರುವ ಕೃತಿಗಳಾಗಿವೆ .ಅವರ ಸಾಹಿತ್ಯದ ಹಿಂದಿರುವ ಪ್ರೇರಣೆಗಳೆಂದರೆ ; ಅವರ ಅತ್ಯಂತ ಆತ್ಮೀಯವಾದ ಪರಿಸರ, ಸಾಮಾಜಿಕ ಸಾಂಸ್ಕೃತಿಕ ವಿವರಗಳೊಂದಿಗೆ ಭಾಷೆಯಲ್ಲಿ ಪ್ರತಿ ಸೃಷ್ಠಿಸುವಿಕೆಯನ್ನು ಕಾಣುತ್ತೇವೆ. ಅದರ ಜೊತೆ ಜೊತೆಗೆ ಬದುಕನ್ನು ಅತ್ಯಂತ ಹತ್ತಿರದಿಂದ ನೋಡಿ ಅನುಭವಿಸಿದ ಜೀವನದ ಮೇಲೆ, ಪರಿಸರದೊಂದಿಗೆ ಆತ್ಮೀಯವಾಗಿದ್ದ ರೈತನ ಮೇಲೆ,ಆಧುನಿಕತೆಯ ಪ್ರಭಾವ ಅವನ ಮೇಲೆ ಹೇರುವ ಒತ್ತಡಗಳನ್ನು ಕಣ್ಣಾರೆ ಕಂಡು, ನೊಂದು, ಅದನ್ನು ಯಥಾ ಸ್ಥಿತಿಯಲ್ಲಿ ಸಾಹಿತ್ಯ ಕೃತಿಯಲ್ಲಿ ಧಾಖಲಿಸಿದ್ದಾರೆ.


ಕುವೆಂಪುರವರ ಕಥೆಗಳನ್ನು ಆಧರಿಸಿ ನನ್ನ ಓದಿನ ಮಿತಿಯಲ್ಲಿ , ಕಥೆಗಳಲ್ಲಿ ಬರುವ ಪಾತ್ರಗಳ ಮೇಲೆ ಆಧುನೀಕತೆ ಎಸ್ಟರಮಟ್ಟಿಗೆ ಪ್ರಾಭಾವಿಸಿದೆ, ಎನ್ನುವುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇನೆ : ಗೌಡರ ಮನೆಯ ಜೀತದಾಳು ಪುಟ್ಟ ಬಾಲಕ ಸುಬ್ಬನ ಮೂಲಕ ಜೀತ ಪದ್ದತಿಯ ಕರಾಳ ಮುಖ ಅನಾವರಣಗೊಳ್ಳುತ್ತದೆ. ಅಜ್ಜ ಮುತ್ತಜ್ಜ ಮಾಡಿದ ಸಾಲಕ್ಕೆ ಮೊಮ್ಮಗ ಮರಿ ಮಗನೂ…. ಸಾಲ ಕೊಟ್ಟವನ ಮನೆಯಲ್ಲಿ ಜೀತಮಾಡಿಕೊಂಡೇ ಸಾಯುವ ಕಾಲವೊಂದಿತ್ತು ….!ಅದನ್ನು ಕುವೆಂಪುರವರು ಮನಃ ಕಲಕುವಂತೆ ಚಿತ್ರಿಸಿದ್ದಾರೆ. ಅಂದರೆ…. ಈಗ ಇಲ್ವಾ…..? ಖಂಡಿತ ಇದೆ, ಆದರೆ… ಅದು ರೂಪಾಂತರಗೊಂಡಿದೆ.ಹಿಂದೆ ಜಮಿನ್ದಾರಿ ಪದ್ದತಿ ತಾಂಡವವಾಡುತ್ತಿದ್ದಾಗ ಇದ್ದ ಜೀತ ಪದ್ದತಿ, ಇಂದು ವ್ಯವಸ್ಥೆಯ ಸ್ಥಿತ್ಯಂರಗೊಂಡು ಅದು ಬಂಡವಾಳಶಾಯಿಗಳ ಉದಯದಿಂದ ಕೈಗಾರಿಕರಣದ ಬೆಳವಣಿಗೆಗೆ ಮತ್ತು ಕಾರ್ಮಿಕ ಸಮುದಾಯದ ಉದಯಕ್ಕೆ ಕಾರಣವಾಗುತ್ತದೆ. ಹಾಗೆ ಮುಂದುವರೆದು, ಇಂದಿನ ತಂತ್ರಜ್ಞಾನದ ಸಮಯದಲ್ಲೂ ಬಹು ರಾಷ್ಟೀಯ ಕಂಪನಿಗಳ ಜಾಲದಲ್ಲಿ ಸಿಕ್ಕು, ಒಂದು ರೀತಿಯ ಜೀತಪದ್ದತಿ ಮುಂದುವರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಯಾವ ರೂಪ ಪಡೆಯುತ್ತದೆ ಎಂದು ಊಹಿಸುವುದಕ್ಕು ಸಾದ್ಯವಿಲ್ಲ. ಸರಕಾರ ಜೀತಪದ್ದತಿ ನಿರ್ಮೂಲನಾ ಕಾಯಿದೆಯನ್ನು ಜಾರಿಗೆ ತಂದಿದೆ. ಆದರೂ ಮೊನ್ನೆ ಮೊನ್ನೆಯಷ್ಟೆ ಜನಪ್ರತಿನಿದಿಯೊಬ್ಬರ ಮನೆಯಲ್ಲಿ ಈ ಪದ್ದತಿ ಜೀವಂತವಾಗಿರುವುದು ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿದೆ. ಕಾನೂನನ್ನು ಮಾಡುವಷ್ಟೆ ಸುಲಭವಾಗಿ ಅದನ್ನು ಮುರಿಯುವುದನ್ನು ಕಾಣುತ್ತೇವೆ. ಎಂಟ್ಹತ್ತು ವರ್ಷದ ಮುಗ್ದ ಸುಬ್ಬು ತನ್ನ ವಾರಿಗೆಯ ಎಲ್ಲಾ ಮಕ್ಕಳಂತೆ ತಿಂದುಂಡು ಆಟಪಾಠಗಳಲ್ಲಿ ಮೈಮರೆಯಬೇಕಿತ್ತು. ಆದರೆ……? ಬಡತನ ಎನ್ನುವ ‘ರಕ್ಕಸ’ ಅವನ ಬಾಲ್ಯ ಮತ್ತು ಭವಿಷ್ಯವನ್ನೇ ನುಂಗಿಹಾಕಿದರೂ..,! ಯಾರೋ ದಾನ ಮಾಡಿದ ಹರಕಲು ಕಂಬಳಿಯಲ್ಲೇ ಮೈ ತೂರಿಸಿ ಕೈಗೂಡದ ಬಯಕೆಗಳನ್ನು, ಕನಸಿನಲ್ಲಿ ಸಾಕಾರಗೊಳಿಸಿಕೊಳ್ಳುವ ಮಾನವ ಸಹಜ ಸ್ವಭಾವದಂತೆ ಸುಬ್ಬನು ನಿಜ ಬದುಕಿನಲ್ಲಿ ತನಗಿಲ್ಲದ ಸುಖವನ್ನು ಕನಸಿನಲ್ಲಿ ಕಂಡುಂಡು ಸವಿಯುತ್ತಿದ್ದನು.

ಮುಗ್ದ ಜೀವಗಳ ಬದುಕನ್ನು ಛಿದ್ರಗೊಳಿಸುವ ಅಮಾನುಷ ಘಟನೆಗಳು ಇಂದಿಗು ನಡೆಯುತ್ತವೆ. ಅರ್ಥಗರ್ಬಿತ ಶೀರ್ಷಿಕೆ ಹೊತ್ತ ‘ ಸಾಲದ ಮಗು’ ಮೀನಿಗಾಗಿ ಹಾಕಿದ್ದ ಕೂಣಿ ತುಂಬಿದ್ದನ್ನು[ಅದೇ ಸಮಯಕ್ಕೆ ಸುಬ್ಬ ಸತ್ತು ಬಿದ್ದಿರುವುದನ್ನು] ಕಂಡ ಗೌಡ ‘ ಅಂತು ಮುನ್ನೂರು ರೂಪಾಯಿ ಮನೆಗೆ ಬಂತು’ ಎನ್ನುವಲ್ಲಿ ಪರ್ಯಾವಸಾನಗೊಳ್ಳುತ್ತದೆ. ರಾತ್ರಿಯಿಡಿ ಬೋರ್ಗರೆವ ಪ್ರಕೃತಿಯ ಜೊತೆಗಿನ ಹೋರಾಟವಾಗಲಿ, ಅವನ ಸಾವಾಗಲಿ, ಗೌಡನಿಗೆ ಯಾವುದು ಲೆಕ್ಕವೇ ಇಲ್ಲ.! ಇದು ಬಡವನ ಜೀವಕ್ಕಿರುವ ಬೆಲೆ! ಬಡತನ ಎನ್ನುವುದು ತುಂಬಾ ಕ್ರೂರವಾದದ್ದು ನಿಜ, ಅದರೆ ಬಡತನದಲ್ಲಿಯೇ ಸಾಯುವುದು ಘೋರ ಅಪಾರಾದವೇ ಸರಿ, ಆದರೆ…. ಸುಬ್ಬನ ಪರಿಸ್ಥಿಯಲ್ಲಿ ಅವನು ಹಾಗೆ ಬದುಕುವುದಕ್ಕಿಂತ ಅನ್ಯತಾ ಮಾರ್ಗವಿರಲಿಲ್ಲ. ಕಾರಣ; ಸ್ವಚ್ಚಂದವಾಗಿ ಯೋಚಿಸುವ, ಬದುಕುವ, ವಯಸ್ಸಾಗಲಿ, ಮನಸ್ಸಾಗಲಿ…..ಅವನದಾಗಿರಲಿಲ್ಲ.
‘ಮನುಷ್ಯ ಸಂದರ್ಭದ ಕೂಸು.’ ಕುವೆಂಪುರವರು ಆದರ್ಶ ಸಾಧನೆ’ ಎನ್ನುವ ಕಥೆಯನ್ನು ಗಮನಿಸಿದಾಗ ; ಒಮ್ಮೆ ಆದರ್ಶ ಎನಿಸಿದ್ದು÷ ಮತ್ತೊಮ್ಮೆ ಅದು ಆದರ್ಶವೇ ಅಲ್ಲ ಎನ್ನಿಸಿಬಿಡಬಹುದು. ಅಥವಾ ಆದರ್ಶ ಎನ್ನುವುದೇ ಇಲ್ಲ ಎಂದೆನಿಸುತ್ತದೆ. ವಯಸ್ಸಿನಲ್ಲಿ ಎಲ್ಲವೂ ಬೆರಳ ತುದಿಯಲ್ಲಿದೆ ಎನಿಸಬಹುದು. ಎಲ್ಲವನ್ನು ಸಾಧಿಸಿಯೇಬಿಡುತ್ತೇನೆ ಎನ್ನುವ ಕಾತರದಲ್ಲಿರುತ್ತಾನೆ, ಕಾರ್ಯ ಪ್ರವೃತ್ತಾನಾದಾಗಲೇ ಯಾವುವುದು ಆಡಿದಷ್ಟು ಸುಲಭವಲ್ಲ ಎಂದು ಮನವರಿಕೆಯಾಗುವುದು


ಮನುಷ್ಯನಿಗೆ ಏನು ಇಲ್ಲದಿದ್ದಾಗ ಯಾವುದು ಬೇಡವೆನಿಸಬಹುದು, ಆದರೆ… ಅದನ್ನು’ ವೈರಾಗ್ಯ’ ಎಂದು ಹೇಳಲಾಗದು. ಏಕೆಂದರೆ, ಯಾವುದು ಇಲ್ಲವೊ ಅದನ್ನು ಪಡೆಯುವಲ್ಲಿ ಅನಭವಿಸುವ ಕಷ್ಟ, ನೋವು, ಎಲ್ಲವನ್ನು ತಿಳಿದಿರುತ್ತಾನೆ. ಆ ಕಾರಣಕ್ಕಾಗಿ ಬೇಡ ಅಷ್ಟೆ.! ಇದು ‘ಕೊರತೆಯ ವೈರಾಗ್ಯವಲ್ಲದೆ ಮತ್ತೇನು….? ಎಲ್ಲವೂ ಇದ್ದು ಇಲ್ಲದಂತೆ ಬದುಕುವುದೇ ನಿಜವಾದ ವೈರಾಗ್ಯ. ಆದರೆ ಕಥೆಯ ನಾಯಕ ಮೊದಮೊದಲು ಸನ್ಯಾಸದ ಶ್ರೇಷ್ಠತೆಯ ಬಗ್ಗೆ ಉದ್ವೇಗದಿಂದ, ಶ್ರದ್ದೆಯಿಂದ ಸ್ನೇಹಿತರಿಗೆ ವಾದಿಸಿ ಬೋಧಿಸುತ್ತಿದ್ದವನು , ಅಷ್ಠೇ ಉದ್ವೇಗದಿಂದ, ಅಲ್ಲದೇ ಪ್ರಬಲವಾದ ವೈಖರಿಯಿಂದ ಸನ್ಯಾಸವನ್ನು ವಿರೋಧಿಸತೊಡಗುವನು ‘ಕಾಲ ಕಳೆದಂತೆ ಆದರ್ಶ ಎನ್ನುವುದು ಸಹ ಬದಲಾಗುತ್ತ ಹೊಗುತ್ತದೆ’. ವಿವಾಹ ಎನ್ನುವುದು ಸಮಾಜಿಕ ಜವಬ್ದಾರಿಯನ್ನು ನಿಭಾಯಿಸಲು ಇರುವ ಬಂಧನ ಎಂದು, ಆವಿವಾಹಿತನಾಗಿದ್ದುಕೊಂಡೆ ಎಲ್ಲವನ್ನು ಸಾದಿಸಿ ಮುಂದೊಂದು ದಿನ ಜಗತ್ತಿನ ಧರ್ಮಚರಿತ್ರೆಯ ಪುಟಗಳಲ್ಲಿ ಅಜರಾಮರನಾಗುವೆ ಎಂದು ಭ್ರಮಿಸುವನು. ಆವಿವಾಹಿತನಾಗಿ ಉಳಿಯುವ ಮಹಾಧ್ಯೇಯವನ್ನು, ತಂದೆ “ಹೆಣ್ಣು ನೋಡಿದ್ದೇನೆ ಊರಿಗೆ ಬಾ” ಎಂದು ಪತ್ರ ಬರೆದಾಗ, ಮಳಲಿನ ಮನೆಯನ್ನು ಮುಂಗಾರು ಮಳೆ ಅಸಡ್ಡೆಯಿಂದ ಕೊಚ್ಚಕೊಂಡು ಹೋದಂತಾಗುವುದು
‘ಯಾವುದನ್ನೂ ಆದರ್ಶ ಎಂದು ಒಪ್ಪಿ ಅಪ್ಪಿಕೊಳ್ಳದಂತಹ’ ರಭಸವನ್ನು ಕಥೆಯ ಉದ್ದಕ್ಕು ಕಾಣುತ್ತೇವೆ. ಬದುಕಿನ ಪ್ರತಿ ತಿರುವಿನಲ್ಲು ಬದಲಾಗುತ್ತ ಸಾಗುವ ಆದರ್ಶ, ಪ್ರಸ್ತುತ ಯುವಜನಾಂಗ ಇದೇ ಸಮಸ್ಯೆಯನ್ನು ಎದುರಿಸುವುದನ್ನು ಕಾಣುತ್ತೇವೆ. ಯಾವುದನ್ನೊ ಆದರ್ಶ ಎಂದು ನಂಬಿ, ಮನೆಯಿಂದ ಹೊರನಡೆದು ತಮ್ಮ ಜೀವನವನ್ನು ಕ್ಷುಲ್ಲಕ ಕಾರಣಗಳಿಗಾಗಿ ಹಾಳು ಮಾಡಿಕೊಳ್ಳುವುದು ಸಾಮಾನ್ಯವಾಗಿಬಿಟ್ಟ್ಟಿದೆ.
ಆದುನಿಕ ತಂತ್ರಜ್ಞಾನದ ಅಬ್ಬರವು ಶ್ರೀಸಾಮಾನ್ಯನ ಬದುಕನ್ನು, ಅದರಲ್ಲೂ ರೈತನ ಬದುಕನ್ನು ಬರ್ಬರಗೊಳಿಸಿದೆ. ಈ ಬದಲಾವಣೆಯ ಕಪಿ ಮುಷ್ಠಿಯಲ್ಲಿ ಸಿಲುಕಿದ ಅವನ ಬದುಕು ವಿಕಾರವಾದ ನರಳಾಟಕ್ಕೆ ಎಡೆಮಾಡಿದೆ. ಮೂಲೋಕವನ್ನು ಮೀರಿ ಆಕ್ರಂದನ ಪ್ರತಿಧ್ವನಿಸುತ್ತಿರುವುದು. ದೇವಾನುದೇವತೆಗಳ ಅಮೋದ ಪ್ರಮೋದಗಳನ್ನು ಮೀರಿ, ಬ್ರಹ್ಮರ್ಷಿ ವಿಶ್ವಾಮಿತ್ರ, ಪರಶುರಾಮರನ್ನು ಕಂಗಾಲಾಗಿಸುತ್ತದೆ. ಅಲ್ಲಿಯೇ ವಿಲಾಸದಲ್ಲಿ ಮೈಮರೆತ್ತಿದ್ದ ದೇವಾನುದೇವತೆಗಳಿಗೆ ಈ ನರಳುವಿಕೆ ಕೇಳಿಸದು. ಇದರಿಂದ ಯಾರು ಲೋಕದ ಹಿತಕ್ಕಾಗಿ ಹಗಲಿರುಳು ಶ್ರಮಿಸುವರೋ ಅಂತವರಿಗೆ ಮಾತ್ರ ಸಮಾಜದ ಕೂಗು ಕೇಳಯವುದು, ಅದರ ಆಗು ಹೋಗುಗಳು ಗಮನಕ್ಕೆ ಬರುತ್ತವೆ. ‘ರೈತ ದೇಶದ ಬೆನ್ನೆಲುಬು’ ಎಂದು ಬೊಬ್ಬಿಡುವ ಸಮಾಜ ಅದರಲ್ಲೂ ರಾಜಕಾರಣಿಗಳು ಆತನ ಬೆನ್ನೆಲುಬನ್ನೆ ಮುರಿಯುವ ಹುನ್ನಾರ ನಡೆಸುತ್ತಿದೆ.!
ಇಂದು ರೈತನ ಸ್ಥಿತಿ ತುಂಬಾ ಚಿಂತಾಜನಕವಾಗಿದೆ, ಆತನ ಬಗೆಗೆ ಚಿಂತಿಸಬೇಕಾದ ಸರಕಾರ ಕೈ ಕಟ್ಟಿ ಕುಳಿತಿದೆ. ಕುರ್ಚಿಗಾಗಿ ಕಚ್ಚಾಡುವ ಖಧೀಮ ರಾಜಕಾರಣಿಗಳು ಹೊಟ್ಟೆ ಬಾಕರಾಗುತ್ತಿದ್ದಾರೆ. ರೈತ ತನ್ನ ಪ್ರಾಮಾಣಿಕ ದುಡಿಮೆಯನ್ನು ನಂಬಿ ಬದುಕುವುದು ದುಸ್ಥರವಾಗಿದೆ. ಸಮಯಕ್ಕೆ ಮಳೆ ಬಾರದೆ ಭುಮಿಯಲ್ಲಿ ಚಲ್ಲಿದ ಬೀಜ ಮೊಳೆಯದೇ, ಕೆಲವೊಮ್ಮೆ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ, ಕಂಗಾಲಾಗಿ ಸಾಲದ ಶೂಲಕ್ಕೆ ಕತ್ತು ನೀಡಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾನೆ. ಇದಕ್ಕೆಲ್ಲ ಯಾರು ಹೊಣೆ…….? ಮತಿಗೆಟ್ಟ ಸರಕಾರ ರೈತನ ಸಮಸ್ಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ಬೆಂಬಲಿಸಿ ರೈತನ ಜೀವನಕ್ಕೆ ನೆಮ್ಮದಿ(?) ನೀಡುವುದು ಎಂದಿಗೆ…..?.
ರೈತ ದೇಶವನ್ನು ಸುಭಿಕ್ಷವಾಗಿಡುತ್ತಾನೆ, ಎನ್ನುವ ಭರವಸೆಯಲ್ಲಿ ನಾವುಗಳು ಬದುಕುತ್ತಿದ್ದೇವೆ. ಆದರೆ…. ಆತನಿಗೆ ಯಾರ ಆಶ್ರಯವು ಇಲ್ಲದೆ ಬದುಕುವ ಪರಿಸ್ಥಿತಿ ಸನ್ನಿಹಿತವಾದ ಈ ಸಂದರ್ಭದಲ್ಲಿ, ಯಾವುದೇ ನಿರೀಕ್ಷೆಯು ಇಲ್ಲದೆ,ಆತನ ಮಕ್ಕಳು ಹಳ್ಳಿಯನ್ನು ಬಿಟ್ಟು ಪಟ್ಟಣ ಸೇರಿ ಉನ್ನತ ಶಿಕ್ಷಣ ಪಡೆದು ಕೃಷಿಯನ್ನು ಮರೆಯುತ್ತಿದ್ದಾರೆ. ಹೀಗೆಯೇ ಆದರೆ ಮುಂದೊಂದು ದಿನ ಆಹಾರವಿಲ್ಲದೇ ಆಹಾಕಾರವನ್ನು ಎದುರಿಸಬೇಕಾಗುತ್ತದೆ! ಘನ ಸರಕಾರ ಅಂದರೆ; ನಮ್ಮನ್ನಾಳುವ ಮಂತ್ರಿ ಮಹೋದಯರು ಸರಿಯಾದ ಸಮಯಕ್ಕೆ ಎಚ್ಚೆತ್ತುಕೊಂಡು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.


‘ದುಡಿಯಲಾರದವನಿಗೆ ಉಣ್ಣುವ ಹಕ್ಕಿಲ್ಲ’ ಎನ್ನುವ ಕಾಯಕ ಯೋಗಿ ಬಸವಣ್ಣನವರ ವೇದವಾಕ್ಯದಂತೆ ನಮ್ಮ ರೈತ ಬದುಕುತ್ತಿದ್ದಾನೆ. ಆದರೆ ಅವನ ಶ್ರಮದ ಸಮಾಧಿಯ ಮೇಲೆ ಮಹಲುಗಳನ್ನು ಕಟ್ಟಿ ವೈಭೋಗದ ಜೀವನ ನಡೆಸುವ ವಿಲಾಸಿಗಳಿಗೆ ಶ್ರಮ ಜೀವಿಯ ನರಳಾಟ ವ್ಯರ್ಥ ಆಲಾಪನ. ಭೂತಾಯಿಯ ಚೊಚ್ಚಲ ಮಗನಾದ ರೈತ ಆಧುನೀಕತೆಯ ಬಲು ಭಾರವನ್ನು ಎದೆಯ ಮೇಲೆ ಹೊತ್ತು ವಿಲವಿಲ ಒದ್ದಾಡುತಿದ್ದಾನೆ !. ಕುವೆಂಪುರವರು ಧನ್ವಂತರಿಯ ಚಿಕಿತ್ಸೆ ನೀಡಲು ದೇವ ವೈದ್ಯರನ್ನು ಕರೆಸುವ ಹಾಗೆ ಮತ್ತೆ ಎದೆಯ ಮೇಲಿನ ಭಾರ ಇಳಿಸಿ ರೈತ ಸುಧಾರಿಸಿಕೊಂಡ ನಂತರ ಹೆಗಲು ಕೊಡುವ ಭರವಸೆಯ ಬೆಳಕನ್ನು ರೈತನ ಬಾಳಿನಲ್ಲಿ ಹರಿಸುವಂತೆ, ಅವನನ್ನೇ ನಂಬಿರುವ ನಮ್ಮ ಬದುಕಿನಲ್ಲಿ ಹೊಸ ಬೆಳಕು ಕಾಣುವಲ್ಲಿ ಸಂಶಯವಿಲ್ಲ. ಆದರೆ ನಮ್ಮನ್ನಾಳುವ ಜನಪ್ರತಿನಿಧಿಗಳು ಇದಾವುದರ ಅರಿವಿಲ್ಲದೆ ವಿದೇಶಿಯಾತ್ರೆ, ವಿದೇಶಿ ಹೂಡಿಕೆ, ಬಾಹ್ಯಕಾಶದಲ್ಲಿ ಪ್ರಗತಿ, ಹೀಗೆ ಹತ್ತಾರು ಲಾಭದಾಯಕ ಕಾರ್ಯಗಳಲ್ಲಿ ಮಗ್ನರಾಗಿ ಆಕಾಶದಲ್ಲಿ ತೇಲುತ್ತಿರುವಾಗ, ನೆಲದ ಮೇಲಿನ ರೈತನ ಪರಿಸ್ಥಿತಿ ಅವರಿಗೆ ಹೇಗೆ ತಾನೆ ಘೋಚರಿಸಲು ಸಾಧ್ಯ. ಆದರೆ, ಈವತ್ತಿನ ಪರಿಸ್ಥಿತಿಯಲ್ಲಿ ರೈತನ ಸಮಸ್ಯೆಗಳನ್ನು ಸರಕಾರ ಆಲಿಸಿ, ಪರಿಶೀಲಿಸಿ ಸರಿಯಾದ ಪರಿಹಾರೋಪಾಯಗಳನ್ನು ಸೂಚಿಸಬೇಕಾಗಿದೆ. ಆಗ ಮಾತ್ರ “ಒಕ್ಕಲಿಗನೊಕ್ಕಿದರೆ ಕಕ್ಕುವುದು ಜಗವೆಲ್ಲ” ಎನ್ನುವ ಮಾತಿಗೆ ಸಾರ್ವತ್ರಿಕ ಮನ್ನಣೆ ದೊರೆಯುವುದು. ಕುವೆಂಪುರವರು ತಮ್ಮ ಧನ್ವಂತರಿಯ ಚಿಕಿತ್ಸೆಯ ಮೂಲಕ ರೈತನನ್ನು ನಿರಾಳಗೊಳಿಸುವ ಆಶಯವು ಕೈಗೂಡುವುದು, ಆ ಮೂಲಕ ನಾವುಗಳು ಅವರ ಮಾನವತಾವಾವನ್ನು,ಮತ್ತು ಮನುಜ ಮತವನ್ನು ವಿಶ್ವಪಥದೆಡೆಗೆ ಕೊಂಡೊಯ್ಯಬಹುದು.


ಭಾರತಿ ಅಶೋಕ್

2 thoughts on “ಕುವೆಂಪುರವರ ಕಥೆಗಳಲ್ಲಿ ಆಧುನೀಕರಣದ ಚಿತ್ರಣ.

  1. ಗ್ರಾಮೀಣ ಬದುಕಿನಲ್ಲಿ ರೈತನ ಜೀವನ ಕುರಿತಾದ ಲೇಖನ ಚೆನ್ನಾಗಿ ಮೂಡಿ ಬಂದಿದೆ ..ಐಷಾರಾಮಿ ಬದುಕು ಯುವಕರನ್ನ ಕೃಷಿಯಿಂದ ವಿಮಖರನ್ನಾಗಿಸುತ್ತಿರುವುದು ನಿಜಕ್ಕೂ ದುರಂತ….

Leave a Reply

Back To Top