ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲು
ಬದುಕು
ಬಸವಳಿದ ಬದುಕಲ್ಲಿ
ಉಸಿರಾಗಿ ನೀ ನಿಂತೆ
ನನ್ನೆದೆಯ ಗೂಡಲ್ಲಿ
ನವಿರಾದ ಕನಸಿಟ್ಟೆ
ಹರೆಯದ ಹೊತ್ತಲ್ಲಿ
ಅರೆಸತ್ತ ದೇಹ ಬೆತ್ತಲಾಗಿ
ಧರೆಗುರುಳಿದಾ ಹೊತ್ತು
ಅಣಕಿಸಿದ ಜೀವಗಳ
ನಡುವಲ್ಲಿ ಮಿಂದೆದ್ದೆ
ಕೈ ತುತ್ತ ಕೊಟ್ಟು
ಉಣಬಡಿಸಿದ ತುತ್ತು
ಅರಿವಿಲ್ಲದ ಮನದೊಳಗೆ
ನಂಬಿಕೆಯ ಅರುಹಿ
ಎದೆಯಾಳದೆ ನೀ ನಿಂತೆ
ಲಗ್ನಕಾಣದೆ ಬರಡಾಗಿ
ಭಾವ ಅರಿಯದೆ ಕನ್ಯತ್ವ ಜಾರಿ
ಕಮರಿದ ಕನಸುಗಳ ಬಗಲಲ್ಲಿರಿಸಿ
ಹಂಗಿನ ಬದುಕೊಳಗೆ
ಹಪಹಪಿಸಿತು ಮನ ಏಕಾಂಗಿಯಾಗಿ
ಮುಸುಕು ಹೊದ್ದ ಬದುಕಲ್ಲಿ
ಗಹಗಹಿಸಿ ಅವ ನಕ್ಕಾಗ
ನನ್ನೆದೆಯ ಗೂಡೊಳಗೆ ಮುಳ್ಳಾಗಿ ಪರಚಿ
ತನುವೆಲ್ಲ ಚುಚ್ಚಿ ನವಕ್ರಾಂತಿ ಮಿಡಿದು
ಕಾಲೇಳದ ಜೀವಕ್ಕೆ ಉರುಳಾದೆ.
ಸುಡುಬಿಸಿಲ ಬೇಗೆಯಲ್ಲೂ
ತಂಗಾಳಿ ಮಿಸುಕಾಡಿ
ಮೊಗ್ಗಾದ ಕುಡಿಯೊಂದು
ಮಡಿಲಲ್ಲಿ ಅರಳಿ
ನಗುತಿಹುದು ಜಗದೊಳಗೆ….