ಕಾಡಜ್ಜಿ ಮಂಜುನಾಥ ಕವಿತೆ-“ವಸಂತ ಕಾಲ “

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

“ವಸಂತ ಕಾಲ “

ಯುಗಾದಿ ಬರುತಿದೆ ಹೊಸತನ ತರುತಿದೆ
ಮಾವುಬೇವು ಮೊಳೆತು ನಿಸರ್ಗ ಅರಳಿದೆ;
ವಸಂತಕಾಲ ಬಂದು ಕೋಗಿಲೆ ಹಾಡುತಿದೆ
ಶುಕಪಿಕಗಳ ಚಿಲಿಪಿಲಿ ರಾಗ ಕೇಳುತಿದೆ!

ಮನದ ಕಹಿಗಳು ಕಳೆದು ಸಿಹಿಯಾಗಿ
ಎದೆಯ ಭಾವಗಳು ಬೆರೆತು ಒಲವಾಗಿ;
ಸವಿಗನಸು ಮೂಡಿ ಬದುಕಿಗೆ ಬಲವಾಗಿ
ಸೋಲುಗಳ ದೂಡಿ ವಿಜಯದ ನಗೆಯಾಗಿ!

ಬೇವು ಬೆಲ್ಲದಂತೆ ಬೆರೆತು ಜೊತೆಯಾಗಿ
ನೋವುಗಳ ಮರೆತು ನಗುವ ಮನಸಾಗಿ;
ಸಂಬಂಧಗಳ ಬೆಸೆವ ಹೃದಯ ಹೂವಾಗಿ
ಹೊಸವರುಷ ಬರುತಿದೆ ನಗುವ ಮಗುವಾಗಿ!

ದ್ವೇಷಗಳ ಮರೆತು ಪ್ರೀತಿಯ ಹಂಚುತ
ಸಹಬಾಳ್ವೆಯ ಮನಗಳ ಮೌನದಿ ಬಂಧಿಸುತ;
ಸ್ನೇಹ ಪ್ರೀತಿಯ ಹರಸುವ ಹೃದಯವಾಗಿದೆ
ಯುಗಾದಿ ಬರುತಿದೆ ಹೊಸತನ‌ ತರುತಿದೆ!


Leave a Reply

Back To Top