ಅಂಕಣ ಸಂಗಾತಿ
ಶಿಕ್ಷಣ ಲೋಕ
ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ
ಮೌಲ್ಯಶಿಕ್ಷಣ
ಆಧುನಿಕ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿಯುತ್ತಿದ್ದು, ಮನುಷ್ಯ ಸ್ವೇಚ್ಛಾಚಾರದ ಜೀವನ ಶೈಲಿಗೆ ಈಡಾಗಿ ಇಡೀ ಸಮುದಾಯವೇ ಅಶಾಂತಿಯಿಂದ ನರಳುತ್ತಿದೆ. ಈ ದುಸ್ಥಿತಿಯಿಂದ ಸಮಾಜವನ್ನು ವಿಮುಕ್ತಗೊಳಿಸಿ, ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಮೌಲ್ಯಾಧಾರಿತ ಶಿಕ್ಷಣವೊಂದೇ ದಾರಿ ಎಂದು ಅರಿತು ಶಿಕ್ಷಣದಲ್ಲಿ ಮೌಲ್ಯಶಿಕ್ಷಣ ಜೌರಿಗೊಳಿಸುವ ಅಗತ್ಯತೆ ಅನಿವಾರ್ಯವಾಗಿದೆ.
ಮೌಲ್ಯ ಶಿಕ್ಷಣದ ಮೂಲಕ ಭವಿಷ್ಯದ ತಲೆಮಾರಿಗೆ ಮೌಲ್ಯಗಳನ್ನು ವರ್ಗಾಯಿಸುವುದು ಇಂದಿನ ಅನಿವಾರ್ಯತೆ. ಆ ಮೂಲಕ ಯುವಜನತೆ ರಾಷ್ಟ್ರಕಟ್ಟುವ ಕೆಲಸದಲ್ಲಿ ತೊಡಗುವಂತಾಗಬೇಕು. ಆಧುನಿಕ ಸಮಾಜವನ್ನು ನೋಡಿದಾಗ ನಮ್ಮ ಶಿಕ್ಷಣ ನಿಜಕ್ಕೂ ಜನತೆಯನ್ನು ಸುಶಿಕ್ಷಿತರನ್ನಾಗಿ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಶಿಕ್ಷಣದಲ್ಲಿ ಮೌಲ್ಯಗಳ ಕೊರತೆಯೇ ಇದಕ್ಕೆಕಾರಣ. ಶಿಕ್ಷಣದಲ್ಲಿ ಮೌಲ್ಯಗಳನ್ನು ಬಿಂಬಿಸುವ ಕಾರ್ಯ ಪ್ರಾಥಮಿಕ ಶಾಲಾ ಹಂತದಿಂದಲೇ ಆರಂಭವಾಗಬೇಕು . ಶಿಕ್ಷಣದ ಸುಧಾರಣೆಗೆ ಸಾಕಷ್ಟು ಆಯೋಗಗಳು ಬಂದಿವೆ. ಅವು ಒಳ್ಳೆಯ ವರದಿಗಳನ್ನೂ ನೀಡಿವೆ. ಭಾರತೀಯ ಶಿಕ್ಷಣ ಪದ್ಧತಿಗೆ ತನ್ನದೇ ಸ್ಥಾನಮಾನವಿದೆ. ಆದರೆ ಬ್ರಿಟಿಷರು ಗುಮಾಸ್ತರನ್ನು ತಯಾರಿಸುವ ಶಿಕ್ಷಣ ಪದ್ಧತಿಯನ್ನು ಭಾರತದಲ್ಲಿ ಜಾರಿಗೆ ತಂದರು. ಭಾರತೀಯ ಶಿಕ್ಷಣ ಪದ್ಧತಿಯ ಶ್ರೇಷ್ಠ ಅಂಶಗಳ ಬಗ್ಗೆ ನಾವು ಮರುಚಿಂತನೆ ನಡೆಸುವ ಅಗತ್ಯವಿದೆ. ನೈತಿಕ ನಾಯಕತ್ವವುಳ್ಳ ಸೃಜನಶೀಲ ಮನಸ್ಸು ಇಂದಿನ ಅವಶ್ಯಕತೆಯಾಗಿದೆ.
ಮೌಲ್ಯ ಶಿಕ್ಷಣ ಹಲವಾರು ಆಯಾಮಗಳಿಂದ ಕೂಡಿರುವ ಅಂಚಿಲ್ಲದ ಮಹಾಸಾಗರದಷ್ಟು ವಿಸ್ತಾರ ಮತ್ತು ಕ್ಲಿಷ್ಟವಾದುದರಿಂದ ಈ ಬಗ್ಗೆ ಕಾರ್ಯ ಯೋಜನೆಗಳನ್ನು ರೂಪಿಸುವ ಮುನ್ನ ಮೌಲ್ಯ ಶಿಕ್ಷಣ ಎಂದರೇನು? ಎಂಬುದರ ಸ್ಪಷ್ಟ ವ್ಯಾಖ್ಯಾನ, ಅದರ ಮಾನದಂಡಗಳು, ಶಿಕ್ಷಣದ ನಾನಾ ಹಂತದಲ್ಲಿ ಬೋಧಿಸಬೇಕಾದ ಅದರ ಜ್ಞಾನ ಮಟ್ಟ ಮತ್ತು ಬೋದನಾ ಕ್ರಮಗಳ ಬಗ್ಗೆ ವ್ಯಾಪಕ ಚರ್ಚೆ ಅವಶ್ಯಕ. ತರಾತುರಿಯಲ್ಲಿ ಜಾರಿ ಮಾಡುವ ವಿಷಯ ಇದಲ್ಲ ಈ ಹಿನ್ನೆಲೆಯಲ್ಲಿ ಮೌಲ್ಯ ಶಿಕ್ಷಣದ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಾವು ಮಾಡಬೇಕಾಗಿದೆ.
ಉತ್ತಮ ಜೀವನಕ್ಕಾಗಿ ಎರಡು ರೀತಿಯ ಶಿಕ್ಷಣದ ಅವಶ್ಯವಿದೆ. ಒಂದು ಜೀವನೋಪಾಯಕ್ಕಾಗಿ ಮತ್ತೊಂದು ಜೀವನದ ಪರಿಪೂರ್ಣತೆಗಾಗಿ, ಶಿಕ್ಷಣದ ನಿಜವಾದ ಉದ್ದೇಶ ವಿದ್ಯಾರ್ಥಿಗಳಲ್ಲಿ ಉತ್ತಮ ಗುಣ, ನಾಗರಿಕತೆ, ಸಂಸ್ಖೃತಿ ಬೆಳೆಸಿ ಜವಾಬ್ದಾರಿಯುತ ಉತ್ತಮ ಪ್ರಜೆಯ್ನಾಗಿಸುವುದು. ಶಿಕ್ಷಣ ಎಂದರೆ ಕೇವಲ ಸಾಕ್ಷರತೆಯಲ್ಲ ಅಥವಾ ಮಾಹಿತಿಯಲ್ಲ. ಇದೊಂದು ವ್ಯವ್ಯಸ್ಥಿತವಾದ ಮಾನವೀಯತೆಯ ಕಲಿಕೆ. ಎಲ್ಲ ಕಲಿಕೆಯು ವ್ಯಕ್ತಿಯ ಸರ್ವತೋಮುಖ ಬೆಳವಣೆಗೆಗೆ ನಾಂದಿಯಾಗಿರುತ್ತದೆ. ಗಾಂಧೀಜಿಯವರು ಹೇಳಿದ ಸತ್ಯ, ಅಹಿಂಸೆ , ಶಾಂತಿ, ಪ್ರೀತಿಯನ್ನು ಅಳವಡಿಸಿಕೊಳ್ಳುವ ಶಿಕ್ಷಣ ನೀಡಿದರೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
ಹಾಗಾದರೆ ಮೌಲ್ಯ ಶಿಕ್ಷಣ ಎಂದರೇನು?
ಮೌಲ್ಯ ಶಿಕ್ಷಣವೆಂದರೆ, ಒಂದು ವ್ಯವಸ್ಥಿತವಾದ ಮಾರ್ಗದರ್ಶನ ಕಾರ್ಯಕ್ರಮ. ಇದು ಮಗುವಿನಲ್ಲಿ ಮಾನವೀಯತೆ, ಒಳ್ಳೆಯತನವನ್ನೂ, ಸಹೃದಯತೆಯನ್ನೂ ತರುವ ಸಾಧನ.
ಮೌಲ್ಯಗಳು ಎಂಬುದನ್ನು ನಿರ್ದಿಷ್ಟವಾಗಿ ವಿವರಿಸಲಾಗುವದಿಲ್ಲ. ಸೂರ್ಯೋದಯದ ಚೆಲುವು, ಹೂವಿನ ಸೌಂದರ್ಯ, ಸಂತೋಷ, ಆಶ್ಚರ್ಯ, ಶಾಂತಿ ಸೌಹಾರ್ದತೆಗಳನ್ನು ಅನುಭವಿಸಬಹುದೇ ಹೊರತು ಹೇಳಲಾಗುವದಿಲ್ಲ. ಮೌಲ್ಯಗಳು ಮಾನವ ನಿರ್ಮಿತವಾದರೂ ಸರ್ವಸಮ್ಮತವಾದವು.
ಮೌಲ್ಯ ಶಿಕ್ಷಣ ಏಕೆ ಮತ್ತು ಯಾರಿಗೆ?
ಮೌಲ್ಯ ಶಿಕ್ಷಣ ಏಕೆ ಮತ್ತು ಯಾರಿಗೆ ಎಂದು ಚಿಂತಿಸಿದರೆ ಶೈಕ್ಷಣಿಕವಾಗಿ ಅನೇಕ ಅಭಿಪ್ರಾಯಗಳು ವ್ಯಕ್ತವಾಗುತ್ತವೆ. ಮೌಲ್ಯ ಶಿಕ್ಷಣ ಹಿರಿಯರಿಂದ ಮಕ್ಕಳಿಗೆ, ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ವರ್ಗಾಯಿಸಲ್ಪಡುವ ವಿಚಾರಗಳು ಎಂದು ಅಭಿಪ್ರಾಯಿಸಿದರೆ, ಇನ್ನು ಕೆಲವರು ಸಂಘ, ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳ ಮೂಲಕ ದೊರೆಯುವ ಶಿಕ್ಷಣ/ಬೋಧನೆ ಎಂದು ಹೇಳುತ್ತಾರೆ.
ಸರಳವಾಗಿ ಹೇಳುವುದಾದರೆ, ಮೌಲ್ಯಶಿಕ್ಷಣವು ಹಿರಿಯರಿಂದ ಕಿರಿಯರಿಗೆ ಸಮಾಜದಲ್ಲಿ ವರ್ಗಾಯಿಸಲ್ಪಡುವ ಉತ್ತಮ ನಡವಳಿಕೆಯ ಅಂಶಗಳು.ಮೌಲು ಶಿಕ್ಷಣವನ್ನು ಮನೆ, ಶಾಲೆ, ಕಾಲೇಜು, ಮಠ,ಧಾರ್ಮಿಕ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳೂ ಸಹ ನೀಡಬಹುದು.
ಮೌಲ್ಯ ಶಿಕ್ಷಣದ ಗುರಿ ಮತ್ತು ಉದ್ದೇಶ:
ಮೌಲ್ಯ ಶಿಕ್ಷಣದ ಗುರಿ ಮತ್ತು ಉದ್ದೇಶ ವಿಶಾಲವಾದುದು. ದೂರದೃಷ್ಠಿಯುಳ್ಳದ್ದು, ಇದರ ಫಲಿತಾಂಶ ಸಮಷ್ಠಿಭಾವನೆ, ಸಮುದಾಯಿಕ ಸಹಭಾಗಿತ್ವ, ಸಅಮಾಜಿಕ ಕಳಕಳಿ ಮತ್ತು ಕಾಳಜಿ.
ಬಹುಸಮಾಜ ಮತ್ತು ಬಹುಧಾರ್ಮಿಕ ಪದ್ಧತಿಯಿರುವ ನಮ್ಮ ದೇಶದಲ್ಲಿ ಪರಮತ ಸಹಿಷ್ಣುತೆ, ಸಹಬಾಳ್ವೆ, ಸಹನೆ, ಶಾಂತಿಯುತ ನಿರ್ಧಾರ, ಮಾತು, ವ್ಯವಹಾರ ಅತ್ಯಂತ ಅವಶ್ಯಕ. ಇದನ್ನು ಸಾಧಿಸುವುದೇ ಮೌಲ್ಯ ಶಿಕ್ಷಣದ ಗುರಿ.
ಉದ್ದೇಶಗಳು:
ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ, ಪರಸ್ಪರ ಹೊಂದಾಣಿಕೆ, ಸ್ವ ಅರಿವು, ಆತ್ಮಗೌರವ, ವಿಮರ್ಶಾತ್ಮಕ ಚಿಂತನೆ ಇವುಗಳ ಬಗ್ಗೆ ಮೌಲ್ಯಶಿಕ್ಷಣದ ಮೂಲಕ ತಿಳವಳಿಕೆ ನೀಡುವುದು.
ನೈತಿಕ ಶಿಕ್ಷಣದಿಂದ ನೈತಿಕ ಮೌಲ್ಯ ಹೇಳಿದರೆ, ಮೌಲ್ಯ ಶಿಕ್ಷಣ ಸರ್ವತೋಮುಖ ಬೆಳವಣೆಗೆಯತ್ತ ಗಮನ ಹರಿಸುತ್ತದೆ.
ಅವಶ್ಯಕತೆ:
ಮೌಲ್ಯ ಶಿಕ್ಷಣವೆಂಬುದು ವಿಶಾಲ ಅರ್ಥದಲ್ಲಿ ಎಲ್ಲ ಶಿಕ್ಷಣಕ್ಕೂ ತಾಯಿ ಬೇರು. ಮೌಲ್ಯಶಿಕ್ಷಣವೆಂಬ ತಾಯಿಬೇರಿನ ಸಾರದಿಂದಲೇ ಇತರ ಶಿಕ್ಷಣದ ಕೊಂಬೆ ರೆಂಬೆಗಳು ಹಬ್ಬಿಕೊಂಡಿವೆ.
ವಿದ್ಯಾರ್ಥಿಗಳಲ್ಲಿ ಒಗ್ಗಟ್ಟು, ಶಾಂತಿ, ಸಂತೋಷ, ಸಮಷ್ಠಿಭಾವನೆ, ಭರವಸೆ, ಪರಿಸರ ಪ್ರೇಮ, ಮಾನವೀಯತೆ, ಸರಳತೆ, ನಂಬಿಕೆ, ಸ್ವಾತಂತ್ರ್ಯ, ಸಹಕಾರ, ಪ್ರಾಮಾಣಿಕತೆ, ಧೈರ್ಯ, ದೇಶಪ್ರೇಮ, ಸಹನೆ, ತಾಳ್ಮೆ, ಸೃಜನಶೀಲತೆ, ಸಮಸ್ಯೆ ಪರಿಹಾರ, ಪ್ರೀತಿ ಇವುಗಳ ಬಗ್ಗೆ ಒಲವು ಬೆಳೆಸಿ ಉತ್ತಮ ಪ್ರಜೆಯನ್ನಾಗಿಸುವುದು.
ಸಹ ವಿದ್ಯಾರ್ಥಿ, ಸಹ ಮಾನವರೊಡನೆ ಸಾಮರಸ್ಯದಿಂದ ಜೀವಿಸುವ ಕಲೆಯನ್ನು ರೂಢಿಸಲು ಮೌಲ್ಯಶಿಕ್ಷಣ ನೀಡಬೇಕಿದೆ. ಇದರಿಂದ ವಿದ್ಯಾರ್ಥಿಗೆ ಮೌಲ್ಯ ಎಂದರೇನು? ಅದನ್ನು ಕಾಪಾಡಿಕೊಳ್ಳುವುದು ಹೇಗೆ? ಎಂಬುದು ಅರಿವಾಗುತ್ತದೆ.
ಒಟ್ಟಾರೆಯಾಗಿ ಉತ್ತಮ ಮೌಲ್ಯ ಇಲ್ಲದಿದ್ದರೆ ಉತ್ತಮ ನಡೆ, ನುಡಿ ಸಾಧ್ಯವಿಲ್ಲ. ಬಾಲ್ಯದಿಂದಲೇ ಮೌಲ್ಯಗಳು ಅಳವಡಿಕೆ ಸಾಗಬೇಕು. ಮಗುವಿನ ಕಲಿಕೆ ಅನುಕರುಣೆಯಿಂದ ಪ್ರಾರಂಭವಾಗುತ್ತದೆ ಆದ್ದರಿಂದ ಹಿರಿಯರು ಉತ್ತಮ ಮೌಲ್ಯಯುತ ಜೀವನ ಮಕ್ಕಳಿಗೆ ಪ್ರೇರಣೆಯಾಗಬಲ್ಲದು.
ಡಾ.ದಾನಮ್ಮ ಝಳಕಿ
ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ
ತುಂಬಾ ಚೆನ್ನಾಗಿ ಬರೆದಿರುವಿರಿ ಆದರೆ ಮಕ್ಕಳ ಮನಸ್ಸಿನ ಮೇಲೆ ಅಚ್ಚಿತ್ತುವಷ್ಟು ನಾವು ಗುರು ಹಿರಿಯರ, ನಡೆ ನುಡಿ ಪೋಶಾಖ ಶುದ್ಧವಿರಬೇಕು . ಮಕ್ಕಳು ಓದಿ ಕಲಿಯುವುದಕ್ಕಿಂತ ನೋಡಿ ಕಲೀತಾರೆ.
Yes Madam, ಪಾಲಕರ,ಪೋಷಕರ,ಹಿರಿಯರ ಹಾಗೂ ಶಿಕ್ಷಕರ ನಡೆ ನುಡಿ ಒಂದಾಗಿರಬೇಕು.ಅಂತರಂಗ ಬಹಿರಂಗ ಶುದ್ಧವಾಗಿರಬೇಕು. ಮಕ್ಕಳು ಕೇಳುವದಕ್ಕಿಂತ ನೋಡಿ ಹೆಚ್ಚು ಕಲಿಯುತ್ತಾರೆ.