ಯುಗಾದಿ ವಿಶೇಷಬರಹಗಳು

ನಯನ ಭಟ್.

ಮತ್ತೆ ಬಂದಿತು ಯುಗಾದಿ..

ಮತ್ತೆ ಬಂದಿತು ಯುಗಾದಿ..
ವಿಜಯದ ಹೆಜ್ಜೆಗಳಿಗೆ ಹಾಕಲಿ ಭವ್ಯ ಬುನಾದಿ.

ಕಣ್ಣು ತುಂಬಾ ಕನಸು ತುಂಬಿ
ಹಬ್ಬವಿಂದು ಕರೆದಿದೆ..
ವರುಷ ತುಂಬ ಹರಷ ತರುತ
ಕ್ಷಣ ಕ್ಷಣವೂ ಬಂದಿದೆ.

ನವ ಆಶೆ , ನವತನದಿ
ಭವವು ಸಾಗ ಹೊರಟಿದೆ..
ಹತಾಶೆ ಕಳೆದು ಹೊಂಗನಸು
ಮನದಿ ತುಂಬಿ ನಿಂತಿದೆ.

ನೆನ್ನೆಗಳ ನಿರಾಸೆ ಕಳೆದು
ರಮ್ಯತೆಯು ತುಂಬಿದೆ..
ಚೈತ್ರ ಸುಗ್ಗಿ ಜನುಮ ತಳೆದು
ಹಸಿರು ಭಾವ ಹೊಸೆದಿದೆ.

ಋತುಗಾನದ ಚೆಲುವದೆಲ್ಲ
ಗೆಜ್ಜೆ ಕಟ್ಟಿ ಕುಣಿದಿದೆ..
ಯುಗದ ಆದಿ ಬಂತೆಂದು
ಪರ್ವಕಾಲ ಮೆರೆದಿದೆ.

…….. ಎಂಬ ಮಧುರ ಪದಗಳ ಕಾವ್ಯದ ಸಾಲ್ಗಳನ್ನು ಕರ್ಣಗಳ ತುಂಬಾ ತುಂಬಿಸುತ್ತಾ, ಬಾಯಿ ತುಂಬಾ ನಮ್ಮದೇ ರಾಗದಲ್ಲಿ ಹಾಡುತ್ತಾ, ಮನಸೋ ಇಚ್ಛೆ ಹೆಜ್ಜೆ ಹಾಕುತ್ತಾ ಹಬ್ಬದ ಸೊಗಡನ್ನು ಹೀರುತ್ತಾ ಬೆಳೆದವರಿಗೆ ಮಸ್ತಕದ ಪುಟಗಳಲ್ಲಿ ಇಂದಿಗೂ ಜೀವಂತವಾಗಿರುವ ಬಾಲ್ಯದ ಮಧುರ ನೆನಪುಗಳು ಮರುಕಳಿಸುತ್ತಿವೆ ಎಂದರೆ ಆ ದಿನಗಳ ಸಡಗರದ ಸಿರಿವಂತಿಕೆ ಕೂಡ ಅಷ್ಟೇ ಮೌಲ್ಯಯುತವಾದದ್ದು..ಹಿಂದೂ ಸಂಪ್ರದಾಯದಲ್ಲಿ ಹಬ್ಬಗಳಿಗೇನೂ ಬರವಿಲ್ಲದೇ ಹೋದರೂ ಕೂಡ ಮನಸಾರೆ ಹಿಗ್ಗಿ, ಕೌತುಕದಿಂದ ಅಂತಹ ದಿನಗಳಿಗೆ ಕಾಯುತ್ತಾ ಸಂಭ್ರಮಿಸುವ ಕೆಲವೊಂದು ಪ್ರಮುಖ ಹಬ್ಬಗಳ ಪೈಕಿ ಯುಗಾದಿ ಕೂಡ ಒಂದು ಎಂದರೆ ಅದು ಅತಿಶಯೋಕ್ತಿಯಲ್ಲ ಬಿಡಿ. ಬಾಲ್ಯದ ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟರೆ ಅದು ಉಣಿಸುವ ಸಿಹಿಗೆ ಮತ್ತೇರುತ್ತಾ ಅಂದಿನ ನೆಂಪುಗಳಲೇ ಕಳೆದುಹೋಗುವ ಪರಿಪಾಟ ಸಹಜವೇ ಹಾಗೆ ನೋಡಿದರೆ. ನೆನಪುಗಳ ಹಾಗೂ ಅನುಭವಗಳ ಗುಡಾನ್ನದಲಿ ಹೊಟ್ಟೆ ತುಂಬಿದಂತೆಯೇ ಭಾಸವಾಗುತ್ತದೆ ಈಗಲೂ ಕೂಡ. ಪ್ರಪಂಚದ ಉಳಿದ ಯಾವುದೇ ವ್ಯವಹಾರಗಳ ಗೊಡವೆಗೆ ಹೋಗದೇ, ಇಂದಿನ ದಿನವನ್ನು ನಮ್ಮ ದಿನ ಎಂದಷ್ಟೇ ಭಾವಿಸಿ ಮನ ಬಂದಂತೆ ಆನಂದಿಸುವ ವಯಸ್ಸು ಆಗೆಲ್ಲಾ. ಮಾರ್ಚ್ ಏಪ್ರಿಲ್ ಬಂತೆಂದರೆ ಸಾಕು ನಯನಗಳು ಗೋಡೆಗೆ ತೂಗು ಹಾಕಿದ್ದ ಕ್ಯಾಲೆಂಡರಿನೆಡೆಗೆ ನೆಟ್ಟು ಬಿಡುತ್ತಿದ್ದವು. ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಬರುತ್ತಿದ್ದ ಯುಗಾದಿ, ರಾಮನವಮಿ, ವಿಷು ಮುಂತಾದ ಹಬ್ಬಗಳ ಕಡೆಗೆ ವಾಲುತ್ತಿತ್ತು ನನ್ನ ಚಿತ್ತ. ನನ್ನ ಚಿತ್ತ ಎಂದು ಪ್ರತ್ಯೇಕವಾಗಿ ಉಲ್ಲೇಖಿಸುವ ಬದಲು ಪ್ರತಿಯೊಂದು ಮಾನವ ಜೀವಿಗಳ ಚಿತ್ತ ಎಂದು ಸಾಮೂಹಿಕವಾಗಿ ಉದ್ಘೋಷಿಸಿ ಬಿಡುವುದೇ ಸಮಂಜಸವಲ್ಲವೇ ?

ನಾರೀ ಮಣಿಯರು ಹೊಸ ಬಗೆಯ ಚಿತ್ತಾರಗಳ ಉಡುಗೆಗಳನ್ನು ತಮ್ಮದಾಗಿಸುತ್ತಾ ನವಗತ್ತಿನಿಂದ ಮನೆಯ ಅಂಗಳವನ್ನು ನೀರಿನಿಂದ ತೊಯ್ದು ರಂಗವಲ್ಲಿಯನ್ನು ಚಿತ್ರಿಸಿ, ಮನೆಯನ್ನು ಅಲಂಕರಿಸಿ, ಪೂಜಾ ಸಿದ್ಧತೆಯನ್ನು ಭರದಿಂದ ನೆರವೇರಿಸುತ್ತಾ, ಪಾಕಶಾಲೆಯಲ್ಲಿ ತಮ್ಮ ತಮ್ಮ ಪ್ರಾವೀಣ್ಯತೆಯನ್ನು ಪ್ರದರ್ಶಿಸುತ್ತಿದ್ದರೆ ಮನೆಯ ಪುರುಷ ಸಮುದಾಯದ ಕೆಲಸ ಕಾರ್ಯಗಳು ಕೂಡ ಮಹತ್ವದ್ದೇ ಆಗಿರುತ್ತದೆ. ಪೂಜಾ ಕಾರ್ಯಕ್ರಮಗಳ ಮೇಲ್ವಿಚಾರಣೆಯಿಂದ ಹಿಡಿದು ಹಬ್ಬದ ಆಚರಣೆಯ ಧಾವಂತದಲ್ಲಿ ಅಲ್ಲಲ್ಲಿ ಇಣುಕುವ ಕೊರತೆಗಳನ್ನು ಗುರುತಿಸಿ ಸರಿ ಪಡಿಸುವ ಕೆಲಸ ಕೂಡ ಕಡಿಮೆ ಏನಲ್ಲ. ಮನೆಗೆ ಆಗಮಿಸಲ್ಪಟ್ಟ ಹಿರಿಯರನ್ನು ಗೌರವದಿಂದ ಸತ್ಕರಿಸುತ್ತಾ, ಕಿರಿಯರನ್ನು ಪ್ರೀತಿಯಿಂದ ಮೈದಡವಿ.. ಮನಸಾರೆ ಶುಭ ಕೋರುವ ಪರಿಯನ್ನು ಪ್ರತ್ಯಕ್ಷ ದರ್ಶಿಗಳಾಗಿ ವೀಕ್ಷಿಸುತ್ತಾ ನಿಂತರೆ ಸಂತಸದ ಹನಿ ಬಾಷ್ಪ ಕಣ್ಣಂಚನು ತೇವಗೊಳಿಸದೇ ಇರಲಾರದು.

“ನಡೆ ಮುಂದಕೆ ಧೈರ್ಯದಿಂದ ಅರುಣೋದಯದ ತೀರಕೆ” ಎಂಬ ಕವಿ ವಾಕ್ಯದ ಸಾಲ್ಗಳನ್ನು ನೆನಪಿಸಿಕೊಂಡು, ಬದುಕಿನ ಪಥದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಯುಗಾದಿ ಹಬ್ಬ ಪ್ರಶಸ್ತ ದಿನವೆಂದೇ ಹೇಳಬಹುದು. ಝಗಮಗಿಸುವ ಚರ್ಯೆಯನ್ನು ನಮ್ಮದಾಗಿಸುತ್ತಾ ನಲಿಯುವುದರ ಜೊತೆ ಜೊತೆಗೆ ಹಬ್ಬಗಳ ಹಿನ್ನೆಲೆ ಹಾಗೂ ಅವು ಸಾಗಿ ಬಂದ ಹಾದಿಯನ್ನು ನೆನಪಿಸಿಕೊಳ್ಳುವ ಅಭ್ಯಾಸ ನಮ್ಮಲ್ಲಿ ಬೆಳೆದಾಗಲೇ ಹಬ್ಬಗಳ ಆಚರಣೆಗೊಂದು ಮೆರುಗು.

ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಪರಿಪಾಟದಿಂದ ಕೊಂಚ ದೂರವೇ ಉಳಿದಿದ್ದ ನಾನು ಹಬ್ಬದ ಸೊಗಡನ್ನು ಸವಿಯುವ ವಿಚಾರದಲ್ಲಿ ಮಾತ್ರ ಒಂದು ಹೆಜ್ಜೆ ಮುಂದೆಯೇ. ತುಸು ಮೆಲ್ಲನೆ ಕಾರ್ಮೋಡ ಬಾನಂಗಳಕ್ಕೆ ಲಗ್ಗೆ ಇಟ್ಟು, ತನ್ನ ಪಾರುಪತ್ಯವನ್ನು ಎಲ್ಲೆಡೆಯೂ ವ್ಯಾಪಿಸಿ ದುಂಡನೆಯ ಮುತ್ತುಗಳನ್ನು ಇಳೆಗೆ ವರ್ಷಿಸುವ ಸಮಯದಲ್ಲೆಲ್ಲಾ ನನ್ನ ಕಿವಿಗಳು ಬಿರಿದು ನಿಲ್ಲುತ್ತಿದ್ದವು, ಅಮ್ಮ ಹೇಳುವ ಕಥೆಗಳಾಗಿರಬಹುದು ಇಲ್ಲವೇ ಆಚರಿಸುವ ಹಬ್ಬಗಳ ಮಹತ್ವವನ್ನು ತಿಳಿಯುವ ಆತುರದ ಚರ್ಯೆಯಿಂದ. ಪ್ರಕೃತಿಯ ಮನೋಜ್ಞ ವಿಸ್ಮಯಕ್ಕೆ ಬೆರಗಾಗುತ್ತಾ, ಹಬ್ಬಗಳ ಸಾಲು ಸಾಲು ಮಹತ್ವವನ್ನು ಅರಿಯುತ್ತಾ ಕೂತರೆ ಓಡುವ ಸಮಯ ಕೂಡ ತುಸು ನಿಂತು ಆಲಿಸುವಷ್ಟು ಸೋಜಿಗ ಹಬ್ಬಗಳ ಮಡಿಲು. ಅಂತಹದೊಂದು ಸೋಜಿಗಕ್ಕೆ ನಾಂದಿ ಹಾಡುತ್ತಾ, ಸಮೃದ್ಧತೆಯ ಮಡಿಲನ್ನು ತೆರೆದು, ನಗುವನ್ನು ವರ್ಷಿಸುತ್ತಾ, ಹರುಷಗಳ ಪರ್ವವನ್ನು ಸೃಜಿಸುತ್ತಾ ಮತ್ತೆ ಬಂದಿದೆ ಯುಗಾದಿ….ನವ್ಯತೆಗೆ ಮತ್ತೊಂದು ಶುಭ ನಾಂದಿ.

ಭೂರಮೆಯ ಮಡಿಲಿಗಿಂದು
ಸಂತಸದ ಭವ್ಯ ಪರ್ವ ..
ವಸಂತನಾಗಮನದಿ ಕೋಕಿಲೆಗಳು
ಸೂಚಿಸುತಿದೆ ರಮ್ಯ ಗರ್ವ.

ಸೂರ್ಯೋದಯದ ಸೊಗಡಿಗೆ
ನೆಚ್ಚಿಕೊಂಡಿಹುದು ಉಲ್ಲಾಸ..
ಪಬ್ಬದ ಪ್ರಾಂಜಲತೆಯ
ಒಡಲೊಳು ನಗುತಲಿದೆ ಮನೋಹಾಸ..

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ,
ಹೊಸ ವರ್ಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಸತು ಹೊಸತು ತರುತಿದೆ
ಎಂಬ ಕವಿ ಲೇಖನಿಯ ಶಾಹಿಯೋಘವನು ಮಜ್ಜಿಸುತ ಪುನಃ ಸಂಭ್ರಮಿಸುವ ಮಧುರ ಘಳಿಗೆಗಳು ಮತ್ತೆ ಬಂದಿದೆ. ಮನೆ ಮನಗಳಲಿ ಹರ್ಷದೋಕುಳಿಯನ್ನು ವರ್ಷಿಸುತ, ನಗುವಿನ ಕಿಲಕಿಲತೆಯನ್ನು ಮಾರ್ದನಿಸುತ ಆಗಮಿಸಿದ ಹಬ್ಬದ ಸಡಗರವನ್ನು ಹೃನ್ಮನ ಸಂಭ್ರಮಿಸುವ ಪವಿತ್ರ ಕ್ಷಣಗಳು ಇದೀಗ ಮತ್ತೆ ಬಂದಿದೆ ಎಂದರೆ ತಪ್ಪಾಗಲಾರದು.

ಬ್ರಹ್ಮನು ಸೃಷ್ಟಿ ಕಾರ್ಯವನ್ನು ಆರಂಭಿಸಿದ ದಿನವಾಗಿಯೂ , ಶಾಲಿವಾಹನನು ಪಟ್ಟಾಭಿಷಿಕ್ತನಾದ ಶುಭ ದಿನವಾಗಿಯೂ , ಶ್ರೀರಾಮನು ಅಯೋಧ್ಯೆಗೆ ಮರಳಿ ಬಂದ ಪ್ರಜಾಜನರ ಮುಂದೆ ಪಟ್ಟಾಭಿಷಿಕ್ತನಾದ ದಿನವಾಗಿಯೂ ಯುಗಾದಿಯನ್ನು ಪರಿಗಣಿಸಲಾಗುತ್ತದೆ.

ನವ ವಸಂತದ
ಗಾಳಿ ಬೀಸಲು
ಮಾವು ಚಿಗುರಿತು ಆಗಲೆ
ಮೌನ ಮರೆಯುತ
ಮಧುರ ಗೀತೆಯ
ಮತ್ತೆ ಹಾಡಿತು ಕೋಗಿಲೆ”
……..ಎಂಬ ಸಾಹಿತ್ಯದ ಸಾಲುಗಳಲಿ ಅಡಕವಾಗಿರುವ ಭಾವಗಳನ್ನು ಸವಿಯುತ್ತಾ ಸಾಗಿದರೆ ಬದುಕು ಸಗ್ಗವಾಗುವುದರಲ್ಲಿ ಅನುಮಾನವೇ ಇಲ್ಲ. ವಸಂತನ ಆಗಮನದ ಈ ಪರ್ವವನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಹಲವು ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ‘ಯುಗಾದಿ’ ಎಂದೂ , ತಮಿಳುನಾಡಿನಲ್ಲಿ ‘ಸೌರಯುಗಾದಿ’ ಎಂದೂ , ಕೇರಳದಲ್ಲಿ ‘ಚೈತ್ರ ವಿಷು’ ಎಂದೂ , ಮಹಾರಾಷ್ಟ್ರದಲ್ಲಿ ‘ಗುಡಿಪಾಡ್ವ’ ಎಂದೂ , ಬಂಗಾಳದಲ್ಲಿ ‘ಬಸಂತ್ ಪಂಚಮಿ’ ಎಂದೂ , ಪಂಜಾಬ್ ನಲ್ಲಿ ‘ಬೈಸಾಕಿ’ ಎಂದೂ , ಸಿಂಧ್ ನಲ್ಲಿ ‘ಚೇಟಿಚಾಂದ್’ ಎಂದೂ ಕರೆಯುತ್ತಾರೆ.

ಹಿಂದೂ ಸಂಪ್ರದಾಯಗಳ ಪ್ರಕಾರ ‘ಯುಗಾದಿ’ ಹಬ್ಬವನ್ನು ಹೊಸ ವರುಷ ಎಂಬುದಾಗಿ ಪರಿಗಣಿಸಲಾಗುತ್ತದೆ. ಧಾರ್ಮಿಕ ವಿಚಾರಗಳ ಬುನಾದಿಯಲ್ಲಿ ನೋಡುವುದಾದರೂ ಕೂಡ ಯುಗಾದಿ ಸಂವತ್ಸರದ ಬದಲಾವಣೆಗೆ ನಾಂದಿ ಹಾಡುವ ದಿನವಾಗಿದೆ. ವಸಂತನ ಆಗಮನದಿ ಚಿಗುರೊಡೆದ ಹಚ್ಚನೆಯ ಸಿರಿಯ ಸೌಂದರ್ಯವನ್ನು ಮನಸಾರೆ ಆಸ್ವಾದಿಸುತ, ಪ್ರಕೃತಿಯಿತ್ತ ಬಳುವಳಿಯಿಂದ ಪ್ರಕೃತ್ತಿಯನ್ನೇ ಸಿಂಗರಿಸುತ ನವತನದ ಜಾಡು ಹಿಡಿದು ಸಾಗುವ ಛಲ ಹೊತ್ತು ಸಂಭ್ರಮಿಸುವ ದಿನವೇ ಯುಗಾದಿ. ಬೇವು ಬೆಲ್ಲವನ್ನು ಸಮಾನ ಭಾವದಿಂದ ಸ್ವೀಕರಿಸುವ ಮೂಲಕ ಬದುಕಿನ ಯಾತ್ರೆಯಲ್ಲಿ ಎದಿರಾಗಬಹುದಾದ ನೋವು ನಲಿವುಗಳನ್ನು ಸಹ್ಯ ಭಾವದಲ್ಲಿ ಸ್ವೀಕರಿಸಿ, ಮನೋದೃಢತೆಯನ್ನು ಕಾಪಾಡಿಕೊಂಡು ಹೋಗುವ ವ್ಯವಸ್ಥೆಯನ್ನು ಯುಗಾದಿ ಹಬ್ಬ ಪ್ರತಿನಿಧಿಸುತ್ತದೆ.

ಯುಗಾದಿ ಹಬ್ಬದ ಮತ್ತೊಂದು ವೈಶಿಷ್ಟ್ಯವೆಂದರೆ ಹಬ್ಬದ ಆಚರಣೆಯನ್ನು ಎರಡು ಪ್ರಕಾರಗಳಲ್ಲಿ ಮಾಡಿಕೊಂಡು ಹೋಗುವಂತದ್ದು. ಚಾಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಎಂಬ ಎರಡು ರೀತಿಯಲ್ಲಿ ಹಬ್ಬವನ್ನು ಆಚರಿಸುವ ವ್ಯವಸ್ಥೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕಾಣಬಹುದು. ಸಾಮಾನ್ಯವಾಗಿ ಚಾಂದ್ರಮಾನ ಯುಗಾದಿ ಕಳೆದ ಹದಿನೈದು ದಿನಗಳಲ್ಲಿ ಸೌರಮಾನ ಯುಗಾದಿ ಬರುವಂತದ್ದು. ಪ್ರಕೃತಿಯಿತ್ತ ಸೊಬಗಿನಿಂದ ಚಾಂದ್ರಮಾನ ಯುಗಾದಿ ಆಚರಿಸ್ಪಟ್ಟರೆ ಸೌರಮಾನ ಯುಗಾದಿ ನಿಸರ್ಗ ಮಾನವತೆಗೆ ಇತ್ತ ಕೊಡುಗೆಗೆ ಕೃತಜ್ಞತಾ ಭಾವವನ್ನು ಸಮರ್ಪಿಸುವ ದಿನವಾಗಿದೆ. 

ಚಾಂದ್ರಮಾನ ಯುಗಾದಿ :


ಊರಿನ ಅಸ್ಮಿತೆಯನ್ನು ಪ್ರಧಾನವಾಗಿ ಇಟ್ಟುಕೊಂಡು ಹೇಳುವುದಾದರೆ, ದಕ್ಷಿಣ ಕನ್ನಡದಲ್ಲಿ ಚಾಂದ್ರಮಾನ ಯುಗಾದಿಯನ್ನು ಪಂಚಾಂಗ ಶ್ರವಣ ಹಾಗೂ ಬೇವು-ಬೆಲ್ಲಗಳ ಮಿಶ್ರಣವನ್ನು ಸಮಾನಾಳತೆಯಲ್ಲಿ ಭುಂಜಿಸುವ ಮೂಲಕ ಆಚರಿಸಲಾಗುತ್ತದೆ. ಎಲ್ಲಾ ಹಬ್ಬಗಳಂತೆ ಈ ಹಬ್ಬದಲ್ಲೂ ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ , ಸ್ನಾನದ ನಂತರ ದೇವರ ಪೂಜೆ , ಮಹಾಪ್ರಸಾದ ಅನ್ನದ ನೈವೇದ್ಯದ ಬಳಿಕ ಹೊಸ ಪಂಚಾಂಗವನ್ನು ಓದಿ ನಂತರ ಬೇವು ಬೆಲ್ಲದ ಸ್ವಾದವನ್ನು ಸವಿಯಲಾಗುತ್ತದೆ. ಪಂಚಾಂಗ ಶ್ರವಣದ ಮೂಲಕ ವರುಷದ ರಾಜಾಧಿ ಸಂವತ್ಸರ ಫಲವನ್ನೂ ಜೊತೆ ಜೊತೆಗೆ ರಾಶಿ ಫಲವನ್ನು ಕೂಡ ಕುಟುಂಬಸಮೇತರಾಗಿ ಕೂತು ಓದುವುದು ವಾಡಿಕೆ..ಬಳಿಕ ಮನೆಯ ಹಿರಿಯರುಗಳಿಂದ ಆಶೀರ್ವಾದ ಪಡೆದು ಬದುಕಿನ ಏಳ್ಗೆಗಾಗಿ ಬೇಡುವ ಕ್ರಮ ಇಂದಿಗೂ ತನ್ನ ಚೇತನವನ್ನು ಉಳಿಸಿಕೊಂಡಿರುವುದು ಗಮನಾರ್ಹ.

ಹಬ್ಬದ ಹಿಂದಿನ ದಿನವೇ ನಡೆಯುತ್ತಿದ್ದ ತಯಾರಿ, ಮಾವಿನ ಚಿಗುರನ್ನು ಒಪ್ಪಗೊಳಿಸಿ ಅಮ್ಮ ಇಡುತ್ತಿದ್ದ ಪರಿ, ಉದಯಕಾಲದಲ್ಲಿ ಅಪ್ಪ ಪಠಿಸುತ್ತಿದ್ದ ಮಂತ್ರಗಳ ಮಾಧುರ್ಯಮಯ ಧ್ವನಿ, ಬಳಿಕ ನಡೆಯುತ್ತಿದ್ದ ಪಂಚಾಂಗ ಶ್ರವಣದಂತಹ ಶಿಸ್ತು ಬದ್ಧ ವ್ಯವಸ್ಥೆ ಇಂದಿಗೂ ನನ್ನ ಕಣ್ಣ ಮುಂದೆ ತನ್ನ ಜೀವಂತಿಕೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ.

ಸೌರಮಾನ ಯುಗಾದಿ :


ಇನ್ನು ಸೌರಮಾನ ಯುಗಾದಿ ಕೂಡ ವಿಶೇಷವೇ. ಬೆಳೆದ ಬೆಳೆ , ಮಾಗಿದ ಫಲವಸ್ತುಗಳು , ತರಕಾರಿಗಳು , ನಗ – ನಾಣ್ಯಗಳು , ಆಹಾರ ವಸ್ತುಗಳನ್ನು ( ಹಸಿರು ಮಾತ್ರ ಬೆಂದ ಪದಾರ್ಥಗಳಲ್ಲ ) ಭಗವಂತನಿಗೆ ಅರ್ಪಿಸುವ ವಾಡಿಕೆ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತದ್ದು. ನಸುಕು ಅರಳುತ್ತಿದ್ದಂತೆಯೇ ಪೂಜಾ ಕೊಠಡಿಯನ್ನು ನಿರ್ಮಲವಾಗಿಸಿ ಸ್ವಚ್ಛವಾದ ಬಿಳಿ ವಸ್ತ್ರವನ್ನು ನೆಲದಲ್ಲಿ ಹಾಸಿ , ಅಕ್ಕಿ ತೆಂಗಿನಕಾಯಿಯನ್ನು ಇಟ್ಟು , ಅಲ್ಲೇ ಹತ್ತಿರದಲ್ಲಿ ಕನ್ನಡಿಯನ್ನು ಇಡಲಾಗುತ್ತದೆ. ದೇವರ ದೀಪ ಬೆಳಗಿ ಮೇಲೆ ತಿಳಿಸಿದಂತೆ ವಸ್ತುಗಳನ್ನು ಒಪ್ಪವಾಗಿ ಜೋಡಿಸಿ ಭಗವಂತನಿಗೆ ನಮಿಸಿ ಬಳಿಕ ತಾಯ್ತಂದೆಯರ ಹಾಗೂ ಗುರು ಹಿರಿಯರ ಆಶೀರ್ವಾದವನ್ನು ಪಡೆಯಲಾಗುತ್ತದೆ. ಹೀಗೆ ಫಲಪುಷ್ಪಾದಿಗಳನ್ನು ಭಗವಂತನ ಮುಂದೆ ಇಟ್ಟು , ವಂದಿಸುವ ಬಗೆಗೆ ‘ಕಣಿ ಇಡುವುದು’ ಎಂದು ಹೆಸರು..ಆಡು ಭಾಷೆಯಲ್ಲಿ ಇಂತಹುದೇ ಆಚರಣೆಗೆ ‘ವಿಷು ಹಬ್ಬ’ ಎಂಬುದಾಗಿಯೂ, ತುಳು ಭಾಷೆಯಲ್ಲಿ ‘ವಿಷು ಪರ್ಬ’ ಎಂದೂ ಕರೆಯಲಾಗುತ್ತದೆ. ಹೀಗೆ ಇಟ್ಟ ಬಗೆಯಿಂದ ಭಗವಂತ ಸಂತೃಪ್ತಗೊಂಡು ವರುಷದುದ್ದಕ್ಕೂ ಫಲವತ್ತತೆಯನ್ನು ಹಾಗೂ ಇಳೆಯ ಸಮೃದ್ಧಿಯನ್ನು ಹೆಚ್ಚಿಸುವ ಮುಖೇನ ಭವ ಬಾಂಧವರನ್ನು ಸದಾ ಹಾರೈಸುತ್ತಾ ಖುಷಿಯಿಂದ ಕೂಡಿದ ಬದುಕನ್ನು ಕರುಣಿಸಲಿ ಎಂದು ಆಶಿಸಲಾಗುತ್ತದೆ.

ಯುಗಾದಿ ಎಂದರೆ..


ನವ್ಯತೆಗೆ ಉದಂತ
ವಿಜಯದೆಡೆಗೆ ಧಾವಂತ
ಮನೋ ಸ್ಮಿತೆಗೆ ವಸಂತ
ಬಾಳ ದ್ಯುತಿಗೆ ಪರ್ಯಂತ .

ಗಮ್ಯದೆಡೆಗೆ ಹೆಜ್ಜೆಗಳ ವಿಕಾಸ
ಕನಸುಗಳಿಗೆ ಭರವಸೆಯಲಿ ಹಾಸ
ಹೃದಯದಂದಣದಿ ಸಂತಸ
ಸಾಧನೆಗೆ ವಿಪುಲ ನ್ಯಾಸ .

ಭವ್ಯತೆಗೆ ಸಮ್ಮೋಹನ
ಚೆಲುವಿಕೆಯ ನರ್ತನ
ಹಸಿರೆಲೆಗಳಲಿ ಇಳೆಗೆ ಮಜ್ಜನ
ಉಲ್ಲಾಸಗಳ ಕೂಜನ .

ನಗುವಿನಲೆಗೆ ಇಂದಿರೆ
ಕ್ಲೇಶಗಳಿಗೆ ಸೆರೆ
ಅಪೇಕ್ಷೆಗಳಿಗೆ ಆದರದ ಕರೆ
ಚ್ಯುತಿಗಳಿಗೆ ಮರೆ.

ಅಚೇತನಕೆ ದೈನ್ಯತೆ
ಪುಷ್ಟಿಣಿಗೆ ಒರತೆ
ಘಾತಿತನಕೆ ಕೊರತೆ
ಗೆಲ್ವಿಗೆ ಸಂಪೂರ್ಣತೆ .

ಹೊಸ ಸಂವತ್ಸರದ ಹೊಂಬಿಸಿಲಿನಲಿ ಬದುಕಿನ ತೇಜಸ್ಸು ವೃದ್ಧಿಸುತ್ತಿರಲಿ. ಇಚ್ಛಿಸಿದ ಇಂಗಿತಗಳು ತನ್ನಿರುವಿಕೆಯನ್ನು ತೋರ್ಪಡಿಸಿ ಮೆರೆದಾಡಲಿ.. ಕಿಂಕೃತಿಗಳ ಭಾವ ಮನೋ ಮಂಟಪದಿಂದ ದೂರ ಸರಿದು, ಸತ್ಕಾಮನೆಗಳಲಿ ಸಂತೋಷವನ್ನು ಕಾಣುತ್ತಿರಲಿ. ಈ ‘ಶೋಭನಕೃತ್’ ಸರ್ವರಿಗೂ ಸಕಲೈಶ್ವರ್ಯಗಳನ್ನು ಕರುಣಿಸಲಿ. ಮನವೆಂಬ ಗುಡಿಯಲ್ಲಿ ಪ್ರಾಂಜಲ ಭಾವನೆಗಳ ತೈಲದಿಂದ ಬೆಳಗಿದ ಭಕ್ತಿಯೆಂಬ ಪ್ರಣತಿಯ ಅಂಶುಗಳು ಸೃಷ್ಟಿಯ ಶಕ್ತಿಯ ಹೃತ್ಕಮಲವನ್ನು ಆಲಿಂಗಿಸಿ ಸದಾ ಅಕ್ಕರೆಯ ತುತ್ತಣುಣ್ಣಿಸುವಂತ ಸುಕ್ಷಣಗಳಲಿ ಬಾಳುವೆ ಮೆರೆದಾಡುತಿರಲಿ. ತಿಥಿ, ವಾರ, ಯೋಗ, ನಕ್ಷತ್ರ ಮತ್ತು ಕರಣಗಳೆಂಬ ಐದು ಅಂಶಗಳ ಸಖ್ಯದಿಂದ ಯುಗಾದಿಯ ಸುದಿನವು ಭರವಸೆಗಳ ಗೋಪುರಕೆ ಮತ್ತಷ್ಟು ಭದ್ರತೆಯನ್ನು ಒದಗಿಸಲಿ ಎಂದು ಮನಃಪೂರ್ವಕವಾಗಿ ಆಶಿಸುತ್ತಾ, ಓದುಗ ಮಿತ್ರರಿಗೆ ‘ಚಾಂದ್ರಮಾನ ಯುಗಾದಿಯ ಶುಭಾಶಯಗಳು’ ..


ನಯನ ಭಟ್

2 thoughts on “

Leave a Reply

Back To Top