ಪುಸ್ತಕ ಸಂಗಾತಿ
ಪಾರ್ವತಿ ಬೂದೂರುರವರಸಂಲನ-ಭಾವ ಬಾಂದಳ
ಭಾವ ಬಾಂದಳ
ಲೇಖಕರು : ಶ್ರೀಮತಿ ಪಾರ್ವತಿ, ಶಿವರಾಜ್ ಬೂದೂರು.
ಪ್ರತಿಗಳು : 1000
ಪ್ರಥಮ ಮುದ್ರಣ:- ಏಪ್ರಿಲ್ 2022.
ಬೆಲೆ ರೂ, 200/-
ಪುಟಗಳು: 108,
ಪ್ರಕಾಶಕರು: ಮಹಾಕವಿ ಲಕ್ಷ್ಮೀಶ ಪ್ರಕಾಶನ ಕನ್ನಡ ಸಾಹಿತ್ಯ ಸಂಘ ಸುರಪುರ.
ದ್ವಿತಿಯ ಕವನ ಸಂಕಲನ,
ಕಾವ್ಯ ಎನ್ನುವ ಪದದ ನಿಖರವಾದ ವ್ಯಾಖ್ಯಾನವನ್ನು ಹೇಳುವುದು ಕಷ್ಟವೆನ್ನುವದು ಸರ್ವಸಮ್ಮತವಾದ ಪಂಡಿತರ ಮಾತು. ಅನೇಕ ವಿದ್ವಾಂಸರು, ತತ್ವಜ್ಞಾನಿಗಳು ,ವಿಮರ್ಶಕರುಮತ್ತು ಕವಿಗಳು, ಜಿಜ್ಞಾಸೆಯನ್ನು, ಚರ್ಚೆಯನ್ನು ನಡೆಸಿದರು ಇಲ್ಲಿಯವರೆಗೆ ಸರ್ವಸಮ್ಮತವಾದ ವ್ಯಾಖ್ಯಾನ ಕೊಡಲು ಸಾಧ್ಯವಾಗಿಲ್ಲ, ಕಾವ್ಯದ ವಸ್ತು, ಸ್ಥಿತಿ, ಸ್ವರೂಪಗಳು, ನಿಗೂಢವಾಗಿರುವುದೇ ಇದಕ್ಕೆ ಕಾರಣವೆಂಬುದು ಪಂಡಿತರ ಅಭಿಮತ.
ಕಾವ್ಯ ಎಂಬುದು ಸಂಸ್ಕೃತದ ಪದ “ಕವೃ” ಎಂಬ ಮೂಲ ಧಾತುವಿನಿಂದ ನಿಷ್ಪನ್ನವಾಗಿದೆ “ಕವೃ”ಎಂದರೆ ವರ್ಣನೆ ಎಂದರ್ಥ. ಅಂದರೆ ಕಾವ್ಯವು ವರ್ಣಿಸುವಂತಹ ಸ್ವರೂಪ ಉಳ್ಳದ್ದು ಎಂಬುದು ಅಲಂಕಾರಿಕರ ಅಭಿಪ್ರಾಯವಾಗಿದೆ.ಈ ವರ್ಣನೆ ಹೇಗಿರಬೇಕು ಎಂಬ ಅಭಿಮತದ ಚರ್ಚೆಯಿಂದ ಬಂದ ಉತ್ತರಗಳನ್ನು ಸಿಂಹಪಾಲು ಪಂಡಿತರು ಒಪ್ಪಿಕೊಂಡಿದ್ದಾರೆ.
ಭಾಷೆಯ ಕಲಾತ್ಮಕವಾದ ಪರಮಸಿದ್ದಿಯ ಬರವಣಿಗೆಯ ರೂಪವೇ ಕಾವ್ಯವಾದರೆ ಭಾವದ ಕುಂಚದಲಿ ಬರವಣಿಗೆಯನು ಅರಳಿಸಿರುವ ಶ್ರೀಮತಿ ಪಾರ್ವತಿ ದೇಸಾಯಿಯವರ ಸಂಕಲನದ ಬಳಹಷ್ಟು ಕವನಗಳಲ್ಲಿ ಕಲಾತ್ಮಕವಾಗಿ ಭಾಷೆಯನ್ನು ಬಳಸಿಕೊಂಡಿರುವದು ಕಾಣುತ್ತದೆ.
ಶಬ್ದ ಗಾರುಡಿಗ, ಬೇಂದ್ರೆಯವರಂತಹ ಮಹಾನ್ ಕವಿಗಳನ್ನು ಆದರ್ಶವಾಗಿಟ್ಟುಕೊಂಡು ಕಲಾತ್ಮಕತೆಯನ್ನು ರೂಡಿಸಿಕೊಂಡು ಕಾವ್ಯ ರಚನೆಯಲ್ಲಿ ತೊಡಗಿದ ಕವಿಗಳಲ್ಲಿ ಶ್ರೀಮತಿ ಪಾರ್ವತಿ ದೇಸಾಯಿ ಅವರು ಒಬ್ಬರು. ಕವಿಯು ಪರಿಸರದ ಕೂಸು ಆದ್ದರಿಂದ ತನ್ನ ಪರಿಸರದಲ್ಲಿ ನಡೆದ ಘಟನೆಗಳಿಗೆ ಸ್ಪಂದಿಸಿ ಕಾವ್ಯ ರಚಿಸುತ್ತಾನೆ. ಎಂದು
ಪ್ರೊಫೆಸರ್ ದೊಣ್ಣೆ ಗೌಡರ ವೆಂಕಣ್ಣ. ಕನ್ನಡ ಸಹ ಪ್ರಾಧ್ಯಾಪಕರು
ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ಕಲ್ಬುರ್ಗಿ ಇವರ ಮುನ್ನುಡಿಯಲಿ ಹೀಗೆ ತುಂಬಾ ಸುಂದರವಾಗಿ ಬರೆದಿದ್ದಾರೆ.
ಹಾಗೆಯೆ ಸೃಷ್ಟಿಯ ಸೊಬಗು ಇವರ ಅಂತರ್ಮುಖಿಯ ಸಖಿಯಾಗಿದೆ, ಇವರ ಅಪಾರ ಸೃಷ್ಟಿ ದೃಷ್ಟಿಯ ವಿಸ್ತರಣೆ ವಿಶಾಲವಾಗಿದೆ, ಕವಿತ್ರಿಯ ಪ್ರೇಮ ಪಾಂಡಿತ್ಯದ ಸಾಲುಗಳು ಅವರ ಹೃದಯ ತುಂಬಿ ಚಾತುರ್ಯಗೊಂಡ ಬೆರಳುಗಳು ನಿಶ್ಚಲವಾಗಿ ಬಿಳಿಯ ಪುಟಗಳನ್ನು ಮುದ್ರಿಸಿವೆ.
ವೈಯಕ್ತಿಕವಾಗಿ ವ್ಯಕ್ತಿತ್ವವನ್ನು ಪಕ್ವಗೊಳಿಸುವ ಸಾಮಾಜಿಕ, ವಾತಾವರಣವನ್ನು ತಿಳಿಗೊಳಿಸಿ ಪರಿಶುದ್ಧೀಕರಿಸುವ ಆಲೋಚನೆಗಳು ಇವರ ದಿನನಿತ್ಯದ ಚಿಂತನ ಬರಹಗಳಾಗಿವೆ. ಬರಹದಲ್ಲಿ ವಿಷಯ ವೈಶಿಷ್ಟತೆಯಿಂದ ಪಾದರಸದಂತೆ ತಿಳಿಯಾಗಿದೆ, ಮನೆಯೇ ಶೃಂಗಾರ ಎಂದು ಅರಿತ ಕವಿಯತ್ರಿ ಗೆ ಕರುಣಾಮಯಿ ಹೃದಯವಿದೆ ಎನ್ನತ ಹೊರಬಂದಿರುವ ಕನ್ನಡ ಪರಿಮಳದ ಸುವಾಸನೆಯು ಇಡಿ ಕನ್ನಡ ನಾಡಿಗೆ ಹರಡಲಿ ಎಂದು ವಿದ್ಯಾ ಶಾರದೆಗೆ ಪ್ರಾರ್ಥಿಸಿರುವ ಡಾII ಎಸ್, ಎಸ್ ,ಗುಬ್ಬಿಯವರು ಇಡಿ ಸಂಕಲನದ ಸದಾಶೆಯವನು ಭಟ್ಟಿ ಇಳಿಸಿದಂತೆ ಅವಲೋಕಿಸಿ
ಬೆನ್ನುಡಿಯನ್ನು ಬರೆದಿದ್ದಾರೆ ಕವಿಯತ್ರಿಯ ಭಾವಾಭಿವ್ಯಕ್ತವನ್ನು ಚೆನ್ನಾಗಿ ಅರ್ಥೈಸಿದ್ದಾರೆ.
ಬೆನ್ನುಡಿಯ ಹಾಗೂ ಮುನ್ನುಡಿಯ ಸಾಲಗಳೆ ಈ ಕವಿತ್ರಿಯ ಬರಹದ ಸಂಪೂರ್ಣ ಪರಿಚೆಯವಾಗುತ್ತದೆ
ಶ್ರೀಮತಿ ಪಾರ್ವತಿ ದೇಸಾಯಿ ಅವರು ನನ್ನ ನುಡಿಯಲ್ಲಿ ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಕುದುರೆ ನೀನ್ ಮದುವೆಗೂ ಮಸಣಕೋ ಹೋಗೆಂದ ಕಡೆಗೋಡು ಪದ ಖುಷಿಯೇ ನೆಲವಿವುದು ಮಂಕುತಿಮ್ಮ.ಡಾ. ಡಿ ವಿ ಗುಂಡಪ್ಪನವರ ಕಗ್ಗ . ಉದಾಹರಿಸಿ ಯಾವ ಯಾವ ಕಾಲಘಟ್ಟದಲ್ಲಿ ಏನೇನು ಸಂಭವಿಸುವುದು, ಅರಿಯಲಾಗದು ಎಂಥಾ ಸಂದಿಗ್ಧ ಪರಿಸ್ಥಿತಿಯಾದರು. ಮಾನವ ತನ್ನ ಬುದ್ಧಿಶಕ್ತಿಯಿಂದ ಭುವಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾನೆ, ಎಂದು
ಕರೋನಾ ಸಮಯದಲ್ಲಿನ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ.
ಕರೋನ ಸಮಯದಲ್ಲಿ ಅಂದರೆ 2001ರಲ್ಲಿ ಇವರ ಮೊದಲ ಕವನ ಸಂಕಲನ ನನ್ನೊಳಗಿನ ನಾನು ಕೃತಿಯನ್ನು ಪ್ರಕಟಿಸಿ ಆ ಸಂದಿಗ್ಧ ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದರ ಉಲ್ಲೇಖವಿದೆ.
ಕವಿತೆ ಎಂದರೆ ತೆರೆದ ಜೋಳಿಗೆ ಹಿಡಿದು ಸಿಗದ ಅಕ್ಷರಕ್ಕಾಗಿ ದಿನವೆಲ್ಲ ಭಿಕ್ಷಾಟನೆ, ತಂಗಳನ್ನವ ಉಂಡು ಸಾಲುಗಳ ಸಂಪಾದನೆ, ಆಗೊಮ್ಮೆ ,ಈಗೊಮ್ಮೆ , ಶಬ್ದ ಶಿಕಾರಿ ಆಗದಿದ್ದಾಗ ಶುದ್ದ ಭಿಕಾರಿ. ಎಂದಿರುವದು ಓದಿದರೆ ಅಬ್ಬಾ ಎಂಥಾ ಶಬ್ದ ಭಂಡಾರ.! ಎನಿಸಿತೆನಗೆ
ಬರೆಯುವುದು ಎಷ್ಟು ಕಷ್ಟವೆಂಬದು ಇದರಿಂದ ಅರ್ಥವಾಗುತ್ತದೆ. ಬೇಟೆಯಾಡಿದ ಪದಕ್ಕೆ
ಬಣ್ಣದಂಗಿಯ ತೊಡಿಸಿ ಸ್ವಂತಿಕೆ ಸಿದ್ಧಾಂತದ ತತ್ವವನ್ನು ಉಣ ಬಡಿಸಬಹುದೆನ್ನಬಹುದು ಎನ್ನುತ ಬರವಣಿಗೆಗೆ ಭಾವ ತೀವ್ರತೆ ಏಕಾಗ್ರತೆ ಗ್ರಹಿಕೆ ಅಧ್ಯಯನ ಬೇಕಾಗುತ್ತದೆ ಇವೆಲ್ಲದರ ಒಟ್ಟು ಸಮೀಕರಣವೇ ಎರಡನೇ ಕೃತಿ ಭಾವ ಭಾಂದಳ ಇಲ್ಲಿಯ ಬಹಳಷ್ಟು ಕವಿತೆಗಳು “ಮುಖಪುಟದೊಳಗಿನ ಚಿತ್ರ ಕಾವ್ಯ ಅಭಿಯಾನವೆಂಬ ಸಾಹಿತ್ಯ ಬಳಗದಲ್ಲಿಯ ಚಿತ್ರಗಳು ,ಕಂಡು ಹೊಮ್ಮಿದ ಸಾಲುಗಳು.” ಜಾರಿ ಹೋದ ಸಮಯ, ಸುಕ್ಕು ಗಟ್ಟಿದ ನೆನಪುಗಳು, ಮುರಟಿ ಹೋದ ಕನಸುಗಳು, ಬದಲಾವಣೆಗೆ ಹಪಹಪಿಸಿದ, ಆಶಯಗಳು, ಬೇಸರದ ಒಲವೊಂದಕ್ಕೆ ಜೋಗುಳ ಹಾಡುತ್ತಿರುವಂತೆ ಭಾಸವಾದಾಗ ಮೂಡಿದ ಭಾವ ಬಿಂದುಗಳೆಂದು ಕವಿತ್ರಿಯ ಹೇಳಿರುವ ಸಾಲುಗಳು ಮನಮೊಹಕವಾಗಿರುವದರಿಂದ ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ.
ಎರಡೂ ಕವನಸಂಕಲನದ ಮುಖಪುಟಗಳು ಶೀರ್ಷಿಕೆಗೆ ತುಂಬಾ ಸೂಕ್ತವಾಗಿವೆ.
ಹಚ್ಚುವೆನು ದೀಪ
ಸುತ್ತಮುತ್ತಲ್ಲೆಲ್ಲ ಸತ್ತಂತಿರುವ ಸತ್ಯವಾಣಿಗಳ ಬಿತ್ತರಿಸಲು ನಿತ್ಯನಾವಿನ್ಯ ಬದುಕಿಗಾಗಿ ಹಚ್ಚುವೆನು ದೀಪ
ಪುಂಡ ಪೋಕರ ಹೆಣ್ಣು ಬಾಕ ಭಂಡ ಮನುಜರ ಕಾಳ ಧನಿಕರ ಕುಸಂಸ್ಕಾರ ಪರಿವರ್ತನೆಗೆ ಹಚ್ಚುವೆನು ದೀಪ
ಬುದ್ಧನ ಶಾಂತಿಯ ಬಸವನ ಕ್ರಾಂತಿಯ ವಿವೇಕರ ವಾಣಿಯ ಅರುಣೋದಯವಾಗಲೆಂದು ಹಚ್ಚುವೆನು ದೀಪ
ಇದು ಎರಡು ಸಾಲಿನ ಕವಿತೆಯಾಗಿದೆ ನಾನು ಎರಡು ನುಡಿಗಳು ಮಾತ್ರವೆ ಹೇಳಿರುವೆ ಇಂತಹ ಅದ್ಭುತವಾದ 11 ನುಡಿಗಳ ಕವಿತೆ ಇದಾಗಿದೆ, ಈ ಜಗತ್ತಿನಲ್ಲಿ ಆಗುಹೋಗುಗಳನ್ನು ಕಂಡು ನೊಂದುಹೊರಹೊಮ್ಮಿದ ಸಾಲುಗಳು ಕಂಡಾಗ ಇದೊಂದು ಕ್ರಾಂತಿಯ ಕಹಳೆಯಂತೆ ಭಾಸವಾಗಿಸಿತು. ಬುದ್ಧ ,ಬಸವ, ವಿವೇಕರ ವಾಣಿಯಂತೆ ಅರುಣೋದವಾಗಲಿ ಎನ್ನುತ್ತಾರೆ.
ರೈತಪರ
ಅಲ್ಲೊಬ್ಬ ರೈತ ವಿಷ ಉಣ್ಣುತ್ತಾನೆ ಇಲ್ಲೊಬ್ಬ ನೇಣಿ ಗೇರುತ್ತಾನೆ.
ಮೊಸಳೆ ಕಣ್ಣೀರು ಸುರಿಸುತ್ತ ರೈತ ಪರ ನಾವು.
ಅನ್ನದಾತನ ಅಳಲನ್ನು ಅನಾವರಣಗೊಳಿಸುತ್ತಲೆ ಸೂಕ್ತ ಸಂದೇಶವನು ನೀಡಿದ್ದಾರೆ.
ನವನೀತಿ
ಹೆಣ್ಣೆಂದರೆ ಹೊನ್ನು ಹೆಣ್ಣೆಂದರೆ ಕಣ್ಣು ಬೋಧಿಸಿದ ನಾಡಲ್ಲೇ, ಹೆಣ್ಣು ಭೋಗದ ಹಣ್ಣು
ಜೀವ ಇರುವಾಗಲೇ ಹಾಕುವವರು
ಹೆಣ್ಣು ಬಾಳ್ವೆಗೆ ಮಣ್ಣು
ದೂರಿಗು ದೂಷಣೆಗೋ ನಿಂತಿಲ್ಲ ಆಪತ್ತು
ಬಾಪೂಜಿ ನುಡಿಗಿಲ್ಲ ಕವಡೆ ಕಾಸಿನ ಕಿಮ್ಮತ್ತು.
ಬೋಸರ ಘರ್ಜನೆ ಗತ್ತು ಅನುಸರಿಸಿ ಎಚ್ಚೆತ್ತು
ದೀಪ ಹಚ್ಚಿಟ್ಟು ಆರ್ತರಾಗಿ ಬೊಬ್ಬಿಟ್ಟು
ಕಂಬನಿ ಮೊರೆಯ ಇಟ್ಟರೆ ಮರಳಿ ಬರುವುದೇ ಜೀವ
ಹತ್ತಿಕ್ಕುವಿಕೆ ನಿಂತು ಜೀವಂತಿಕೆ ಪಡೆಯುವುದೆ ಭಾವ
ಮುಟ್ಟಿದರೆ ಅಧಮರ ಉಟ್ಟು ಲಟ್ಟಣಿಗೆಯಲಿ ತಲೆ ಕುಟ್ಟಬೇಕಿಗ
ಮೆಣಸು, ಖಾರದ ಪುಡಿ ನವನೀತಿ, ಅಸ್ತ್ರ,ಪ್ರಯೋಗ, ಮಣಿಯದಿರೆ ಕೈ ಹಿಡಿವವು ಚಾಕು ಚೂರಿ ಬಹುಬೇಗ
ರಂಗೋಲಿ ಹಾಡು ಹಸೆ ಕಲಿಸಿದ್ದು ಸಾಕು,
ಕರಾಟೆ ಪಟ್ಟಲಿ ಎಡೆಮುರಿ ಕಟ್ಟಬೇಕು
ಗುಂಡಿಕ್ಕಿದರೆ ನಿಂತಿತೇ ಅತ್ಯಾಚಾರ.
ಓರೆಗೆ ಹಚ್ಚಿ ತಡೆಯಬೇಕಿದೆ ಅನಾಚಾರ,
ತ್ವರಿತವೇ ನಿರ್ಬಂಧಿಸಿ ಸೌಂದರ್ಯ ಸ್ಪರ್ಧೆ ,ನೀಲಿ ಚಿತ್ರ ಪ್ರದರ್ಶನ ಆರೋಗ್ಯಕರ ನಡೆ ಬಿತ್ತರಿಸಲಿ ಪರದೆಗಳ ದರ್ಶನ
ಮತ್ತೇರಿದ ಹುಚ್ಚರ ವಿರುದ್ಧ ಮುಗಿ ಬೀಳಲ ಜನಾಂದೋಲನ
ಬಂದೂಕು ಹಿಡಿದು ಬಹಿರಂಗದಲ್ಲೇ ನಿರ್ಬಂಧಿಸಿ. ವಿಕೃತಿ
ಸುಡುವ ಕೆಂಡದಂತೆ ಬೆನ್ನ ಹಿಂದಿರಲಿ ಸದಾ ಜಾಗೃತಿ ಸಂಸ್ಕಾರದ ಬೇರಿನಲ್ಲಿ ಚಿಗುರಲಿ ಮೇರು ಸಂಸ್ಕೃತಿ
ಮಕ್ಕಳು ಯುವಕರಿಗೆ ತೇಜಸ್ವಿ, ಬೇಂದ್ರೆ ,ಶರತ್ ಚಂದ್ರ ,ಉತ್ಕೃಷ್ಟ ಮೌಲ್ಯಗಳ ಅರಿವಿನ ಬರಹ ಕೈಗಿಡಿ ಸದೃಢ ಸಮಾಜಕೆ ಭದ್ರಬುನಾದಿ ರೂಪದ ಕೈಪಿಡಿ.
ದ್ರೌಪದಿ ದು:ಖಿಸಲು ಬರನೀಗ ಗೋವಿಂದ , ಕಾಳಿ ,ದುರ್ಗೀಯರು, ಬರರು ನೀಚರ ಮರ್ಧಿಸಲು ಪುರಾಣ ಪುಣ್ಯ ಕಥೆ ಸೆಟೆದೇಳಿಸಲಿ ಹಣಿಯಲು ಅಂತ:ಶಕ್ತಿಯಿಂದ
ಕೋಟಿ ಕೋಟಿ ಸುರಿದು ರಾಧೆಯ ಕೃಷ್ಣನಿಗೆ, ಸೀತೆಯ ,ರಾಮನಿಗೆ ,ಗುಡಿ ಕಟ್ಟಿದರೇನು ಫಲ
ಅಂಗಣದಿ ಆಡಲಿಲ್ಲ ಬಾಲೆಯರಿಗೆ ನಿರ್ಭೀತ ನೆಲೆ,
ವಿಶ್ವಗುರುವಾಗುವ ಉದಾತ್ತ ಚಿಂತನೆಯ ಕೀರ್ತಿ ಕಳಸಕೆ ತಗ್ಗದಿರಲಿ ಬೆಲೆ
ನಿಲ್ಲಿಸಿ ಕ್ಲಬ್, ಬಾರು, ಜೂಜು ,ವ್ಯಸನ , ದರಬಾರಿನ ಅಡ್ಡೆ ಗಳ
ಅದಮ್ಮೋತ್ಸಾಹದ ಧೀಮಂತ ಚರಿತ್ರೆಯಿಂದ ವೃದ್ದಿಸಲಿ ಭವ್ಯ ದಿವ್ಯ ವಿಚಾರಗಳ
ಜಗವೇ ನಿಬ್ಬರಗಾಗಿ ನೋಡಲಿ ಭಾರತದ ನವ ನೀತಿಗಳ.
ಹೀಗೆ ಅತ್ಯಾಚಾರದ ಅನತಿ ಸ್ತರವ್ಯವಸ್ಥೆ ಬಗ್ಗೆ ಆಕ್ರೋಶದಿಂದ ಬರೆದಂತಹ ಕವನವಿದು ನಿರ್ಭಯರಂತಹ ಹಲವಾರು ಪ್ರಕರಣವಾದರು ನಿಲ್ಲದ ಅತ್ಯಾಚಾರಗಳು ಅರುಣ ಶಾನಭಾಗರ 40 ವರ್ಷ ಆಸ್ಪತ್ರೆ ಹಾಸಿಗೆ ನರಕ ಇದೆಲ್ಲಾ ನೋಡಿದಾಗ ಆಕ್ರೋಶದಿಂದ ರಕ್ತ ಕುದಿಯದೆ ಇರುತ್ತದೆಯೆ.
ಗಾಂಧೀಜಿಯವರು ಮದ್ಯ ರಾತ್ರಿಯಲ್ಲಿ ಹೆಣ್ಣೊಬ್ಬಳು ಸುರಕ್ಷಿತವಾಗಿ ನಡೆದು ಬಂದರೆ ಅವಾಗ ನಮಗೆ ನಿಜವಾದ ಸ್ವಾತಂತ್ರ್ಯ ಎನ್ನುತ್ತಾರ ಆದರೆ
ಮಧ್ಯರಾತ್ರಿ ಹೋಗಲಿ ಹಗಲು, ಹತ್ತು ಗಂಟೆಗೆ. ಜೀವಹಿಂಡುವ ನರಕ ಯಾತನೆಗಳ ನಡೆದ ಘಟನೆಗಳನ್ನು ಕವನದಲ್ಲಿ ಬರೆದಿದ್ದಾರೆ,
ದ್ರೌಪದಿಯ ದುಃಖಕ್ಕೆ ಗೋವಿಂದ ಬರನು ಕಾಳಿ ದುರ್ಗೆಯರು ಬರರು ನಮ್ಮ ಅಂತ ಶಕ್ತಿಯಿಂದ ನಾವೇ ಹಣಿಯಬೇಕು ಎನ್ನುತ್ತ ವಾಸ್ತವ ಸ್ಥಿತಿಗೆ ಜಾಗೃತಿಯ ಸಂದೇಶ ಬಿತ್ತಿದ್ದಾರೆ
ಪ್ರವಾಹ
ಮೃಢನ ಮುಡಿತೊರೆಯದೆ ಜಡೆ ಯಲಿ ಮರು ನೆಲೆಸು
ನೀ ಮನಿದರೆ ನಿರ್ವಂಶ ಜಲಧಾರೆ ಹೊರೆ ಇಳಿಸು
ಪ್ರವಾಹದಿಂದ ಆಗುವ ಅನಾಹುತಗಳು ಬರೆಯುತ್ತ ಗಂಗೆಯನ್ನು ಪ್ರಾರ್ಥಿಸುತ್ತಲೆ ಸಮಸ್ಸೆ ಹಾಗು ಪರಿಹಾರಗಳನ್ನು ಸೂಚಿಸಿದ್ದಾರೆ.
ಕಂಬನಿ
ಪರದೇಶದಿಂದ ಹಾರುತ ಜಿಗಿದು ಬಂದ ಹೆಮ್ಮಾರಿ ಅಟ್ಟಹಾಸದಲ್ಲಿ ನಗುತಿರೆ, ಮಸಣದೆಡಗೆ ಜೀವಸವಾರಿ,
ಕರೋನ ಆವರಿಸಿದ ಸಮಯದ ಚಿತ್ರಣವನ್ನು ಕಣ್ಣಿಗೆ ಕಡೆದಂತೆ ಚಿತ್ರಿಸಿದ್ದಾರೆ.
ಅಲೆಮಾರಿಗಳು
90 ದೇಶದಲಿ 32 ಕೋಟಿ ದಾಖಲೆಯೇ ಇಲ್ಲದ ನತದೃಷ್ಟರಿವರು ಶಾಶ್ವತ ಸೂರನು ಕಡತದಲ್ಲಿಯೇ ಕಟ್ಟಿ ಸಾಮಾಜಿಕ ನ್ಯಾಯದಲ್ಲಿ ಬಾರದವರು .
ಅಲೆಮಾರಿಗಳ ಸಂಕಟ ನೋವು ಮಾನವ ಜನಾಂಗದ ಸರ್ವ ರೀತಿಯ ಏಳಿಗೆಗೆ ಹಪಹಪಿಸಿದ್ದಾರೆ.
ಆರ್ತನಾದ
ಇದು ಕೂಡ ಅತ್ಯಾಚಾರ ವಿರೋಧದ ಕವನವಾಗಿದೆ
ಜಗದ ಗುರುವಾಗಿ ಅಹಿಂಸೆ ಬೋಧಿಸಿದ ನೆಲದಲ್ಲಿ ಕ್ರೌರ್ಯದ ಮರಣ ಮೃದಂಗ ಬಾರಿಸಿರುವಕ್ಕೆ ಅಕ್ರೋಶದ ಬುಗ್ಗೆಯನು ಹೊರಸೂಸಿದ್ದಾರೆ
ನಿರ್ಭಯ, ದಾನಮ್ಮ, ಪ್ರಿಯಾಂಕ, ಮನೀಷ ,ಅವನಿ ಗರ್ಭ ಸೇರೋ ಮೊದಲೇ ಚರಮಗೀತೆ ಬರೆದರು ಎಂದು ಅಂತರಂಗದಲಿ ಆಲಾಪಿಸಿದ್ದಾರೆ,
ಕಾಮ ಪಿಪಾಸುವಿಗೆ ಕಿಶೋರಿ ಎಂಬ ನಿಬಂಧವಿಲ್ಲ ವೃದ್ಧೆಯೋ ಹಸುಳೆಯೋ ತೃಷೆಗೆ ಮಿತಿ ಇಲ್ಲ ಸಂಸ್ಕಾರ ನಿಸ್ಸಾರಗೊಳಿಸಿ ಅಪಮೌಲ್ಯವಾಳುತಿದೆ
ಮನುಜ ಕುಲ ಕುರುಹೀನವಾಗುವ ಸದ್ದದು ಮೊಳಗುತ್ತಿದೆ ಎಂದು ಹಲುಬಿರುವದಕ್ಕೆ ಸಾಕ್ಷಿಕರಿಸಿದ ಸಾಲುಗಳಿಂದ ಎಚ್ಚರಿಕೆಯ ಸಂದೇಶವನು ನೀಡಿದ್ದಾರೆ.
ಅಂತಶಕ್ತಿ
ಪರ್ಜನ್ಯ ಹೋಮ ಮಾಡಿ ಮಳೆ ತರುವ ಕುಂಡವು ಮಂತ್ರ ತಂತ್ರ ಶಕ್ತಿ ಎದೆಯ ದ್ವೇಷ ಅಳಿಸದೇತಕೆ.
ಮೂಡನಂಬಿಕೆಗಳನ್ನು ಕಟುವಾಗಿ ವಿರೋಧಿಸುವ ಕವಿತ್ರಯು ವೈಜ್ಞಾನಿಕ ದಾಷ್ಟತೆಯನು ಈ ಸಾಲುಗಳಲ್ಲಿ ಪ್ರತಿಬಿಂಬಿತವಾಗಿದೆ.
ಮಾದರಿ ಬದುಕು
ಮನೆಯ ದಿನವು ತೊಳೆಯುವೆ ಕೋರೈಸಲು ಕಣ ಕಣ
ಮನವು ತೊಳೆದು ಮಾಡಿದೆನೆ ನಲಿವು ಪೂರೈಸುವ ತಾಣ ಎಂದು ಕೇಳಿಕೊಳ್ಳುವ ಕವಿಯತ್ರಿಯು ಅಂತರಂಗವನೆ ಓರೆಗಚ್ಚುವ ಸಾಲಿದು ಎನಿಸಿತೆನಗೆ.
ವಿಮೆ
ನನ್ನ ಇನಿಯನ ಮುಂದೆ ಇರಲಿ ಎನ್ನ ಸಾವು
ಅವನಿಲ್ಲದ ಚಣ ಬೇಡ ಬದುಕುವಾ ನೋವು.
ಇಲ್ಲಿ ಕವಿಯತ್ರಿಯು ತನ್ನ ಬಾಳ ಸಂಗಾತಿಯೊಂದಿಗಿನ ಅಧಮ್ಯವಾದ ಪ್ರೇಮವನ್ನು ಸುಂದರವಾದ ಪದಗಳಿಂದ ಅಲಂಕರಿಸಿರುವದು ಕಾಣಬಹುದು.
ನರಜನ್ಮ
ಯಾಕೆ ಶಾನೆ ಬೀಗುತ್ತಿಯವ್ವ ಚೆಂದನ ಚೆಲಿವೆಂತ ನೂಕುತ್ತಾರ ಒಂದಿನ ಮಣ್ಣಾಗ ಸತ್ತ ಹೆಣ ಅಂತ ಅಳಿದು ಹೋಗುವ ಈ ದೇಹದ ಕುರಿತ ತತ್ವಪದದ ಶೈಲಿಯ ಅನುಭೂತಿಯನು ಮನಗಾಣಿಸಿದ್ದಾರೆ.
ಏಕವಾಗಿಸು ಮನ
ಕಳಬೇಡ ಕೊಲಬೇಡ ಎಂದಿರುವೆ ಬಸವ,
ಹುಸಿ ನಡೆಯ ತಡೆಯೊ ಈ ನಿನ್ನ ಶಿಶುವ.
ಭಗವಾನ ಸ್ವರೂಪಿಯಾದ ಬಸವಣ್ಣನಲ್ಲಿ ಮೊರೆಯಿಟ್ಟಿದ್ದಾರೆ
‘ಭಾವಕ್ಕೆ ಎಲ್ಲಿದೆ ಬೆಲೆ
ಹೆಣ್ಣೊಳಗಿನ ಮನಕೆಲ್ಲಿದೆ ಸ್ವಾತಂತ್ರ್ಯ
ಪರರ ಆಣತಿಗೆ ಇಚ್ಛೆ ಮರೆತ ಯಂತ್ರ
ಗೊಂಬೆಯಾಗಿ ಕುಣಿವಳು ನುಡಿವ ತಾಳಕ್ಕೆ ಮಾತ್ರ.
ಹೆತ್ತವರ ಸುಪರ್ದಿಯಲ್ಲಿ ಸವೆದ ಗಳಿಗೆ
ಕೌಮಾರ್ಯದ ಕನಸುಗಳು ಉಳಿದವು ಒಳಗೆ
ವೃದ್ಯಾಪ ಅಡರಲು ಮಕ್ಕಳ ಕೈಯೊಳಗೆ.
ಸ್ತ್ರೀಯರು ಅನುಭವಿಸುವ ನಿತ್ಯ ನರಕದ ಸ್ವರೂಪವನ್ನು ಒಂದು ಮನಕಲಕುವ ಚಿತ್ರ ಕಡೆದಂತೆ ಪದಗಳ ಮೋಡಿಯಲ್ಲಿ ಚಿತ್ರಿಸಿದ್ದಾರೆ.
ಹೀಗೆ ಈ ಕವನ ಸಂಕಲನದಲ್ಲಿ ಹತ್ತು ಹಲವು ವಿಷಯಗಳನ್ನು ದಾಖಲಿಸುವಲ್ಲಿ
ಬಾಲೆಯರು, ಜನುಮದಾತರು, ಹೆಣ್ಣು, ಹಚ್ಚುವೆನು ದೀಪ, ಮುಂತಾದ ಕವನಗಳ ವಸ್ತು ಕವಿಯಿತ್ರಿಯ ಪರಿಸರದಲ್ಲಿ ನಡೆದ ಘಟನೆಗಳಾಗಿವೆ.
ಈ ಘಟನೆಗಳು ಕಣ್ಣಿಂದ ಕಂಡು ಒಳಗನ್ನಿಂದ ನೋಡಿ ವರ್ಣಿಸಲ್ಪಟ್ಟವುಗಳು. ಕಂಡದ್ದನ್ನು ಆತ್ಮಾನಂದ ಆಗುವಂತೆ ವರ್ಣಿಸುವುದೇ ಕಾವ್ಯ ಎಂಬ ಮಾತು ಶ್ರೀಮತಿ ಪಾರ್ವತಿ ದೇಸಾಯಿ ಅವರ ಕವನಗಳಿಗೆ ಚೆನ್ನಾಗಿ ಅನ್ವಯಿಸುತ್ತದೆ.
ಯಶೋದೆಯ ಅಳಲು, ಕಾದವಳು, ಗಾನಸುಧೆ, ಪೊರೆವ ತೊಟ್ಟಿಲು, ಮಧುರ ಮಂದಾರ, ಇರುಳು ಹೀಗೆ ಸುಮಾರು 89 ಕವಿತೆಗಳು ಒಂದಕ್ಕಿಂತ ಒಂದು ಅಂದ ಚಂದ ಅರ್ಥಪೂರ್ಣ, ಸಮಾಜಕ್ಕೆ ಸೂಕ್ತ ಸಂದೇಶ ಕೊಡುವ ಉತ್ಕೃಷ್ಟವಾದ ಸಂಕಲನವನ್ನು ಸಾಹಿತ್ಯ ಲೋಕಕ್ಕೆ ನೀಡಿದ ತಮಗೆ ಅಭಿನಂದಿಸುತ್ತ ಮತ್ತಷ್ಟು ಕೃತಿಗಳು ತಮ್ಮಿಂದ ಬರಲೆಂದು ಸದಾಶೆಯದಿಂದ ಹರಸುವೆನು.
ಮೇಡಂ ನಿಮ್ಮ ಕವನ ಸಂಕಲನಗಳನ್ನು ಬಹಳಷ್ಟು ಮಂದಿ ತುಂಬಾ ಚೆನ್ನಾಗಿ ವಿಮರ್ಶೆ ಮಾಡಿದ್ದಾರೆ ನಾನೆಲ್ಲವನ್ನು ಓದಿದ್ದೇನೆ.
ಆದರೆ ನನಗಷ್ಟು ಚೆನ್ನಾಗಿ ವಿಮರ್ಶೆ ಮಾಡಲು ಬರುವುದಿಲ್ಲ ನನಗೆ ಅನಿಸಿದಷ್ಟು ಬರೆದಿದ್ದೇನೆ ಹೇಗಿದೆ ನೀವು ತಿಳಿಸಬೇಕು.
ಸರೋಜಾ ಗಡಾದ.(ರೇವತಿ)