ರೇಡಿಯೋ ನೆನಪುಗಳ ಸುತ್ತ-ನಯನ ಭಟ್.

ಲಲಿತ ಪ್ರಬಂಧ

ರೇಡಿಯೋ ನೆನಪುಗಳ ಸುತ್ತ

ನಯನ ಭಟ್.

“ಸಂಪ್ರತಿ ವಾರ್ತಾಃ ಶ್ರೂಯನ್ತಾಂ , ಪ್ರವಾಚಕಃ ಬಲದೇವಾನಂದ ಸಾಗರಃ” ಹೀಗೊಂದು ಸಂಬೋಧನೆಯಿಂದ ಆರಂಭವಾಗುತ್ತಿತ್ತು ನನ್ನ ಬಾಲ್ಯದ ದಿನಚರಿ. ಹೌದು ! ರವಿ ರಶ್ಮಿ ನೇರವಾಗಿ ಮನೆಯ ಅಂಗಳದ ಮಧ್ಯ ಭಾಗವನ್ನು ಸ್ಪರ್ಶಿಸುವ ಮೊದಲೇ ನನ್ನ ಕಿವಿಗೆ ತಲುಪುತ್ತಿದ್ದ ಈ ವಾಕ್ಯ ಕೇಳಿದಷ್ಟು ಕೇಳಬೇಕು ಎಂದು ಅನ್ನಿಸುತ್ತಿತ್ತೇ ಹೊರತು ಎಂದಿಗೂ ಆಭಾಸವಾಗಿ ಕಂಡಿದ್ದಿಲ್ಲ ನನಗೆ. ಅಲ್ಲಿಂದ ಆರಂಭವಾಗುತ್ತಿದ್ದ ನನ್ನ ದಿನಚರಿ ರೇಡಿಯೋ ಜೊತೆಗಿನ ಒಡನಾಟದಿಂದ ಸಾಗುತ್ತಿತ್ತು ಎಂದು ಹೇಳಲು ಈಗಲೂ ಹೆಮ್ಮೆ ಇದೆ. ಈ ಹೆಮ್ಮೆಗೆ ಕಾರಣವೂ ಇದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಲ್ಯದ ದಿನಗಳನ್ನು ಕಳೆದ ನನಗೆ ಅದೇಕೋ ಅಲ್ಲಿನ ಆಧುನಿಕ ಜಂಜಾಟದ ನಡುವೆಯೂ ರೇಡಿಯೋ ಒಂದು ಆಪ್ತ ಮಿತ್ರನಂತಿದ್ದದ್ದು ಸುಳ್ಳಲ್ಲ. ಶಾಲೆಯಲ್ಲಿ ಬಿಡುವಿನ ವೇಳೆಯಲ್ಲಿ ರೇಡಿಯೋದ ಬಗೆಗಿನ ನನ್ನ ಒಲವನ್ನು ಮುಕ್ತವಾಗಿ ಹಂಚಿಕೊಂಡಾಗಲೆಲ್ಲಾ ನನ್ನದೇ ಓರಗೆಯರು ನಕ್ಕಿದ್ದೂ ಇದೆ. ಕಾರಣ ತಿಳಿದದ್ದು ಮಾತ್ರ ನಿಧಾನವೇ ಬಿಡಿ. “ಅಯ್ಯೋ ನೀ ಇನ್ನೂ ಅದೇ ಗುಂಗಿನಲ್ಲಿ ಇದ್ದೀಯಾ , ಸ್ವಲ್ಪ ಮುಂದೆ ಬಂದು ನೋಡು ಗೊತ್ತಾಗುತ್ತೆ” ಎಂದು ತಾವು ನಕ್ಕ ವಿಚಾರಕ್ಕೆ ಸಮಜಾಯಿಷಿ ನೀಡಿದ್ದರು ಸಹಪಾಠಿಗಳು.

ಜಡಿ ಮಳೆ ಸುರಿಯುವ ಜೂನ್ ಜುಲೈ ತಿಂಗಳಲ್ಲಿ ಬೆಂಗಳೂರು ಮಳೆ ಕಾಣುತ್ತಿತ್ತೋ ಇಲ್ಲವೋ ಅದು ಬೇರೆ ವಿಷಯ. ಆದರೆ ಆಕಾಶವಾಣಿ ಪ್ರಸಾರ ಮಾಡುತ್ತಿದ್ದ “ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ” ಈ ಹಾಡಂತೂ ನನ್ನ ಮನಸ್ಸಿಗೆ ಅದೇನೋ ನವ ಭಾವದ ಹರುಷದ ವರ್ಷಧಾರೆಯನ್ನೇ ಸುರಿಸುತ್ತಿದ್ದದ್ದು ಸುಳ್ಳಲ್ಲ. ಆನಂತರದಲ್ಲಿ ಪ್ರಸಾರವಾಗುತ್ತಿದ್ದ ಪ್ರದೇಶ ಸಮಾಚಾರ , ವಾರ್ತೆಗಳು , ಕೃಷಿ ಸಂದರ್ಶನ , ಚಲನಚಿತ್ರ ಧ್ವನಿ ಪ್ರಸರಣ ಹೀಗೆ ಹತ್ತು ಹಲವು ಕಾರ್ಯಕ್ರಮಗಳಿಗೆ ನಾ ಸಾಕ್ಷಿಯಾಗುತ್ತಿದ್ದೆ ಎಂದು ಹೇಳಿಕೊಳ್ಳಲು ಇಂದಿಗೂ ಖುಷಿ ನನಗೆ.

ರಾತ್ರಿ ಹೊತ್ತಿನಲ್ಲಿ ಹೊಟ್ಟೆ ತುಂಬಾ ಊಟ ಮಾಡಿ ಮಲಗುವಾಗ ಕಥೆ ಹೇಳು ಎಂದು ಪದೇ ಪದೇ ಅಮ್ಮನನ್ನು ಕಾಡುತ್ತಿದ್ದ ನನಗೆ ಅಮ್ಮ ಹೇಳಿದ ಒಂದು ಕಥೆ ಹೊಸತೊಂದು ಕನಸಿನ ಸೃಷ್ಟಿಗೆ ನಾಂದಿಯಾಯಿತು ಎಂದರೆ ತಪ್ಪಾಗಲಾರದು. ಹೌದು , ಅಮ್ಮ ಹೇಳಿದ ಮಾತುಗಳು..” ಆನು ಕೂಡ ರೇಡಿಯೋದ ಅಭಿಮಾನಿ ನೋಡು. ಬಡತನಕ್ಕೆ ಯಾವ ಉದ್ಯೋಗ ಆದರೆ ಎಂತಾತು ? ಮರ್ಯಾದೆಲಿ ಜೀವನ ಮಾಡಿರೆ ಸಾಕು ಅಲ್ದಾ , ಅದಕ್ಕೆ ಎಂಗ ಬಾಲ್ಯದ ಆ ದಿನಗಳಲ್ಲಿ ಬೀಡಿ ಕಟ್ಟುವ ಕಾಯಕಕ್ಕೆ ಶರಣಾದೆಯಾ. ಎಷ್ಟೋ ಜನ ಹೇಳಿದವು ಇದ್ದವು ಬೀಡಿ ಕಟ್ಟುದು ನಮ್ಮಂತವರಿಗೆ ಅಲ್ಲ ಹೇಳಿ ? ಆದರೆ ಎಂತಾತು ಅದು ಕೂಡ ಒಂದು ವೃತ್ತಿಯೇ ಅಲ್ದಾ. ಅಷ್ಟಕ್ಕೂ ಹೇಳಿದವು ಹೊಟ್ಟೆ ತುಂಬುಸುಲೆ ಬತ್ತವೇನು ? ಇಲ್ಲೆ ಅಲ್ದಾ? .. ಹೊಟ್ಟೆ ತುಂಬಿದವರ ಗತ್ತು ನೋಡೆಕ್ಕು ಆಗೆಲ್ಲಾ..ಪಾಪದವು ಹೇಳಿರೆ ಎಂತ ಬೇಕಾರು ಮಾಡ್ಯಾರು ಆಗಿನ ಕಾಲಲ್ಲಿ. ಪಾಪ ಎನ್ನ ಅಪ್ಪ ಬಡತನ ಹೇಳಿ ಯಾರತ್ರಾ ಆದ್ರೂ ಸಹಾಯ ಕೇಳುಲೆ ಹೇಳಿ ಹೋದರೆ “ಅಯ್ಯೋ ಹಣ ಈಗ ಕೈಲಿತ್ತು ಆದರೆ ನೋಡು ಬಪ್ಪ ವಾರ ಮಗಳ ಮದುವೆ ಹೇಳಿ ಒಂಚೂರು ಅದೂ ಇದೂ ಹೇಳಿ Purchasing ಗೆ ಹೇಳಿ ಎನ್ನಾಕೆಯೂ ಮಗಳು ಈಗಷ್ಟೇ ಪೇಟೆಗೆ ಹೋದವು” ಎಂದು ಹೇಳಿ ಕೈಕೊಡುವ ಜನಕ್ಕೆ ಏನೂ ಕಡಿಮೆ ಇತ್ತಿಲ್ಲೆ” ಎಂದು ಹೇಳಿ ಕಂಗಳನ್ನು ತುಂಬಿಕೊಂಡ ಆ ಕ್ಷಣಗಳು ಇಂದಿಗೂ ನನ್ನ ಮುಂದೆ ಹಸಿರಾಗಿಯೇ ಇದೆ. ಮತ್ತೂ ಮುಂದುವರೆದು “ಹಾ ನಿಂಗೆ ಗೊಂತಿದ್ದಾ ನಯನಾ , ಆನು ಒಂದರಿ ಮಂಗಳೂರು ಆಕಾಶವಾಣಿಗೆ ಧ್ವನಿ ಮುದ್ರಣ ಹೇಳಿ ಹೋಗಿತ್ತಿದೆ. ಒಂದು ಚಂದದ, ಚಿತ್ತಕ್ಕೆ ಇಷ್ಟವಾದ ಭಕ್ತಿಗೀತೆ ಕೂಡ ಹಾಡಿತ್ತಿದೆ. ವಿಶ್ವಾಸ ಇತ್ತು ಆಯ್ಕೆ ಅಕ್ಕು ಹೇಳಿ..ಭರವಸೆಯ ದೀಪ ಆರಿದ್ದೂ ಇಲ್ಲೆ ನೋಡು.  ಎನ್ನ ಗಾಯನದ ರೀತಿ ಅಲ್ಲಿನ ಜನಕ್ಕೆ ಮೆಚ್ಚುಗೆ ಆಗಿ ಎನ್ನ ಆಯ್ಕೆ ಮಾಡಿತ್ತಿದವು ಕೂಡ. ಒಂದು ವಾರಲ್ಲಿ ಒಂದು ಪತ್ರ ಕೂಡ ಬಂದಿತ್ತು “ಇನ್ನೊಂದು ಬಾರಿ ಬಂದು ನೂರು ರೂಪಾಯಿ ಪಾವತಿಸಿ ಧ್ವನಿ ಮುದ್ರಣ ಮಾಡಿಕೊಂಡು ನಿಮ್ಮ ಸದಸ್ಯತ್ವವ ಧೃಡಗೊಳಿಸಿ” ಹೇಳಿ.  ಆದರೆ ಎಂತಾತೋ ಏನೋ ? ಮತ್ತೊಮ್ಮೆ ಹೋಪಲೆ ಹಣ ಎಲ್ಲಿತ್ತು.. ಹತ್ತಿಪ್ಪತ್ತು ರೂಪಾಯಿಗೇ ವಾರಗಟ್ಟಲೆ ದುಡಿವ ಜೀವಕ್ಕೆ ನೂರು ರುಪಾಯಿಗೆ ಭಾರಿ ಬಡತನ ” ಎಂದು ಹೇಳಿ ಮೌನವಾದಾಗ ಅವಳ ಮುಖದಲ್ಲಿ ಅದೇನೋ ನಿರ್ಲಿಪ್ತ ಭಾವ. ಸಿಕ್ಕ ಅವಕಾಶವನ್ನು ಕಳೆದುಕೊಂಡ ನೋವಿರಬೇಕು ಮತ್ತೆ ಕೆದಕಲು ಹೋಗದೆ ನಿಟ್ಟುಸಿರಿಡುತ್ತಾ ನಿದಿರೆಗೆ ಜಾರಿದೆ. ಮಾತೃ ಒಡಲಿಗೆ ನನ್ನ ಮನದ ವೇದನೆ ಸಂವೇದಿಸಲ್ಪಟ್ಟಿತೇನೋ ಎಂಬಂತೆ ಮೃದುವಾಗಿ ನನ್ನ ತಲೆಯನ್ನು ಸವರಿ ಹಣೆಗೊಂದು ಹೂಮುತ್ತಿಕ್ಕುತ್ತಾ ಜೋಗುಳ ಹಾಡಿದಳು.

ರೇಡಿಯೋವನ್ನು ಸಂಗಾತಿಯಾಗಿ ಕಾಣುತ್ತಿದ್ದ ನನಗೆ ಆ ಸಾಂಗತ್ಯ ಸುಖವನ್ನು ಪ್ರತ್ಯಕ್ಷವಾಗಿ ಅನುಭವಿಸಬೇಕೆಂಬ ನವನವೀನ ಆಸೆಯೊಂದು ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಸದ್ದಿಲ್ಲದೇ ತನ್ನ ಬೇರನ್ನು ಭದ್ರಗೊಳಿಸಿತ್ತು. ಆಕಾಶವಾಣಿಯನ್ನೊಮ್ಮೆ ಭೇಟಿ ಮಾಡಿ, ಅಲ್ಲಿನ ಇಂಚಿಂಚನೂ ಪ್ರತ್ಯಕ್ಷವಾಗಿ ಕಾಣಬೇಕೆಂಬ ಆಕಾಂಕ್ಷೆ ದಿನೇ ದಿನೇ ಬೆಳೆಯುತ್ತಾ ಹೋಯಿತು, ಓಡುತ್ತಿರುವ ಕಾಲದಂತೆಯೇ..

ದಿನಗಳು ಕಳೆದು , ತಿಂಗಳುಗಳು ಉರುಳಿ ವರ್ಷಗಳು ಧಾವಂತದಿಂದ ಒಂದರ ಹಿಂದೆ ಒಂದರಂತೆ ಮುನ್ನುಗ್ಗಿದವು. ಬೆಂಗಳೂರಿನ ಆ ಗಡಿಬಿಡಿ ಜೀವನ ಅದೇನು ಸುಖ ನೀಡುತ್ತದೆಯೋ ನನಗಂತೂ ಇಂದಿಗೂ ಪ್ರಶ್ನೆಯಾಗಿಯೇ ಉಳಿದ ಪ್ರಶ್ನೆ. ಔದ್ಯೋಗಿಕ ಹಾಗೂ ಆರ್ಥಿಕ ನೆಲೆಯಲ್ಲಿ ಭದ್ರವಾದ ಆಸರೆಯನ್ನು ನೀಡುವ ಸಿಟಿ ಭಾವನಾತ್ಮಕ ವಿಚಾರಕ್ಕೆ ಬಂದಾಗ ತಲೆತಗ್ಗಿಸಿ ನಿಲ್ಲಲೇಬೇಕು ಎಂಬ ವಾದಕ್ಕೆ ನನ್ನದಂತೂ ಪೂರ್ಣ ಮನದ ಸಮ್ಮತವಿದ್ದೇ ಇದೆ. ಅಂತಹದೊಂದು ಅಂಬೋಣಕ್ಕೆ ನಾವುಗಳು ಬಂದದ್ದೇ ತಡ ವಾಹನಗಳಿಂದ ಕ್ಕಿಕ್ಕಿರದ ಬೃಹತ್ ಪಟ್ಟಣದಿಂದ ಹೊರಬಂದು ನಮ್ಮದೇ ಹುಟ್ಟೂರಿಗೆ ಬಂದು ನೆಲೆಸುವ ನಿರ್ಧಾರವನ್ನು ಮಾಡಿದ್ದು ಮಾತ್ರವಲ್ಲದೆ ಅದನ್ನು ಕಾರ್ಯರೂಪಕ್ಕೆ ತಂದೆವು ಕೂಡ.. ಅಚ್ಚರಿ ಎಂದರೆ ನಾ ಬೆಳೆದಂತೆ ನನ್ನ ರೇಡಿಯೋ ಪ್ರೀತಿ ಕೂಡ ಬೆಳೆಯುತ್ತಲೇ ಬಂತು ಎಷ್ಟೇ ಆಧುನೀಕತೆಯ ಬಿರುಗಾಳಿ ಬೀಸಿದರೂ ಕದಲದೇ ಇರುವಷ್ಟು. ಆ ವೇಳೆಗಾಗಲೇ ಸಾಕಷ್ಟು ಬದಲಾವಣೆಗಳನ್ನು ಕೂಡ ಆಕಾಶವಾಣಿ ಪಡೆದುಕೊಂಡಾಗಿತ್ತು. ಕಾರ್ಯಕ್ರಮದ ಪ್ರಸಾರದಲ್ಲಿ , ನವನವೀನ ಕಾರ್ಯಕ್ರಮಗಳ ಸರಣಿ ಪ್ರಸರಣದಲ್ಲಿ , ಹೊಸ ಸ್ಪರ್ಧೆಗಳ ಮೂಲಕ ಕಲಾ ಪ್ರೋತ್ಸಾಹದಲ್ಲಿ….. ಹೀಗೆ ಹತ್ತು ಹಲವು ಬದಲಾವಣೆಗಳಿಗೆ ನಾನೂ ಕೂಡ ಬದ್ಧ ಎಂಬಂತೆ ತೋರಿಸಿಕೊಟ್ಟಿತ್ತು ಆಕಾಶವಾಣಿ.

ರೇಡಿಯೋ ಜೊತೆಗಿನ ಪ್ರೀತಿಯನ್ನಷ್ಟೇ ಹೊಂದಿದ್ದ ನನಗೆ ರೇಡಿಯೋ ಜೊತೆಗೆ ಸಂಬಂಧ ಬೆಳೆಸುವ ಸುಯೋಗ ಕೂಡ ಭಗವಂತನ ಕೃಪೆಯಿಂದಲೆ ಬಂದೊದಗಿತು ಎನ್ನಬಹುದು. ಮಂಗಳೂರು ಆಕಾಶವಾಣಿ ಪ್ರಸಾರ ಮಾಡುತ್ತಿದ್ದ ‘ವನಿತಾ ವಾಣಿ’ ಯಲ್ಲಿ ಅವರೇ ಆಹ್ವಾನಿಸಿದ್ದ ‘ವ್ಯಾನಿಟೀ ಬ್ಯಾಗ್’ ಕುರಿತಾದ ಕಿರು ಬರಹಕ್ಕೆ ನಾ ಕಳುಹಿಸಿದ್ದ ಬರಹ ಜೊತೆಯಾದದ್ದು ಸಂತಸದ ವಿಚಾರವೇ ಸರಿ. ಆ ನಂತರದ ದಿನಗಳಲ್ಲಿ ಕೂಡ ನಾನು ಬಿಡುವಿಲ್ಲದ ಸಮಯವನ್ನು ಕೂಡ ಬಿಡುವು ಮಾಡಿಕೊಂಡು ರೇಡಿಯೋದ ಪ್ರತಿಯೊಂದು ನನ್ನಿಷ್ಟದ ಕಾರ್ಯಕ್ರಮಗಳಿಗೆ ಮೀಸಲಿರಿಸಲು ಬಯಸುತ್ತಿದ್ದದ್ದಕ್ಕೆ ಕಾರಣ ರೇಡಿಯೋ ‘ನನ್ನ ಜೀವದ ಸಂಗಾತಿ’ ಎಂಬ ಕಾರಣಕ್ಕೆ.

ಇತ್ತೀಚೆಗಿನ ಎರಡು ಮೂರು ವರುಷಗಳಿಂದಂತೂ ರೇಡಿಯೋ  ಜೊತೆಗಿನ ನನ್ನ ನಂಟು ಬಹಳಷ್ಟು ಗಾಢತೆಯನ್ನು ಹೊಂದಿತ್ತು. ನವ್ಯ ತರಹದ ಬಹಳಷ್ಟು ಕಾರ್ಯಕ್ರಮಗಳಿಗೆ ಆಕಾಶವಾಣಿ ನಾಂದಿ ಹಾಡಿದಾಗೆಲ್ಲಾ ಹಿಗ್ಗಿ ಸಂತೋಷದಿಂದ ಎದೆಗಪ್ಪಿಕೊಳ್ಳುತ್ತಿದ್ದೆ ಅದರ ಪ್ರತಿಯೊಂದು ರಸಭಾವಗಳನ್ನೂ ಅತ್ಯಾಪ್ತತೆಯಿಂದ.

ಮುದ್ದಣ ಮನೋರಮೆಯರ ಸಲ್ಲಾಪದ ‘ಶ್ರೀರಾಮಾಶ್ವಮೇಧಂ’ , ರತ್ನಾಕರವರ್ಣಿಯ ‘ಭರತೇಶ ವೈಭವ’ , ‘ವಚನ ಸಾಹಿತ್ಯ’ ಪ್ರವಚನದಂತಹ ಧಾರ್ಮಿಕ ನೆಲೆಯ ವಿಚಾರಗಳು , ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಕಾವ್ಯಗಳ ಆಖ್ಯಾನ, ಯಕ್ಷಗಾನ ತಾಳಮದ್ದಳೆ , ಸಾಧಕರೊಂದಿಗೆ ಸಂದರ್ಶನದಂತಹ ಹತ್ತು ಹಲವು ವಿಚಾರಗಳಿಗೆ ನಾನು ಅದೆಷ್ಟೇ ಒತ್ತಡದಲ್ಲಿ ಇದ್ದರೂ ಕೂಡ ಬಿಡುವು ಮಾಡಿಕೊಂಡು ಚಾಚೂ ತಪ್ಪದೆ ಕಿವಿಯಾಗುತ್ತಿದ್ದೆ.

ಉಳಿದಂತೆ ಆಕಾಶವಾಣಿ ಬೆಂಗಳೂರಿನಿಂದ ಪ್ರಸಾರವಾದ ‘ಕಥಾ ಕಣಜ’ ದಲ್ಲಿ ಭಾಗವಹಿಸಿದ ತೃಪ್ತಿ ನನಗಿದೆ ಅಲ್ಲದೇ ಆಕಾಶವಾಣಿ ಕೇಂದ್ರವನ್ನು ಭೇಟಿ ಮಾಡುವ ಕನಸೂ ಕೂಡ ಭಗವಂತನ ಕೃಪೆಯಿಂದ ನನಸಾಗಿದ್ದು ನನ್ನ ಬದುಕಿನ ಹೆಮ್ಮೆಯ ಸಂಗತಿಗಳ ಪೈಕಿ ಒಂದು. ಕಳೆದ ವರ್ಷವಷ್ಟೇ ನಾ ಬರೆದ ಕವನಗಳು ಇದೇ ಆಕಾಶವಾಣಿ ಮಂಗಳೂರು ಕೇಂದ್ರದಿಂದ ಪ್ರಸಾರವಾಗಿದ್ದು ಕೂಡ ಸಂತಸದ ವಿಚಾರ ನನ್ನ ಪಾಲಿಗೆ. ಇನ್ನು ಆಕಾಶವಾಣಿ ಭೇಟಿಯ ಕನಸು ಕೂಡ ಸಾಕಾರಗೊಂಡಿತ್ತು. ಆಕಾಶವಾಣಿ ಆಯೋಜಿಸಿದ್ದ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನನಗೆ ದ್ವಿತೀಯ ಬಹುಮಾನ ಬಂದಾಗ ನಿಜಕ್ಕೂ ಖುಷಿಯಿಂದ ಹಿಗ್ಗಿದ್ದೆ. ಇಂತಹ ಒಂದು ಸುಯೋಗ ನೀಡಿದ್ದ ಭಗವಂತನಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದೆ.

ಬರಹಕ್ಕೆ ಸಂದ ಬಳುವಳಿಯನ್ನು ನನ್ನದಾಗಿಸಿಕೊಳ್ಳುವ ಆಶೆಯಿಂದ ಮಂಗಳೂರು ಆಕಾಶವಾಣಿಗೆ ಸಾಗಿದ ನನ್ನ ಹೆಜ್ಜೆಗಳಿಗೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಸಾರ್ಥಕ್ಯ ಭಾವವಿದೆ. ಮಾತ್ರವಲ್ಲದೆ ರೆಕಾರ್ಡಿಂಗ್ ರೂಂನಲ್ಲಿ ಕುಳಿತು ಕಥೆಯ ವಾಚನದಲ್ಲಿ ಭಾಗಿಯಾದಾಗ ಅದೇನನ್ನೋ ಸಾಧಿಸಿದ ಖುಷಿ ನನ್ನ ಪಾಲಿಗೆ. ಮನಸಾರೆ ತುಟಿಯಂಚಿನಲ್ಲಿ ನಗು ಹರಿಸುತ್ತಾ ನನಗಾದ ಸಂಭ್ರಮವನ್ನು ಅಭಿವ್ಯಕ್ತಿ ಪಡಿಸಿದ್ದೆ.  ಆದರೆ ಬಾಲ್ಯದ ದಿನಗಳಲ್ಲಿ ಅಮ್ಮ ಹೇಳಿದ ಆಕಾಶವಾಣಿಗೂ ಪ್ರಸ್ತುತ ಕಂಡ ಆಕಾಶವಾಣಿಗೂ ಬಹುತೇಕ ವ್ಯತ್ಯಾಸವಿತ್ತು. ಊರಗಲದ ಕೊಡೆ ಸಿಗ್ನಲಿಗೆಂದು ಹಾಕಿ , ಪ್ರವೇಶ ದ್ವಾರದ ಸುತ್ತಲೂ ಹಸಿರು ಲತೆಗಳಿಂದ ಅಲಂಕೃತಗೊಂಡ ಸುಂದರ ಪ್ರವೇಶ ದ್ವಾರ , ಒಳಗೆ ಕಾಲಿಡುತ್ತಿದ್ದಂತೆ ಕುಳಿತುಕೊಳ್ಳಲು ಬಹಳಷ್ಟು ಆಸನ ವ್ಯವಸ್ಥೆ , ರೆಕಾರ್ಡಿಂಗ್ ರೂಂ ನಲ್ಲಿ ಕೂಡ ಅಮ್ಮ ಹೇಳಿದ ವರ್ಣನೆ ಕಾಣದೇ ಹೋದದ್ದು ಏಕೋ ಮನಸ್ಸನ್ನು ಕಾಡುತ್ತಿರುವ ಸಂಗತಿ ಆಗಿದೆಯಾದರೂ ಕೂಡ ಕಾಲದ ಪ್ರಭಾವ ತನ್ನ ತೀವ್ರತೆಯನ್ನು ಎಲ್ಲಿ ಬಿಟ್ಟಿಕೊಟ್ಟೀತು ಎಂಬ ಪ್ರಶ್ನೆಗೆ ಮತ್ತದೇ ಕಾಲ ಉತ್ತರವಾಗಿ ನಿಂತಿತ್ತು. ಜನರ ಆಸಕ್ತಿ ಕುಸಿಯಿತಾ ಈ ವ್ಯವಸ್ಥೆಯ ಮೇಲೆ ಎಂಬ ಅನುಮಾನದ ಸಣ್ಣ ಕಿಡಿಯೊಂದು ಮನದಿ ಭುಗಿಲೆದ್ದು ಈಗಲೂ ನನ್ನ ನಿದಿರೆ ಕೆಡಿಸುತ್ತಿರುವುದು ಸುಳ್ಳಲ್ಲ. ‘AIR’ ಎಂಬ ಹೆಸರಿನಿಂದ ತನ್ನ ಹಲವಾರು ಮಜಲುಗಳನ್ನು ದೇಶದ ನಾನಾ ಕಡೆಗಳಲ್ಲಿ ಬಿತ್ತಿದ್ದ ಇಂತಹ ಒಂದು ಉತ್ತಮ ವ್ಯವಸ್ಥೆ ಜನರ ಅಂಗೈಯಿಂದ ಏಕೆ ಹೊರಗುಳಿಯುತ್ತಿದೆ ಎಂಬುದೇ ನನ್ನನ್ನು ಅತಿಯಾಗಿ ಕಾಡುವ ಪ್ರಶ್ನೆ ? ನಮ್ಮದೇ ಊರಿನ ಸುತ್ತ ಮುತ್ತ ರೇಡಿಯೋ ಸಮೀಕ್ಷೆ ಎಂದು ಕೈಗೊಂಡ ಪಕ್ಷದಲ್ಲಿ ಬೆರಳೆಣಿಕೆಯಷ್ಟು ಜನರ ಮನೆಯಲ್ಲಿ ನಿಜವಾದ ರೇಡಿಯೋ ಕಾಣಬಹುದೇ ಹೊರತು ಎಲ್ಲೆಲ್ಲೂ ಆವರಿಸಿದ ಆಧುನಿಕ ಸಲಕರಣೆಗಳ ನಡುವೆ ರೇಡಿಯೋದಂತಹ ಉತ್ತಮ ಜಾಲವೊಂದು ಕಣ್ಮರೆಯಾಗಿರುವುದು ತೀರಾ ಅಚ್ಚರಿಯನ್ನು ತಂದರಾದರೂ ಅದು ವಾಸ್ತವ ಸತ್ಯ. ಅಂಗೈಯಲ್ಲೇ ಜಗತ್ತನ್ನು ಪರಿಚಯ ಮಾಡುವ ಇಂದಿನ Smart phone ಗಳೇನಿದೆಯೋ ಅದರಲ್ಲಿ ರೇಡಿಯೋ ಕೇಳುವುದಕ್ಕಿಂತ ನಿಜವಾದ ಆ ಪುಟ್ಟ ಪೆಟ್ಟಿಗೆಗೆ ಬ್ಯಾಟರಿ ಹಾಕಿ ಏರಿಯಲ್ ನ ಸಹಾಯದಿಂದ ರೇಡಿಯೋ ಕೇಳುತ್ತಾ ಬಾನು ಉಲಿಯುವ ಹತ್ತು ಹಲವು ಸಂಗತಿಗಳಿಗೆ ತಲೆ ತೂಗುವ ಆ ಮಜವೇ ಬೇರೆ ಎದೆ ಉಬ್ಬಿಸಿ ಹೇಳಲುತ್ತೇನೆ. ಕಾರಣ ಆ ಸಂತೋಷವನ್ನು ಮಾತಿನಲ್ಲಿ ಬಣ್ಣಿಸಲಾರೆ.. ಅನುಭವಿಸಿದ ಮನಸ್ಸಿನ ಅವ್ಯಕ್ತ ಸಂತೃಪ್ತ ಭಾವ ಅದು.

ಅಂತೂ ಕಾಲ ಬದಲಾಗಿದೆ ಎಂದು ಹೇಳುವ ಜನರೂ ಕೂಡ ಬದಲಾಗುತ್ತಿದ್ದಾರೆ ಎಂಬುದಂತೂ ನಾ ಒಪ್ಪುತ್ತೇನೆ. ವಾಸ್ತವದಲ್ಲಿ ಬದಲಾದದ್ದು ಕಾಲವೇ ಆದರೂ ಕೂಡ ಜನರೇ ತಮ್ಮ ಮನಸ್ಸಿನಲ್ಲಿ ಕೂಡ ಹಲವಾರು ಬಗೆಯ ಪರಿವರ್ತನೆಗಳನ್ನು ಹುಟ್ಟಿ ಹಾಕಿದ್ದಾರೆ ಎಂಬುದು ಕೂಡ ಸತ್ಯವಷ್ಟೇ.  ವೃಥಾ ಕಾಲವನ್ನು ದೂಷಿಸುವುದು ಅರ್ಥವಿಲ್ಲದ ಮಾತು ಅಷ್ಟೇ. ಹಾಗೆಂದ ಮಾತ್ರಕ್ಕೆ ಬದಲಾವಣೆಗೆ ಒಗ್ಗಿಕೊಳ್ಳುವ ಇರಾದೆ ಅತೀ ಅಗತ್ಯ ಎಂದು ನನಗೆ ಅಷ್ಟಾಗಿ ತೋರುವುದಿಲ್ಲ ಕಾರಣ ಬದಲಾಗದೇ ಹೋದರೂ ಕೂಡ ನನ್ನ ಜೀವನದ ನಿರಂತರತೆ ಅದು ಧಕ್ಕೆ ತಂದೀತು ಎಂಬ ಅನುಮಾನವಾಗಲಿ ಅಥವಾ ಭಯವಾಗಲಿ ನನಗಿಲ್ಲ. ಹಾಗೆಂದು ಬದಲಾಗುವುದಿಲ್ಲ ಎಂದೂ ನಾ ಹೇಳಲಾರೆ , ಎಲ್ಲಿ ಬದಲಾವಣೆ ತೀರಾ ಅಗತ್ಯ ಎಂದು ತೋರುತ್ತದೆಯೋ ಅಲ್ಲಿ ಮಾತ್ರ ಬದಲಾವಣೆಗೆ ಮುಂದಾಗುವುದನ್ನು ನಾ ರೂಢಿಸಿಕೊಳ್ಳುತ್ತೇನೆಯೇ ಹೊರತು ಎಲ್ಲರೂ ಬದಲಾದರು ನಾ ಕೂಡ ಅವರಂತೇ ಆಗಲಿಚ್ಛಿಸುವೆ ಎಂದು ನನ್ನೊಳಗಿನ ನನ್ನತನವನ್ನು ಸುಖಾಸುಮ್ಮನೆ ಹರಾಜು ಹಾಕಲು ನಾ ಎಂದಿಗೂ ಸಿದ್ಧಳಿಲ್ಲ.  ನನ್ನದೇ ಓರಗೆಯರ , ನೆಂಟರಿಷ್ಟರ ಬಳಿ ರೇಡಿಯೋ ಕೇಳುತ್ತೇನೆ ಅಂದಾಗ ಮುಖದಲ್ಲಿ ಅದೇನೋ ಒಂಥರಾ ಅಸಮಾಧಾನದ ಛಾಯೆ ಹಾದು ಹೋಗುವುದನ್ನು ನನ್ನ ಕಂಗಳು ಗಮನಿಸಿದರೂ ಕೂಡ ನನಗೇನೂ ಅನ್ನಿಸುವುದಿಲ್ಲ. ಚಂಚಲ ಬದುಕಿನ ಓಟದಲ್ಲಿ ನನ್ನೊಳಗಿನ ಸ್ಥಿರತೆ ಕೊಂಚವೂ ಅಲುಗಾಡದೆ ಭದ್ರವಾಗಿ ನೆಲೆನಿಂತಿದೆ ಎನ್ನುವ ಸ್ವಂತಿಕೆಯ ಭಾವವದು. ಬದುಕು ನಾವು ಬಯಸಿದಂತೆ ಬದುಕಲ್ಪಟ್ಟಾಗಲೇ ನಿಜವಾಗಿ ಬದುಕುತ್ತದೆಯೇ ವಿನಃ ಅವರಿವರು ಮೆಚ್ಚುವಂತೆ ಬದುಕಿದಾಗ ಅಲ್ಲ.ಅಷ್ಟಕ್ಕೂ ಹಾಗೆ ಬದುಕುವುದರಲ್ಲಿ ಅರ್ಥವೇನಾದರೂ ಇದೆಯೇ ????

ಹೂವೊಂದು ಅರಳಿ ಯೌವ್ವನದ ಹೊಸ್ತಿಲಲ್ಲಿ ಸೌಗಂಧ ಪಸರಿಸಬೇಕಾದರೆ ಅದರ ಮೂಲ ಇರುವುದು ಅದರ ಬೇರು ಮತ್ತು ಅದು ಜನ್ಮ ನೀಡಿದ ಚಿಗುರಿನಲ್ಲಿ. ಚಿಗುರೇ ಇಲ್ಲದೇ ಫಸಲು ಎಲ್ಲಿಂದ ಬಂದೀತು ಎಂಬ ಕನಿಷ್ಠ ಜ್ಞಾನ ಕೂಡ ಇಂದಿನ ಆಧುನೀಕತೆಯ ಮನಸ್ಸುಗಳಲ್ಲಿ ಮರೆಯಾಗುತ್ತಿದೆಯೋ ಎಂಬ ಸಂಶಯ ಇದೀಗ ಸುಳಿಯಲಾರಂಭಿಸಿದೆ ನನ್ನೊಳಗಿನ ಅಂತರಾಳದಲ್ಲಿ. ಸ್ವಾತಂತ್ರ್ಯ ಹೋರಟಕ್ಕೆಂದೇ ಗಾಂಧಿಯವರು ಭಾರತಕ್ಕೆ ಬಂದಿಳಿದ ಸಂದರ್ಭದಲ್ಲಿ , ಗೋಪಾಲಕೃಷ್ಣ ಗೋಖಲೆಯವರು , “ಭಾರತದ ಸ್ವಾತಂತ್ರ್ಯ ಪ್ರತಿಯೊಬ್ಬ ಭಾರತೀಯನ ಕನಸು. ಅದಕ್ಕಾಗಿ ಇಂದು ದೇಶದ ಉದ್ದಗಲಕ್ಕೂ ಹೋರಾಟದ ಕೆಚ್ಚು ಮೇಳವಿಸಿದೆ. ಯಾವುದಕ್ಕೇ ಆಗಿರಲಿ ಹೋರಾಟ ಮಾಡುವ ಮುನ್ನ ಅದರ ಕುರಿತಾದ ಸೂಕ್ಷ್ಮ ಅವಲೋಕನ ಮಾಡುವುದು ಅತೀ ಮುಖ್ಯ ಎಂದು ತಿಳಿ ಹೇಳುತ್ತಾ , ಭಾರತದ ಗ್ರಾಮಗಳಲ್ಲಿ ಸಂಚಾರ ಮಾಡಿ ಬಾ” ಎಂದು ತಿಳಿ ಹೇಳುತ್ತಾರೆ. ಕಾರಣ ಅಭಿವೃದ್ಧಿಯ ಮೂಲ ಇರುವುದು ಕೊರತೆಯಲ್ಲಿ ತಾನೇ ?

ಆದರೆ ಇಂತಹ ಸತ್ಯಾಂಶಗಳ ಮಡಿಲು ಇಂದೇಕೋ ನಲುಗುತ್ತಿರುವ ಭಾಸ ಆಗುತ್ತಿದೆ ನನಗೆ. ಹೊಸತು , ನವ್ಯತೆ ಎಂದೆಲ್ಲಾ ಉಸುರುತ್ತಾ ಅನ್ವೇಷಣಾ ಪಥದಲ್ಲಿ ಸಾಗುತ್ತಿರುವ ಮನುಜ ತಾನು ಬೆಳೆದು ಬಂದ ಹೆಜ್ಜೆ ಗುರುತುಗಳನ್ನು ಮರೆಯುತ್ತಿದ್ದಾನೆ ಎಂಬುದು ನನಗಂತೂ ಕ್ಲೇಶಕರ ಸಂಗತಿ. ತಂತ್ರಜ್ಞಾನ , ಯಂತ್ರೋಪಕರಣಗಳು ಬಹು ಹಿಂದಿನಿಂದಲೂ ಬಳಕೆಯಲ್ಲಿದ್ದು ಅವುಗಳನ್ನೇ ಮೂಲವಾಗಿ ಇರಿಸಿಕೊಂಡು ಸಾಕಷ್ಟು ಬದಲಾವಣೆ ಇಂದು ನಡೆಯುತ್ತಿವೆ ಎಂಬುದು ಒಪ್ಪಲೇಬೇಕಾದ ಸತ್ಯವಷ್ಟೇ. ಆದರೂ ನದಿ ದಾಟಿದ ನಂತರ ಅಂಬಿಗನನ್ನು ಮರೆತಂತೆ , ಚಿಗುರು ಮಾಸಿ ಹಳದಿ ವರ್ಣಕ್ಕೆ ತಿರುಗಿದ ಮರಗಳನ್ನು ವ್ಯರ್ಥ ಎಂಬ ನೆಲೆಯಲ್ಲಿ ಕಡಿದು ಕೆಳಗುರುಳಿಸುವಂತೆ , ಕೆಚ್ಛಲಲ್ಲಿ ಹಾಲು ಬತ್ತಿದ ಹಸುವನ್ನು ಕಸಾಯಿಖಾನೆಗೆ ಮಾರುವಂತೆ ಕೃತಜ್ನನಾಗಿ ವ್ಯವಹರಿಸುತ್ತಿದ್ದಾನೆ ಮನುಷ್ಯ ಎಂಬ ಬುದ್ಧಿ ಜೀವಿ.
“ಮಾನವ ಹುಟ್ಟುವಾಗ ಸ್ವತಂತ್ರನಾಗಿಯೇ ಹುಟ್ಟುತ್ತಾನೆ , ಆದರೆ ಬೆಳೆಯುತ್ತಾ ವಿವಿಧ ಸರಪಣಿಗಳಿಂದ ಬಂಧಿಸಲ್ಪಡುತ್ತಾನೆ” ಎಂಬ ಇತಿಹಾಸಕಾರರೊಬ್ಬರ ಮಾತುಗಳು ಇಂದಿನ ವಾಸ್ತವ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಬದಲಾವಣೆ ಸ್ವ ಇಚ್ಛೆಗೂ ಮೀರಿ ಬಿರಿಯುತ್ತಿದೆ ಎಂದರೆ ತಪ್ಪಾಗಲಾರದು ಕೂಡ.

ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ।
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ ।।
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ।
ಜಸವು ಜನಜೀವನಕೆ – ಮಂಕುತಿಮ್ಮ ।।


ಎಂಬೀ ಕವಿ ವಾಣಿಯಂತೆ ಬದುಕೆಂಬ ಹೆಮ್ಮರ ತನ್ನೊಡಲಲ್ಲಿ ಇಂತಹ ಸುವಿಚಾರಗಳನ್ನು ತುಂಬಿಕೊಂಡು ಸಾಗಿದರೆ ಅದೆಷ್ಟು ಉತ್ತಮವಲ್ಲವೇ ? ಹುಟ್ಟಿದ ಪ್ರತಿಯೊಂದು ಜೀವವೂ ಕೂಡ ಸಾಧನೆಯ ಭೇರಿಯನ್ನು ಬಾರಿಸಲು ಬಯಸುವುದು ಸಹಜವೇ. ಹಾಗೆಂದ ಮಾತ್ರಕ್ಕೆ ಅಂತಹದೊಂದು ಉಮೇದಿನಲ್ಲಿ ಸಾಗಿ ಬಂದ ಹೆಜ್ಜೆ ಗುರುತುಗಳ ಕಲೆಯನ್ನು ಮಾಸಿಸುವುದು ಎಷ್ಟರ ಮಟ್ಟಿಗೆ ಕೃತಜ್ಞತೆ ? ಹಳೆಯ ಹಾದಿಯ ಜಾಡಿನಲ್ಲಿ ಹೊಸತನ್ನು ಕಂಡುಕೊಂಡು ಆ ಮೂಲಕ ಹಳೆಯ ಮೂಲಕ್ಕೂ ಋಣಿಯಾಗಿದ್ದು ಹೊಸತನ್ನು ಬೆಳೆಸುವ ಕೆಲಸ ನಮ್ಮಿಂದಾದಾಗಲೇ ಸಾಫಲ್ಯ ಬದುಕಿಗೊಂದು ಸಾರ್ಥಕತೆ ಕಂಡುಕೊಳ್ಳೋಣ.. ಏನಂತೀರಿ ?

———————————-

ನಯನ ಭಟ್

2 thoughts on “ರೇಡಿಯೋ ನೆನಪುಗಳ ಸುತ್ತ-ನಯನ ಭಟ್.

  1. ಓದಿ ಕಣ್ಣಂಚಿಲಿ ನೀರು ಬಂತು. ಬಾರಿ ಲಾಯಿಕಾಯಿದು. ಆ ದಿನಗಳ ನೆನಪು

    1. ಅದೇ ಅಲ್ದಾ. ಆ ದಿನಗಳು ಬರೀ ನೆನಪಷ್ಟೇ ಈಗ..

      ಧನ್ಯವಾದಗಳು ಡಿಯರ್

Leave a Reply

Back To Top