ಡಿವಿಜಿ ಜನ್ಮದಿನದ ನೆನಪಿಗೆ

ವಿಶೇಷ ಲೇಖನ

ಡಿವಿಜಿ ಜನ್ಮದಿನದ ನೆನಪಿಗೆ

ಶ್ರೀವಲ್ಲಿ ಮಂಜುನಾಥ

ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ ।
ಹಿತವಿರಲಿ ವಚನದಲಿ, ಋತವ ಬಿಡದಿರಲಿ ॥
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ ।
ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ

ಡಿವಿಜಿ

ನಮ್ಮ ನಗು ಎಂದಿಗೂ ಅಟ್ಟಹಾಸವಾಗಬಾರದು. ಹಾಗೆಯೇ ಬೇರೆಯವರನ್ನು ನೋಡಿ ಆಡಿಕೊಂಡು ನಗುವ ವ್ಯಂಗದ ನಗೆಯಾಗಬಾರದು. ಸಹಜ, ಸುಂದರ ಮಂದಹಾಸ ನಮ್ಮ ಮೊಗದಲ್ಲಿ ಸದಾ ಇರಬೇಕು. ಇದಕ್ಕೊಂದು ಪುಟ್ಟ ಕಥೆಯಿದೆ.

ಒಮ್ಮೆ ಶಾಲೆಯ ಟೀಚರೊಬ್ಬರು ಒಂದು ಹುಡುಗ ಮತ್ತು ಒಂದು ಹುಡುಗಿಯ ಕೈಗೆ ನಾಲ್ಕು ಗುಲಾಬಿ ಹೂಗಳನ್ನು ಕೊಟ್ಟು ನೀವೀಗ ಒಂದು ಸುತ್ತು ಹೊರ ಹೋಗಿ ಬನ್ನಿ. ನಿಮ್ಮನ್ನು ನೋಡಿ ಯಾರು ಮುಗುಳ್ನಗುವರೋ ಅವರಿಗೆ ಒಂದು ಹೂವು ಕೊಡಿ. ಐದು ನಿಮಿಷದಲ್ಲಿ ನೀವು ಹಿಂತಿರುಗಬೇಕು. ಯಾರು ಎಷ್ಟು ಹೂ ಕೊಡುತ್ತೀರೋ ನೋಡೋಣ ಎಂದು ಅವರಿಬ್ಬರನ್ನೂ ಕಳುಹಿಸಿದರು. ಐದು ನಿಮಿಷದ ನಂತರ ಹುಡುಗ ಎಲ್ಲ ಹೂವುಗಳನ್ನು ಹಾಗೇ ತಂದಿದ್ದರೆ, ಹುಡುಗಿಯ ಕೈ ಖಾಲಿಯಾಗಿತ್ತು. ಹುಡುಗ ಹೇಳಿದ “ನನ್ನನ್ನು ನೋಡಿ ಯಾರೂ ಮುಗುಳ್ನಗಲೇ ಇಲ್ಲ ಹಾಗಾಗಿ ಯಾರಿಗೂ ಹೂ ಕೊಡಲಿಲ್ಲ.” ಆದರೆ ಹುಡುಗಿ ಏನು ಹೇಳಿದಳು ಗೊತ್ತೆ “ನನ್ನ ಮುಂದೆ ಬಂದವರನ್ನು ಕಂಡೊಡನೆ ನಾನೇ ಮೊದಲು ಮುಗುಳ್ನಕ್ಕೆ ಅದಕ್ಕೆ ಪ್ರತಿಯಾಗಿ ಅವರೂ ಮುಗುಳ್ನಕ್ಕರು ಆಗ ನಾನು ಅವರಿಗೆ ಹೂ ಕೊಟ್ಟೆ” ಎಂದು.
ಮೊಗದಲ್ಲಿ ನಗೆಯಿದ್ದರೆ ಜೀವನ ಎಷ್ಟು ಸರಳ ಅಲ್ಲವೇ ?

ನಮ್ಮ ಮನದಾಳ ನಿರಾಳವಾಗಿದ್ದರೆ, ಮುಖವು ಸಹಜ ಮಂದಹಾಸದಿಂದ ಕೂಡಿರುತ್ತದೆ.

ಇನ್ನು ನಮ್ಮ ಮಾತು ಹೇಗಿರಬೇಕು ಅಂದರೆ ಹಿತವಾಗಿರಬೇಕು. ಆದರೆ ಇನ್ನೊಬ್ಬರನ್ನು ಮೆಚ್ಚಿಸಲು ಸುಖಾ-ಸುಮ್ಮನೆ ಹೊಗಳಬಾರದು. ಮಾತನಾಡುವುದೂ ಒಂದು ಕಲೆ. ಒಬ್ಬ ಮನುಷ್ಯನಿಗೆ ಮಾತನಾಡುವುದನ್ನು ಕಲಿಯಲು ಮೂರು ವರ್ಷ ಬೇಕಾದರೆ, ಏನನ್ನು ಮಾತನಾಡಬಾರದು ಎಂದು ಕಲಿಯಲು ಒಂದಿಡೀ ಜೀವಮಾನ ಸಾಲದಾಗುತ್ತದೆ.

ಇದಕ್ಕೊಂದು ಸಣ್ಣ ಕಥೆಯಿದೆ. ಒಬ್ಬ ರಾಜನಿಗೆ ಒಂದು ಹಲ್ಲನ್ನು ಬಿಟ್ಟು ಉಳಿದೆಲ್ಲ ಹಲ್ಲುಗಳೂ ಉದುರಿ ಹೋದಂತೆ ಕನಸು ಬಿದ್ದಿತು. ಅದರ ಅರ್ಥವೇನೆಂದು ಪ್ರಖ್ಯಾತ ಜ್ಯೋತಿಷಿಯ ಬಳಿ ಕೇಳಿದ. ಅವರು ಎಲ್ಲವನ್ನೂ ತಿಳಿದವರಾದರೂ ಲೋಕ ಜ್ಞಾನ ಕಡಿಮೆಯಿದ್ದ ಅವರು “ನಿನ್ನ ಕಣ್ಮುಂದೆಯೇ ನಿನ್ನ ಕುಲದವರೆಲ್ಲಾ ಒಬ್ಬೊಬ್ಬರಾಗಿ ಸಾಯುತ್ತಾರೆ” ಎಂದರು ಇದರಿಂದ ಕುಪಿತನಾದ ರಾಜ ಅವರನ್ನು ಸೆರೆಮನೆಗೆ ತಳ್ಳಿಸಿದ.

ಅವರ ಮಗ ಅಷ್ಟೊಂದು ಓದಿದವನಲ್ಲದಿದ್ದರೂ, ವಿಷಯ ತಿಳಿದವನೇ ರಾಜನ ಬಳಿ ಬಂದು. ಮತ್ತೊಮ್ಮೆ ಎಲ್ಲವನ್ನೂ ಕುಲಂಕುಷವಾಗಿ ಪರಿಶೀಲಿಸಿದಂತೆ ಮಾಡಿ “ನಿಮ್ಮ ಕುಲದಲ್ಲಿ ಎಲ್ಲರಿಗಿಂತಾ ನಿಮಗೆ ಹೆಚ್ಚು ಆಯಸ್ಸಿದೆ. ನೀವು ಧೀರ್ಘಕಾಲ ಬಾಳುತ್ತೀರಿ” ಎಂದನು ಇದರಿಂದ ಸಂತಸಗೊಂಡ ರಾಜ ಜ್ಯೋತಿಷಿಯ ಮಗನ ಆಶಯದಂತೆ ಅವರ ತಂದೆಯನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಿದ.

ಇಬ್ಬರೂ ಹೇಳಿದ ವಿಷಯ ಒಂದೇ ಆದರೂ ಹೇಳುವ ರೀತಿಯಲ್ಲಿ ವ್ಯತ್ಯಾಸವಿದೆ ಅಲ್ಲವೇ ?

ಇನ್ನು ನಮ್ಮ ಜೀವನದಲ್ಲಿ ಸುಖ ಸಂತೋಷದ ಕ್ಷಣಗಳು ಬಂದಾಗ ಆಕಾಶದಲ್ಲಿ ತೇಲಾಡುತ್ತಾ ಅಹಂಕಾರದಿಂದ ವರ್ತಿಸಿ ಬೇರೆಯವರಿಗೆ ನೋವುಂಟು ಮಾಡದೆ; ನಮಗೆ ದುಃಖ, ಸಂಕಟ ಬಂದಾಗ ಅತಿಯಾಗಿ ಕುಗ್ಗಿ ನಮ್ಮ ಜೀವಕ್ಕೇ ಹಾನಿ ಮಾಡಿಕೊಳ್ಳುವಂತಹ ಕೆಲಸ ಮಾಡದೆ, ಎಲ್ಲದರಲ್ಲೂ ಸಮಚಿತ್ತತೆಯನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂಬುದನ್ನು ಬಹಳ ಸರಳವಾಗಿ ತಿಳಿಸಿರುವ ಡಿವಿಜಿಯವರ ಈ ಕಗ್ಗ ನನಗೆ ಪ್ರಿಯವಾದುದು.

ಶ್ರೀವಲ್ಲಿ ಮಂಜುನಾಥ☺

ಡಿವಿಜಿಯವರ ಜನುಮ ದಿನದಂದು ಅವರಿಗೊಂದು ನಮನ..


ಶ್ರೀವಲ್ಲಿ ಮಂಜುನಾಥ

Leave a Reply

Back To Top