ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಅರ್ಚನಾ ಯಳಬೇರು

ಗಜಲ್

ಭವ್ಯತೆಯ ಬಸಿರ ಹೊತ್ತ ಸುಪ್ತ ಸ್ವಪ್ನಗಳಿಗೆ ಆದೀತೇ ಸುಖ ಪ್ರಸವ
ಕಾಡುವ ಕಡುವ್ಯಥೆಯ ವಧಿಸಿದ ನಲ್ಮೆಗಳಿಗೆ ಆದೀತೇ ಸುಖ ಪ್ರಸವ

ಸ್ವಚ್ಛಂದವಾಗಿ ವಿಹರಿಸುವ ವಿಹಗಗಳಿಗೇನು ಗೊತ್ತು ಬೇಟೆಯ ಕುತ್ತು
ಪಿಕಗಳ ಕಂಠದಿ ಗರ್ಭೀಕರಿಸಿದ ಸ್ವರಗಳಿಗೆ ಆದೀತೇ ಸುಖ ಪ್ರಸವ

ಬರ ಬಂದಿಲ್ಲ ಶವವಾದ ಭಾವಗಳ ಹೊತ್ತು ಸಾಗುವ ಹೆಗಲುಗಳಿಗೆ
ನೆಟ್ಟಿರುಳಲಿ ನಿಡುಸುಯ್ವ ನಿಟ್ಟುಸಿರುಗಳಿಗೆ ಆದೀತೇ ಸುಖ ಪ್ರಸವ

ಅರಳುವ ಮೊಗ್ಗಿನ ಅಳಲು ಅರಿತಿಹವೇ ಗುಂಯ್ಗುಡುವ ಭೃಂಗಗಳು
ಗಂಧದ ಕೊರಡಲಿ ಅಡಗಿದ ಘಮಲುಗಳಿಗೆ ಆದೀತೇ ಸುಖ ಪ್ರಸವ

ಬಲ್ಲವರಾರು ತುಮುಲಗಳ ತೆಕ್ಕೆಯಲಿ ತೊಳಲಾಡುವ ತತ್ವಗಳನು
ತಿರಸ್ಕಾರದ ಕಿಚ್ಚಿನಲಿ ಅರೆಬೆಂದ ತಥ್ಯಗಳಿಗೆ ಆದೀತೇ ಸುಖ ಪ್ರಸವ

ಕ್ಲೇಶಗಳ ಬಿಸುಪಿನಲಿ ಬೆಂದು ಕರಕಲಾಗಿದೆ ‘ಅರ್ಚನಾ’ಳ ಅಂತರಂಗ
ಜ್ವಲಿಸುವ ಅಕ್ಷಿಗಳಲಿ ಜಿನುಗುವ ಬಾಷ್ಪಗಳಿಗೆ ಆದೀತೇ ಸುಖ ಪ್ರಸವ


About The Author

Leave a Reply

You cannot copy content of this page

Scroll to Top