ಕಾವ್ಯ ಸಂಗಾತಿ
ಸರ್ವಮಂಗಳ ಜಯರಾಂ
ಜುಮುಕಿ

ನನ್ನೆದೆಯ ಇನಿದನಿಗೆ
ಓಗೊಟ್ಟು ಹೂಂ ಗುಡುವ
ನಲ್ಲೆ ನಿನ್ನಂದದ ಕಿವಿಗೆ ಹುಡುಕಿ
ತಂದಿರುವೆ ಬಂಗಾರದ ಜುಮುಕಿ.
ಹೊಂಬಣ್ಣದಲಿ ಮಿಂದಿಹುದು
ಮುತ್ತಿನ ಜುಮುಕಿ ಇದು ಕೆಂಬಣ್ಣದ
ಮೊಗದವಳೆ ಜುಮುಕಿಯ ಧರಿಸಿ
ಚಂದ್ರಮನ ನಾಚಿಸುತಿರುವೆ.
ಕನಕ ಕುಂದನದ ಜುಮುಕಿ
ಕನಕಾಂಬರಿಯೇ ನಿನಗೆಂದೇ ತಂದಿರುವೆ
ಕನಸು ಕನವರಿಕೆಗಳ ತುಂಬಿ
ಕಾಮನ ಬಿಂಬದಿ ಹೊಳೆಯುವ ಜುಮುಕಿ .
ಒಲವು ತುಂಬಿ ತಂದಿರುವ ಜುಮುಕಿ
ಚೆಲುವೆ ನೀ ಧರಿಸಲು ಇಮ್ಮಡಿಸಿತು
ನಿನ್ನಯ ಚೆಲುವು, ನಿನ್ನಂದಕೆ ಪದೇ ಪದೇ
ಸೋಲುತಿದೆ ನನ್ನೀ ಮನವು.
ಸರ್ವಮಂಗಳ ಜಯರಾಂ.




