“ಹಾವೇರಿ ಜಿಲ್ಲೆಯ ಶ್ರೀಮಂತ ಸಂಸ್ಕೃತಿ, ಪರಂಪರೆ, ಆಚರಣೆ”

ವಿಶೇಷ ಲೇಖನ

“ಹಾವೇರಿ ಜಿಲ್ಲೆಯ ಶ್ರೀಮಂತ ಸಂಸ್ಕೃತಿ, ಪರಂಪರೆ, ಆಚರಣೆ”

ಡಾ. ಪುಷ್ಪಾ ಶಲವಡಿಮಠ ಬರೆಯುತ್ತಾರೆ

“ಹಾವೇರಿ ಜಿಲ್ಲೆಯ ಶ್ರೀಮಂತ ಸಂಸ್ಕೃತಿ, ಪರಂಪರೆ, ಆಚರಣೆ”

            ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂಬ ಹೆಗ್ಗಳಿಕೆಗೆ ಪಾತ್ರವಾದ ಹಾವೇರಿ ಜಿಲ್ಲೆ ಹಲವಾರು ವೈಶಿಷ್ಟತೆಗಳಿಂದ ಸರ್ವರ ಗಮನವನ್ನು ತನ್ನತ್ತ ಸೆಳೆದುಕೊಂಡ ಜಿಲ್ಲೆಯಾಗಿದೆ. ಸಂಸ್ಕೃತಿಯ ಶ್ರೀಮಂತಿಕೆಯೊAದಿಗೆ ಶತಶತಮಾನಗಳಿಂದಲೂ ತನ್ನತನವನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದ ಜಿಲ್ಲೆಯಾಗಿದೆ. ಶ್ರೇಷ್ಠತೆ ಎಂಬುದು ಪ್ರದೇಶದ ವಿಸ್ತೀರ್ಣದಲ್ಲಿ ಇರುವುದಿಲ್ಲ ಆ ಪ್ರದೇಶ ಹೊಂದಿದ ಸುಸಂಸ್ಕೃತ ಜನಾಂಗ ಮತ್ತು ಅದರ ಸಂಸ್ಕೃತಿಯನ್ನು ಅವಲಂಬಿಸಿರುತ್ತದೆ. ಅದಕ್ಕೆಂದೆ ಶ್ರೀ ವಿಜಯ ತನ್ನ ಕೃತಿ ಕವಿರಾಜ ಮಾರ್ಗದಲ್ಲಿ “ಕಾವೇರಿಯಿಂದಮಾಗೋದಾವರಿವರೆಗಿರ್ದ ನಾಡಾದ ಕನ್ನಡದೊಳ್ ಭಾವಿಸಿದ ಜನಪದಂ” ಎಂದದ್ದು. “ಕನ್ನಡ ನಾಡವರ್ ಓವಜರ್” ಎಂದದ್ದು. ಅಂದರೆ ಕಾವೇರಿಯಿಂದ ಗೋದಾವರಿ ನದಿಯ ವರೆಗಿನ ವಿಸ್ತೀರ್ಣತೇ ಕನ್ನಡ ನಾಡಿನ ಹೆಮ್ಮೆಯ ದ್ಯೋತಕ ಹೇಗೋ ಹಾಗೆಯೇ ಅಲ್ಲಿ ವಾಸಿಸುವ ಕನ್ನಡಿಗರ ಜನಾಂಗವು ಸಹ ಅರಿವು ಹಾಗೂ ಉತ್ತಮ ಸಂಸ್ಕೃತಿಯಿAದ ಕೂಡಿತ್ತು ಎಂಬುದು ಅಷ್ಟೇ ಮಹತ್ವದ್ದಾಗುತ್ತದೆ. ಪ್ರದೇಶ ವಿಸ್ತೀರ್ಣಕ್ಕಿಂತ ಜನ ಸಂಸ್ಕೃತಿಯ ವಿಶಾಲತೆಯೆ ಬಹುಮುಖ್ಯವಾದದ್ದು. ಇದನ್ನೇ ಶ್ರೀಮಂತ ಸಂಸ್ಕೃತಿ ಮತ್ತು ಅನೂಚಾನವಾಗಿ ಉಳಿದುಕೊಂಡು-ಬೆಳೆದುಕೊAಡು ಬಂದಿರುವ ಪರಂಪರೆ ಎನ್ನುವುದು. ಸಂಸ್ಕೃತಿಯ ವಾಹಕತೆ ಪರಂಪರೆಯಾಗಬೇಕೆAದರೆ ಆಚರಣೆಯು ಸದಾ ಹರಿಯುವ ನದಿಯಂತಿರಬೇಕು. ಇವೆಲ್ಲ ದೃಷ್ಟಿಯನ್ನು ಇಟ್ಟುಕೊಂಡು ಅವಲೋಕಿಸಿದರೆ ಹಾವೇರಿ ಜಿಲ್ಲೆಗೆ ಒಂದು ಭವ್ಯವೂ, ಸುಂದರವೂ, ಶ್ರೀಮಂತವೂ ಆದ ಸಂಸ್ಕೃತಿಯ ಪರಂಪರೆ ಇದೆ. ಅದಕ್ಕೆ ಪೂರಕವಾಗಿ ಅನೇಕ ಆಚರಣೆಗಳು ಅನೂಚಾನವಾಗಿ ಬೆಳೆದುಕೊಂಡು ಬಂದಿವೆ.

ಕ¬ರ್ನಾಟಕ ರಾಜ್ಯದ ಹೃದಯ ಭಾಗದಲ್ಲಿರುವ ಹಾವೇರಿ ಜಿಲ್ಲೆ ೧೯೯೭ ರಲ್ಲಿ ಅವಿಭಜಿತ ಧಾರವಾಡದಿಂದ ಹೊರಬಂದು ನೂತನ ಸ್ವತಂತ್ರ ಜಿಲ್ಲೆಯಾಗಿ ಹೊರಹೊಮ್ಮಿತು. ಒಟ್ಟು ಎಂಟು ತಾಲೂಕುಗಳನ್ನು ಹೊಂದಿ ಬೃಹತ್ ಜಿಲ್ಲೆಯಾಯಿತು. ಹಾವೇರಿ, ಹಾನಗಲ್ಲ, ಬ್ಯಾಡಗಿ, ರಾಣೇಬೆನ್ನೂರು, ಶಿಗ್ಗಾವಿ, ಹಿರೇಕೆರೂರು, ಸವಣೂರ ಮತ್ತು ರಟ್ಟಿಹಳ್ಳಿ ಈ ಎಂಟು ತಾಲೂಕುಗಳು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ಪರಂಪರೆ, ಆಚರಣೆಗಳಿಂದ ಗುರುತಿಸಿಕೊಂಡಿವೆ. ವರದಾ, ಕುಮದ್ವತಿ, ಧರ್ಮಾ ಮತ್ತು ತುಂಗಭದ್ರಾ ನದಿಗಳ ನಿರ್ಮಲ ಜಲಧಾರೆಯಲ್ಲಿ ಇಲ್ಲಿನ ಸಸ್ಯ ಸಂಪತ್ತು, ಪ್ರಾಣಿ-ಪಕ್ಷಿ ಸಂಪತ್ತು ಸಮೃದ್ಧವಾಗಿವೆ. ಅರೆ ಮಲೆನಾಡು ಅಥವಾ ಮಲೆನಾಡಿನ ಸೆರಗಿನಲ್ಲಿರುವ ಹಾವೇರಿ ಜಿಲ್ಲೆ ವೈವಿಧ್ಯಮಯ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಂದ ಕೂಡಿದೆ. ಸುಮಾರು ೪,೮೨೩ Sq. ಏm (ಸು. ೪,೮೫,೦೦೦ ಹೆಕ್ಟೇರ್ ವಿಸ್ತೀರ್ಣ) ಭೂ ಪ್ರದೇಶ ಹೊಂದಿದೆ.

‘ಹಾವೇರಿ’ ನಗರವು ಒಂದು ಐತಿಹಾಸಿಕ ನಗರವಾಗಿ ಪ್ರಾಚೀನ ಕಾಲದಿಂದಲೇ ಗುರುತಿಸಿಕೊಂಡಿದೆ. ಐತಿಹ್ಯವೊಂದರ ಪ್ರಕಾರ ಈ ನಗರವನ್ನು ನಳ ಚಕ್ರವರ್ತಿ ಕಟ್ಟಿಸಿದನೆಂದು ತಿಳಿದು ಬರುತ್ತದೆ. “ಹರಿಯುವ ಹರಿ ನೀರಿರ್ಗಡ್ಡ ಬರಲುರಗಂ ನಳನಂದೇ ಕಟ್ಟಿಸಿದಂ ಕೆರೆಯಂ” ಎಂಬ ಉಲ್ಲೇಖದಿಂದ ಹರಿಯುವ ಹರಿ ನೀರಿಗೆ ಹಾವು ಅಡ್ಡ ಬರಲು ಆ ಸ್ಥಳ ಪವಿತ್ರವೆಂದು ನಳ ಚಕ್ರವರ್ತಿ ನಿರ್ಧರಿಸಿ ಅಂದಿನಿAದ ಅಲ್ಲಿ ನಗರ ನಿರ್ಮಾಣ ಮಾಡಲು ಪ್ರಾರಂಭಿಸಿದನೆAದು ತಿಳಿದು ಬಂದರೆ, ಇನ್ನೊಂದು ಐತಿಹ್ಯದ ಪ್ರಕಾರ ಒಂದು ‘ಹಾವು’ ಏರಿಯನ್ನು ‘ಏರಿ’ ಬಂದಾಗ ಆ ಸ್ಥಳ ಶುಭಕರವಾದದ್ದು ಎಂದು ತಿಳಿದು ನಳ ಚಕ್ರವರ್ತಿ ಅಂದು ಕೆರೆ ತೋಡಿಸಿದನಂತೆ. ಅದೇ ಹೆಗ್ಗೇರಿ ಎಂಬ ಹೆಸರಿನಿಂದ ಇಂದಿಗೂ ಹಾವೇರಿಯಲ್ಲಿದೆ. ಹಾವು ಏರಿ ಬಂದ ಪ್ರದೇಶ ಹಾವೇರಿ (ಹಾವು+ ಏರಿ) ಎಂದಾಗಿದೆ.  ‘ನಳ’ ಚಕ್ರವರ್ತಿ ಕಟ್ಟಿಸಿದ ‘ಪುರ’ ಇದಾಗಿದ್ದರಿಂದ ಪ್ರಾಚೀನ ಕಾಲದಲ್ಲಿ ಇದಕ್ಕೆ “ನಳಪುರಿ” ಎಂಬ ಹೆಸರಿದ್ದ ಕುರಿತು ಮಾಹಿತಿಗಳು ಲಭ್ಯವಿವೆ. ಸುಂದರ ವಿನ್ಯಾಸಗಳ ಏಲಕ್ಕಿ ಮಾಲೆಗಳು ಈ ನಗರದಲ್ಲಿ ತಯಾರಿಸಲ್ಪಡುತ್ತಿದ್ದು, ಈ ಕಾರಣದಿಂದ ಇದು “ಏಲಕ್ಕಿ ನಗರಿ” ಎಂದೂ ಪ್ರಸಿದ್ಧವಾಗಿದೆ. ಅಲ್ಲದೆ ಇಲ್ಲಿ ೬೩ ಮಠಗಳಿದ್ದವೆಂದೂ ಆದ್ದರಿಂದ ಇದಕ್ಕೆ “ಮರಿಕಲ್ಯಾಣ” ಎಂಬ ಹೆಸರು ಬಂದಿದ್ದು ವಿಶೇಷ. ಇಂತಹ ಖ್ಯಾತಿಯನ್ನು ‘ಹಾವೇರಿ’ ಪಡೆದುಕೊಂಡಿದೆ.

ಹಾವೇರಿ ಜಿಲ್ಲೆ ಏಲಕ್ಕಿ ನಾಡು, ಸರ್ವಜ್ಞ-ಕನಕದಾಸ, ಹೆಳವನಕಟ್ಟೆ ಗಿರಿಯಮ್ಮ, ಶರೀಫ್, ಅಂಬಿಗರ ಚೌಡಯ್ಯ ಮುಂತಾದ ಶರಣರ, ದಾಸರ, ಸಂತರ, ದಾರ್ಶನಿಕರ, ಮಹಾಪುರುಷರ ತವರೂರಾಗಿದೆ. ಜೋಳ, ಹತ್ತಿ, ಮೆಣಸಿನಕಾಯಿ, ಭತ್ತ, ಕಬ್ಬು, ಗೋವಿನ ಜೋಳ, ಎಣ್ಣೆ ಬೀಜಗಳು ದ್ವಿದಳ ಧಾನ್ಯಗಳು, ಎಲೆ, ಅಡಿಕೆ, ತೆಂಗು, ಬಾಳೆ, ಪೇರಲು ಮುಂತಾದ ಬೆಳೆಗಳನ್ನು, ಚೆಂಡು, ಮಲ್ಲಿಗೆ, ಸೇವಂತಿ, ಡೇರೆ, ಕನಕಾಂಬರ ಮುಂತಾದ ಹೂಗಳನ್ನು ಯಥೇಚ್ಛವಾಗಿ ಬೆಳೆಯುವ ಪ್ರದೇಶವಾಗಿದೆ.

ಸಾಂಸ್ಕೃತಿಕ ಶ್ರೀಮಂತಿಕೆಯ ತವರೂರಾದ ಹಾವೇರಿ ಜಿಲ್ಲೆಯು ಸಂತ ಶಿಶುನಾಳ ಶರೀಫರ, ಸರ್ವಜ್ಞ, ಕನಕದಾಸ, ಹೆಳವನಕಟ್ಟೆ ಗಿರಿಯಮ್ಮ, ಅಂಬಿಗರ ಚೌಡಯ್ಯ, ಹಾನಗಲ್ಲ ಕುಮಾರ ಶಿವಯೋಗಿಗಳ, ಗಾನಯೋಗಿ ಪಂಚಾಕ್ಷರಿ ಗವಾಯಿಗಳ, ಗಾನಯೋಗಿ ಪುಟ್ಟರಾಜ ಗವಾಯಿಗಳ, ವಾಗೀಶ್ ಪಂಡಿತಾರಾಧ್ಯರ, ಪುಸ್ತಕ ಪ್ರೇಮಿ ಗಳನಾಥರ, ಜ್ಞಾನಪೀಠ ಪ್ರಶಸ್ತಿ ವಿಜೇತ ವಿ. ಕೃ. ಗೋಕಾಕರ, ಪಾಟೀಲ್ ಪುಟ್ಟಪ್ಪನವರ, ಸುಧಾಮೂರ್ತಿ, ಚಂದ್ರಶೇಖರ್ ಪಾಟೀಲ, ರಾ.ಕು. ಹಿರೇಮಲ್ಲೂರು ಈಶ್ವರನ್, ಸು.ರಂ.ಯಕ್ಕುAಡಿ, ಮುಂತಾದ ಶ್ರೇಷ್ಠರ ವಿಚಾರಧಾರೆಗಳಿಂದ ಪುನೀತವಾಗಿದೆ. ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿ, ಬ್ರಿಟಿಷರ ಗುಂಡೇಟಿಗೆ ಅಂಜದೆ ಎದೆಯೊಡ್ಡಿ ನಿಂತ ಮೈಲಾರ ಮಹಾದೇವಪ್ಪ ಮತ್ತು ಅವರ ಪತ್ನಿ ಸಿದ್ದಮ್ಮ, ಹಳ್ಳಿಕೇರಿ ಗುದ್ಲೆಪ್ಪ ಮುಂತಾದ ಮಹನೀಯರು ಈ ನೆಲಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ಮಹನೀಯರಾಗಿದ್ದಾರೆ. ಮೈಲಾರ ಮಹಾದೇವಪ್ಪರಿಂದ ಮೋಟೆಬೆನ್ನೂರು ಐತಿಹಾಸಿಕವಾಗಿ ಗುರುತಿಸಿಕೊಂಡಿದೆ. ಶಿಕ್ಷಣ ಪ್ರೇಮಿ ಹಳ್ಳಿಕೇರಿ ಗುದ್ಲೆಪ್ಪನವರು ಸ್ಥಾಪಿಸಿದ ಗಾಂಧಿ ಗ್ರಾಮೀಣ ಗುರುಕುಲವು ಹೊಸರಿತ್ತಿಯಲ್ಲಿದೆ. ಖಾದಿ ಬಟ್ಟೆ ನೂಲುವಲ್ಲಿ ಇವತ್ತಿಗೂ ಗಾಂಧಿಸ್ಮೃತಿ ಇಲ್ಲಿ ಅನುರಣಿತವಾಗುತ್ತಿದೆ.

 ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಪಟ್ಟಣವಾದ ‘ಬಂಕಾಪುರ’ ಐತಿಹಾಸಿಕವಾಗಿ ಗುರುತಿಸಿಕೊಂಡ ನಗರವಾಗಿದೆ. ‘ವಂಕಪುರ’ ‘ವಂಕಾಪುರ’, ‘ಬಂಕಾಪುರ’ ಎಂಬ ಹೆಸರುಗಳಿಂದ ಶಾಸನದಲ್ಲಿ ಗುರುತಿಸಲ್ಪಟ್ಟಿದೆ. ಬಕಾಸುರ ವಾಸವಾಗಿದ್ದ ‘ಏಕಚಕ್ರನಗರ’ ಇದೆ ‘ಬಂಕಾಪುರ’ವಾಗಿದೆ.

 ಬಂಕಾಪುರವು ಹೊಯ್ಸಳರ ರಾಜಧಾನಿಯಾಗಿತ್ತು, ಕದಂಬರ ಕಾಲದಲ್ಲಿ ಪ್ರಮುಖ ಅಗ್ರಹಾರವಾಗಿತ್ತು. ರಾಷ್ಟçಕೂಟರ ಸಾಮಂತ ಚಲ್ಲಕೇತನ ಈ ಊರನ್ನು ಆಳಿದ್ದನು. ಚಲ್ಲಕೇತನನ ವಂಶದವನಾದ ‘ಬಂಕೇಯ’ ಎಂಬುವನು ರಾಷ್ಟçಕೂಟರ ನಿಷ್ಠಾವಂತ ಸೇನಾಧಿಪತಿಯಾಗಿದ್ದನು. ಮುಂದೆ ಇವನ ಮಗ ಲೋಕಾದಿತ್ಯ ಎಂಬುವನು ತನ್ನ ತಂದೆಯ ಸ್ಮರಣಾರ್ಥ ಈ ಊರಿಗೆ ‘ಬಂಕಾಪುರ’ ಎಂದು ಹೆಸರಿಟ್ಟನು. ‘ಬನವಾಸಿ ಕದಂಬರು’ ‘ಹಾನಗಲ್ಲ ಕದಂಬರು’ ‘ಗೋವಿಯ ಕದಂಬರು’ ಇವರಂತೆಯೇ ‘ಬಂಕಾಪುರದ ಕದಂಬರು’ ಇರುವುದು ಬಂಕಾಪುರದ ಐತಿಹಾಸಿಕ ಮಹತ್ವವನ್ನು ಸಾರುತ್ತದೆ. ಮೂಲದಿಂದಲೂ ಬಂಕಾಪುರ ವ್ಯಾಪಾರ ಕೇಂದ್ರವಾಗಿದ್ದರೂ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿದೆ. ದ್ವಾರಸಮುದ್ರದ ದೊರೆ ವಿಷ್ಣುವರ್ಧನ ಇದನ್ನು ಉಪರಾಜಧಾನಿ ಮಾಡಿಕೊಂಡಿದ್ದನು. ಅಲ್ಲದೇ ತನ್ನ ಕೊನೆಯ ದಿನಗಳನ್ನು ಇಲ್ಲಿಯೇ ಕಳೆದಿದ್ದನೆಂಬುದು ಗಮನಾರ್ಹ. ಈ ಸಂಗತಿಗಳು ಕ್ರಿ.ಶ.೧೧೦೦ ರ ನಾಗರಕಟ್ಟೆಯ ಶಾಸನದಿಂದ ತಿಳಿದು ಬರುತ್ತದೆ. ಪೂಜ್ಯಪಾದ ಜೀನಸೇನಾಚಾರ್ಯ, ಗುಣಭದ್ರಾಚಾರ್ಯ, ಅಜಿತಸೇನಾಚಾರ್ಯ, ದೇವೇಂದ್ರ ಮುನಿ ಇವರ ಸಂಪರ್ಕ ಪಡೆದ ಊರಿದು. ಅಜಿತಸೇನಾಚಾರ್ಯರು ರನ್ನನ ಗುರುಗಳಾಗಿದ್ದರೆಂಬುದು, ದೇವೇಂದ್ರಮುನಿಗಳು ಪಂಪನ ಗುರುಗಳಾಗಿದ್ದರೆಂಬುದು ವಿಶೇಷ. ಇದಲ್ಲದೆ ಕನಕದಾಸರ ತಂದೆ ಬೀರಪ್ಪನಾಯಕ ಈ ಊರಿನ ಮಾಂಡಲೀಕರಾಗಿದ್ದ ಕುರಿತು ಶಾಸನಗಳು ಲಭ್ಯವಿವೆ. ಕರ್ನಾಟಕದಲ್ಲಿ ಅರಳಿದ ದಾಸ ಸಾಹಿತ್ಯಕ್ಕೆ ಬಂಕಾಪುರ ಆಶ್ರಯವಾಗಿತ್ತು. ಇಲ್ಲಿ ಶ್ರೀಪಾದರಾಯರಿಂದ ಕನಕದಾಸರವರೆಗೆ ಮಹತ್ವದ ಕೀರ್ತನಕಾರರು ಆಗಿ ಹೋದರೆಂಬುದು ಸಹ ಈ ನಗರದ ಮಹತ್ತಿಗೆ ಮತ್ತೊಂದು ಕಾರಣ.

ಈ ನಗರವು ಪ್ರಾಚೀನ ಕಾಲದಿಂದಲೂ ಸಾಹಿತ್ಯ, ಸಂಸ್ಕೃತಿ, ಕಲೆ, ಧರ್ಮ, ಹಿಂದೂ – ಮುಸ್ಲಿಂ  ಭಾವೈಕ್ಯತೆಗೆ ಅವಸ್ಥಾನವಾಗಿದ್ದು, ಪಂಡಿತಪುರಿ ಎಂದು ಕರೆಸಿಕೊಂಡಿದೆ. ಐತಿಹಾಸಿಕವಾಗಿ ಗುರುತಿಸಿಕೊಂಡ ಇಂದ್ರೇಶ್ವರ, ನಗರೇಶ್ವರ, ಹೊಯ್ಸಳೇಶ್ವರ ದೇವಾಲಯಗಳು ಕಲ್ಯಾಣ ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿವೆ.

ಹಾವೇರಿ ಜಿಲ್ಲೆಯಲ್ಲಿ ಇಂತಹ ಸಾಕಷ್ಟು ಐತಿಹಾಸಿಕ ವೈಭವಗಳು ಕಾಣಿಸಿಗುತ್ತವೆ. ಶಿಲ್ಪಕಲಾ ವೈಭವ ಹೊಂದಿದ ಅನೇಕ ದೇವಾಲಯಗಳು ಇಲ್ಲಿವೆ. ಹಾನಗಲ್ಲನಲ್ಲಿರುವ ತಾರಕೇಶ್ವರ ದೇವಾಲಯ, ಚೌಡಯ್ಯದಾನಪುರದ ಮುಕ್ತೇಶ್ವರ ದೇವಾಲಯ, ರಟ್ಟಿಹಳ್ಳಿಯ ಕದಂಬೇಶ್ವರ ದೇವಸ್ಥಾನ, ಹರಳಹಳ್ಳಿ ಸೋಮೇಶ್ವರ ದೇವಸ್ಥಾನ, ಗಳಗಾನಾಥದ ಗಳಗೇಶ್ವರ ದೇವಸ್ಥಾನ, ಗುತ್ತಲದ ಚಂದ್ರಶೇಖರ ದೇವಸ್ಥಾನ, ಹಾವೇರಿಯ ಪುರ ಸಿದ್ದೇಶ್ವರ ದೇವಸ್ಥಾನ, ಯಳವಟ್ಟಿಯ ಜೈನ ಬಸದಿ ಕಲಾ ವೈಭವಕ್ಕೆ ಸಾಕ್ಷಿಯಂತಿವೆ.

ಬAಕಾಪುರದ ಚಳ್ಳಕೇತರಂತೆ, ಗುತ್ತಲದಲ್ಲಿ ಗುತ್ತವೊಳಲಿನ ಗುತ್ತರು ಆಳ್ವಿಕೆ ನಡೆಸಿದ ಸಾಮಂತರು. ಇವರಿಂದ ಈ ಊರಿಗೆ ಗುತ್ತಲ ಎಂಬ ಹೆಸರು ಬಂದಿದೆ. ಹಾನಗಲ್ಲನಲ್ಲಿ ಕದಂಬರು, ಹೆಸರಾಂತ ಸಾಮಂತರು ಆಳಿದ್ದಾರೆ. ರಾಷ್ಟçಕೂಟರ ಸು.೧೩೦೦ ಶಿಲಾ ಶಾಸನಗಳು ಈ ಜಿಲ್ಲೆಯಲ್ಲಿ ಪತ್ತೆಯಾಗಿವೆ. ೧೨ನೇ ಶತಮಾನದಿಂದ-೧೩ನೇ ಶತಮಾನದವರೆಗೆ ಗುತ್ತರು ಚಾಲುಕ್ಯರ ಮಾಂಡಲೀಕರಾಗಿ ‘ಗುತ್ತಲ’ವನ್ನು ಸೇವುಣರ ಮಾಂಡಲೀಕರಾಗಿ ‘ದೇವಗಿರಿ’ಯನ್ನು ಆಳಿದ್ದಾರೆ. ಚೌಡಯ್ಯದಾನಪುರದಲ್ಲಿರುವ ಶಾಸನದ ಪ್ರಕಾರ ಮಲ್ಲದೇವನು ಚಾಲುಕ್ಯರ ೬ನೇ ವಿಕ್ರಮಾದಿತ್ಯನ ಮಾಂಡಳಿಕನಾಗಿದ್ದರ ಉಲ್ಲೇಖವಿದೆ. ಇವನೇ ಮುಕ್ತೇಶ್ವರ ದೇವಾಲಯ ನಿರ್ಮಿಸಿದ ಎನ್ನಲಾಗಿದೆ. ಅದೇ ರೀತಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನೊಣಂಬರು ರಟ್ಟಿಹಳ್ಳಿಯನ್ನು ರಾಜಧಾನಿ ಮಾಡಿಕೊಂಡು ೧೦೦ ಗ್ರಾಮಗಳ ಆಡಳಿತ ಕೈಗೊಂಡ ವಿವರಗಳಿವೆ. ಹಾವೇರಿ ಜಿಲ್ಲೆಯು ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಲು ಇಷ್ಟು ಸುಧೀರ್ಘವಾದ ಇತಿಹಾಸ ಪರಂಪರೆ ಬೆಳೆದುಕೊಂಡು ಬಂದದ್ದೇ ಕಾರಣವಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಗಳಗನಾಥ, ಚೌಡಯ್ಯದಾನಪುರ, ಕನಕರ ಜನ್ಮಸ್ಥಳ ಬಾಡ, ಕರ್ಮಭೂಮಿ ಕಾಗಿನೆಲೆ, ಸವಣೂರು, ಬಂಕಾಪುರ, ಗಂಗೀಬಾವಿ, ಶಿಶುವಿನಹಾಳ, ಕೂಡಲ, ದೇವರಗುಡ್ಡ, ಕದರಮಂಡಲಗಿ, ಹಾನಗಲ್, ಮಾಸೂರು, ಅಬಲೂರು, ಶಿಗ್ಗಾವಿಯ ರಾಕ್ ಗಾರ್ಡನ್, ಅಗಡಿಯ ತೋಟ, ಮುಂತಾದ ಕ್ಷೇತ್ರಗಳು ಪ್ರೇಕ್ಷಣೀಯ ಹಾಗೂ ಆಧ್ಯಾತ್ಮ ಕ್ಷೇತ್ರಗಳಾಗಿ ಜನರನ್ನು ಆಕರ್ಷಿಸುವ ಸ್ಥಳಗಳಾಗಿವೆ. ರಾಣೆಬೆನ್ನೂರಿನಲ್ಲಿ ಹೇಳವನಕಟ್ಟೆ ಗಿರಿಯಮ್ಮ ಜನಿಸಿದ ಮನೆ ಇಂದಿಗೂ ಸಂರಕ್ಷಿಸಲ್ಪಟ್ಟಿದೆ. ರಾಣೆಬೆನ್ನೂರಿನಲ್ಲಿ ಸರ್ಕಾರದಿಂದ ಸಂರಕ್ಷಿಸಲ್ಪಟ್ಟ ಕೃಷ್ಣಮೃಗಗಳ ಅಭಿಯಾರಣ್ಯವಿದೆ. ಬಂಕಾಪುರ ನವಿಲುಧಾಮವಿದೆ. ಬ್ಯಾಡಗಿಯಲ್ಲಿ ಅಂತರಾಷ್ಟಿçÃಯ ಖ್ಯಾತಿ ಹೊಂದಿದ ಮೆಣಸಿನಕಾಯಿಯ ಮಾರುಕಟ್ಟೆಯಿದೆ. ಹೊಳೆ ಆನವೇರಿಯಲ್ಲಿ ತುಂಗಭದ್ರ ಮತ್ತು ಕುಮದ್ವತಿ ನದಿಗಳು ಸಂಗಮ ಆಗುತ್ತವೆ. ಇಲ್ಲಿ ಶ್ರೀರಾಮೇಶ್ವರ ಮತ್ತು ಶ್ರೀ ಬನಶಂಕರಿ ದೇವಾಲಯಗಳಿವೆ.

 ದೇವಾಲಯ ಸಂಸ್ಕೃತಿಯಾಚೆ ಹಾವೇರಿ ಜಿಲ್ಲೆಯಲ್ಲಿ ಮಠಗಳ ಸಂಸ್ಕೃತಿ ಶ್ರೀಮಂತವಾಗಿದೆ. ಮಠಗಳಲ್ಲಿ ಪಂಚಪೀಠ ಪರಂಪರೆಯ ಮಠಗಳು ಮತ್ತು ವಿರಕ್ತ ಮಠಗಳು ತಮ್ಮನ್ನು ಸಕ್ರಿಯವಾಗಿ ಸಮಾಜೋ ಧಾರ್ಮಿಕ ಕ್ಷೇತ್ರಗಳಿಗೆ ತೊಡಗಿಸಿಕೊಂಡಿವೆ. ಅಲ್ಲದೆ ಜಾತ್ರಾ ಮಹೋತ್ಸವ, ಕಾರ್ತಿಕ ಮಹೋತ್ಸವಗಳಲ್ಲಿ ಧಾರ್ಮಿಕ ಆಚರಣೆಯ ಜೊತೆ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ, ವೈಚಾರಿಕತೆಯ ವಿಷಯಗಳಿಗೆ ಸಂಬAಧಿಸಿದAತೆ ಕಾರ್ಯಕ್ರಮ ರೂಪಿಸಿ ೧೨ನೇ ಶತಮಾನದ ಶರಣರ ತತ್ವಗಳನ್ನು ಜನಮಾನಸದಲ್ಲಿ ನೆಲೆಗೊಳ್ಳುವಂತೆ ಮಾಡಿವೆ. ದಾಸೋಹದ ಮೂಲಕ ಅನ್ನ ಸಂತರ್ಪಣೆ ಮಾಡಿವೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಶಿಕ್ಷಣ ಕಲಿಯಲು ಅವಕಾಶ ಕಲ್ಪಿಸಿವೆ. ಉಚಿತ ನೇತ್ರದಾನ, ರಕ್ತದಾನ, ವೈದ್ಯಕೀಯ ಚಿಕಿತ್ಸೆ, ಕಣ್ಣು ತಪಾಸಣೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಹಾವೇರಿಯ ಹುಕ್ಕೇರಿಮಠ, ಹೊಸಮಠ, ಸಿಂದಗಿಮಠ, ಗೌರಿಮಠ, ಬಣ್ಣದ ಮಠ, ಅಕ್ಕಿಆಲೂರಿನ ವಿರಕ್ತಮಠ, ಅಗಡಿಯ ವಿರಕ್ತಮಠ, ಗುತ್ತಲದ ವಿರಕ್ತಮಠ, ಸವಣೂರಿನ ದೊಡ್ಡ ಹುಣಸೆಮಠ,  ಬಂಕಾಪುರದ ದೇಸಾಯಿಮಠ, ಕೂಡಲದ ಬಣ್ಣದಮಠ ಹೀಗೆ ಸಾಕಷ್ಟು ಜಿಲ್ಲೆಯ ಮಠಗಳು ತಮ್ಮನ್ನು ತೊಡಗಿಸಿಕೊಂಡು ಸಂಸ್ಕೃತಿ, ಆಚರಣೆಗಳ ಪರಂಪರೆಯನ್ನು ಉಳಿಸಿ ಬೆಳೆಸಿವೆ.

ಇಲ್ಲಿಯ ಅಡುಗೆಯ ಬಗೆಯಂತೂ ಬಾಯಲ್ಲಿ ನೀರೂರಿಸುವಷ್ಟು ರುಚಿಕಟ್ಟಾಗಿದೆ. ವೈವಿಧ್ಯಮಯ ಅಡುಗೆಗಳು ಬಾಯಿ ಚಪ್ಪರಿಸುವುದರ ಜೊತೆಗೆ ಆರೋಗ್ಯ ವರ್ಧನೆಗೆ ಸಹಕಾರಿಯಾಗಿವೆ. ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಕೆಂಪು ಚಟ್ನಿ, ಗುರಳ್ಳ ಚಟ್ನಿ, ಶೇಂಗಾ ಚಟ್ನಿ, ಅಗಸಿ ಚಟ್ನಿ, ಪುಟಾಣಿ ಚಟ್ನಿ, ಟೊಮ್ಯಾಟೋ ಕಾಯಿ ಚಟ್ನಿ, ಕರಂಡಿ, ಬದನೆಕಾಯಿ, ಬೆಂಡೆಕಾಯಿ ಚಟ್ನಿ, ಪುಂಡಿ ಸೊಪ್ಪಿನ ಚಟ್ನಿ, ಎಣ್ಣೆಗಾಯಿ ಪಲ್ಯ, ಉದುರು ಬೇಳೆ ಪಲ್ಯ, ಹೆಸರು ಅಲಸಂದಿ ಮಡಕೆ ಕಾಳು ಪಲ್ಲೆ, ಪುಂಡಿಪಲ್ಲೆ, ಕೊರೆದ ಹಿಟ್ಟಿನ ಪಲ್ಲೆ, ಅವರೆಕಾಳು ಪಲ್ಲೆ, ಸೊಪ್ಪಿನ ಸಾರು, ಕಟ್ಟಿನ ಸಾರು, ಬೇಳೆ ಸಾರು, ಮಜ್ಜಿಗೆ ಸಾರು, ತಂಬುಳಿ ಮುದ್ದಿ, ಹೋಳಿಗೆ, ಕಡಬು, ಗೋಧಿ ಹುಗ್ಗಿ, ಅಕ್ಕಿ ಹುಗ್ಗಿ, ಕರ್ಚಿಕಾಯಿ, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಹುರಕ್ಕಿ ಹೋಳಿಗೆ, ಸುರಳಿ ಹೋಳಿಗೆ, ಕೊಬ್ಬರಿ ಹೋಳಿಗೆ, ಖರ್ಜುರ ಹೋಳಿಗೆ, ಗೆಣಸಿನ ಹೋಳಿಗೆ, ಸಜ್ಜಕದ ಹೋಳಿಗೆ, ಹಚ್ಚಿದ ಅವಲಕ್ಕಿ, ಬಳ್ಳೊಳ್ಳಿ ಮಂಡಕ್ಕಿ, ಗಿರ್ಮಿಟ್, ಮಿರ್ಚಿ-ಬಜಿ ಕಾಂದಾ ಬಜಿ, ಮೈಸೂರು ಬಜಿ ಅಲಸಂದಿ, ಉದ್ದು, ಕಡಲೆ ಬೇಳೆ ವಡೆ,  ಚಕ್ಕಲಿ, ಕೋಡುಬಳೆ, ನಿಪ್ಪಟ್ಟು, ಮೆಂತೆ ಸೊಪ್ಪಿನ ಕಡುಬು, ತಾಲಿಪಟ್ಟಿ, ಉಂಡಗಡಬು, ಕುಚ್ಚಿದ ಮೆಣಸಿನ ಕಾಯಿ ಪಲ್ಯ, ಜೋಳದ ನುಚ್ಚು, ಹುಳಿ ಬುತ್ತಿ, ಮೊಸರು ಬುತ್ತಿ, ಚಿತ್ರಾನ್ನ ತರ ತರಹದ ಅಡುಗೆಗಳು ಅತಿಥಿಗಳ, ಮನೆ ಮಂದಿಯ ಹೊಟ್ಟೆ ತುಂಬಿಸುತ್ತವೆ. ಈ ಎಲ್ಲಾ ಬಗೆಬಗೆಯ ಖಾದ್ಯ ತಯಾರಿಸುವಲ್ಲಿ ಹಾವೇರಿ ಜಿಲ್ಲೆಯ ಮಹಿಳೆಯರದು ಎತ್ತಿದ ಕೈ. ಕರದಂಟು ಶೇಂಗಾ ಉಂಡಿ, ಎಳ್ಳು, ಗುಳಿಗೆ, ದಾಣಿ, ಗುಳ್ಳಡಕಿ, ಬೆಸನ್ ಹೀಗೆ ನಾನಾ ನಮೂನೆಯ ಉಂಡೆಗಳು ನಾಗರಪಂಚಮಿಗೆ ತಯಾರಾಗುತ್ತವೆ. ಪ್ರತಿ ಹಬ್ಬಕ್ಕೂ ಪ್ರತಿಯೊಬ್ಬರ ಮನೆಯಲ್ಲೂ ಇಂತಹ ವಿವಿಧ ಬಗೆಯ ಅಡುಗೆ ಸಂಭ್ರಮದಿAದ ಮಾಡಲ್ಪಡುತ್ತದೆ. ಮಜ್ಜಿಗೆ, ಮೆಣಸಿನಕಾಯಿ, ನಿಂಬೆ, ಮಾವು, ಕಂಚಿ, ನೆಲ್ಲಿ, ಚಳ್ಳ ಕಾಯಿ, ಕವಳಿಕಾಯಿ, ಹಾಗಲಕಾಯಿ, ಟೊಮೇಟೊ ಕಾಯಿ, ಬದನೆಕಾಯಿ, ಮೆಣಸಿನಕಾಯಿ ಹೀಗೆ ಬಗೆ ಬಗೆಯ ಉಪ್ಪಿನಕಾಯಿ ಬಗೆಬಗೆ ಹಪ್ಪಳ ಬಾಯಲ್ಲಿ ನೀರೂರಿಸದೆ ಇರಲಾರದು. ಹೀಗೆ ಅಡುಗೆ ಮಾಡುವ ನೀಡುವ ಉಣಿಸುವ ಉಣ್ಣುವ ಸಂಭ್ರಮಿಸುವ ಸಂಸ್ಕೃತಿಯು ಹಾವೇರಿ ಜಿಲ್ಲೆಯ ವಿಶಿಷ್ಟತೆಯಾಗಿದೆ. ಹಾವೇರಿ ಜಿಲ್ಲೆಯು ಸಂಗೀತ ನೃತ್ಯ ಕಲೆಗೂ ಹೆಸರಾಗಿದೆ. ಗಾನಯೋಗಿಗಳೆಂದೇ ಖ್ಯಾತರಾದ ಪಂಚಾಕ್ಷರಿ ಗವಾಯಿಗಳು ಹಿಂದುಸ್ತಾನಿ, ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಾವಿರಾರು ಅಂಧ ಮಕ್ಕಳಿಗೆ ದಾರಿದೀಪವಾಗಿದ್ದಾರೆ. ಗುರುವಿನಂತೆ-ಶಿಷ್ಯ ಎಂಬAತೆ ಪಂಡಿತ ಪುಟ್ಟರಾಜ ಗವಾಯಿಗಳು ಗುರುವಿನ ಮಾರ್ಗದಲ್ಲಿ ನಡೆದವರು. ಇವರು ಶ್ರೇಷ್ಠ ಮಹಾನ್ ಸಂಗೀತಗಾರರು, ಸಾಹಿತಿಗಳು ಬಹುಭಾಷಾ ವಿಶಾದರರಾಗಿ ಹಾವೇರಿ ಜಿಲ್ಲೆಯ ಕೀರ್ತಿಯನ್ನು ಇಮ್ಮಡಿಗೊಳಿಸಿದ್ದಾರೆ. ಅದೇ ರೀತಿ ಹೊಸರಿತ್ತಿಯ ಪಂಡಿತ ಸೋಮನಾಥ ಮರಡೂರ, ರಂಗ ಕಲಾವಿದರಾದ ಶ್ರೀಮತಿ ಸೋನು ಬಾಯಿ ದೊಡ್ಡಮನಿ, ಶ್ರೀಮತಿ ಜುಬೇದಾಬಾಯಿ, ಸವಣೂರ ತಾಲೂಕಿನ ಕಡಕೋಳ ಗ್ರಾಮದ ರಂಗಾಚಾರ್ಯರು(ವಾಯಲಿನ್ ವಾದಕರು), ಹನುಮಂತಪ್ಪ ತಿಮ್ಮಾಪುರ (ವಾಯಲಿನ್ ವಾದಕ), ರಾಣೆಬೆನ್ನೂರಿನ ಉತ್ತರಾಚಾರ್ಯ ಕಮ್ಮಾರ, ಕಣೆಕಲ್ ಮಾಸ್ತರ್, ಶೇಷಗಿರಿ ಮಾಸ್ತರ್ ಮುಂತಾದವರು ಸಂಗೀತ ಕ್ಷೇತ್ರದಲ್ಲಿ ಮಿನುಗಿದ ತಾರೆಗಳು. ಹಂಸಭಾವಿ ಕುಲಕರ್ಣಿ, ಮಮತಾ ನಾಡಿಗೇರ್ ನೃತ್ಯ ಕಲಾವಿದರು. ಸಂಗೀತ, ನಾಟ್ಯ, ಸಾಹಿತ್ಯ ತ್ರಿವೇಣಿ ಸಂಗಮದAತೆ ಹಾವೇರಿ ಜಿಲ್ಲೆ ಸಂಪದ್ಭರಿತವಾಗಿದೆ.

ಇಲ್ಲಿನ ಆಚರಣೆಗಳಂತೂ ತುಂಬಾ ವಿಶೇಷವಾಗಿವೆ ಅದರಲ್ಲೂ ಹಾವೇರಿ ಜಿಲ್ಲೆಯ ಜಾತ್ರಾ ವಿಶೇಷ ಆಚರಣೆಗಳಂತೂ ಆಕರ್ಷಕವಾಗಿವೆ. ಹಾವನೂರು ದ್ಯಾಮವ್ವನ ಜಾತ್ರೆ ಮದ್ದುಗಳನ್ನು ಸುಡಿಸುತ್ತಾ ದೇವಿಯನ್ನು ಚೌಕ ಕಟ್ಟಿಗೆ ಕರೆ ತರುವುದು ಅದ್ಭುತವಾಗಿರುತ್ತದೆ. ಕರ್ಜಗಿಯ ಭೂತಪ್ಪನಿಗೆ ಹೂರಣ ತಿಕ್ಕುವ ಜಾತ್ರೆ, ಹೊಸರಿತ್ತಿ, ಕರ್ಜಗಿಯಲ್ಲಿ ಕಡುಬಿನ ಕಾಳಗ ಜಾತ್ರೆ, ದೇವಗಿರಿಯಲ್ಲಿ ಹೋರಿ ಬೆದರಿಸುವ ಹಬ್ಬ ಇವೆಲ್ಲ ಜಾತ್ರೆಗಳು ಪರಂಪರೆಯ ಪ್ರೀತಿಯ ಆಚರಣೆಗಳು. ಕುರುವತ್ತಿ ಜಾತ್ರೆಯಲ್ಲಿ ಕೊಬ್ಬರಿ ಸುಡುತ್ತಾರೆ. ರಾಣೆಬೆನ್ನೂರ ತಾಲೂಕಿನ ದೇವರ ಗುಡ್ಡದಲ್ಲಿ ಮೈಲಾರಲಿಂಗನ ಜಾತ್ರೆಯಲ್ಲಿ ದನಗಳ ಪರಸಿ ನಡೆಯುತ್ತದೆ. ದೋಣಿ ತುಂಬಿಸುವ ಆಚರಣೆ ವಿಶಿಷ್ಟವಾಗಿದೆ. ಮೆಡ್ಲೇರಿ ಜಾತ್ರೆ ಆಚರಣೆಯಂತೂ ಬಹು ವಿಶೇಷವಾದದ್ದು ಇಲ್ಲಿಯ ಆಚರಣೆ ಆಧುನಿಕ ಜಗತ್ತಿಗೆ ಸವಾಲಿನಂತಿದೆ. ಈ ಜಾತ್ರೆಯಲ್ಲಿ ಕುರಿ ಹಾಲು ಬಳಸಿ ಮಾಡಿದ ಅನ್ನವನ್ನು ಒಂದು ವರ್ಷ ಹೂತಿಟ್ಟು, ಮುಂದಿನ ವರ್ಷ ತೆಗೆದಾಗ ಕೆಡದೆ ಇರುವುದೇ ಪವಾಡ. ರಾಣೆಬೆನ್ನೂರಿನ ಚೌಡೇಶ್ವರಿ, ಹೊನ್ನತ್ತಿಯ ದ್ಯಾಮವ್ವನ ಜಾತ್ರೆ ವಿಶೇಷ ಶಕ್ತಿ ದೇವತೆಯ ಜಾತ್ರೆಗಳಾಗಿವೆ.

 ಹಿರೇಕೆರೂರಿನ ದುರಗವ್ವ, ಮೆದೂರಿನ ಕಾಮನಹಬ್ಬ, ರಟ್ಟಿಹಳ್ಳಿ ವೀರಭದ್ರ ಜಾತ್ರೆ, ತಿಪ್ಪಾಯಿಕೊಪ್ಪ ಜಾತ್ರೆ, ಮಾಸೂರಿನ ದೇವಿ ಜಾತ್ರೆ, ಮದಗದ ಕೆರೆಯ ಜಾತ್ರೆ, ಕುಡುಪಲಿ ಜಾತ್ರೆ, ಶಿಗ್ಗಾವಿಯಲ್ಲಯಂತು ಸೌಹಾರ್ದತೆಯ ಜಾತ್ರೆಗಳಿವೆ. ಶಿಶುನಾಳ ಶರೀಫ – ಗುರುಗೋವಿಂದ ಭಟ್ಟರ ಜಾತ್ರೆ, ಸೈಯದ್ ಹಜರತ್ ಷಾಕಾಜಿ, ಹುಲಗೂರಿನ ದರ್ಗಾ ಜಾತ್ರೆ, ಗಂಗಿಬಾವಿ, ಗಂಜೀಗಟ್ಟಿ, ಬಂಕಾಪುರದ ದರ್ಗಾ ಜಾತ್ರೆ, ದುರಗವ್ವನ ಜಾತ್ರೆ, ಅರಳೆಲೆಮಠದ ಜಾತ್ರೆ, ಸವಣೂರಿನ ಕಾರಡಗಿಯ ವೀರಭದ್ರ ಜಾತ್ರೆ, ಮಂತ್ರವಾಡಿ ನಂಜುAಡೇಶ್ವರ, ದೊಡ್ಡ ಹುಣಸೆಮಠದ ಜಾತ್ರೆ, ಹುತ್ತ ಮಲ್ಲೇಶ್ವರನ ಜಾತ್ರೆ, ಉರಸು, ದರ್ಗಾ ಜಾತ್ರೆ, ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪುರ ಜಾತ್ರೆ ವಿಶಿಷ್ಟವಾದದ್ದು. ಗುಡ್ಡದ ಮಲ್ಲಾಪುರದಲ್ಲಿ ಎತ್ತು ಮಠಾಧಿಪತಿಯಾಗಿದೆ. ಕದರ ಮಂಡಲಗಿಯಲ್ಲಿ ಆಂಜನೇಯನ ತೆಪ್ಪೋತ್ಸವ, ಕೆಂಗೊAಡದ ದುರಗವ್ವ ಜಾತ್ರೆಯು ವಿಶಿಷ್ಟವಾಗಿದೆ. ಹೀಗೆ ಹಾವೇರಿ ಜಿಲ್ಲೆಯಲ್ಲಿ ಹೆಸರಿಸಿದ ಜಾತ್ರೆಗಳ ಆಚರಣೆಗಳಿವು. ಹೆಸರಿಸದೆ ಬಿಟ್ಟ ಇನ್ನೂ ಎಷ್ಟೋ ವಿಶೇಷ ಆಚರಣೆ ಜಾತ್ರೆಗಳು ಇಲ್ಲಿವೆ.

 ಜನಪದ ಆಚರಣೆಗಳಲ್ಲಿ ಹಾನಗಲ್ ನಲ್ಲಿ ನಡೆಯುವ ಹೋರಿ ಬೆದರಿಸುವ ಕ್ರೀಡೆ ವಿಶೇಷವಾದದ್ದು. ” ಧಮ್ ಇದ್ದವ ದನ ಬೆದರಿಸ್ತಾನ” ಎಂಬ ಮಾತಿನಂತೆ ಈ ಕ್ರೀಡೆ ಇರುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಾನಗಲ್ಲಿನಲ್ಲಿ ಇದು ನಡೆಯುತ್ತದೆ. ಓಡುವ ಹೋರಿ ಹಿಡಿದವರಿಗೂ, ಓಡಿ ಗೆದ್ದ ಹೋರಿಗೂ ಬಹುಮಾನ ಕೊಡಲಾಗುವುದು.

 ಅಲ್ಲದೆ ಇಲ್ಲಿ “ರಾಣಿಗ್ಯಾ” ಎಂಬ ಬೇಡರ ವೇಷ ತೊಟ್ಟು ಕುಣಿಯುವ ಆಚರಣೆ ಇದೆ. ಹಾವೇರಿ ಜಿಲ್ಲೆಯ ಬಹುತೇಕ ಕಡೆ ಮೊಹರಂ ಹಬ್ಬದಲ್ಲಿ ಹುಲಿ ವೇಷ ಧರಿಸಿ ಕುಣಿಯುವ ಆಚರಣೆಗಳು ಕಂಡುಬರುತ್ತವೆ. ಜೋಕನಹಳ್ಳಿಯಲ್ಲಿ ಬುಟ್ಟಿಯಲ್ಲಿ ಜೋಕುಮಾರನನ್ನು ಹೊತ್ತು ಮನೆ-ಮನೆಗೆ ಬರುತ್ತಾರೆ. ಮಳೆ ಬಾರದಿದ್ದಾಗ ಜೋಕುಮಾರನ ಬಾಯಿಗೆ ಬೆಣ್ಣೆ ತುಂಬುತ್ತಾರೆ. ಈ ಜೋಕುಮಾರ ಜೋಕ ಮುನಿಯ ಮಗ, ಭೂದೇವಿಯ ಸೌಂದರ್ಯಕ್ಕೆ ಮರುಳಾದ ಜೋಕಮುನಿ ಅವಳನ್ನು ಬಲತ್ಕಾರ ಮಾಡಿದಾಗ ಅವಳ ಗರ್ಭದಿಂದ ಹುಟ್ಟಿದವನೇ ಈ ಜೋಕುಮಾರ. ಇವನು ತಂದೆಯAತೆ ಕಾಮುಕ ಎಂಬ ಪ್ರತೀತಿ ಇದೆ. ಹಾವೇರಿ ಜಿಲ್ಲೆಯಲ್ಲಿರುವ ಲಂಬಾಣಿ ಜನಾಂಗದವರು ಹೋಳಿ ಹಬ್ಬದ ಆಸು-ಪಾಸು ಗುಂಪು ನೃತ್ಯ ಮಾಡಿ ಹಣ ಪಡೆಯುತ್ತಾರೆ. ರಾಣೆಬೆನ್ನೂರು ಆಸು ಪಾಸಿನಲ್ಲಿ ಹೋಳಿ ಹಬ್ಬದ ನಿಮಿತ್ತ ಜೀವಂತ ರತಿ-ಮನ್ಮಥರನ್ನು ಕೂಡಿಸಲಾಗುತ್ತದೆ. ಹಲವಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ. ಈ ಕಾಮ-ರತಿಯರನ್ನು ನಗಿಸುವ ಸವಾಲನ್ನು ಪ್ರೇಕ್ಷಕರಿಗೆ ಹಾಕಲಾಗುವುದು

.

 ಹಾನಗಲ್ಲ ಗ್ರಾಮೀಣ ಭಾಗದಲ್ಲಿ ಮೀನು ಹಬ್ಬ ಆಚರಿಸಲಾಗುತ್ತದೆ. ಇದೊಂದು ಸಂಪ್ರದಾಯಿಕ ಶೈಲಿಯ ಹಬ್ಬವಾಗಿದ್ದು, ಇದನ್ನು “ಮೀನು ಹಿಡಿಯುವ ಕಲೆ” “ಬಿದಿರು ಮೀನುಗಾರಿಕೆ” ಎಂದು ಕರೆಯುವರು. ದೀಪಾವಳಿಯಲ್ಲಿ ಸಾಮಾನ್ಯವಾಗಿ ೨ ತಿಂಗಳು “ಕೊಬ್ಬರಿ ಹೋರಿ ಓಡಿಸುವ” ಆಚರಣೆ ನಡೆಯುತ್ತದೆ. ಹೀಗೆ ಇಂತಹ ವಿಶಿಷ್ಟ ಆಚರಣೆಗಳು ಹಾವೇರಿ ಜಿಲ್ಲೆಯಲ್ಲಿ ವಿಶೇಷವಾಗಿವೆ. ಒಟ್ಟಿನಲ್ಲಿ ಹಾವೇರಿ ಜಿಲ್ಲೆಗೆ ಒಂದು ಶ್ರೀಮಂತ ಸಂಸ್ಕೃತಿಯ ಪರಂಪರೆ ಇದ್ದಂತೆ, ಜಾತ್ರೆ-ಹಬ್ಬ-ಹರಿದಿನ-ಕ್ರೀಡೆ-ಉತ್ಸವ ಮುಂತಾದ ವಿಶಿಷ್ಟ ಆಚರಣೆಗಳು ಇದ್ದು, ಒಂದು ಭವ್ಯ ಪರಂಪರೆಯನ್ನು ಕಟ್ಟಿಕೊಟ್ಟಿವೆ. ಇದರಿಂದ ಹಾವೇರಿ ಜಿಲ್ಲೆ ಕರ್ನಾಟಕದಲ್ಲಿ ವಿಶೇಷತೆಯಿಂದ ಗುರುತಿಸಿಕೊಂಡಿದೆ.


ಡಾ. ಪುಷ್ಪಾ ಶಲವಡಿಮಠ

4 thoughts on ““ಹಾವೇರಿ ಜಿಲ್ಲೆಯ ಶ್ರೀಮಂತ ಸಂಸ್ಕೃತಿ, ಪರಂಪರೆ, ಆಚರಣೆ”

  1. ಅದ್ಭುತವಾದ ಮಾಹಿತಿಯೊಂದಿಗೆ ಹಾವೇರಿ ಜಿಲ್ಲೆಯ ಇಂಚಿಂಚನ್ನು ಬಣ್ಣಿಸಿದ್ದೀರಿ

Leave a Reply

Back To Top