ಮಾದರಿ ಗಾಯಕಿಯಾಗಿದ್ದ ವಾಣಿ ಜಯರಾಂ

ನೆನಪು

ಮಾದರಿ ಗಾಯಕಿಯಾಗಿದ್ದ

ವಾಣಿ ಜಯರಾಂ

ದಕ್ಷಿಣ ಭಾರತದ ಸುಪ್ರಸಿದ್ಧ ಹಿನ್ನಲೆ ಗಾಯಕಿಯಾಗಿದ್ದ
ಶ್ರೀಮತಿ ವಾಣಿ ಜಯರಾಂ ಇತ್ತೀಚೆಗೆ ( 04.02.2023) ನಿಗೂಢ ರೀತಿಯಲ್ಲಿ
ಸಾವನ್ನಪ್ಪಿರುವುದು ಭಾರತೀಯ ಸಂಗೀತ ಕ್ಷೇತ್ರಕ್ಕೆ ಉಂಟಾಗಿರುವ ತೀವ್ರ ನಷ್ಟವಾಗಿದೆ. ಕೇವಲ 8 ವರ್ಷದ
ಮಗುವಿದ್ದಾಗಲೇ ಆಕಾಶವಾಣಿಯಲ್ಲಿ ಸಾರ್ವಜನಿಕ
ಕಾರ್ಯಕ್ರಮ ನೀಡಲು ಪ್ರಾರಂಭಿಸಿದ ವಾಣಿ ಜಯರಾಂ, ಕನ್ನಡ, ತಮಿಳು,ತೆಲುಗು, ಹಿಂದಿ, ಮರಾಠಿ, ಒರಿಯಾ, ಗುಜರಾತಿ
ಸೇರಿದಂತೆ ಸುಮಾರು 19 ಭಾಷೆಗಳ ಚಿತ್ರಗಳಲ್ಲಿ 10,000ಕ್ಕೂ
ಅಧಿಕ ಹಾಡುಗಳನ್ನು ಹಾಡುವ ಮೂಲಕ ಓರ್ವ ಶ್ರೇಷ್ಠ ಹಿನ್ನಲೆಗಾಯಕಿಯಾಗಿ ಜನ ಮಾನಸವನ್ನು ಸೂರೆಗೊಂಡಿದ್ದಾರೆ. ಆರ್ ಎನ್ ಜಯಗೋಪಾಲ್ ನಿರ್ದೇಶನದ ” ಕೆಸರಿನ ಕಮಲ” ಚಿತ್ರದ ಮೂಲಕ (1973,) ಇವರನ್ನು ಸುಪ್ರಸಿದ್ಧ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಕನ್ನಡ ಚಿತ್ರರಂಗಕ್ಕೆ‌ಪರಿಚಯಿಸಿದರು.
ಈ ಚಿತ್ರ ದ ” ನಗು ನೀ ನಗು” ಹಾಡು ವಾಣಿಯವರಿಗೆ
ಕನ್ನಡ ಚಿತ್ರರಂಗದಲ್ಲಿ ಭದ್ರ ನೆಲೆ ಒದಗಿಸಿತು. .
ಅಲ್ಲಿಂದ ಮುಂದೆ ಕನ್ನಡ ಚಿತ್ರರಂಗದ ಪ್ರಮುಖ ಹಿನ್ನಲೆ ಗಾಯಕಿಯಾಗಿ ರೂಪುಗೊಂಡ‌ ವಾಣಿ ಜಯರಾಂ, ಎಸ್ ಜಾನಕಿ, ಚಿತ್ರ ಪಿ.ಸುಶೀಲಾರಂತಹ ಅನುಪಮ ಗಾಯಕಿಯರ ಪ್ರಬಲ ಸ್ಪರ್ದೆಯ ನಡುವೆಯೂ ಶ್ರೇಷ್ಠ ಗಾಯಕಿಯಾಗಿ ಹೊರಹೊಮ್ಮಿದ್ದು ಈಗ ಗತ ಇತಿಹಾಸ.
ವಿಜಯಭಾಸ್ಕರ್ ಸಂಗೀತ ನಿರ್ದೇಶನದ ಬಹುತೇಕ ಚಿತ್ರಗಳಲ್ಲಿ ಹಾಡಿರುವ ವಾಣಿ ಜಯರಾಂ, ರಾಜನ್ ನಾಗೇಂದ್ರ, ಜಿ.ಕೆ.ವೆಂಕಟೇಶ್, ಸತ್ಯಂ ಎಂ.ರಂಗರಾವ್,
ಟಿ.ಜಿ.ಲಿಂಗಪ್ಪ, ಎಮ್ ಎಸ್ ವಿಶ್ವನಾಥನ್ ಕೆ.ವಿ.ಮಹಾದೇವನ್, ವೈದ್ಯನಾಥನ್, ಹಂಸಲೇಖ, ಶಂಕರ್ ಗಣೇಶ್ ಮುಂತಾದ ಸಂಗೀತ ದಿಗ್ಗಜರ ಸಾರಥ್ಯದಲ್ಲಿ ನೆನಪಿನಲ್ಲಿ ಉಳಿಯುವಂತಹ ನೂರಾರು
ಹಾಡುಗಳಿಗೆ ಜೀವ ತುಂಬಿದ್ದಾರೆ. ವಾಣಿ ಜಯರಾಂ ಹೆಸರು ಕೇಳುತ್ತಿದ್ದಂತೆಯೇ ಮೈಯೆಲ್ಲಾ ರೊಮಾಂಚನಗೊಂಡು ಅವರ ಸುಮಧುರ ಗೀತೆಗಳೆಲ್ಲಾ
ನಮ್ಮ ಸ್ಮೃತಿಯಲ್ಲಿ ಹಾದು ಹೋಗುತ್ತವೆ. ಪುಟ್ಟಣ್ಣ ಕಣಗಾಲ್ ರವರ ಹಲವಾರು ಚಿತ್ರಗಳಲ್ಲಿ ಹಾಡುರುವ ವಾಣಿ ಜಯರಾಂ, ಪುಟ್ಟಣ್ಣ ಕಣಗಾಲ್ ರವರ ಫೇವರೇಟ್ ಸಿಂಗರ್ ಆಗಿದ್ದರು.

ವಿ. ಮನೋಹರ್ ವಿರಚಿತ “ಹೊದೆಯಾ ದೂರ ನೀ ಜೊತೆಗಾರ ಸೇರಲು ಬಂದಾಗ” ( ಅನುಭವ), ಈ ಶತಮಾನದ ‌ಮಾದರಿ ಹೆಣ್ಷು
( ಶುಭ ಮಂಗಳ), ಸದಾ ಕಣ್ಣಲಿ ಪ್ರಯಣದ ಗೀತೆ ಹಾಡುವೆ ( ಕವಿರತ್ನ ಕಾಳಿದಾಸ), ಬೆಳ್ಳಿ ಮೋಡವೇ ಎಲ್ಲಿ
ಓಡುವೆ ( ವಸಂತ ಲಕ್ಷ್ಮೀ), ಭಾವವೆಂಬ ಹೂವು ಅರಳಿ
( ಉಪಾಸನೆ), ಮುತ್ತು ಮಳೆಗಾಗಿ ಹೊತ್ತು ಕಾದಿದೆ (ಬೆಳುವಳದ ಮಡಿಲಲ್ಲಿ), ಸವಿ ನೆನಪುಗಳು ಬೇಕು ಸವಿಯಲೀ ಬದುಕು ( ಅಪರಿಚಿತ) , ಏನೇನೋ ಆಸೆ, ನೀ ತಂದಾ ಭಾಷೆ ( ಶಂಕರ್ ಗುರು) ಜೀವನಾ ಸಂಜೀವನ
( ಹಂತಕನ ಸಂಚು), ಮಧು ಮಾಸ ಚಂದ್ರಮ ( ವಿಜಯ ವಾಣಿ), ಹಾಡು ಹಳೆಯದಾದರೇನು ಭಾವ ನವ ನವೀನ ( ಮಾನಸ ಸರೋವರ) ಮುಂತಾದ ಸುಮಧುರ ಗೀತೆಗಳನ್ನು
ಹಾಡಿರುವ ವಾಣಿ‌ ಜಯರಾಂ ಒಂದು ಹಂತದಲ್ಲಿ ಕನ್ನಡದ
ಅತಿ ಹೆಚ್ಚು ಬೇಡಿಕೆಯ ಹಿನ್ನಲೆ ಗಾಯಕಿಯಾಗಿದ್ದರು. ತೆಲುಗು ಚಿತ್ರರಂಗದಲ್ಲಿ ಸಹ ತಮ್ಮ ಛಾಪು ಮೂಡಿಸಿದ್ದ
ವಾಣಿ ಜಯರಾಂ, ಕೆ.ವಿ.ಮಹಾದೇವನ್ ಸಂಗೀತ‌‌ ನಿರ್ದೇಶನದಲ್ಲಿ ” ಶಂಕರಾಭರಣಂ” ಚಿತ್ರದ ಐದು ಹಾಡುಗಳನ್ನು ಹಾಡಿ ರಾಷ್ಟ್ರಪ್ರಶಸ್ತಿ ಗಳಿಸಿದ್ದಾರೆ. ಇನ್ನು
ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ಸಹ ನೂರಾರು ಸುಮಧುರ ಗೀತೆಗಳನ್ನು ಹಾಡಿ ಓರ್ವ ಶ್ರೇಷ್ಠ ಹಿನ್ನಲೆ ಗಾಯಕಿಯಾಗಿದ್ದ ಇವರಿಗೆ ಈ ವರ್ಷದ ” ಪದ್ಮಭೂಷಣ ” ಪ್ರಶಸ್ತಿ” ಘೋಷಿಸಲಾಗಿತ್ತು. ಆದರೆ ಅದನ್ನು ಸ್ವೀಕರಿಸುವುದಕ್ಕೆ ಮುಂಚಿತವಾಗಿಯೇ ನಮ್ಮನ್ನು ಅಗಲಿರುವುದು ಅತ್ಯಂತ ನೋವಿನ ಹಾಗೂ ವಿಷಾದಕರ
ಸಂಗತಿ.

ಡಾ.ರಾಜಕುಮಾರ್, ಡಾ.ಪಿ.ಬಿ.ಶ್ರೀನಿವಾಸ್, ಡಾ.ಎಸ್ ಪಿ
ಬಾಲಸುಬ್ರಹ್ಮಣ್ಯಂ, ಪದ್ಮಶ್ರೀ ಕೆ.ಜೆ.ಯೇಸುದಾಸ್, ಜಯಚಂದ್ರನ್, ಟಿ.ಎಂ.ಸೌಂದರಾಜನ್, ಮಲೇಶಿಯಾ ವಾಸುದೇವನ್ ಮುಂತಾದ ಮಹಾನ್ ಗಾಯಕರ ಜೊತೆ
ಹಾಡಿರುವ ವಾಣಿ ಜಯರಾಂ, ಕ್ಲಿಷ್ಟಕರವಾದ ಹಾಗೂ ಸಂಗೀತ ಪ್ರಧಾನವಾದ ಹಾಡುಗಳನ್ನು ಲೀಲಾಜಾಲವಾಗಿ, ಸ್ಪಷ್ಟ ಉಚ್ಚಾರಣೆ ಹಾಗೂ
ಮಾಧುರ್ಯಪೂರ್ಣವಾಗಿ ಹಾಡುತ್ತಿದ್ದರು. ಹೀಗಾಗಿಯೇ
ಅವರು ಅತಿ ಹೆಚ್ಚು ಬೇಡಿಕೆಯ ಪ್ರಭಾವಶಾಲಿ ಗಾಯಕಿಯಾಗಿ ಹೊರಹೊಮ್ಮಿದರು.

ಭಾತರದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಕೆಲಕಾಲ ಸೇವೆ ಸಲ್ಲಿಸಿದ್ದ ವಾಣಿಯವರು ಜಯರಾಂ ರವರನ್ನು ವಿವಾಹವಾಗಿದ್ದರು. ಜಯರಾಂ ರವರು 2018 ರಲ್ಲಿ ನಿಧನರಾದ ನಂತರ ಒಂಟಿ ಬದುಕು ಸಾಗಿಸುತ್ತಿದ್ದ ವಾಣಿಯವರಿಗೆ ಸಂತಾನ ಭಾಗ್ಯವಿರಲಿಲ್ಲ. . ಆದರೂ ಸಹ ಸಂಗೀತವನ್ನೇ ತಮ್ಮ ಕುಟುಂಬ ಅಷ್ಟೇ ಏಕೆ ಉಸಿರು
ಎಂದು ಭಾವಿಸಿದ್ದ ಈ ಮೇರು ಗಾಯಕಿಗೆ ಗೌರವಪೂರ್ವಕ ಶ್ರದ್ಧಾಂಜಲಿಗಳು.


ಕೆ.ವಿ.ವಾಸು

Leave a Reply

Back To Top