ಅಂಕಣ ಸಂಗಾತಿ

ಸುಜಾತಾ ರವೀಶ್

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಎ ಎನ್ ಮೂರ್ತಿರಾವ್

ಸಮಗ್ರ ಲಲಿತ ಪ್ರಬಂಧಗಳ ಸಂಕಲನ

ಸಮಗ್ರ ಲಲಿತ ಪ್ರಬಂಧಗಳ

ಎ ಎನ್ ಮೂರ್ತಿರಾವ್

ಪ್ರಥಮ ಮುದ್ರಣ  ೧೯೮೮

ಪ್ರಕಾಶಕರು ಅಂಕಿತ ಪುಸ್ತಕ

ಸಮಗ್ರ ಲಲಿತ ಪ್ರಬಂಧಗಳ

ಎ ಎನ್ ಮೂರ್ತಿರಾವ್

ಪ್ರಥಮ ಮುದ್ರಣ  ೧೯೮೮

ಪ್ರಕಾಶಕರು ಅಂಕಿತ ಪುಸ್ತಕ

ಎ ಎನ್ ಮೂರ್ತಿರಾವ್ ಎಂದೇ ಪ್ರಸಿದ್ಧರಾದ ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾಯರು ಕನ್ನಡ ಸಾಹಿತ್ಯ ದಿಗ್ಗಜಗಳಲ್ಲಿ ಒಬ್ಬರು. ಎಲ್ಲಾ ರೀತಿಯ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದರೂ ಅವರ ಲಲಿತ ಪ್ರಬಂಧಗಳದೇ 1ತೂಕ . ವಿಶಿಷ್ಟ ಎನಿಸುವ ಈ ಸಾಹಿತ್ಯ ಪ್ರಕಾರ ಇವರಿಗೆ ಸಹಜವಾಗಿ ಒಲಿದು ಬಂದಿತ್ತು. ತಿಳಿಹಾಸ್ಯದೊಂದಿಗೆ ಜೀವನದ ಅನುಭವಗಳನ್ನು ಮೇಳೈಸಿ ಹೊಸೆವ ಪರಿ ಅದ್ಭುತ ಅನನ್ಯ. ಜೂನ್೧೬  ೧೯೦೦ ರಂದು ಅಕ್ಕಿ ಹೆಬ್ಬಾಳದಲ್ಲಿ ಜನಿಸಿದ ಈ ಶತಾಯುಷಿ ನಿಧನ ಹೊಂದಿದ್ದು ೨೩.೮.೨೦೦೩ ರಲ್ಲಿ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಕೃತಿಗಳನ್ನು ರಚಿಸಿದ್ದಾರೆ.  ಕೆಲವು ಮುಖ್ಯವಾದುವುಗಳೆಂದರೆ ಹಗಲುಗನಸುಗಳು, ಅಲೆಯುವ ಮನ, ಮಿನುಗು ಮಿಂಚು (ಲಲಿತ ಪ್ರಬಂಧಗಳು) ಯೋಧನ ಪುನರಾಗಮನ, ಪಾಶ್ಚಾತ್ಯ ಸಣ್ಣ ಕಥೆಗಳು (ಅನುವಾದಿತ ಸಣ್ಣ ಕತೆಗಳು) ಶೇಕ್ಸ್ ಪಿಯರ್ ಪೂರ್ವಭಾಗ, ಮಾಸ್ತಿಯವರ ಕತೆಗಳು, ಪೂರ್ವಸೂರಿಗಳೊಡನೆ, ವಿಮರ್ಶಾತ್ಮಕ ಪ್ರಬಂಧಗಳು, ಸಾಹಿತ್ಯ ಮತ್ತು ಸತ್ಯ (ವಿಮರ್ಶೆ) ಆಷಾಢಭೂತಿ (ತಾರ್ತೂಫ್) ಮೋಲಿಯರ್ ನ 2 ನಾಟಕಗಳು ಚಂಡಮಾರುತ (tempest)ಅನುವಾದಿತ ನಾಟಕಗಳು. ಇವರ ಪ್ರವಾಸಕಥನ ಅಪರ ವಯಸ್ಕನ ಅಮೆರಿಕಾಯಾತ್ರೆ ತುಂಬಾ ಜನಪ್ರಿಯ. ಸಂಜೆಗಣ್ಣಿನ ಹಿನ್ನೋಟ ಇವರ ಆತ್ಮಚರಿತ್ರೆ. ಚಿತ್ರಗಳು ಮತ್ತು ಪತ್ರಗಳು (ನೆನಪು) ಪುಸ್ತಕಕ್ಕೆ 1979ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ .ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಥಮ ನಿರ್ದೇಶಕರು. ೧೯೮೪ರಲ್ಲಿ ನಡೆದ ಐವತ್ತಾರನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಸಹ .

ಇತ್ತೀಚೆಗೆ ನನ್ನ ಸಂಗ್ರಹಕ್ಕೆ ಸೇರಿದ ಕೃತಿ “ಮೂರ್ತಿರಾಯರ ಸಮಗ್ರ ಲಲಿತ ಪ್ರಬಂಧಗಳು”. ಮನೆಯಲ್ಲಿದ್ದ ಹಳೆಯ ಪ್ರಬುದ್ಧ ಕರ್ನಾಟಕ ಪತ್ರಿಕೆಯಲ್ಲಿ ಚಿಕ್ಕಂದಿನಲ್ಲಿ ಒಂದೆರಡು ಪ್ರಬಂಧಗಳನ್ನು ಓದಿದ್ದೆ .ಕೆನ್ಸಿಂಗ್ ಟನ್ ಪಾರ್ಕ್ ಇನ್ನೂ ನೆನಪಿನಲ್ಲಿದೆ. ಈ ಪುಸ್ತಕದಲ್ಲಿ ಅವರ ಎಲ್ಲ ಪ್ರಬಂಧ ಸಂಗ್ರಹಗಳಲ್ಲದೆ ಕೆಲವು ಬಿಡಿ ಪ್ರಬಂಧಗಳೂ ಇವೆ. ಉತ್ತಮ ಸಂಗ್ರಹಯೋಗ್ಯ ಕೃತಿ.  ಇಡೀ ಪುಸ್ತಕದ ವ್ಯಾಪ್ತಿಯನ್ನು 1 ಪರಾಮರ್ಶೆಯಲ್ಲಿ ಹಿಡಿದಿಡಲಾಗದು. ಹಾಗಾಗಿಯೇ . ಒಂದೊಂದು ಬಿಡಿ ಸಂಗ್ರಹದ ಬಗ್ಗೆಯೇ ಬರೆಯೋಣ ಎಂದು. ಈ ದಿಶೆಯಲ್ಲಿ ಮೊದಲ ಯತ್ನ ಈ ಹಗಲುಗನಸುಗಳು ಕೃತಿಪರಿಚಯ.

ಲಲಿತ ಪ್ರಬಂಧವೆಂದರೆ ವಿಷಯಗಳ ಸ್ವಾರಸ್ಯವನ್ನು ತಮ್ಮ ಅನುಭವದ ಮೆಲುಕಿನಲ್ಲಿ ಹೇಳುವ ಕಥನ . ಭಾಷೆ ಭಾವ ಲಾಲಿತ್ಯಗಳು ಲಲಿತ ಪ್ರಬಂಧವೆಂಬ ನಾಣ್ಯದ 2 ಮುಖಗಳು. ಪ್ರಸ್ತುತ ಈ ಸಂಕಲನದಲ್ಲಿ ಒಟ್ಟು 6 ಪ್ರಬಂಧಗಳಿದ್ದು ಲೇಖಕರ ಜೀವನದ ಸಂದರ್ಭಗಳನ್ನು ಹಾಸ್ಯಮಯವಾಗಿ ಇಲ್ಲಿ ನಿರೂಪಿಸಿದ್ದಾರೆ . ಕೆಲವೊಮ್ಮೆ ತುಟಿಯಂಚಿನ ನಗು ಹಲವೊಮ್ಮೆ ಪುಸ್ತಕ ಕೆಳಗಿಟ್ಟು ನಗುವೋ ನಗು.  ಕೆಲವೊಂದು ಘಟನೆಗಳು ನಮ್ಮ ಜೀವನದಲ್ಲೂ ನಡೆದಿರಬಹುದು. ಅವುಗಳನ್ನು ಮೆಲುಕು ಹಾಕುವಂತೆ ಮಾಡುವ ಬರಹಗಳು .

ಗೌರಜ್ಜಿ

ತಮ್ಮ ತಂದೆಯ ದೊಡ್ಡಮ್ಮ ಗೌರಜ್ಜಿ ಚಿಕ್ಕ ವಯಸ್ಸಿಗೆ ವೈಧವ್ಯ ಪ್ರಾಪ್ತಿಯಾಗಿ  ನವೆದು ನಂತರ ಕಂಡವರ ಮಕ್ಕಳನ್ನು ಬೆಳೆಸಿ ಅವರ  ಹಿತ ಕಂಡಾಕೆ.  ಹಿಂದೆಲ್ಲ ಈ ತರಹದ ಬಾದರಾಯಣ ಸಂಬಂಧದವರನ್ನೂ ಜತೆಯಲ್ಲಿರಿಸಿಕೊಂಡು ನೋಡಿಕೊಳ್ಳುತ್ತಿದ್ದರು. ಅವರು ಹೇಳಿದ ಹಿಂದಿನವರ ಜೀವನ ಚಿತ್ರಣಗಳು, ಮಕ್ಕಳನ್ನುಉಪವಾಸಕ್ಕೆ ಎಡೆಗೊಡದೆ ಅರಳು ಅವಲಕ್ಕಿ ಬೆಲ್ಲ ಕೊಡುತ್ತಿದ್ದ ಮಮತೆಯ ಬಗ್ಗೆ ವಿವರಿಸುತ್ತಾರೆ. ತಮ್ಮ ತಂದೆಯವರ ಬಾಲ್ಯದ ಕಥೆ ಹೇಳಿ ಶಿಸ್ತಿನ ಸಿಪಾಯಿಯಾದ ಅವರಿಗೂ ನಾಚಿಕೆ ಬರಿಸುವ ಗೌರಜ್ಜಿ ಯೆಂದರೆ ಮಕ್ಕಳಿಗೆಲ್ಲ ಪ್ರೀತಿ. ಕಡೆಯಲ್ಲಿ 1 ಮಾತು ಹೇಳುತ್ತಾರೆ “ಎಷ್ಟು ಆದರದಿಂದ ಕಂಡರೇನು ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿದ್ದ ಹಾಗಾಯಿತೆ? ಪ್ರಾಯಶಃ ಇಂದು ಅವರಿದ್ದು ನಾಯಿಕೊಡೆಯಂತೆ ವೃದ್ಧಿಸುತ್ತಿರುವ ವೃದ್ಧಾಶ್ರಮಗಳ ಸಂಖ್ಯೆ ಯನ್ನು ನೋಡಿದ್ದರೆ ಪ್ರಾಯಶಃ ಈ ಮಾತಾಡುತ್ತಿರಲಿಲ್ಲ .ಈ ಸಾಲುಗಳು ತುಂಬಾ ಖುಷಿ ಕೊಟ್ಟವು “ಸಂಜೆಯ ಹೊಂಬಿಸಿಲಿನಲ್ಲಿ ದೂರದಲ್ಲಿರುವ ಗಿಡಮರಗಳಿಲ್ಲದ ಬರಿಯ ಕಲ್ಲು ಬೆಟ್ಟಕ್ಕೂ ಚಿನ್ನದ ಮೆರುಗು ಬರುವುದು . ಹಾಗೆಯೇ ಜನಗಳಿಗೂ ವಯಸ್ಸಾದ ಮೇಲೆ ಹಿಂದಿನ ಕಾಲಕ್ಕೆ ಸಂಬಂಧಿಸಿದ ಎಲ್ಲಾ 1 ಕಾಂತಿಯನ್ನು ತಳೆದಂತೆ ತೋರಬಹುದು.”

ಹಗಲುಗನಸುಗಳು

ಜೀವನದಲ್ಲಿ ಹಗಲುಗನಸುಗಳು ಕಾಣದವರು ಯಾರಾದರು ಉಂಟೆ? “ಹಗಲುಗನಸು ಕಾಣುವವರು ಪರಮಸುಖಿಗಳು” ಎನ್ನುತ್ತಾ ತಾವು ಬಾಲ್ಯದಲ್ಲಿ ಹರೆಯದಲ್ಲಿ ಕಾಣುತ್ತಿದ್ದ ಸುರಮ್ಯ ಕಲ್ಪನಾ ಲೋಕಕ್ಕೆ ನಮ್ಮನ್ನು ಕೊಂಡೊಯ್ದು ಬಿಡುತ್ತಾರೆ. ಕಲ್ಪನೆ ಕನಸು ವಾಸ್ತವಗಳ ಮಧ್ಯೆ ವ್ಯತ್ಯಾಸವಿರದ 1ಸುಂದರ ಲೋಕದ ಪರ್ಯಟನೆ ಈ ಲೇಖನ. ಓದುತ್ತಿದ್ದಂತೆ ನಮ್ಮ ಭಾವನೆಗಳೇ ಅಕ್ಷರಗಳಾಗಿ ಕಣ್ಮುಂದೆ ಕುಣಿಯುತ್ತಿರುವ ಅನುಭವ. ನಿಜ ಕನಸುಗಳಿರದ ಜೀವನಕ್ಕೆ ಅರ್ಥವೇ ಇಲ್ಲ. “ಕನಸಿನ ಲೋಕದಲ್ಲಿರುವ ನಮಗೆ ನಮ್ಮ ಬಯಕೆಗಳು ಕೈಗೂಡದಿದ್ದರೂ ಬಯಕೆಯಾದರೂ ಇದೆ”.  “ಹಗಲುಗನಸುಗಳನ್ನು ಕಾಣುವವನಿಗೆ ಸುಖವಿಲ್ಲವೆಂದರೂ ಅವನಷ್ಟು ಪರಮಸುಖಿ ಮತ್ತಾರೂ ಇಲ್ಲ” ಎಷ್ಟು ಅರ್ಥಪೂರ್ಣ ಸಸ್ಯವಾದ ನುಡಿಗಳು ಅಲ್ಲವೇ?

ಹೂವುಗಳು

ಯಾರೋ ಕವಿಯ ಮಾತುಗಳನ್ನು ಉದ್ಧರಿಸುತ್ತಾರೆ “ನಕ್ಷತ್ರಗಳು ಅಂತರಿಕ್ಷದ ಕವನ” ಅಂತೆಯೇ ಹೂವುಗಳು ಭೂದೇವಿಯ ಕವನ ಎನ್ನುತ್ತಾ ಹೂಗಳ ಸೊಗಸು ಅವುಗಳು ಕೊಡುವ ಮೃದುಲ ಅನುಭೂತಿಯ ಬಗ್ಗೆ ಬರೆಯುತ್ತಾರೆ .ತೋಟದಲ್ಲಿ ಬೆಳೆದವಲ್ಲದೆ ರಸ್ತೆ ಬದಿಯ ಕಾಡು ಹೂಗಳೂ ಇವರಿಗೆ ಪ್ರಿಯ.  ಇವರ ಗಮನದ ಪರಿಧಿಗೆ ಬೀಳುತ್ತವೆ . ಅವರು ಮಲ್ಲಿಗೆ ಮತ್ತು ಜಾಜಿಯ ವ್ಯತ್ಯಾಸವನ್ನು ಬರೆದಿರುವ ರೀತಿ ಓದಿಯೇ ತಿಳಿಯಬೇಕು. ಮಲ್ಲಿಗೆಯ ಪರಿಮಳ ಮಾಧುರ್ಯದಂತೆ ಆದರೆ ಜಾಜಿಯ ಸೌರಭ ಮಾರ್ದವದಂತೆ.ಆಹಾ!  ಎಂತಹ ಸೊಗಸಾದ ಅವಲೋಕನ ನೋಡಿ. ಪ್ರಕೃತಿ ಸಹಜ ಹೂಗಂಧ ಬಿಟ್ಟು ಈಗ ಕೃತಕ ಪರಿಮಳದ ಕಡೆ ಆಕರ್ಷಿತರಾದ ಬಗ್ಗೆ ವಿಷಾದಿಸುತ್ತಾರೆ . ೧೯೩೦ರಲ್ಲಿ ಅವರು ನುಡಿದ ಮಾತು “ನಮ್ಮ ಸ್ತ್ರೀಯರು ಇನ್ನೂ ಹೂವು ಮುಡಿಯುವುದು ಬಿಡುವಷ್ಟು ನಾಗರೀಕ ರಾಗದಿರುವುದು ನಮ್ಮ ಭಾಗ್ಯ”.  ಈಗ ನಡೆಯುತ್ತಿರುವ ದೌರ್ಭಾಗ್ಯದ ವಿದ್ಯಮಾನಗಳನ್ನು ನೋಡಿದರೆ ಏನನ್ನುತ್ತಿದ್ದರೋ?

ಗಾಡಿಯ ಪ್ರಯಾಣ

ಆ ಕಾಲದಲ್ಲಿ ರೈಲುಗಾಡಿ ಇದ್ದರೂ ಲೇಖಕರಿಗೆ ಎತ್ತಿನಗಾಡಿಯ ಪ್ರಯಾಣವೇ ಇಷ್ಟವಂತೆ.  ಇಡೀ ರಾತ್ರಿಯಲ್ಲಿ ಸಾಗುತ್ತಿದ್ದ ಇಂತಹ ಎತ್ತಿನಗಾಡಿಯ ಪಯಣದ ಕಥೆ ಅದರ ಬಗ್ಗೆ ತಿಳಿದಿರದ ನಮಗೆ ಹೊಸದೊಂದು ಪ್ರಪಂಚದ ಪರಿಚಯ ಮಾಡಿಸುತ್ತದೆ. ರಾತ್ರಿ ಪ್ರಯಾಣದ ಚೌಕಿ, ಅಲ್ಲಿನ ಕರವಸೂಲಿ, ಜಡೆಮುನಿ, ಮೋಹಿನಿಗಳ ಕಥೆಗಳು ಮೈನವಿರೇಳಿಸಿದರೆ  ಅಂದೂ ದಾಳಿ ನಡೆಸಿ ಸುಲಿಯುತ್ತಿದ್ದ ಕಳ್ಳರು ಡಕಾಯಿತರ ಪ್ರಸಂಗಗಳು ಭಯ ತರಿಸುತ್ತದೆ. ಲೇಖಕರ ರಸಿಕಮನದ ಈ ಉದ್ಧೃತವನಿಷ್ಟು ನೋಡಿ. “ಬೆಳದಿಂಗಳಲ್ಲಿ ನೆನೆದು ಹರಿಯುತ್ತಿರುವ ಹುಣ್ಣಿಮೆಯ ರಾತ್ರಿ, ಸಾಲುಮರಗಳ ನಡುವೆ ಸುತ್ತಿ ಸುತ್ತಿ ಕೊಂಡು ಹೋಗುವ ರಸ್ತೆ, ಒಳ್ಳೆಯ ಜಾತಿಯ ಎತ್ತುಗಳು ತುಯ್ಯುತ್ತಿರುವ ಗಾಡಿ, ಜತೆಯಲ್ಲಿ ನನ್ನ ನಲ್ಲೆ;  ಪ್ರಯಾಣವು ನಿಧಾನ ವಾದರೇನು, ನಿಶ್ಚಿತ ಸ್ಥಳವನ್ನು ತಲುಪಿದರೇನು_ ತಲುಪದಿದ್ದರೆ ತಾನೆ ಏನು?

ಕುರುಡ

ಪಗಡೆಯಾಟ ಹುರಿಗಾಳಿನ ಕುರುಕಲು ಎಂದು ಆರಂಭ ಮಾಡುತ್ತಾ ಬಾಗಿಲಿಗೆ ಬಂದ ಭಿಕ್ಷುಕ ಹಾಗೂ ಅವನ ಜೊತೆಯಿದ್ದ ವೃದ್ದ ತಾಯಿಯ ಸುತ್ತ ತಿರುಗುತ್ತದೆ ಪ್ರಬಂಧ.  .ಅಗಸರವ ಶರ್ಟು ಸುಟ್ಟನೆಂದು ಅಸಹನೆಗೊಳ್ಳುವ  ತನಗೂ ಆ ವೃದ್ಧ ತಾಯಿಯ ತಾಳ್ಮೆಯ ಸ್ಥಿತಿಗೂ ತುಲನೆ ಮಾಡಿ ಕೊಳ್ಳುತ್ತಾರೆ. ಕಾಟಾಚಾರಕ್ಕೆ ಎರಡಾಣೆ ಕೊಟ್ಟು ಬರುವ ತನಗೂ ಅವರೊಂದಿಗೆ ಕಷ್ಟಸುಖ ಮಾತನಾಡಿ ಸಾಂತ್ವನ ಹೇಳಿ ಹಳೆಯ ಬಟ್ಟೆಗಳನ್ನು ಕೊಡುವ ಪತ್ನಿ ಲಲಿತೆಯ ವಿಶಾಲ ಮನೋಭಾವಕ್ಕೂ ತಕ್ಕಡಿ ತೂಗಿ ಪತ್ನಿಯ ಹಿರಿತನ ಮೆಚ್ಚುತ್ತಾರೆ.  ತಾವೇ ಸರಿ ಎಂದೂ ಬೇರೆಯವರ ನಡವಳಿಕೆಯಲ್ಲಿ ತಪ್ಪು ಹುಡುಕುವ ಇಂದಿನ ಎಷ್ಟೋ ಪತಿಮಹಾಶಯರ ಜತೆ ತೂಗಿದಾಗ ಲೇಖಕರು  ನಿಜಕ್ಕೂ ಹಿರಿಯರೆನಿಸುತ್ತಾರೆ . 

ಲಲಿತೆಯ ವಿದ್ಯಾಭ್ಯಾಸ

ಪತ್ನಿಗೆ ಇಂಗ್ಲಿಷ್ ಕಲಿಸಲು ಹೊರಡುವ ಲೇಖಕರಿಗೆ ಎದುರಾದ ಸವಾಲುಗಳು ಪಟ್ಟ ಪರಿಪಾಟಲುಗಳನ್ನು ಹಾಸ್ಯವಾಗಿ ಹೇಳುತ್ತಾರೆ. ಕಡೆಗೆ ತನ್ನಿಂದ ಸಾಧ್ಯವಾಗದೆ ಮೇಷ್ಟರನ್ನು ಇರಿಸಿ ಕಲಿಸಬೇಕಾಗುತ್ತದೆ . ಈ ತುಂಟತನದ ಸಾಲುಗಳು ಎಷ್ಟು ನವಿರು ನೋಡಿ .ಸಂಜೆ ಶಾರದಾ ಪೂಜೆ ಮಾಡಿ ಕೊಬ್ಬರಿ ಸಕ್ಕರೆ ಚರ್ಪು ಹಂಚಿದ್ದಾಳೆ ಲಲಿತೆ .ಇವರಿಗೆಂದು ಸ್ವಲ್ಪ ಇಟ್ಟಿದ್ದನ್ನು ಇವರು ಬಂದ ಮೇಲೆ ತಾನೆ ತಿಂದು ಬೇಡುತ್ತಾಳೆ .ಆಗ ಲೇಖಕರು ಹೇಳುವುದು” ಕಡೆಗೆ ನನಗೆ ಏನೂ ಹೇಳಲು ತೋರಲಿಲ್ಲ .ಅಷ್ಟು ಹೊತ್ತಿಗೆ ಕೊಬ್ಬರಿಸಕ್ಕರೆ ಎಲ್ಲ ಅದೃಶ್ಯವಾಗಿತ್ತು. ಲಲಿತೆಯ ತುಟಿ ಮೇಲೆ ಸ್ವಲ್ಪ ಮಾತ್ರ ಇತ್ತು. ನನಗೆ ಸಿಕ್ಕಿದ್ದು ಅಷ್ಟೆ “

ಪ್ರಣಯಯಾತ್ರೆ

ಪಾಶ್ಚಾತ್ಯ ಕತೆಗಳನ್ನು ಓದಿ ತಾವು ಹನಿಮೂನ್ ಪ್ರಣಯ ಯಾತ್ರೆಗೆ ಹೊರಡಬೇಕೆಂದು ಹತ್ತಿರದ ಸುಂದರ ಹಳ್ಳಿಗೆ ಹೊರಡುವ ಯುವಜೋಡಿಯ ಕಷ್ಟಗಳು, ಪಾಪಿ ಸಮುದ್ರ ಹೊಕ್ಕರೂ ಎಂಬಂತಾಗಿ ಕಡೆಗೆ ವಾಪಸ್ಸು ಬರುವ ಕಥಾನಕ. ಮದ್ಯದ ಸರಸ ವಿರಸಗಳು ಮನಸ್ಸಿಗೆ ಮುದ ನೀಡುತ್ತದೆ. ಪತ್ನಿಯೊಂದಿಗೆ ವಾಯುವಿಹಾರ ಹೊರಟಾಗ ಊರವರೆಲ್ಲ ನಿಂತು ನೋಡುವುದು, ಬಾವಿಯಲ್ಲಿ ನೀರು ಸೇದಲು ಪಡುವ ಬವಣೆ ನಗೆಯುಕ್ಕಿಸುತ್ತದೆ .ಹನಿಮೂನ್ ಅಚ್ಚ ಕನ್ನಡದ ಅವತರಣಿಕೆ ಪ್ರಣಯಯಾತ್ರೆ ಎಂತಹ ಸೊಗಸಾದ ಸಮಂಜಸ ಪದ ಅಲ್ಲವೇ?

ಲೇಖಕರೇ ಮತ್ತೊಂದು ಕಡೆ ಹೇಳುವಂತೆ ಹರಟೆ  ನಾಲ್ಕಾರು ಗೆಳೆಯರು ಸೇರಿ ನಡೆಸುವ ಸಂಭಾಷಣೆ ಯಾದರೆ ಲಲಿತಪ್ರಬಂಧ ಆಪ್ತ ಗೆಳೆಯನ  ಅಥವಾ ಅವನೊಡನೆ ಮಾತನಾಡುತ್ತಿರುವೆ ಎಂಬ ಭಾವದೊಂದಿಗೆ ಆಡುವ ಮಾತು.  ಹಾಗಾಗಿ ಇದು ಸ್ವ ಕೇಂದ್ರೀಕೃತವಾದರೆ ಖಂಡಿತ ತೊಂದರೆಯಿಲ್ಲ. ಆದರೆ ಲಲಿತ ಪ್ರಬಂಧಗಳು ತೀರಾ ಹಗುರ ನಿರೂಪಣೆಯಾದರೆ ಹರಟೆಯಾಗುವ ಸಾಧ್ಯತೆ ಉಂಟು . ಅಥವಾ ತೀರ ಸಂಕೀರ್ಣತೆಯಿಂದ ಕೂಡಿದರೆ ವೈಚಾರಿಕ ಪ್ರಬಂಧವಾಗುವ ಭೀತಿ. ಇವೆರಡರ ನಡುವಿನ ಹದಮಿಳಿತ ಸಂಬಂಧ ಒಂದು ಸೊಗಸಾದ ಲಲಿತ ಪ್ರಬಂಧದ ಜನ್ಮಕ್ಕೆ ಕಾರಣವಾಗುತ್ತದೆ . ಈ ಹದ ಆ ನಯ ಮೂರ್ತಿರಾಯರ ಪ್ರಬಂಧಗಳಲ್ಲಿವೆ.  ಹೆಚ್ಚುಕಡಿಮೆ ಎಂಭತ್ತು ವರ್ಷ ಅಂದರೆ 3 ತಲೆಮಾರಿನ ಅಂತರದ ಹಿಂದಿನ ಬಾಳುವೆಯ ಬಗ್ಗೆ ಚಿತ್ರಣ ಕೊಡುತ್ತದೆ.   ಮೊದಲ ಮುದ್ರಣದ ಅರಿಕೆ ಯಲ್ಲಿ ಹೇಳಿರುವಂತೆ ಈ ಸಂಗ್ರಹಕ್ಕೆ ೧೯೩೬ನೆಯ ಇಸವಿಯ ದೇವರಾಜ ಬಹದ್ದೂರ್ ಬಹುಮಾನ ಗಳಲ್ಲಿ ಎರಡನೆಯ ಬಹುಮಾನ ದೊರೆಯಿತಂತೆ.  ಇಡೀ ಸಮಗ್ರ ಸಂಕಲನ ತಮ್ಮ ಪ್ರಬಂಧಗಳಲ್ಲಿ “ಲಲಿತೆ” ಯಾಗಿರುವ ತಮ್ಮ ಪತ್ನಿ ಜಯಲಕ್ಷ್ಮಿ ಅವರ ನೆನಪಿಗೆ ಸಮರ್ಪಿಸಿದ್ದಾರೆ. ಇದೂ ಸಹ ಒಂದುಅಪೂರ್ವ ವಿಷಯವೇ .

೧೯೩೦ರ ದಶಕದ ಸಂಗತಿಗಳು ಪ್ರಸಂಗಗಳು ಕೆಲವೊಂದು ಅಪರಿಚಿತವೆನಿಸಿದರೂ ಮೂಲಭೂತ ಭಾವನೆಗಳು ಅಂತರ್ಗತ ಸ್ಪಂದನೆಗಳು ಇಂದಿಗೂ ಹೊಚ್ಚ ಹೊಸದೇ ಎನಿಸುವಂತೆ ಮಾಡಿ ಇವರ ಕೃತಿಗಳ ಸಾರ್ವಕಾಲಿಕತೆಯನ್ನು ಎತ್ತಿಹಿಡಿಯುತ್ತಿವೆ ಎಂದರೆ ಅತಿಶಯೋಕ್ತಿಯೇನಲ್ಲ .

——————————–

ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top