ಅಂಕಣ ಸಂಗಾತಿ

ಸಕಾಲ

ಪುರಾಣಗಳಲ್ಲಿ ಮಂಗಳಮುಖಿಯರು

ಒಮ್ಮೆ ದಾವಣಗೆರೆ ಹೊರಟಾಗ ಟೋಲ್ ಒಂದರಲ್ಲಿ ಕಾರ್ ನಿಲ್ಲಿಸಿದಾಗ ಸುಂದರವಾದ ಹೆಣ್ಣು ಮಗಳು ಬಂದು ದುಡ್ಡು ಕೇಳುವ ಪರಿ ಕಂಡು ಬೆರಗಾಗಿದ್ದೆ.ಇಷ್ಟು ಚೆಂದದ ಹುಡುಗಿಯರು ಹೀಗ್ಯಾಕೆ ಬೇಡುತ್ತಿದ್ದಾರೆ‌ಂದು ಯಾಕಮ್ಮ ನೀವು ಹೀಗೆ ಬೇಡುವುದು ಸರಿಯಲ್ಲ ಅಂದಾಗ….ಅವರ ಭಾಷೆ,ಆಂಗಿಕಚಲನೆ ಕೈ ಚಪ್ಪಾಳೆ ತಟ್ಟುವ ರೀತಿ,ನಮ್ಮನ್ನು ಸಮಾಜ ಈ ರೀತಿ ಜೀವನ ಮಾಡಲು ಬಿಟ್ಟಿದೆ.ನಮಗ್ಯಾರು ಇಲ್ಲ.ಏಯ್ ಮಾಮಾ ಕೊಡು ದುಡ್ಡು ಎಂದು ನಮ್ಮ ಯಜಮಾನ್ರ ಕಾಡಿದಾಗ,ಅವರು ಹುಡುಗಿರಲ್ಲ ಕಣೇ ಮಂಕೆ ಮಂಗಳಮುಖಿಯರು ಎಂದಾಗ ಪುಸ್ತಕದಲ್ಲಿ ಓದಿದ್ದೆ, ನೋಡಿರಲಿಲ್ಲ.ಅವರ ನೋಡಿ ಮನಸ್ಸಿಗೆ ನೋವಾಯಿತು.ದುಡ್ಡು ಕೊಟ್ಟು ದಾರಿಯುದ್ದಕ್ಕೂ ಅವರ ಮುಖಚಹರೆಯನ್ನು ನೆನೆಯುತ್ತಾ ಬಂದೆ.ಈಗೀಗ ನಮ್ಮೂರಲ್ಲೂ ಆಗಾಗ ಬಸ್ ನಿಲ್ದಾಣದಲ್ಲಿ ಕಾಣಸಿಗುತ್ತಾರೆ.ಅವರ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಿಸದೆ ಇರಲಿಲ್ಲ.

ಮಂಗಳಮುಖಿ ಎಂದರೆ ಹೆಣ್ಣು ಅಲ್ಲದ ಗಂಡು ಅಲ್ಲದ ಒಂದು ವ್ಯಕ್ತಿಯ ಮನಃಸ್ಥಿತಿ. ‘ತೃತೀಯ ಲಿಂಗ’ ಅಥವಾ ‘ಮಂಗಳಮುಖಿ’ ಎನ್ನುವ ಪರಿಭಾಷೆಗಳು ಇತ್ತೀಚೆಗೆ ಅಧಿಕೃತವಾಗಿ ಮತ್ತು ಹೆಚ್ಚಾಗಿ ಬಳಕೆಯಾಗುತ್ತಿವೆ.ಮಂಗಳಮುಖಿಯರು ಇತ್ತೀಚಿನ ದಿನಗಳಲ್ಲಿ ಮಾತ್ರವಲ್ಲ, ಪುರಾಣಗಳ ಕಾಲದಿಂದಲೂ ಕೂಡ ಅಸ್ಥಿತ್ವದಲ್ಲಿದ್ದವರು. ಮಂಗಳಮುಖಿಯರ ಪೌರಾಣಿಕ ಹಿನ್ನೆಲೆ ಹಾಗೂ ಪುರಾಣದಲ್ಲಿ ಯಾರೆಲ್ಲಾ ಮಂಗಳಮುಖಿಯರಾಗಿದ್ದರು ಎಂಬುದನ್ನು ಅವಲೋಕಿಸುವ ಸಮಯ.

ಮಂಗಳಮುಖಿಮಂಗಳಕರ ಎಂಬ ಮಾತಿದೆ. ಅವರು ಸಂತೋಷದಿಂದ ಏನೇ ಕೊಟ್ಟರು ಕೂಡ ಅದರಿಂದ ಶುಭವಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಒಮ್ಮೊಮ್ಮೆ ಇವರನ್ನು ನೋಡಿದಾಗ ದೇವರೇಕೆ ಇಷ್ಟು ಕ್ರೀರಿಯೆಂಬ ಯೋಚನೆ ಮನಸಿನಲ್ಲಿ ಮೂಡುತ್ತದೆ. ಮಂಗಳಮುಖಿಯೆಂದರೆ ಈ ಹೆಣ್ಣು ಅಲ್ಲದ, ಆ ಕಡೆ ಗಂಡು ಅಲ್ಲದ ಒಂದು ವ್ಯಕ್ತಿಯ ಮನಸ್ಥಿತಿ ಎನ್ನಬಹುದು. ಸಿಗ್ನಲ್‌ಗಳಲ್ಲಿ, ರಸ್ತೆ ಬದಿಗಳಲ್ಲಿ, ಹೆಚ್ಚು ಜನಸಂದಣಿಯಿರುವ ಪ್ರದೇಶಗಳಲ್ಲಿ ಕೈತಟ್ಟಿ ಹಣ ಬೇಡಿ ಅದರಿಂದ ಜೀವನ ನಡೆಸುವ ಸ್ವಾವಲಂಭಿ ಜೀವನ ಇವರದ್ದು.

ಇತ್ತೀಚೆಗೆ ಇವರನ್ನು ಅಧಿಕೃತವಾಗಿ ತೃತೀಯ ಲಿಂಗ ಮತ್ತು ಮಂಗಳ ಮುಖಿಯರೆಂದು ಕರೆಯಲಾಗುತ್ತಿದೆ.ಇದಕ್ಕೂ ಮೊದಲು ಮಂಗಳ ಮುಖಿಯರನ್ನು ನಪುಂಸಕ, ಚಕ್ಕ, ಕೋಜಾ, ಹಿಜ್ರಾ, ದ್ವಿಲಿಂಗಿ, ಶಿಖಂಡಿ ಹೀಗೆ ನಾನಾ ವಿದಧ ಹೆಸರುಗಳಿಂದ ಕರೆಯಲಾಗುತ್ತಿತ್ತು. ಈ ಮಂಗಳಮುಖಿಯರಲ್ಲಿ ಕೆಲವರು ಹುಟ್ಟಿನಿಂದಲೇ ಮುಂಗಳಮುಖಿ ಜನಿಸಿದರೆ, ಕೆಲವರು ದೈಹಿಕ ಬೆಳವಣಿಗೆಯಲ್ಲಿ ಹಾರ್ಮೋನ್‌ಗಳ ವ್ಯತ್ಯಾಸದಿಂದ ಮಂಗಳಮುಖಿಯಾಗುತ್ತಾರೆ. ಆದರೆ ಇನ್ನು ಕೆಲವರು ತಾವೇ ಸ್ವ ಇಚ್ಛೆಯಿಂದ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದರ ಮೂಲಕ ಮಂಗಳಮುಖಿಯಾಗುತ್ತಾರೆ. ಇದಕ್ಕೆ ನಮ್ಮ ಸುತ್ತಮುತ್ತಲು ಸಾಕಷ್ಟು ಉದಾಹರಣೆಗಳಿವೆ.ಎಷ್ಟೋ ಕುಟುಂಬಗಳು ಇಂಥಹ ಮಕ್ಕಳು ತಮ್ಮದಲ್ಲವೆಂದು ನಿರ್ದಾಕ್ಷಿಣ್ಯವಾಗಿ ಕೊಂದು ಅಥವಾ ಮನೆಯಿಂದ ಹೊರಹಾಕಿದ್ದಿದೆ.ಒಂದು ಕಾಲದಲ್ಲಿ ಇಂತವರ ಜನನ ಶಾಪವೆಂದು ಪರಿಗಣಿಸಿದ್ದಿದೆ.

ಮಂಗಳಮುಖಿಯರು ಇತ್ತೀಚೆಗೆ ಬೆಳಕಿಗೆ ಬಂದವರಲ್ಲ. ಪುರಾಣಗಳಲ್ಲೂ ಕೂಡ ಮಂಗಳಮುಖಿಯರ ಬಗ್ಗೆ ಹಲವಾರು ಉಲ್ಲೇಖವಿದೆ. ಇತಿಹಾಸದಲ್ಲೂ ಪ್ರಸಿದ್ಧ ಮಂಗಳಮುಖಿಯರಿದ್ದರು. ಅವರ ಕುರಿತಿರುವ ಕಥೆಗಳು ಸಾಕಷ್ಟು ಜನಮನ್ನಣೆಯನ್ನು ಪಡೆದುಕೊಂಡಿದೆ. ಇತಿಹಾಸದಲ್ಲಿ ಹಾಗೂ ಪುರಾಣಗಳಲ್ಲಿ ಉಲ್ಲೇಖ ಮಾಡಿರುವಂತೆ ಶಾಪದಿಂದಲೂ ಕೂಡ ಮಂಗಳಮುಖಿಯಾಗಿದ್ದಾರಂತೆ. ಐತಿಹಾಸಿಕ ಹಿನ್ನೆಲೆಯುಳ್ಳ ಮಂಗಳಮುಖಿಯರು ಇದ್ದರೆಂದರೆ ಆಶ್ಚರ್ಯ ಪಡಬೇಕಿಲ್ಲ.

ಅರ್ಜುನನು ಪಾಂಡವರಲ್ಲಿ ಒಬ್ಬನಾಗಿದ್ದನು.ಅರ್ಜುನ ಮಂಗಳ ಮುಖಿಯಾಗಿ ಯಾಕೆ ಪರಿವರ್ತನೆ ಹೊಂದಿದನೆಂದು ಮಹಾಭಾರತದಲ್ಲಿನ ವನಪರ್ವದ ಇಂದ್ರಲೋಕಾಭಿಗಾಮನ್‌ ಪರ್ವದಲ್ಲಿ ಉಲ್ಲೇಖಿಸಲಾಗಿದೆ. ಈ ಉಲ್ಲೇಖದ ಪ್ರಕಾರ, ಅರ್ಜುನನ ತಂದೆಯೆಂದು ಪರಿಗಣಿಸಲ್ಪಡುವ ಇಂದ್ರನು ಮಹಾಭಾರತ ಯುದ್ಧದ ತಯಾರಿಗಾಗಿ ಅವಶ್ಯವಿರುವ ಅಸ್ತ್ರಗಳ ಬಗ್ಗೆ, ಆಯುಧಗಳ ಬಗ್ಗೆ ಕಲಿಯಲು ಸ್ವರ್ಗಕ್ಕೆ ಬರುವಂತೆ ಹೇಳುತ್ತಾನೆ.ಅರ್ಜುನನು ಆಯುಧಗಳನ್ನು ಹೇಗೆ ಯುದ್ಧದಲ್ಲಿ ಉಪಯೋಗಿಸಬೇಕೆಂದು ಕಲಿಯುತ್ತಿರುವಾಗ ಸ್ವರ್ಗದಲ್ಲಿ ಅತ್ಯಂತ ಸುಂದರಿಯರಾದ ಅಪ್ಸರೆ ಮತ್ತು ಊರ್ವಶಿಯರು ಅರ್ಜುನನ ಮೈಮಾಟಕ್ಕೆ ಆಕರ್ಷಿತರಾಗುತ್ತಾರೆ ಆದರೆ ಊರ್ವಶಿಯುಯಕಪಾಡಳರಪುರುವಂಶದ ಆದಿಮಾತೆ ಹಾಗಅರ್ಜುನನನರಖಖಖಖಖಖಖಖಖಯದಮಖಖ ವಂಶಸ್ತಳಾದ್ದರಿಂದ ಆಕೆಯನ್ನು ವಿವಾಹವಾಗಲು ಅರ್ಜುನನು ನಿರಾಕರಿಸುತ್ತಾನೆ. ಇದರಿಂದ ಕೋಪಗೊಂಡ ಊರ್ವಶಿಯು ನೀನು ಮಂಗಳಮುಖಿಯಾಗು ಎಂದು ಶಾಪವನ್ನು ನೀಡುತ್ತಾಳಂತೆ.

ಊರ್ವಶಿಯ ಶಾಪದಿಂದ ಮನನೊಂದ ಅರ್ಜುನನು ತನ್ನ ತಂದೆ    ಇಂದ್ರನಲ್ಲಿಗೆ ಬಮದು ನಡೆದ ಘಟನೆಯನ್ನು ವಿವರಿಸುತ್ತಾನೆ. ಆಗ ಇಂದ್ರನು ನೀನು ಸ್ವಲ್ಪ ಸಮಯದವರೆಗೆ ಮಾತ್ರ ಮಂಗಳಮುಖಿಯಾಗಿ ಉಳಿಯುತ್ತೀಯಾ ಹಾಗೂ ನೀನು ಬಯಸಿದಾಗಲೆಲ್ಲಾ ಪುರುಷತ್ವವನ್ನು ಮರಳಿ ಪಡೆಯಬಹುದೆಂದು ವರವನ್ನು ನೀಡುತ್ತಾನೆ, ಇದರಿಂದ ಅರ್ಜುನನು ತನ್ನ ತಾಯಿ ಮತ್ತು ಸಹೋದರರೊಂದಿಗೆ 13 ವರ್ಷಗಳ ಕಾಲ ಮಂಗಳಮುಖಿಯಾಗಿ ವೃಹನಲ್ಲಾ ಎನ್ನುವ ಹೆಸರಿನಲ್ಲಿ ಜೀವನವನ್ನು ಕಳೆಯುತ್ತಾನೆ. ಈ ರೀತಿಯಾಗಿ ಧನುರ್ಧಾರಿ ಅರ್ಜುನನು ಮಂಗಳಮುಖಿಯಾಗಬೇಕಾಯಿತು.

ಪುರಾಣಗಳ ಪ್ರಕಾರ ಮಂಗಳಮುಖಿಯರ ದೇವರು “ಇರಾವಾನ”

ಇತನನ್ನು ಇರಾವಾನ್‌ ಅಥವಾ ಇರಾವಂತ್‌ ಎಂದೂ ಕೂಡ ಕರೆಯಲಾಗುತ್ತದೆ. ಇರಾವಾನನು ಅರ್ಜುನ ಮತ್ತು ನಾಗಕನ್ಯೆ ಉಲೂಪಿ ದಂಪತಿಗಳ ಹಿರಿಯ ಮಗನಾಗಿ ಜನಿಸಿದನು ಮತ್ತು ನಾಗಲೋಕದಲ್ಲೇ ಬೆಳೆದವನು. ಈತ ಅರ್ಜುನನಂತೆ ನುರಿತ ಬಿಲ್ಲುಗಾರ ಹಾಗೂ ಎಲ್ಲಾ ಆಯುಧಗಳನ್ನು ಬಲ್ಲ ಪ್ರವೀಣನಾಗಿದ್ದನು.ಮಹಾಭಾರತದ ಯುದ್ಧದಲ್ಲಿ ಪಾಂಡವರು ಗೆಲ್ಲಬೇಕಾದರೆ ಯಾರನ್ನಾದರು ಒಬ್ಬ ವ್ಯಕ್ತಿಯನ್ನು ತ್ಯಾಗ ಮಾಡಬೇಕಾಗಿತ್ತು.” ಇರಾವಾನ “ತಾನೇ ಸಾಯುತ್ತೇನೆಂದು ಸ್ವತಃ ಮುಂದೆ ಬರುತ್ತಾನೆ. ಆದರೆ ಇರಾವಾನ ಅವಿವಾಹಿತನಾಗಿ ಮರಣ ಹೊಂದಲು ಸಾಧ್ಯವಿರಲಿಲ್ಲ.ಆತ ವಿವಾಹದ ನಂತರವೇ ಮರಣ ಹೊಂದಬೇಕಾಗಿತ್ತು. ಆ ಸಂದರ್ಭದಲ್ಲಿ ಯಾವ ತಂದೆ ತಾನೇ ತನ್ನ ಕೈಯಾರೇ ತನ್ನ ಮಗಳನ್ನು ವಿಧವೆಯಾಗಿ ಮಾಡಲು ಒಪ್ಪುತ್ತಾರೆ. ಆದ್ದರಿಂದ ಯಾರು ಕೂಡ ಇರಾವಾನನಿಗೆ ವಿವಾಹವಾಗಲು ಮಗಳನ್ನು ಕೊಡಲು ಮುಂದೆ ಬರಲಿಲ್ಲ.ಆಗ ಭಗವಾನ್‌ ಕೃಷ್ಣನು ತಾನೇ ಸ್ವತಃ ಮೋಹಿನಿ ಅವತಾರವನ್ನು ತಾಳಿ ಇರಾವಾನನನ್ನು ವಿವಾಹವಾಗುತ್ತಾನೆ. ಕೆಲವು ದಿನಗಳ ನಂತರ ಮಹಾಭಾರತ ಯುದ್ಧದ ಎಂಟನೆಯ ದಿನ ಶಕುನಿಯ ಐವರು ಸಹೋದರರನ್ನು ಸಂಹರಿಸಿ,ರಾಕ್ಷಸ ಆರ್ಶ್ಯಶೃಂಗಿ ಎದುರಿಸಿ ಮಾಯಾ ಯುದ್ಧದಲ್ಲಿ ಇರಾವಾನ ಹತನಾಗುತ್ತಾನೆ. ಇರಾವಾನನು ಸಾವನ್ನಪ್ಪಿದ್ದ ಸುದ್ಧಿಯನ್ನು ಕೇಳಿ ಕೃಷ್ಣನು ದುಃಖಕ್ಕೆ ಒಳಗಾಗುತ್ತಾನೆ. ಇರಾವಾನನ ಸಾವಿಗೆ ನಾನೇ ಕಾರಣನೆಂದು ತಿಳಿದು ಕೃಷ್ಣನು ಮೋಹಿನಿ ಅವತಾರದಲ್ಲೇ ಕೆಲದಿನಗಳನ್ನು ಕಳೆಯುತ್ತಾನೆ. ಆದ್ದರಿಂದ ಮಂಗಳಮುಖಿಯರು ಇರಾವಾನನನ್ನು ದೇವರೆಂದು ಪೂಜಿಸುತ್ತಾರೆ.

ಮಂಗಳಮುಖಿಯರನ್ನು ಶಿಕಂಡಿಯೆಂದು ಕರೆಯಲು ಕಾರಣ,

ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ಭೀಷ್ಮನ ಸಾವಿಗೆ ಕಾರಣವಾದ ಶಿಕಂಡಿಯು ಹಿಂದಿನ ಜನ್ಮದಲ್ಲಿ ಅಂಬಾ ಎನ್ನುವ ಹೆಸರಿನ ಸುಂದರ ರಾಜಕುಮಾರಿಯಾಗಿದ್ದಳು. ಅಂಬಾಳು ಸುಬಲ ಸಾಮ್ರಾಜ್ಯದ ರಾಜ ಶಾಲ್ವಾನನ್ನು ಪ್ರೀತಿಸುತ್ತಿದ್ದಳು.ಆದರೆ ಭೀಷ್ಮ ಅವರಿಬ್ಬರನ್ನು ವಿವಾಹವಾಗಲು ಬಿಡುವುದಿಲ್ಲ.ಭೀಷ್ಮನು ಅಂಬಾಳನ್ನು ಮತ್ತು ಆಕೆಯ ಇಬ್ಬರು ಸಹೋದರಿಯರನ್ನು ಅಪಹರಿಸಿ, ಹಸ್ತಿನಾಪುರಕ್ಕೆ ಕರೆತಂದು ಅಲ್ಲಿ ರಾಜ ವಿಚಿತ್ರವೀರ್ಯನನ್ನು ವಿವಾಹವಾಗುವಂತೆ ಆದೇಶ ನೀಡುತ್ತಾನೆ. ಈ ಕಾರಣದಿಂದಲೇ ಭೀಷ್ಮನ ಮೇಲೆ ಸೇಡುತೀರಿಸಿಕೊಳ್ಳಲು ಅಂಬಾ ಮುಂದಿನ ತನ್ನ ಮುಂದಿನ ಜನ್ಮದಲ್ಲಿ ಶಿಖಂಡಿ ಎನ್ನುವ ಹೆಸರಿನೊಂದಿಗೆ ಮಂಗಳಮುಖಿಯಾಗಿ ಜನಿಸುತ್ತಾಳೆ. ಹಾಗೂ ಅಂಬಾ ಕುರುಕ್ಷೇತ್ರ ಯುದ್ಧದಲ್ಲಿ ಭೀಷ್ಮನನ್ನು ಹತ್ಯೆಗೈದು ಆತನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾಳೆ.

ಬುಧ ಗ್ರಹವನ್ನು ನಪುಂಸಕ ಗ್ರಹ ಅಥವಾ ಮಂಗಳಮುಖಿ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ. ಬುಧನು ಶಾಪದಿಂದ ಮಂಗಳಮುಖಿಯಾಗಬೇಕಾಯಿತು ಎನ್ನಲಾಗಿದೆ. ಬೃಹಸ್ಪತಿ ಚಂದ್ರ ಅಥವಾ ಚಂದ್ರದೇವನ ಗುರುವಾಗಿದ್ದ. ಅದೇ ಸಮಯದಲ್ಲಿ ಬೃಹಸ್ಪತಿಯ ಪತ್ನಿ ತಾರಾ ಚಂದ್ರದೇವನ ಸೌಂದರ್ಯವನ್ನು ಕಂಡು ಮರುಳಾಗಿ ಅವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸಲು ಆರಂಭಿಸುತ್ತಾರೆ. ಕೆಲವೇ ದಿನಗಳ ನಂತರ ಬೃಹಸ್ಪತಿಯ ಪತ್ನಿ ತಾರಾದೇವಿಯು ಬೃಹಸ್ಪತಿಯನ್ನು ತೊರೆದು ಚಂದ್ರದೇವನೊಂದಿಗೆ ಹೋಗುತ್ತಾಳೆ. ಇದರಿಂದ ಕೋಪಗೊಂಡ ಬೃಹಸ್ಪತಿಯು ಚಂದ್ರದೇವನ ಮೇಲೆ ಯುದ್ಧವನ್ನು ಮಾಡುತ್ತಾನೆ.ಆ ಸಂದರ್ಭದಲ್ಲಿ ಬ್ರಹ್ಮನು ಮಧ್ಯಪ್ರವೇಶಿಸಿ, ಬೃಹಸ್ಪತಿಯ ಪತ್ನಿಯಾದ ತಾರಾಳನ್ನು ಹಿಂದಕ್ಕೆ ಕರೆತಂದು ಗುರುಗ್ರಹಕ್ಕೆ ಅಥವಾ ಬೃಹಸ್ಪತಿಗೆ ಒಪ್ಪಿಸುತ್ತಾನೆ. ಅಷ್ಟರಲ್ಲಿ ತಾರಾಳಿಗೆ ಒಬ್ಬ ಮಗ ಕೂಡ ಜನಿಸಿರುತ್ತಾನೆ. ಆತನನ್ನು ಬುಧ ಎಂದು ಕರೆಯಲಾಗುತ್ತದೆ. ಈಗ ಚಂದ್ರದೇವ ಮತ್ತು ಬೃಹಸ್ಪತಿ ಅಥವಾ ಗುರು ಗ್ರಹವು ಬುಧನ ಮೇಲೆ ಹಕ್ಕನ್ನು ಪ್ರತಿಪಾದಿಸಲು ಪ್ರಾರಂಭಿಸುತ್ತಾರೆ. ಆಗ ತಾರಾ ದೇವಿಯು ಬುಧನು ಚಂದ್ರದೇವನ ಮಗನೆಂದು ಬಹಿರಂಗಗೊಳಿಸುತ್ತಾಳೆ. ಇದನ್ನು ಕೇಳಿದ ಗುರು ಅಥವಾ ಬೃಹಸ್ಪತಿ ಬುಧನಿಗೆ ಮಂಗಳಮುಖಿಯಾಗುವಂತೆ ಶಪಿಸುತ್ತಾನೆ. ಆದ್ದರಿಂದ ಬುಧಗ್ರಹವು ದುರ್ಬಲ ಗ್ರಹವಾಗಿದೆ.ಇದು ಪುರಾಣಗಳಲ್ಲಿ ಮಂಗಳಮುಖಿಯರ ಕುರಿತಿರುವ ರೋಚಕ ಕಥೆ.

ಇಂದಿಗೂ ನಾವು ಸಮಾಜದಲ್ಲಿ ಕಾಣುವ ಮಂಗಳಮುಖಿಯರನ್ನು ಪುರಾಣಗಳ ಕಾಲದಲ್ಲೂ ಕೂಡ ನೋಡಲಾಗುತ್ತಿತ್ತು. ಇದೇ ಕಥೆಗಳು ಇಂದು ಕೂಡ ಮಂಗಳಮುಖಿಯರ ಉಳಿವಿಗೆ ಕಾರಣವಾದವು.ಆದರೆ ಅವರು ನಮ್ಮಂತೆ ಬದುಕಲು ಅರ್ಹತೆ ಪಡೆದವರೆಂದು ತಿಳಿಯುವುದು ಬಹುಮುಖ್ಯ. ಪ್ರಸ್ತುತ ಮಂಗಳಮುಖಿಯರು ತಮ್ಮದೇ ಆದ ಸಂಘಟನೆಯಿಂದ ಸಮಾಜದ ಎಲ್ಲ‌ ಸ್ಥರಗಳಲ್ಲಿ ಸುಶಿಕ್ಷಿತರಾಗಿ ಸಾಮಾನ್ಯರಂತೆ ಬದುಕಲು ಅವಕಾಶ ಒದಗಿಸಲಾಗುತ್ತಿದೆ.ಅವರು ನಮ್ಮಂತೆ ಬದುಕಲು ಮುಂಚುಣಿಯಲ್ಲಿದ್ದಾರೆ.ಮಕ್ಕಳನ್ನು ಕೀಳಾಗಿ ಕಾಣುವ ಬದಲು ವಿಶೇಷವಾಗಿ ಪ್ರೋತ್ಸಾಹ ನೀಡುವ ಮನಸ್ಸು ಎಲ್ಲರಲ್ಲಿ ಬರಬೇಕು.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

6 thoughts on “

  1. ಮಂಗಳಮುಖಿಯರ ಬಗ್ಗೆ ಚೆನ್ನಾಗಿ ಲೇಖನ ಬರೆದಿರುವೆ.

  2. ಅರ್ಥವ್ಯಕ್ತಿ!

    ಪುರಾಣದಲ್ಲಿ ಮಂಗಳಮುಖಿಯರು ಲೇಖನ ಕುರಿತಾಗಿ.
    ಲೇಖಕಿ..ಶಿವಲೀಲಾ ಹುಣಸಗಿ.

    ಕತೆಗಾರ್ತಿ,ಕವಯತ್ರಿ ಮತ್ತು ಉತ್ತಮ ವಾಗ್ಮಿ ಪ್ರತಿಭಾವಂತೆ ವೃತ್ತಿಯಲ್ಲಿ ಶಿಕ್ಷಕಿಯೂ ಆಗಿರುವ ಶ್ರೀಮತಿ ಶಿವಲೀಲಾ ಹುಣಸಗಿಯವರು ಬರೆದ ಒಂದು ಲೇಖನ “ಪುರಾಣಗಳಲ್ಲಿ ಮಂಗಳಮುಖಿ” ಓದಿದಾಗ ತಕ್ಷಣ ನೆನಪಾಗಿದ್ದು ಹಿಂದೆ ಓದಿರುವ ಒಂದು ಪುಸ್ತಕ. ಆದರ ಲೇಖಕ ಸಾಕಷ್ಟು ವಿವರಣೆಗಳಿಂದ ಮಂಗಳಮುಖಿಯರ ಜೀವನ ವೃತ್ತಾಂತ ತೆರೆದಿಟ್ಟಿದ್ದರೂ,
    ಅದೇಕೋ ಅತಿಶಯ ಅತಿರಂಜಿತ ಬರಹ ಎಂದೆನಿಸಿತು. ಉಲ್ಲೇಖಿತ ಕೆಲವು ದಾರುಣ ಘಟನೆಗಳು‌ ಮನಕಲುಕಿದ್ದು ಅಲ್ಲಗಳೆಯುವಂತಿಲ್ಲ. ಇದರಿಂದಾಗಿ ಲೇಖರಿಗೆ ಹೆಸರೂ ತಂದಿರಬಹುದು, ಲಾಭವೂ ತಂದಿರಬಹುದು. ಆದರೆ ಮಂಗಳಮುಖಿಯರಿಗೆ ಇದರಿಂದೇನು ಲಾಭವಾಯಿತು ಎಂಬ ಪ್ರಶ್ನೆಗೆ ಉತ್ತರ ಸಿಗದಾಯಿತು. ಇಂಥ ಪುಸ್ತಕ ಉದ್ಯಮಕ್ಕೆ ಕಥಾ ವಸ್ತು ಆಗಬೇಕೆ? ನಮ್ಮೊಡನೆಯ ಈ ಸಮಾಜ ಜೀವಿಗಳು. ಶೋಷಣೆಗೊಳಗಾಗುತ್ತಾರಲ್ಲ, ಎಂದೆನಿಸಿದ್ದು ಮಾತ್ರ ನಿಜ. ಅನೇಕ ಬಿಡಿ ಲೇಖನಗಳು ಗಮನ ಸೆಳೆದಿದ್ದವು. ಒಬ್ಬ ಮಂಗಳಮುಖಿ ತಮ್ಮ ಬದುಕು ಬವಣೆ ಕುರಿತು ಹೇಳಿಕೊಂಡಿದ್ದನ್ನು ಕೇಳಿದ್ದೆ.
    “ನಮಗೆ ನಿಮ್ಮ ಅನುಕಂಪ ಬೇಕಾಗಿಲ್ಲ, ನಿಮ್ಮಿಂದ ನಮ್ಮ ಪ್ರಚಾರವೂ ಆಗಬೇಕಾಗಿಲ್ಲ. ನಿಮ್ಮಂತೆ ನಮ್ಮನ್ನು ಬದುಕಲು ಬಿಡಿ” ಎಂದ ಅವರ ಮಾತು ಅಂತಃಕರಣವನ್ನು ಕಲುಕಿಸಿತ್ತು.

    ‌ ಪ್ರಸ್ತುತ ಲೇಖನ ಓದಿದಾಗ ಲೇಖಕಿಯ ನಿರ್ವ್ಯಾಜ್ಯ ಮನಸ್ಸಿನ ಕನ್ನಡಿಯ ಅರ್ಥವ್ಯಕ್ತಿ ಎಂದೆನಿಸಿತು. ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯ ಚಿತ್ರಣವನ್ನು ಪೂರಕವಾಗಿ ಆಧರಿಸಿ, ಯಾವ ವ್ಯತಿರಿಕ್ತ ಭಾವನೆಗೂ ಎಡೆಮಾಡಿಕೊಡದೆ ವಸ್ತುನಿಷ್ಠವಾಗಿ ಬರೆದಿದ್ದಾರೆ.
    ದಾವಣಗೆರೆಯಲ್ಲಿ ಲೇಖಕಿ ಕಂಡ ದೃಶ್ಯವದು. ಚಪ್ಪಾಳೆ ತಟ್ಟಿ ದುಡ್ಡು ಕೇಳುವ ಮಂಗಳಮುಖಿಯ ಸ್ವಭಾವದ ವೈಚಿತ್ರ್ಯ ಅವರನ್ನು ಕಾಡಿಸಿದೆ. ಅಂಥವರ ಕುರಿತು ಕೆಲವು ಸಂಗತಿಗಳನ್ನು ಅರಿತಿದ್ದಾರೆ. ಇಂಥ ಒಂದು ವ್ಯವಸ್ಥೆಗೆ ಮಂಗಳ ಹಾಡಬಾರದೇ ಎಂದೆನಿಸಿದೆ. ಸಾಮಾನ್ಯವಾಗಿ ಸೃಜನಶೀಲ ಬರಹಗಾರರ ಭಾವತುಡಿತಕ್ಕೆ ಇಂಥ ಘಟನೆಗಳು ಕಾರಣವಾಗುತ್ತದೆ. ವಿಷಾದ, ವಿಚಾರಗಳ ಅಡಿಯಲ್ಲಿ ಹೃದಯವಂತಿಕೆಯ ನುಡಿ ಬರಹದ ಗಟ್ಟಿತನವನ್ನು ಎತ್ತಿ ಹಿಡಿದಿದೆ.

    ಡಿ.ಎಸ್.ನಾ. ೩-೨-೨೦೨೩.

Leave a Reply

Back To Top