ಮಹಿಳಾದಿನದ ವಿಶೇಷ

ಮತ್ತೊಂದು ಮಹಿಳಾ ದಿನ, ಮತ್ತದೇ ವಿಷಾದ

Image result for images of women's day marchin india

ತ್ರಿವೇಣಿ ಜಿ.ಹೆಚ್

ಮತ್ತೊಂದು ಮಹಿಳಾ ದಿನ, ಮತ್ತದೇ ವಿಷಾದ

ಮಹಿಳಾ ಸಂಘಗಳಲ್ಲಿ ಮಹಿಳೆಯರ ಹಕ್ಕು ಕುರಿತು ಭಾಷಣ, ಸದಸ್ಯರಿಗೆ ಹೂವು, ಸೀರೆ, ಒಡವೆ, ವಸ್ತ್ರ ವೇಷ ಭೂಷಣಗಳ ಸ್ಪರ್ಧೆ, “ನಿಮಗೆ ವರ್ಷದಲ್ಲಿ ಒಂದು ದಿನವಾದರೂ ಇದೆ. ನಮಗೆ ಇಲ್ಲವೇ ಇಲ್ಲ” ಎಂಬ ಪುರುಷ ಸಹೋದ್ಯೋಗಿಗಳ ಕೂರಂಬು, ಇಷ್ಟೇ ತಾನೆ ಇಷ್ಟೂ ವರ್ಷ ಮಹಿಳಾ ದಿನಾಚರಣೆ ನಡೆದ ಪರಿ?

ಒಂದು ಮಹಿಳಾ ಸಂಘದಲ್ಲಿ ಕಾರ್ಯಕ್ರಮಕ್ಕೆ ವಿಶಿಷ್ಠ ಕೇಶಾಲಂಕಾರ ಮಾಡಿಕೊಂಡು ಬರಲು ಸದಸ್ಯರಿಗೆ ಹೇಳಿದರೆ ಇನ್ನೊಂದು ಕಡೆ ಯಾವ ಬಣ್ಣದ ಸೀರೆ ಉಟ್ಟು ಬರಬೇಕು ಎಂಬುದು ಕಾರ್ಯಕ್ರಮದ ಹೈಲೈಟ್ಸ್! ಸೆಲೆಬ್ರೇಷನ್ಸ್, ಸಾಧಕ ಮಹಿಳೆಯರಿಗೆ ಸನ್ಮಾನ, ಸೀರೆ, ಒಡವೆ, ಪರ್ಸು, ಅಂಗಡಿಗಳಲ್ಲಿ ಮಹಿಳೆಯರಿಗೆ ಡಿಸ್ಕೌಂಟ್..! ಮಹಿಳೆಯ ಸೇವೆ, ತ್ಯಾಗಗಳ ಕುರಿತು ಕವನ, ಲೇಖನ.

ಎಲ್ಲಾ ಚಾನೆಲ್ಲುಗಳಲ್ಲಿ ಮಹಿಳೆಯರ ಕುರಿತು ಚರ್ಚೆ, ಮಾತು ಕಥೆ. ಅಲ್ಲಿಗೆ ಮತ್ತೊಂದು ವರ್ಷದವರೆಗೂ ಕಾಯಬೇಕು!

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹುಟ್ಟು ಹಾಗೂ ಅದು ನಡೆದು ಬಂದ ದಾರಿಯ ಬಗ್ಗೆ ತಿಳಿಯದೆಯೂ ಗಂಟೆಗಟ್ಟಲೆ ಕೊರೆಯುವರಿದ್ದಾರೆ.

ಅದು ಶುರುವಾಗಿದ್ದು ಸಮಾನ ವೇತನದ ಬೇಡಿಕೆಯೊಂದಿಗೆ. ರಷ್ಯಾ ಹಾಗೂ ಡೆನ್ಮಾರ್ಕಿನ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ. ‘ಇಂಟರ್ ನ್ಯಾಷನಲ್ ಗಾರ್ಮೆಂಟ್ ವುಮೆನ್ಸ್ ವರ್ಕರ್ಸ್ ಯುನಿಯನ್’ ಎಂಬ ಅಸೋಸಿಯೇಷನ್ ಅಡಿ.

ಸಮಾನ ಅವಕಾಶ, ಸಮಾನ ವೇತನ.. ಶತಮಾನದ ಹಿಂದಿನ ಬೇಡಿಕೆಯೂ ಅದೇ.. ಇಂದಿನ ಬೇಡಿಕೆಯೂ ಅದೇ.. ಬೇಡಿಕೆ ಆಗಿರುವುದರಿಂದ ನೆರವೇರಿಯೇ ಇಲ್ಲವೇನೋ.. ಬೇಡಿಕೆ ಎಂದು ವರ್ಷವಿಡೀ ಕೆಲಸ ಮಾಡದೇ ಕೂರಲು ಆಗುವುದಿಲ್ಲ.. ವರ್ಷದಲ್ಲಿ ಒಂದು ದಿನ ಪ್ರಪಂಚದ ಗಮನ ತಮ್ಮೆಡೆಗೆ, ತಮಗಾಗಿರುವ ಅನ್ಯಾಯದೆಡೆಗೆ ಸೆಳೆಯಲು ಶುರುವಾಗಿದ್ದು ಮಹಿಳಾ ದಿನಾಚರಣೆ. ಗೆದ್ದದ್ದು ಕೆಲವು, ಹೋರಾಟ ಮುಂದುವರಿದಿರುವುದು ಹಲವು ವಿಚಾರಗಳಿಗೆ.

ಗಮನ ಇತ್ತ ಹರಿದಿದೆ, ಪ್ರಪಂಚ ನಿಂತು, ತಿರುಗಿ ನೋಡಿದೆ, ಗಮನಿಸಿದೆ, ವಿಷಯ ಹರಡಿದೆ ಎಂಬುದೇ ಒಂದು ದೃಷ್ಠಿಯಲ್ಲಿ ಗೆಲುವು. ಹಲವು ರಂಗಗಳಲ್ಲಿ ಸಮಾನ ಅವಕಾಶ ಮಹಿಳೆಗೆ ಇನ್ನೂ ಕನಸು. ಕೆಲವು ಕಡೆ ಸಮಾನ ವೇತನ ಸಿಕ್ಕರೂ ಅದರಿಂದ ಬೇರೆ ಹಲವು ಸಮಸ್ಯೆಗಳು ಹುಟ್ಟಿಕೊಂಡಿವೆ

.

ಅತ್ಯಾಚಾರ ನಿಲ್ಲಬೇಕು, ಹೆಣ್ಣು ಭ್ರೂಣಹತ್ಯೆ ನಿಲ್ಲಬೇಕು, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು, ಆರ್ಥಿಕ ಸ್ವಾತಂತ್ರ್ಯ ಸಿಗಬೇಕು, ರಾಜಕೀಯದಲ್ಲಿ ಪ್ರಾಶಸ್ತ್ಯ ಸಿಗಬೇಕು, ಅಧಿಕಾರ ಅವರಿಗೆ ಸಿಗಬೇಕು – ಇವೆಲ್ಲಾ, ರಸ್ತೆಗಿಳಿದು ಹೋರಾಟ ಮಾಡಿ ದಕ್ಕಿಸಿಕೊಳ್ಳುವುದಲ್ಲ. ರಸ್ತೆಗಿಳಿದು ವಿಚಾರವನ್ನು ಪ್ರಚಲಿತಗೊಳಿಸಬಹುದು. ಆದರೆ ದಕ್ಕಿಸಿಕೊಳ್ಳಲು ವಿದ್ಯಾಭ್ಯಾಸ ಕೊಡಬೇಕು. ತಿಳವಳಿಕೆ ಮೂಡಬೇಕು ಹಾಗೂ ಮನೋಭಾವದಲ್ಲಿ ಬದಲಾವಣೆ ಆಗಬೇಕು.

ವಿದ್ಯಾಭ್ಯಾಸ, ಉದ್ಯೋಗ ಹಾಗೂ ಆರ್ಥಿಕ ಸ್ವಾತಂತ್ರ್ಯ ತಂದುಕೊಡಬಹುದು. ಕ್ಷಮಿಸಿ.. ಸ್ವಾತಂತ್ರ್ಯ ಅಲ್ಲ, ಆರ್ಥಿಕ ಸಬಲತೆ ಎನ್ನಬಹುದು. ಏಕೆಂದರೆ ತಾನು ದುಡಿದ ಹಣದ ಮೇಲೆ ಆ ಮಹಿಳೆಗೆ ಹಕ್ಕಿರುವುದಿಲ್ಲ. ವಿದ್ಯಾಭ್ಯಾಸ ದೊರಕಿಸಿಕೊಟ್ಟ ಉದ್ಯೋಗದಿಂದ ಬಂದ ಸಂಬಳವನ್ನು ತಂದು ಮನೆಯ ಗಂಡಸಿಗೆ (ಅಪ್ಪ ಅಥವಾ ಗಂಡ) ಕೊಟ್ಟು, ತನ್ನ ಖರ್ಚಿಗೆ ಹಣ ಕೇಳುವ ಉದ್ಯೋಗಸ್ಥ ಮಹಿಳೆಯರೇ ಹೆಚ್ಚು.

ಮಹಿಳೆಗೆ ಮೀಸಲಿಟ್ಟ ಕ್ಷೇತ್ರದಲ್ಲಿ ಗಂಡ ಅಥವಾ ಅಪ್ಪ ನಿಲ್ಲಲು ಸಾಧ್ಯವಿಲ್ಲವಾದ್ದರಿಂದ ಚುನಾವಣೆಗೆ ನಿಂತು ಗೆಲ್ಲುವ ಮಹಿಳೆ ಅಧಿಕಾರ ನಡೆಸುವುದಿಲ್ಲ. ಆ ಅಧಿಕಾರ ಮತ್ತೆ ಗಂಡ ಅಥವಾ ತಂದೆಯ ಹಕ್ಕು. ತನ್ನ ಒಡಲಿನಲ್ಲಿ ಮೂಡುವ ಹೆಣ್ಣು ಭ್ರೂಣದ ಸಂರಕ್ಷಣೆಯನ್ನು ಮಾಡಲಾರಳು ಆಧುನಿಕ ಕಾಲದ ಹೆಣ್ಣು.

ವಿದ್ಯಾಭ್ಯಾಸ, ಉದ್ಯೋಗ, ಆರ್ಥಿಕ ಸಬಲತೆಗಳ ಜೊತೆಗೆ ಮನೋಭಾವದ ಬದಲಾವಣೆ ಆಗಬೇಕಾಗಿರುವುದು ಇಂದಿನ ಪ್ರಧಾನ ಅವಶ್ಯಕತೆ. ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಇಬ್ಬರ ಮನೋಭಾವದಲ್ಲೂ ಬದಲಾವಣೆ ಆಗಬೇಕಾಗಿದೆ.

ಸಮಾಜದ ಚಿಕ್ಕ unit ಆಗಿರುವ ಸಂಸಾರ ಅಂದರೆ ಫ್ಯಾಮಿಲಿಯ ಜವಾಬ್ದಾರಿ ಇಲ್ಲಿ ಅಖಂಡವಾಗಿದೆ. ಮಕ್ಕಳನ್ನು ಬೆಳೆಸುವ ತಂದೆತಾಯಂದಿರು ತುಂಬಾ ಜವಾಬ್ದಾರಿಯುತವಾಗಿ, ಸಮಾನವಾಗಿ ಮಕ್ಕಳನ್ನು ಬೆಳೆಸಬೇಕು. ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು, ಗಂಡು ಮಕ್ಕಳಲ್ಲಿ ಹೆಣ್ಣು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಬೆಳೆಸಬೇಕು. ಬರೀ ಮಾತಲ್ಲಿ, ಕಥೆಯಲ್ಲಿ ಅಲ್ಲ.. ತಂದೆ ತನ್ನ ಹೆಂಡತಿಯನ್ನು ಗೌರವಿಸುವುದರ ಮೂಲಕ, ತಾಯಿ ಆತ್ಮವಿಶ್ವಾಸದಿಂದ ಇರುವ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ‘lead by example’ ಮಂತ್ರವಾಗಬೇಕು.

ನಿರ್ಲಕ್ಷಿತವಾಗಿರುವ ಪ್ರೈಮರಿ ಶಾಲೆಯ ವಿದ್ಯಾಭ್ಯಾಸವನ್ನು ಸಬಲಗೊಳಿಸಬೇಕು. ಮೊಳಕೆಯಾಗಿ ಮನೆಯಲ್ಲಿ ಚಿಗುರೊಡೆದ ಪೈರಿಗೆ ನೀರೆರೆಯುವ ಕಾಯಕ ಆಗುವುದು ಪ್ರಾಥಮಿಕ ಶಾಲೆಯಲ್ಲಿ. ಸೂಕ್ತ ಪಾಠ, ದಕ್ಷ ಅಧ್ಯಾಪಕರು ವಿಜ್ಞಾನ, ಲೆಕ್ಕ, ಇತಿಹಾಸ, ಭಾಷೆಯ ಜೊತೆಗೆ ಸದೃಢ ಸಮಾಜಮುಖಿ, ಸಮಾನತೆಯ ಮನೋಭಾವ ಮಕ್ಕಳಲ್ಲಿ ಮೂಡುವಂತೆ, ಮೂಡಿದ್ದು ಬೆಳೆಯುವಂತೆ ಮಾಡಬೇಕು.

ನಮಗೆ ಏನಿದ್ದರೂ celebrate ಮಾಡುವ ಹುಮ್ಮಸ್ಸು.. ಅದನ್ನೂ ಮಾಡುವ. Let us celebrate womanhood. ನಾವು ಹೆಣ್ಣು ಎಂದು ಹೆಮ್ಮೆಪಡುವ. ಸಮಾನತೆ ಬೇಕು ಅಂದರೆ ಗಂಡಿನಂತೆ ಆಗಬೇಕು ಎಂದಲ್ಲ.. ನಮಗೆ ಬೇಕಾದಂತೆ ಇರಬೇಕು.. ಯಾರಿಗೂ ಅಡಿಯಾಳಾಗಿ ಅಲ್ಲ.

(ಯು.ಸುಮಾ ಅವರ ಲೇಖನದಿಂದ ಸ್ಪೂರ್ಥಿ)

****************

One thought on “ಮಹಿಳಾದಿನದ ವಿಶೇಷ

  1. “ಪುರುಷರ ಮಹಿಳೆಯರ ಮನೋಭಾವ ಬದಲಾಗಬೇಕು” ಲೇಖನದ ಒಟ್ಟಾರೆ ಝಿಸ್ಟ ಇದು ಅಂದುಕೊಂಡಿದ್ದೇನೆ.ಮೇಡಂ
    ಸಂಗಾತಿಯ ಹೆಸರಿಗೆ ತಕ್ಕಂತೆ ನಮ್ಮೆಲ್ಲರ(ಸಾಹಿತ್ಯಾಸಕ್ತರ) ನಿತ್ಯದ ಸಂಗತಿಯಾಗಿದೆ.
    ಲೇಖಕರು. ಸಂಪಾದಕರು ಇಬ್ಬರಿಗೂ ಅಭಿನಂದನೆಗಳು.
    ಡಿ.ಎಮ್.ನದಾಫ್.ಅಫಜಲಪುರ.

Leave a Reply

Back To Top