ಮಹಿಳಾದಿನದ ವಿಶೇಷ

ನಿಲ್ಲದ ಅಮಾವಾಸ್ಯೆ

Person Wearing Black Top

ಚಂದ್ರಪ್ರಭ

ನಿಲ್ಲದ ಅಮಾವಾಸ್ಯೆ….


ಈ ಸೃಷ್ಟಿ ನಿರಂತರ.. ಇಲ್ಲಿ ಯಾವ ಕಾರಣಕ್ಕೂ ಯಾವುದೂ ನಿಲ್ಲಲಾರದು ಅಂತ ಹೇಳೋಕೆ ನಮ್ಮಲ್ಲಿ ಪ್ರಚಲಿತ ಮಾತೊಂದಿದೆ.. ‘ಅಕ್ಕ ಸತ್ತರ ಅಮಾಸಿ ನಿಂದರೂದಿಲ್ಲ’ ಅಂತ. ಹೌದು, ಯಾವುದೂ ನಿಲ್ಲೂದಿಲ್ಲ. ಆದರೆ ಅದನ್ನು ನಡೆಯಿಸಿಕೊಂಡು ಹೋಗುವ ವ್ಯವಸ್ಥೆಯೊಂದು ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇರ್ತದೆ ಅನ್ನೊ ಸತ್ಯ ಯಾರ ಗಮನಕ್ಕೂ ಬಾರದೆ ಹೋಗ್ತದೆ ಅನ್ನೋದೇ ವಿಸ್ಮಯ. ಗಾಳಿ, ನೀರು, ಮಳೆ, ಬಿಸಿಲು.. ನಲ್ಲಿ ನೀರು, ದಿನಪತ್ರಿಕೆ, ತರಕಾರಿ, ಅಕ್ಕಿ,ಬೇಳೆ..ಪೆಟ್ರೋಲು,ಸೀಮೆ ಎಣ್ಣೆ, ಗ್ಯಾಸ್ ಒಲೆ.. ಯಾವುದಾದರೂ ಅಷ್ಟೇ. ಅದರಲ್ಲಿ ವ್ಯತ್ಯಯ ಆಗುವ ವರೆಗೆ ನಮ್ಮ ಗಮನ ಅತ್ತ ಹರಿಯುವುದೇ ಇಲ್ಲ. ಆದರೆ ಕವಿ ಕಣ್ಣಿಗೆ ಈ ಸಂಗತಿ ಬಿದ್ದಾಗ ಮೂಡಿದ ಸಾಲುಗಳು ಅದೆಷ್ಟು ಆಪ್ತ, ಸುಂದರ!!
“ರಾಜ್ಯಗಳಳಿಯಲಿ ರಾಜ್ಯಗಳುರುಳಲಿ| ಹಾರಲಿ ಗದ್ದುಗೆ ಮುಕುಟಗಳು| ಮುತ್ತಿಗೆ ಹಾಕಲಿ ಸೈನಿಕರೆಲ್ಲ| ಬಿತ್ತುಳುವುದನವ ಬಿಡುವುದೇ ಇಲ್ಲ||”
ಅಬ್ಬಾ…! ಎಂಥ ಸೂಕ್ಷ್ಮ ಗ್ರಹಿಕೆ, ಸಂವೇದನೆ!!

ಇದೆಲ್ಲ ಯಾಕೀಗ ಅಂತೀರಾ? ಹ್ಞೂಂ… ಅದೆಂಥದೊ ವೈರಸ್‌ ಬಂದು ದೇಶಕ್ಕೆ ದೇಶವನ್ನೇ ಅಲ್ಲಾಡಿಸ್ತಿದೆ.. ಜಗತ್ತಿನ ಜನಗಳಲ್ಲಿ ಭಯ ಹುಟ್ಟಿಸಿದೆ. ಯಾರಾರಿಗೊ ಇನ್ನೂ ಯಾರಾರೊ ಹಿಂಬಾಲಕರು ಮುಂಬಾಲಕರು ಆಗಿ ದೇವರು.. ಭಕ್ತರು ಅಂತೆಲ್ಲ ಸೃಷ್ಟಿ ಆಗವ್ರೆ.. ಇನ್ನು ಕೆಲವರೊ.. ಗೆದ್ದು ಬೀಗುವ ತನಕ ಒಂದು ಬಣ್ಣ..! ಗೆದ್ದ ಬಳಿಕ ಇವರು ಆಶ್ರಯಿಸುವ ಛತ್ರ ಚಾಮರಗಳ ಬಣ್ಣವೇ ಬೇರೆ..!! ಮನುಷ್ಯರನ್ನು ತಮಗೆ ಹೋಲಿಸುವವರನ್ನು ಕಂಡು ಊಸರವಳ್ಳಿಗಳೂ ಆಕ್ರೋಶಗೊಂಡಿವೆ. ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ.. ಎಲ್ಲದರಲ್ಲಿ ಏನೆಲ್ಲ ಸ್ಥಿತ್ಯಂತರ ಕ್ಷಣ ಕ್ಷಣಕ್ಕೂ ಘಟಿಸುತ್ತಿವೆ. ಯುದ್ಧವಂತೆ.. ಕೊರೊನಾ, ಕೋವಿಡ್ ಅಂತೆ.. ದೇಶವಂತೆ..ಪ್ರೇಮವಂತೆ..

ಇದನ್ನೆಲ್ಲ ಬದಿಗೆ ತಳ್ಳಿ ಪರೀಕ್ಷಾ ತಿಂಗಳು ಬಂದೇ ಬಿಟ್ಟಿದೆ. ಪರೀಕ್ಷೆಗಳ ಹಬ್ಬ.. ಹಾವಳಿ. ಮೂಲಭೂತ ಸೌಕರ್ಯಗಳಿರುವ ಖಾಸಗಿ ಸಂಸ್ಥೆಗಳ ರೀತಿ ಒಂದು ಬಗೆಯದಾದರೆ ಎಲ್ಲ ಕೊರತೆಗಳನ್ನೂ ಕೊಡವಿ ಎದ್ದು ನಿಲ್ಲುವ ಸರಕಾರಿ ಸಂಸ್ಥೆಗಳದು ಮತ್ತೊಂದು ರೀತಿ. ಪರೀಕ್ಷೆ ನಡೆದಿದೆಯೆ ಇಲ್ಲಿ? ಎಂದು ಕೇಳುವಷ್ಟು ಸದ್ದಡಗಿದ ವಾತಾವರಣದಲ್ಲಿ ಪರೀಕ್ಷೆ ನಡೆದಿವೆ ಎಂದಿನಂತೆ. ಮೌಲ್ಯಮಾಪನ ನಡಪ್ರತಿಷ್ಠಾಪನೆಗಾಗಿ ಅವಸರ.. ಸಿಇಟಿ..ಇನ್ನೊಂದು ಮತ್ತೊಂದು ಬಂದೇ ಬಿಡ್ತವೆ. ಕವಲು ದಾರಿಯಲ್ಲಿ ನಿಂತ ಮಕ್ಕಳಿಗೆ ಆಯ್ಕೆಯ ಗೊಂದಲ. ದಿನಗಳು ಓಡುತ್ತಿವೆಯೆ..ಉರುಳುತ್ತಿವೆಯೆ.. ಒಂದೂ ಅರ್ಥವಾಗದ ಸನ್ನಿವೇಶದಲ್ಲಿ ಶಾಲೆಗಳು ಪುನಃ ಆರಂಭ ಆಗ್ತವೆ.


ಸಮವಸ್ತ್ರ ತೊಡಿಸಿ ಮಗುವನ್ನು ಶಾಲೆಗೆ ಕಳಿಸಿ ಆಕೆ ತಾನೂ ಅಣಿಯಾಗುತ್ತಾಳೆ.. ಯಾವುದೊ ಸಂಕಿರಣದ ಆಶಯ ನುಡಿ.. ಇನ್ನಾವುದೊ ಚರ್ಚಾ ಕೂಟದ ಪ್ರಧಾನ ಭಾಷಣ.. ಅಮ್ಮನ ಮನೆಗೊಂದು ಭೇಟಿ.. ಮಿತ್ರರೊಂದಿಗೊಂದು ವಿಹಾರ.. ಎಲ್ಲವನ್ನೂ ತನ್ನೊಂದಿಗೆ ಕರೆದೊಯ್ಯುತ್ತಾಳೆ.. ಜೊತೆಗೆ ಬಸಿರು,ಬಾಣಂತನ,ಮುಟ್ಟು, ಸ್ರಾವಗಳೆಂಬ ಸಂಗಾತಿಗಳನ್ನೂ…


ಓಟದ ನಡುವೆ ಪತ್ರಿಕೆ ಮೇಲೆ ಒಮ್ಮೆ ಕಣ್ಣಾಡಿಸುತ್ತಾಳೆ. ನೋಟು, ಜಿ ಎಸ್ ಟಿ, ರಾಜಕೀಯ, ಸಾಹಿತ್ಯ ಎಲ್ಲವನ್ನೂ ಒಮ್ಮೆ ನಿರುಕಿಸುತ್ತಾಳೆ.. ತನ್ನ ನಿಲುವನ್ನು ತಾ ಕಾಪಿಟ್ಟುಕೊಂಡು. ಕೂಸು,ಬಾಲೆ,ಯುವತಿ,ವೃದ್ಧೆ ಭೇದವಿಲ್ಲದೆ ನಡೆಯುವ ಅನಾಚಾರವನ್ನು ಮೆಟ್ಟುತ್ತ ಸಾಗುವ ಸಂಕಲ್ಪವನ್ನು ದೃಢಗೊಳಿಸಿಕೊಂಡು ಹೊಸ ದಾರಿಗಳನ್ನು ಅರಸುತ್ತಾಳೆ.


ತನ್ನ ಅಸ್ಮಿತೆ, ಹಕ್ಕುಗಳ ಮರು ಪ್ರತಿಷ್ಠಾಪನೆಗಾಗಿ ದಿನವೊಂದರ ಆಚರಣೆ!! ಅಲ್ಲಿಯೂ ನಸು ನಕ್ಕು ಸಂಭ್ರಮಿಸುತ್ತಾಳೆ.


ಎಲ್ಲ ಇಲ್ಲಗಳ ನಡುವೆಯೂ ಈ ಜಗತ್ತಿನ್ನೂ ಸುಂದರ ತಾಣವಾಗಿ ಉಳಿದಿರುವುದು ಹೇಗೆಂದು ಅಚ್ಚರಿ ಪಡುವವರಿಗೆ ಉತ್ತರ ಸಿಕ್ಕಿರಬಹುದು…

*******

Leave a Reply

Back To Top