ಕಾವ್ಯ ಸಂಗಾತಿ
ಗಜಲ್
ದೇವರಾಜ್ ಹುಣಸಿಕಟ್ಟಿ

ಬಟ್ಟೆ ತೊಟ್ಟವರಿಗಿಂತ ಬೆತ್ತಲಾದವರೇ ಬೀಗಿಕೊಳ್ಳುವ ಕಾಲವಿದು
ದುಡಿದು ಉಣ್ಣುವರಿಗಿಂತ ಬಡಿದು ತಿನ್ನುವವರೇ ಬೀಗಿಕೊಳ್ಳುವ ಕಾಲವಿದು
ಅತ್ಯಾಚಾರಿಗೂ ಸನ್ನಡತೆಯ ಕಿರೀಟ ತೊಡಿಸಲಿಲ್ಲವೇ?
ಹಾರ ತುರಾಯಿಗಳಿಂದ ಕೊಲೆಗಡುಕರೇ ಬೀಗಿಕೊಳ್ಳುವ ಕಾಲವಿದು

ಕನಸ ಬಿತ್ತಿ ಮನದ ಮಾತಿಂದ ದೇಶ ಭಕ್ತಿಯ ಹೆಸರಲ್ಲಿ ಕಣ್ಣಕಿತ್ತರಿಲ್ಲಿ
ಲಂಚ ಪಡೆದು ಲೂಟಿ ಹೊಡೆದವರೇ ಬೀಗಿ ಕೊಳ್ಳುವ ಕಾಲವಿದು
ಕುರ್ಚಿಗಾಗಿ ಕಂಬನಿ ಸುರಿಸಿ ಕರ್ಚಿಪ್ಪು ಹಾಕಲಿಲ್ಲವೇ..?
ನೆಮ್ಮದಿಗೆ ಕೊಳ್ಳಿ ಇಟ್ಟು ಸಾಂತ್ವಾನ ಹೇಳುವವರೇ ಬೀಗಿ ಕೊಳ್ಳುವ ಕಾಲವಿದು
ರಾಮ ರಹೀಮರನ್ನು ಹರಾಮಿಗಳು ಮುಖವಾಡಕ್ಕೆ ಬಳಸಿಕೊಂಡರಿಲ್ಲಿ…
ದೇವಾ ನಿನ್ನನ್ನೆ ಮತಕ್ಕಾಗಿ ವ್ಯಾಪಾರ ಮಾಡುವವರೇ ಬೀಗಿಕೊಳ್ಳುವ ಕಾಲವಿದು