ತಾರುಣ್ಯದ ತಂತಿ ಮೀಟಿ

ಪುಸ್ತಕ ಸಂಗಾತಿ

ತಾರುಣ್ಯದ ತಂತಿ ಮೀಟಿ

ಗೊರೂರು ಅನಂತರಾಜು

ಅನುಭವಕ್ಕಿಂತ ಮಿಗಿಲಾದುದು ಬದುಕಿನಲ್ಲಿ ಮತ್ತೇನೂ ಇಲ್ಲ. ಅನುಭವವೇ ಶ್ರೇಷ್ಠ. ಇದು ಸುಮ್ಮನೆ ಬರುವುದಿಲ್ಲ. ಬದುಕಿನ ಬಂಡಿ ಉರಳಿದಾಗ ತಗ್ಗು ದಿಣ್ಣೆಗಳಲ್ಲಿ ಹತ್ತಿಳಿದಾಗ, ಏರುಪೇರುಗಳನ್ನು ದಾಟಿದಾಗ ಆಗುವಂತಹುದೇ ಅನುಭವ. ಇದಕ್ಕೆ ಕ್ಷೇತ್ರಗಳು ಹಲವು. ಒಂದೊಂದು ಕ್ಷೇತ್ರಕ್ಕೂ ವಿವಿಧ ಹಾಗೂ ವಿಭಿನ್ನ ಮಾರ್ಗಗಳುಂಟು. ಪ್ರತಿಯೊಂದು ಮಾರ್ಗವೂ ನಾವು ಸಾಗುವ ಪಥದಲ್ಲಿ ತನ್ನದೇ ಆದ ಅನುಭವವನ್ನು ನೀಡುತ್ತದೆ. ಅನುಭವವು ಕ್ಷೇತ್ರದಿಂದ ಕ್ಷೇತ್ರಕ್ಕೆ ಹೇಗೆ ಭಿನ್ನವಾಗಿರುತ್ತದೆಯೊ ಹಾಗೆಯೇ ವ್ಯಕ್ತಿಯಿಂದ ವ್ಯಕ್ತಿಗೂ ಭಿನ್ನವಾಗಿರುತ್ತದೆ. ಒಂದೇ ಕ್ಷೇತ್ರಕ್ಕೆ ಇಬ್ಬರು ಅಥವಾ ಮೂವರು ಅಥವಾ ಅದಕ್ಕಿಂತಲೂ ಹೆಚ್ಚು ಮಂದಿ ತೊಡಗಿಸಿಕೊಂಡಾಗ, ಎಲ್ಲರಿಗೂ ಒಂದೇ ಅನುಭವವಾಗುತ್ತದೆ ಎಂದೇನಿಲ್ಲ. ಪ್ರತಿಯೊಬ್ಬರಿಗಾಗುವ ಅನುಭವವು ಬೇರೆ ಬೇರೆಯೆ ಇರುತ್ತದೆ. ಆದ್ದರಿಂದ ನಾವು ಪ್ರತಿ ಕ್ಷೇತ್ರದಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ, ಆ  ಕ್ಷೇತ್ರದಲ್ಲಿ ಪರಿಪೂರ್ಣತೆಯ ಅನುಭವವನ್ನು ಪಡೆಯಬೇಕು. ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಇತ್ಯಾದಿ ಕ್ಷೇತ್ರಗಳಲ್ಲಿ ವ್ಯಕ್ತಿಗಳು ತೊಡಗಿಸಿಕೊಂಡಾಗ ಅವರಿಗಾಗುವ ಅನುಭವಗಳು ಸದಾ ಕಾಲವೂ ಅನನ್ಯ. ಸಾಹಿತ್ಯ ಕ್ಷೇತ್ರವೊಂದರಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ತನಗಾಗುವ ಅನುಭವಗಳನ್ನು ತಾನೂ ಅನುಭವಿಸಿ, ಸಮಾಜದಲ್ಲಿ ಇತರರಿಗೂ ಉಣಬಡಿಸುತ್ತಿರುವ ಓರ್ವ ಶ್ರೇಷ್ಠ ಸಾಹಿತ್ಯಾತ್ಮಕ ಚಿಂತಕರು ಅವರೇ ನಮ್ಮ ಗೊರೂರು ಅನಂತರಾಜುರವರು.

ಗೊರೂರು ಅನಂತರಾಜು ರವರ ಕಥೆ, ಕವನ, ಹಾಸ್ಯ, ಕಾದಂಬರಿ, ನಾಟಕ ಹೀಗೆ ವಿಭಿನ್ನ ಲೇಖನಗಳನ್ನು ನಾವು ಆಗಾಗ ಪತ್ರಿಕೆಗಳಲ್ಲಿ ಓದುತ್ತಲೇ ಇರುತ್ತೇವೆ. ವಿಭಿನ್ನ ಸಾಹಿತ್ಯಾತ್ಮಕ ಮಜಲುಗಳನ್ನು ಓದುಗರಿಗೆ ನೀಡಿದ್ದಾರೆ. ಇವರ ಬರಹಗಳು ಓದುಗರ ಚಿಂತನ ಮಂಥನಕ್ಕೆ ಓರೆ ಹಚ್ಚುತ್ತವೆ. ಸಮಾಜದ ಓರೆ ಕೋರೆಗಳನ್ನು ತಿದ್ದುವ ಸಲುವಾಗಿ ಇವರು ಕೆಲವು ಲೇಖನಗಳನ್ನು ಬರೆದಿರುತ್ತಾರೆ. ವಿಜ್ಞಾನದ ಜ್ಞಾನದೀಪವನ್ನು ಹಚ್ಚಲು ಪ್ರಯತ್ನಿಸಿರುತ್ತಾರೆ.

ಹೇಳಿದಂತಹ ಮಾತುಗಳಿವೆ ಮೌನದಲಿ, ತಿಳಿಸಲಾಗದಂತಹ ಭಾವನೆಗಳಿವೆ ಮನದಲ್ಲಿ , ಕನಸುಗಳಿವೆ ನನಸಾಗದಂತಹ ನಯನಗಳಲ್ಲಿ, ತೀರದಂತಹ ಬಯಕೆಗಳಿವೆ ಅಂತರಂಗದಲಿ …… ಓರ್ವ ಲೇಖಕನ / ಕವಿಯ ಮನದಾಳದ ಮಾತು, ಭಾವನೆ, ಕನಸು, ಬಯಕೆಗಳು ಆತನ ಮನದಾಳದಲ್ಲಿ ಹುದುಗಿರುತ್ತವೆ. ಅವು ಹೊರಬರಲು ಬರಹ ಒಂದು ಪ್ರಮುಖ ಸಾಧನವಾಗಿರುತ್ತದೆ. ಕಣ್ಣೆದುರಿಗೇ ಎಷ್ಟೋ ಅನವಶ್ಯಕ ಘಟನೆಗಳು ನಡೆದು ಹೋದರೂ ಅವುಗಳನ್ನು ಅದೇ ಸ್ಥಳದಲ್ಲಿ ನಿಂತು ಬಗೆಹರಿಸುವ ಸಾಮರ್ಥ್ಯವಿದ್ದರೂ, ಅಲ್ಲಿ ಅವಕಾಶ ಸಿಗದೆ ವಂಚಿತರಾಗಬಹುದು. ಅಂತಹ ಸಂದರ್ಭದಲ್ಲಿ ಘಟನೆಯ ಸಂದರ್ಭ, ಸಮಸ್ಯೆ, ಕಾರಣ , ಪರಿಹಾರಗಳನ್ನು ನೀಡಲು ಈ ಬರಹ ಅತ್ಯುತ್ತಮ ಹಾಗೂ ಅತ್ಯಮೂಲ್ಯ ಸಾಧನವಾಗಿ ಪರಿಣಮಿಸುತ್ತದೆ. ಈ ನಿಟ್ಟಿನಲ್ಲಿ ‘ಬರಹ’ ಎಂಬ ಸಾಧನವನ್ನು ಗೊರೂರು ಅನಂತರಾಜುರವರು ಉತ್ತಮವಾಗಿ ಬಳಸುತ್ತಾರೆ. ಮೌನದ ಮಾತುಗಳನ್ನು ಸಮಾಜಕ್ಕೆ ನೀಡುವ ಮೂಲಕ ಸಮಾಜದ ಒಳಿತಿಗೆ ಬರೆಯುತ್ತಾರೆ. ಮನದೊಳಗಿನ ಭಾವನೆಗಳನ್ನು ಬರಹದ ಮೂಲಕ ವ್ಯಕ್ತಪಡಿಸಿ ಆ ಮೂಲಕ ” ತನ್ನಂತೆಯೇ ಪರರು ಹಾಗೂ ಪರರಂತೆ ತಾನು ” ಎಂಬ ಅನುಭಾವವನ್ನು ಬೆಸೆಯುತ್ತಾರೆ.

ಗುರು ಅನಂತರಾಜುರವರಿಗೆ ಬರಹ ಬರವಣಿಗೆ ನಿತ್ಯ ನಿರಂತರವಾದ ಪ್ರವೃತ್ತಿಯಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಹಲವು ವರ್ಷಗಳು ದುಡಿದು ಈಗ ನಿವೃತ್ತಿಯಾಗಿದ್ದಾರೆ. ವೃತ್ತಿಯಿಂದ ಮಾತ್ರ ನಿವೃತ್ತಿ, ಆದರೆ ನಿಂತಿಲ್ಲ ಈಗಲೂ ಇವರ ಪ್ರವೃತ್ತಿ. ಅದು ಬರಹಗಳ ಜ್ಞಾನದ ಬುತ್ತಿ. ಪ್ರವೃತ್ತಿಯೆಡೆಗೆ ಇವರ ಕಾಳಜಿ, ಕಳಕಳಿ, ಆಸಕ್ತಿ,  ಶ್ರದ್ಧೆ, ನಿಷ್ಠೆ , ಶ್ರಮ ಬರವಣಿಗೆಯ ಮೇಲಿನ ಪ್ರೀತಿ ಇವರ ಅವಿನಾಶಿ ಸಂಪನ್ಮೂಲಗಳಾಗಿವೆ. ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬನು ಬೆಳೆಯಬೇಕಾದರೆ ಮೇಲಿನ ಅಂಶಗಳು ಅತ್ಯಾವಶ್ಯಕ. ಎಲ್ಲಾ ಅಂಶಗಳನ್ನು ಸಮ್ಮಿಳಿತ ಮಾಡಿಕೊಂಡು ಗೊರೂರು ಅನಂತರಾಜು ರವರು ತಮ್ಮ ಬರವಣಿಗೆಗಳನ್ನು ಆರಾಧಿಸುತ್ತಾ ಮುನ್ನಡೆಯುತ್ತಿದ್ದಾರೆ. ಇವರ ಕ್ರಿಯಾಶೀಲ ಚಟುವಟಿಕೆಗಳು ಆತ್ಮ ಪುನರಾವಲೋಕನಕ್ಕೆ ಮಾರ್ಗಸೂಚಿಯಾಗುತ್ತದೆ. ವ್ಯಕ್ತಿಯ ಮನೋವಿಕಾಸಕ್ಕೆ ಇವರ ಬರವಣಿಗೆಗಳು ಸ್ಪೂರ್ತಿಯಾಗುತ್ತದೆ.

ನಾನು ಶಾಲೆಯಲ್ಲಿ ಕರ್ತವ್ಯ ನಿರತನಾಗಿದ್ದ ಒಂದು ದಿನ ಮಧ್ಯಾಹ್ನ ಗೊರೂರು ಅನಂತರಾಜುರವರು ನನಗೆ ಕರೆ ಮಾಡಿ, ತಮ್ಮನ್ನು ಪರಿಚಯಿಸಿಕೊಂಡು, ” ನನ್ನ ಒಂದು ಪುಸ್ತಕ ತಾರುಣ್ಯದ ತಂತಿ ಮೀಟಿ ”  ಈ ಪುಸ್ತಕವನ್ನು ಓದಿ ಅಭಿಪ್ರಾಯ ತಿಳಿಸಿ ಸರ್ ಎಂದು ಹೇಳಿದರು. ನಾನು ಒಪ್ಪಿದೆ. ಓದಿದೆ. ಗೊರೂರು ಅನಂತರಾಜುರವರು ಬರವಣಿಗೆಯಲ್ಲಿ ಎತ್ತರಕ್ಕೆ ಬೆಳೆದ ಲೇಖಕರು. ಅವರ ಕಥೆ , ಕವನ , ಹಾಸ್ಯ, ರಂಗಕಲೆಗಳ ಲೇಖನಗಳು ಇತ್ಯಾದಿ ಬರಹಗಳು ಅದ್ಭುತವಾದ ಪರಿಕಲ್ಪನೆಗಳನ್ನು ಓದುಗರಿಗೆ ಕಟ್ಟಿಕೊಡುತ್ತವೆ. ಅಂತಹ ಓರ್ವ ಶ್ರೇಷ್ಠ ಲೇಖಕರ ಪುಸ್ತಕ ನನ್ನ ಕೈಲಿ ಡಿಜಿಟಲ್ ರೂಪದಲ್ಲಿ. ಇಷ್ಟವೂ ಆಯಿತು. ಓದೋಣವೆಂದು ತೀರ್ಮಾನಿಸಿ ಶ್ರೀಯುತರನ್ನು ಭೇಟಿ ಮಾಡಿದೆ. ಪುಸ್ತಕವನ್ನು ನನ್ನ ಕೈಗಿಟ್ಟು ಇದನ್ನು ಓದಿ ಅಭಿಪ್ರಾಯ ತಿಳಿಸಿ ಸರ್ ಎಂದರು. ನಾನೂ ಒಪ್ಪಿದೆ.

” ತಾರುಣ್ಯದ ತಂತಿ ಮೀಟಿ ” ಈ ಕೃತಿಯಲ್ಲಿರುವ ಲೇಖನಗಳು ಓದುಗರನ್ನು ಒಂದೆಡೆ ಕುಳಿತು ನಿರಂತರವಾಗಿ ಓದುವಂತೆ ಮಾಡುತ್ತವೆ. ಓದುಗರ ಮನೋತರಂಗಗಳು ಪದಗಳ, ವಾಕ್ಯಗಳ ಸಾಲುಗಳೊಂದಿಗೆ ಪ್ರವಾಸ ಮಾಡುತ್ತವೆ. ಪುಸ್ತಕ ಓದುತ್ತಲೇ ಪ್ರಪಂಚ ನೋಡುವ ಅನುಭವ ನಮಗಾಗುತ್ತದೆ. ಕನ್ನಡ ಚೆನ್ನ – ಕವಿಗಳು ಚಿನ್ನ, ‘ಚಿನ್ನದ ಲೋಕ’  ಕೃತಿಯಲ್ಲಿ ವೈ. ಬಿ. ಎಚ್. ಶಿವಯೋಗಿ ರವರ ಮಕ್ಕಳ ಬಣ್ಣದ ಕಾವ್ಯ ಲೋಕದ ಕಲ್ಪನೆಯನ್ನು ಹೇಗೆ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ಗೊರೂರು ಅನಂತರಾಜುರವರು ವಿವರಣಾತ್ಮಕವಾಗಿ ಓದುಗರ ಮನಮುಟ್ಟುವಂತೆ ಹೇಳಿದ್ದಾರೆ. ಎನ್‍. ಬಿ. ಆನಂದ ಪಟೇಲ್ ನೆಲ್ಲಿಗೆರೆ ಇವರು ” ನಡೆದಾಡುವ ದೇವರು ಡಾಕ್ಟರ್ ಶ್ರೀ ಶಿವಕುಮಾರ ಸ್ವಾಮೀಜಿಯವರು ” ಎಂಬ ಕೃತಿಯ ಮೂಲಕ ಸ್ವಾಮೀಜಿಯವರು ಸಾಧನೆಯ ಹಾದಿಯಲ್ಲಿ ಸನ್ಯಾಸಿ ಜೀವನ ನಡೆಸುತ್ತಾ ಆಕಾಶದ ಎತ್ತರಕ್ಕೆ ಬೆಳೆದು ನಿಂತ ಮಹಾನ್ ತ್ಯಾಗಿ ಎಂಬ ಜೀವನಗಾಥೆಯನ್ನು ನೀಡಿದ್ದಾರೆ. ಆ ಕೃತಿಗೊಂದು ಲೇಖನವನ್ನು ಪ್ರಕಟಿಸಿ ಪುಸ್ತಕಕ್ಕೊಂದು ಅರ್ಥಗರ್ಭಿತ ಸಂದೇಶವನ್ನು ನೀಡಿದ್ದಾರೆ.  ಹೀಗೆಯೇ ” ತಾರುಣ್ಯದ ತಂತಿ ಮೀಟಿ ” ಕೃತಿಯು ವಿಭಿನ್ನ ಲೇಖನಗಳ ವೈಶಿಷ್ಟ್ಯ ಪೂರ್ಣ ಕೃತಿಯಾಗಿದ್ದು ವೈವಿಧ್ಯಮಯವಾಗಿದೆ.

ಸರಳ ಜೀವನ ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಗೊರೂರು ಅನಂತರ ಮನಸ್ಸು ಮಗುವಿನಂತೆ. ಅಂಬೆಗಾಲಿಡುವ ಮಗುವೊಂದು ನೆಲದಲ್ಲಿ ಕಾಣುವ ಚಿಕ್ಕ ಚಿಕ್ಕ ಇರುವೆ, ಹುಳ, ವಸ್ತುಗಳನ್ನು ಕೈಬೆರಳಿನಿಂದ ಮುಟ್ಟುವಂತೆ ಸಾಹಿತ್ಯ ಲೋಕವೆಂಬ ಸೌಧದೊಳಗಿನ ನೆಲದಲ್ಲಿ ಹರಿದಾಡುವ ಎಲ್ಲಾ ರೀತಿಯ ಸಾಹಿತ್ಯವನ್ನು ಅತ್ಯಂತ ಸೂಕ್ಷ್ಮ ದೃಷ್ಟಿಕೋನದಿಂದ ಅವಲೋಕಿಸಿ, ಈ ಸಮಾಜಕ್ಕೆ ಯಾವುದನ್ನು ನೀಡಬೇಕು ಎಂಬುದನ್ನು ತೀರ್ಮಾನಿಸಿ, ತಮ್ಮ ಕೃತಿಯ ಮೂಲಕ ಉಣಬಡಿಸಿದ್ದಾರೆ. ಈ ಲೇಖನಗಳ ಮೂಲಕ ಜೀವನದ ಆಗುಹೋಗುಗಳಾದ ನಗು – ಅಳು, ದುಃಖ- ಸಂತಸ,  ಕಷ್ಟ – ಸುಖ, ವೃತ್ತಿ – ಪ್ರವೃತ್ತಿ, ಅನುಭವ – ಅನುಭವ, ಬಾಲ್ಯ – ಯೌವ್ವನ – ವೃದ್ಯಾಪ್ಯ, ಒಂಟಿತನ – ಸಹಜೀವನ, ಸೋಲು – ಗೆಲುವು ಹೀಗೆ ಎಲ್ಲಾ ರೀತಿಯ ಚಿಂತನೆಗಳು ಮಂಥನ ರೂಪ ತಳೆದು ಒಡಮೂಡಿವೆ.ಗೊರೂರು ಅನಂತರಾಜುರವ ರು ಮಾನವ ಬದುಕಿನ ವಿವಿಧ ಮಜಲುಗಳನ್ನು ತಮ್ಮ ಬರವಣಿಗೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಎಲ್ಲಾ ಬರಹಗಳಲ್ಲೂ ಅವರ ಸರಳತೆ ಎದ್ದು ಕಾಣುತ್ತದೆ. ಆ ಮೂಲಕ ಜಗತ್ತಿಗೆ ಉದಾತ್ತ ಚಿಂತನೆಗಳನ್ನು, ಪರಿಕಲ್ಪನೆಗಳನ್ನು, ಅನುಭವಗಳನ್ನು ನೀಡುತ್ತಿದ್ದಾರೆ.

” ತಾರುಣ್ಯದ ತಂತಿ ಮೀಟಿ ”  ಈ ಕೃತಿಯು ಗೊರೂರು ಅನಂತರಾಜುರವರಿಂದ ಬರೆಯಲ್ಪಟ್ಟ ವಿಭಿನ್ನ , ವಿವಿಧ ಲೇಖನಗಳ ಸಂಗ್ರಹ. ಎಲ್ಲಾ ಲೇಖನಗಳು ಕೃತಿಯಾಗುವ ಮೊದಲೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಅವೆಲ್ಲವನ್ನು ಒಟ್ಟಾಗಿ ಸೇರಿಸಿ ಪ್ರತಿಯೊಂದು ಹೊರತಂದಿದ್ದಾರೆ.

ಗೊರೂರು ಅನಂತರಾಜು ಅವರು ಸಾಹಿತ್ಯ ಕ್ಷೇತ್ರದಲ್ಲಿ ಬರವಣಿಗೆಯನ್ನೇ ಆರಾಧಿಸುತ್ತಾ, ಬರವಣಿಗೆಯ ಮೂಲಕವೇ ಸಾಮಾಜಿಕ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಸೇವೆ ಎಂಬುದು ಬಹಳ ಗಂಭೀರವಾದ ವಿಚಾರ, ಇದೊಂದು ಜವಾಬ್ದಾರಿ , ಇದೊಂದು ಕೈಂಕರ್ಯ, ಇದೊಂದು ದೃಷ್ಟಿಕೋನ, ವಿಭಿನ್ನವಾದ ನೆಲೆಗಟ್ಟು, ವಿಶಿಷ್ಟವಾದ ವೇದಿಕೆ, ಎಂಬ ಚಿಂತನೆಗಳ ಮೂಲಕವೇ ಈ ಸಮಾಜಕ್ಕೆ ಒಳ್ಳೆಯದನ್ನೇ ತಿಳಿ ಹೇಳುತ್ತಾ ತಮ್ಮ ಬರಹಗಳ ಮೂಲಕ ಸಾಗಿದ್ದಾರೆ. ಇವರ ತಾತ್ವಿಕವಾದ ಶಕ್ತಿ, ಚಿಂತನಾ ಸಾಮರ್ಥ್ಯ, ಭೌತಿಕವಾದ ವಿಚಾರ ವಿಮರ್ಶೆಗಳು ಓದುಗಮಹನೀಯರನ್ನು ಮತ್ತಷ್ಟು ವಿಚಾರ ವಿಮರ್ಶಗಳಿಗೆ ಅಣಿಗೊಳಿಸುತ್ತವೆ. ಸರಿ – ತಪ್ಪುಗಳ ನಿರ್ಧರಿಸುವಿಕೆಗೆ ವೇದಿಕೆಯನ್ನು ಒದಗಿಸುತ್ತವೆ. ಸಾಮಾಜಿಕ ಸಮತೋಲನಕ್ಕೆ ದಾರಿಯಾಗಿದೆ ಇವರ ಲೇಖನಗಳ ಮಾಲಿಕೆ.

ಬದ್ಧತೆಯ ಪ್ರಬುದ್ಧತೆಯಿರುವ ಮಿತ್ರರಾದ ಗೊರೂರು ಅನಂತರಾಜುರವರು ಸ್ವಯಂ ಕ್ರಿಯಾಶೀಲತೆಯ ಮೂಲಕ ವಿವಿಧ ಕ್ಷೇತ್ರಗಳಲ್ಲಿ ತಮಗೆ ಆದ ಅನುಭವಗಳನ್ನು ಸಮಾಜದ ಹಿತಕ್ಕಾಗಿ ಕಟ್ಟಿಕೊಡುವ ಕೃತಿಯೊಂದನ್ನು ನೀಡುತ್ತಿದ್ದಾರೆ. ಕಾಲ, ದೇಶ, ವಸ್ತು, ವಿಷಯ ಮತ್ತು ವಿಚಾರಗಳ ಮೂಲಭೂತ ಪರಿಕಲ್ಪನೆಗಳನ್ನು ಒಳಗೊಂಡಂತೆ ಅವು ಎಲ್ಲಾ ತಾಲೂಕು ಯೋಗ್ಯವೆನಿಸುವಂತೆ ತಮ್ಮ ವಿಚಾರ ವಿಮರ್ಶೆಗಳನ್ನು ಮಂಡಿಸುತ್ತಾರೆ. ವ್ಯಷ್ಠಿಗೂ , ಸಮಷ್ಠಿಗೂ , ಪರಿಪೂರ್ಣತೆಗೂ, ಸಮನ್ವಯತೆಗೂ ಅಗತ್ಯವಾದ ಜ್ಞಾನವು ಈ ಲೇಖನಗಳಲ್ಲಿ ಒಡಮೂಡಿದೆ. ಸಾಧಿಸಿದ ಸಾಧಕರನ್ನು ಪರಿಚಯಿಸುವ ಮೂಲಕ ನಮಗೆ ತಿಳಿದಿರದ ಅದೆಷ್ಟೋ ಲೇಖಕರನ್ನು ಪರಿಚಯಿಸುತ್ತದೆ. ಈ ಕೃತಿ ಜ್ಞಾನ, ವಿಜ್ಞಾನ ಪತ್ರಿಕೋದ್ಯಮ, ರಾಷ್ಟ್ರನಾಯಕರು, ಕಲಾವಿದರು – ರಂಗಕರ್ಮಿಗಳು ಕನ್ನಡದ ಕವಿ ಪರಂಪರೆ ಸಾಹಿತ್ಯ ದಿಗ್ಗಜರು, ಧಾರ್ಮಿಕ ಮಹಾಪುರುಷರು, ಕಲೆ, ಹವ್ಯಾಸ ಹೀಗೆ ಹತ್ತು ಹಲವು ವಿಚಾರಗಳನ್ನು ವಿಮರ್ಶಿಸುವ ಮೂಲಕ ಬೌದ್ಧಿಕ ಸ್ತರವನ್ನು ಮೇಲಕ್ಕೇರಿಸುತ್ತದೆ. ಸಾಮಾನ್ಯ ಜ್ಞಾನವು ಬದುಕಿಗೆ ಅತ್ಯಗತ್ಯವೆಂದು ಸಾರಿ ಹೇಳುತ್ತದೆ ಈ ಕೃತಿ. ಗಂಭೀರ ವಿಷಯಗಳನ್ನು ಸರಳವಾಗಿಯೂ, ಸುಲಭವಾಗಿಯೂ, ಓದುಗರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಆಕರ್ಷಕ ಶೈಲಿಯಿಂದ ಕೂಡಿರುತ್ತದೆ ಈ ಕೃತಿಯ ವೈಶಿಷ್ಟ್ಯವೆನಿಸಿದೆ.

ಮಹಾಕವಿ ರಸಋಷಿ ಕುವೆಂಪುರವರ ಪಂಚತತ್ವಗಳಾದ ಮನುಜಮತ , ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿಗಳು ಮನುಷ್ಯ ಮನುಷ್ಯನಾಗಲಿಕ್ಕೆ ಮನುಷ್ಯತ್ವವನ್ನು ಮೈಗೂಡಿಸಿಕೊಳ್ಳಲಿಕ್ಕೆ ಅವಶ್ಯವಾಗಿ ಬೇಕೇ ಬೇಕು. ಸಹನೆ, ದಯೆ, ಕರುಣೆ, ಪ್ರೀತಿ, ಮಮತೆ, ವಾತ್ಸಲ್ಯ, ನಂಬಿಕೆ, ವಿಶ್ವಾಸ, ಶ್ರದ್ಧೆ, ಶ್ರಮ ಇವುಗಳನ್ನು ಮೈಗೂಡಿಸಿಕೊಂಡು ಯಾರಿಗೂ ಕೇಡನ್ನು ಬಯಸದ ಮನಸ್ಸುಗಳ ನಿರ್ಮಾಣವಾಗಬೇಕಿದೆ ಈ ಸಮಾಜದಲ್ಲಿ. ಓದಿ ಬೋಧಕನಾಗು, ಖಾದಿ ಯೋಧನೆ ಆಗು ವಣಿಕ ಶ್ರಮಿಕನೆ ಆಗು, ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿಯ ಆಶಯ ಮಹೋನ್ನತವಾದ ನುಡಿಯಾಗಿದೆ. ಈ ಹಿನ್ನೆಲೆಯಲ್ಲಿ ಗೊರೂರು ಅನಂತರಾಜುರವರು ಸಮಾಜದಲ್ಲಿನ ಮನಸ್ಸುಗಳಿಗೆ ಮನುಷ್ಯತ್ವವನ್ನು ತಮ್ಮ ಬರವಣಿಗೆಯ ಕೌಶಲದ ಮೂಲಕ ತುಂಬುತ್ತಿದ್ದಾರೆ. ಈ ಕೃತಿಯು ಮಾನವನ ಬದುಕಿನ ಎಲ್ಲಾ ಮಜಲುಗಳನ್ನು ಹಿಡಿದು ನಿಂತು ಓದುಗರನ್ನು ತೃಪ್ತಿಪಡಿಸುತ್ತವೆ.


ಕೆ. ಎನ್. ಚಿದಾನಂದ . ಹಾಸನ

Leave a Reply

Back To Top