ನೂರು ಜನಪದ ಹಾಡುಗಳು
ಕೆ.ಶಿವು ಲಕ್ಕಣ್ಣವರ
ಬೈಲೂರ ಬಸವಲಿಂಗಯ್ಯನವರ ಸಮೃದ್ಧ ಜನಪದ ಹಾಡಿನ ಕೃತಿಯೇ ‘ನೂರು ಜನಪದ ಹಾಡುಗಳು’ ಎಂಬ ಪುಸ್ತಕವು!
ಪ್ರಸ್ತುತವಾಗಿ ಈ ‘ನೂರು ಜನಪದ ಹಾಡುಗಳು’ ಕೃತಿಯು ವಿಸ್ತೃತವಾಗಿ ಗರ್ಭಸೇರಲಿದ್ದ ಬೀಸೂಕಲ್ಲಿನ ಪದಗಳು, ಸೋಬಾನೆ ಪದಗಳು, ಜೋಗುಳ ಪದಗಳು, ಚೌಡಿಕೆ ಪದಗಳು, ಕಿನ್ನರಿ ಪದಗಳು, ಹಬ್ಬದ ಹಾಡುಗಳು, ಕೋಲಾಟದ ಪದಗಳು, ಗೀಗೀ ಪದಗಳು, ಹೀಗೆಯೇ ಹತ್ತಾರು ಪ್ರಕಾರಗಳನ್ನು ಒಳಗೊಂಡಿದೆ ಈ ‘ನೂರು ಜನಪದ ಹಾಡುಗಳು’ ಎಂಬ ಕೃತಿಯು…
ಒಟ್ಟಾರೆ ಜನಪದ ಹಾಡು ಅಥವಾ ಜಾನಪದವೆಂದರೆ ಹಳ್ಳಿಯ ಜನರ ಸಂಗೀತ, ರೂಪಕ, ಮಣ್ಣಿನ ವಾಸನೆಯ ಬದುಕು. ಹಳ್ಳಿಯ ಜನರು ತಮ್ಮ ದಿನ ನಿತ್ಯ ಕೆಲಸಗಳನ್ನು ಮಾಡುವಾಗ ಹಾಗೂ ತಮ್ಮ ಬಿಡುವಿನ ಸಂದರ್ಭದಲ್ಲಿ ತಮ್ಮದೇ ಪದಗಳಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಮತ್ತು ಹಾಡುತ್ತಾರೆ. ಒಬ್ಬ ಮನುಷ್ಯ ಹೀಗೆ ಕಟ್ಟಿ ಹೇಳಿದ ಹಾಡು ಮತ್ತೊಬ್ಬರು ಹೇಳಿಕೊಳ್ಳುತ್ತ ಹೀಗೆಯೇ ಎಲ್ಲ ಜನಪದರ ಬಾಯಿಂದ ಬಾಯಿಗೆ ಹೊರಹೊಮ್ಮುವ ಪದದ ಅಥವಾ ಹಾಡುಗಳನ್ನು ಹಾಡುತ್ತಿದ್ದರು ಮತ್ತು ಇವು ರೋಮಾಂಚಕವೂ ಹೌದು…
ಉದಾಹರಣೆಗೆ : ಒಬ್ಬ ತಾಯಿ ತನ್ನ ಮಗು ಮನೆಯಲ್ಲಿ ಓಡಾಡುತ್ತಿದ್ದರೆ ಆಗುವ ಖುಷಿಯನ್ನು ಹಾಡಿನಲ್ಲಿ ಬಣ್ಣಿಸುವ ರೀತಿಯ ಜಾನಪದ ಹಾಡಿನ ರೀತಿಯಲ್ಲಿ ಹೀಗಿದೆ.
“ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ…
ಕೂಸು ಕಂದಯ್ಯ ಒಳ ಹೊರಗ…
ಕೂಸು ಕಂದಯ್ಯ ಒಳಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ…“
ಹೀಗೆ ಜನಪದ ಹಾಡು ತನ್ನತನವನ್ನು ಹಿಂದಿನಿಂದಲೂ ಉಳಿಸಿಕೊಳ್ಳುತ್ತಾ ಬಂದಿದೆ. ಹೀಗಿರುವ ಜಾನಪದ ಹಾಡಿಗೆ ವಿಶೇಷ ಸ್ಥಾನ-ಮಾನವನ್ನು ಕೊಡಲಾಗಿದೆ. ಈ ಜನಪದ ಹಾಡುಗಳಿಂದಾಗಿ ಹಳ್ಳಿಯಿಂದ ಹಳ್ಳಿಗೆ, ನಗರದಿಂದ ನಗರಕ್ಕೆ, ಪಟ್ಟಣದಿಂದ ಪಟ್ಟಣಕ್ಕೆ ಜನಪದ ಹಾಡಿನ ಮಹತ್ವವನ್ನು ಜನಪದರು ಪರಿಚಯಿಸಿದ್ದಾರೆ. ಹೀಗೆ ಜನಪದ ಹಾಡುಗಳು ಎಲ್ಲಾ ಕಡೆ ಪರಿಚಯವಾಗಿಬಿಟ್ಟಿದೆ…
ಬೈಲೂರ ಬಸವಲಿಂಗಯ್ಯನವರ ‘ನೂರು ಜನಪದ ಹಾಡುಗಳು’ ಎಂಬ ಕೃತಿಯು ಇದನ್ನೇ ಹೇಳುತ್ತದೆ ಮತ್ತು ಕಟ್ಟಿಕೊಡುತ್ತದೆ…
ಒಟ್ಟಾರೆ ಜನಪದವೆಂದರೆ ಮನುಷ್ಯ ಬದುಕಿನ ಕ್ರಿಯೆಗಳು, ವಸ್ತುಗಳು, ಮನರಂಜನೆಯ ಸಾಧನಗಳು, ಮನುಷ್ಯನ ಸಂಸ್ಕಾರ, ಆರಾಧನೆ, ನಂಬಿಕೆಗಳು: ಉಡುಪುಗಳು, ಹಬ್ಬ ಹರಿದಿನಗಳು, ಇದೇ ರೀತಿಯಾಗಿ ಒಟ್ಟಾರೆ ಬದುಕಿನ ಸರ್ವ ಲಯಗಳನ್ನು ಒಳಗೊಂಡಿರುವಂತದೇ ಆಗಿದೆ…
ಮನುಷ್ಯ ಜೀವಿ ತನಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಜಾನಪದ ಸಾಹಿತ್ಯಕ್ಕೆ ಮೊರೆಹೋಗುತ್ತಾನೆ. ಹೀಗೆಂದು ಸಾರಿಹೇಳುತ್ತದೆ ಬೈಲೂರ ಬಸವಲಿಂಗಯ್ಯ ಹಿರೇಮಠರವರ ಈ ಕೃತಿಯು ‘ನೂರು ಜನಪದ ಹಾಡುಗಳು’ ಎಂಬ ಕೃತಿಯಾಗಿದೆ…
ಈಗಂತೂ ಮನುಷ್ಯ ಬಹು ಎತ್ತರಕ್ಕೆ ಬೆಳೆದಿದ್ದಾನೆ. ‘ಸಂಸ್ಕೃತಿ’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಎಲ್ಲವನ್ನೂ ಸಂಶೋಧನೆಯ ತೆಕ್ಕೆಯಲ್ಲೇ ತಬ್ಬಿಕೊಳ್ಳಲು ಮನುಷ್ಯ ನಿರಂತರವಾಗಿ ಹೋರಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಇಂದು ಅನೇಕಾನೇಕ ಜ್ಞಾನಶಿಸ್ತುಗಳು ಆವಿಷ್ಕಾರಗಳು ಒಡಮೂಡಿವೆ. ಇಂತಹ ಜ್ಞಾನಶಿಸ್ತುಗಳಲ್ಲಿ ಅಂತರಶಿಸ್ತೀಯ ಅಧ್ಯಯನವೂ ಒಂದು. ಈ ಶಿಸ್ತಿನ ಮೂಲಕ ವಿದ್ವಾಂಸರು ಇತರ ಜ್ಞಾನ ಶಾಖೆಗಳೊಂದಿಗೆ ಜಾನಪದ ಸಾಹಿತ್ಯದ ಅಂತರ್ ಸಂಬಂಧವನ್ನು ಗುರುತಿಸುವ ಸವಾಲುಗಳನ್ನು ಎದುರಿಸುವ ಕಾರ್ಯದಲ್ಲಿ ತೊಡಗಿರುವುದು ಈ ಸಾಹಿತ್ಯದ ಸತ್ವವಾಗಿದೆ. ಜಾನಪದ ಬಿಟ್ಟು ಬದುಕಿಲ್ಲ, ಬದುಕು ಬಿಟ್ಟು ಜಾನಪದವಿಲ್ಲ ಎಂಬುದು ಕಟು ವಾಸ್ತವ. ಈ ಸಾರವನ್ನೇ ಹೇಳುತ್ತದೆ ಬೈಲೂರ ಬಸವಲಿಂಗಯ್ಯನವರ ‘ನೂರು ಜನಪದ ಹಾಡುಗಳು’ ಕೃತಿಯು…
ಇಡೀ ವಿಶ್ವವೇ ನಮ್ಮ ದೇಶದತ್ತ ಬೆರೆಗುಗಣ್ಣಿನಿಂದ ನೋಡುವಂತೆ ನಮ್ಮ ದೇಶದಲ್ಲಿ ಜಾನಪದ ಕಲೆಗಳು ಸಮೃದ್ಧವಾಗಿದೆ. ಈಗಾಗಲೇ ಗುರುತಿಸಲ್ಪಟ್ಟ ಜಾನಪದ ಕಲೆ ನೂರಾರು ಮತ್ತು ಸಮೃದ್ಧವಾಗಿವೆ. ಇನ್ನೂ ಗುರುತಿಸಲ್ಪಡಬೇಕಾದ ಕಲೆಗಳು ಸಾವಿರಾರು. ಹೀಗಿರುವುದರಿಂದಲೇ ನಮ್ಮ ಯುವ ಜನರು ಈ ಬಗೆಗೆ ಚಿಂತಿಸಬೇಕಾಗಿದೆ. ಎಲ್ಲ ಜಾನಪದ ಕಲೆಗಳನ್ನು ದಾಖಲಿಸಬೇಕಾಗಿದೆ. ಪ್ರದರ್ಶನ ಕಲೆಗಳನ್ನು ಬದಿಗಿಟ್ಟರೂ ಹಾಡುವ ಸಾಹಿತ್ಯವೇ ಅಪಾರ ಪ್ರಮಾಣದಲ್ಲಿದೆ…
ಇಂತಹ ಹಾಡುವ ಸಾಹಿತ್ಯದ ಒಂದಿಷ್ಟನ್ನಾದರೂ ಸಹೃದಯರ ಮನೆ-ಮನಸ್ಸನ್ನು ಮುಟ್ಟಿಸಬೇಕೆಂಬ ಆಸೆಯಿಂದ ಬೈಲೂರ ಬಸವಲಿಂಗಯ್ಯನವರು ತಮ್ಮ ಸಾವಿರಾರು ಜಾನಪದ ಹಾಡುಗಳಲ್ಲಿ ಆಯ್ದ ಪುಸ್ತುಕೆಯೇ ‘ನೂರು ಜನಪದ ಹಾಡುಗಳು’..!
ಈ ‘ನೂರು ಜನಪದ ಹಾಡುಗಳು’ ಎಂಬ ಕೃತಿಯನ್ನು ಜಾನಪದ ಸಂಶೋಧನ ಕೇಂದ್ರ
ಭೂಷಣ ಪ್ರಕಾಶನ, ಸಪ್ತಾಪುರ, ಧಾರವಾಡ-೧ ಎಂಬ ಪ್ರಕಾಶನ ಹೊರತಂದಿದೆ…
ಈ ಪ್ರಕಾಶನದ ನಿರ್ದೇಶಕಿಯಾದ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠರು ಈ ಪುಸ್ತಕೆಯನ್ನು ಹೊರತಂದಿದ್ದಾರೆ…
ಸರ್ಕಾರದ ಉದಾಸೀನತೆ, ವಿದ್ವಾಂಸರ ಅದೂರದೃಷ್ಟಿ, ಕಲಾವಿದರ ಅಜ್ಞಾನ ಮತ್ತು ಜನತೆಯ ಅನಾದಾರದ ಕಾರಣವಾಗಿಯೇ ಉತ್ತರ ಕರ್ನಾಟಕದ ಸಮೃದ್ಧ ಜಾನಪದ ಅವಸಾನದಂಚಿನಲ್ಲಿದೆ. ಈ ಅನಾದಾರ ದೂರವಾಗಬೇಕಿದೆ ಎಂದು ಹೇಳಿ ಈ ಬೈಲೂರ ಬಸವಲಿಂಗಯ್ಯ ಹಿರೇಮಠರವರ ‘ನೂರು ಜನಪದ ಹಾಡುಗಳು’ ಬಗೆಗಿನ ನನ್ನ ಮಾತು ಮುಗಿಸುತ್ತೇನೆ..!
**********