ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಡಾ.ದೊಡ್ಡರಂಗೇಗೌಡ

ವಿಶೇಷ ಲೇಖನ

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ

ಡಾ.ದೊಡ್ಡರಂಗೇಗೌಡ

 ಡಾ.ದೊಡ್ಡರಂಗೇಗೌಡ ಹಾವೇರಿಯಲ್ಲಿ ಫೆಬ್ರವರಿ 26 ರಿಂದ 28 ರ ವರೆಗೆ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರಾಗಿದ್ದು ವಿಶೇಷವಾಗಿದೆ..! —

ಈ ಯಾಲಕ್ಕಿ ನಾಡು ಎಂದೇ ಖ್ಯಾತಿಯನ್ನು ಹೊಂದಿರುವ ಹಾವೇರಿಯಲ್ಲಿ ಇದೇ ಜನವರಿ 6, 7 ಮತ್ತು 8 ರಂದು ನಡೆಯುವ ಬದಲು ಫೆಬ್ರವರಿ 26, 27, ಮತ್ತು 28 ವರೆಗೂ ನಡೆಯುವುದು ಖಾಯಂ ಆಗಿದೆ. ಈ ಹಾವೇರಿಯಲ್ಲಿ ನಡೆಯುವ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮೊದಲೇ ಅಂದುಕೊಂಡಂತೆ ಡಾ.ದೊಡ್ಡರಂಗೇಗೌಡರು ಸರ್ವಾಧ್ಯಕ್ಷರಾಗಿದ್ದಾರೆ..! ಅವರ ಕುರಿತು ಒಂದಿಷ್ಟು ಮೊದಲ ಮಾತುಗಳು ಇಲ್ಲವೆ ನೋಡಿರಿ..!

ಡಾ.ದೊಡ್ಡರಂಗೇಗೌಡರು ಕನ್ನಡದ ವಿಶಿಷ್ಟ ಸಾಹಿತಿ ಮತ್ತು ಲೇಖಕರು. ಇವರು ಎಲ್ಲಾ ತೆರನಾದ ಸಾಹಿತ್ಯದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಬರೆದ ನೂರಾರು ಚಿತ್ರಗೀತೆಗಳಂತೂ ಕನ್ನಡಿಗರ ಜನಮಾನಸದಲ್ಲಿ ಸದಾ ಗುನುಗುಡುತ್ತಿರುತ್ತವೆ. ಅದಲ್ಲದೇ ಭಾವಗೀತೆ, ಕವನ, ಪ್ರವಾಸ ಕಥನ ಮತ್ತು ಇನ್ನಿತರೆ ಹತ್ತು ಹಲವಾರು ಪುಸ್ತಕಗಳಲ್ಲಿ ದೊಡ್ಡರಂಗೇಗೌಡು ಅವರು ಕನ್ನಡಕ್ಕೆ ತಮ್ಮದೇ ಆದ ವಿಶೇಷ ಸೇವೆಯನ್ನು ಸಲ್ಲಿಸಿದ್ದಾರೆ..!

ದೊಡ್ಡರಂಗೇಗೌಡರು ಅವರು ನಾಡಿನಲ್ಲಷ್ಟೇ ಅಲ್ಲದೇ ದೇಶ ವಿದೇಶಗಳಲ್ಲೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದೂರದಲ್ಲಿರುವ ಕನ್ನಡಿಗರಿಗೂ ಸಹ ಶ್ರೀಯುತರ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಅಂತರ್ಜಾಲ ತಾಣವನ್ನು ರಚಿಸಲಾಗಿದೆ. ಇಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಗೌಡರ ಮತ್ತು ಅವರ ಸಾಹಿತ್ಯದ ಪರಿಚಯ ಮಾಡಿಕೊಡಲು ಯತ್ನಿಸಲಾಗಿದೆ..!

# ಕನ್ನಡ ಸಾಹಿತ್ಯ ಪರಂಪರೆಯ ಒಂದು ವಿಶಿಷ್ಟ ಕಾವ್ಯ ಸರಿತೆ —

ಸಾಹಿತ್ಯ ಜೀವನದ ಪ್ರತಿಬಿಂಬ. ಜೀವನದ ಸಾರವೆಲ್ಲ ಸಾಹಿತ್ಯದ ಒಳ ತಿರುಳಾಗಿದೆ. ಅವೆರಡಕ್ಕೂ ಅವಿನಾಭಾವ ಸಂಬಂಧವಿದೆ. ಯಾರು ಬದುಕನ್ನು ತೀರಾ ಆತ್ಮೀಯವಾಗಿ ಹತ್ತಿರದಿಂದ ಕಾಣುತ್ತಾರೋ, ಸೃಜನಾತ್ಮಕವಾಗಿ ಬರೆಯುತ್ತಾರೋ ಅವರು ಸಾಹಿತಿಯಾಗಬಲ್ಲರು..!

ಈ ಸೃಜನತೆಯಲ್ಲಿ ಸರಳತೆಯಿರಬೇಕು. ಆಡುಭಾಷೆಯ ಸೊಗಡಿರಬೇಕು, ಸರ್ವಕಾಲಿಕ ಗಟ್ಟಿತನದ ಸಮೃದ್ಧ ಭಾವಗಳಿರಬೇಕು..!

ಆಗ ಮಾತ್ರ ಕವಿ ಜನರೆದೆಯ ತಲುಪಬಲ್ಲ. ಕನ್ನಡ ಸಾಹಿತ್ಯ ವಲಯದಲ್ಲಿ ಜನಪರ ಕವಿ. ಡಾ.ದೊಡ್ಡರಂಗೇಗೌಡರು ಈ ಹಿನ್ನೆಲೆಯನ್ನು ಮೈಗೂಡಿಸಿಕೊಂಡು ಬರೆಯುತ್ತಾ ಬಂದಿರುವ ಕವಿಗಳಲ್ಲಿ ಒಬ್ಬರು..!

ತೀರಾ ಸರಳತೆಯಲ್ಲಿ ಆತ್ಮೀಯವಾಗಿ ಬರೆಯುವ ಗೌಡರು ಸಾರಸ್ವತ ಲೋಕದಲ್ಲಿ ವಿಶಿಷ್ಟವಾದ ಕವಿಯಾಗಿ ಬೆಳೆದು ನಿಂತಿದ್ದಾರೆ..!

ಈವರೆಗೆ ಸುಮಾರು 80 ಕೃತಿಗಳನ್ನು ಬರೆದಿರುವ ದೊಡ್ಡರಂಗೇಗೌಡರು ಮೂಲತಃ ನವ್ಯದ ಉತ್ಕರ್ಷೆಯಲ್ಲಿ ಮೂಡಿ ಬಂದ ಕವಿಯಾಗಿದ್ದಾರೆ.

ಅರವತ್ತರ ದಶಕದಲ್ಲಿ ಅವರ ಮೊದಲ ಕವನ ಸಂಕಲನವನ್ನು ‘ಜಗಲಿ ಹತ್ತಿ ಇಳಿದು’ ಪ್ರಕಟವಾಯಿತು. ಅವರ ದ್ವಿತೀಯ ಕವನ ಸಂಕಲನವು ‘ಕಣ್ಣು ನಾಲಗೆ ಕಡಲು’ ಕನ್ನಡ ಸಾಹಿತ್ಯದ ನವ್ಯ ಪರಂಪರೆಗೆ ಹೊಸತನ ತಂದ ಕೃತಿಯಾಗಿದೆ.

ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕೃತಗೊಂಡ ಈ ಕೃತಿಯಲ್ಲಿ ಕವಿಯ ಗಟ್ಟಿತನದ ಭಾವಪುಂಜಗಳು ಕಡಲಿನಲೆಗಳಂತೆ ಮೊರೆದಿವೆ. ನವ್ಯದ ಕ್ಲಿಷ್ಟತೆಯನ್ನು ತ್ಯಜಿಸಿ ಸರಳ ಪದಗಳಲ್ಲಿ ಕಾವ್ಯದ ಸೃಜನಾತ್ಮಕ ಸುಲಲಿತವಾಗಿ ಮೂಡಿದೆ..!

‘ಹೇಳದೆ ಕೇಳದೆ ಮಳೆ ಬಂತು ಓಡಿದೆ ಮರಗಿಡಗಳಡಿಗೆ

ನಿಲ್ಲದೆ ಜೋರಾದ ಬಿರುಮಳೆ ಹೊಡೆಯಿತು ನೆಲ ನಡುಗುವ ಹಾಗೆ’..!

ಹೇಳಬೇಕಾದ ವಿಷಯ ನೇರವಾಗಿದೆ. ಅರ್ಥವೂ ಅಷ್ಟೇ ನವಿರಾಗಿದೆ. ಕವಿಯು ಬಳಸಿದ ರೂಪಕಗಳು, ಚಿತ್ರಗಳು ನವ್ಯದ ಘಾಟಿನಲ್ಲಿದ್ದರೂ ವಿಭಿನ್ನವಾಗಿವೆ..!

ಸುಸ್ಪಷ್ಟವಾಗಿ ಸಾಂಕೇತಿಕ ಶೈಲಿಯಲ್ಲಿ ಕ್ಷಮತೆಯನ್ನು ಹೊಂದಿರುವ ದೊಡ್ಡರಂಗೌಗೌಡರ ಕವಿತೆಗಳಲ್ಲಿ ಮನೋಕೋಶದ ಅಸ್ಪಷ್ಟವಾದ ಭಾವಗಳಿಗೆ ವಸ್ತು ಲೋಕದ ಸ್ಪಷ್ಟತೆಯನ್ನು ಬಿಂಬಿಸುವ ಮೂಲಕ ಪದ್ಯವನ್ನು ಹೃದ್ಯವಾಗಿಸುವ ಶೈಲಿಯು ಅನನ್ಯವಾಗಿದೆ.

ಕವಿ ದೊಡ್ಡರಂಗೇಗೌಡರು ಕಟ್ಟುವ ರೂಪಕ ಶಬ್ದಚಿತ್ರ. ಪ್ರತಿಮೆಗಳು ತೀರಾ ವೈಯಕ್ತಿಕ ನೆಲೆಯಲ್ಲಿ ಸಂಚರಿಸುತ್ತವೆ. ಕವಿಯ ಕಾವ್ಯದಲ್ಲಿ ಬೌದ್ಧಿಕತೆಯ ಕಸರತ್ತಿನ ಜೊತೆಗೆ ಗ್ರಾಮ್ಯ ಸೊಗಡಿನ ತಾಕತ್ತೂ ಇದೆ..!

‘ಸುಯ್ಯೆಂದು ತಂಗಾಳಿ ಬೀಸ್ದಾಗ ಕೊಳಲಂಗೆ

ಸಂಗೀತ ಇಂಪಾಗಿ ಹಾಡಾಗೈತೋ…!

ಕುದುರೆ ಮೇಲೇರಿ ಬಂದ

ಸೂರ್ಯ ಸಿಂಗಾರ ತಂದ’ ಎಂಬ ಕಾವ್ಯವು ಸುಮಧುರವಾಗಿದೆ..!

ಇಂತಹ ದೊಡ್ಡರಂಗೇಗೌಡರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಪುಟ್ಟದಾದ ಹಳ್ಳಿಯಲ್ಲಿ ಜನಿಸಿದರು.

ಗೌಡರ ಸಾಹಿತ್ಯಕ್ಕೆ ಜಾನಪದೀಯವೇ ಜೀವಾಳವಿದೆ.

ತೋಟ ತುಡಿಕೆಗಳಲ್ಲಿ ದುಂಬಿ ದಾಸವಾಳಗಳಲ್ಲಿ ಜೀಕಾಡುತ್ತಿದ್ದ ಕವಿ ನವ್ಯದ ಸೆಳೆತಕ್ಕೆ ಸಿಕ್ಕರೂ ಸಹ ತಮ್ಮ ಅಪ್ಪಟ ಮಣ್ಣಿನ ವಾಸನೆಯನ್ನು ಬಿಡಲಿಲ್ಲ..!

ಕವಿ ತನ್ನ ಸೃಜನತೆಗೆ ತೊಡಗಿಸಿಕೊಂಡ ವಿಷಯ, ವಸ್ತುಗಳೂ ಅಷ್ಟೇ ವಿಶಿಷ್ಟವಾಗಿವೆ. ಅಲ್ಲಿ ನಿಸರ್ಗ ಪ್ರೀತಿಯಿದೆ, ಪ್ರೇಮ ಕಾರಂಜಿಯಿದೆ, ಯೌವ್ವನದ ಉತ್ಸುಕತೆಯಿದೆ, ವಾತ್ಸಲ್ಯದ ಬಂಧನವಿದೆ, ಗೋಮುಖ ವ್ಯಾಘ್ರತನದ ಅನಾವರಣವಿದೆ. ವಿಹ್ವಲ ಮನಸ್ಸಿನ ವಿಸ್ತೃತ ಬಯಕೆಯಿದೆ. ವಿಚಾರಶೀಲತೆಯಿದೆ, ಹೆಚ್ಚಿನದಾಗಿ ತನ್ನ ತಾಯ್ನಾಡಿನ ಕುರಿತಾದ ಅಭಿಮಾನದ ಕಡಲೂ ಮೊರೆದಿದೆ. ಮುಖ್ಯವಾಗಿ ಜೀವನದ ವಿಹಂಗಮ ನೋಟ ಎರಕವಾಗಿದೆ..!

ಸರಳತೆ, ಸಂಪೂರ್ಣತೆ ಹಾಗೂ ಸಹಜ ಶೈಲಿಯಿಂದ ಕವಿತೆಗಳು ಗೆದ್ದಿವೆ. ಪ್ರೀತಿ ಪ್ರಗಾಥಕ್ಕೆ ಯಾವತ್ತೂ ನವ ನವೋನ್ಮೇಶತನ ಎಂಬುದನ್ನು ಗೌಡರು ತುಂಬಾ ಚೆನ್ನಾಗಿ ಸೃಜಿಸಿದ್ದಾರೆ.

ವರ್ಷದ ಅಭಿಜಾತ ಕಾವ್ಯ ಎಂದು ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದ ಈ ಪ್ರಗಾಥಕ್ಕೆ 1990 ರಲ್ಲಿ ರತ್ನಾಕರವರ್ಣಿ – ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿದೆ..!

ದೊಡ್ಡರಂಗೇಗೌಡರ ಕಾವ್ಯ ಕೃತಿಗಳ ನಾದಲೀಲೆ ಈ ಬಗೆಯಾಗಿ ಹರಿದರೆ ಅವರ ಗದ್ಯಕೃತಿಗಳೂ ಕೂಡಾ ಮೌಲಿಕವಾಗಿವೆ. ವರ್ತಮಾನದ ವ್ಯಂಗ್ಯದಲ್ಲಿ, ವಿಚಾರ ವಾಹಿನಿ, ಅರಿವಿನ ಪರಿಧಿ, ವಾಗಾರ್ಥವಾರಿಧಿ, ಅಧ್ಯಯನ ಅನಾವರಣ, ಅಭಿನವ ವಾಲ್ಮೀಕಿ, ಸಾಹಿತ್ಯ ಸರಸ್ವತಿ, ತವನಿಧಿ…! ಹೀಗೆಯೇ ಸಾಗುತ್ತದೆ ಶೀರ್ಷಿಕೆಗಳ ಸಾಲು ಸಾಲು..!

ಗೌಡರು ಕೇವಲ ಕವಿಯಷ್ಟೇ ಅಲ್ಲ. ಉತ್ತಮ ವಿಮರ್ಶಕರೂ ಹೌದು. ಅಧ್ಯಯನ ಕೃತಿಯ ವಿಚಾರಗಳನ್ನು ಅವರು ಸಹೃದಯನಾಗಿ ಸವಿದು ಕಾವ್ಯದ ಧಾಟಿಯಲ್ಲಿ ಹೆಣೆದು ಓದುಗರಿಗೆ ಹೃದ್ಯವಾದ ಶೈಲಿಯಲ್ಲಿ ನಿರೂಪಿಸುತ್ತಾರೆ. ಒಂದು ಕೃತಿಯ ತಪ್ಪು ಒಪ್ಪುಗಳನ್ನು ಅಳೆಯುವುದು ಸುಲಭ. ಆದರೆ ಆ ಕೃತಿಯ ಆಳಕ್ಕಿಳಿದು ತಂತುಗಳನ್ನು ಮೀಟಿ ಸವಿದ ಆನಂದರಾಗವನ್ನು ಸರಳ ಸುಂದರವಾಗಿ ಅಭಿವ್ಯಕ್ತಿಸುವುದು ಪ್ರಯಾಸದ ಕೆಲಸವೇ ಸರಿ..!

ಕವಿ ಮತ್ತು ಓದುಗನ ನಡುವೆ ಮೈತ್ರಿಯುತ ಕೊಂಡಿಯನ್ನು ಬೆಸೆಯುವಲ್ಲಿ ಗೌಡರ ಮೌಲ್ಯಯುತ ಬರಹಗಳು ಪ್ರಮುಖ ಪಾತ್ರ ವಹಿಸುತ್ತವೆ..!

ಕಾವ್ಯ ದೃಷ್ಟಿಯಂತೆಯೇ ನೈಜತೆಯಿಂದ ಬರೆವ ವಿಮರ್ಶಾ ದೃಷ್ಟಿಕೋನವನ್ನು ಹೊಂದಿರುವ ದೊಡ್ಡರಂಗೇಗೌಡರು ಸಾಹಿತ್ಯ ಲೋಕದಲ್ಲಿ ತಮ್ಮನ್ನು ತಾವು ವಿಭಿನ್ನತೆಯ ನೆಲೆಯಲ್ಲಿ ಗುರುತಿಸಿಕೊಂಡವರು. ನಾಡಿನ ಪ್ರಸಿದ್ಧ ಪತ್ರಿಕೆಗಳಿಗೆ ಅಂಕಣಗಳನ್ನೂ ಬರೆವ ಗೌಡರು ಕನ್ನಡ ನವೋದಯ ಕಾವ್ಯ ಕುರಿತ ಮಹಾ ಪ್ರಬಂಧವನ್ನು ಸಂಶೋಧಿಸಿ ರಚಿಸಿ ಪಿ.ಎಚ್.ಡಿ.ಪದವಿಯನ್ನೂ ಪಡೆದಿದ್ದಾರೆ.

ಕನ್ನಡ ಸಾಹಿತ್ಯದ ಒಂದು ಪುನರ್ ಮೌಲ್ಯ ಮಾಪನದಂತಿರುವ ಈ ಕೃತಿ ಒಂದು ಸುಂದರವಾದ ಕಲಾಕೃತಿಯೂ ಹೌದು..!

ನಂತರ ಅಪೂರ್ವ ಘಟ್ಟ ದೊಡ್ಡರಂಗೇಗೌಡರ ಚಲನಚಿತ್ರ ಕ್ಷೇತ್ರಕ್ಕೆ ಗೀತರಚನಕಾರರಾಗಿ ಪಾದಾರ್ಪಣೆ ಮಾಡಿದ್ದು. 70 ರ ದಶಕದಲ್ಲಿ ತೆರೆ ಕಂಡ ‘ಮಾಗಿಯ ಕನಸು’ ಚಿತ್ರದ ಬಂದಿದೆ. ‘ಬದುಕಿನ ಬಂಗಾರದ ದಿನಾ’ ಎಂಬ ಗೀತೆಯಿಂದ ಅವರ ಬೆಳ್ಳಿತೆರೆ ಪಯಣ ಶುರುವಾಯಿತು..!

ಸಿನೆಮಾದಲ್ಲೂ ಅನೇಕಾನೇಕ ವಿನೂತನ ಪ್ರಯೋಗಗಳನ್ನು ನಡೆಸಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಜಾನಪದ ಶೈಲಿಯ ಮಣ್ಣಿನ ವಾಸನೆಯುಕ್ತ ನೆಲದ ಪದಗಳನ್ನು ಗೀತೆಯನ್ನಾಗಿಸಿದ್ದು ಹಾಗೂ ಗೀತೆಗೆ ಕಾವ್ಯಸ್ಪರ್ಶವನ್ನು ತಂದದ್ದು..!

‘ತೇರಾನೇರಿ ಅಂಬರದಾಗೆ ನೇಸರ ನಗುತಾನೆ

ಮರಗಿಡ ತೂಗ್ಯಾವೇ ಹಕ್ಕಿ ಹಾಡ್ಯಾವೆ..!’

ಗೌಡರಿಗೆ ಹೆಸರು ತಂದುಕೊಟ್ಟ ಗೀತೆಯಿದು. ಚಿತ್ರಗೀತೆಗಳ ಇತಿಹಾಸದಲ್ಲಿ ಕ್ರಾಂತಿಯನ್ನೆಬ್ಬಿಸಿದ ಗೀತೆಯಿದು. ‘ಪರಸಂಗದ ಗೆಂಡೆತಿಮ್ಮ’ ಚಿತ್ರದ ಈ ಹಾಡು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಸಿತು.

ಈ ಚಿತ್ರಗೀತೆ ಮಹಾರಾಷ್ಟ್ರದಲ್ಲಿ ಏಳನೇ ತರಗತಿಯ ಕನ್ನಡ ಭಾಷೆಗೆ ಪಠ್ಯವಾದದ್ದೂ ಒಂದು ಇತಹಾಸವೇ..!

ದೊಡ್ಡರಂಗೇಗೌಡರು ಹಳ್ಳಿಗರ ನುಡಿಗಟ್ಟನ್ನೇ ಚಿತ್ರಗೀತೆಯಲ್ಲಿ ಇತಿಹಾಸವೇ. ಹಿಂದಿನವರು ಬಳಸಿದ್ದ ಅದೇ ಕೋಗಿಲೆ ದನಿ, ಅದೇ ಹಾಡು ಇವರ ಮೂಸೆಯಲ್ಲಿ –

‘ಕೊರಳಾಗೆ ಇನಿದನಿ ಕೋಗಿಲೆ ಸ್ವರವೈತೆ

ನಡೆಯಾಗೆ ಕುಲುಕುವ ಹಂಸದಾ ಬಳುಕೈತೆ’ – ಎಂದಾಯ್ತು. ಇದು ಕೇಳುಗರಿಗೆ ಹೊಸದಾಗಿ ಪ್ರಿಯವೆನ್ನಿಸಿತು. ಜನರು ಮತ್ತೆ ಮತ್ತೆ ಕೇಳಿ ನಲಿದರು. ಜೊತೆಗೆ ‘ಆಲೆಮನೆ’ ಚಿತ್ರದಲ್ಲಿನ ನಮ್ಮೂರ ಮಂದಾರ ಹೂವೆ..! ಎನ್ನುವಂತ ಸುಮಧುರ ಗೀತೆಗಳು ಹೊಸ ಭಾವ ಕೆರಳಿಸಿದವು..!

ಕಾವ್ಯ ದೃಷ್ಟಿಯಂತೆಯೇ ನೈಜತೆಯಿಂದ ಬರೆವ ವಿಮರ್ಶಾ ದೃಷ್ಟಿಕೋನವನ್ನು ಹೊಂದಿರುವ ದೊಡ್ಡರಂಗೇಗೌಡರು ಸಾಹಿತ್ಯ ಲೋಕದಲ್ಲಿ ತಮ್ಮನ್ನು ತಾವು ವಿಭಿನ್ನತೆಯ ನೆಲೆಯಲ್ಲಿ ಗುರುತಿಸಿಕೊಂಡವರು. ನಾಡಿನ ಪ್ರಸಿದ್ಧ ಪತ್ರಿಕೆಗಳಿಗೆ ಅಂಕಣಗಳನ್ನೂ ಬರೆವ ಗೌಡರು ಕನ್ನಡ ನವೋದಯ ಕಾವ್ಯ ಕುರಿತ ಮಹಾ ಪ್ರಬಂಧವನ್ನು ಸಂಶೋಧಿಸಿ ರಚಿಸಿ, ಪಿ.ಎಚ್.ಡಿ. ಪದವಿಯನ್ನೂ ಪಡೆದಿದ್ದಾರೆ. ಕನ್ನಡ ಸಾಹಿತ್ಯದ ಒಂದು ಪುನರ್ ಮೌಲ್ಯ ಮಾಪನದಂತಿರುವ ಈ ಕೃತಿ ಒಂದು ಸುಂದರ ಕಲಾಕೃತಿ..!

ಈವರೆಗೆ ಸುಮಾರು 600 ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ರಚಿಸಿರುವ ಗೌಡರು ಈಗಲೂ ಬರೆಯುತ್ತಲೇ ಇದ್ದಾರೆ. ಇವರ ರಚನೆಯ ‘ಆಲೆಮನೆ’, ‘ಪರಸಂಗದ ಗೆಂಡೆತಿಮ್ಮ’, ‘ಅಶ್ವಮೇಧ’, ‘ಜನುಮದ ಜೋಡಿ’, ‘ಅರುಣರಾಗ’… ಹೀಗೆಯೇ ಮುಂತಾದ ಚಿತ್ರಗಳ ಗೀತೆಗಳು ಇಂದಿಗೂ ಜನಜನಿತವಾಗಿವೆ..!

ಚಿತ್ರಗೀತೆಗಳಿಗೆ ಭಾವಸ್ಪರ್ಶ ತಂದ ಕವಿ ಇವರು ದೊಡ್ಡರಂಗೇಗೌಡರು.

10 ಚಲನಚಿತ್ರಗಳಿಗೆ ಸಂಭಾಷಣೆಯನ್ನೂ ಇವರು ಬರೆದಿದ್ದಾರೆ. ಹಾಗಾಗಿಯೇ ಗೌಡರು ತಮ್ಮ ಸಾಹಿತ್ಯಕ್ಕೆ ಓದುಗರಿಗಿಂತಲೂ ಕೇಳುಗರನ್ನು ನೋಡುಗರನ್ನು ಹೊಂದಿದ್ದಾರೆನ್ನಬಹುದು..! ಏಕೆಂದರೆ ಇವರು ಇಂದಿಗೂ ಜನರಿಗೆ ಗೀತರಚನಕಾರರೆಂದೇ ಚಿರ ಪರಿಚಿತರು..!

ಇಷ್ಟೇ ಅಲ್ಲದೇ ಭಕ್ತಿಗೀತೆಗಳ ರಚನೆಯಲ್ಲೂ ಗೌಡರು ಕೈಯಾಡಿಸಿದ್ದಾರೆ. ಈ ಕವಿ ಗೌಡರ ಮಣ್ಣಿನ ಮಾತುಗಳು ಮುಕ್ತಕಗಳ ಗುಚ್ಚವಾಗಿದ್ದು ಕಗ್ಗದ ಕೈಪಿಡಿಯಂತಿದೆ..!

ಪ್ರಗಾಥ, ನೀಳ್ಗವಿತೆ, ಕವಿತೆ, ಹನಿಗವಿತೆ, ಭಾವಗೀತೆ, ಭಕ್ತಿಗೀತೆ, ಚೌಪದಿ ಮತ್ತು ಚಿತ್ರಗೀತೆ – ಹೀಗೆಯೇ ಹತ್ತು ಹಲವು ಗೌಡರ ಸಾಹಿತ್ಯಕ್ಕೆ ಅನೇಕ ಆಯಾಮಗಳು. ಚಿಕ್ಕಂದಿನಿಂದಲೇ ಹಳ್ಳಿಯ ಹೆಂಗಸರು ಹಾಡುವ ಜಾನಪದ ಗೀತೆಗಳನ್ನು ಕೇಳುತ್ತಾ ಬೆಳೆದ ಈ ಕವಿಗೆ ಬರವಣಿಗೆ ಒಂದು ನಾದಮಯದಂತೆ ಕೈಗೂಡಿದೆ..!

1964 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾದ ‘Literary Half Yearly’ ಎಂಬ ಪತ್ರಿಕೆಯಲ್ಲಿ ಗೌಡರ ಪದ್ಯಗಳನ್ನು ಕುರಿತು ಬರೆಯುವಾಗ ವಿಮರ್ಶಕರು ಈ ಕವಿಯ ಪದ್ಯವನ್ನು ‘Jazy Verse’ (ಮಧುರವಾದ ಗೀತ ಸಂಗೀತ ಸ್ಪರ್ಶ) ಎಂದು ಹೊಗಳಿದ್ದರು..!

ಕವಿ ಡಾ.ದೊಡ್ಡರಂಗೇಗೌಡರ ಬದುಕೊಂದು ತೆರೆದಿಟ್ಟ ಪುಸ್ತಕ. ನಿಗೂಢತೆ ಕಾಣಿಸುವುದಿಲ್ಲ. ಎಲ್ಲೆಲ್ಲೋ ಸ್ವೇಚ್ಛ ಅನಾವರಣಗೊಳ್ಳುತ್ತದೆ. ನಡೆ — ನುಡಿಯಲ್ಲೂ ಕವಿ ಸಹಜತೆಯನ್ನು ರೂಢಿಸಿಕೊಂಡಿದ್ದಾರೆ. ವಿಭಿನ್ನ ನೆಲೆಯ ವಿಶಿಷ್ಟತೆಗಳ ಸಂಚಯವಾಗಿರುವ ಗೌಡರ ಸಾಹಿತ್ಯದಲ್ಲಿ ಕಿಂಚಿತ್ತೂ ಕೃತಕತೆಗೆ ಕಾವಿರುವುದಿಲ್ಲ..!

ಪ್ರಾಮಾಣಿಕತೆಗೇ ಅಲ್ಲಿ ಅಗ್ರ ಪಟ್ಟವಿದೆ..!

ಅದು ಕಾವ್ಯವೇ ಇರಲಿ, ಪ್ರಗಾಥವೇ ಇರಲಿ, ಗದ್ಯಕೃತಿಯೇ ಇರಲಿ ಅಲ್ಲೆಲ್ಲಾ ಮಿಂಚುವುದು ಸಹೃದಯ ಸಾಕಾರವೇ ಗೌಡರ ಸಾಹಿತ್ಯಕ್ಕೆ ಒಂದು ಚುಂಬಕ ಶಕ್ತಿಯಿದೆ..!

ಕವಿ ಓದುಗರ ನಡುವೆ ನೇರ ಸಂವಾದಕ್ಕೆ ಮುಕ್ತವಾಗಿ ಅವಕಾಶವೀಯುವ ಆತ್ಮೀಯತೆ ಇದೆ.

ಈ ನೆಲದ ಬದುಕಿನ ದಟ್ಟ ನೆರಳಿದೆ. ಈ ಕವಿ ಒಂದೇ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾನೆ ಅನ್ನುವಂತಿಲ್ಲ. ವಾಸ್ತವದ ಕಟು ಸತ್ಯದ ಅರಿವೂ ಇದೆ. ಹಾಗಾಗಿಯೇ ದೊಡ್ಡರಂಗೇಗೌಡರ ಸಾಹಿತ್ಯ ಕನ್ನಡ ಸಾಹಿತ್ಯ ಪರಂಪರೆಯಲ್ಲಿನ ಒಂದು ವಿಶಿಷ್ಟವಾದ ಸರಿತೆಯಾಗಿದೆ..!


 ಕೆ.ಶಿವು.ಲಕ್ಕಣ್ಣವರ

Leave a Reply

Back To Top