ಇಂದು ಶಂ. ಬಾ. ಜನ್ಮದಿನ

ವಿಶೇಷ ಲೇಖನ

ಸಂಶೋಧನೆಯ ಶಿಖರ

ಶಂ. ಬಾ. ಜೋಶಿ

ಎಲ್. ಎಸ್.ಶಾಸ್ತ್ರಿ

ಸಂಶೋಧನೆಯ ಶಿಖರ ಶಂ. ಬಾ. ಜೋಶಿ

        ಕನ್ನಡ ಭಾಷೆ , ಸಂಸ್ಕೃತಿಗಳ ಕ್ಷೇತ್ರದಲ್ಲಿ ತಮ್ಮ ಅಪೂರ್ವ  ಸಂಶೋಧನೆಯ ಮೂಲಕ ಖ್ಯಾತಿವೆತ್ತ  ಡಾ. ಶಂ. ಬಾ. ಜೋಶಿಯವರು ಮೂಲತಃ ಬೆಳಗಾವಿ ಜಿಲ್ಲೆಯ ಗುರ್ಲಹೊಸೂರಿನವರು. ೧೮೯೬ ರ ಜನೆವರಿ ೪ ರಂದು ಜನಿಸಿದ ಶಂಕರ ಬಾಳ ದೀಕ್ಷಿತರು  ಮೊದಲು ಶಿಕ್ಷಕರಾಗಿ, ನಂತರ ಪತ್ರಕರ್ತರಾಗಿ ಕೆಲಸ ಮಾಡಿದರೂ ನಂತರ ಪೂರ್ತಿಯಾಗಿ ಸಂಶೋಧನಾ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಬದುಕಿನ ಬಹು ಭಾಗವನ್ನು ಧಾರವಾಡದಲ್ಲಿ ಕಳೆದ ಶಂ. ಬಾ. ಅವರು ಕನ್ನಡ, ಮರಾಠೀ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಘನ ಪಾಂಡಿತ್ಯ ಹೊಂದಿದ್ದರು. ಕರ್ನಾಟಕ ಮಹಾರಾಷ್ಟ್ರ ಗಳ ನಡುವಿನ ಪ್ರಾದೇಶಿಕ ಬಾಂಧವ್ಯ, ಭಾಷಾ ಬಾಂಧವ್ಯ, ಜನಜೀವನ ಸಂಸ್ಕೃತಿಗಳ ಕುರಿತು ಬಹಳ ಆಳವಾದ ಅಧ್ಯಯನ ಮಾಡಿದ್ದ  ಅವರು ಕರ್ನಾಟಕ ನಾಡು ನುಡಿಗಳಿಗೆ  ಸಂಬಂಧಿಸಿ ಮಾಡಿದ ಐತಿಹಾಸಿಕ ಸಂಶೋಧನೆಗಳ ಫಲವಾಗಿ ಅವರಿಂದ  ಕನ್ನುಡಿಯ ಜೀವಾಳ, ಕನ್ನಡ ಒಡಪುಗಳು, ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ, ಕಣ್ಮರೆಯಾದ ಕನ್ನಡ ಮೊದಲಾದ ಅಮೂಲ್ಯ ಕೃತಿಗಳು ಹೊರಬಂದವು. ಅಲ್ಲದೇ ಜನಾಂಗೀಯ ಅಧ್ಯಯನದ ಮೂಲಕ ಅವರು ಬರೆದ ಪಾಲುಮತ ದರ್ಶನ, ಋಗ್ವೇದ ಸಾರ, ನಾಗಪ್ರತಿಮಾ ಸಾರ, ಬುದ್ಧನ ಜಾತಕ, ಹಿಂದೂ ಎಂಬ ಧರ್ಮ, ವೈವಸ್ವತ ಮನು ಪ್ರಣೀತ ಮಾನವ ಧರ್ಮದ ಆಕೃತಿ ಮೊದಲಾದ ಗ್ರಂಥಗಳು ಅವರ ಅಸಾಧಾರಣ ವಿದ್ವತ್ತಿಗೆ ಸಾಕ್ಷಿಯಾಗಿವೆ. ನಮ್ಮ ಪೌರಾಣಿಕ ಪ್ರತಿಮೆಗಳಿಗೂ ಸಾಮಾಜಿಕ ಜೀವನಕ್ಕೂ ಇರುವ ಸಂಬಂಧವನ್ನು ಅವರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಲ್ಲದೇ ಫ್ರಾಯ್ಡ್ ಮತ್ತು ಯೂಂಗರ ಮನೋವಿಜ್ಞಾನವನ್ನು ಪ್ರಶ್ನಿಸುವ ಧೀಮಂತಿಕೆಯನ್ನೂ ತೋರಿಸಿದ್ದಾರೆ. ಅವರ ಮೂಲ ಮಾತೃಭಾಷೆ ಮರಾಠಿಯಾಗಿದ್ದು ಮಹಾರಾಷ್ಟ್ರ ದ ಮೂಲ, ಮರಾಠಿ ಸಂಸ್ಕೃತಿ ಎಂಬ ಕೃತಿಗಳನ್ನೂ ಅವರು ರಚಿಸಿದ್ದಾರೆ.

      ಶಂ. ಬಾ‌. ಅವರ  “ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆ”  ಗ್ರಂಥಕ್ಕೆ ೧೯೭೧ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ೧೯೭೩ ರಲ್ಕಿ ಮೈಸೂರು ವಿಶ್ವ ವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಮನ್ನಿಸಿತು. ೧೯೮೧ ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ  ೫೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರದಾಯಿತು. ರಾಜ್ಯೋತ್ಸವ ಪ್ರಶಸ್ತಿ,  ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಅವರಿಗೆ ದೊರಕಿವೆ.

            ನಾನು ಧಾರವಾಡದಲ್ಲಿದ್ದಾಗ ನನ್ನ ವಾಸ ಸಾಧನಕೇರಿಯಲ್ಲೇ ಆಗಿತ್ತು. ಶಂ. ಬಾ. ಅವರ ಮನೆ ಹತ್ತಿರದಲ್ಲಿತ್ತು. ಆದ್ದರಿಂದ ಆಗಾಗ ಅವರನ್ನು ಭೆಟ್ಟಿಯಾಗುವ ಅವಕಾಶ ನನಗೂ ದೊರಕಿದೆ‌ .

         ಪ್ರಖರ ವಿಚಾರವಾದಿಯಾಗಿದ್ದ ಅವರು ದೇವರು ಧರ್ಮಗಳ ವಿಷಯದಲ್ಲಿ ತಮ್ಮದೇ ಆದ ಸ್ವತಂತ್ರ ನಿಲುವು ಹೊಂದಿದ್ದರು.  ಯಾವ ವಿಷಯವೇ ಇರಲಿ ಅದನ್ನು ಸೂಕ್ಷ್ಮ ಸಂಶೋಧನೆಯ ಒರೆಗಲ್ಲಿಗೆ ಹಚ್ಚಿ ನೋಡಿಯೇ ನಿರ್ಧಾರಕ್ಕೆ ಬರುತ್ತಿದ್ದರು. ಕನ್ನಡದ ಸಂಶೋಧನಾ ಕ್ಷೇತ್ರದಲ್ಲಿ ಹೊಸದಾಗಿ ಅಧ್ಯಯನ ಮಾಡುವವರಿಗೆ ಶಂ. ಬಾ. ಅವರು ಮಾದರಿಯಾಗಿದ್ದರು. ತೊಂಬತ್ತೈದು ವರುಷಗಳ ದೀರ್ಘ ಕಾಲ ಬದುಕಿದ ಅವರು  ಮತ್ತು ಅವರ ಪತ್ನಿ ಒಂದೇ ದಿನ ಸಾವನ್ನಪ್ಪಿದ್ದು ಮತ್ತು ಪತಿಪತ್ನಿಯರ ಅಂತ್ಯಸಂಸ್ಕಾರ ಏಕಕಾಲಕ್ಕೆ ನಡೆದುದು ವಿಶೇಷ. ೧೯೮೫ ರ ಅಗಸ್ಟ್ ೨೨ರಂದು ಅವರು ನಿಧನ ಹೊಂದಿದರು.


           ಎಲ್. ಎಸ್.ಶಾಸ್ತ್ರಿ

Leave a Reply

Back To Top