ಕಾವ್ಯ ಸಂಗಾತಿ
ಆಕೆ… ಅಂತರ್ಮುಖಿ
ವಿದ್ಯಾಶ್ರೀ ಅಡೂರ್
ಎಷ್ಟು ಒರೆದರೂ ಏನು ಬರೆದರೂ
ಭಾವದ ಕಟ್ಟೆ ಒಡೆಯುತ್ತಲೇ ಇಲ್ಲ
ಕನಸ ಕೂಸದು ನನಸ ಬಯಸದೆ
ಭರವಸೆಯೊಂದನು ಹಡೆಯುತ್ತಲೇ ಇಲ್ಲ
ಭಾರವಾದ ಮನಸ ಭಾವವು
ಹಗುರ ಹನಿಯನು ಚೂ ಬಿಟ್ಟಿತು ಕಣ್ಣಂಚಲಿ
ಎದೆಯೊಳಪ್ಪಿದ ಮೌನ ರಾಗವು ತಾಳಮೇಳವಿರದೆ
ಗುಡುಗತೊಡಗಿತು ಗುಂಡಿಗೆಯ
ಚಂಡಮಾರುತದ ತಾoಡವ
ಪುಟ್ಟ ಹೃದಯದ ರಾಜ್ಯದಿ
ಸದ್ದೇ ಇರದ ಮೌನ ಸಾಗರ
ಎದುರು ಕಾಣುವ ವದನದಿ
ಸೊಲ್ಲನೊಲ್ಲದೆ ಸಲ್ಲುವಾಕೆ ಬಗೆಗೆ
ಎಲ್ಲ ಬಲ್ಲವರದು ಗುಲ್ಲೋ ಗುಲ್ಲು
ಎಲ್ಲೆ ಮೀರದ ಹುಲ್ಲೆಯವಳು
ನಾಳಿನ ಹುಲುಸಿಗಾಗೇ ಬೆಳೆದ ಹುಲ್ಲು….
ವಿದ್ಯಾಶ್ರೀ ಅಡೂರ್
ಚೆಂದಿದೆ…ಭಾವ ನೆಯ್ಗೆ….