ಪ್ರಬಂಧವಿಶೇಷ
ಲಲಿತ ಪ್ರಬಂಧ
ಗುಂಡಿ ಎಂದರೆ
ಗೋಪಾಲ ತ್ರಾಸಿ
ಗುಂಡಿ ಎಂದರೆ… !
ನಮ್ಮೂರು ಕುಂದಾಪ್ರ ಕಡೆ, ಮನೆಯಲ್ಲಿ ದೊಡ್ಡವರು ‘ಹೋಗ್ ಎಲ್ಲಾದ್ರೂ ಗುಂಡಿಗ್ ಹಾರ್ಕೊ’ ಅಂತ ಬೈಯ್ಯುವ, ಮೂದಲಿಸುವ ಮಾತಿದೆ. ಏನೂ ಮಾಡಲಾಗದ ಅಥವಾ ಸಾಮಾನ್ಯ ಕೆಲಸವನ್ನೂ ಸರಿಯಾಗಿ ಮಾಡಲಾಗದವರಿಗೆ ಅನ್ವಯಿಸುವ, ಕನಿಷ್ಟ ಅನ್ನಿಸುವಂತಹ ಚುಚ್ಚು ಮಾತು. ಹಾಗಂತ ಹೀಗೆ ಮೂದಲಿಸಿದರೆಂದ ಮಾತ್ರಕ್ಕೇ ಯಾರೂ ‘ಗುಂಡಿಗೆ ಹಾರುವ’ ಪ್ರಕ್ರಿಯೆಯಲ್ಲಿ ತೊಡಗುವುದಿಲ್ಲ ಬಿಡಿ, ಆ ಮಾತು ಬೇರೆ.
ಗುಂಡಿ ಎಂದರೆ ಆಳವಾದ ಹೊಂಡ, ನದಿ ಹಳ್ಳವಾದರೆ ತುಸು ಹೆಚ್ಚೇ ಆಳವಿರುವ, ಸುಲಭದಲ್ಲಿ ನೆಲೆ ಸಿಗದ ಜಾಗ. ಹೋಗಿ ಹೋಗಿ ಇಂತಹ ಗುಂಡಿಗೆ ಹಾರಿಕೊಳ್ಳುವುದೆಂದರೆ ಜೀವ ಬಲಿ ಕೊಡುವುದೆಂದೇ ಅರ್ಥವಾಯಿತಲ್ಲ! ಸಧ್ಯ ಈ ಮಾತು ಅಲ್ಲೇ ಇರಲಿ. ಈ ವಿಷಯ ಯಾಕೆ ಬಂತೆAದರೆ ಗುಂಡಿ ಎಂದರೆ ಬರೇ ನಾನು ತಿಳಿದುಕೊಂಡಷ್ಟೇ ಅಲ್ಲ. ಅದು ಘನಂಧಾರಿ ಪ್ರಪಾತವೂ ಹೌದೆಂದು ಮನದಟ್ಟಾದದ್ದು ನಮ್ಮ ಜೋಗದ ಗುಂಡಿಯನ್ನು ನೋಡಿದಾಗಲೇ! ಅಲ್ಲಿಯ ತನಕ ಜಲಪಾತವೆಂದರೂ ಸರಿಯಾದ ಕಲ್ಪನೆ ಇದ್ದಿರಲಿಲ್ಲ. ಮಳೆಗಾಲದಲ್ಲಿ ನಮ್ಮೂರ ಕಿರು ಗುಡ್ಡಗಳೆಡೆಯಿಂದ, ಬಂಡೆ ಕಲ್ಲುಗಳ ಮೇಲಿಂದ ಚಿಮ್ಮಿ ಹರಿದು ಬರುವ ನೀರಿನ ತೊರೆಗಳನ್ನೇ ಜಲಪಾತದ ನೀರೆಂದು ಸಂಭ್ರಮಿಸುತ್ತಿದ್ದ ಕಾಲವದು. ನನ್ನ ಅಲ್ಪ ಬುದ್ಧಿಗೆ, ಸಮುದ್ರವನ್ನು ಎಂದೂ ಕಾಣದವರ ಕಲ್ಪನೆ ತರಹ ಜಲಪಾತದ ಕಲ್ಪನೆ ಇದ್ದಿತು. ಆದರೆ ಜೋಗ ಜಲಪಾತ ಕಂಡಾಗ ನದಿಗೆ ನದಿಯೇ ಮಗುಚಿಕೊಂಡಂತೆ! ಎದೆ ಧಸಕ್ಕೆಂದುದು ಸುಳ್ಳಲ್ಲ.
ಪ್ರಿಯರೇ, ನನ್ನ ಪೆದ್ದು ಪೆದ್ದು ಮಾತಿನ ತೊರೆ ಎತ್ತ ಹರಿಯಲು ಹವಣಿಸುತ್ತಿದೆ ಅಂಥ ನಿಮಗೆ ಖಂಡಿತ ಅರಿವಾಗಿರುತ್ತದೆ ಅಂತ ನಂಗೊತ್ತು. ನಿಮ್ಮ ಜಾಣತನದ ಬಗ್ಗೆ ನನಗೆ ಯಾವಾಗಲೂ ಹೆಮ್ಮೇನೇ. ಅದಾಗ್ಯೂ ಈ ಸುತ್ತೂ ಬಳಸೂ ಕುತ್ಸಿತ ಬುದ್ಧಿ ಯಾಕೋ ಅಂತ ನಿಂದಿಸಬೇಡಿ. ಅದು ನನ್ನ ಡಿಎನ್‌ಎ ದಲ್ಲೇ ಇದ್ದಿರಬೇಕೆಂಬ ಗುಮಾನಿ ನನಗೆ. ಸದ್ಯ ನನ್ನ ಮನ್ನಿಸಿಬಿಡಿ. ‘ಇನ್ನು ನೇರ ವಿಷಯಕ್ಕೆ ಬರೋಣವಂತೆ’! ಹಾಗೆಂದರೇನAತ ದಯವಿಟ್ಟು ನನ್ನ ಕೇಳಬೇಡಿ. ಇದೇ ಮಾತನ್ನು ನೂರಾರು ಬಾರಿ ಓದಿ, ಕೇಳಿ ಅರ್ಥ ಆಗದೆ ಒದ್ದಾಡಿದ್ದೆ. ಸಭೆ ಸಮಾರಂಭಗಳಲ್ಲಿ ಸುಮಾರು ಮುಕ್ಕಾಲು ತಾಸು ಹೋರಿ ಉಚ್ಚೆ ಹೊಯ್ದಂತೆ ಒಂದೇ ಸಮನೆ ಭಾಷಣ ಬಿಗಿಯುತ್ತಿದ್ದ ಮಹಾನುಭಾವರು, ‘ಇರಲಿ, ಇನ್ನು ನೇರವಾಗಿ ಮುಖ್ಯ ವಿಷಯಕ್ಕೆ ಬರೋಣವಂತೆ’, ಅನ್ನುವಾಗ ಕೇಳುವವರಿಗೆ ಮುಖ ಮೈ ಪರಚಿಕೊಳ್ಳುವಂತಾಗುವುದು ಸುಳ್ಳಲ್ಲ. ಎಷ್ಟೋ ಬಾರಿ ನಾನು, ‘ಇದೇ ಸರಿಯಾದ ಸಮಯ’ ಎಂದು ಮೆಲ್ಲಗೆ ಅಲ್ಲಿಂದ ಜಾಗ ಕಾಲಿ ಮಾಡಿದ್ದು ಉಂಟು! ಹೌದು ಅದು ಅಸಭ್ಯ ವರ್ತನೆ. ಒಂದ್ನಿಷ ನೀವು ಈಗ ಹಾಗೆ ಮಾಡಬಾರದು, ಮಾಡುವುದಿಲ್ಲ ಅಂತ ನನಗೆ ಪೂರ್ಣ ಖಾತ್ರಿ ಇದೆ. ಕಾರಣ ನೀವು ಬರೇ ಸಭ್ಯರಷ್ಟೇ ಅಲ್ಲ, ಸಭ್ಯಾತಿ ಸಭ್ಯರು, ಡೌಟೇ ಇಲ್ಲ ಬಿಡಿ.
ಮುಖ್ಯ ವಿಷಯ ಅಂದೆನಲ್ಲ ಮತ್ತೇನಿಲ್ಲ, ನಿಮ್ಮನ್ನೂ ನಾನು ಅದೇ ಜೋಗದ ಗುಂಡಿಯತ್ತ ಕರೆದೊಯ್ಯಲಿದ್ದೇನೆ. ಬೇಡ ಅನ್ನಬೇಡಿ, ಅನ್ನುವುದಿಲ್ಲ ನೀವು ನಂಗೊತ್ತು. ನಾನು ಇಲ್ಲಿಂದ ಮುಂದೆ ಅತೀ ಶೃದ್ಧೆಯಿಂದ ಬರೆಯುವಂತಾಹದ್ದು, ತಾವು ಓದುವಂತಾಹದ್ದು, ಏನನ್ನೋ ಹೇಳಲು ಹೋಗಿ, ಇನ್ನೇನನ್ನೋ ಹರಟುತ್ತಿರುವಂತಹ ಅಹಿತವೂ ಆದಂತಹ ಅನುಭವ ಆಗಲೂಬಹುದು. ಕೊರಳಾಣೆಗೂ ಇದರಲ್ಲಿ ನನ್ನದೇ ಆದ ಸ್ವಂತ ತಪ್ಪಿಲ್ಲ. ‘ಹರಟೆಯ ಹಣೆ ಬರಹವೇ ಹೀಗೆ. ತುದಿಯಿಲ್ಲ, ಬುಡವಿಲ್ಲ, ಗೊತ್ತಿಲ್ಲ, ಗುರಿಯಿಲ್ಲ’ ಎಂದು ಮಹಾಕವಿ, ಮಹಾನ್ ಸಾಹಿತಿ ಕುವೆಂಪುರವರೇ ತಮ್ಮ ‘ಮಲೆನಾಡಿನ ಚಿತ್ರಗಳು’ ಎಂಬ ಕೃತಿಯಲ್ಲಿ ಹೇಳಿದ್ದಾರಲ್ಲ ! ಅದೇ ಕೃತಿಗೆ ಅವರೇ ಬರೆದ ಮುನ್ನುಡಿ ಭಾಗದಲ್ಲೂ ಈ ಕೆಳಗಿನ ಮಾತುಗಳನ್ನು ಕವಿಶೈಲದ ಪ್ರಸ್ತಾವನೆ ಮಾಡುತ್ತಾ ಈ ರೀತಿಯಲ್ಲಿ ಹೇಳಿಕೊಂಡಿದ್ದಾರೆ. ‘ಚಿತ್ರ’ಗಳಿಗಾಗಿ ಬರೆಯುವ ಮುನ್ನುಡಿ ‘ಚಿತ್ರ’ಗಳಂತೆಯೇ ಶಿಥಿಲವಾಗಿದ್ದರೇನಂತೆ? ಕವಿಶೈಲ ನವಿಲು ಕಲ್ಲುಗಳ ಮಾತೆತ್ತಿಯಾಯಿತು. ಅವುಗಳ ವಿಚಾರವಾಗಿ ನಿಮಗೆರಡು ಮಾತು ಹೇಳಿ ಬಿಡುತ್ತೇನೆ. ನೀವು ‘ಬೇಡ’ ಮುನ್ನುಡಿಯಲ್ಲಿ ಹರಟೆ ಲಕ್ಷಣವಲ್ಲ. ನಮಗೆ ಅದನ್ನು ಕೇಳಲು ಇಷ್ಟವಿಲ್ಲ’ ಎಂದು ಕೂಗಿಕೊಂಡರೂ ನಾನು ಬಿಡುವಂತಿಲ್ಲ. ಹೇಳಲೇ ಬೇಕು! ನನಗೇನೋ ಹೇಳಬೇಕೆನ್ನುವ ಹುಚ್ಚು ಹಿಡಿದಿದೆ! ಕೇಳುವ ಹುಚ್ಚಿದ್ದವರು ಕೇಳಲಿ. ಉಳಿದವರು ಪುಸ್ತಕವನ್ನಾಚೆ ಬಿಸಾಡಲಿ!
ಯಬ್ಬೋ ದೇವಾ ! ದೇವಾ !! ಅವರು ರಸಋಷಿ ಕುವೆಂಪು ಕಣ್ರೋ ! ಅವರಿಗೆ ಹಾಗೆ ಹೇಳೋ ಹಕ್ಕಿದೆ. ಆದರೆ, ನಾನೋ ಹುಲು ಮಾನವ ಅದರಲ್ಲೂ ಹೊರನಾಡ ಕನ್ನಡಿಗ ಬೇರೆ! ನನ್ನ ಕನ್ನಡ ಅಕ್ಷರ ಅಭ್ಯಾಸವೂ ಅಷ್ಟಕಷ್ಟೆ. ಹಾಗಾಗಿ ನನ್ನ ಸಕಲ ರಗಳೆಗಳನ್ನು ಮನ್ನಿಸಿ ಮುಂದಿನದನ್ನು ಓದುವಂತರಾಗುತ್ತೀರೆAದು ಕರ ಜೋಡಿಸುವೆ.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಎಪ್ರಿಲ್ – ಮೇ ತಿಂಗಳುಗಳು ಬಂದವೆAದರೆ ರಜಾದಿನಗಳ ಮಜಾ ದಿನಗಳ ಆರಂಭವೆAದೇ ಅರ್ಥ. ಸಾಮಾನ್ಯವಾಗಿ ಮಕ್ಕಳ ರಜಾ ದಿನಗಳಲ್ಲಿ ಇಡಿ ಪರಿವಾರದವರು ದೂರ ದೂರದ ಬಂಧು ಮಿತ್ರರ ಮನೆಗಳಿಗೆ ಭೇಟಿ ನೀಡುವ, ಅಂತೆಯೆ ನಗರ,ಮಹಾನಗರಗಳಲ್ಲಿ ವಾಸಿಸುವವರಿಗೆ ಹುಟ್ಟೂರಿಗೆ ಹೋಗುವ ತಯಾರಿ ತರಾತುರಿ. ಈಗೀಗ ಹಿಂದಿನ ಕಾಲದಂತೆ ಅಂಥ ತುಡಿತವಿರದಿದ್ದರೂ ನಗರ, ಮಹಾನಗರದ ದೈನಂದಿನ ರುಟೀನ್‌ನಿಂದ ಬಿಡುಗಡೆ ಎಲ್ಲರೂ ಬಯಸುವವರೇ ಬಿಡಿ. ಎಲ್ಲಾದರೂ ಪ್ರವಾಸ ಹೋಗುವುದಾದರೂ ಸರಿಯೇ. ನಿಜ, ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬAತೆ ಈ ಸಮಯದಲ್ಲಿ ತಿರುಗಾಟದ ಸ್ಥಳ, ಅವಧಿ, ಮತ್ತು ಸಮಯ ಅನುಕೂಲತೆಗಳ ಮೇಲೆ ನಿರ್ಣಯಿಸಲ್ಪಡುತ್ತದೆ.
ಏನಿದು ಪ್ರವಾಸೋದ್ಯಮ ಇಲಾಖೆಯ ಪ್ರಚಾರ ಪ್ರಸಾರದಲ್ಲಿ ತೊಡಗಿರುವೆನೆಂದು ಹುಬ್ಬೇರಿಸಬೇಡಿ. ಹಿಂದೆ ಹಿಂಟ್ಸ್ ಕೊಟ್ಟಂತೆ, ನಾನೀಗ ನಿಮ್ಮೊಂದಿಗೆ ನಾಲ್ಕು ಮಾತುಗಳನ್ನು ಹಂಚಿಕೊಳ್ಳ ಬಯಸುವುದು ನಮ್ಮ ಕನ್ನಡ ನಾಡಿನ ಹೆಮ್ಮೆಯ ಜೋಗದ ಜಲಪಾತದ ಕುರಿತು. ಜೋಗ ಜಲಪಾತವೆಂದರೆ ಹಾಗೇ, ಅದರ ಸೆಳೆತದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಅಲ್ಲವೆ? ಈ ಇಂತಹ ಜೋಗಕ್ಕೆ ನಾನು ಎರಡು ಮೂರು ಬಾರಿ ಹೋಗಿದ್ದೆ. ದೇವರಾಣೆಗೂ ಪ್ರತಿ ಸಲ ನೋಡಿದಾಗಲೂ ರೋಮಾಂಚನ, ವಿಸ್ಮಯ ಹೊಸತೇ ಆದ ಸಂಭ್ರಮಕ್ಕೆ ಕಾರಣವಾಗುತ್ತದೆ.
ಪಶ್ಚಿಮ ಘಟ್ಟದ ದಟ್ಟಾರಣ್ಯದ ನಡುವೆ ಶರಾವತಿ ನದಿ ಧುತ್ತೆಂದು ಅಗಾಧ ಪ್ರಪಾತಕ್ಕೆ ಧುಮುಕುವ ವಿಶ್ವವಿಖ್ಯಾತ ಜಲಪಾತವನ್ನು ವರ್ಣಿಸಲು ಶಬ್ದ ಸಾಲದು, ಮಾತು ಸೋಲುವುದು. ಜೋಗವೆಂದಾಗ ತಟ್ಟಂತ ನೆನಪಾಗುವುದು ನಮ್ಮ ನಿತ್ಯೋತ್ಸವ ಕವಿ ನಿಸ್ಸಾರ ಅಹಮದ್ ಸರ್ ರಚಿತ ಎವರ್‌ಗ್ರೀನ್ ಗೀತೆ ‘ಜೋಗದ ಸಿರಿ ಬೆಳಕಿನಲ್ಲಿ…’ ಕನ್ನಡ ನಾಡು ನುಡಿ ನೆಲ ಜಲ ಸಿರಿ ಸೊಬಗನ್ನು ಇನ್ನಿಲ್ಲದಂತೆ ಕೊಂಡಾಡಿರುವ ಈ ಗೀತೆಯನ್ನು ಇಷ್ಟಪಡದ ಕನ್ನಡದ ಮನಸ್ಸಿರಲಿಕ್ಕಿಲ್ಲ. ಸರಿ ಮತ್ತೆ ಈ ಜೋಗ ಜಲಪಾತದ ಸುತ್ತ ಮುತ್ತ ಒಂದಷ್ಟು ಸುತ್ತಾಡೋಣವಂತೆ. ಏನು? ಏನೂ ಸುಸ್ತಾಗೋದಿಲ್ಲ ಬನ್ನಿ, ಮತ್ತೆ ನಿಮ್ಮಷ್ಟಕ್ಕೆ ನೀವು ರೆಸ್ಟ್ ಮಾಡುವಿರಂತೆ.
ಗೇರು ಸೊಪö್ಪ, ಜೋಗದ ಗುಂಡಿ ಅಂತ ಕರೆಯೋದೆ ಸ್ಥಳೀಯರಿಗೆ ಖುಷಿ ನೀಡುತ್ತದೆ. ಶರಾವತಿ ನದಿ ಕವಲೇ ದುರ್ಗಾದ ಬಳಿಯ ಅಂಬು ತೀರ್ಥದಲ್ಲಿ ಹುಟ್ಟಿ, ಪಶ್ಚಿಮ ಘಟ್ಟದೊಳಗಿಂದ ಝರಿ ತೊರೆ ಹಳ್ಳ ಹೊಳೆಯಾಗಿ ಹರಿಯುತ್ತ ಗೇರು ಸೊಪ್ಪದ ಹತ್ತಿರ ತೆವಳುತ್ತ ಘಟ್ಟ ಇಳಿದು, ಹೊನ್ನಾವರ ಕರಾವಳಿ ಬಳಿ ಬಳುಕುತ್ತ ಸಮುದ್ರ ಸೇರುವಳು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ ಪ್ರವಾಸಿಗರ ಬಾಯಲ್ಲಿ ಸದಾ ಜೋಗ್ ಪಾಲ್ಸ್. ಶರಾವತಿ ನದಿ ಜೋಗದಲ್ಲಿ ರಾಜಾ ರೋರರ್ ರಾಕೆಟ್ ಮತ್ತು ರಾಣಿ ಹೀಗೆ ನಾಲ್ಕು ಕವಲುಗಳಾಗಿ ಸೀಳಿ ಸುಮಾರು ೯೩೦ ಅಡಿ ಅಗಾಧ ಗುಂಡಿಗೆ ಧುಮುಕುವ ವೈಖರಿ ನಿಬ್ಬೆರಗಾಗಿಸುತ್ತದೆ.
ಬೇಸಗೆಯ ಬಿರು ಬಿಸಿಲಲಿ
ಬಳಲಿ ಸೊರಗುವ
ಬಡವೀ ಶರಾವತಿ
ಹೌದು, ಜಲಪಾತದ ಈ ನಾಲ್ಕು ಧಾರೆಗಳಿಗೆ ನಾಲ್ಕು ಹೆಸರುಗಳು ಬರಲೂ ಕಾರಣಗಳಿವೆ. ಮೊದಲನೆಯ ರಾಜಾ ಅತೀ ಎತ್ತರದಿಂದ ಅಪಾರ ಜಲರಾಶಿಯೊಂದಿಗೆ ಮೈ ಕೈ ತುಂಬಿಕೊAಡು ಸುದೃಢನಾಗಿ ಧುಮುಕುವ ಗತ್ತು, ಗಾಂಭೀರ್ಯ ಅಂತಹದ್ದು. ಈ ರಾಜನಿಗಿಂತ ತುಸುವೇ ಕೆಳಗಡೆ ರೋರರ್ ಅತೀ ಹೆಚ್ಚು ಶಬ್ದ ಮಾಡುತ್ತ ಧುಮುಕುವುದು. ರಾಕೇಟ್ ತುಸು ಕ್ಷೀಣವಾಗಿ ರಭಸದಿಂದ ಬಾಣದಂತೆ ಚಿಮ್ಮುವುದು. ಇನ್ನು ರಾಣಿ ತೆಳ್ಳಗೆ ತಳುಕು ಬಳುಕಿ ವೈಯಾರಿಯಂತೆ ಹಾಲ್ ನೊರೆ ಚಿಮ್ಮಿಸುತ್ತ ಜಿಗಿಯುತ್ತಿರುವಂತೆ ಕಾಣುವಳು. ನಂಬಿ, ನನ್ನ ಮಾತಿನಲ್ಲಿ ಅತಿಶಯೋಕ್ತಿ ಇಲ್ಲವೇ ಇಲ್ಲ. ನಂಬಿಕೆ ಆಗೋದಿಲ್ಲವಾ? ಹಾಗಾದರೆ ಕಣ್ಣಾರೆ ಕಾಣಿ ಒಮ್ಮೆ.
ಅದೇ ಜಲಪಾತದ ಆ ಕಡೆ ಬೊಂಬಾಯಿ ಬಂಗ್ಲೆ ಇದ್ದು, ಅದರ ಅಕ್ಕಪಕ್ಕದಲ್ಲಿರುವ ಬೃಹತ್ ಬಂಡೆಗಳ ಮೇಲೇರಿ ಶರಾವತಿ ಗುಂಡಿಗೆ ಜಿಗಿಯುವ ಆನಂದವನ್ನು ಸವಿಯಬಹುದು. ಬೊಂಬಾಯಿ ಹೆಸರು ಬರಲು ಕಾರಣ, ಭಾಷಾವಾರು ರಾಜ್ಯವಾಗಿ ಕರ್ನಾಟಕ ಹುಟ್ಟಿಕೊಳ್ಳುವ ಮೊದಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಜೋಗ ಆಗಿನ ಬೊಂಬಾಯಿ ಪ್ರಾಂತ್ಯಕ್ಕೆ ಸೇರಿತ್ತು. ಬೊಂಬಾಯಿAದ ವಿಹಾರಕ್ಕೆ ಬರುವ ಸರಕಾರಿ ಅಧಿಕಾರಿಗಳಿಗಾಗಿ ಬಂಗ್ಲೆಯನ್ನು ಕಟ್ಟಿರಬೇಕು. ಅದೇನೇ ಇರಲಿ, ಜಲಪಾತದ ಈ ಕಡೆ ಅಂದರೆ ಗುಂಡಿಯ ಎದುರುಗಡೆಯಿಂದ ವೀಕ್ಷಣೆ ಅತ್ಯಂತ ರೋಚಕ ಅನುಭವವನ್ನು ನೀಡುತ್ತದೆ.
ಕೆಳಗೆ ಗುಂಡಿಗೆ ಇಳಿಯಲು ಸುಮಾರು ೧೪೦೦ ಮೆಟ್ಟಲುಗಳಿವೆ. ಕೈಕಾಲು ಗಟ್ಟಿಮುಟ್ಟಾಗಿದ್ದು ಆರೋಗ್ಯ ಚೆನ್ನಾಗಿದ್ದವರು ತಳಕ್ಕೆ ಇಳಿದು ಅಷ್ಟೊಂದು ಎತ್ತರದಿಂದ ಧುಮುಕುವ ಜಲಪಾತದ ಸೌಂದರ್ಯದ ಇನ್ನೊಂದೇ ಆಯಾಮವನ್ನು ಅನುಭವಿಸಬಹುದು. ಗುಂಡಿಗಿಳಿದು ಪರಸ್ಪರ ಮೆಲ್ಲಗೆ ಮಾತಾಡುವುದು ಅಶಕ್ಯ. ಭೋರ್ಗರೆತದ ಸದ್ದಿಗೆ ಏನೂ ಕೇಳಿಸಿಕೊಳ್ಳುವಂತಿಲ್ಲ. ಆದಷ್ಟು ಹೈ ಪಿಚ್‌ನಲ್ಲಿ ಮಾತಾಡಬೇಕಾಗುತ್ತದೆ. ಒಂದು ಮಾತು ನಿಜ ಅನ್ನಿ. ಪ್ರಕೃತಿಯ ಅಂತಹ ಅಸೀಮ ಸೌಂದರ್ಯ ತಾಣದಲ್ಲಿ ಒಣ ಮಾತಿನ ಹಂಗು ಯಾರಿಗೆ ಬೇಕು ಹೇಳಿ. ಒಂಟಿ ಜೀವವಾದರೆ ಹೀಗೇ ಧ್ಯಾನಸ್ಥವಾಗಲೇ ಬೇಕು. ಒಲವನ್ನು ಅಪ್ಪಿಕೊಂಡ ಜೋಡಿ ಜೀವಗಳಾದರೆ ಮಾತುಗಳನ್ನು ಅಲ್ಲೇ ಗುಂಡಿಗೆ ಎಸೆದು ಇಂತಹ ದಿವ್ಯ ಪ್ರೇಮ ಸನ್ನಿಧಿಯಲ್ಲಿ ಮೈ ಮರೆಯುವುದೊಂದೇ ದಾರಿ. ಓಹ್ ಕ್ಷಮಿಸಿ, ಅದು ಸಾರ್ವಜನಿಕ ಸ್ಥಳ! ವಿಪರೀತ ಇಂಟಿಮೇಟ್ ಆಗುವಂತಿಲ್ಲ! ಗುಂಡಿಗೆ ಇಳಿಯುವಾಗ ಸರಾಗವಾಗಿ ಮೆಟ್ಟಲಿಳಿಯುತ್ತ ಹೋಗಬಹುದು. ಆದರೆ ಮೇಲೇರಿ ಬರುವಾಗ ಮಾತ್ರ ಆಗಾಗ ಸುಸ್ತಾಗಿ ಮೊಣಕಾಲು ಗಂಟು ಸಂಕಟ ನೀಡಬಹುದು, ಉಬ್ಬಸ ಬಂದ ಹಾಗೂ ಆಗಬಹುದು. ಅದಕ್ಕೇ ಹೇಳಿದ್ದು ಆರೋಗ್ಯ ತೊಂದರೆ ಇದ್ದವರು ಖಂಡಿತ ಗುಂಡಿಗೆ ಇಳಿಯುವ ಸಾಹಸ ಮಾಡಬಾರದು. (ಈಗ ಗುಂಡಿಗೆ ಇಳಿಯುವುದನ್ನು ನಿಷೇಧಿಸಲಾಗಿದೆ)
ಚೈತ್ರದಲಿ ಎಳೆಗನಸು
ಚಿಗುರೊಡೆದು ಚಿಲಿಪಿಲಿಗುಡುವ
ಚಿಟ್ಟೆ ಶರಾವತಿ
ತುಂಬು ಮಳೆಗಾಲದಲ್ಲಿ ಸಾಗರ ಸದೃಶ ನೀರಿನ ಮೊರೆತವಿರುತ್ತದೆ. ಹಾಗಾಗಿ ಎದೆ ನಡುಗುವ ಘರ್ಜನೆಯಿಂದಾಗಿ ಜಲಪಾತಕ್ಕೆ ರೌದ್ರವತಾರ ಬಂದಿರುತ್ತದೆ. ಅಗಸ್ಟ್ ತಿಂಗಳಿನಿAದ ಡಿಸೆಂಬರ್ ತನಕ ಪ್ರವಾಸಕ್ಕೆ ಸಶಕ್ತ ಸಮಯ. ಜಲಪಾತ ಎಪ್ರಿಲ್ ಮೇ ತಿಂಗಳಲ್ಲಿ ಸೊರಗಿ ಸಪ್ಪೆಯಾಗಿರುತ್ತದೆ. ಶರಾವತಿಗೆ ಲಿಂಗನಮಕ್ಕಿ ಅಣೆಕಟ್ಟು (೧೯೬೪) ಕಟ್ಟಿರುವುದೇ ಇದಕ್ಕೆ ಮುಖ್ಯ ಕಾರಣ. ನಮ್ಮ ದೇಶ ಕಂಡ ಅಪ್ರತಿಮ ಇಂಜಿನಿಯರ್ ಸರ್. ಎಮ್. ವಿಶ್ವೇಶ್ವರಯ್ಯನವರು ಮೊದಲ ಬಾರಿಗೆ ಜೋಗದ ಗುಂಡಿಯನ್ನು ಕಂಡು ಉದ್ಗರಿಸಿದ್ದು, ‘ವಾಟ್ ಎ ವೇಸ್ಟ್!’ ಅದೆಷ್ಟು ಪ್ರಮಾಣದಲ್ಲಿ ಜಲಶಕ್ತಿ ವ್ಯರ್ಥವಾಗುತ್ತಿದೆಯಲ್ಲಾ ಎಂದು ಮನ ಮರುಗಿ ಚಿಂತನ ಮಂಥನ ಮಾಡಿದುದರ ಪರಿಣಾಮವೇ ಲಿಂಗನಮಕ್ಕಿ ಅಣೆಕಟ್ಟು ಮತ್ತು ಮಹಾತ್ಮಾ ಗಾಂಧಿ ಜಲವಿದ್ಯುದಾಗರ. ತತ್ ಪರಿಣಾಮ ಕರ್ನಾಟಕಕ್ಕೆ ಬೇಕಾಗುವ ವಿದ್ಯುತ್‌ನ ಬಹುಪಾಲು ಬೇಡಿಕೆ ಇಲ್ಲಿಂದಲೇ ಪೂರೈಕೆಯಾಗುತ್ತಿದೆ. ಆಯಪ್ಪನಿಗೆ ಕನ್ನಡನಾಡ ಜನ ಸದಾ ಚಿರಋಣಿಯಾಗಿರಬೇಕಷ್ಟೆ. (ಆಣಿಕಟ್ಟಿನಿಂದಾಗಿ ನೆಲ ಮನೆ ಆಸ್ತಿ ಮುಳುಗಡೆಯಾಗಿ ವಲಸೆ ಹೋದವರ ಬವಣೆಯ ಹೊರತಾಗಿ)
“ಒಹ್! ಇಷ್ಟೇನಾ” ಅಂತ ರಾಗ ಎಳೆಯಬೇಡಿ. ಜೋಗದ ಆಸುಪಾಸು ಅನೇಕ ಹೃನ್ಮನ ತಣಿಸುವ ಪ್ರೇಕ್ಷಣೀಯ ಸ್ಥಳಗಳಿವೆ. ಕ್ಯಾಂಪಿಗ್, ಚಾರಣ ಪ್ರಿಯರಿಗೆ ಪ್ರಸಕ್ತ ಸ್ಥಳ. ನಾನಾ ರೀತಿಯ ವನ್ಯ ಜೀವಿ ಪ್ರಾಣಿ ಪಕ್ಷಿ ಸಂಕುಲಗಳಿವೆ. ಇಲ್ಲೇ ಸುಮಾರು ೩೫ ಕಿ.ಮೀ. ದೂರದಲ್ಲಿ ಐತಿಹಾಸಿಕ ಸ್ಥಳ ಕೆಳದಿ ಇದೆ. ಹತ್ತಿರದಲ್ಲೆ ಹೊಸಗದ್ದೆಯಲ್ಲಿ ದಬ್ಬೆ ಜಲಪಾತವಿದೆ. ತುಂಗ ಅಣೆಕಟ್ಟು, ರಾಷ್ಟಿçÃಯ ಉದ್ಯಾನ ಮತ್ತು ವನ್ಯಮೃಗ ಸಂರಕ್ಷಣಾಲಯ ಇದೆ. ಹೊನ್ನಾವರದಲ್ಲಿರುವ ಮುರ್ಡೇಶ್ವರ ಶಿವಾಲಯ ಹಾಗು ಮನೋಹರ ಸಮುದ್ರ ತೀರಕ್ಕೆ ಕೇವಲ ೬೫ ಕಿ.ಮೀ. ದೂರವಿದೆ. ಪ್ರಕೃತಿಯ ಇಷ್ಟೊಂದು ಉದಾತ್ತ ಕೊಡುಗೆ ಇನ್ನೆಲ್ಲಿ ಲಭ್ಯ ಹೇಳಿ. ಎಲ್ಲವನ್ನು ದೂರ ದೂರ ಪ್ರದೇಶಗಳಿಗೊ, ವಿದೇಶಗಳಿಗೋ ಹೋಗಿ ನೋಡಬೇಕೆಂದೇನಿಲ್ಲ. ನಮ್ಮಲ್ಲೂ ಜೋಗ ಜಲಪಾತದಂತಹ ಸೌಂದರ್ಯಾತಿ ಸೌಂದರ್ಯ ಪ್ರೇಕ್ಷಣೀಯ ಸ್ಥಳಗಳಿರುವುದರಿಂದಲೇ ಅಲ್ಲವೆ ನಮ್ಮ ದೇಶಕ್ಕೂ ವಿದೇಶಿಗರು ಮುಗಿ ಬೀಳುವುದು.
ವಸಂತದಲಿ ಪ್ರೇಮ ಮಧುಹೀರಿ
ಮುದವೇರಿ ಮೈ ಮುತ್ತುವ
ಪ್ರಣಯ ದೇವತೆ ಶರಾವತಿ
ಹೌದು, ಜೋಗಕ್ಕೆ ಬಂದು ಹೋಗುವ ಸಾರಿಗೆ ವ್ಯವಸ್ಥೆ ಬಗೆಗೆ ಸಹ ಪರದಾಡಬೇಕಾಗಿಲ್ಲ. ಉತ್ತರ ಕನ್ನಡ ಮತ್ತು ಸಾಗರ ತಾಲೂಕಿನ ಗಡಿಭಾಗದಲ್ಲಿರುವ ಜೋಗದಲ್ಲಿ ಅನೇಕ ಆಧುನಿಕ ಸವಲತ್ತುಗಳು ಲಭ್ಯ ಇವೆ. ಹೊಟೇಲು ಮೌರ್ಯದಂತಹ ಸುಸಜ್ಜಿತ ಹೊಟೇಲುಗಳಲ್ಲದೆ, ಬಜೆಟ್ ಹೊಟೇಲುಗಳು, ಪ್ರವಾಸೋದ್ಯಮ ಇಲಾಖೆಯವರ ಡಾರ್ಮೆಂಟ್ರಿಗಳು ಪ್ರವಾಸಿ ಬಂಗಲೆಗಳು ಜನ ಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಲಭ್ಯ ಇವೆ. ಆ ಕಡೆಯಿಂದ ತಾಳಗುಪ್ಪ ರೈಲು ನಿಲ್ದಾಣ, ಸಾಗರ ರೈಲು ನಿಲ್ದಾಣ ಇವೆ. ಈ ಕಡೆಯಿಂದ ಹೊನ್ನಾವರ ಮತ್ತು ಭಟ್ಕಳ ರೈಲು ನಿಲ್ದಾಣಗಳು ಜೋಗಕ್ಕೆ ಸಂಪರ್ಕ ಸಾಧನಗಳಾಗಿವೆ. ಇನ್ನು ಬಸ್ಸು, ಕಾರು ಇತ್ಯಾದಿಗಳ ಸೇವೆ ಹೇರಳವಾಗಿ ಸಿಗುತ್ತವೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ಜೋಗಕ್ಕೆ ೧೮೦ ಕಿ.ಮೀ. ದೂರದಲ್ಲಿರುವ ಹುಬ್ಬಳ್ಳಿಯಾಗಿದೆ. ಮೊದಲೇ ಹೇಳಿದೆನಲ್ಲಾ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯಾಣಕ್ಕೆ ಅಣಿಯಾಗಬಹುದು, ಹೆಚ್ಚು ಮಂಡೆ ಬಿಸಿ ಮಾಡಿಕೊಳ್ಳೋದು ಬೇಡ.
ಕರಾವಳಿ ಮಾರ್ಗವಾಗಿ ಭಟ್ಕಳ ಮೂಲಕ ರಸ್ತೆ ಮಾರ್ಗವಾಗಿ ಪಯಣಿಸುವಾಗ ಕೊಡಚಾದ್ರಿ ಬೆಟ್ಟದ ಅಂಕು ಡೊಂಕು ತಿರುವುಗಳು ಆಯಾಸ ಮತ್ತು ಭೀತಿ ಉಂಟು ಮಾಡುವಂತಿದ್ದರೂ ದಟ್ಟ ಕಾನನದ ಹಸಿರು ವನಸಿರಿಯ ಸೊಬಗು ಮುದ ನೀಡುವುದು ಸುಳ್ಳಲ್ಲ. ಜೋಗಕ್ಕೆ ಇನ್ನೂ ಮರ‍್ನಾಲ್ಕು ಕಿ.ಮೀ. ದೂರವಿರುವಾಗಲೇ ಕಾರ್ಗಲ್ ಎಂಬ ಪುಟ್ಟ ಊರು ತಲುಪುವಂತೆಯೇ ಜಲಪಾತದ ಭೋರ್ಗರೆತದ ಘನ ಸದ್ದು ಕೇಳಿ ಬಂದು ರೋಮಾಂಚನವುAಟು ಮಾಡುವುದು. ಹಾಂ! ಹೇಳಲು ಮರೆತೆ. ಟ್ರೆಕ್ಕಿಂಗ್ ಪ್ರಿಯರಿಗೆ ಛಾಯಾಗ್ರಾಹಕರಿಗೆ ಚಿತ್ರ ಕಲಾವಿದರಿಗೆ ಇದು ಡ್ರೀಮ್ ಡೆಸ್ಟಿನೇಶನ್. ಜೋಗ ಜಲಪಾತ ವಿಶ್ವ ವಿಖ್ಯಾತ ಜಲಪಾತಗಳಲ್ಲಿ ಒಂದಾಗಿ ಪರಿಗಣಿಸಲು ಕಾರಣ ಪ್ರಕೃತಿ ದಟ್ಟವಾದ ಸುಂದರ ವನ್ಯ ಪರಿಸರ ಮತ್ತು ವಿರಾಟ್ ಪ್ರಪಾತ. ಅತೀ ಎತ್ತರದಿಂದ ಯಾವುದೇ ಬಂಡೆಯ ಆಧಾರವಿಲ್ಲದೆ ನೇರವಾಗಿ ಗುಂಡಿಗೆ ಧುಮುಕುವ ವಿರಳಾತಿವಿರಳ ಜಲಪಾತವೆಂಬ ಹೆಗ್ಗಳಿಕೆಗೂ ಪಾತ್ರವಾದುದು ನಮ್ಮೀ ಜೋಗದ ಗುಂಡಿ.
ಆಷಾಢದಲಿ ಝಿಲ್ಲೆಂದು
ಜೀವ ಸೆಲೆ ಚಿಮ್ಮುವ
ಗರ್ಭಿಣಿ ಶರಾವತಿ
ಇಷ್ಟೇ ಅಲ್ಲ, ಈ ನಮ್ಮ ಜೋಗ ಜಲಪಾತ ಯುವ ಮನಸ್ಸುಗಳ ಹರೆಯದ ಕನಸುಗಳಿಗೆ ಮತ್ತಷ್ಟುx ಪ್ರೇಮ ದೀಪ್ತಿಯನ್ನು ಬೆಳಗಿಸುವಂತಹದ್ದು. ಕವಿ ಜನರ ಮನದೊಳಗೆ ಬೆಟ್ಟದಷ್ಟು ಭಾವತರಂಗಗಳನ್ನು ಹೊರಡಿಸಿ ರಸವತ್ತಾದ ಕಾವ್ಯ ಸೃಷ್ಟಿಗೆ ಕಾರಣವಾಗುವುದು. ಕಥೆ ಕಾದಂಬರಿಕಾರರಿಗೆ ‘ಹಾಟ್ ಎಂಡ್ ಸೆಕ್ಸಿ’ಸ್ಪಾಟ್ ಆಗಿ ಸ್ಫೂರ್ತಿಯಾಗಬಹುದು. ರಸಿಕ ಮನಸ್ಸಿಗೆ ತುಂಟತನವನ್ನೂ, ಒಂಟಿ ಜೀವಕ್ಕೆ ಬೈರಾಗಿಗಳಿಗೆ ವೇದಾಂತ ದರ್ಶನ ನೀಡಬಲ್ಲ ಮಹಿಮಾವಂತ ಸ್ಥಳವಿದು. ಈ ಇಂತಹ ಚೆಲುವಂತಹ ಚೆಲುವಿನ ಜೋಗಕ್ಕೆ ಒಮ್ಮೆಯಾದರೂ ಭೇಟಿ ನೀಡದಿದ್ದರೆ ಹೇಗೆ? ಸಾಮಾನ್ಯರಿಂದ ಹಿಡಿದು ಘನ ಗಂಭೀರ ಮನಸ್ಸಿನವರಾದಿಯಾಗಿ, ಚಿತ್ರ ಸದೃಶ ನೋಟದ ಮೋಡಿನಲ್ಲಿ ಆಯಸ್ಕಾಂತದAತೆ ಸೆಳೆಯುವ ಜೋಗದ ಸೊಬಗು ಕವಿ ಕಲಾವಿದರಿಂದ ಇನ್ನಿಲ್ಲದಷ್ಟು ಹೊಗಳಿಕೆಗೆ ಪಾತ್ರವಾದುದು ಅತಿಶಯೋಕ್ತಿಯಲ್ಲ. ‘ಇರೋದ್ರೊಳಗೆ ಒಮ್ಮೆ ಬಂದು ನೋಡಿ ಜೋಗಾದ್ ಗುಂಡಿ’ ಇದು ಕೋರಿಕೆನೂ ಹೌದು, ಒತ್ತಾಯವೂ ಸಹ.
ಜೋಗ ಜಲಪಾತದ ಅಮೋಘ ಸೌಂದರ್ಯ ಸಾನ್ನಿಧ್ಯಕ್ಕೆಂಬAತೆ ನನ್ನ ಈ ನಾಲ್ಕು ಒಣ ಮಾತುಗಳನ್ನು ತಮ್ಮ ಮುಡಿಗೆ ಅರ್ಪಿಸಿದ್ದೇನೆ. ಇನ್ನು ಮೀನಾ ಮೇಷ ಎಣಿಕೆ ಯಾಕೆ? ಒಮ್ಮೆ ಹೋಗಿ ಬನ್ನಿ ಅಂತೆ ಪರಿವಾರದ ಜೊತೆ; ಗೆಳೆಯರ ಜೊತೆ; ಒಂಟಿಯಾಗಿಯೂ ಸೈ ಚಲೋ ಜೋಗ !
——————-
ಗೋಪಾಲ ತ್ರಾಸಿ
ಒಳ್ಳೆಯ ಪ್ರಬಂಧ ಧನ್ಯವಾದಗಳು
ಕಣ್ಮನ ಸೆಳೆಯುವ ಜೋಗದ ಸಿರಿ ಸೊಬಗನ್ನು ಕಟ್ಟಿ ಕೊಟ್ಟ ಲೇಖಕರಿಗೆ ಅಭಿನಂದನೆಗಳು
ವಂದನೆಗಳು… ಧನ್ಯವಾದ ಸಂಗಾತಿ ತಂಡದವರಿಗೆ.