ಡಾ. ನಿರ್ಮಲ ಬಟ್ಟಲ,ಕವಿತೆ-ಅಗ್ನಿ ಕುಂಡ

ಕಾವ್ಯ ಸಂಗಾತಿ

ಅಗ್ನಿ ಕುಂಡ

ಡಾ. ನಿರ್ಮಲ ಬಟ್ಟಲ

ಅವ್ವ ದಿನವೂ
ಅದೇಷ್ಟೋ ಅಗ್ನಿಕುಂಡಗಳ
ನಡುವೆ ಭಯವಿಲ್ಲದೆ
ಬೇಯುತ್ತಾಳೆ…..!

ಜೋಡೊಲೆ, ಹಿಂದೆ ಕುಡಿಯೊಲೆ
ಮುಂದೆ ಕೆಂಡದೊಲೆ,
ಪಕ್ಕ ನೀರೊಲೆ….

ಸೂರ್ಯೋದಯಕ್ಕೆ ಮುನ್ನ
ಒಲೆ ಪುಟುಮಾಡುವ
ಅವಳ ಕೌಶಲ್ಯಕ್ಕೆ ಅಗ್ನಿದೇವ
ಒಮ್ಮೊಮ್ಮೆ ದೀಢಿರ ಎಂದು
ಪ್ರತ್ಯಕ್ಷನಾರದೆ ಒಮ್ಮೊಮ್ಮೆ
ಕಾಡಿಸಿ ಪಿಡಿಸುವ ಅವನಿಗೆ
ಬೈದು ಬುಟ್ಟಿ ತುಂಬುತ್ತಾಳೆ.

ಊದು ಲಳಗಿಯಿಂದ
ಊದಿ ಊದಿ ಹೊಗೆಯೊಡಿಸಿ
ಕೈ ಮೈ ಮಸಿ ಮಾಡಿಕೊಂಡರೂ
ಕಟ್ಟಿಗೆ,ಕುಳ್ಳು,,ಶೆಖ್ಖೆ ,ಚಿಪ್ಪಾಡಿಗಳ ಹಾಕಿ ಒಲೆ ಹೊತ್ತಿಸುವಲ್ಲಿ ಮಗ್ನ
ಧಗ್ ಎಂದು ಹೊತ್ತಿಕೊಂಡಾಗ
ಎಸರಿಡಲು ಮುಂದಾಗುತ್ತಾಳೆ

ಕೆಂಪಾದ ಕಣ್ಣು,ಮಸಿಮೆತ್ತಿದ
ಮುಖವನ್ನು ತೊಳೆದು ನೋಡಲು ಅವಳೆಂದೂ ಕನ್ನಡಿಯ ಮುಂದೆ
ಹೋಗಿ ನಿಂತಿದ್ದೆ ಇಲ್ಲ…..
“ಅವ್ವಾ…. ಮಸಿ “ಎಂದರೆ
“ಎಲ್ಲಿ …?”ಎಂದು ಸೆರಗಿಗೆ ಮುಖವರೆಸಿ ರೊಟ್ಟಿ ಹಿಟ್ಟನ್ನು ಹದವಾಗಿ ನಾದಿಕೊಳ್ಳುತ್ತಾಳೆ….

ಹತ್ತಿಕೊಂಡ ಬೆಂಕಿಯನ್ನು
ಜಾಗರುಕತೆಯಿಂದ ಅಡುಗೆ
ಮುಗಿವವರೆಗೆ ಕಾಯುವುದೆ
ಅವ್ವನಿಗೆ ಧ್ಯಾನ
ಕೆಂಡದುಂಡೆಗಳನ್ನೆಳೆದು
ಸೇಗಡಿಗೆ ತುಂಬಿ ಬೇಳೆ ಕುದಿಯಲಿಟ್ಟರೆ
ಉರಿವ ಕಟ್ಟಿಗೆ ಹಿರಿದು
ಪಕ್ಕದೊಲೆಯಲಿ ಅನ್ನಕ್ಕೆಸರಿಟ್ಟರೆ
ಕಟ್ಟಿಗೆಯನ್ನು ಒಳಚಾಚಿ
ಕುಡಿಯೊಲೆಗೆ ಹಾಲಿಟ್ಟರೆ
ಮುಗಿಯಿತು…

ಈಗ ಏನಿದ್ದರೂ ರೊಟ್ಟಿ ಮಾಡುತ್ತಾ
ಬೆಂಕಿಯ ಉಸ್ತುವಾರಿ ಮಾಡುವುದೆ ಅವಳಿಗೆ ದೊಡ್ಡ ಟಾಸ್ಕ್..!!

ಹಸಿವು ಎಂದು ಅಡಿಗೆಮನೆ ಹೊಕ್ಕರೆ
ಬಿಸಿ ರೊಟ್ಟೆಯ ಜೊತೆ
ಹತ್ತು ಹಲವು ಆಪ್ಷನ್
ಕೊಡುವ ಅವ್ವ ಜಾಣೆ

ಬಿಸಿರೊಟ್ಟಿ ತುಪ್ಪ ಉಪ್ಪಿನಕಾಯಿ,…
ಕಿಚ್ಚಿಗೆ ಹಚ್ಚಿದ ರೊಟ್ಟಿ ಕುದಿಬೇಳೆ ಉಪ್ಪು ಖಾರ,…
ಖಡಕ್ ರೊಟ್ಟಿ ಮೊಸರು ಚಟ್ನಿ….
ಸುಡು ಹಾಲು ರೊಟ್ಟಿ…
ಬೆಣ್ಣೆ ರೊಟ್ಟಿ….
ಮಜ್ಜಿಗೆ ರೊಟ್ಟಿ…
ರೊಟ್ಟಿ ಮುಟ್ಟಿಗೆ….

ಹಾಂ…
ಮುಟಿಗಿ ಮುಟಗಿ ಎಂದು ಕುಣಿದರೆ…
ದಪ್ಪನೆ,ಮೆತ್ತನೆ ಉಘತುಂಬಿದ
ಹಂಚಿನ ಮೇಲಿನ
ರೊಟ್ಟಿಯನ್ನು ಕೈಯೊಳಗೆ ಹಿಡಿದು
ತುಪ್ಪ ಸವರಿ
ಬೆಳ್ಳುಳ್ಳಿ ಉಪ್ಪು ಜಜ್ಜಿ
ರೊಟ್ಟಿಯೊಳಗಿಟ್ಟು ಮುದುಡಿಮಾಡಿ
ಉಂಡೆ ಮಾಡಿಕೊಟ್ಟರವಳಿಗೆ ತೃಪ್ತಿ
ಅವಳ ಕೈಯೊಳಗೆ ಮುಟಿಗೆ
ಮೃಷ್ಟಾನ್ನವೇ ಸರಿ…..!

ಅವ್ವ ಈಗ ಭೂತಕಾಲ…
ನಾನು ವರ್ತಮಾನ…..
ಬೇಯುವುದಿಲ್ಲ ಒಲೆ ಎಂಬ
ಅಗ್ನಿ ಕುಂಡಗಳ ಮಧ್ಯ
ಉರಿಯ ಕೆನ್ನಾಲಿಗೆ ಯಾರ ನಾಲಿಗೆ
ಮೇಲೆ ಚಾಚಿ ಬಿಸಿ ಮುಟ್ಟಿಸುತ್ತದೊ
ಅಸಹನೆ ಎಲ್ಲಿ ಹೊಗೆಯಾಡುತ್ತದೊ
ಕೆಂಡದುಂಡೆ ಯಾರ ಎದೆಯೊಳು
ಬೂದಿ ಮುಚ್ಚಿ ಕುಳಿತಿದೆಯೊ
ಗೊತ್ತಿಲ್ಲ…
ಆಗಾಗ ಬೆಯುತ್ತೇನೆ
ಒಡಲ ಕಿಚ್ಚಿನೊಳಗೆ ನಾನೂ….!
ತಟ್ಟನೆ ಅಗ್ನಿ ಕುಂಡಗಳು ಮಧ್ಯೆ ಕುಳಿತು ಅವ್ವ ನೆನಪಾಗುತ್ತಾಳೆ
ಕಾಣದ ಹೊಗೆ ಮುಖ ಕಪ್ಪಾಗಿಸಲು
ಯತ್ನಿಸಿದಾಗ ಊದಲಳಿಗೆ ಹಿಡಿಯುತ್ತೆನೆ….!
ಉರಿಯ ಝಳಕ್ಕೆ ಕಣ್ಣು ಕೆಂಪಾಗದಂತೆ ತಂಪು ಕನ್ನಡಕ ಧರಿಸುತ್ತೇನೆ….!
ಕಂಡದುಂಡೆಗಳ ಮೇಲೆ
ಹಾಲು ಕಾಯಿಸಿ
ಕೆನೆ ತೆಗೆದು
ಬೆಣ್ಣೆಮಾಡಿ
ತುಪ್ಪ ಕಾಯಿಸಿ
ದೇವರಿಗೆ ದೀಪ ಹಚ್ಚುವುದು
ಕರಗತ ಮಾಡಿಕೊಂಡಿದ್ದೆನೆ….!!

ಮಗ ಆಗಾಗ ಜೊಮೆಟೊದಿಂದ ಆರ್ಡರ್ ಮಾಡುತ್ತಾನೆ
ತಂದೂರಿ ರೋಟಿ,…
ದಾಲ್ ರೋಟಿ,…
ಬಟರ್ ರೋಟಿ…
ಗಾರ್ಲೀಕ್ ರೋಟಿ…..!!

ಬೆಂಕಿಯ ಪಳಗಿಸಿ
ನಗುವ ಅವ್ವ ನೆನಪಾಗುತ್ತಾಳೆ….!!


8 thoughts on “ಡಾ. ನಿರ್ಮಲ ಬಟ್ಟಲ,ಕವಿತೆ-ಅಗ್ನಿ ಕುಂಡ

    1. ಅಮ್ಮನ ಅಡುಗೆಯ ಗುತ್ತಿನ ಕಾವ್ಯಚಿತ್ರಿಸಿದ ಕವಿ ಕಾಳಿಕಾಸುತನ ಗುರುಮಾತೆಗೊಂದನೆಗಳು.

  1. ಅಗ್ನಿಕುಂಡ…ಬಗೆ ಬೇರಾದರೂ ಬೇಗೆ ಅದೇ….ಚೆಂದ ಕವಿತೆ ನಿರ್ಮಲಾ….

  2. ಅಮ್ಮಳ ಭೌತಿಕ ಅಗ್ನಿ ಮತ್ತು ನಿಮ್ಮ ಆತ್ಮನ ಅಗ್ನಿ, ಎರಡನ್ನು ಸಮರ್ಥವಾಗಿ ಹೇಳಿದ್ದೀರ.
    Congrats

  3. ಕವನವನ್ನು ಓದಿ ಪ್ರತಿಕ್ರಿಯಿಸಿದ ಎಲ್ಲ ಸಹೃದಯರಿಗೂ ಧನ್ಯವಾದಗಳು

Leave a Reply

Back To Top