ಲೇಖನ ಸಂಗಾತಿ
ಅಸ್ತಿತ್ವವಿಲ್ಲದ ಸಾರ್ವಜನಿಕ ಅಭಿಪ್ರಾಯ
ನೂತನ ದೋಶೆಟ್ಟಿ
ಪಬ್ಲಿಕ್ ಒಪಿನಿಯನ್- ಈ ಪದವನ್ನು 1588 ರಲ್ಲಿ ಮೊದಲ ಬಾರಿಗೆ ಫ್ರೆಂಚ್ ಪ್ರಬಂಧಕಾರ ಮೈಕೆಲ್ ಮಾಂಟೆನ್ ಬಳಸುತ್ತಾನೆ. ಭಾರತದಲ್ಲಿ ಮೊದಲ ಬಾರಿಗೆ ಗಾಂಧೀಜಿ ಈ ಪದವನ್ನು ಬಳಸಿದ್ದಲ್ಲದೆ ಅದಕ್ಕೆ ಹೆಚ್ಚು ಮಹತ್ವ ಬರುವಂತೆ ಮಾಡುತ್ತಾರೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಿರುವಾಗ ಅವರ ಅಭಿಪ್ರಾಯ ಅತಿ ಮುಖ್ಯ. ಇಂಥ ಅಭಿಪ್ರಾಯಗಳು ಕಾಲಕಾಲಕ್ಕೆ ಸರ್ಕಾರಗಳನ್ನು ಕಟ್ಟುವ, ಕೆಡವುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಾ ಬಂದಿವೆ. ಭಾರತದಲ್ಲಿ ಸ್ವಾತಂತ್ರ್ಯಾ ನಂತರ ಈ ಪದಗಳು ಬಹುತೇಕವಾಗಿ ರಾಜಕೀಯ ಹಿನ್ನೆಲೆಯಲ್ಲಿ ಬಳಸಲ್ಪಡುತ್ತಿವೆ ಎಂಬುದನ್ನು ಗಮನಿಸಬೇಕು.
ಸ್ವಾತಂತ್ರ್ಯಾ ನಂತರದ ಕಳೆದ 75 ವರ್ಷಗಳಲ್ಲಿ ರಾಜಕೀಯ ಕ್ಷೇತ್ರವು ತನ್ನ ಕಬಂಧ ಬಾಹುವನ್ನು ವಿಸ್ತರಿಸಿಕೊಳ್ಳುತ್ತ ಮೊದಲು ಸಾಮಾಜಿಕ, ಆರ್ಥಿಕ ಕ್ಷೇತ್ರಗಳನ್ನು ತನ್ನ ತೆಕ್ಕೆಯೊಳಗೆ ತೆಗೆದುಕೊಂಡು ನಂತರ ಧಾರ್ಮಿಕತೆಯನ್ನೂ ತನ್ನ ಒಡಲಲ್ಲಿ ಸೇರಿಸಿಕೊಂಡಿತು. ಇದನ್ನು ಎಲ್ಲ ಪಕ್ಷಗಳೂ ಕಾಲಕಾಲಕ್ಕೆ ಮುಂದುವರೆಸಿಕೊಂಡು ಬಂದವು. ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳ ಮೇಲಾಟಗಳು ನಡೆದಿದ್ದೂ ಇದೆ. ಇಂದು ಮುಖ್ಯವಾದ ಈ ನಾಲ್ಕು ಕ್ಷೇತ್ರಗಳಿಗೆ ಪ್ರತ್ಯೇಕ ಅಸ್ತಿತ್ವವೇ ಇಲ್ಲವಾಗಿದೆ. ಎಲ್ಲವೂ ರಾಜಕೀಯಮಯ! ಈ ಕಾರಣದಿಂದ ಅತಿ ಮಹತ್ವದ ಎರಡು ಪದಗಳಾದ ‘ ಸಾರ್ವಜನಿಕ ಅಭಿಪ್ರಾಯ’ ಅಸ್ತಿತ್ವಶೂನ್ಯವಾಗಿವೆ.
ಸಾರ್ವಜನಿಕರ ಕೆಲಸವೇನಿದ್ದರೂ ಚುನಾವಣಾ ಸಮಯದಲ್ಲಿ ಓಟು ಹಾಕುವುದು ಮಾತ್ರ ಎಂಬಂಥ ಪರಿಸ್ಥಿತಿ ನಿರ್ಮಾಣವಾದ ಕಳೆದ ಶತಮಾನದ 80-90ರ ದಶಕದವರೆಗೆ ಮಾಧ್ಮಮಗಳು ಬಹುಪಾಲು ಮಟ್ಟಿಗೆ ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ, ಅದನ್ನು ಗುರಿ ಮುಟ್ಟಿಸುವಲ್ಲಿ, ಅದಕ್ಕೆ ದೊರೆತ ಪ್ರತಿಕ್ರಿಯೆಯನ್ನು ತಲುಪಬೇಕಾದವರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದವು. ಹಾಗಾಗಿ ಮೇಲೆ ಹೇಳಲಾದ ನಾಲ್ಕು ಕ್ಷೇತ್ರಗಳೂ ಜಾಗರೂಕವಾಗಿ ಹೆಜ್ಜೆ ಆಡುತ್ತಿದ್ದವು. 21ನೇ ಶತಮಾನದ ಆದಿಯಿಂದಲೇ ಮಾಧ್ಯಮಗಳು ಸ್ವಹಿತಾಸಕ್ತಿಗೆ ಹೆಚ್ಚು ಒತ್ತು ಕೊಟ್ಟು ಬೆಳೆದಿದ್ದರಿಂದ ಸಾರ್ವಜನಿಕ ಅಭಿಪ್ರಾಯದ ಬೆಳವಣಿಗೆ ಕಕ್ಕಾಬಿಕ್ಕಿಯಾಯಿತು. ಮಾಧ್ಯಮಗಳ ಅಬ್ಬರದಲ್ಲಿ ಸಾರ್ವಜನಿಕರು ಮೌನ ಪ್ರೇಕ್ಷಕರಾದರು.
ಈ ಹಂತದಲ್ಲಿ ಸಾರ್ವಜನಿಕರ ಕೈ ಹಿಡಿದದ್ದು ಸಾಮಾಜಿಕ ಮಾಧ್ಯಮಗಳು. ಕ್ಷಣಾರ್ಧದಲ್ಲಿ ವಿಶ್ವವನ್ನು ಸುತ್ತಬಲ್ಲ ವೇಗ ಹಾಗೂ ತೀಕ್ಷ್ಣಮತಿಯ ಈ ಮಾಧ್ಯಮಗಳು ಹಿನ್ನೆಲೆಗೆ ಸರಿದಿದ್ದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಕ್ಷೇತ್ರಗಳ ಪುನಶ್ಚೇತನ ಮಾಡಿ ಅವುಗಳನ್ನು ಜನರ ನಡುವೆ ಮತ್ತೆ ಸ್ಥಾಪಿಸಿದವು. ಆದರೆ ಬಹುಬೇಗ ಇವು ವೈರುಧ್ಯಗಳ ಆಡುಂಬೋಲವಾದ ಬೆಳವಣಿಗೆ ಮತ್ತೊಮ್ಮೆ ರಾಜಕೀಯವನ್ನು ಎತ್ತರದಲ್ಲಿ ತಂದು ನಿಲ್ಲಿಸಿತು ಹಾಗೂ ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳನ್ನು ಇನ್ನಿಲ್ಲದಂತೆ ಒಂದುಗೂಡಿಸಿತು. ಇದರಿಂದ ನಷ್ಟವಾದದ್ದು ಜನಸಾಮಾನ್ಯನಿಗೆ. ಅವನ ಬೇಕು-ಬೇಡಗಳು ಕಿವಿ, ಬಾಯಿ ಎರಡನ್ನೂ ಕಳೆದುಕೊಂಡವು. ಇದರ ಪೂರ್ಣ ಪ್ರಯೋಜನ ಪಡೆದಿದ್ದು ರಾಜಕೀಯ ಕ್ಷೇತ್ರ.
ಜನರ ಆಶೋತ್ತರಗಳ ಚುಕ್ಕಾಣಿ ಹಿಡಿಯಬೇಕಾದ ರಾಜಕೀಯ ಕ್ಷೇತ್ರ ತನ್ನ ಅಸ್ತಿತ್ವ ಹಾಗೂ ಎದುರಾಳಿಗಳ ನಾಶ ಎರಡನ್ನೂ ಒಂದೆ ಹೊಡೆತದಲ್ಲಿ ಸಾಧಿಸಿಕೊಳ್ಳುವ ಸಲುವಾಗಿ ವೈಯುಕ್ತಿಕ ತೇಜೋವಧೆಯಂಥ ಅತ್ಯಂತ ಕೀಳು ಮಾರ್ಗ ಹಿಡಿಯಿತು. ಇದರಲ್ಲಿ ಬಟ್ಟೆ, ವಸತಿ, ಆಹಾರದಂಥ ಮೂಲ ಅವಶ್ಯಕತೆಗಳೂ ಸೇರಿ ಹೋದದ್ದು ದುರಂತ. ಇದನ್ನು ಸಾಧಿಸಲು ತಮ್ಮ ತಮ್ಮ ಪಟಾಲಂಗಳನ್ನು ಸೃಷ್ಟಿಸಿಕೊಂಡ ಗುಂಪುಗಳು ಪರಸ್ಪರ ಕಚ್ಚಾಡುತ್ತ, ಮುಖ್ಯ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಬಡತನ, ಅತಿವೃಷ್ಟಿ, ಅನಾವೃಷ್ಟಿಗಳು ಸೃಷ್ಟಿಸುವ ಹಾಹಾಕಾರ, ಹವಾಮಾನ ವೈಪರಿತ್ಯದ ಭೀಕರತೆ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪ್ರಕೃತಿ ನಾಶ, ಭ್ರಷ್ಟಾಚಾರ, ಭಯೋತ್ಪಾದಕತೆ, ಮಹಿಳೆ ಹಾಗೂ ಮಕ್ಕಳ ಅನೈತಿಕ ಸಾಗಾಟ, ಮಾದಕವಸ್ತು ಜಾಲ ಮೊದಲಾದ ಗಂಭೀರ ವಿಷಯಗಳನ್ನು ಮೂಲೆಗುಂಪು ಮಾಡುವಲ್ಲಿ ಯಶಸ್ವಿಯಾಗುತ್ತವೆ. ಕೇವಲ ಕೆಲವು ಸಹಸ್ರ ರಾಜಕೀಯದ ಮಂದಿ, ಕೆಲವು ನೂರು ಧಾರ್ಮಿಕ ನಾಯಕರು,. ಇವರೆಲ್ಲರ ಕೆಲವು ಲಕ್ಷ ಹಿಂಬಾಲಕರು ನಡೆಸುವ ತಂತ್ರ-ಕುತಂತ್ರಗಳನ್ನು ಈ ದೇಶದ ನೂರಾರು ಕೋಟಿ ಜನ ಸಹಿಸಿಕೊಳ್ಳುವುದಾದರೂ ಏಕೆ? ಇಂಥ ನಿರ್ವಿಣ್ಣತೆಗೆ ಬಂದು ನಿಂತಿರುವ ಈ ಕಾಲ ದುರ್ಬಲತೆಯನ್ನಲ್ಲದೇ ಬೇರೇನನ್ನೂ ತರಲಾರದು.
ಒಂದು ದೇಶ ವ್ಯವಸ್ಥಿತವಾಗಿ, ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಸಾರ್ವಜನಿಕ ಅಭಿಪ್ರಾಯ ದಿಕ್ಸೂಚಿ ಯಾಗಿ ಇರಲೇಬೇಕು. ಬದಲಾಗಿ ಕಛೇರಿಗಳಲ್ಲಿ ನಡೆಯುವ ಕ್ಷುಲ್ಲಕ ರಾಜಕೀಯ, ತೇಜೋವಧೆಯ ಮೂಲಕ ಗದ್ದುಗೆ ಹಿಡಿಯುವ ಹುನ್ನಾರಗಳು ಒಂದು ದೇಶದ ರಾಜಕೀಯ ಲಾಭಕ್ಕಾಗಿ ನಡೆಯಲು ಆರಂಭವಾದರೆ ಅಂಥ ಹೀನ ವ್ಯವಸ್ಥೆ ಬೇರೊಂದಿರಲಾರದು. ಇದನ್ನು ನೂರಾರು ಕೋಟಿಗಳ ಲೆಕ್ಕದಲ್ಲಿ ಇರುವ ಜನಸಾಮಾನ್ಯರು ಪ್ರಶ್ನಿಸಬೇಕು. ಧಿಕ್ಕರಿಸಬೇಕು. ಶ್ರೀಲಂಕಾ, ಬಾಂಗ್ಲಾದೇಶ ಈಗ ಪಾಕಿಸ್ತಾನದ ಉದಾಹರಣೆಗಳು ನಮ್ಮ ಎದುರು ಇವೆ. ಮಾಧ್ಯಮಗಳು ಇರದಿದ್ದ ಕಾಲದಲ್ಲೂ ಸಾರ್ವಜನಿಕ ಅಭಿಪ್ರಾಯ ರೂಪಿತವಾಗುತ್ತಿತ್ತು ಎಂಬುದನ್ನು ಮರೆಯಬಾರದು.
ನೂತನ ದೋಶೆಟ್ಟಿ
ತುಂಬಾ ಸಮಯೋಚಿತವಾದ ಬರಹ.ರಾಜಕೀಯ ಪಕ್ಷಗಳು ಜನಸಾಮಾನ್ಯರ ವೈಯಕ್ತಿಕ ಬದುಕಿಗೂ ಕೈ ಹಾಕುತ್ತಿವೆ.ಇದರಲ್ಲಿ ಮಾಧ್ಯಮಗಳೂ ಕೂಡ ಹಿಂದೆಬಿದ್ದಿಲ್ಲ.ಒಂದು ದಂಪತಿಯ ಮದುವೆ,ಮನೆಜಗಳ,ಗಳಂತಹ ಅತ್ಯಂತ ವೈಯಕ್ತಿಕ ವಾದ ವಿಷಯಗಳನ್ನೂ ಜಗತ್ತಿನಾದ್ಯಂತ ತೆರೆದಿಡುವ ಧಾರ್ಷ್ಟ್ಯ ತೋರುತ್ತಿವೆ.ಸಾರ್ವಜನಿಕರನ್ನು ಕೇವಲ ತಾವು ಹೇಳಿದ ವ್ಯಕ್ತಿಗೋ ಪಕ್ಷಕ್ಕೋ ವೋಟು ಹಾಕುವ ಯಂತ್ರಗಳಂತೆ ನೋಡುತ್ತಿರುವುದರಿಂದ ಜನಸಾಮಾನ್ಯರ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲ.ಜೊತೆಗೆ ಒಂದಷ್ಟು ಜನರೂ ಕೂಡ ತಮ್ಮನ್ನು ವೋಟಿಗೆ ಮಾರಿಕೊಂಡಿರುವುದೂ ಇದಕ್ಕೆ ಕಾರಣವಾಗಿದೆ.ಒಟ್ಟಿನಲ್ಲಿ ಚಂದದ ಬರಹ ನೂತನಾ
ಧನ್ಯವಾದಗಳು ಯಶೋದಾ
Good article Madam
ಧನ್ಯವಾದಗಳು ಸರ್