ಅಂಕಣ ಸಂಗಾತಿ

ಸಕಾಲ

ಶಿವಲೀಲಾ ಹುಣಸಗಿ

ಕಾಲಬದಲಾಗ್ತಿದೆ….ಅನ್ನೊದು ದಿಟವಾ?

ಇದೇನು ಹೊಸತಲ್ಲ ಬಿಡಿ,ಮನುಷ್ಯ ಜನ್ಮತಾಳಿದಾಗಿಂದಲೂ ಅಥವಾ ಜೀವ ಜಗತ್ತು ಅರಳಿದಾಗಿಂದಲೂ  ರೂಲ್ಸಗಳ ಸುರಿಮಳೆ.ನೀ ಹಿಂಗೆ ಇರಬೇಕು,ಹಾಂಗೆ ಇರಬೇಕು,ಅನ್ನೊ ನೆಪದಲ್ಲಿ  ಬದುಕು ಕಟ್ಟಿದ ಹಿರಿ ಜೀವಗಳನ್ನು ನೆನೆದಾಗೊಮ್ಮೆ ಆಶ್ಚರ್ಯದ ಜೊತೆಗೆ ಅಸಮಾನತೆಯ ಬಗ್ಗೆ ಸಿಟ್ಟು ಬಂದಿದ್ದಿದೆ.ಅದನ್ನು ವಿರೋಧಿಸಿ ಬಂದವರು ನರಕಯಾತನೆ ಅನುಭವಿಸಿ ಕೊನೆಗೆ ಇದ್ದುದ್ದೆ ಸಾಕಪ್ಪಾ ಎಂದು ಮೌನವಾಗಿ ಅನುಭವಿಸುತ್ತ ಅದನ್ನೆ ಸರ್ವಸ್ವವೆಂದು ಹರಿವ ನೀರಿನಂತೆ ನಯ ನಾಜೂಕಾಗಿ ಬಾಳಿದವರು.ಒಂದೊಂದು ಸಲ ಈ ನಯ- ನಾಜೂಕು ನನ್ನ ಪಾಲಿಗೆ ಒತ್ತಾಯದ ಬೇಡಿಯಂತೆ ಅನಿಸಿದ್ದಿದೆ.ಹೌದು ಇಷ್ಟೆಲ್ಲಾ ನಾಜೂಕಿನ ಜೀವನ ಉಪಯೋಗಕ್ಕೆ ಬರುತ್ತಾ? ಅದು ಅಲ್ಲದೆ ಇವೆಲ್ಲ ಹೆಣ್ಮಕ್ಕಳಿಗೆ ಮಾತ್ರನೆ ಯಾಕೆ?

ಮೊದಲೆಲ್ಲ ಶಾಲೆಗೆ ಹೋಗೊದೆ ಅಪರಾಧ.ಅದರಲ್ಲೂ ಹೋದರಂತೂ ತಲೆಬಗ್ಗಿಸಿಕೊಂಡು ಹೋಗಬೇಕು,ಬರಬೇಕು.ಗಂಡಮಕ್ಕಳ ಹತ್ತಿರ ಮಾತಂತೂ ಸುತಾರಾಮ ಇಲ್ಲ.ಹೆಣ್ಣು ಗಂಡು ಪರಸ್ಪರ ನೋಡಿ‌ ಸಂಬಂಧ ಗಟ್ಟಿ ಮಾಡುವುದು ಕಡಿಮೆ.ಮನೆಯ ಹಿರಿಯರು ಹೋಗಿ ನೋಡಿ ಬಂದರಾತು,ಅದೇ ಫಿಕ್ಸ.ಮದುವೆಯಲ್ಲೆ ಪರಸ್ಪರ ನೋಡಬೇಕು

ಹಳೇ ಕಾಲದವರು ಗೊತ್ತಲ್ಲ. ಹಿಂದಿಲ್ಲ-ಮುಂದಿಲ್ಲ ಬೇಕಾಬಿಟ್ಟಿ ರೂಲ್ಸ್‌. ಅದ್ರಲ್ಲೂ ಮದ್ವೆ ವಿಷ್ಯದಲ್ಲಂತೂ ಒಂಚೂರು ಹೆಚ್ಚೇ ಕಟ್ಟುನಿಟ್ಟು. ಹುಡುಗಿಯ ಜನ್ಮ ಜಾಲಾಡಿ,ಕೈ ಮೂಗು,ಬಾಯಿ,ಕಾಲು, ಅಡಿಗೆ ಹೀಗೆ ಹತ್ತಾರು ವಿಷಯಗಳನ್ನು ತಮ್ಮ ಬತ್ತಳಿಕೆ ಮಾಡಿಕೊಂಡು ಅದ್ವಾನ ಮಾಡುವಂತವರು.ಹುಡುಗ ಹೇಗಿದ್ದರೂ ಪರವಾಗಿಲ್ಲ,ಅವನಿಗೊಂದು ನಿಯಮ.ಇವಳಿಗೊಂದು ನಿಯಮ.ಇಡೀ ಕುಟುಂಬದ ದೃಷ್ಟಿ ಬೊಂಬೆ ಇವಳೆಂಬ ಪ್ರತಿತಿ.

ಹೆಣ್ಣು ನೋಡೊ ಶಾಸ್ತ್ರಕ್ಕೆ ಹೋದವರಿಗೆಲ್ಲ ಅನುಭವಕ್ಕೆ ಬಂದೆ ಬಂದಿರುತ್ತೆ.ಇಂದಿನ ದಿನಗಳಲ್ಲಿ ಅದೆಲ್ಲ ಇಲ್ಲ ಬಿಡಿ.ಹೆಣ್ಣಿಗೆ ನಾಜಿಕೆ ಇರಬೇಕು,ಸಿಕ್ಕಸಿಕ್ಕಲ್ಲಿ ನಗೋ ಹಾಗಿಲ್ಲ.ಗಂಭೀರವಾಗಿ ಇರಬೇಕು.ನಡೆಯವಾಗ,ಮಾತಾಡುವಾಗ ನಯನಾಜೂಕಿನಿಂದ ವರ್ತಿಸುವ ಮನಸ್ಸಿರಬೇಕು.ಇಲ್ಲಾದ್ರೆಏನ್ ಹುಡುಗಿನೋ, ತನ್ನ ಮದುವೆ ಅನ್ನೋ ಪರಿವೇನೂ ಇಲ್ಲ. ಸ್ವಲ್ಪ ನಯ ನಾಜೂಕ ಕಲಿಸ್ಬೇಕಲ್ವಾ? ಹೀಗಂತ ಅನೇಕರ ಬಾಯಲ್ಲಿ ನಾವು ಕೇಳಿರ್ತೇವೆ. ಮದುವೆ ಮಂಟಪದಲ್ಲಿ ಹುಡುಗಿ ಸ್ವಲ್ಪ ನಕ್ಕರೂ ನೆರೆದವರ ಕಣ್ಣು  ಕೆಂಪಾಗುತ್ತದೆ. ಅದೇನೇ ಆಗ್ಲಿ, ಮದುವೆ ಸಂದರ್ಭದಲ್ಲಿ ವಧು ನಾಚಿಕೊಳ್ಳಲೇಬೇಕು. ಮಹಿಳೆ ಸ್ವಾತಂತ್ರ್ಯದ ಬಗ್ಗೆ ನಾವು ಎಷ್ಟೇ ಮಾತನಾಡಿದ್ರೂ ಮದುವೆ ದಿನ ನಾಚಿಕೊಳ್ಳದ ವಧುವನ್ನು ಬೇರೆ ರೀತಿಯಲ್ಲೇ ನೋಡಲಾಗುತ್ತೆ.

ಯಾವುದೇ ಕಾರಣಕ್ಕೂ ಆಕೆ ಬಾಯ್ಬಿಟ್ಟು ನಗುವಂತಿಲ್ಲ. ಭಯ ತುಂಬಿದ ನಾಚಿಕೆ ಆಕೆ ಮುಖದಲ್ಲಿರ್ಬೇಕು. ಮದುವೆಯ ಪ್ರತಿಯೊಂದು ಸಂತಸವನ್ನು ಆನಂದಿಸುವ, ಎಲ್ಲರ ಜೊತೆ ಎಂಜಾಯ್ ಮಾಡುವ ವಧು ಒಳ್ಳೆಯವಳಲ್ಲವೇ ಅಲ್ಲ. ಮದುವೆ ದಿನ ತಗ್ಗಿ-ಬಗ್ಗಿ ನಡೆಯಬೇಕು ಜೊತೆಗೆ ವರನ ಕಡೆಯವರ ಜೊತೆ ಜಾಸ್ತಿ ಮಾತನಾಡ್ಬಾರದು ಇದು ಅಲಿಖಿತ ನಿಯಮ.ವಿಚಿತ್ರವಾದರೂ ಅದನ್ನು ಶಿರಸಾವಹಿಸುವ ಮನಸ್ಸುಗಳ ಮಧ್ಯೆ ನಾವಿದ್ದೆವೆ. ಕಾಲಬದಲಾಗ್ತಿದೆ ಅನ್ನೊದು ದಿಟವಾ? ಪರಸ್ಪರರ ಅಭಿಪ್ರಾಯಗಳು ಮನೆಯಂಗಳದಿಂದ ಬಾಹ್ಯಾಕಾಶಕ್ಕೆ ಲಗ್ಗೆಯಿಟ್ಟಿರುವುದು ಹೊಸದಲ್ಲ.

ಹಿಂದಿನ ಪದ್ಧತಿ ಏನೇ ಇರಲಿ, ಈಗ ಕಾಲ ಬದಲಾಗಿದೆ. ಹುಡುಗಿಯರು ಬದಲಾಗಿದ್ದಾರೆ. ಹುಡುಗಿಯರು ತಮ್ಮ ಭಾವನೆಗಳನ್ನು ನೇರವಾಗಿ ಹೇಳಲು ಶುರು ಮಾಡಿದ್ದಾರೆ. ದಶಕಗಳ ಹಿಂದಿದ್ದ ಪದ್ಧತಿ ಈಗಿಲ್ಲ. ಮರ್ಯಾದೆ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಯನ್ನು ಹುಡುಗಿಯರು ಪ್ರಶ್ನಿಸಲು ಶುರು ಮಾಡಿದ್ದಾರೆ. ಹಾಗಾಗಿ ಈಗಿನ ಮದುವೆಗಳಲ್ಲಿ ನಾವು ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು.ಹುಡುಗ ಹುಡುಗಿ ಒಪ್ಪಿದರೆ ಮಾತ್ರ ಮದುವೆ.ಇನ್ನೂ ಜಾತಿ,ಧರ್ಮಕ್ಕೆ ಕಟ್ಟು ಬಿದ್ದು ಅನೇಕ ಜೀವಗಳು ಜೀವಂತ ದಹನವಾಗಿರುವುದು ಸತ್ಯ.ಮರ್ಯಾದಾ ಹತ್ಯೆಗಳು ಸರ್ವೆಸಾಮಾನ್ಯವಾಗಿವೆ.ಪ್ರೀತಿಯ ನೈಜತೆ ಅರಿಯದೆ ಮೋಸ ಹೋದವರು, ಕುಟುಂಬದಿಂದ ದೂರ ತಳ್ಳಲ್ಪಟ್ಟವರು,ಹೇಗೋ ಜೀವನ ಸಾಗಿಸುವಾಗ ಎದುರಾಗುವ ಸಮಸ್ಯೆಗಳು. ದೌರ್ಜನ್ಯಗಳು ಒಂದೆ ಎರಡೆ ಅವು ಹಿಂದಿನಿಂದಲೂ ಅವ್ಯಾಹತಗಾಗಿ ನಡೆಯುತ್ತಲೆ ಇವೆ.ದಮನ ಕಾರ್ಯ ಸಾಗಿದಷ್ಟು ಸಮಾಜದ ಬಲವಂತಕ್ಕೆ ಮದುವೆಯಾಗಿ ದಿಕ್ಕಿಲ್ಲದ ಜೀವನ ಕಂಡುಕೊಂಡವರಿದ್ದಾರೆ.ಕಾಲಕಾಲಕ್ಕೆ ಬದಲಾಗುವ ಮನುಷ್ಯನ ಗುಣಕ್ಕೆ ಅನುಗುಣವಾಗಿ ನಿಯಮಗಳು ಮಾರ್ಪಟ್ಟಿವೆ.ನೋವು ಒಂದೆಡೆಯಾದರೆ,ಛಲ ಒಂದೆಡೆ.ಹುಡುಗರು ನಯನಾಜೂಕಿನ ಸೂತ್ರ ಅನುಸರಿಸುವುದು ಬಹುಮುಖ್ಯವಾಗಿದೆ.ಹೀಗೆ ಬದಲಾದ‌ ಸನ್ನಿವೇಶದಲ್ಲಿ ಪರಿವರ್ತನೆ ಹೊಂದುವವನೆ ನಿಜವಾದ ಜಾಣ.ಹೀಗೂ ಬರಬಹುದಲ್ಲ,ಮದುವೆ ಹುಡುಗಿರು ಕೆಲವರು ಕುದುರೆ ಏರಿ ಮಂಟಪಕ್ಕೆ ಬಂದ್ರೆ ಮತ್ತೆ ಕೆಲವರು ಬೈಕ್ ಏರಿ ಬಂದಿದ್ದಾರೆ. ಹಿಂದೆ ಮದುವೆ ಅಂದ್ರೆ ಭಯದಲ್ಲಿರುತ್ತಿದ್ದ ಹುಡುಗಿಯರು ಈಗ ಧೈರ್ಯವಾಗಿ ಮುನ್ನುಗ್ಗುತ್ತಿದ್ದಾರೆ.

ಹೆಣ್ಣು ಹುಟ್ಟುತ್ತಲೇ ತಾತ್ಸಾರ ಭಾವ ಶುರುವಾಗ್ತಿತ್ತು. ಆಕೆ ಪರರ ಮನೆಗೆ ಹೋಗುವವಳು ಎಂಬ ಕಾರಣಕ್ಕೆ ಸರಿಯಾಗಿ ವಿದ್ಯೆ ಕೂಡ ಕಲಿಸ್ತಿರಲಿಲ್ಲ. ಆದ್ರೆ ಈಗಿನ ಪಾಲಕರು ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ನೀಡಿದ್ದಾರೆ. ಅವರಿಗೆ ವಿದ್ಯೆ ನೀಡಿ ಅವರನ್ನು ದೊಡ್ಡ ಹುದ್ದೆಗಳಲ್ಲಿ ನೋಡುವ ಕನಸು ಕಾಣ್ತಾರೆ. ಹಾಗೆಯೇ ಮದುವೆ ನಿಶ್ಚಿತವಾಗ್ತಿದ್ದಂತೆ ಆಕೆಯನ್ನು ಪರರ ಸ್ವತ್ತು ಎಂದು ನೋಡ್ತಿದ್ದ ಭಾವ ಈಗಿಲ್ಲ. ಮದುವೆ ನಂತ್ರ ಏನೂ ಬದಲಾಗುವುದಿಲ್ಲ ಎಂಬುದನ್ನು ತಿಳಿದಿರುವ ಹುಡುಗಿಯರು ತವರು ಮನೆಯಿಂದ ಹೋಗುವ ವೇಳೆ ಅಳೋದಿಲ್ಲ.ಅತ್ತರೂ ಅದು ಮಮತೆಯ ಕಡಲಾಗಿರುತ್ತದೆ.ಹೆಣ್ಣು ಗಂಡು ಬೇಧ ಭಾವ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿರುವುದು ಸತ್ಯವಾದರೂ,ಇನ್ನೊಂದು ಕಡೆ ಬರ್ಬರ ಹತ್ಯೆಯಾಗುತ್ತಿರುವುದು ಕಳವಳಕಾರಿಯೆಂದರೆ ತಪ್ಪಾಗದು. ರೀತಿ ನೀತಿ ಎಲ್ಲವನ್ನೂ ಮೀರಿ ಮುನ್ನುಗ್ಗುವ ಧೈರ್ಯ ಮಾಡುತ್ತಿರುವ ಸಮಯದಲ್ಲಿ ಅಭದ್ರತೆಯ ಅಪಸ್ವರ ಎತ್ತುವವರ ನಡುವೆ ಸಮರ ಸಾರುವ ಗಟ್ಟಿತನ ಬಿತ್ತಬೇಕಿದೆ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

3 thoughts on “

  1. ನಿಜಕ್ಕೂ ನಾವು ದಾಟಿ ಬಂದ ದಿನಗಳೇ ಅಲ್ಲವೇ….ಸೂಪರ ಗೆಳತಿ

  2. ಸಮಾಜದ ವಾಸ್ತವ ಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿದೆ ಈ ಲೇಖನ…superb ಗೆಳತಿ✌

Leave a Reply

Back To Top