ಕೃಷಿಕರ ಕೈಪಿಡಿ ನೆಲದ ನಂಟು

ಪುಸ್ತಕ ಸಂಗಾತಿ

ನೆಲದ ನಂಟು

ಮಾಲತಿ ಹೆಗಡೆ

ನೆಲದ ನಂಟು’ ಕೃಷಿ ಲೇಖನಗಳ ಸಂಗ್ರಹದ ಪುಸ್ತಕ. ಮಾಲತಿ ಹೆಗಡೆಯವರು ಬರೆದ ಈ ಪುಸ್ತಕವನ್ನು
‘ಹಸಿರು ಹೊನ್ನು’ ಎಂದು ಹೇಳಬಹುದು. ‘ನೆಲದ ನಂಟು’ ಪುಸ್ತಕವನ್ನು ಸ್ಥೂಲವಾಗಿ ಎರಡು ವಿಭಾಗವಾಗಿಸಿ ಅತ್ಯಂತ ಸೂಕ್ತವಾದ ಮಾಹಿತಿಗಳನ್ನು ಒದಗಿಸಲಾಗಿದೆ. ದಯಾನಂದ ಅಪ್ಪಯ್ಯನವರಮಠ ಬಗ್ಗೆ ಬರೆದ ಮೊದಲ ಲೇಖನವೇ ಕುತೂಹಲ ಮೂಡಿಸುತ್ತದೆ. ಲೇಖನದ ಶೀರ್ಷಿಕೆ ಹೊಲಸು ಹಸನಾಗಿ ಹಸಿರಾಯ್ತು’. ಕಂಡಕಂಡಲ್ಲಿ ಕಕ್ಕಸು ಮಾಡುವ ತಮ್ಮೂರಿನ ಜನರ ಮನಸ್ಥಿತಿಯನ್ನು ಬದಲು ಮಾಡಿ ಅವರಿಗಾಗಿ ಶೌಚಾಲಯಕಟ್ಟಿ, ಅದರ ತ್ಯಾಜ್ಯದಿಂದ ಬಯೋಗ್ಯಾಸ್, ಸಾವಯವಗೊಬ್ಬರ ಸಿದ್ಧಪಡಿಸಿ ಸಾವಯವ ಕೃಷಿ ಮಾಡಿ ಬೆಳೆದ ಬೆಳೆಯನ್ನು ಗ್ರಾಹಕರವರೆಗೆ ತಲುಪಿಸುವ ಯಶೋಗಾಥೆ ಕೃಷಿ ಬದುಕಿನ ಹಲವು ಸಾಧ್ಯತೆಯನ್ನು ತಿಳಿಸಿಕೊಡುತ್ತದೆ.
ಕಡಿಮೆ ನೀರನ್ನು ಬಳಸಿ ಭತ್ತ ಬೆಳೆಯುವುದು, ಭೂಮಿ ಹದಗೊಳಿಸುವುದು ಮತ್ತು ಅಕ್ಕಿ ಮಾಡಿ ಗ್ರಾಹಕರಿಗೆ ತಲುಪಿಸುವ ಬತ್ತದ ಕೃಷಿಯ ಪೂರ್ಣಚಕ್ರವನ್ನು ಅನುಷ್ಟಾನಗೊಳಿಸುವ ಮೈಸೂರಿನ ಕೈಲಾಸಮೂರ್ತಿಯವರ ಅನುಭವವನ್ನೂ ಲೇಖನವಾಗಿಸಿದ್ದಾರೆ. ತೇರಗಾಂವಿನ ಕುಶಪ್ಪನವರು ತಾವು ಕಸಿ ಮಾಡುವುದಲ್ಲದೇ ಊರಿನ ಜನರಿಗೆಲ್ಲ ಕಸಿ ಮಾಡುವುದನ್ನು ಕಲಿಸಿ ಊರಿಗೆ ಊರೇ ಆಪೂಸು ಮಾವಿನ ಸಸಿ ತಯಾರು ಮಾಡುವ ಉದ್ಯಮದ ಕೇಂದ್ರವಾಗುವಂತೆ ಮಾಡಿದ್ದಾರೆ ಎನ್ನುವ ಮಾಹಿತಿ ‘ನೆಲದ ನಂಟಿ’ನ ಭಾಗವಾಗಿದೆ. ಬಸನಗೌಡರು ಮತ್ತು ಚೆನ್ನಮ್ಮ ದಂಪತಿಗಳು ಮಾಡುವ ಸಮಗ್ರ ಕೃಷಿ ಮಾಹಿತಿ, ಮಿಶ್ರ ಬೆಳೆಗಳಾಗಿ ಈರುಳ್ಳಿ, ಹತ್ತಿಯನ್ನು ಏಕಕಾಲಕ್ಕೆ ಬೆಳೆದು ಸೈ ಎನಿಸಿಕೊಂಡ ಮಲ್ಲಿಕಾರ್ಜುನ ಕಿತ್ತೂರರ ಕೃಷಿಗಾಥೆ, ಅಂದಿನ ಹೂವಿಗೆ ಅಂದೇ ಆದಾಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಗುಲಾಬಿ ಬೆಳೆಗಾರ ಮಂಜುನಾಥ ಕಲಕುಂಡಿಯವರ ತೋಟದ ಚಿತ್ರಣ … ಬಸವರಾಜ- ಚೆನ್ನಪ್ಪ ಸಹೋದರರ ಎರೆಹುಳ ಗೊಬ್ಬರ ತಯಾರಿಕೆ ರೇಷ್ಮೆ ಬೇಸಾಯದ ವಿವರಣೆ ಇಲ್ಲಿದೆ. ಬಯಲು ಸೀಮೆಯಲ್ಲಿಯೂ ಅಡಿಕೆ ಬೆಳೆಯಬಹುದಾದ ಸಾಧ್ಯತೆಯನ್ನು ತೋರಿಸಿದ ಚಂದ್ರಕಾಂತ ಬೆಲ್ಲದರ ಸಾಧನೆ ಬೆರಗು ಮೂಡಿಸುತ್ತದೆ. ಕಂಪ್ಲಿಕೊಪ್ಪದ ನಾಗಪ್ಪ ದಂಪತಿಗಳು ಹಸುವಿನ ತ್ಯಾಜ್ಯದಿಂದ ಭೂಮಿ ಫಲವತ್ತಾಗಿಸಿ ತೋಟದಲ್ಲಿ ಹುಲ್ಲು ಬೆಳೆಸಿ ಹಸುವಿಗೆ ನೀಡುವಂತಹ ಪೂರಕ ವ್ಯವಸ್ಥೆಯಿಂದ ಸಮೃದ್ಧ ಜೀವನ ಕಂಡುಕೊಂಡ ಚೆಂದದ ಚಿತ್ರಣವಿದೆ. ವಿದೇಶದಲ್ಲಿ ವಾಸ್ಥವ್ಯ ಹೂಡಿಯೂ ಮಂಡಿಹಾಳದಲ್ಲಿ ಕೃಷಿ ಮಾಡಿಸುತ್ತಿರುವ ರವಿ ಅಪರ್ಣ, ಕಾಡುತೋಟ ಸೃಷ್ಟಿಸಿದ ಡಾ. ಸಂಜೀವ ಕುಲಕರ್ಣಿ, ತಮ್ಮ ತೋಟಗಳಲ್ಲಿ ಸಾವಿರಾರು ಸಸ್ಯಗಳನ್ನು ಬೆಳೆಸಿ ಬಯಲುಸೀಮೆಯ ನೆಲಕ್ಕೆ ಹಸಿರಿನ ಹೊದಿಕೆ ಹೊದೆಸಿದ ವಿವರಗಳು ಈ ಪುಸ್ತಕದಲ್ಲಿ ಸಿಗುತ್ತದೆ. ಬಸವಣ್ಣೆಪ್ಪ ಅಂಗಡಿಯವರ ಯಶೋಗಾಥೆ ಮನಕಲಕುತ್ತದೆ. ಸ್ವಂತ ನೆಲವಿಲ್ಲದಿದ್ದರೂ ಕಾಕಡಾ ಬೆಳೆಯುವ ಭೋಗಿ ನಾಗರಕೊಪ್ಪದ ಫಕೀರಪ್ಪ, ಉತ್ತಮ ಸಾವಿ ಬೆಳೆದು ಕಿರುಧಾನ್ಯದ ಬಳಕೆಯನ್ನು ಜೀವಂತವಾಗಿಟ್ಟ ಶಿವಲಿಂಗಯ್ಯ, ತೆಂಗಿನಕಾಯಿ ಕೊಯ್ಯುವ ಸಾಹಸದ ಕೂಲಿಕಾರ ಸ್ವಾಮಿ ಕೃಷಿಕನಾಗಿ ಬದಲಾದ ಕಥೆ, ನೈಸರ್ಗಿಕ ಬಣ್ಣಗಳನ್ನು ತಯಾರಿಸಿ ಹಲವರಿಗೆ ಉದ್ಯೋಗ ನೀಡಿದ ಮನೋರಮಾ ಜೋಷಿಯವರ ಮಹತ್ವದ ಅನುಶೋಧದ ವಿವರಗಳು ಹೊತ್ತಿಗೆಯ ಹೂರಣದ ರುಚಿ ಹೆಚ್ಚಿಸಿದೆ. ಗ್ರಾಮೀಣ ಬದುಕಿನ ಚಿತ್ರಣವನ್ನು ಪ್ರವಾಸಿಗರಿಗೆ ತಿಳಿಸಲೋಸುಗವಾಗಿಯೇ ನಿರ್ಮಿಸಿದ ರಾಕ್‌ಗಾರ್ಡನ್‌ ಚಿತ್ರಣವನ್ನು ಲೇಖಕಿ ಬಲು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಪ್ರತಿಯೊಂದು ಲೇಖನವೂ ಭಿನ್ನವಾದ ಕೃಷಿ ಪ್ರಯತ್ನವನ್ನು ತೋರಿಸುತ್ತಾ ಓದಿಸಿಕೊಂಡು ಹೋಗುತ್ತದೆ.
ಕರ್ನಾಟಕದ ಬೇರೆ ಬೇರೆ ಹಳ್ಳಿಗಳಲ್ಲಿ ವಾಸಿಸುವ ಈ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸಿ ಆಸಕ್ತಿದಾಯಕವಾಗಿ ಬರೆದಿರುವ ಮಾಲತಿಯವರ ಪರಿಶ್ರಮ ಮೆಚ್ಚುವಂಥದ್ದು. ನಾನು ಈ ಪುಸ್ತಕ ತರಿಸಿಕೊಂಡು ಓದತೊಡಗಿದಾಗ ಎಷ್ಟೊಂದು ಮಾಹಿತಿಗಳ ಸಂಗ್ರಹವಿದೆ ಇದರಲ್ಲಿ ಎಂದು ಅಚ್ಚರಿಪಟ್ಟೆ. ಮಳೆ ಗಾಳಿ ಬಿಸಿಲನ್ನು ಲೆಕ್ಕಿಸದೇ ರೈತರನ್ನು ಹುಡುಕಿಕೊಂಡು ಹೋಗಿ, ಹಳ್ಳಿಯ ಪರಿಸರದಲ್ಲಿ ಅವರೊಂದಿಗೆ
ಅವರಂತಾಗಿ ವಿಷಯ ಅರಿತುಕೊಳ್ಳುವುದರಲ್ಲಿ, ಮಾಹಿತಿ ಪಡೆದುಕೊಳ್ಳುವುದರಲ್ಲಿ, ತಿಳಿದ ವಿಷಯವನ್ನು ಓದುಗರಿಗೆ ಅರ್ಥವಾಗುವಂತೆ ಸರಳ ಶೈಲಿಯಲ್ಲಿ ಬರೆಯುವುದರಲ್ಲಿ ಲೇಖಕಿ ತುಂಬಾ ಮುತುವರ್ಜಿವಹಿಸಿದ್ದು ಪುಸ್ತಕದುದ್ದಕ್ಕೂ ಕಂಡುಬರುತ್ತದೆ.

ಪುಸ್ತಕದ ಎರಡನೇ ಭಾಗದಲ್ಲಿ ಕೈತೋಟ ಮಾಡಿದವರ ಚಿತ್ರಣವಿದೆ.
ಪುಟ್ಟ ಅಂಗಳದಲ್ಲಿ ಮನೆಗೆ ಬೇಕಾದಷ್ಟು ತರಕಾರಿ ಬೆಳೆಯುವ ಧಾರವಾಡದ ವಸಂತರಾವ್‌ ಚಂದ್ರಕಲಾ ಘಾಟಗಿ, ಕಲಾತ್ಮಕ ತೋಟ ನಿರ್ಮಿಸಿದ ಕಬ್ಬೂರದಂಪತಿ, ಕೂಟ ಕಸಿಗಳಲ್ಲಿ ಪರಿಣಿತರಾದ ಗುನುಗರು, ಪುಟ್ಟ ಕೈತೋಟದಲ್ಲಿ ಪರಿಮಳದ ಸಸ್ಯಗಳನ್ನು ಬೆಳೆಸುವ ಶೋಭಾ ಅನ್ ಬನ್ ಅವರ ಕೈತೋಟಗಳಿಗೆ ಭೇಟಿ ನೀಡಿದಷ್ಟೇ ಸಂತೋಷವನ್ನು ಆ ಲೇಖನಗಳು ಕೊಡುತ್ತವೆ. ಡಾ. ರೂಪಾ ಜೋಷಿಯವರ ತಾರಸಿಯ ಮೇಲೆ ಹುಲ್ಲು ಹಾಸನ್ನು ಬೆಳೆಸುವ ಯಶಸ್ವಿ ಪ್ರಯೋಗ, ಮುಂಜಿಯವರ ಔಷಧೀಯ ಸಸ್ಯಗಳ ತಾರಸಿ ವನ, ಜಯಶೀಲಾ ಬೆಳಲದ ಅವರು ನಿರ್ಮಿಸಿದ ಕ್ಯಾಕ್ಟಸ್‌ತೋಟ ಮನೆಯ ಸೂರಿನಲ್ಲಿಯೂ ಹಸಿರು ಬೆಳೆಸುವ ಹಲವು ಸಾಧ್ಯತೆಗಳನ್ನು ತೋರಿಸಿಕೊಡುತ್ತದೆ. ಇಳಿ ವಯಸ್ಸಿನಲ್ಲಿಯೂ ಗಿಡ ಬೆಳೆಸುವ ಹವ್ಯಾಸದಿಂದ ಜೀವನವನ್ನು ಹಸಿರಾಗಿಸಿಕೊಂಡ ದೀಕ್ಷಿತರು, ಜಯರತ್ನಾ ನಡಕಟ್ಟಿಯವರ ಕಥೆ, ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಗಾರ್ಡನ್‌ ಕಥೆ ಸ್ಪೂರ್ತಿದಾಯಕವಾಗಿದೆ.
ಭೂಮಿಯನ್ನು ನಂಬಿದ ಪ್ರತಿಯೊಬ್ಬರ ವಿಭಿನ್ನ ಅಪೇಕ್ಷೆ, ಅನುಭವ ಈ ಪುಸ್ತಕದಲ್ಲಿ ದಾಖಲಾಗಿದೆ. ಮನೆಯ ಆವರಣದಲ್ಲಿ ಸ್ವಲ್ಪ ಜಾಗವಿದ್ದರೂ ಕೈತೋಟ ಮಾಡುವ ಮನಸ್ಸಿದ್ದವರು ಏನೆಲ್ಲವನ್ನೂ ಬೆಳೆದುಕೊಳ್ಳಬಹುದು ಎನ್ನುವ ಅಂದಾಜು ನೆಲದ ನಂಟು ಪುಸ್ತಕ ಓದಿದಾಗ ಓದುಗರಿಗೆ ಸಿಗುವಂತಿದೆ.
ಕೈತೋಟಗಳ ರಾಜ್ಯಭಾರದಲ್ಲಿ ಮುಖ್ಯವಾಗಿ ಬೀಜ ಮೊಳಕೆ ಬರಿಸುವುದು, ಸಸಿ ನೆಡುವ ವಿಧಾನ, ಬೆಳೆಯುವ ಕ್ರಮ, ಯಾವ ಕಾಲದಲ್ಲಿ ನೆಡಬೇಕು, ಹೇಗೆ ನೆಡಬೇಕು, ಹಸಿಕಸದಿಂದ ಸಾವಯವ ಗೊಬ್ಬರ ತಯಾರಿಸುವ ವಿಧಾನ.. ಹೀಗೆ ಹಲವು ಮಾಹಿತಿಗಳನ್ನು ಟಿಪ್ಸರೂಪದಲ್ಲಿ ಕೊಟ್ಟಿರುವುದರಿಂದ ಪುಸ್ತಕ ಕೈತೋಟ ಮಾಡುವವರಿಗೆ ಮಹತ್ವದ ಕೈಪಿಡಿಯೂ ಆಗಿದೆ.
ನಮ್ಮರಾಜ್ಯದಲ್ಲಿ ಕೈತೋಟ ಮಾಡಿದವರನ್ನು ಕೃಷಿಕರೆಂದು ಕರೆಯುವುದಿಲ್ಲ. ಕೈತೋಟವನ್ನೂ ಕೃಷಿಯ ಭಾಗವಾಗಿ ನೋಡಬೇಕೆಂಬ ಲೇಖಕಿಯ ವಿಚಾರ ನ್ಯಾಯಯುತವಾದದ್ದು. ಈ ಪುಸ್ತಕ ಕೃಷಿಕರಿಗೆ ಕೃಷಿ ಚಿಂತಕರಿಗೆ ಉತ್ತಮ ಗುಣಮಟ್ಟದ ಸಲಹೆ ಸೂಚನೆಗಳ ಆಗರವೆನ್ನಬಹುದು.

ಪರಿಸರ ಪರ್ತಕರ್ತರೆಂದೇ ನಾಡಿಗೆ ಚಿರಪರಿಚಿತರಾದ ಶಿವಾನಂದ ಕಳವೆಯವರು ಈ ಪುಸ್ತಕದ ಮುನ್ನುಡಿಯಲ್ಲಿ ‘ಕೃಷಿ ನೆಲೆಯಲ್ಲಿ ಓಡಾಡಿ, ಮಾತಾಡಿ ಅದಕ್ಕೆ ಬರಹದರೂಪ ನೀಡಲು ಆಸಕ್ತಿ ಪರಿಣತಿ ಬೇಕು. ಅದನ್ನಿಲ್ಲಿ ಸಮರ್ಥವಾಗಿ ಲೇಖಕಿ ಸಾಧಿಸಿದ್ದಾರೆ’ ಎಂದಿದ್ದಾರೆ.
ಬೆನ್ನುಡಿಯನ್ನು ಹಿರಿಯ ಪರ್ತಕರ್ತೆ ಅನಿತಾ ಪೈಲೂರ ಅವರು ಬರೆದಿದ್ದಾರೆ. ಸರಳವಾದ ಭಾಷೆ ಆಳವಾದ ಒಳನೋಟಗಳಿರುವ ಲೇಖನಗಳು ಪುಸ್ತಕದಲ್ಲಿವೆ ಎಂದಿದ್ದಾರೆ. ಬೆಂಗಳೂರಿನ ನ್ಯೂ ವೇವ್ ಬುಕ್ಸ ಈ ಪುಸ್ತಕವನ್ನು ಅಂದವಾಗಿ ಪ್ರಕಟಿಸಿದೆ. ತೋಟ ಮತ್ತು ಕೈತೋಟದಲ್ಲಿ ಆಸಕ್ತಿ ಇರುವವರು ನೆಲದ ನಂಟು ಪುಸ್ತಕವನ್ನು ಇರಿಸಿಕೊಂಡರೆ ಕೃಷಿಯ ಹಲವು ಸಮಸ್ಯೆಗಳಿಗೆ ಸುಲಭ ಪರಿಹಾರ ಕಂಡುಕೊಳ್ಳಬಹುದು.

——————


ಲಲಿತಾ ಪಾಟೀಲ

Leave a Reply

Back To Top