ಭಾವ ಬಿಂಬ-ಶ್ರೀದೇವಿ ಯಡಹಳ್ಳಿಮಠ

ಕಾವ್ಯಸಂಗಾತಿ

ಭಾವ ಬಿಂಬ

ಆಲೋಚನೆ ಮೂಡಿಸಿದ ಭಾವ ಬಿಂಬದ ಬಿಂದು

ಶ್ರೀದೇವಿ ಯಡಹಳ್ಳಿಮಠ

ಕಾವ್ಯವು ಒಂದು ಭಾವ ಸಮಷ್ಠಿಯ ಪ್ರಜ್ಞೆಯಾಗಿದೆ.ಸಾಹಿತ್ಯ ಪರಂಪರೆಯಲ್ಲಿ ಮನುಷ್ಯನ ಬದುಕು ಭವಣೆಯ ಆಯಾಮಗಳನ್ನು ಒಳಗೊಂಡಂತೆ ನೇರವಾಗಿ ಬದುಕಿನ ಸಂಕೇತಗಳನ್ನು ಚಿತ್ರಿಸುವುದಾಗಿದೆ.ಬರಹದಲ್ಲಿ ಹೇಳುವುದನ್ನು ಸ್ಪಷ್ಟವಾಗಿ,ಸ್ಫುಟವಾಗಿ,ಧ್ವನಿಪೂರ್ಣವಾಗಿ,ಕಾಯ್ದ ಹಾಲಿನ ಕೆನೆಯನ್ನು ನಯನಾಜುಕಿನಿಂದ ತೆಗೆದಂತೆ ಕಾವ್ಯದ ಎಳೆಯನ್ನು ಸೂಕ್ಷ್ಮಾತಿ ಸೂಕ್ಷ್ಮವಾಗಿ ಆಸ್ವಾದಿಸುತ್ತಾ ಅನುಸಂದಾನದ ಗೇಯ್ಮೆ  ಗೈಯುವುದಾಗಿದೆ.ಅದು ಅಧ್ಯಯನದ ಫಲಶೃತಿಯಾಗಬಹುದು,ಅಥವಾ ಸಾಮಾಜಿಕ,ಕೌಟುಂಬಿಕ ವ್ಯವಸ್ಥೆಯಾಗಬಹುದು,ವ್ಯವಸ್ಥೆಯೊಳಗಿನ ಕೆಲವು ಬಿರುಕುಗಳನ್ನು ಬಿಂಬಿಸುವದಾಗಬಹುದು,ಅಥವಾ  ನಮ್ಮ ಬಾಲ್ಯದಿಂದ ಕಂಡುಕೊಂಡ ಸಿದ್ಧಾಂತಗಳಾಬಹುದು.ಬರೆದಿಡುವ ರೂಡಿಯಾದಂತೆಲ್ಲಾ ಕಾವ್ಯವು ಪ್ರಭಾವ ಬೀರುವುದರಲ್ಲಿ ಎರಡು ಮಾತಿಲ್ಲ.ಬರಹಗಾರರಿಗೆ ಭಾವ ತೀವ್ರತೆಯು ಯಾವತ್ತೂ  ಯಾರೊಂದಿಗೂ ರಾಜಿಯಾಗುವುದಿಲ್ಲ.ಕವಿಗೆ ತನ್ನದೆಯಾದ ಹೊಣೆಗಾರಿಕೆಯಿದೆ.ಬುದ್ಧ,ಮಹಾವೀರ,ಬಸವ,ಅಂಬೇಡ್ಕರ್,ಗಾಂಧಿ,ಸಾಕ್ರಟೀಸ್,ಮಾರ್ಕ್ಸವಾದಿ,ರಾಮಕೃಷ್ಣ ಪರಮಹಂಸರು,ಸ್ವಾಮಿ ವಿವೇಕಾನಂದರು, ಕುವೆಂಪು,ದ.ರಾ.ಬೇಂದ್ರೆ ಇನ್ನೂ ಹಲವಾರು ದಾರ್ಶನಿಕರು,ಚಿಂತಕರು ಈ ಸಮಾಜಕ್ಕೆ ಒಂದು ನಿರ್ದಿಷ್ಟ ರೂಪವನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.ಅದೇ ರೀತಿಯಾಗಿ ಹಲವು ಕವಿಗಳು,ಸಾಹಿತಿಗಳು ಅವರ ನಡೆ ನುಡಿಯನ್ನು ಆದರ್ಶವಾಗಿಟ್ಟುಕೊಂಡು ಬೆಳೆದಿದ್ದಾರೆ.ಮತ್ತು ಬೆಳೆಯುತ್ತಿದ್ದಾರೆ.

ಕಮಲೋ ಕಮಲೋತ್ಪತ್ತಿಹಿ ಎನ್ನುವ ಹಾಗೆ ಕಾವ್ಯವನು ಓದುತ್ತಲೇ ಕಾವ್ಯದೊಳಗೊಂದು ಕಾವ್ಯ ಹುಟ್ಟುತ್ತದೆ.ಹಲವು ಹಿರಿಯರ ಬಲ್ಲವರ ಕಾವ್ಯವನ್ನು ಅರಿತುಕೊಳ್ಳುವಾಗ,ಮನವರಿಕೆ ಮಾಡಿಕೊಳ್ಳುವಾಗ ಆ ಕ್ಷಣವೆ ಪ್ರಶ್ನೆಗಳು ಕಾಣಿಸುತ್ತವೆ.ಅವೇ ಪ್ರಶ್ನೆಗಳ ಬಗೆಯ ಅರಿತರೆ,ಕಾವ್ಯವು ಉತ್ತರವಾಗುತ್ತದೆಂಬ ಅನಿಸಿಕೆ  ಮಾತ್ರ.ಕೆಲವರ ಬರವಣಿಗೆಗಳು ಸಮಕಾಲೀನವಾದರೆ,ಪ್ರಾಯೋಗಿಕವಾದರೆ,ಚಾರಿತ್ರಿಕವಾದರೆ,ಪಠ್ಯಾತ್ಮಕವಾದರೆ, ಸಮುದಾಯದಲ್ಲಿ ಪ್ರಚಾರ ಪಡೆಯಬೇಕು ಎಂಬುದೇನೂ ಇಲ್ಲ.ವಿಚಾರಧಾರೆ ಮಂಡಿಸುವುದು ಪ್ರತಿಯೊಬ್ಬ ಲೇಖಕನ ಪ್ರಯತ್ನ ಮತ್ತು ಕರ್ತವ್ಯವಾಗಿದೆ.

ಹವ್ಯಾಸಿ ಬರಹಗಾರರಾದ ನಮಗೆ,ನಮ್ಮ ಹಿರಿಯರ ಸಾಹಿತಿಗಳ ಬೆನ್ನ ಹಿಂದೆ ನಾವಿದ್ದೇವೆ.ಅವರು ಉಸಿರಾಡಿ ಬಿಟ್ಟ ಗಾಳಿಯನ್ನು ನಾವು ಸೇವಿಸುತ್ತಿದ್ದೇವೆ.ಅವರು ಬರೆದುಳಿಸಿದ ಕಾವ್ಯಾತ್ಮಕ ಸಾಲುಗಳನ್ನು ನಾವು ಮೆಲುಕು ಹಾಕಿದ ತರುವಾಯ ನಾವು ಬರಹ ರೂಡಿಸಿಕೊಳ್ಳಲು ಯತ್ನಿಸಿದ್ದೇವೆ.ನಮ್ಮ ದಾರ್ಶನಿಕರು ಹೆಜ್ಜೆ ಇಟ್ಟ ನೆಲದಲ್ಲಿ ನಾವು ಅಂಬೆಗಾಲಿಡಲು ಕಲಿತಿದ್ದೇವೆ.ಅವರು ಅಭಿಪ್ರಾಯಪಟ್ಟ ಮಾತುಗಳನ್ನೆ ನಾವು ಓದಿಕೊಳ್ಳುತ್ತಾ,ಅವರದೇ ಭಾವಗಳನ್ನು ಮತ್ತೆ ಮತ್ತೆ ಮೆಲುಕುಹಾಕುವಲ್ಲಿ, ವಿಭಿನ್ನಪಡಿಸುವಲ್ಲಿ ನಾವುಗಳು ಜೀವನವಿಡೀ ಅಧ್ಯಯನದಲ್ಲಿ ತೊಡಗಿದ್ದೇವೆ.ಅವರ ಅನುಯಾಯಿಗಳಾದ ನಮಗೆ ಕಲಿಕೆಯಾಗಿದೆ ಎಂದರೆ ನಿರಾಶೆಯಾಗಲಿಕ್ಕಿಲ್ಲ.

ಎಂಭತ್ತರ ದಶಕದಿಂದೀಚೆಗೆ ಲೆಕ್ಕವಿಲ್ಲದಷ್ಟು ಕೃತಿಗಳು ಕನ್ನಡ ಸಾಹಿತ್ಯ ಲೋಕದೊಳಗೆ ಲೀನವಾಗಿವೆ.ಕನ್ನಡ ಓದುಗರು ಸಹ ತುಂಬಾ ಆಪ್ತವಾಗಿ ಸ್ವೀಕರಿಸಿದ್ದಾರೆ.ಕನ್ನಡದ ಸಾಹಿತಿಗಳು,ಕವಿ ಕವಯಿತ್ರಿಯರು,ಚಿಂತಕರು ಹಲವಾರು ವಿಷಯ ವಸ್ತುಗಳ ವಿಚಾರದಲ್ಲಿ ಆಳವಾಗಿ ಪ್ರಭಾವಿತರಾಗಿದ್ದಾರೆ.ಕಾವ್ಯ,ಕಥೆ,ಕಾದಂಬರಿ ,ವೈಚಾರಿಕ,ಸಾಹಿತ್ಯಿಕ,ಐತಿಹಾಸಿಕ ಸಂಶೋಧನೆ,ಧಾರ್ಮಿಕ,ರಾಜಕೀಯ,ಮತ್ತು ದಾಸಸಾಹಿತ್ಯ, ಶರಣಸಾಹಿತ್ಯ,ಜಾತಿ ಜನಾಂಗಗಳ ಕುರಿತಾಗಿ ಕನ್ನಡ ಭಾಷೆಯಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲದೆ ಭೇದ ಭಾವಗಳಿಲ್ಲದೆ  ಅಡೆತಡೆಗಳಿಲ್ಲದೆ ಪ್ರಕಟಣೆಗೊಂಡಷ್ಟು ಪುಸ್ತಕಗಳು ಇನ್ನಿತರ ಯಾವುದೆ ಭಾಷೆಯಲ್ಲಿ ಬಂದಿಲ್ಲ ಎನ್ನಬಹುದು.ಈ ನೆಲದ ಎಲ್ಲಾ ಅನುಭವಿಗಳ ಅನುಭವಕ್ಕೆ ದಕ್ಕಿದ ವಿಷಯ ವಸ್ತುಗಳ ಒಳನೋಟಗಳು ಕನ್ನಡ ಭಾಷೆಯ ಒಲವು ಅಭಿಮಾನದೊಂದಿಗೆ ತಮ್ಮದೆ ಚಾಪು ಮೂಡಿಸಿದ್ದಾರೆ.

ಒಂದು ಕಾಲದಲ್ಲಿ ಅಲಂಕಾರ,ಛಂದಸ್ಸು ಇರದಿದ್ದರೆ ಪ್ರಜ್ಞೆಯಿಲ್ಲದವರು ಎಂದೂ,ಅನರ್ಥವೆಂದೂ,ಬರಹದ ನಿಯಂತ್ರಣವಿಲ್ಲದವರೆಂದು ಸ್ಪಷ್ಟವಾಗಿ ಹೇಳುತ್ತಿದ್ದರು.ಬರು ಬರುತ್ತಾ ಕನ್ನಡವು ನವ್ಯೇತರವಾಗಿ,ನಿಚ್ಚಳವಾಗಿ,ಸುಂದರವಾಗಿ, ಸ್ಮೃತಿ,ಅನುಭವ,ರೂಪಕ,ಪ್ರತಿಮೆಗಳೊಂದಿಗೆ ಹೇಳಬೇಕಾಗಿರುವುದನ್ನು ಶಬ್ದಗಳಲ್ಲಿ ಹಿಡಿದಿಡುವ ಮನಸ್ಥಿತಿಯು ಸೃಜನಾತ್ಮಕವಾಗಿ ಕ್ರಿಯೆಯಿಂದ ಕ್ರಿಯೆಗೆ ಸಾಗುತ್ತಾ ಬಂದು ಸಹಜ ಸ್ಪೂರ್ತಿಯತ್ತ ಕನ್ನಡ ಸಾಹಿತ್ಯವು ವ್ಯತ್ಯಾಸ ಕಾಣುತ್ತ ಬದಲಾವಣೆ ಕಂಡಿದೆ.ಈ ನೆಲೆಯಲ್ಲಿ ಓದುಗರಾದ ನಾವುಗಳು ಕೇವಲ ಶಬ್ದಗಳನ್ನಷ್ಟೆ ಗ್ರಹಿಸದೆ,ಶಬ್ದಗಳಾಚೆಗೂ ಆಡುವ ಮಾತಿನ ಕಾವ್ಯದ ಹಿಂದಿರುವ ತೀವ್ರತೆಯನ್ನು  ಗಮನಿಸಿ ಅಸ್ವಾದಿಸಬೇಕಾಗುತ್ತದೆ.ಈ ದೃಷ್ಟಿಯಲ್ಲಿ ಒಬ್ಬ ಬರಹಗಾರರ ಆಲೋಚನೆ ಅರಿಯುವ,ಅವಲೋಕಿಸುವ,ತರ್ಕಿಸುವ,ಚಿಂತಿಸುವ ಮೂಲಕ ವಿಚಾರವನ್ನು ಕಂಡುಕೊಳ್ಳುವುದು ಅವರವರ ಅಧ್ಯಯನ ಅನುಭವ ಮತ್ತು ಗ್ರಹಿಕೆಗೆ ಮೀರಿದ್ದಾಗಿದೆ.

ಒಂದು ಕೃತಿಯನ್ನು  ಅರಿತುಕೊಳ್ಳಲು,ಸ್ಥಿತಿಗತಿಯನ್ನು  ಪರಿಶೀಲಿಸಿ ಅಭಿಪ್ರಾಯ ವ್ಯಕ್ತಪಡಿಸಬೇಕಾದರೆ ಓದದೇ ಬರೆಯಲಾಗುವುದಿಲ್ಲ. ಅವಲೋಕನ ಮಾಡುವುದೆಂದರೇನು? ಎಂಬ ಮಾತಿಗೆ ಅನುಭವ ಪರಧಿ ಎಂದರೂ ತಪ್ಪಿಲ್ಲ.ನಮ್ಮೊಳಗೆ  ನಮ್ಮದೆಯಾದ ಭಾವ ಬಿಂಬಗಳಿವೆ.ನಮ್ಮ ಚಿಂತನೆಯ ಒಂದು ಭಾಗವೂ ಆಗಿದೆ.

ಮೂಲತಃ ಶ್ರೀದೇವಿ ಯಡಹಳ್ಳಿಮಠ (ವಾಣಿ) ಯವರು ದಿll ದಿನ್ನಿಮಠದ ಸೂಗವೀರಯ್ಯ ಶರ್ಮಾ ಕನ್ನಡ ಪಂಡಿತರು,ಹಿರಿಯ ಸಾಹಿತಿಗಳು,ಮತ್ತು ವಿಮರ್ಶಕರು,ಹಮ್ದರ್ದ್ ಕಾಲೇಜಿನ ಕನ್ನಡ ಪಂಡಿತರ  ಮೊಮ್ಮಗಳು.ಹುಟ್ಟಿದಾಗಿನಿಂದಲೂ ಕನ್ನಡ ಸಾಹಿತ್ಯದ ಕಳ್ಳು ಬಳ್ಳಿಯ ನಂಟಿಟ್ಟುಕೊಂಡು ಬೆಳೆದವರಾಗಿದ್ದರಿಂದ ಸಾಹಿತ್ಯವು ಬಳುವಳಿಯಾಗಿ ಸೂಕ್ಷ್ಮ ಸಂವೇದಿಯಾಗಿ  ರಕ್ತಗತವಾಗಿ ಬೆಳೆದು ಬಂದಿದೆ ಎನ್ನಬಹುದು. ಶ್ರೀದೇವಿ ಯಡಯಳ್ಳಿಮಠ (ವಾಣಿ) ಯವರು ಬರೆದ ಕಾಲವು ತೀರಾ ಹಳೆಯದು.ಪುಸ್ತಕ ರೂಪದಲ್ಲಿ ಈಗ ಮಾತ್ರ ಪ್ರಕಟವಾಗಿದೆ.ಆಯಾ ಕಾಲಮಾನದಲ್ಲಿ ಪ್ರಕಟಗೊಂಡಿದ್ದರೆ,ಪ್ರಾಮುಖ್ಯತೆ ಹೆಚ್ಚುತ್ತಿತ್ತು.ಕನ್ನಡ ಕಾವ್ಯದ ಇತಿಹಾಸವು ವರುಷದಿಂದ ವರುಷಕ್ಕೆ ಬದಲಾವಣೆಯಾಗುತ್ತಿರುತ್ತದೆ ಎನ್ನುವುದು ಕವಯಿತ್ರಿ ಶ್ರೀದೇವಿ ಯಡಹಳ್ಳಿಮಠ (ವಾಣಿ)ಯವರಿಗೆ ತಿಳಿದರೂ,ನವೋದಯ ಕಾವ್ಯಲೋಕದೊಳಗೆ  ಪ್ರವೇಶಿಸುವುದು ತುಸು ವಿಳಂಬ ಮಾಡಿದ್ದಾರೆ ಎನ್ನಬಹುದು.ನವೋದಯ ಕಾಲದ ಕನಸುಗಾರಿಕೆ  ಪ್ರೀತಿ,ಪ್ರೇಮ,ಬದುಕಿನ ಮಗ್ಗಲುಗಳು,ಹಲವಾರು ಮಜಲುಗಳು,ಪ್ರಗತಿಶೀಲ ಬರವಣಿಗೆಯನ್ನು ಅವರು ಗಮನಿಸಿದರೂ,ತಮ್ಮ ಪ್ರತಿಭೆಯನ್ನು ತಾವೇ ಗುಪ್ತವಾಗಿರಿಸಿದ್ದಾರೆ.ಅಷ್ಟೇ ಅಲ್ಲ.ಈ ಕೃತಿಯ ಕವಿತೆಗಳು ಪ್ರೀತಿಯ ಮುಗ್ಧಲೋಕವನ್ನು  ತಲುಪುವಲ್ಲಿ ತೀರಾ ನೀರಸವಾಗಿವೆ ಎಂದು ತಮಗೆ ತಾವೇ  ಮುಚ್ಚಿಟ್ಟಿದ್ದರಂತೆ.ಪ್ರೇಮವೆಂಬುದು ಶಬ್ದವೆ.ಪ್ರೀತಿಯೆಂದರೆ ಚಿಂತನೆಯೆ.ಭಾವವೆಂದರೆ ಶಬ್ದದ ಸಂಗತಿಯೆ.ಶಬ್ದವಿರದ ಸಾಲುಗಳನ್ನು  ಕವಿತೆಯೆಂದು  ಯಾರೂ ಹೇಳುವದಿಲ್ಲ. ಕೊನೆಗೆ ಓರ್ವ  ಪರಿಚಯಸ್ಥ ಪ್ರಕಾಶಕರ ಸಹಾಯದಿಂದ  ಕವಿತೆಗಳ ಸ್ಥಿತಿಗತಿಗಳು ಮತ್ತು ಶಬ್ದಗಳ ಸತ್ಯವನ್ನು  ಬಹುಮಟ್ಟಿಗೆ  ಭಾವ ಬಿಂಬ ಕೃತಿಯ ಮೂಲಕ ಸಾಹಿತ್ಯಲೋಕವನ್ನು ಸೇರಿಕೊಳ್ಳುವಲ್ಲಿ ಪ್ರಕಾಶಕರು ಸಹಾಯ ಮಾಡಿದ್ದಾರೆ ಎಂದು  ಹೇಳಬಹುದು.

ಭಾವ ಬಿಂಬ ಕವನ ಸಂಕಲನದ ಆಳಕ್ಕಿಳಿದು ಬೇರುಗಳು ಒಳಗಿಳಿದಿವೆಯೋ……ಹುದುಗಿವೆಯೋ….ಎಂಬುದನರಿಯಲು ಹೋಗುವುದಿಲ್ಲ.ಈ ಕೃತಿಯೊಳಗಿನ ಪ್ರೇಮ ಝರಿಗಳ ನಿನಾದವನು ಅಸ್ವಾದಿಸಿದ್ದೇನೆ.ಈ ನಾದದ ಬಿಂಬವು ನಿರಂತರವಾಗಿ ಪ್ರೇಮದ ಮೇಲಿನ ಗಾಯವನು ಮರೆತು ಸುಲಭವಾಗಿ ಮನದಲ್ಲುಳಿಯುವಂತೆ ಮುಗ್ಧತೆಯ ಶಬ್ದಗಳೊಂದಿಗೆ ಉತ್ಸಾಹ  ತುಂಬಿಕೊಂಡು ಪ್ರಥಮ ಸಂಕಲನ ನೀಡಿದ್ದಾರೆ. ಭಾವ ಬಿಂಬ ಈ ಕೃತಿಯ ಹೆಸರೇ ಹೇಳುವಂತೆ ಕೆಲವು ಭಾವನೆಗಳನ್ನು ಸುಸ್ಪಷ್ಟವಾಗಿ ತರಲಾಗದಿದ್ದರೂ ಸರಳತೆಯಲ್ಲಿ ಕಾವ್ಯದ ಪ್ರಯೋಗಗಳನ್ನು ಹೇಳುವುದು ಯುಕ್ತವೆನಿಸುತ್ತದೆ.

ಬಿತ್ತಿದ್ದು ಬೆಳೆಯಂತಿದೆ

ಬೆಳೆದದ್ದು ಕೈಸೇರದಂತಿದೆ

ಕಟ್ಟಿದ ಮನೆಗೂ

ಮಳೆ ಭಾರವೆನಿಸಿದಂತಿದೆ

ಕಟ್ಟಿದ ಕನಸಿಗೂ,

ಮಳೆ ಕಷ್ಟ ತಂದಂತಿದೆ

ಮುದ ನೀಡುವ-

ಮಳೆಯೇಕೋ….

ಮುನಿಸಿಕೊಂಡಂತಿದೆ

ಈ ಕಾವ್ಯದ ಸಾಲುಗಳನ್ನು ನೋಡಿದಾಗ ಪ್ರಕೃತಿಯ ವೈಪರಿತ್ಯವನ್ನು ಪರಿಹರಿಸುವವರಾದರು ಯಾರು? ಬಡ ರೈತನಿರಲಿ.,ಬಲ್ಲಿದ ರೈತನಿರಲಿ.ಬಿತ್ತಿ ಬೆಳೆದ ಪೈರು ಸಕಾಲದಲ್ಲಿ ಕೈ ಸೇರುವ ಸಮಯದಲ್ಲಿ ಕೆಡುಗಾಲವೆಂಬಂತೆ ವಿಪರೀತ ಮಳೆ ಸುರಿದು,ದುಃಖಕ್ಕೆ ರಾಹು  ಕೇತುವಾದ ನಿಸ್ಸಾರ ಬದುಕು ನೀಡುವ ಪ್ರಕೃತಿಯ ವಿಕೋಪಕ್ಕೆ ಕಾರಣವಾಗುವ ವಿಷಯವನ್ನು ಕವಯಿತ್ರಿಯವರು ತಮ್ಮ ಕಾವ್ಯದಲ್ಲಿ ಅಸಹನೀಯವಾದ ಸಮಸ್ಯೆಯನ್ನು ತೆರೆದಿಟ್ಟಿದ್ದಾರೆ.ನಿಸರ್ಗದ ರುದ್ರ ನರ್ತನಕ್ಕೆ ಬಲಿಯಾದ ರೈತಾಪಿ ವರ್ಗದವರ ಬದುಕು ಭವಣೆಯು ನಿತ್ಯಜೀವನದಲ್ಲಿ ಬಾಧಕವಾಗುವ ಬರ್ಬರ ದಿನಗಳ ಕುರಿತು ಅತೀ ಸರಳತೆಯಲ್ಲಿ ಭಯಗ್ರಸ್ತವನ್ನು ವ್ಯಕ್ತಪಡಿಸಿದ್ದಾರೆ.

ತೇಲುವ ಮೋಡಗಳು ಎಂಬ ಕವಿತೆಯಲ್ಲಿ

ಅನುರಾಗ ನೀಡಲು

ನಡೆದಿಹವೋ ಏನೋ?

ನೋವು ನೀಗಿಸಲು

ನಡೆದಿಹವೋ ಏನೋ?

ಬಾಂಧವ್ಯ ಬೆಸೆಯಲು

ನಡೆದಿಹವೋ ಏನೋ?

ಅಂತರವ ಅಳಿಸಲು

ನಡೆದಿಹವೋ ಏನೋ?

ಕವಿತೆಗೆ ಮುಖ್ಯವಾಗಿ ಬೇಕಾಗಿರುವುದು ಕಲ್ಪನಾಶಕ್ತಿ. ಈ ಕವಿತೆಯಲ್ಲಿ  ಪ್ರಕೃತಿಯ ವಾಸ್ತವವನ್ನು ಅರಿಯಬಹುದಾಗಿದೆ.ಪ್ರಕೃತಿಯು ಯಾವತ್ತೂ ಹೊಸದಾಗಿರುತ್ತದೆ.ನಿತ್ಯವೂ ನಿಸರ್ಗದ ಸೌಂಧರ್ಯ ನೋಡುವ,ಅನುಭವಿಸುವ ಸಮಯ ವಿಭಿನ್ನವೇ ಸರಿ.ಸೂರ್ಯ,ಚಂದ್ರ,ತಾರೆಗಳು,ಭುವಿ,ಮಿಂಚು,ಗುಡುಗು,ಸಿಡಿಲು,ಮೋಡ,ಮಳೆ,ಗಾಳಿ ಇವುಗಳೆಲ್ಲವುದರ ಅಸ್ತಿತ್ವನು ಮುಂಚೆಯಿಂದ ನಮಗೆ  ಅರಿವಾಗುವುದಿಲ್ಲ.ಪ್ರಕೃತಿಯ ಇರುವಿಕೆಯಲ್ಲಿ ನಾವಿದ್ದೇವೆ ಎಂಬ ಸೂಕ್ಷ್ಮ ಪರಿಕಲ್ಪನೆ ಸಹ ಮರೆಯುತ್ತೇವೆ.ವರ್ತಮಾನ ಕಾಲದ ವಿಚಾರಗಳನ್ನು ತುಂಬಿಕೊಂಡು ಬೀಜವು ನೆಲದೊಳಗೆ ಬಿದ್ದು,ಮಳೆ ಬರದೆ ಮಣ್ಣಿನಲ್ಲಿಯೆ ಸತ್ತು ಹೋದರೆ ಹೇಗೆ…..‌? ಎನ್ನುವತನಕ ಕಾಳಜಿಯು ಕವಯಿತ್ರಿಯವರಿಗಿದೆ.ಇಲ್ಲಿನ ವಿಚಾರವು ಆಳವಾಗಿ ಹೊಕ್ಕಿದೆ. ಆಗಸವು ಕಪ್ಪಿಟ್ಟು,ಹೆಪ್ಪಾಗಬೇಕು  ಆದರೆ….ಮೋಡಗಳು ತೇಲುತ್ತಾ ಪಲಾಯನ ಮಾಡುತ್ತಿವೆ.ಪ್ರೀತಿಯಿಂದ ತುಂತುರ ಮಳೆ ಸುರಿಯುತ್ತಿದೆಯೋ…? ಹಸಿರಾಗಲು ಬಾಂಧವ್ಯ ಬೆಸೆಯುತ್ತದೆಯೋ…? ಅಥವಾ ಭಾವಾವೇಶಕ್ಕೊಳಗಾಗಿ ಬದುಕನ್ನು ಅಳಿಸಲು ಹೊರಟಿದೆಯೋ..? ಗುಡುಗು ಮಿಂಚಿನ ಸಂಚು ಆರ್ಭಟಿಸುವ ತರಾತುರಿಯಲ್ಲಿವೆ.ನೋವು ನೀಡಲು ಕಾತರಿಸುತ್ತಿವೆಯೋ…? ಎಂದು ವರ್ತಮಾನದ  ನಂಬಿಕೆಯಲ್ಲಿ ಎಚ್ಚರ ವಹಿಸುತ್ತಾರೆ.

ಹಗಲಿರುಳು ನೀ ಜೊತೆಗಿರಲು

ನನಗಿನ್ನೇನು ಬೇಕು?

ಹೊಂಗನಸೇ

ಕಣ್ಣೆದುರಿರುವಾಗ

ಕಂಗಳಿಗಿನ್ನೇನು ಬೇಕು?

ಪ್ರೀತಿಯೆಂದರೆ ಹೀಗೆ. ಒಂದು ಮಾತಿಗೆ,ಇನ್ನೊಂದು ಮಾತು ಸೇರಿಸಿ ಹಗುರಾಗುವುದು.ಅಭಿವ್ಯಕ್ತಿಸುವಲ್ಲಿ ರೋಮ್ಯಾಂಟಿಕ್ ಶಕ್ತಿಯಿದೆ ಎನ್ನಬಹುದು.ಹಗಲಿರುಳು ನೀ ಜೊತೆಗಿರಲು ನನಗಿನ್ನೇನು ಬೇಕು ಎಂದು ಹೇಳುವಲ್ಲಿ ಎದೆಯ ಕೊಳದಲ್ಲಿ ಮನಸ್ಸಿನ ವೇಗವು ಮೀನಿನಂತೆ ಈಜಾಡುತ್ತದೆ.ಪ್ರೀತಿಯಲ್ಲಿನ ಆಶಾ ವಾದವು ಗೆಲ್ಲುತ್ತದೆ.ಹೊಂಗನಸೇ ಕಣ್ಣೆದುರಿರುವಾಗ ಕಂಗಳಿಗಿನ್ನೇನು ಬೇಕು ಎನ್ನುವ ಸಾಲುಗಳು ಪ್ರೀತಿ ಪುಳಕಿತಗೊಂಡಿದೆಂಬ ಸ್ಪಷ್ಟ ಚಿತ್ರವೊಂದನ್ನು ನೀಡುತ್ತದೆ.

ನೀ ಒಪ್ಪಿದರೆ…

ನಾ ಕನಸಾಗಿ….

ನಿನ್ನ ಕಣ್ಣ ಸೇರಲೆ ?

ನೀ ಒಪ್ಪಿದರೆ….

ನಾ ಬಯಕೆಯಾಗಿ….

ನಿನ್ನ ಮನಸ ಸೇರಲೆ..?

ನೀ ಒಪ್ಪಿದರೆ….

ನಾ ದನಿಯಾಗಿ….

ನಿನ್ನ ಕೊರಳ ಸೇರಲೆ..?

ನೀ ಒಪ್ಪಿದರೆ…..

ಎದೆ ಬಡಿತವಾಗಿ…

ನಿನ್ನ ಹೃದಯ ಸೇರಲೆ?

ಪ್ರೀತಿಗೆ ಬಹುದೊಡ್ಡ ಸಾಂಗತ್ಯದ ಅಗತ್ಯವಿದೆ.ಇದೊಂದು ಅನನ್ಯತೆಯ ನಿವೇದನೆಯಾಗಿದೆ.ಪ್ರೀತಿಯ ಮಾತುಕತೆಗಳಲ್ಲಿ  ಪ್ರಶ್ನೆಗಳು ಗುರುತರ ಮಧ್ಯಸ್ಥಿಕೆವಹಿಸಿದಾಗ ಪ್ರೀತಿಯು , ಸಾಂಕೇತಿಕ ಆಯಾಮ ಪಡೆಯುತ್ತದೆ.ಪ್ರೀತಿ ಪ್ರೇಮದ ಅನುಭವ ಪ್ರಮಾಣದ ಕವಿತೆ ಬರೆಯಲು ಧ್ಯಾನಸ್ಥ ಸ್ಥಿತಿ ಬೇಕು.ಇಲ್ಲಿ ಪ್ರೀತಿ ಎನ್ನುವುದು ಒಂದು ಕನಸು,ಹಂಬಲ.ಯಾವಾಗಲೂ ಹೃದಯ ಬಡಿತದ ಎಣಿಕೆಯಲ್ಲಿ ನಿರತವಾಗಬೇಕೆಂಬ ಲೇಖಕಿಯರ ನಿರ್ಧಾರವಾಗಿದೆ.ಸಾಹಿತ್ಯ ಪರಂಪರೆಯಲ್ಲಿ ಮೊದ ಮೊದಲು ಪ್ರೀತಿ ಪ್ರೇಮದ  ಕವಿತೆಗಳಿಂದ ಬರೆಯುತ್ತಾ ಸತ್ವದ ಸಾರ ನೀಡುವತನಕ ನಮ್ಮ ಹಿರಿಯರು  ಬೆಳೆದಿದ್ದಾರೆ. ಭಾವ ಬಿಂಬ ಕವನ ಸಂಕಲನದೊಳಗೆ ಶ್ರೀದೇವಿ ಯಡಹಳ್ಳಿಮಠ  (ವಾಣಿ) ಯವರು ಕಾವ್ಯದ ಬಗೆಗಿನ  ಅನೇಕ ಕಲ್ಪನೆಗಳು ನಯ ನಾಜೂಕ ಭಾಷೆಯಲ್ಲಿ ಉತ್ಕಟ ಪ್ರೇಮ ಚಿಗುರಿಸುವ ಹೊಸ ನಿಲುವುಗಳನ್ನು ಬಿತ್ತರಿಸಿದ್ದಾರೆ.

ವಿರಹದ ವೇದನೆಯು

ನಿನಗೂ ತಿಳಿಯುತ್ತಿತ್ತು

ನೀ ನನ್ನನ್ನೊಮ್ಮೆ

ತಿರುಗಿ ನೋಡಬೇಕಿತ್ತು

ಈ ಅನುರಾಗವ ಅನುಭವಿಸಿ ಹೋಗಬೇಕಿತ್ತು

ನೀ ನನ್ನನ್ನೊಮ್ಮೆ ತಿರುಗಿ ನೋಡಬೇಕಿತ್ತು

ತೀರದ ಈ ದಾಹವ ತೀರಿಸಿ ಹೋಗಬೇಕಿತ್ತು

ಸ್ತ್ರೀ ಕೇಂದ್ರಿತ ಪ್ರೀತಿಯ ಮಾತುಗಳು,ಬದುಕಿನ ಸಂಬಂಧಕಲ್ಪಿತವಾಗುತ್ತವೆ.ಕಾವ್ಯದ ಮಾತಿನೊಳಗೆ ವಿಷಾದದ ಅಭಿವ್ಯಕ್ತಿಯು ಅತೀ ವಾಸ್ತವದ ಹೇಳಿಕೆಯಾದರೂ,ಆ ಮಾತುಗಳು ಆಕಾಶದ ತುಂಬಾ ತಿರುಗಾಡಿ ಅಲ್ಲಲ್ಲಿ ಸುತ್ತುವರೆದು ನೆಲೆ ಕಾಣದೇ ಮತ್ತೆ ನೆಲಕ್ಕಿಳಿದಂತಿವೆ ಸಾಲುಗಳು.ಗ್ರಹಿಕೆಗಳು ಸಂಬಂಧಕಲ್ಪಿತ ಮತ್ತು ಚಿಂತನೆಗಚ್ಚುವ ಪ್ರೀತಿಯ ಗುನುಗು ನುಡಿಗಳಾಗಿ ಕವಿತೆಯಲ್ಲಿ ಕಾಡಿವೆ. ಒಂದು ಮಾತು ಇನ್ನೊಂದನ್ನು ಕಲ್ಪಿಸುವುದು ಪ್ರೀತಿ ಕವಿತೆಯ ಪ್ರಧಾನವಾಗಿದೆ.

“ಈ ಅನುರಾಗವ ಅನುಭವಿಸಿ ಹೋಗಬೇಕಿತ್ತು.,ನೀ ನನ್ನನ್ನೊಮ್ಮೆ ತಿರುಗಿ ನೋಡಬೇಕಿತ್ತು.,ತೀರದ ಈ ದಾಹವ ತೀರಿಸಿ ಹೋಗಬೇಕಿತ್ತು”ಎನ್ನುವುದು ಗದ್ಯವಾಗಿದೆ.ನೋವು ನುಂಗುತ್ತಾ ಅಹ್ವಾನಿಸುವ ಹಿರಿಮೆಯು ಮತ್ತೆ…ಮತ್ತೆ……ಒಂದುಗೂಡುಕಟ್ಟುವ ಗುಣವೂ ನೋವಿನಲ್ಲಿ ತೀವ್ರ ಯಾತನೆ ಸಹಿಸುತ್ತಾ ಗುರುತಿಸಿಕೊಂಡಿದೆ.ಬರವಣಿಗೆಯುದ್ದಕ್ಕೂ ಬದುಕಿನ ಸಹನೆಯ ಭಾಗವನ್ನು ಕಳೆದುಕೊಳ್ಳಬಾರದು ಎನ್ನುವ ದೃಷ್ಟಿಕೋನವಿದೆ.ಇಂತಹ ಸೂಚನೆಗಳಿಂದಾದರೂ ಪ್ರೀತಿಯು ಉಸಿರು ಹಿಡಿದಿರಲಿ ಎನ್ನುವ ಮುಗ್ಧತನ  ಲೇಖಕಿಯರ ಬರವಣಿಗೆಯಲ್ಲಿ  ಕಾಣುತ್ತದೆ.

ನಿನ್ನ ಪುಸ್ತಕದಲ್ಲೊಂದು

ಪ್ರಕಟವಾಗಿಸಿಬಿಡು ಎನ್ನ;

ನಿನ್ನ- ಕವಿತೆಯಲ್ಲೊಂದು

ಪದವಾಗಿಸಿಬಿಡು

ಎನ್ನ

ಕವಯಿತ್ರಿಯವರ ಮನಸ್ಸು ಹಾಗು ಅಸ್ಮಿತೆ ಶಾಂತವಿರುವಾಗ “ನನಗೆ ಅನುಭವ ಬೇಕು.,ನನಗೂ ಸಂತಸದ ಚಲನೆ ಬೇಕು” ಎಂದು ಶಾಂತಸ್ಥಿತಿಯಲ್ಲಿ ಅವಕಾಶ ಕೋರಿದಂತಿದೆ.

ಭಾವನಾತ್ಮಕವಾಗಿ  ಬಯಕೆಯು ಪರಸ್ಪರ ಅಂಟಿಕೊಂಡಿರುತ್ತದೆ.ಅದು ಯಾವಾಗ ಒಂಟಿ ಎಂದೆನಿಸಿದಾಗ ಅತೃಪ್ತಿಯ ಅನೇಕ ಸಂಗತಿಗಳನ್ನು ವಿಸ್ತರಿಸುತ್ತದೆ.ಪ್ರಿಯಕರನ ಪ್ರೀತಿಯಲ್ಲಿ ಸಾಂಗತ್ಯ ಬಹಿರ್ಮುಖವಾದರೆ ಖಾಲಿ ಮನದೊಳಗೆ ಖಯಾಲಿ ಆವರಿಸುತ್ತದೆ.ಸ್ತ್ರೀ ಮನಸ್ಸು ತೀರಾ ಮೃದುವಿದ್ದದರಿಂದ,ನಿರ್ಬಂಧಿತ ನಿಲುವುಗಳನ್ನು ಅನಿವಾರ್ಯವಾಗಿ ಸ್ವೀಕರಿಸಿ ಭಾವಲೋಕದ ತೀರದಲ್ಲಿ ತಿರುಗಾಡಲಾರಂಬಿಸುತ್ತದೆ. ಕವಯಿತ್ರಿಯವರು ಆಶಾವಾದಿಗಳಾಗಿದ್ದಾರೆ.ಎಲ್ಲಾ ಹೇಳಿಕೆಗಳನ್ನು ಗಮನಿಸಿದಾಗ ಸಂಸಾರ ಸಾಗರದಲ್ಲಿ ಈಜಿ ದಡವ ತಲುಪುವ ಯತ್ನದಲ್ಲಿ ತುಸು ಒಳಹೊಕ್ಕು, ಚಿತ್ರಣ ಕೊಡುವ ವಾಸ್ತವ ಸ್ಥಿತಿಗಳು ಯಥೇಚ್ಛವಾಗಿ ಓದಲು ಲಭಿಸುತ್ತವೆ.

ತನು ಸೋಲದೆ….?

ನಿನ್ನ ಗೆಲ್ಲಲಾರೆನೆಂದೆನಿಸಿ-

ನನ್ನ ತನು- ಒಪ್ಪಿಸಿದೆನಲ್ಲ

ಕನಸುಗಳು ಸೋಲದೆ?

ನಿನ್ನ ಸಂತಸ-

ಸವಿಯಲಾರೆನೆಂದೆನಿಸಿ

ನನ್ನ ಕನಸುಗಳ-

ಒಪ್ಪಿಸಿದೆನಲ್ಲ

ಕೌಟುಂಬಿಕ ಜವಬ್ದಾರಿ ಹೊರುವ ಹೊಣೆಗಾರಿಕೆ ಬಹು ದೊಡ್ಡದು.ಮೀರಿದ ತರ್ಕಗಳಿಗೆ ಮಾತಿಗೆ ಮಾತು  ಬೆಳೆಸಬಾರದು.ಪುರುಷ ನಿರ್ಮಿತ ಚೌಕಟ್ಟುಗಳನ್ನು ದಾಟಿ,ತಮಗೆ ತಾವೇ ಅಕ್ಷರದೊಳಗೆ ವೃತ್ತವನ್ನೆಳೆದುಕೊಂಡು ಅಭಿವ್ಯಕ್ತಿಸುವ ಪರಿಗೆ ,ಸಾಂಸ್ಥಿಕ ನೆಲೆಯನ್ನು,ಅನುಭೂತಿ ಪದಗಳಲ್ಲಿ ಸಮಸ್ಯೆಯ ಎಳೆಗಳನ್ನು ಜೀವನ ಕ್ರಮವನ್ನು,ಮತ್ತು ಮಗ್ಗಲನ್ನು ಸೂಚಿಸಿದ್ದಾರೆ. ಒಂದರ ಮೇಲೊಂದು ಪರಸ್ಥಿತಿಗಳು ಕೆದಕಿದಾಗ ಪ್ರೀತಿಸುವ ಹಳಸಳಸು ಮುಖವಾಡವು ಆತ್ಮಾಭಿಮಾನಕ್ಕೆ ನೋವು ತರಿಸುತ್ತದೆ.ಸ್ತ್ರೀ ವಾದದ ಮನದಲ್ಲಿ ಎಚ್ಚರದ ಚಿಂತನೆಗಳು ಸೂಕ್ಷ್ಮ ಸವಾಲಿಗೆ ಪ್ರತಿಭಟಿಸುತ್ತದೆ.ಈ ಕುರಿತು ನಿರ್ಲಕ್ಷ್ಯದ  ಸ್ವಭಾವದ ಸಂಕೇತವನ್ನು ಕವಯಿತ್ರಿಯವರು ಬಹು ಜಾಣತನದಿಂದ ತಮ್ಮ ಸಾಹಿತ್ಯ ಪ್ರವೃತ್ತಿಯಲ್ಲಿ ನಿರೂಪಿಸಿದ್ದಾರೆ.

ತುಟಿ ಬಿಚ್ಚದೇ

ಮನ ಬಿಚ್ಚಿಡುವ

ಕಲೆಯೊಂದು

ಕಲಿಯಬೇಕಿದೆ

ಮಾತಾಡದೇ-

ಮಾತಾಡುವ ಕಲೆಯೊಂದು

ಕಲಿಯಬೇಕಿದೆ

ತೀರಾ ಸರಳ,ನೈಜ ಚಿತ್ರಗಳ  ವಿಶೇಷತೆಯುಳ್ಳ ಕಾವ್ಯದ ತಾತ್ಪರ್ಯವು ಬಯಕೆಗಳ ಬಿತ್ತನೆಯಾಗಿವೆ.

ಬದುಕ ಕನಸಿನ ದಾರಿಯಲ್ಲಿ ಅದೆಷ್ಟು ಹೇಳಿದರೂ ಮುಗಿಯದ ಕಥೆ.ಕನಸುಗಳು ಸಾಯುವುದಿಲ್ಲ.ಭಾವನೆಗಳು ಮಾತ್ರ ಪ್ರಶ್ನೆ ಕೇಳುವುದು ಮರೆಯುವುದಿಲ್ಲ.ಸಾಂಗಿಕ ಬದುಕಿನಿಂದ ಜೀವನದ ಸಾರ್ಥಕತೆಯು ಸಾಧ್ಯ.ಎಲ್ಲರ ಕಷ್ಟವು ತನ್ನದೇ ಎನ್ನುತ ಭಾವ ಬಿಂಬ ಕವನ ಸಂಕಲನವು ಓದುಗರಿಗೆ ಪ್ರಜ್ಞೆಯಾಗಿ ಮೂಡಿದೆ.  ಅಲ್ಲದೆ

ಈ ಕೃತಿಯು ಹಲವು ಅರ್ಥದ ಅನುಭವವನ್ನು ಕಟ್ಟಿಕೊಟ್ಟಿದೆ.

ಪ್ರೀತಿಯ ಏಕತಾನತೆಯಲ್ಲಿ ಒಂದರ ಮಾತಿನಲ್ಲಿ ಮತ್ತೊಂದು ಮಾತು ಬಿಂಬಿಸುವ ಸಂಬಂಧದ ಒಳ-ಹೊರಗೆ ಹೊರ ಹೊಮ್ಮುವ ಅರ್ಥದ ಸುಮವನ್ನು ಸವಿಯುವ ಮತ್ತು ಸಾಮಾಜಿಕ ಎಚ್ಚರಗಳನ್ನು ನೆನೆಪಿಸುವ ಸಮರ್ಪಕ ಪದದಲ್ಲಿ ರಚಿಸಿದ ಹೂ ಗೊಂಚಲ ಹಿಡಿಯಾಗಿದೆ ಈ ಕವಿತಾಗುಚ್ಛ. ಲೇಖಕಿ ಶ್ರೀದೇವಿ ಯಡಹಳ್ಳಿಮಠ (ವಾಣಿ) ಅವರು ಅನೇಕ ಸಿಹಿ ಕಹಿ ಅನುಭವಗಳಿಂದ ಜೀವನಕ್ರಮವನ್ನು ಮೌಖಿಕ ಆಕೃತಿಗಳನ್ನು,ಹೊಸತನವನ್ನು, ಎದುರಿಟ್ಟುಕೊಂಡು ಕಾವ್ಯಕಟ್ಟಿದ್ದಾರೆ.ಹೊಸತನ ಮಾತ್ರವಲ್ಲ.ಭಾವಲೋಕದ ತೀರ ಅನನ್ಯವಾದ ರೂಪಕಗಳು ನೆಲೆ ಪಡೆದಿವೆ ಎನ್ನಬಹುದು.ಕನ್ನಡ ಕಾವ್ಯ ಪ್ರಪಂಚದ ಮೊದಲ  ಹೆಜ್ಜೆಯಿರಿಸಿದ್ದು,ಓದುಗರ ಮತ್ತು ಚಿಂತಕರ ಮನದಲ್ಲಿ ಕೊಂಚ ಹೊತ್ತು ಉಳಿಯುವ ಸಾಲುಗಳು ಸೃಜಿಸಿದ್ದಾರೆ.ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಕವಯಿತ್ರಿ ಶ್ರೀದೇವಿ ಯಡಹಳ್ಳಿಮಠ (ವಾಣಿ) ರವರ ಮುಂದಿನ ಬದುಕು ಬರಹವು  ಚೇತನದಾಯಕವಾಗಲಿ.

ಪರಿಪಕ್ವತೆಯ ಕೃತಿಗಳು ನೀಡುವಲ್ಲಿ ಕಾರ್ಯಪ್ರವೃತ್ತರಾಗಲಿ ಎಂಬ ಸದಾಶಯಗಳೊಂದಿಗೆ.


ಶರಣಪ್ಪ ತಳ್ಳಿ ಕುಪ್ಪಿಗುಡ್ಡ

One thought on “ಭಾವ ಬಿಂಬ-ಶ್ರೀದೇವಿ ಯಡಹಳ್ಳಿಮಠ

Leave a Reply

Back To Top