ಯೋಗೇಂದ್ರಾಚಾರ್ ಎ ಎನ್ ಕವಿತೆ-ಪರಿಷೆ

ಕಾವ್ಯ ಸಂಗಾತಿ

ಪರಿಷೆ

ಯೋಗೇಂದ್ರಾಚಾರ್ ಎ ಎನ್

ಅವರ ಮುಖಕ್ಕೆ ಇವರು
ಇವರ ಮುಖಕ್ಕೆ ಅವರು
ಸಗಣಿ ಮೆತ್ತುವ ಪರಿಷೆ

ನೋಡಲಿಚ್ಛಿಸುವವರು
ನೋಡಿ
ಕೇಳಲಿಚ್ಛಿಸುವವರು
ಕೇಳಿ

ಪರಿಷೆಗೆ ಅಂತಿಂತಹಾ ಸ್ಥಳ ಎಂದೇನಿಲ್ಲ
ಆ ದೇವರು ಈ ದೇವರು ಎಂಬುದೂ ಇಲ್ಲ
ಸಗಣಿಯನ್ನು ಮೆತ್ತುವ
ಸಗಣಿಯನ್ನು ಮೆತ್ತಿಸಿಕೊಳ್ಳುವ
ಗಟ್ಟಿ ಗುಂಡಿಗೆ ನಿಮ್ಮದಾಗಿರಬೇಕಷ್ಟೇ

ಪರಿಷೆಯಲ್ಲಿ
ಪಲ್ಲಕ್ಕಿ ಹೋರುವ
ಅಂಗಡಿ ಇಡುವ
ದರ್ದೇನೂ ಇಲ್ಲ
ಮಾತು ಬಲ್ಲವರಾಗಿದ್ದಾರೆ ಸಾಕು
ಸರಿ ತಪ್ಪಿನ ಬಗ್ಗೆ ಚಿಂತೆ ಬೇಡ
ಬಣ್ಣ ಹಚ್ಚಲು ಮಾಧ್ಯಮದವರಿದ್ದಾರೆ

ಪರಿಷೆಯಲ್ಲಿ ಹಾಡುವವರ
ಪರಿಷೆಯಲ್ಲಿ ಆಡುವವರ
ಪರಿಷೆಯಲ್ಲಿ ಕೂರುವವರ
ಲೋಟಗಳು ಹುಳಿ ಹೆಂಡದ
ಮತ್ತಲ್ಲೇ ತೇಲುತ್ತವೆ
ಬೇಕಿದ್ದರೆ ನೀವು ಜೇಬು ತುಂಬಿಸಿಕೊಂಡು
ಲಕ್ಷ್ಮೀ ಪುತ್ರರಾಗಬಹುದು

ಪರಿಷೆಯ ಅಲ್ಲಲ್ಲಿ
ಮನೆಗೆ ಬೆಂಕಿ ಹಚ್ಚುವ
ಕತ್ತಲಲ್ಲಿ ನಡೆದಾಡುವ
ನರರ ರಕ್ತವನ್ನು ಹೀರುವ
ಗೋಮುಖ ಹೊಂದಿರುವ
ವ್ಯಾಘ್ರಗಳು ಓಡಾಡುತ್ತಿರುತ್ತವೆ
ತುಸು ಎಚ್ಚರಿಕೆಯಿಂದ ಓಡಾಡಿ

ಇಂತ ಪರಿಯ ಪರಿಷೆ
ಪಂಚ ವರ್ಷಕ್ಕೊಮ್ಮೆ
ಹೂ ಹಿಡಿದು ಹೊರಡುವಿರೋ
ಮೇವನ್ನು ಹೊರುವಿರೋ
ಕೈ ಎತ್ತಿ ಕೂಗುವಿರೋ
ನಿಮಗೇ ಬಿಟ್ಟದ್ದು

ನೆನಪಿರಲಿ ಪರಿಷೆಯುದ್ದಕ್ಕೂ
ಸಗಣಿಯದ್ದೇ ಆಟ
ಆಕಳದ್ದಲ್ಲ ಎಮ್ಮೆಯದ್ದಲ್ಲ
ಹಂದಿಗಳದ್ದಲ್ಲ ಕತ್ತೆಗಳದ್ದೂ ಅಲ್ಲ
ಇದು ಬುದ್ದಿ ಜೀವಿಗಳ ಸಗಣಿ

ಹೋಗುವುದಿದ್ದರೆ ಹೋಗಿ
ನೋಡುವುದಿದ್ದರೆ ನೋಡಿ
ಕೈ ಕಟ್ಟಿ ಕೂರುವುದಿದ್ದರೂ
ಕೂತು
ನೆರೆ ಮನೆಗೆ ಬೆಂಕಿ ಬಿದ್ದಾಗ
ನಗಬಹುದು
ನಮ್ಮನೆ ಧಗ ಧಗಿಸುವಾಗ
ಅಳುವುದು ಇದ್ದೇ ಇದೆ


Leave a Reply

Back To Top