ತಿಂಗಳ ಕಥೆ-ಆಶಾರಘುರವರ ಹೊಸ ನೀಳ್ಗಥೆ-ತವನಿಧಿ

ಕಥಾ ಸಂಗಾತಿ

ತಿಂಗಳ ಕಥೆ

ತವನಿಧಿ

ಆಶಾರಘು

ಮಾವ ತೀರಿಕೊಂಡು ನಾಲ್ಕು ತಿಂಗಳ ಮೇಲಾಯಿತು… ಅತ್ತೆ ಇನ್ನೂ ಆ ಆಘಾತದಿಂದ ಹೊರಬಂದಿಲ್ಲ… ತುಳಸಮ್ಮನವರ ಮನೆಗೆ ಮಧ್ಯಾಹ್ನವೇ ಹೋದವರು ಇನ್ನೂ ಬಂದಿಲ್ಲ… ನಿಧಾನವಾಗಿ ಬರಲಿ… ಬೇಗ ಬಂದು ಏನು ಮಾಡಬೇಕಾಗಿದೆ ಅವರು..? ಮೊದಲು ಹೀಗೆ ಅವರು ಅವರಿವರ ಮನೆಗೆ ಹೋಗಿ ಕೂರುತ್ತಲೇ ಇರಲಿಲ್ಲ… ಮಾವ ಇದ್ದಾಗ! ಈಗ ತಮ್ಮ ಕಷ್ಟಸುಖ ಹಂಚಿಕೊಳ್ಳೋಕ್ಕೆ ಯಾರಾದರೂ ಬೇಕು ಅನ್ನಿಸಿರಬೇಕು ಪಾಪ. ಕಿರಿಯರಾದ ಸೊಸೆಯರ ಹತ್ತಿರ ಎಲ್ಲವನ್ನೂ ಎಲ್ಲಿ ಹೇಳಿಕೊಳ್ಳೋಕ್ಕೆ ಆಗುತ್ತೆ..? ಆದರೂ ಅತ್ತೆ ಇಷ್ಟೊಂದು ನೋವನ್ನ ತಮ್ಮ ಹೊಟ್ಟೆಯೊಳಗೆ ಇಟ್ಟುಕೊಂಡಿದ್ದರೇ ಅಂತ ಆಶ್ಚರ್ಯವಾಯಿತು ನನಗೆ… ಗೀತಾ ಅವರ ಅತ್ತೆ ತುಳಸಮ್ಮನವರ ಹತ್ತಿರ ಹಂಚಿಕೊಂಡದ್ದನ್ನೆಲ್ಲಾ ಕೇಳಿಸಿಕೊಂಡೆ ಅಂತ ವರದಿ ಮಾಡಿದಾಗ..! ನನ್ನ ಮೇಲೂ, ಪಲ್ಲವಿ ಮೇಲೂ… ಅವರ ಇಬ್ಬರು ಗಂಡು ಮಕ್ಕಳ ಮೇಲೂ ಅವರ ಆರೋಪಗಳಿವೆ..! ಅದಕ್ಕೆ ನನಗೆ ಕಿಂಚಿತ್ತೂ ಬೇಸರವಿಲ್ಲ..! ಸಹಜ ಅದು..! ಹೇಳಿಕೊಳ್ಳಲಿ ಬಿಡು… ಹೇಳಿಕೊಂಡು ಹಗುರಾಗಲಿ.
ಈ ನಾಲ್ಕು ತಿಂಗಳಲ್ಲಿ ಅವರೆಷ್ಟು ಬಡಕಲಾಗಿ ಹೋಗಿದಾರೆ..? ನಿಜಸ್ಥಿತಿಯನ್ನ ಅರ್ಥ ಮಾಡಿಕೊಳ್ಳದೆ ಸುಮ್ಮನೆ ತಮಗೆ ತಾವೇ ಏನೇನೋ ಮಕ್ಕಳು ಸೊಸೆಯರ ಬಗೆಗೆ ತಪ್ಪಾಗಿ ತಿಳಿದುಕೊಂಡು ಕೊರಗಿ ಕೊರಗಿ ಕಡ್ಡೀ ಗಾತ್ರಕ್ಕೆ ಆಗಿಹೋಗಿದಾರೆ..! ಏನನ್ನಾದರೂ ಅವರಿಗೆ ಕೊಡಲೋ, ಅಥವಾ ಅವರಿಂದ ಈಸಿಕೊಳ್ಳಲೋ ಕೈ ಚಾಚಿದರೆ ನನ್ನ ಕಣ್ಣು ಮಡಿ ಬಟ್ಟೆ ಒಣಗಿಹಾಕೋ ಕೋಲಿನಂತೆ ಆಗಿರೋ ಅವರ ಕೈಗಳನ್ನೇ ಗಮನಿಸುತ್ತಿರುತ್ತೆ..! ಇವರಿಗೆ (ತನ್ನ ಗಂಡನಿಗೆ) ನಾಲ್ಕು ದಿನದಿಂದ ಹೇಳುತಾ ಇದೀನಿ… ಯಾರಾದರೂ ಡಾಕ್ಟರ ಬಳಿಗೆ ಕರೆದುಕೊಂಡು ಹೋಗಿ, ಒಳ್ಳೇ ಟಾನಿಕ್ಕೋ ಏನಾದರೂ ಬರೆಸಿಕೊಂಡು ಬನ್ನಿ ಅಂತ… ಯಾವ ಟಾನಿಕ್ಕು ಕುಡಿದರೆ ಏನು ಬಂತು..? ಹೊಟ್ಟೆಗೆ ಸರಿಯಾಗಿ ತಿನ್ನಲ್ಲ… ನಿದ್ದೆ ಮಾಡಲ್ಲ… ಮನೋರೋಗಕ್ಕೆ ಏನು ಮದ್ದು..? ನನಗನ್ನಿಸುತ್ತೆ… ಅತ್ತೆ ಹೀಗೆ ಚಿಂತೆ ಹತ್ತಿಕೊಂಡು ಕುಗ್ಗಿಹೋಗೋಕ್ಕೆ ಸ್ವಲ್ಪಮಟ್ಟಿಗೆ ಕಾರಣ ತುಳಸಮ್ಮನವರೇ ಅಂತ! ಇವರು ನನಗೆ ಹೀಗೆ ಅನ್ನಿಸುತ್ತೆ ಅಂತ ಹೇಳಿದ್ರೆ, ಅದಕ್ಕೆ ಇನ್ನೊಂದು ಸೇರಿಸಿ ಹಾಗೂ ಹೀಗೂ ಅನ್ನಿಸೋ ಹಾಗೆ ಮಾಡಿರೋರೇ ಅವರು..! ಗೀತಾನೇ ಹೇಳ್ತಾಳಲ್ಲ..? ನಿಮ್ಮತ್ತೆ ಒಂದು ಮಾತು ಅಂದರೆ, ಅದಕ್ಕೆ ಇನ್ನೆರಡು ಮಾತನ್ನ ನಮ್ಮತ್ತೆ ಸೇರಿಸ್ತಾರೆ ಅಂತ! ತುಳಸಮ್ಮ ಒಳ್ಳೆಯವರೇ… ಆದರೆ ಅವರ ಲೋಕಾಭಿರಾಮದ ಮಾತಿನಲ್ಲಿ ತಮಗೇ ಗೊತ್ತಿಲ್ಲದ ಹಾಗೆ ಹಾಕಿ ಕೊಟ್ಟಿರ್ತಾರೆ! ಹೂಂ… ಇನ್ನೂ ಬರಲಿಲ್ಲ ನೋಡು… ಅವರ ಮನೇಲೇ ಕೂತುಬಿಟ್ಟಿದಾರೆ! ಇವರು ಹೊರಡ್ತೀನಿ ಅಂದ್ರೂ ತುಳಸಮ್ಮನೋರು ಬಿಡಬೇಕಲ್ಲ..!?
ಎಷ್ಟೊಂದು ಸಣ್ಣಪುಟ್ಟ ವಿಗ್ರಹಗಳಪ್ಪಾ.. ರಾಮನದು… ಗೋಪಾಲನದು… ರಂಗನಾಥನದು… ಗಣಪತಿಯದು… ಲಕ್ಷ್ಮೀ ಹಯಗ್ರೀವನದು… ಹುಣಸೆಹಣ್ಣು ಹಚ್ಚಿಟ್ಟು ನೆನೆಹಾಕಿ ತಿಕ್ಕಿದರೂ ಜಿಡ್ಡು ಪೂರ್ತಿ ಬಿಡಲ್ಲ… ಕಲೆ ಹೋಗಲ್ಲ… ನನ್ನ ತವರಮನೇಲೂ ದೇವರ ಸಾಮಾನುಗಳನ್ನ ತೊಳೆಯೋ ಕೆಲಸ ನನ್ನ ಮೇಲೇ ಬೀಳ್ತಿತ್ತು… ಚಿಕ್ಕಮ್ಮ, ‘ನಿನ್ನ ಹಾಗೆ ತಿಕ್ಕಿ ತಿಕ್ಕಿ ಬೆಳ್ಳಿ, ಹಿತ್ತಾಳೆ, ತಾಮ್ರಗಳು ಹೊಳೆಯೋ ಹಾಗೆ ಮಾಡೋಕ್ಕೆ ನನ್ನಿಂದಾಗಲ್ಲಪ್ಪ… ನೀನೇ ತೊಳೆದುಬಿಡು ಮಗಳೇ…’ ಅಂತಿದ್ದರು. ಇಲ್ಲೂ ಈ ಕೆಲಸ ನನ್ನ ಪಾಲಿಗೇ ಬಂದಿದೆ… ಪಲ್ಲವಿಯೂ ಒಮ್ಮೊಮ್ಮೆ ತೊಳೀತಾಳೆ… ಆದರೆ ಅದೇಕೋ ಈ ಕೆಲಸ ಬಿದ್ದಾಗ ಅತ್ತೆಯ ಮನಸ್ಸಿಗೆ ಬರೋದು ಮೊದಲು ನನ್ನ ಹೆಸರೇ! ಹೂಂ… ಈ ಚೋಟಾಮೋಟಾ ವಿಗ್ರಹಗಳನ್ನ., ಬೆಳ್ಳಿಯ ಚೊಂಬು, ದೀಪಾ, ಹರಿವಾಣಗಳನ್ನ ಬೆಳ್ಳಗೆ ಮಾಡೋ ಹೊತ್ತಿಗೆ ನನ್ನ ನಡು ನಾನೆಲ್ಲಿ ಅಂತಿದೆ! ಸಣ್ಣಗೆ ಒಂದೇ ಪಾರ್ಶ್ವಕ್ಕೆ ತಲೆನೋವು ಬೇರೆ..! ಹಾಳಾದ್ದು ಮಾತ್ರೆ ತೊಗೊಂಡರೂ ಕಡಿಮೇನೇ ಆಗ್ತಿಲ್ಲ… ಇದನ್ನ ಹೀಗೇ ಬಿಟ್ಟದ್ದು ಬಿಟ್ಟ ಹಾಗೆ ಬಿಟ್ಟು ಹೋಗಿ ಒಂದು ಘಳಿಗೆ ಮಲ್ಕೊಳ್ಳೋಣ ಅಂದ್ರೆ, ದೇವರ ಸಾಮಾನುಗಳ ಮೇಲೆಲ್ಲಾ ಚುಕ್ಕೆ ಚುಕ್ಕೆ ಬಿದ್ದು ಕಲೆಗಳಾಗಿ ನಿಂತುಹೋಗ್ತವೆ… ಹುಳಿ ಹಚ್ಚಿದ್ದೀನಲ್ಲ..!? ಹೇಗೋ ಸಾವರಿಸಿಕೊಂಡು ತೊಳೆದೇ ತೀರಬೇಕು… ನಂತರ ಕೂಡಾ ಹಾಗೇ ಇಡೋ ಹಾಗಿಲ್ಲ… ಒಣಬಟ್ಟೆ ತೊಗೊಂಡು ಒರಸಿಡಬೇಕು… ಇಷ್ಟು ಮಾಡೋಕ್ಕೆ ಇನ್ನೊಂದು ಮುಕ್ಕಾಲು ಗಂಟೆಯಾದರೂ ಆಗುತ್ತೆ… ಹೂಂ… ಅಷ್ಟರೊಳಗೆ ಪಲ್ಲವಿ ಕೆಲಸದಿಂದ ಬಂದರೆ, ನೀನು ಮುಂದುವರಿಸು ಅಂತ ಹೋಗಿ ಮಲ್ಕೋಬಹುದು… ನಾರಾಯಣಾ… ಲಕ್ಷ್ಮೀಹಯಗ್ರೀವಾ… ಕಾಪಾಡಪ್ಪಾ… ಮಾಲತಿ ಕಿರುಬೆರಳಿನಲ್ಲಿ ಸೆರಗನ್ನು ಸರಿಪಡಿಸಿಕೊಂಡು ನಿಟ್ಟುಸಿರುಬಿಡುತ್ತಾ ದೇವರ ಸಾಮಾನುಗಳನ್ನು ನಾರಿನಿಂದ ಇನ್ನಷ್ಟು ಬಲವಾಗಿ ತಿಕ್ಕತೊಡಗಿದಳು.
ಅಲ್ಲ… ಎಂಥಾ ಮುಜುಗರಕ್ಕೆ ಒಳಗಾಗಿಸೋ ಮಾತು..!? ಮಾವ ಆಸ್ಪತ್ರೆಯಲ್ಲಿದ್ದಾಗ ಅವರ ಜೊತೆ ರಾತ್ರಿ ಇರೋಕ್ಕೆ ಶಂಕರನನ್ನ ಕಳಿಸ್ತಾ ಇದ್ದದ್ದಕ್ಕೆ… ‘ಒಬ್ಬರಿಗೆ ಇಬ್ಬರು ಗಂಡು ಮಕ್ಕಳಿದ್ದರೂ, ಆಳುಹುಡುಗ ಶಂಕರ ಇವರೊಂದಿಗೆ ಆಸ್ಪತ್ರೆಯಲ್ಲಿ ಇರಬೇಕೇ..? ಇಬ್ಬರಿಗೂ ರಾತ್ರಿ ವೇಳೆ ತಮ್ಮ ತಮ್ಮ ಹೆಂಡತಿಯರ ಜೊತೇಲಿ ಮಲಗೋ ಸೌಖ್ಯ ಬೇಕು…’ ಎಂದರಂತೆ ಅತ್ತೆ! ದೇವರಂಥಾ ಅತ್ತೆ ಬಾಯಲ್ಲಿ ಇಂಥಾ ಮಾತೇ..!? ಅಲ್ಲ..! ‘ನಮ್ಮವರು ಆಸ್ಪತ್ರೆಯಲ್ಲಿದ್ದಾಗ ಶಂಕರನೇ ದಿನಾ ಆಸ್ಪತ್ರೆಯಲ್ಲಿ ರಾತ್ರಿ ಹೊತ್ತು ಇರ್ತಾ ಇದ್ದದ್ದು…’ ಅಂತ ಅತ್ತೆ ಹೇಳಿರ್ತಾರೆ! ಅದಕ್ಕೆ ತುಳಸಮ್ಮ, ‘ಅದ್ಯಾಕೆ..? ಒಬ್ಬರಿಗೆ ಇಬ್ಬರು ಗಂಡುಮಕ್ಕಳಿಲ್ಲವೇ ನಿಮಗೆ..? ಅದೂ ಸರಿ ಬಿಡಿ… ಹೆಂಡಿರ ಜೊತೆ ಮಲಗೋ ಸೌಖ್ಯವನ್ನ ಅವರೆಲ್ಲಿ ಕಳೆದುಕೋತಾರೆ’ ಅಂತ ಅಂದಿರ್ತಾರೆ! ಆದರೆ ಇದು ಅತ್ತೆ ಹೇಳಿಕೊಂಡ ಮಾತಾಗಿ ನಿಂತಿದೆ! ಎಂಥಾ ಅತ್ತೆ ನನಗೆ ಸಿಕ್ಕಿರೋದು..? ನಾನು ತೀರಾ ಚಿಕ್ಕಹುಡುಗಿಯಾಗಿದ್ದಾಗಲೇ ತಾಯಿಯನ್ನ ಕಳೆದುಕೊಂಡವಳು… ತಾಯಿಯ ಮುಖವೇ ನನಗೆ ಸ್ಪಷ್ಟವಾಗಿ ನೆನಪಿಲ್ಲ… ತವರುಮನೆಯ ಗೋಡೆ ಮೇಲೆ ತೂಗು ಹಾಕಿರೋ ಅಮ್ಮನ ಬ್ಲ್ಯಾಕ್ ಅಂಡ್ ವೈಟ್ ಫೋಟೋ ನೋಡ್ತಾ ಅದೊಂದು ರೂಪವನ್ನಷ್ಟೇ ನನ್ನಮ್ಮ ಅಂದುಕೊಂಡು ಬೆಳೆದ ಹುಡುಗಿ ನಾನು! ಅಪ್ಪ ತೀರಾ ಯೋಚನೆ ಮಾಡಿಯೇ ಇನ್ನೊಂದು ಮದುವೆ ಮಾಡಿಕೊಂಡರಂತೆ… ನನ್ನ ಅದೃಷ್ಟ… ಒಳ್ಳೆಯ ಚಿಕ್ಕಮ್ಮ ಸಿಕ್ಕರು! ತಾಯಿಯ ಮಮತೆಯನ್ನ ತೋರಿದರು ಅನ್ನೋದಕ್ಕಿಂತ, ಆಪ್ತ ಗೆಳತಿಯ ಹಾಗೆ ಸ್ನೇಹದಿಂದ ಇದ್ದರು… ಇದ್ದಾರೆ! ಮದುವೆ ಮಾಡಿಕೊಂಡು ಈ ಮನೆಗೆ ಬಂದ ಮೇಲೆ ತಾಯಿಯನ್ನ ನಾನು ಅತ್ತೆಯವರಲ್ಲಿ ಕಂಡೆ! ಇಂಥದನ್ನ ಉಟ್ಟುಕೋ… ಇಂಥದನ್ನ ತೊಟ್ಟುಕೋ… ಅಂತ ಹೇಳಿ ಹೇಳಿ ಕೊಟ್ಟು, ಮಾಡಿ ಅಕ್ಕರತೆ ತೋರಿದ್ದಾರೆ..! ಸುಕನ್ಯಾ ಹುಟ್ಟಿ, ತವರಿಂದ ಮೂರು ತಿಂಗಳ ಬಾಣಂತನ ಮುಗಿಸಿಕೊಂಡು ಬಂದ ಮೇಲೆ, ಇಲ್ಲಿ… ಈ ಮನೆಯಲ್ಲೂ… ಮತ್ತೂ ನಾಲ್ಕು ತಿಂಗಳ ಬಾಣಂತನ ಮುಂದುವರೀತಲ್ಲ..!? ಅತ್ತೆಯೇ ನನ್ನನ್ನ ಮಂಚ ಬಿಟ್ಟು ಇಳೀದೇ ಇರೋ ಹಾಗೆ ನೋಡಿಕೊಂಡು… ಕೂಸಿಗೂ ನನಗೂ ವಾರವಾರಕ್ಕೆ ಎಣ್ಣೆನೀರು ಹಾಕಿ, ಸಾಮ್ರಾಣಿ ಹೊಗೆ ಕೊಟ್ಟು ಕೂದಲು ಆರಿಸಿ… ಕಣ್ಣು ತುಂಬಿಬರುತ್ತೆ! ವರ್ಷ ಕಳೆದ ಮೇಲೆ ಆಗಾಗ ಹಟ ಮಾಡುವ ಕೂಸನ್ನ ತಮ್ಮ ಕೋಣೇಲಿ ಮಲಗಿಸಿಕೊಂಡು ನನಗೂ ನನ್ನವರಿಗೂ ಏಕಾಂತಕ್ಕೆ ಅನುವು ಮಾಡಿಕೊಟ್ಟಿದಾರೆ! ‘ಹೋಗೋ ಜನಾರ್ದನ… ನಿನ್ನ ಹೆಂಡತೀನ ಹೊರಗೆಲ್ಲಾದರೂ ಕರೆದುಕೊಂಡು ಹೋಗಿ ಬಾ… ಅವಳಿಗೂ ಒಂದೇ ಸಮನೆಗೆ ಮನೇಲಿದ್ದೂ ಇದ್ದೂ ಸಾಕಾಗಿದೆ ಪಾಪ… ನಾನು ಮಗೂನ ನೋಡ್ಕೋತೀನಿ…’ ಅನ್ನೋರು! ಆ ವೇಳೆಗೆ ಮಾವನ ಎದೆ ಮೇಲೆ ಮಗಳು ಕುಣೀತಾ ಇರ್ತಾ ಇದ್ದಳಲ್ಲ… ಅದನ್ನ ನೋಡೋಕ್ಕೆ ಎಷ್ಟು ಸಂತೋಷ ಆಗ್ತಿತ್ತು..! ಎಂದೂ ಅತ್ತೆ, ಮಕ್ಕಳು ತಮ್ಮ ಹೆಂಡಿರೊಟ್ಟಿಗೆ ಚೆನ್ನಾಗಿರೋದನ್ನ ಕಂಡು ಕುರುಬುವಂತವರಲ್ಲ..! ಇಷ್ಟಕ್ಕೂ., ಮಾವನವರು ಆಸ್ಪತ್ರೆಯಲ್ಲಿದ್ದಾಗ ನಾವು ತಾನೇ ಹೇಗೆ ಸಂತೋಷದಿಂದ ಇರೋಕ್ಕೆ ಸಾಧ್ಯ..? ಇವರು ಆಫೀಸಿನಲ್ಲಿ ಓವರ್ ಟೈಂ ಮಾಡಿ ಎಂಟು ಗಂಟೆಯ ವೇಳೆಗೆ ಮನೆಗೆ ಬರೋರು… ಬಂದ ಮೇಲೂ ಆಫೀಸಿಗೆ ಸಂಬAಧಪಟ್ಟ ಕೆಲಸ… ಟೈಲ್ಸ್ ಕಂಪನೀಲಿ ಮಾರ್ಕೆಟಿಂಗ್ ಮ್ಯಾನೇಜರ್ ಅಲ್ಲವ..? ಅವರ ಕೈಕೆಳಗಿನ ಎಕ್ಸಿಕ್ಯುಟೀವ್ಸ್ ಜೊತೆಗೆ, ಮತ್ತು ಕೆಲವು ಮುಖ್ಯವಾದ ಕ್ಲಯಂಟ್ಸ ಜೊತೆಗೆ ಫೋನಿನಲ್ಲಿ ಮಾತಾಡೋದು ಇರುತ್ತೆ…! ಆ ಮಾತು ಕಂಪನಿ ಪರವಾಗಿ ಬಾಕಿ ವಸೂಲಿ ಮಾಡೋ ಮಾತಾಗಿದ್ದರೆ, ಅಥವಾ ಎಕ್ಸಿಕ್ಯುಟೀವ್ಸ್ ಸರಿಯಾಗಿ ಕೆಲಸ ಮಾಡದೆ ತರಾಟೆಗೆ ತೊಗೋಬೇಕಿದ್ದರೆ, ಹತ್ತೂ ಹನ್ನೊಂದು ಗಂಟೆಯಾದರೂ ಕಿರುಚೋದು ಕೂಗೋದು ಇರುತ್ತೆ! ಇದನ್ನೆಲ್ಲಾ ಆಸ್ಪತ್ರೇಲಿ ಪೇಷೆಂಟ್ ಪಕ್ಕ ಕೂತ್ಕೊಂಡು ಮಾಡೋಕ್ಕಾಗುತ್ತಾ..? ಆ ಗಿರಿಧರನದೂ ಹಾಗೆಯೇ… ರಾತ್ರಿಯೆಲ್ಲಾ ಕೂತು ಲ್ಯಾಪ್‌ಟಾಪಿನಲ್ಲಿ ಆಫೀಸಿಗೆ ಸಂಬಂಧಪಟ್ಟ ಪ್ರಾಜೆಕ್ಟ್ಗಳನ್ನ ಮಾಡ್ತಾ ಇರ್ತಾನೆ! ಅವನೂ ಹ್ಯಾಗೆ ಪೇಷೆಂಟ್ ಮುಂದೆ ಕೂತುಕೊಂಡು ಲೈಟು ಹೊತ್ತಿಸಿಕೊಂಡು, ಲ್ಯಾಪ್‌ಟಾಪಿನಲ್ಲಿ ಟೊಕ್ಕುಟೊಕ್ಕು ಅಂತ ಶಬ್ದ ಮಾಡಿಕೊಂಡು ಕೆಲಸ ಮಾಡೋಕ್ಕೆ ಸಾಧ್ಯ..? ಇನ್ನು… ನಾವು ಗಂಡಾ ಹೆಂಡತೀರು ಸಂತೋಷವಾಗಿ ಹೊತ್ತು ಕಳೆಯೋದು… ಅದರಲ್ಲೂ ಮಾವನವರು ಆಸ್ಪತ್ರೆ ಸೇರಿದ ಮೇಲೆ… ಎಲ್ಲಿ ಬಂತು…!? ಇದನ್ನೆಲ್ಲಾ ಹೇಗೆ ಅರ್ಥ ಮಾಡಿಸೋಕ್ಕೆ ಆಗುತ್ತೆ ಬೇರೆಯವರಿಗೆ..!? ಇದು ನಮ್ಮ ಖಾಸಗಿ ಬದುಕು ಅಷ್ಟೆ! ಪಾಪ… ಗಿರಿಧರ ಪಲ್ಲವಿಯರೂ ಅಷ್ಟೆ… ಅವರುಗಳ ಮುಖದಲ್ಲಿ ನಗು ಕಂಡು ಯಾವ ಕಾಲವಾಯಿತೋ ಅನ್ನಿಸುತ್ತೆ!
ಮಾವ ಕೆಲವು ಸಲವಷ್ಟೇ ಸೊಸೆಯರಿಂದ ಏನಾದರೂ ಬಯಸಿ ಮಾಡಿಸಿಕೊಂಡು ತಿನ್ನೋರು..! ಉಳಿದಂತೆ ಅವರಿಗೆ ಅತ್ತೆಯು ಮಾಡಿ ಬಡಿಸುವ ಅಡುಗೆಯೇ ಆಗಬೇಕಿತ್ತು! ಕೆಲವೊಮ್ಮೆ, ನಾನೋ ಪಲ್ಲವಿಯೋ ಅಡುಗೆ ಮಾಡಿದರೆ, ರುಚಿಯಲ್ಲೇ ಕಂಡುಹಿಡಿದುಬಿಡುತ್ತಿದ್ದರು… ಇದು ತಮ್ಮ ವಸು ಮಾಡಿರೋ ಅಡುಗೆ ಅಲ್ಲ ಅಂತ! ಹೀಗಾಗಿ ಅತ್ತೆಯೇ ಹೆಚ್ಚು ಅಡುಗೆ ಮಾಡ್ತಾ ಇದ್ದದ್ದು..! ನಾನೂ, ಪಲ್ಲವಿ ತರಕಾರಿ ಹೆಚ್ಚಿಕೊಡೋದೋ, ರುಬ್ಬಿಕೊಡೋದೋ, ಹುರಿದುಕೊಡೋದೋ ಮಾಡ್ತಾ ಇದ್ದೆವು! ಮತ್ತು… ಬೆಳಗಿನ ಹೊತ್ತು ಕೆಲಸಕ್ಕೆ ಹೋಗುವ ನಮಗೆ ಆತುರವೋ ಆತುರ..! ನಮ್ಮ ನಮ್ಮ ಮಕ್ಕಳ ಬೇಕೂ ಬೇಡಗಳನ್ನ ನೋಡಿಕೊಂಡು, ರೆಡಿಯಾಗಿ, ಅತ್ತೆ ಮಾಡಿದ ಅಡುಗೆಯನ್ನ ಡಬ್ಬಿಗೆ ತುಂಬಿಸಿಕೊAಡು ಓಡ್ತಾ ಇರ್ತಾ ಇದ್ದೆವು. ಮಾವನವರು ಹೋದ ಮೇಲೆ ಈಗ ನಾನೂ ಪಲ್ಲವಿಯೂ ಸರದಿಯಂತೆ ಅಡುಗೆ ಕೆಲಸಾನೂ ಮಾಡಿಕೊಳ್ತಾ ಇದ್ದೀವಲ್ಲ..? ಮಾವನವರು ಇದ್ದಾಗ, ಇಬ್ಬರು ಸೊಸೆಯರಿದ್ದರೂ ಅಡುಗೆಯ ಕಾರ್ಯ ತನ್ನ ಮೇಲೆ ಬೀಳ್ತಾ ಇತ್ತು ಅಂತ ಬೇಸರಪಟ್ಟುಕೊಂಡರಂತೆ ಅತ್ತೆ..! ಏನು ಹೇಳೋದು ಆ ಮಾತಿಗೆ..? ಮನೇಲಿ ಅರಿಶಿನ ಕುಂಕುಮ ಬಾಗಿನ, ಪಾತ್ರೆ, ಮುಸುರೆ, ಅಡುಗೆ ಅಂತ ಕೂತುಕೊಳ್ಳದೆ ಚೂಟಿಯಾಗಿ ಕೆಲಸಕ್ಕೆ ಹೋಗುವಂತ ಸೊಸೆಯರೇ ಬೇಕು ತಮಗೆ ಅಂತ ಆರಿಸಿ ನಮ್ಮನ್ನು ತಂದದ್ದು ಅವರೇ ಅಲ್ಲವೇ..?
ಗಿರಿಧರನ ಇಬ್ಬರು ಹೆಣ್ಣುಮಕ್ಕಳಾದ ಅನು, ನೀಲರು ತಮ್ಮ ಕೈಗಳಲ್ಲಿ ಒಂದೊAದು ಬೊಂಬೆಯನ್ನು ಹಿಡಿದುಕೊಂಡು ಮಾಲತಿ ಇರುವಲ್ಲಿಗೆ ಓಡಿಬಂದರು. ಕೆಳಗೆ ಕೂತು ಕೆಲಸದಲ್ಲಿ ಮಗ್ನಳಾಗಿದ್ದ ಮಾಲತಿ ಹೊರಳಿ, ‘ಯಾಕ್ರೇ ಹೀಗೆ ಓಡಿ ಬಂದಿರಿ..? ಏನಾಯ್ತು..?’ ಎಂದಳು. ಅನು, ‘ನೋಡಿ ದೊಡ್ಡಮ್ಮ, ನಾವಿಬ್ರೂ ರಾಜ ರಾಣಿ ಬೊಂಬೆಗಳನ್ನ ಇಟ್ಟುಕೊಂಡು ಆಟ ಆಡ್ತಾ ಇದ್ರೆ, ಪುನೀತ ಮುಖಕ್ಕೆಲ್ಲಾ ಕಣ್ಣುಕಪ್ಪು ಹಚ್ಕೊಂಡು, ನಾನು ರಾಕ್ಷಸ… ಇಬ್ಬರನ್ನೂ ತಿಂದುಬಿಡ್ತೀನಿ ಅಂತ ಬೊಂಬೆಗಳನ್ನ ಕಿತ್ತುಕೊಳೋಕ್ಕೆ ಬರ್ತಿದಾನೆ…’ ಎಂದಳು. ‘ಪ್ಲೀಸ್ ದೊಡ್ಡಮ್ಮ, ನಮ್ಮನ್ನ ಸೇವ್ ಮಾಡಿ…’ ಅಂತ ನೀಲೆಯೂ ದನಿಗೂಡಿಸಿದಳು. ಮಾಲತಿ, ‘ಎಲ್ಲಿ ಅವನು? ಕರೀರಿ..? ಬರದೇ ಇದ್ರೆ ನಿಮ್ಮಮ್ಮ ಕಡ್ಡಿ ತೊಗೊಂಡು ಬರ್ತಾರಂತೆ ಅನ್ನಿ…’ ಎಂದಳು. ಅಷ್ಟರಲ್ಲಿ ‘ಊಹೂ… ನಾನು ಬ್ರಹ್ಮರಾಕ್ಷಸ… ಹಹ್ಹಹ್ಹಾ… ಯು ಕಾಂಟ್ ಎಸ್ಕೇಪ್ ಫ್ರಮ್ ಮಿ…’ ಎನ್ನುತ್ತಾ ಪುನೀತ ಪ್ರವೇಶಿಸಿದ. ಮಾಲತಿ, ‘ಯಾಕೋ… ತಂಗೀರನ್ನ ಹಾಗೆ ಗೋಳು ಹೊಯ್ಕೊತೀಯಾ..? ನಿನ್ನ ಪಾಡಿಗೆ ಬುಕ್ ಹಿಡ್ಕೊಂಡು ಓದ್ಕೋ ಹೋಗು… ನಾಳೆ ಮ್ಯಾತ್ ಟೆಸ್ಟ್ ಇದೆ ನಿಂಗೆ. ಮೊದಲು ಮುಖಕ್ಕೆ ಬಳ್ಕೊಂಡಿರೋ ಕಣ್ಣುಕಪ್ಪನ್ನೆಲ್ಲಾ ಅಳಿಸಿ ಮುಖ ತೊಳ್ಕೋ… ಇಲ್ಲದಿದ್ರೆ ನೋಡು… ಅಪ್ಪ ಬಂದ ಮೇಲೆ ನಿನಗೆ ಸರಿಯಾಗಿ ಇದೆ…’ ಅಂತ ಗದರಿದಳು. ಪುನೀತ ಗಹಗಹಿಸಿ ನಾಟಕೀಯವಾಗಿ ನಕ್ಕ. ‘ನೋ ಮದರ್… ಅಪ್ಪ ನಂಗೇನೂ ಮಾಡಲ್ಲ…’ ಅಂದ. ‘ಹೌದಾ..? ಅದಕ್ಕೇ ನೀನು ಹೆಚ್ಕೊಂಡಿರೋದು! ತಾಳು ಬಂದೆ ನಿಂಗೆ…’ ಎನ್ನುತ್ತಾ ಮೇಲೇಳುವಂತೆ ನಟಿಸಿದಳು. ಪುನೀತ, ‘ಜೂಟ್…’ ಎನ್ನುತ್ತಾ ಹಾರಿಕೊಂಡು ಹೊರಗೆ ಓಡಿಹೋದ. ಅನು, ನೀಲರು ಅಸಹಾಯಕರಾಗಿ ದೈನ್ಯದಿಂದ ತಮ್ಮ ದೊಡ್ಡಮ್ಮನನ್ನೇ ನೋಡುತ್ತಾ ನಿಂತರು. ಅವರ ಮುಖಗಳನ್ನು ನೋಡುತ್ತಾ ಮಾಲತಿಗೆ ನಗುವೇ ಬಂದುಬಿಟ್ಟಿತು. ಆದರೆ, ನಕ್ಕರೆ ಮಕ್ಕಳು ಬೇಜಾರು ಮಾಡಿಕೊಳ್ಳುತ್ತವೆಯೆಂದು ಸಾವರಿಸಿಕೊಂಡು, ‘ಈಗ ಹೋಗ್ರಮ್ಮ… ನಿಮ್ಮ ರೂಮಿನ ಬಾಗಿಲು ಹಾಕ್ಕೊಂಡು, ಬಾಲ್ಕನಿಯಲ್ಲಿ ಆಟವಾಡಿಕೊಳ್ಳಿ…’ ಎಂದಳು. ಇಬ್ಬರೂ ತಲೆಯಾಡಿಸಿ ಹೊರಟುಹೋದರು. ಮೊದಲು ಸುಕನ್ಯಾ ಕೂಡಾ ಹೀಗೇ ಇದ್ದಳು… ಈಗ ಬಹಳ ಪ್ರೌಢಳಾಗಿಬಿಟ್ಟಿದಾಳೆ! ದೊಡ್ಡವಳಾದಳಲ್ಲ..? ಎಂದುಕೊಂಡು ಮಾಲತಿ ತನ್ನಷ್ಟಕ್ಕೆ ನಕ್ಕಳು. ಕೆಲ ಸಮಯ ಯಾವ ವಿಚಾರವೂ ಮನಸ್ಸಿನಲ್ಲಿ ಸುಳಿಯಲೇ ಇಲ್ಲ. ದೇವರ ಸಾಮಾನುಗಳನ್ನು ತೊಳೆಯುತ್ತಾ ಅದರಲ್ಲಿಯೇ ಮಗ್ನಳಾದಳು.
ಅತ್ತೆ, ಮಾವನವರನ್ನು ನೋಡೋಕ್ಕೆ ದಿನವೂ ಆಸ್ಪತ್ರೆಗೆ ಹೋಗ್ತಾ ಇದ್ದ ದಿನಗಳಲ್ಲಿ ಒಂದೆರಡು ದಿನ ನನ್ನವರು, ಒಂದೆರಡು ದಿನ ಗಿರಿಧರ ಬೈಕಿನಲ್ಲಿ ಕರೆದೊಯ್ದು ಕರೆತಂದರು… ಆದರೆ ಕೆಲಸಕ್ಕೆ ಹೋಗೋ ಇಬ್ಬರಿಗೂ ಇದನ್ನು ದಿನನಿತ್ಯ ಮಾಡೋಕ್ಕೆ ಆಗುತ್ತಾ..? ಅದರಿಂದ ನಾನೇ ಮೆಟ್ರೋದಲ್ಲಿ ಪ್ರಯಾಣಿಸೋಕ್ಕೆ ತೋರಿಸಿಕೊಟ್ಟೆ! ಅದಕ್ಕೆ, ನನ್ನನ್ನ ‘ಬುದ್ಧಿವಂತ ಸೊಸೆ’ ಅಂತ ಬೆನ್ನುಸವರಿದರು… ಆದರೀಗ ತಿಳಿಯುತ್ತಿದೆ… ಅವರು ಆ ದಿನ ಹಾಗೆಂದದ್ದು ಪ್ರಶಂಸೆಯಿAದ ಅಲ್ಲ, ನೋವಿನಿಂದ ಅಂತ!
ನನ್ನನ್ನ ಹೆಚ್ಚು ಬಾಧಿಸಿದ್ದು… ಇವರಿಗೆ (ತನ್ನ ಪತಿಗೆ) ಹೇಳದೆ ಇನ್ನಷ್ಟು ನೋವು ಕೊಡ್ತಾ ಇರುವ ಇನ್ನೊಂದು ಆರೋಪ… ಮಾವನವರು ಕಷ್ಟಪಟ್ಟು ಎಷ್ಟೇ ಆಸ್ತಿಪಾಸ್ತಿ ಮಾಡಿಟ್ಟಿದ್ದರೂ, ಅವರ ಚಿಕಿತ್ಸೆಯ ಖರ್ಚಿಗೆ ಅವರಿವರಿಂದ ಬೇಡಿ ತಂದರು ಮಕ್ಕಳು ಅನ್ನುವುದು..! ತಮಗೆ ಬರಬೇಕಾದ ಆಸ್ತಿಪಾಸ್ತಿಯಲ್ಲಿ ಒಂದು ಕೂದಲೆಳೆಯೂ ಕಡಿಮೆಯಾಗಬಾರದು ಅನ್ನೋ ಲೆಕ್ಕಾಚಾರ ಅವರಿಗೆ ಅಂತ ಹೇಳಿಕೊಂಡಿರೋದು! ಈ ವಿಚಾರ ಅವರಿಗೆ ತಾನಾಗೇ ಹೊಳೆದಿರೋದಲ್ಲ… ಯಾರೋ ಬಂಧುಗಳು ಸಾಂತ್ವನ ಹೇಳೋ ನೆಪದಲ್ಲಿ ತಲೆಗೆ ತುಂಬಿರೋದು! ಆದರೂ… ಈ ಕಿವಿಯಲ್ಲಿ ಕೇಳಿದ ಮಾತನ್ನ ಆ ಕಿವಿಯಲ್ಲಿ ಬಿಡೋದು ಬಿಟ್ಟು, ಇವರೂ ಯಾಕೆ ಆ ದೃಷ್ಟಿಯಲ್ಲಿ ಯೋಚಿಸಬೇಕು!? ಮಕ್ಕಳು ಖಂಡಿತಾ ಅಂಥಾ ಸ್ವಾರ್ಥಿಗಳಲ್ಲ! ಮಾವನವರು ಆಸ್ಪತ್ರೆ ಸೇರಿದ್ದ ದಿನಗಳಲ್ಲಿ ಕಣ್ಣರೆಪ್ಪೆ ಒಂದು ಮಾಡಿದವರಲ್ಲ! ಅತ್ತೆ ಹೀಗೆ ಯೋಚಿಸಬಹುದೇ..? ಇರೋ ಆಸ್ತಿಗಳ ಮೇಲೆ ಎಷ್ಟು ಸಾಲವಿತ್ತು ಅಂತ ಗೊತ್ತಿಲ್ಲವ ಅವರಿಗೆ..? ಮಾವನವರು ಪ್ರತಿವರ್ಷ ಸತ್ಯನಾರಾಯಣ ಪೂಜೆಯನ್ನ ಒಂದು ಮದುವೆ ಮಾಡುವಷ್ಟೇ ಅದ್ಧೂರಿಯಾಗಿ ಮಾಡ್ತಾ ಇದ್ದರಲ್ಲ..? ಆಗೆಲ್ಲಾ ಎಷ್ಟೆಷ್ಟು ಖರ್ಚಾಗಿರಬಹುದು ಅಂತ ಅಂಜಾದಾದರೂ ಇದೆಯಲ್ಲವೇ ಅವರಿಗೆ..? ಮಾವನವರು ಮಾಡಿರೋ ಆಸ್ತಿಗಳು ಇವೆ… ಇಲ್ಲ ಅಂತಲ್ಲ… ಆದರೆ, ಅದರಿಂದ ತುರ್ತಾಗಿ ಹಣವನ್ನ ತೆಗೆಯೋಕ್ಕೆ ಬರದಂತೆ ಇದ್ದವು… ನನ್ನವರೂ, ಗಿರಿಧರನೂ ಪಟ್ಟ ಕಷ್ಟ ನನಗೆ ಗೊತ್ತು! ಕೆಲವು ಪತ್ರಗಳನ್ನ ಅಣ್ಣಾತಮ್ಮಂದಿರಿಬ್ಬರೂ ಬ್ಯಾಂಕಿಗೆ ಅಡವಿಡಲು ತೆಗೆದುಕೊಂಡು ಹೋಗಿ, ಅದನ್ನು ಬ್ಯಾಂಕಿನವರು ಒಪ್ಪದೆ ಹಿಂದಿರುಗಿ ಬಂದದ್ದು ಅತ್ತೆಯವರಿಗೆ ತಿಳಿಯದು! ಏನೇ ಕೆಲಸಾ ಮಾಡಬೇಕಾದರೂ ಹಿರಿಯರಾದ ಅವರ ಗಮನಕ್ಕೆ ತಂದೇ ಮಾಡುವ ಪದ್ಧತಿ ಮನೇಲಿ… ಆದರೆ ಈ ವಿಷಯವನ್ನ ನಾವೇ ಹೇಳಿಲ್ಲ…! ಸಂದರ್ಭ ಅಂತಾದ್ದು…! ಮಾವನಿಗೆ ಅನಾರೋಗ್ಯವಾಗಿರೋ ನೋವಿನ ಜೊತೆಯಲ್ಲಿ, ಮಕ್ಕಳು ಚಿಕಿತ್ಸೆಯ ಹಣಕ್ಕಾಗಿ ಪರದಾಡುತ್ತಿರುವುದು ಅತ್ತೆಗೆ ಗೊತ್ತಾಗಿ ಅವರು ಇನ್ನಷ್ಟು ನೋವನ್ನು ಅನುಭವಿಸೋ ಹಾಗೇ ಮಾಡಬಾರದು ಅಂತ! ನಂತರ ಅವರಿವರಿಂದ ಸಹಾಯ ಪಡೆಯಲು ಯತ್ನಿಸಿದ್ದು ಅತ್ತೆಯಿಂದ ಮುಚ್ಚಿಡೋಕ್ಕೆ ಆಗಲಿಲ್ಲ… ಹಿರಿಯರಾದ ಅವರಲ್ಲಿ ಹೇಳಿಯೇ ಮುಂದುವರಿಯಬೇಕಾದ ಅನಿವಾರ್ಯತೆ ನಮಗಳಿಗೂ ಕಂಡಿತು. ಏನು ಮಾಡೋದು..? ಎಲ್ಲಾ ಹಣೆಯಬರಹ..! ಮೇಲಿದ್ದವರು ಕೆಳಗೆ ಬರೋದು… ಕೆಳಗಿದ್ದವರು ಮೇಲೆ ಏರೋದು… ಚಕ್ರಗತಿಯಂತೆ ಬಹಳ ಸಹಜವಾದ ಕ್ರಿಯೆ! ಆದರೆ ಅದರಿಂದ ಅದೆಷ್ಟು ನೋವು… ಅವಮಾನ… ಇರಿಸುಮುರಿಸು… ಮನಸ್ತಾಪ… ವ್ಯಥೆ! ಅತ್ತೆಗೆ ಇದನ್ನೆಲ್ಲಾ ತಿಳಿಸಿಹೇಳಬೇಕು…! ಆದರೆ ಹ್ಯಾಗೆ..?
ಅತ್ತೆ ಮುಕ್ತವಾಗಿ ತಮ್ಮ ಅಂತರಂಗವನ್ನ ಯಾರಲ್ಲಿಯೂ ತೆರೆದಿಡೋಲ್ಲ… ತಮ್ಮ ಮಗಳು ಲಕ್ಷ್ಮಿಯಲ್ಲಿಯೂ ಕೂಡಾ..! ಅವಳು ಫೋನ್ ಮಾಡಿದರೆ ಕುಶಲೋಪರಿ ಅಷ್ಟೆ… ಅವಳಿಗಾದರೂ ಯಾಕೆ ಏನೇನೋ ಹೇಳಿ ತವರುಮನೆ ಬಗೆಗಿನ ಅವಳ ಅಭಿಪ್ರಾಯವನ್ನ ಯಾಕೆ ಕದಡಬೇಕು ಅಂತಲೇನೋ! ಆದರೆ, ಆ ಮಹಾತಾಯಿ ತುಳಸಮ್ಮನವರಲ್ಲಿ ಅದೇನಂತಹ ಆಪ್ತತೆ ಕಂಡರೋ… ಅವರಲ್ಲಿ ಹೇಳಿಕೊಂಡಿದಾರೆ! ನಾನೂ ಅವರ ಸೊಸೆ ಗೀತಾಳ ಕಿವಿಯಲ್ಲಿ ನನ್ನ ಮನದಿಂಗಿತಗಳನ್ನೂ ಹಾಕಿದ್ದೀನಿ… ಅದಕ್ಕೆ ಕಾರಣವಿದೆ! ಆ ಅತ್ತೆಸೊಸೆಯರದ್ದು ಒಂದು ಸೋಜಿಗ..! ನಾಲ್ಕು ದಿನ ಇವರಂಥ ಅತ್ತೆಸೊಸೆಯರೇ ಜಗತ್ತಿನಲ್ಲಿ ಇಲ್ಲ ಅನ್ನುವ ಹಾಗೆ ಇರ್ತಾರೆ! ಕೆಲವು ದಿನ ಒಬ್ಬರು ಆ ಕಡೆಗೆ, ಇನ್ನೊಬ್ಬರು ಈ ಕಡೆಗೆ ಮುಖ ತಿರುಗಿಸಿಕೊಂಡು ಬರೀ ಪರೋಕ್ಷವಾದ ಮಾತುಗಳಲ್ಲಿಯೇ ಸಂಭಾಷಣೆ ನಡೆಸ್ತಾರೆ! ಯಾವುದೇ ವಿಷಯ ಕೇವಲ ಅತ್ತೆಯಲ್ಲಿಯಾಗಲೀ, ಅಥವಾ ಕೇವಲ ಸೊಸೆಯಲ್ಲಿಯಾಗಲೀ ಉಳಿಯೋಲ್ಲ! ಇಬ್ಬರೂ ಮಾತಾಡಿಕೋತಾರೆ. ಅದಕ್ಕೇ ಬರೀ ಅತ್ತೆ ಮಾತ್ರ ನಮ್ಮ ಮನೆ ವಿಷಯಗಳನ್ನ ಅವರ ಮನೆಗೆ ತಿಳಿಸ್ತಾ ಇದ್ರೆ, ಒನ್ ಸೈಡೆಡ್ ಆಗುತ್ತೆ! ಏನಪ್ಪಾ… ಇವರ ಮಕ್ಕಳು, ಸೊಸೆಯರು ಹೀಗೆ ಅಂತ ಮಾತಾಡಿಕೋತಾರೆ! ನಾನೂ ನನ್ನ ವಯೋಮಾನದಳೇ ಆದ ಸೊಸೆ ಗೀತಾಳಲ್ಲಿ ಆಪ್ತವಾಗಿ ನನ್ನ ಕಡೆಯ ಮಾತುಗಳನ್ನ ಹೇಳಿಕೊಂಡಿದೀನಿ… ಇದು ತಪ್ಪೋ ಸರಿಯೋ ಗೊತ್ತಿಲ್ಲ… ಆದರೆ ಇಬ್ಬರ ಕಡೆಯೂ ಯೋಚಿಸಬೇಕಾದ ವಿಷಯಗಳಿವೆ ಅಂತ ಅವರಿಗೆ ಮನವರಿಕೆ ಆಗಲಿ ಅಂತ ಹಾಗೆ ಮಾಡಿದೀನಿ. ಗೀತಾ ಅತ್ತೆಯ ವಿಷಯ ನನಗೆ ಹೇಳಿದ ಹಾಗೆ, ಅವರ ಅತ್ತೆ ನನ್ನ ವಿಷಯವನ್ನೂ ನಮ್ಮ ಅತ್ತೆಗೆ ಹೇಳಿಯಾರು… ಅವರ ತಪ್ಪು ಅಭಿಪ್ರಾಯಗಳು ತೊಲಗಿಯಾವು… ಅವರು ಅನಾವಶ್ಯಕವಾಗಿ ಚಿಂತೆ ಮಾಡೋದನ್ನ ನಿಲ್ಲಿಸಿ ಮೈಕೈ ತುಂಬಿಕೊಂಡು ಮೊದಲಿನಂತೆ ಆದಾರು ಅನ್ನೋ ಒಂದು ನಿರೀಕ್ಷೆ ಇದರ ಹಿಂದೆ ಇದ್ದದ್ದು..! ನಾನೂ ಮೊದಲಿಗೆ ಅತ್ತೆಯಂತೆಯೇ ಯಾರ ಮನೆ ಬಾಗಿಲಿಗೂ ಹೋಗಿ ಕೂತು ಹರಟುವ ಸ್ವಭಾವ ಇಟ್ಟುಕೊಂಡಿರಲಿಲ್ಲ… ಅದು ಹೇಗಾಯಿತೋ ತಿಳೀದು… ಗೀತಾನೇ ಆಗಾಗ ನನ್ನನ್ನ ಮಾತಾಡಿಸಿಕೊಂಡು ಬಂದಳು… ನಿಮ್ಮ ಅತ್ತೆ ಹೀಗೆ… ನೀವು ಹೀಗೆ… ಅಂತೆಲ್ಲಾ ಹೇಳ್ತಾ ನನ್ನ ಮಾತುಗಳಿಗೆ ಪ್ರಚೋದನೆ ಕೊಟ್ಟಳು… ಆನಂತರ ನನಗೇ ಅವಳಲ್ಲಿ ಇನ್ನಷ್ಟು ಹಂಚಿಕೋಬೇಕು… ಮತ್ತಷ್ಟು ಮಾತಾಡಬೇಕು ಅನ್ನಿಸೋಕ್ಕೆ ಶುರುವಾಯ್ತು. ಇರಲಿ… ಹೇಗೋ… ನಾನೂ ಹಗುರ ಆಗಬೇಕಲ್ಲ..? ಓ… ಯಾರದು ಬಂದವರು..? ಪಲ್ಲವಿ ಇರಬೇಕು..! ಸಣ್ಣ ಗೆಜ್ಜೆ ಶಬ್ದ ಕೇಳಿದರೆ ತಿಳಿಯುತ್ತೆ…
ಪಲ್ಲವಿ ಹೆಗಲಿಗೆ ಹಾಕಿಕೊಂಡ ಬ್ಯಾಗನ್ನೂ ತೆಗೆಯದೆ ಹಾಗೇ ಅಡುಗೆಮನೆ ಹೊಕ್ಕಳು. ಮಾಲತಿ ಹೊರಳಿ ನೋಡಿದಳು. ‘ಸ್ಸಾರಿ ಮಾಲತಕ್ಕ… ಲೇಟಾಯ್ತು! ಬೇಗ ಬಸ್ಸು ಸಿಗಲಿಲ್ಲ. ಶನಿವಾರ ಬಂತೂ ಅಂದ್ರೆ ನಿಮಗೆ ಮಧ್ಯಾಹ್ನದಿಂದಲೇ ಮನೆಕೆಲಸ ಶುರುವಾಗಿಬಿಡುತ್ತೆ ಅಲ್ಲವಾ..? ತಾಳಿ, ಕೈಕಾಲು ತೊಳೆದುಕೊಂಡು, ಡ್ರೆಸ್ ಚೇಂಚ್ ಮಾಡಿಕೊಂಡು ಬಂದುಬಿಡ್ತೀನಿ. ನೀವು ಕಾಫಿ ಮಾಡಿ… ಉಳಿದ ದೇವರ ಕೆಲಸ ನಾನು ಮಾಡ್ತೀನಿ. ನಂಗೂ ಪುಣ್ಯ ಬರಲಿ…’ ಎಂದಳು. ಮಾಲತಿ ಮುಗುಳುನಗುತ್ತಾ, ‘ಆಯ್ತು… ಬೇಗ ಬಾ…’ ಎಂದು ಡಬರಿಯಲ್ಲಿದ್ದ ನೀರಿನಲ್ಲಿ ಕೈ ತೊಳೆದುಕೊಂಡು ಮೇಲೆದ್ದಳು. ಪಲ್ಲವಿ ತಾನೂ ಪ್ರತಿಯಗಿ ನಕ್ಕು, ಬಟ್ಟೆಬದಲಿಸಲು ಹೋದಳು. ಮಾಲತಿ ಒಲೆಯ ಮೇಲೆ ಹಾಲಿನ ಪಾತ್ರೆ ಇಟ್ಟು ಸ್ಟವ್ ಹೊತ್ತಿಸಿ ನಿಂತಳು. ಹಾಲು ಉಕ್ಕುವಷ್ಟರಲ್ಲಿ ಪಲ್ಲವಿ ಬಂದಳು. ಅಡುಗೆಮನೆಯ ಗೋಡೆಯ ಒತ್ತಿಗಿದ್ದ ಸಣ್ಣ ಸ್ಟೂಲಿನ ಮೇಲೆ ಪಲ್ಲವಿ ಉಸ್ಸಪ್ಪ ಎನ್ನುತ್ತಾ ಕೂತು, ‘ಮೊದಲು ಕಾಫಿ ಕುಡಿದುಬಿಡ್ತೀನಿ… ಆಮೇಲೆ ತೊಳೆಯೋದಕ್ಕೆ ಕೂರ್ತೀನಿ…’ ಎಂದಳು. ‘ಹಾಗೇ ಮಾಡು ಪಲ್ಲವಿ… ನಂಗೆ ಸಣ್ಣಗೆ ತಲೆ ನೋವು… ಇಲ್ಲದಿದ್ದರೆ ನೀನು ಬಂದ ಬೆನ್ನಿಗೇ ಕೆಲಸ ಹಚ್ಚುತಾ ಇರಲಿಲ್ಲ…’ ಎಂದಳು ಮಾಲತಿ. ‘ಹೌದಾ..? ಮಾತ್ರೆ ತೊಗೊಂಡಿರಾ..?’ ಇತ್ಯಾದಿ ವಿಚಾರಿಸಿದ ಪಲ್ಲವಿ, ಮಾಲತಿ ಕೊಟ್ಟ ಕಾಫಿ ಸವಿಯತೊಡಗಿದಳು. ಮಾಲತಿಯೂ ಅಲ್ಲೇ ನಿಂತು ತಾನೂ ಕಾಫಿ ಹೀರತೊಡಗಿದಳು. ಇಬ್ಬರೂ ಕಾಫಿ ಕಪ್ಪುಗಳನ್ನು ಸಿಂಕಿಗೆ ಹಾಕಿ ಕೈ ತೊಳೆಯುತ್ತಿದ್ದಾಗ, ‘ಮಾಲತೀ… ಪಲ್ಲೂ…’ ಎಂದು ವಸುಂಧರಮ್ಮ ಕೂಗುವುದು ಕೇಳಿಸಿತು. ಇಬ್ಬರೂ ತೇವದ ಕೈ ಒರೆಸಿಕೊಳ್ಳುತ್ತಾ ಅಂಗಳಕ್ಕೆ ಬಂದರು.
ವಸುಂಧರಮ್ಮ ಸುಸ್ತಾದವರಂತೆ ಸೋಫಾದ ಮೇಲೆ ಕೂತಿದ್ದರು. ‘ಯಾರಾದರೊಬ್ಬರು ಕುಡಿಯೋಕ್ಕೆ ಒಂದು ಲೋಟ ನೀರು ಕೊಡಿ…’ ಅಂದರು. ಇಬ್ಬರೂ ಅಡುಗೆಮನೆ ಕಡೆಗೆ ಹೆಜ್ಜೆ ಇಟ್ಟು, ನಂತರ ಪಲ್ಲವಿ, ‘ನಾನು ಕೊಡ್ತೀನಿ ಬಿಡಿ…’ ಎಂದು ಒಳನುಗ್ಗಿ, ಮಾಲತಿ ಸುಮ್ಮನೆ ನಿಂತುಕೊAಡಳು. ವಸುಂಧರಮ್ಮ ಪಲ್ಲವಿ ಕೊಟ್ಟ ನೀರನ್ನು ಕುಡಿದು ಲೋಟವನ್ನು ಬರಿದುಮಾಡಿ ಎದುರಿನ ಟೀಪಾಯಿಯ ಮೇಲಿಟ್ಟು, ಬನ್ನಿ ಎಂಬಂತೆ ಇಬ್ಬರು ಸೊಸೆಯರನ್ನೂ ಹತ್ತಿರಕ್ಕೆ ಕೈಸನ್ನೆ ಮಾಡಿ ಕರೆದರು. ಸೊಸೆಯರಿಬ್ಬರೂ ಹತ್ತಿರ ಬಂದಾಗ, ವಸುಂಧರಮ್ಮ ತಮ್ಮ ಎರಡೂ ಕೈಗಳಿಂದ ಇಬ್ಬರು ಸೊಸೆಯರ ತಲೆ, ಬೆನ್ನುಗಳನ್ನೂ ಸವರಿ ಅಪ್ಪಿಕೊಂಡರು. ಸೊಸೆಯರಿಬ್ಬರೂ ಬೆರಗಾದರು..! ಅತ್ತೆ ಎಂದೂ ಇಷ್ಟು ಭಾವುಕರಾಗಿ ವರ್ತಿಸಿದ್ದಿಲ್ಲವಲ್ಲ ಎಂದುಕೊಂಡು ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡರು. ವಸುಂಧರಮ್ಮನ ಕಣ್ಣುಗಳು ತುಂಬಿದ್ದವು! ‘ಕೂತ್ಕೊಳಿ ಮಕ್ಕಳಾ…’ ಎಂದರು. ಇಬ್ಬರು ಸೊಸೆಯರೂ ಕೂತುಕೊಂಡರು.
‘ತುಳಸಮ್ಮನವರ ಮನೆಗೆ ಹೋಗಿದ್ದೆ. ಅವರೆಲ್ಲಿಗೋ ಹೋಗಿದ್ದರು. ಸೊಸೆ ಗೀತಾ ಮಾತ್ರ ಇದ್ದಳು. ಸರಿಯಮ್ಮ, ಆಮೇಲೆ ಬರ್ತೀನಿ ಅಂತ ಏಳುವುದರಲ್ಲಿ ತಲೆ ತಿರುಗು ಬಂತು. ಹಾಗೇ ಕುಸಿದು ಕೂತ್ಕೊಂಡೆ…’
‘ಅಯ್ಯೋ… ನನ್ನನ್ಯಾಕೆ ಕರೀಲಿಲ್ಲ…? ಪಕ್ಕದ ಬಿಲ್ಡಿಂಗೇ ಅಲ್ಲವ..? ಗೀತಾ ಒಂದು ಕೂಗು ಹಾಕಿದ್ರೆ ತಕ್ಷಣ ಓಡಿ ಬರ್ತಿದ್ದೆ…’ ಎಂದಳು ಮಾಲತಿ ಉದ್ವೇಗದಿಂದ.
‘ಏನೂ ಗಾಭರಿ ಆಗಬೇಡ. ಒಂದು ಘಳಿಗೇಲಿ ಸರಿ ಹೋಯ್ತು… ಗೀತಾನೇ ತಲೆಗೆ ನೀರು ತಟ್ಟಿ, ಕುಡಿಯೋಕ್ಕೆ ನಿಂಬೆಹಣ್ಣಿನ ಪಾನಕ ಮಾಡಿ ಕೊಟ್ಟಳು. ನಿಮಗೆ ನಿಶಕ್ತಿಯಿಂದಲೇ ಹೀಗಾಗಿರೋದು… ತುಂಬಾ ಚಿಂತೆ ಮಾಡ್ತೀರಿ ನೀವು… ಅದನ್ನ ಬಿಟ್ರೆ ಎಲ್ಲಾ ಸರಿಹೋಗುತ್ತೆ ಅಂತ ಉಪಚರಿಸಿದಳು. ಅವಳು ಹಾಗೆ ಅಂತಾ ಇರುವಾಗ, ನನ್ನ ಕಣ್ಣುಗಳಲ್ಲಿ ನೀರು ತುಂಬಿಕೊಂಡುಬಿಟ್ಟಿತು. ನನಗೆ ಸಮಾಧಾನ ಮಾಡ್ತಾ, ನೀವು ವೃಥಾ ಮಕ್ಕಳ ಮೇಲೆ, ಸೊಸೆಯರ ಮೇಲೆ ಬೇಸರಪಟ್ಟುಕೊಂಡಿದ್ದೀರಿ… ನಿಮ್ಮ ಸೊಸೆ ಮಾಲತಿ ನನ್ನ ಹತ್ರ ಹೀಗೆಲ್ಲಾ ಹಂಚಿಕೊAಡಿದ್ದಾಳೆ… ಈಗ ನೀವೇ ಯೋಚಿಸಿ ನೋಡಿ… ಅವರ ಜಾಗದಲ್ಲಿ ನೀವೇ ಇದ್ದಿದ್ದರೆ ಹೇಗೆ ವರ್ತಿಸ್ತಾ ಇದ್ದಿರಿ ಅಂತ..? ಆಗ ಅವರ ಕಡೆಯಿಂದ ಏನೇನು ತಪ್ಪುಗಳು ಆಗಿವೆ ಅಂತ ನಿಮಗೆ ಅನ್ನಿಸಿತ್ತೋ, ಅದಕ್ಕೆಲ್ಲಾ ಸಮರ್ಥನೆ ಸಿಗುತ್ತೆ! ಎಲ್ಲವೂ ಸಹಜವಾಗಿದೆ ಅಂತ ಅನ್ನಿಸೋಕ್ಕೆ ಶುರುವಾಗುತ್ತೆ… ಅಂತೆಲ್ಲಾ ಸುಮಾರು ಹೊತ್ತು ಮಾತಾಡಿದಳು. ನನಗೂ ಅವಳ ಮಾತಿನಲ್ಲಿ ಅರ್ಥವಿದೆ ಅನ್ನಿಸ್ತು. ಹಾಗೇ ನಿಮ್ಮಗಳ ವಿಚಾರದಲ್ಲಿಯೂ ಅನುಕಂಪ ಹುಟ್ಟಿತು… ಛೇ… ವಯಸ್ಸಾದ್ರೆ ಎಲ್ಲಾ ತಂದೆತಾಯಿಗಳೂ ಹೀಗೇ ನಾವು ಮಕ್ಕಳಿಂದ ಅನಾದರಕ್ಕೆ ಒಳಗಾದೆವು, ನಮ್ಮ ಕಾಲ ಮುಗೀತು ಇನ್ನು ಅಂತ ಅಂದುಕೊಳ್ತಾರೆ… ಆದರೆ ಪ್ರಪಂಚದಲ್ಲಿ ಎಲ್ಲಾ ಮಕ್ಕಳೂ ಹಾಗಿರೋಲ್ಲ… ಅವರುಗಳ ದೃಷ್ಟಿಯಲ್ಲಿಯೂ ಯೋಚಿಸಿದ್ರೆ, ವಾಸ್ತವದ ಸ್ಥಿತಿ ಅರ್ಥ ಆಗುತ್ತೆ ಅಂತ ನಿಧಾನವಾಗಿ ಅರಿವಾಯ್ತು…’ ಎಂದು ಸೆರಗಿನಲ್ಲಿ ಕಣ್ಣು ಒರೆಸಿಕೊಂಡರು ವಸುಂಧರಮ್ಮ.
ಪಲ್ಲವಿಗೆ ಸೂಕ್ಷ್ಮವಾಗಿ ಅರ್ಥವಾದರೂ, ವಿಷಯವೇನೆಂದು ಪೂರ್ತಿ ತಿಳಿಯಲಿಲ್ಲ. ಮಾಲತಿ ಪಲ್ಲವಿಗೆ ನಾನು ಆಮೇಲೆ ಎಲ್ಲವನ್ನೂ ಹೇಳ್ತೀನಿ ಎನ್ನುವಂತೆ ಸನ್ನೆ ಮಾಡಿ, ಅತ್ತೆಯ ಕೈ ಹಿಡಿದುಕೊಂಡು, ‘ಕಣ್ಣೀರು ಹಾಕಬೇಡಿ ಅತ್ತೆ… ಮನೆಯ ವಾಸ್ತವದ ಸ್ಥಿತಿ ಏನೂಂತ ನಿಮಗೆ ಅರ್ಥವಾಯ್ತಲ್ಲ… ಅಷ್ಟು ಸಾಕು…’ ಎಂದಳು.
ವಸುಂಧರಮ್ಮ, ‘ನನಗೆ ನನ್ನ ಮಗಳು ಲಕ್ಷ್ಮಿ ಬೇರೆ ಅಲ್ಲ, ನೀವುಗಳು ಬೇರೆ ಅಲ್ಲ… ಎಂದಾದರೂ ಅತ್ತೆ ಅನ್ನೋ ಅಧಿಕಾರದಿಂದ ನಿಮ್ಮ ಜೊತೆ ವರ್ತಿಸಿದ್ದು ಉಂಟಾ..? ನಾಲ್ಕು ಮಾತು ಬೈದಿದ್ದು ಉಂಟಾ..?’ ಎಂದು ಕೇಳಿದರು.
‘ಛೇಛೇ… ಯಾವತ್ತಿಗೂ ಇಲ್ಲ ಅತ್ತೆ… ನಾವುಗಳು ನಮ್ಮ ತವರುಮನೆಯಲ್ಲಿ ಇದ್ದದ್ದಕ್ಕಿಂತ ಹೆಚ್ಚು ಸಂತೋಷವಾಗಿ ಇಲ್ಲಿ ಇದ್ದೀವಿ… ಹಾಗಂತ ನಾವಿಬ್ರೂ ಎಷ್ಟೋ ಸಲ ಮಾತಾಡಿಕೊಂಡಿದ್ದೀವಿ…’ ಎಂದಳು ಪಲ್ಲವಿ. ಅವಳ ಕೈಯನ್ನು ವಸುಂಧರಮ್ಮ ತಮ್ಮ ಇನ್ನೊಂದು ಕೈಯಲ್ಲಿ ಹಿಡಿದು, ಮೃದುವಾಗಿ ಅದುಮುತ್ತಾ, ‘ನಮ್ಮನೆ ಸಿರಿಲಕ್ಷ್ಮಿಯರು ನೀವಿಬ್ಬರು’ ಎಂದರು. ಸೊಸೆಯರಿಬ್ಬರ ಕಣ್ಣುಗಳಲ್ಲಿಯೂ ನೀರು ಜಿನುಗಿತು. ವಸುಂಧರಮ್ಮನೇ ಮೊದಲಾಗಿ ಎಲ್ಲಾ ಮನಸ್ತಾಪದ ಮಾತುಗಳನ್ನೂ, ಆ ನಂತರ ಅರಿವಾದ ಸಂಗತಿಗಳನ್ನೂ ಹೇಳತೊಡಗಿ, ಆ ಮಾತಿನಲ್ಲಿ ಮಾಲತಿಯೂ ಪಾಲ್ಗೊಂಡು, ಪಲ್ಲವಿಗೂ ಅರ್ಥವಾಗತೊಡಗಿತು. ಮೂವರು ಹೆಂಗಸರೂ ಅತ್ತೂ ಸುರಿದೂ ಸಮಾಧಾನ ಮಾಡಿಕೊಂಡರು. ಅತ್ತೆ ಮಾತಿನ ಕೊನೆಯಲ್ಲಿ, ‘ನೀವಿಬ್ಬರೂ ಒಂದು ಮಾತು ನಡೆಸಿಕೊಡ್ತೀರಾ..? ನಾವು ಇಷ್ಟು ಹೊತ್ತೂ ಚರ್ಚೆ ಮಾಡಿದ ವಿಚಾರಗಳನ್ನ ನಿಮ್ಮನಿಮ್ಮ ಗಂಡಂದಿರ ಕಿವಿಗೆ ಹಾಕಬೇಡಿರಿ. ಮಕ್ಕಳು ನೊಂದುಕೊಳ್ತಾವೆ…’ ಎಂದರು. ಇಬ್ಬರು ಸೊಸೆಯರೂ ತಲೆಯಾಡಿಸಿದ ಮೇಲೆ, ಏನೂ ಮಾತಿಲ್ಲದೆ ಕೆಲಹೊತ್ತು ಮೂವರೂ ಸುಮ್ಮನೆ ಕುಳಿತರು.
ಅನು ತನ್ನ ತಾಯಿಯ ಬಳಿಗೆ ಬಂದು, ‘ಅಮ್ಮಾ, ಅಪ್ಪನಿಗೆ ಕಾಫಿ ಬೇಕಂತೆ…’ ಎಂದಳು. ಮಾಲತಿ, ‘ನೀನು ಕೂತ್ಕೋ ಪಲ್ಲವಿ, ನಾನೇ ಕೊಡ್ತೀನಿ. ಆಗ್ಲೇ ಕೊಡಬೇಕಾಗಿತ್ತು ಪಾಪ… ಗಿರಿಧರನಿಗೆ ರೂಮಿನಲ್ಲಿ ಒಬ್ಬನೇ ಕೂತ್ಕೊಂಡು ಒಂದೇ ಸಮನೆ ಲ್ಯಾಪ್‌ಟಾಪಿನಲ್ಲಿ ಕೆಲಸ ಮಾಡಿ ಮಾಡಿ ಚಿಟೋ ಅಂದಿರುತ್ತೆ…’ ಎಂದು ಎದ್ದಳು. ‘ನಂಗೂ ಕೊಡು…’ ಎನ್ನುತ್ತಲೇ ನಗುತ್ತಾ ಜನಾರ್ದನ ಮನೆಯೊಳಗೆ ಕಾಲಿಟ್ಟ. ವಸುಂಧರಮ್ಮ, ‘ಬಂದ್ಯಾ..? ತುಂಬಾ ಕೆಲಸವಾ ಇವತ್ತು..?’ ಎಂದಳು. ‘ಹೌದಮ್ಮಾ… ತುಂಬಾ ಟೈಯರ್ಡ್ ಆಗೋಗಿದೆ. ಬೆಳಗ್ಗೆಯಿಂದ ಬಿಡುವಿಲ್ಲದ ಹಾಗೆ ಮೀಟಿಂಗಿನ ಮೇಲೆ ಮೀಟಿಂಗು…’ ಎನ್ನುತ್ತಾ ಅಮ್ಮನ ಪಕ್ಕ ಬಂದು ಕುಳಿತ. ಮಾಲತಿ, ‘ಕಾಲು ತೊಳ್ಕೊಂಡು, ಬಟ್ಟೆ ಬದಲಾಯಿಸಿಕೊಂಡು ಬಂದುಬಿಡಿ ಒಂದೇ ಸಲ…’ ಎಂದಳು ಗಂಡನಿಗೆ. ‘ಇರಲಿ ಬಿಡಮ್ಮ., ಸಾಕಾಗಿದೆ… ಕಾಫಿ ಕುಡ್ಕೊಂಡೇ ಆಮೇಲೆ ಎಲ್ಲಾ ಮಾಡ್ಕೊಳ್ಳಿ ಈಗೇನು..?’ ಎಂದರು ವಸುಂಧರಮ್ಮ. ಜನಾರ್ದನ ನೋಡಿದ್ಯಾ ಎಂಬಂತೆ ಹೆಂಡತಿಗೆ ಹುಬ್ಬು ಹಾರಿಸಿದ. ಮಾಲತಿ ನಗುತ್ತಾ ಅಡುಗೆ ಕೋಣೆಗೆ ಹೋದಳು. ಗಿರಿಧರ ಮೈಮುರಿಯುತ್ತಾ ಕೋಣೆಯಿಂದ ಹೊರಬಂದು ತಾನೂ ಸೋಫಾದ ಮೇಲೆ ಕುಳಿತ. ಮಾಲತಿ ಎಲ್ಲರಿಗೂ ಕಾಫಿ ತಂದುಕೊಟ್ಟಳು. ಎಲ್ಲರೂ ಕಾಫಿ ಕುಡಿಯುತ್ತಾ ಸಾಮರಸ್ಯದ ಮಾತುಕತೆಗಳಲ್ಲಿ ತೊಡಗಿದರು. ಕಿಲಕಿಲನೆ ನಗುತ್ತಾ ಓಡೋಡಿ ಬಂದ ಅನು, ನೀಲೆಯರು ಕುಳಿತಿದ್ದ ಎಲ್ಲಾ ಹಿರಿಯರಿಗೂ ತಮಗೆ ಅರಿವಿಲ್ಲದಂತೆ ಸುತ್ತು ಬಂದು, ಹಾಗೇ ಬಂದ ಮಾರ್ಗದಲ್ಲಿಯೇ ಹಿಂದಿರುಗಿದರು. ಮಕ್ಕಳ ಕಲರವಕ್ಕೆ ಎಲ್ಲರೂ ನಕ್ಕರು. ಪುನೀತ ಎಲ್ಲರ ನಡುವೆ ಹಾರಿಕೊಂಡು ಬಂದು ನಿಂತು, ‘ಹಹ್ಹಹ್ಹಾ… ನಾನು ಬ್ರಹ್ಮರಾಕ್ಷಕ…’ ಎನ್ನುತ್ತಾ ನಾಟಕೀಯವಾಗಿ ಗರ್ಜಿಸಿದ. ಮಾಲತಿ, ‘ಇನ್ನೂ ಮುಖಕ್ಕೆ ಬಳ್ಕೊಂಡಿರೋ ಕಣ್ಣುಕಪ್ಪನ್ನ ಅಳಿಸಲಿಲ್ಲವೇನೋ ನೀನು..? ಈಗ ಹೋಗಿ ಮುಖ ತೊಳೀದೇ ಇದ್ರೆ ಅಷ್ಟೇ ನೋಡು’ ಎಂದು ಹುಸಿಯಾಗಿ ಗದರಿದಳು. ‘ಏ.. ಏನತ್ತಿಗೆ ನೀವು..? ಎಷ್ಟು ಮುದ್ದುಮುದ್ದಾಗಿ ಕಾಣ್ತಾ ಇದ್ದಾನೆ! ನೀವು ಹೋಗಿ ಹೋಗಿ ಗದ್ದರಿಸ್ತಿದ್ದೀರಲ್ಲ..?’ ಎನ್ನುತ್ತಾ, ‘ಬಾರೋ ಮುದ್ದು ಬ್ರಹ್ಮರಾಕ್ಷಸ… ಇಬ್ಬರೂ ಒಂದು ಸೆಲ್ಫಿ ತೊಗೊಳ್ಳೋಣ’ ಎಂದು ಪುನೀತನನ್ನು ತಬ್ಬಿ ಎಳೆದುಕೊಂಡು, ತನ್ನ ಮೊಬೈಲಿನಲ್ಲಿ ಸೆಲ್ಫಿ ತೆಗೆದ. ಜನಾರ್ದನ ಮಾಲತಿಯರ ಕಣ್ಣುಗಳು ಸಂಧಿಸಿ ಏನೋ ಸುಖವನ್ನು ಅನುಭವಿಸಿದವು. ಅಷ್ಟರಲ್ಲಿ ಗೇಟಿನ ಸದ್ದಾಯಿತು. ‘ಹಾಂ… ಬಂದಳು ನಮ್ಮ ಪುಟ್ಟ ಶಾರದೆ’ ಎನ್ನುತ್ತಾ ವಸುಂಧರಮ್ಮ ಬಾಗಿಲಿಂದಾಚೆಗೆ ಹೋದಳು. ವೀಣೆಯೊಂದಿಗೆ ಸುಕನ್ಯಾ ಅಜ್ಜಿಯ ಕಡೆಗೆ ನೋಡಿ ಮುಗುಳುನಗುತ್ತಾ ಬಾಗಿಲಿನತ್ತ ಹೆಚ್ಚೆ ಹಾಕಿದಳು. ವಸುಂಧರಮ್ಮ ವೀಣೆಯನ್ನು ಈಸಿಕೊಳ್ಳಲು ಕೈ ಹಾಕಿದಾಗ, ‘ಪರವಾಗಿಲ್ಲ ಬಿಡಜ್ಜೀ… ನಾನೇ ತರ್ತೀನಿ…’ ಎನ್ನುತ್ತಾ ತಾನೇ ಮುಂದಾಗಿ ಮನೆಯನ್ನು ಪ್ರವೇಶಿಸಿದಳು. ಅವಳನ್ನು ಹಿಂಬಾಲಿಸುತ್ತಾ ತಾನೂ ಒಳಗೆ ಪ್ರವೇಶಿಸುವ ಮುನ್ನ ವಸುಂಧರಮ್ಮನಿಗೆ, ಬಾಗಿಲ ಮಗ್ಗುಲಿನ ಗೋಡೆಯ ಮೇಲೆ ಟೈಲ್ಸಿನ ನಡುವಿನ ಮನೆಯ ಹೆಸರಿನ ಮೇಲೆ ಗಮನ ಹೋಯಿತು. ‘ತವನಿಧಿ’..! ಗೋವಿಂದಭಟ್ಟರೇ ನಿಘಂಟುಗಳಲ್ಲಿ ಶೋಧಿಸಿ, ಆರಿಸಿ ಇಟ್ಟ ಹೆಸರು ಅದು..! ‘ತವನಿಧಿ ಎಂದರೆ ಸಂಪತ್ತಿನ ಸಂಮೃದ್ಧಿ ಅಂತ! ನಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸೌಖ್ಯ ಎಲ್ಲದರ ಸಂಮೃದ್ಧಿಯೂ ಸದಾ ಕಾಲ ಇರಬೇಕು ಎಂಬ ಪರಿಕಲ್ಪನೇಲಿ ಇದೇ ಹಸರನ್ನ ಇಡಬೇಕು ಅಂತ ನನ್ನ ಮನಸ್ಸಿಗೆ ಬಂದಿದೆ’ ಎಂದಿದ್ದರು ಮನೆಗೆ ಹೆಸರನ್ನ ಇಡುವಾಗ! ಆ ಮಾತನ್ನು ಸ್ಮರಿಸಿಕೊಳ್ಳುತ್ತಾ ಭಾವುಕರಾದ ವಸುಂಧರಮ್ಮ ತಮ್ಮ ಸೆರಗಿನಲ್ಲಿ ತವನಿಧಿ ಎಂಬ ಹೆಸರಿನ ಟೈಲ್ಸಿಗೆ ಅಂಟಿಕೊAಡಿದ್ದ ಧೂಳನ್ನು ಒರೆಸಿದರು.
ರಾತ್ರಿ ಕೋಣೆಯಲ್ಲಿ ಜನಾರ್ದನ ಮಾಲತಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು, ‘ಹೂಂ… ಈಗ ಹೇಳು… ಸಂಜೆ ನಾನು ಮನೆಗೆ ಬರೋಕ್ಕೆ ಮುಂಚೆ ಏನೆಲ್ಲಾ ವಿಶೇಷ ನಡೀತು..?’ ಎಂದ.
ಮಾಲತಿ ಕಕ್ಕಾಬಿಕ್ಕಿಯಾಗಿ, ‘ಏನು ವಿಶೇಷ..? ಏನಿಲ್ಲಪ್ಪಾ… ಸುಮ್ಮನೆ ಮಾತಾಡ್ತಾ ಕೂತಿದ್ದಿವಿ ಅಷ್ಟೆ’ ಎಂದಳು.
ಜನಾರ್ದನ, ‘ನೀನು, ಪಲ್ಲವಿ, ಅಮ್ಮ… ಮೂವರೂ ಅತ್ತಿದ್ದಿರಿ! ಹಾಗಂತ ನಿಮ್ಮ ಕಣ್ಣುಗಳೇ ಹೇಳ್ತಿದ್ದವು. ಏನೂ ಮುಚ್ಚಿಡಬೇಡ… ನಿನ್ನ ಮಾಂಗಲ್ಯದ ಮೇಲೆ ಆಣೆ!’ ಎಂದ.
ಮಾಲತಿ ಹೌಹಾರಿದಳು. ‘ಇದೆಂಥಾ ಆಣೆ ನಿಮ್ಮದು? ಹೀಗೆಲ್ಲಾ ಆಣೆ ಹಾಕಬಾರದು ಅಂತ ಒಂದು ಸಲ ಮಾವ ಬೈದಿರಲಿಲ್ಲಾ ನಿಮ್ಮನ್ನ?’ ಎಂದು ಕೂಗಾಡಿ ನಂತರ ತಣ್ಣಗಾದಳು. ‘ಅತ್ತೆ ನಿಮ್ಮಲ್ಲಿ ಹೇಳಕೂಡದು ಅಂದಿದ್ದಾರೆ. ಈಗ ನೀವು ಹೇಳಬೇಕು ಅಂತ ತಾಳಿ ಮೇಲೆ ಆಣೆ ಇಡ್ತಾ ಇದ್ದೀರ..! ಏನು ಮಾಡಲಿ ನಾನು..?’ ಎಂದು ಮಿಡುಕಾಡಿ ನಂತರ, ಅತ್ತೆಯೊಂದಿಗೆ ಆ ದಿನ ಆದ ಎಲ್ಲಾ ಮಾತುಕತೆಗಳನ್ನೂ ಹೇಳಿ, ಕಡೆಯಲ್ಲಿ ‘ಈ ತುಳಸಮ್ಮನವರಿಂದಲೇ ಅರ್ಧ ನಮ್ಮ ಮನೆಯ ಸಮಸ್ಯೆ ಉಲ್ಬಣಿಸಿದ್ದು…’ ಎಂದು ಆರೋಪಿಸಿದಳು.
‘ತುಳಸಮ್ಮನವರ ಬಗ್ಗೆ ಏನು ಗೊತ್ತು ನಿಂಗೆ?’ ಎಂದು ಮರುಪ್ರಶ್ನಿಸಿದ ಜನಾರ್ದನ.
‘ಗೊತ್ತು… ಪರಿಮಳ ಗರ್ಲ್ಸ್ ಹೈಸ್ಕೂಲಿನ ರಿಟೈರ್ಡ್ ಪ್ರಿನ್ಸಿಪಾಲ್’ ಎಂದಳು ಮಾಲತಿ.
‘ಅಷ್ಟೇ ಅಲ್ಲ., ಡಾಲರ್ಸ್ ಕಾಲೋನಿಯಲ್ಲಿರೋ ಸಮಾಲೋಚನೆ ಅನ್ನೋ ಮಾನಸಿಕ ಕೇಂದ್ರದಲ್ಲಿ ಕೌನ್ಸಿಲರ್ ಆಗಿ ಕೂಡಾ ಕೆಲಸ ಮಾಡ್ತಾರೆ’
‘ಆಂ.. ಹಾಗಾ!? ನಿಮಗೆ ಹ್ಯಾಗೆ ಗೊತ್ತು?’
‘ನೀನು ಕೆಲವು ದಿನಗಳಿಂದ ಅಮ್ಮ ಬಡಕಲಾಗ್ತಾ ಇದ್ದಾರೆ… ಎಲ್ಲಾದ್ರೂ ಕರೆದುಕೊಂಡು ಹೋಗಿ, ಪೌಷ್ಟಿಕಾಂಶ ಇರೋ ಔಷಧಿ ಬರೆಸಿಕೊಂಡು ಬನ್ನಿ ಅಂತ ಹೇಳ್ತಾ ಇದ್ದೀಯ… ಆದ್ರೆ ನಾನು ಅಮ್ಮ ಕುಗ್ಗಿ ಹೋಗ್ತಾ ಇರೋದನ್ನ ಅಪ್ಪ ಆಸ್ಪತ್ರೆಗೆ ಸೇರಿದ ದಿನಗಳಿಂದ ಗಮನಿಸ್ತಾ ಬಂದಿದ್ದೀನಿ. ಅಪ್ಪ ತೀರಿಕೊಂಡ ಮೇಲಂತೂ ಇನ್ನಷ್ಟು ಕೃಶವಾಗೋದಕ್ಕೆ ಶುರುವಾದರು. ಇದಕ್ಕೆ ಯಾವ ವಿಟಮ್ಮಿನ್ನು, ಟಾನಿಕ್ಕುಗಳೂ ಪ್ರಯೋಜನವಿಲ್ಲ… ಅಮ್ಮ ಚಿಂತೆಯಿಂದಲೇ ನವೆಯುತ್ತಾ ಇರೋದು ಅಂತ ನನಗೆ ಸ್ಪಷ್ಟವಾಗಿ ಗೊತ್ತಿತ್ತು. ನಿನ್ನ ಹತ್ರಾನೂ ಹೇಳಿಕೊಂಡಿದ್ದೀನಿ ಹಲವು ಬಾರಿ… ಏನು ಮಾಡೋದು..? ನಾನೂ ಎಷ್ಟೋ ಸಲ ಆಪ್ತವಾಗಿ ಮಾತನಾಡಿಸೋಕ್ಕೆ ಪ್ರಯತ್ನಪಟ್ಟೆ… ತಮ್ಮ ಮನಸ್ಸನ್ನ ತೆರೆದಿಡೋಕ್ಕೇ ಅಮ್ಮ ತಯಾರಿರಲಿಲ್ಲ. ಯಾವುದಾದರೂ ಮನೋವೈದ್ಯರಲ್ಲಿಗೆ ಕರ್ಕೊಂಡು ಹೋಗೋಣ ಅಂದ್ರೆ ಒಪ್ತಾರಾ..? ಏನು ಮಾಡೋದು ಅಂತ ಚಿಂತಿಸ್ತಾ, ಗಿರಿಧರನೊಂದಿಗೂ ಚರ್ಚೆ ಮಾಡ್ದೆ. ನಿನಗೂ ಗೊತ್ತು… ಅವನೂ ಅಮ್ಮನ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿದ್ದ ಅಂತ! ಅವನ ಜೊತೆ ಚರ್ಚೆ ಮಾಡಿದಾಗ, ಪಕ್ಕದ ಮನೇಲಿರೋ ತುಳಸಮ್ಮನವರು ಸಮಾಲೋಚನೆ ಮಾನಸಿಕ ಕೇಂದ್ರಕ್ಕೆ ಕೌನ್ಸಿಲರ್ ಆಗಿ ವಾರಕ್ಕೆ ಎರಡು ದಿನ ಹೋಗ್ತಾರೆ ಅಂತ ಯಾರೋ ತಮ್ಮ ಸ್ನೇಹಿತರು ಹೇಳಿದ್ದರು ಅಂತ ಗಿರಿಧರನೇ ನೆನಪು ಮಾಡಿಕೊಂಡ. ಅವನೇ, ‘ಹೇಗಾದರೂ ಮಾಡಿ ನಮ್ಮಮ್ಮ ನಿಮ್ಮ ಜೊತೆಗೆ ಮನಸ್ಸು ಬಿಚ್ಚಿ ಮಾತಾಡೋ ಹಾಗೆ ನೀವೇ ಮಾಡಿಕೋಬೇಕು ಅಂತ ತುಳಸಮ್ಮನವರನ್ನೇ ಕೇಳೋಣ… ಹೇಗೂ ನಮ್ಮ ನೆರೆಯವರಲ್ಲವ..?’ ಅಂತ ಐಡಿಯಾ ಕೊಟ್ಟ. ಇಬ್ಬರೂ ಸಮಾಲೋಚನೆ ಮಾನಸಿಕ ಕೇಂದ್ರಕ್ಕೇ ಹೋಗಿ ಅವರನ್ನ ಕಂಡು ರಿಕ್ವೆಸ್ಟ್ ಮಾಡಿಕೊಂಡು ಬಂದಿವಿ. ಆಗಲಿಂದ ಅವರೇ ಕಷ್ಟಸುಖ ಮಾತನಾಡಿಸುವವರ ಹಾಗೆ ಅಮ್ಮನನ್ನ ಹುಡುಕಿಕೊಂಡು ಬಂದು ಮಾತಾಡಿಸಿ, ವಿಶ್ವಾಸಕ್ಕೆ ತೊಗೊಂಡು, ತಮ್ಮ ಮನೆಗೆ ಕರ್ಕೊಂಡು ಹೋಗಿ ದಿನಗಟ್ಟಲೆ ಮಾತಾಡಿಸಿದ್ದಾರೆ. ತಮ್ಮ ಸೊಸೆಯನ್ನ ನಿನ್ನ ಸ್ನೇಹ ಮಾಡೋಕ್ಕೆ ಪ್ರೇರೇಪಿಸಿ ಪ್ರಾಮಾಣಿಕವಾಗಿ ಎರಡು ಕಡೆಯಿಂದಲೂ ವಿಷಯ ಸಂಗ್ರಹಿಸಿದ್ದಾರೆ. ತಾವೇ ಅಮ್ಮನ ಜೊತೆಗೆ ನಮ್ಮಗಳ ಪರವಾಗಿ ಮಾತಾಡಿದರೆ, ಅನುಮಾನ ಬರಬಹುದು ಅಂತ, ಆ ಕೆಲಸವನ್ನ ಸೊಸೆ ಕೈಲಿ ಮಾಡಿಸಿದ್ದಾರೆ. ತುಳಸಮ್ಮ ನೀನಂದುಕೊಂಡ ಹಾಗೆ ಮುರಿಯೋ ಕೆಲಸ ಮಾಡಿಲ್ಲ, ಕಟ್ಟೋ ಕೆಲಸ ಮಾಡಿದ್ದಾರೆ…’ ಎಂದು ದೀರ್ಘವಾಗಿ ನಿಟ್ಟುಸಿರುಬಿಟ್ಟ ಜನಾರ್ದನ.
‘ಇಷ್ಟೆಲ್ಲಾ ಮಾಡಿದ್ದೀರಾ..!? ಯಾವತ್ತೂ ಇದರ ಬಗ್ಗೆ ನನಗೂ ಒಂದು ಮಾತು ಹೇಳಲಿಲ್ಲ?’
‘ನಿನಗೆ ಇದನ್ನೆಲ್ಲಾ ಮೊದಲೇ ಹೇಳಿದ್ದಿದ್ರೆ, ನೀನು ಅವರ ಸೊಸೆ ಹತ್ರ ಏನೇನು ಮಾತಾಡಬೇಕು ಅಂತ ಪ್ರಾಮ್ಟ್ ಮಾಡಿದ ಹಾಗಾಗ್ತಾ ಇತ್ತು… ಅಮ್ಮನ ಹಾಗೇ ನೀನೂ ಪ್ರಾಮಾಣಿಕವಾಗಿ ನಿನ್ನ ಒಳಗುದೀನ ಹಂಚಿಕೊಂಡಿದ್ದೀಯ… ನಿನ್ನ ಸಾತ್ವಿಕ ಸ್ವಭಾವಕ್ಕೆ ಅನುಗುಣವಾಗಿಯೇ ಮನೆಯ ಉಳಿದೆಲ್ಲರ ಪ್ರತಿನಿಧಿಯ ಹಾಗೆ ಮಾತಾಡಿದ್ದೀಯ..! ಥ್ಯಾಂಕ್ಯೂ…’
ಮಾಲತಿಯ ಕಣ್ಣುಗಳು ಹನಿಗೂಡಿದುವು. ‘ಛೀ ಹುಚ್ಚಿ… ಅದಕ್ಯಾಕೆ ಕಣ್ಣಲ್ಲಿ ನೀರು..? ಒಳ್ಳೇದನ್ನೇ ಮಾಡಿದ್ದೀಯ. ಅಂತೂ ಅಮ್ಮನ ದುಗುಡ ಕಳೆದು ಹಗುರವಾದರಲ್ಲ ಅಷ್ಟು ಸಾಕು! ಇನ್ನು ಗೆಲುವಾಗ್ತಾರೆ ಬಿಡು… ಯಾವ ಟಾನಿಕ್ಕೂ ಬೇಡ…’ ಎಂದು ಮಾಲತಿಯ ಕೆನ್ನೆಯ ಮೇಲಿನ ಹನಿಗಳನ್ನು ಒರೆಸಿ, ತಲೆ ಸವರಿದ. ಆ ವೇಳೆಗೆ ಮೇಲಿನ ರೂಮಿನಲ್ಲಿ ಸುಕನ್ಯಾ ವೀಣೆಯ ಅಭ್ಯಾಸ ಮಾಡುತ್ತಿರುವ ಸದ್ದು ಕೇಳಿಸತೊಡಗಿ, ಇಬ್ಬರೂ ಆಲಿಸುತ್ತಾ ಪರಸ್ಪರ ಧನ್ಯತೆಯ ಭಾವವನ್ನು ವಿನಿಮಯ ಮಾಡಿಕೊಂಡರು.
ಗಿರಿಧರನ ರೂಮಿನಲ್ಲೂ ಇನ್ನೂ ಮಂಕು ಬೆಳಕಿತ್ತು. ಗಿರಿಧರ ಹಾಸಿಗೆಯ ಮೇಲೆ ದಿಂಬಿಗೆ ಒರಗಿ ಕೂತುಕೊಂಡು, ಲ್ಯಾಪ್‌ಟಾಪಿನಲ್ಲಿ ಕೆಲಸ ಮಾಡುತ್ತಾ ಮಗ್ನನಾಗಿದ್ದ. ಪಲ್ಲವಿ ಪಕ್ಕದಲ್ಲಿ ಕಣ್ಣುಬಿಟ್ಟುಕೊಂಡೇ ಮಲಗಿದ್ದಳು.
‘ಸುಕನ್ಯಾ ಚೆನ್ನಾಗಿ ಇಂಪ್ರೂ ಆಗಿಬಿಟ್ಟಳು… ಎಷ್ಟು ಚೆನ್ನಾಗಿ ನುಡಿಸ್ತಾ ಇದ್ದಾಳೆ ನೋಡು…’ ಎಂದ ಗಿರಿಧರ ತಲೆದೂಗುತ್ತಾ.
‘ಹೌದು! ಅವಳಿಗೆ ಡೆಡಿಕೇಷನ್ ಇದೆ. ಮಾವನವರು ಇವಳು ಹೀಗೆ ನುಡಿಸೋದನ್ನ ಕೇಳಿದ್ರೆ ಎಷ್ಟು ಸಂತೋಷ ಪಡ್ತಾ ಇದ್ದರೋ ಏನೋ..!’ ಎಂದಳು ಪಲ್ಲವಿ.
‘ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲ ಅಷ್ಟೇ ಪಲ್ಲು… ಆದರೆ ನಮ್ಮ ನಡುವೇನೇ ಇದ್ದಾರೆ. ನಮ್ಮ ಒಳ್ಳೇದು ಕೆಟ್ಟದ್ದನ್ನೆಲ್ಲಾ ಗಮನಿಸ್ತಾ ಇರ್ತಾರೆ…’ ಎಂದ ಗಿರಿಧರ.
‘ಎಸ್… ಇಟ್ಸ್ ಟ್ರು…’ ಎಂದ ಪಲ್ಲವಿ, ಕ್ಷಣ ತಡೆದು, ‘ರೀ… ನಮ್ಮ ಚಿಕ್ಕದ್ದಕ್ಕೇ…’ ಎಂದು ಆರಂಭಿಸಿದಳು.
‘ಅದ್ಯಾಕೆ ಚಿಕ್ಕದಕ್ಕೇ ಅಂತೀಯ..? ಅವಳಿಗೇನು ಹೆಸರಿಲ್ಲವ..?’ ಎಂದ ಗಿರಿಧರ.
‘ಏನೋ ಮುದ್ದಿಗೆ ಹಾಗಂದೆ… ಸ್ಸಾರಿ… ನಮ್ಮ ನೀಲಂಗೆ…’
‘ಏನು ನೀಲಂಗೆ..?’
‘ಡ್ಯಾನ್ಸು ಅಂದ್ರೆ ಬಹಳ ಇಷ್ಟ. ಭರತನಾಟ್ಯಂ ಕ್ಲಾಸಿಗೆ ಸೇರಿಸೋಣವಾ ಅಂತ?’
‘ಗುಡ್! ನಾಳೆನೇ ವಿಚಾರಿಸು… ಇಬ್ಬರನ್ನೂ ಸೇರಿಸಿಬಿಡೋಣ…’
‘ಸರಿ…’ ಎಂದು ಪಲ್ಲವಿ ಮಗ್ಗುಲಾದಳು. ಗಿರಿಧರ ತನ್ನ ಕೆಲಸವನ್ನು ಮುಂದುವರೆಸತೊಡಗಿದ.
ವಸುಂಧರಮ್ಮ ತಮ್ಮ ಕೋಣೆಯ ಬಾಗಿಲನ್ನು ಮುಂದೆ ಮಾಡಿxಕೊಂಡು, ಮಗಳು ಲಕ್ಷ್ಮಿಯೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದರು. ‘ದೊಡ್ಡವ ಅರುಣ್ ಅವರಪ್ಪನ ಜೊತೆಗೆ ಕೂತು ನರಸಿಂಹರ ಸ್ತೋತ್ರವನ್ನ ಬಾಯಿಪಾಠ ಮಾಡ್ಕೋತಿದ್ದಾನೆ. ಚಿಕ್ಕವ ತೇಜಸ್ ಖಾಲಿ ಗೋಡೆ ಕಂಡ್ರೆ ಆಗದೋನಲ್ಲವ..? ಎಲ್ಲೋ ಒಂಚೂರು ಖಾಲಿ ಕಂಡ ಜಾಗದಲ್ಲಿ ನವಿಲಿನ ಚಿತ್ರ ಬಿಡಿಸ್ತಾ ಇದ್ದಾನೆ! ಅತ್ತೇದು ಊಟ ಆಯ್ತು… ಅವರಿಗೆ ಮಾತ್ರೆ ಕೊಡಬೇಕು… ನಾನು ಇನ್ನು ಮೇಲೆ ಊಟ ಮಾಡಬೇಕು…’ ಎಂದು ಲಕ್ಷ್ಮಿ ವರದಿ ಮಾಡುತ್ತಿದ್ದಳು.
‘ಆಯ್ತಮ್ಮ… ನೀನು ಇಷ್ಟೊತ್ತು ನನ್ನ ಜೊತೆಗೆ ಫೋನಿನಲ್ಲಿ ಮಾತಾಡ್ತಾ ಇದ್ದೀಯಲ್ಲ..? ಅಳಿಯಂದಿರು ಏನೂ ಅನ್ನೋಲ್ಲವ..?’ ಎಂದರು ಆತಂಕದಿAದ ವಸುಂಧರಮ್ಮ.
‘ಛೇಛೇ… ಖಂಡಿತಾ ಯಾರೂ ನನ್ನನ್ನ ಏನೂ ಅನ್ನಲ್ಲ… ಇನ್ನೂ ನಾನೇ ಆ ಕೆಲಸ ಮಾಡಬೇಕು… ಈ ಕೆಲಸ ಬಾಕಿ ಇದೆ ಅಂತ ಗಡಿಬಿಡಿ ಮಾಡ್ಕೋತೀನಿ ಅಷ್ಟೆ’ ಎಂದಳು ಲಕ್ಷ್ಮಿ ನಗುತ್ತಾ.
‘ಇಂತಹ ಮಾತನ್ನ ಮಕ್ಕಳು ಆಡಿದ್ರೆ, ಹೆತ್ತವರ ಮನಸ್ಸು ತುಂಬಿಬರದೇ ಇರುತ್ತಾ..?’ ಎಂದರು ವಸುಂಧರಮ್ಮ.
‘ಅಯ್ಯೋ ಅಮ್ಮಾ… ನಾನ್ಯಾವ ಹೊಸ ಮಾತು ಆಡಿದೆ ಈಗ ಅಂತ..? ನೀನು ಯಾಕೋ ಇವತ್ತು ತುಂಬಾ ಎಮೋಷನಲ್ ಆಗಿರೋ ಹಾಗಿದೆ! ಏನಾಯ್ತಮ್ಮ..?’ ಎಂದಳು ಲಕ್ಷ್ಮಿ.
‘ಹಾಗೇನಿಲ್ಲವಲ್ಲ! ಸರಿಯಮ್ಮ… ಹೊತ್ತಾಯಿತು… ನಿಮ್ಮತ್ತೆಗೆ ಔಷಧಿ ಕೊಡಬೇಕು ಅಂದ್ಯಲ್ಲ..? ನೋಡು ಹೋಗು… ಮಲಗಿಬಿಟ್ಟಾರು… ಇಡ್ತೀನಿ…’ ಎಂದರು ವಸುಂಧರಮ್ಮ.
‘ಆಯ್ತಮ್ಮ… ಗುಡ್ ನೈಟ್’ ಎಂದು ಫೋನ್ ಕಟ್ ಮಾಡಿದಳು ಲಕ್ಷ್ಮಿ.
ವಸುಂಧರಮ್ಮ, ಕೇಳಿಸುತ್ತಿದ್ದ ವೀಣಾ ನಾದಕ್ಕೆ ತಲೆದೂಗುತ್ತಾ, ಬಾಗಿಲು ತೆರೆದುಕೊಂಡು ಮೆಟ್ಟಿಲುಗಳನ್ನು ನಿಧಾನವಾಗಿ ಹತ್ತಿ, ಅರೆತೆರೆದಿದ್ದ ಸುಕನ್ಯಾಳ ರೂಮನ್ನು ಪ್ರವೇಶಿಸಿದರು. ಚಾಪೆಯ ಮೇಲೆ ಕೂತು ವೀಣೆ ನುಡಿಸುತ್ತಿದ್ದ ಸುಕನ್ಯಾ ಅಜ್ಜಿಯನ್ನು ಸನ್ನೆಯಲ್ಲೇ ಸ್ವಾಗತಿಸಿ, ನುಡಿಸುವುದನ್ನು ಮುಂದುವರೆಸಿದಳು. ಎದುರಿಗೆ ಕೂತ ವಸುಂಧರಮ್ಮ ತಲ್ಲೀನತೆಯಿಂದ ಕೇಳುತ್ತಾ, ದೇವಪುರದ ನಾರಾಯಣನನ್ನು ಮನಸ್ಸಿನಲ್ಲಿಯೇ ಸ್ಮರಿಸುತ್ತಾ ಕೈ ಮುಗಿದರು. ಸುಕನ್ಯಾ ನುಡಿಸುತ್ತಾ ನುಡಿಸುತ್ತಾ, ವಸುಂಧರಮ್ಮ ಮೊಮ್ಮಗಳು ಏಳಿಸುತ್ತಿದ್ದ ಭಾವದ ಅಲೆಗಳಲ್ಲಿ ತೇಲುತ್ತಾ ತೇಲುತ್ತಾ… ಕಣ್ತುಂಬಿ… ಮನದುಂಬಿ…


ಆಶಾ ರಘು


ಆಶಾ ರಘು

6 thoughts on “ತಿಂಗಳ ಕಥೆ-ಆಶಾರಘುರವರ ಹೊಸ ನೀಳ್ಗಥೆ-ತವನಿಧಿ

  1. ಛಂದದ ಕಥೆ. ಓದುತ್ತಾ ಇದ್ದಂತೆ ಅದೇ ಅತ್ತೆ ಸೊಸೆ ಘಿಸಾ ಪಿಟಾ ರೆಕಾರ್ಡ್ ಅನಿಸಿತ್ತು. ಇನ್ನೇನು ಕಥೆ ಮುಗಿದೇಹೋಯಿತು ಎನ್ನೋಹೊತ್ತಿಗೆ ಕಥೆಯ ದಿಕ್ಕೇ ಬದ,ಆಗಿಹೋಯಿತು!

  2. ಮೇಡಂ ಇದು ನಿಮ್ಮ ‘ಒಳಗುದಿ’ ಕಥೆಯ ಮುಂದಿನ ಭಾಗವಲ್ಲ ಬದಲಾಗಿ ಅದರದೆ ಭಾಗವೆನ್ನಬಹುದು. ಇದು ಒಂದು ಪ್ರಯೋಗ ಅಂದರೆ ಒಂದು ಘಟನೆ ಅಥವಾ ಸಂಗತಿಯನ್ನು ಭಿನ್ನ ಮನಸ್ಥಿತಿಯಲ್ಲಿ ಕಥೆಯಾಗಿ ಬಿಂಬಿಸುವುದು. ಇಂತಹ ಪ್ರಯೋಗಗಳೇ ಸೃಜನಶೀಲತೆ ಎನ್ನುವುದು ಮುತ್ತು ಅದು ಲೇಖಕಿಯ ಶಕ್ತಿ. ಇನ್ನಷ್ಟು ಇಂತಹ ಪ್ರಯೋಗಗಳು ಬರಲಿ

  3. ನೀರ್ಗಲ್ಲಿನ ತುಂಬು ಝರಿಯಂತೆ,
    ಸದಾಕಾಲದ ಸಹಜ ಬುಗ್ಗೆಯಹಾಗೆ ನಿಮ್ಮ ಪದಲಾಲಿತ್ಯ, ಭಾವ ಜೀವಗಳು ಹೊಸೆದು ಬಂದಂತೆ ನಿಮ್ಮ ಶಬ್ಧ ಚಮತ್ಕಾರ ಮತ್ತು ನಿಮ್ಮ ಅತ್ಯದ್ಭುತ ವಾದ ಕ್ರಿಯಾಶೀಲ ಕಥನಶೈಲಿಗಳು ವಸ್ತು- ತಂತ್ರಗಳ ಕ್ಲೀಷೆಗಳನ್ನು ಕಳೆದು ಓದುಗರ ಉತ್ಸಾಹವನ್ನು ಜತನದಿಂದ ಉಳಿಸಿಕೊಂಡು ಹೋಗುತ್ತವೆ. ನಾವತಾರೆಯ ಉದಯಕ್ಕೆ ನಿಮಿತ್ತವಾಗುವ ಅರೋರಾದ ದಿವ್ಯ ಪ್ರಭೆಯಂತೆ ನಿಮ್ಮ ಕಥೆ ಕಾದಂಬರಿಗಳು ಬರಹಗಳು, ಲೇಖನಗಳು ಕನ್ನಡ ಸಾರಸ್ವತ ಲೋಕಕ್ಕೆ ಹೊಸ ಆಶಾಕಿರಣ ಮೂಡಿಸಿದೆ ಮೇಡಂ ಅಭಿನಂದನೆಗಳು ಶುಭರಾತ್ರಿ.

  4. ಒಂದು ಅದ್ಭುತವಾದ ಕೌಟುಂಬಿಕ ಕತೆ. ಒಮ್ಮೆ ಓದಲು ಕೂತರೆ, ಕಡೆಯವರೆಗೂ ಎಳೆದು ಕೂರಿಸುವ ಅಯಸ್ಕಾಂತ ಶಕ್ತಿ ನಿಮ್ಮ ಕತೆ ಹೇಳುವ ಶೈಲಿಗಿದೆ. ಎಂಥಾ ಒಂದು ಸುಂದರ ಕಲ್ಪನೆ! ಧನಾತ್ಮಕ ಚಿಂತನೆ. ಅದರ ಹೆಸರಿಗೆ ತಕ್ಕಂತೆ ಓದಿದ ನನಗೂ ಸುಖ, ಶಾಂತಿ, ನೆಮ್ಮದಿ – ಸಂಪತ್ತಿನ ಸಮೃದ್ಧಿ ದೊರೆತಂತಾಯಿತು. ಧನ್ಯವಾದಗಳು, ಶುಭವಾಗಲಿ.

  5. ಪ್ರಿಯ ಆಶಾ,
    ನ್ಸಲಿಂಗ್ ನ ಪ್ರಾಮುಖ್ಯತೆಯನ್ನು ಮನಗಾಣಿಸುವ, ಮನೆಯವರೆಲ್ಲ ಮನಸುಗಳು ಒಂದಾದರೆ ಅದೇ ತವನಿಧಿ ಎನ್ನುವ ಈ ಕಥೆ ಸೊಗಸಾಗಿದೆ. ನಿಮ್ಮಿಂದ ಇನ್ನಷ್ಡು ಮಗದಷ್ಟು ಇಂತಹ ಸಂದೇಶಪೂರ್ಣ ಕಥೆಗಳು, ಕಾದಂಬರಿಗಳು ಹೊರಬರಲಿ❤

  6. ಪ್ರಿಯ ಆಶಾ,
    ಕೌನ್ಸಲಿಂಗ್ ನ ಪ್ರಾಮುಖ್ಯತೆಯನ್ನು ಮನಗಾಣಿಸುವ, ಮನೆಯವರೆಲ್ಲ ಮನಸುಗಳು ಒಂದಾದರೆ ಅದೇ ತವನಿಧಿ ಎನ್ನುವ ಈ ಕಥೆ ಸೊಗಸಾಗಿದೆ. ಕಥೆ ಓದುತ್ತಿದ್ದರೆ ನಾವೇ ಅಲ್ಲಿ ನಿಂತು ಎಲ್ಲ ಪಾತ್ರಗಳನ್ನು ನೋಡಿಬಂದಂತೆ ಭಾಸವಾಯಿತು. ನಿಮ್ಮಿಂದ ಇನ್ನಷ್ಟು ಮಗದಷ್ಟು ಇಂತಹ ಸಂದೇಶಪೂರ್ಣ ಕಥೆಗಳು, ಕಾದಂಬರಿಗಳು ಹೊರಬರಲಿ❤

Leave a Reply

Back To Top