ಅಂಕಣ ಸಂಗಾತಿ

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -2

ನಮ್ಮ ಮಕ್ಕಳನ್ನು ಗಟ್ಟಿ ಮನಸ್ಸಿಗರನ್ನಾಗಿ ಬೆಳೆಸೋಣ

ಓದುವ ಮುನ್ನ-

ನಮಸ್ತೆ, ಎಲ್ಲಾ ರೀತಿಯ ಅಂದರೆ ರಾಜಕೀಯ,  ಸಾಮಾಜಿಕ, ನಿತ್ಯ ನಡೆಯುವ ಘಟನೆಗಳ ಮೇಲೆ, ವಾರ್ತೆಗಳ ಮೇಲೆ, ಆರೋಗ್ಯದ ಬಗ್ಗೆ, ಮಕ್ಕಳ ಬಗ್ಗೆ.. ಹೀಗಿನ ಅಂಕಣಗಳು ಎಲ್ಲಾ ಪತ್ರಿಕೆಗಳಲ್ಲಿ ಬರುತ್ತಿವೆ. ಆಧುನಿಕ ಮನಸ್ಥಿತಿಗೆ ನಕ್ಕು ಹಗುರಾದರೆ ಅದೇ ಮಾತ್ರೆ, ಔಷದ ಇದ್ದ ಹಾಗೆ. ಅದಕ್ಕಾಗಿ, ಆ ದಿಸೆಯಲ್ಲಿ ಯೋಚಿಸಿ ಈ ಅಂಕಣ. ಸಲಹೆ, ಬೆಳವಣಿಗೆಗಾಗಿ ಸಹೃದಯ ಕನ್ನಡಿಗರ ಮುಂದೆ ಇಡಲಾಗಿದೆ. ಧನಾತ್ಮಕ ಋಣಾತ್ಮಕ ಎರಡೂ ಅಂಶಗಳಿಗೆ ಸ್ವಾಗತವಿದೆ. ನೀವೇನಂತೀರಿ?

ನಮ್ಮ ಮಕ್ಕಳನ್ನು ಗಟ್ಟಿ ಮನಸ್ಸಿಗರನ್ನಾಗಿ ಬೆಳೆಸೋಣ

ಈ ವಾರದ ಒಂದು ಸುದ್ದಿ. ಬೆಂಗಳೂರಿನಲ್ಲಿ ಒಂದು ಖಾಸಗಿ ಶಾಲೆಯಲ್ಲಿ ಮೊದಲನೇ ಸಂಕಲನಾತ್ಮಕ ಪರೀಕ್ಷೆ ಬರೆಯುವಾಗ ಓದದ ವಿದ್ಯಾರ್ಥಿನಿ ಒಬ್ಬಳು ಚೀಟಿ ತಂದಿದ್ದಾಳೆ ಮತ್ತು ಪರೀಕ್ಷಾ ಸಮಯದಲ್ಲಿ ಚೀಟಿ ಇಟ್ಟು ಬರೆಯುವುದು ತಪ್ಪು ಮತ್ತು ಇತರ ಓದಿದ ವಿದ್ಯಾರ್ಥಿಗಳಿಗೆ ಮೋಸ ಆಗುವುದಿಲ್ಲವೇ? ಅದಕ್ಕೆ ಎಲ್ಲಾ ಶಿಕ್ಷಕರೂ ಇದು ತಪ್ಪು ಹೀಗೆ ಮಾಡಬಾರದು ಎಂದು ಹೇಳುವುದು ಸಹಜ. ಹಾಗಂತ ಬುದ್ಧಿ ಹೇಳಿದರು ಎಂಬ ಮಾತ್ರಕ್ಕೆ ನೇಣಿಗೆ ಶರಣಾಗುವುದು ಹೇಡಿತನ ಅಲ್ಲವೇ?

ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದರ ಮುಂದೆ ಎಸ್ ಎಸ್ ಎಲ್ ಸಿ ಪರೀಕ್ಷೆ ತೀರಾ ಚಿಕ್ಕದು. ಫೈನಲ್ ನಲ್ಲಿ ಅದು ಪಬ್ಲಿಕ್ ಪರೀಕ್ಷೆ ಅಷ್ಟೇ. ತಿದ್ದುವವರು ಯಾವುದೋ ಜಿಲ್ಲೆಯ ಯಾವುದೋ ಶಿಕ್ಷಕರು. ಹಿಂದಿನ ವರ್ಷಗಳಲ್ಲಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಸಿಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಕಡಿಮೆ ಫಲಿತಾಂಶ ಬರಲಿ ಎಂದೋ ಏನೋ, ಅತ್ಯಂತ ಹೆಚ್ಚು ಮಕ್ಕಳು ಅನುತ್ತೀರ್ಣರಾಗಿದ್ದರು. ಮರು ಮೌಲ್ಯಮಾಪನಕ್ಕೆ ದುಡ್ಡಿದ್ದ ವಿದ್ಯಾರ್ಥಿಗಳು ಮತ್ತು ಕೆಲವು ಬಡ ಮಕ್ಕಳಿಗೆ ಅವರ ಶಿಕ್ಷಕರು ಹಣ ಕಟ್ಟಿ ಅರ್ಜಿ ಸಲ್ಲಿಸಿದ ಬಳಿಕ ಒಂದೇ ವರ್ಷದಲ್ಲಿ ಒಂದು ಜಿಲ್ಲೆಯ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಅದಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಉತ್ತಮವಾದ (ಹೆಚ್ಚು) ಅಂಕಗಳನ್ನೂ ಪಡೆದಿದ್ದರು. ಹೀಗೆ ಪಬ್ಲಿಕ್ ಪರೀಕ್ಷೆ ಆದರೆ ಅವರ ಅಂಕಗಳ ಬಗ್ಗೆ ಸರಿಯಾಗಿ ಹೇಳಲು ಬಾರದು. ಕೆಲವು ಬಾರಿ ನಪಾಸಾಗುವ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಆದರೆ ಯಾವ ಶಿಕ್ಷಕರೂ ಓದುವ ವಿದ್ಯಾರ್ಥಿಗೆ ಮೋಸ ಮಾಡಲು ಬಯಸುವುದಿಲ್ಲ ಎಂಬುದು ನಮ್ಮ ಭಾವನೆ. ಕಾರಣ ಓದುವ ಮಕ್ಕಳಿಗೆ ದೊರೆತ ಪೂರ್ಣ ಅಂಕಗಳನ್ನು ನೀಡಿರುವುದನ್ನು ನೀವು ನಾವು ನೋಡಿದ್ದೇವೆ. ಹಾಗೆಯೇ ಯಾವ ಶಿಕ್ಷಕರಿಗೂ ಯಾವ ವಿದ್ಯಾರ್ಥಿಯ ಮೇಲೆಯೂ ವೈಯಕ್ತಿಕ ದ್ವೇಷ ಇಲ್ಲ. ಎಲ್ಲಾ ವಿದ್ಯಾರ್ಥಿಗಳೂ ಚೆನ್ನಾಗಿ ಓದಿ ಉತ್ತೀರ್ಣರಾಗಿ ಮುಂದೆ ಸಾಗಲಿ ಎಂಬುದೇ ಎಲ್ಲಾ ಶಿಕ್ಷಕ ವೃಂದದ ಆಶಯ. ಕಣ್ ತಪ್ಪಿನಿಂದ ಎಲ್ಲೋ ಏನೋ ಒಂದಷ್ಟು ಏರು ಪೇರಾಗುವುದು ಸಹಜ. ಕಾರಣ ಟೀಚರ್ ಯಂತ್ರ ಅಲ್ಲ ತಾನೇ?

ಓದದೇ ಇರುವ, ಮಾನಸಿಕವಾಗಿಯೂ ಶೈಕ್ಷಣಿಕವಾಗಿಯೂ ಕಲಿಕೆಯಲ್ಲಿ ಹಿಂದುಳಿದ ಅದೆಷ್ಟೋ ವಿದ್ಯಾರ್ಥಿಗಳು ಪಿಯುಸಿ ನಂತರ ಎಚ್ಚೆತ್ತುಕೊಂಡು ಪದವಿ ಪೂರ್ಣಗೊಳಿಸಿದ, ಬೇರೆ ಬೇರೆ ಉತ್ತಮ ಕೋರ್ಸ್ ಗಳನ್ನೂ ಮಾಡಿದ ಉದಾಹರಣೆಗಳಿವೆ. ಹಾಗಾಗಿ ಕಲಿಕೆಗೆ ಶಿಕ್ಷಕರು ಮತ್ತು ಪೋಷಕರು ಸಹಕರಿಸಬಹುದು ಮತ್ತು ಉತ್ತೇಜಿಸಿ ಬಹುದು. ಪೋಷಣೆ ನೀಡಬಹುದು, ಪಾಠ ಹೇಳಿ ಕೊಡಬಹುದು, ಸಾಮಾಗ್ರಿಗಳ ತಂದು ಕೊಡ ಬಹುದು. ಓದುವ ಮತ್ತು ಚೆನ್ನಾಗಿ ಪರೀಕ್ಷೆ ಬರೆಯುವ ಕಾರ್ಯ ವಿದ್ಯಾರ್ಥಿಯೇ ಮಾಡ ಬೇಕು ಅಲ್ಲವೇ? ಅದನ್ನು ಸತ್ಯ, ಪ್ರಾಮಾಣಿಕತೆ, ನಿಷ್ಠೆಯಿಂದ ಮಾಡಬೇಕು. ಇದು ಎಲ್ಲಾ ಪೋಷಕರ, ಶಿಕ್ಷಕರ, ಸಮಾಜದ ಆಸೆ, ಆಶಯ. ಎಲ್ಲಾ ಶಾಲೆಗಳು ಈ ರೀತಿಯ ವಿದ್ಯಾರ್ಥಿಗಳನ್ನು ಬೆಳೆಸುವ ಗುರಿಯನ್ನೇ ಇಟ್ಟುಕೊಂಡಿವೆಯೇ ಹೊರತು, ಸಣ್ಣ ಸಣ್ಣ ಕಾರಣಗಳಿಗೆ ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳುವ ಗುಣಗಳನ್ನು ಬೆಳೆಸುವ ಕಾರ್ಯ ಪ್ರಪಂಚದ ಯಾವ ಮೂಲೆಯಲ್ಲೂ ಆಗದು.

ವಿದ್ಯಾರ್ಥಿ ಶಾಲಾ ಶಿಕ್ಷಕರು ನೀಡುವ ಸಣ್ಣ ಪುಟ್ಟ ಪೆಟ್ಟು ಅಥವಾ ಬೈಗುಳಗಳು, ನಿಂದನೆಗಳು ಇವಕ್ಕೆಲ್ಲ ಹೆದರಿ ಆತ್ಮಹತ್ಯೆ ಮಾಡಿಕೊಂಡು ಆ ಸಾವಿಗೆ ಆ ಶಿಕ್ಷಕರೇ ಕಾರಣರು ಎಂದಾದರೆ ಯಾವ ತಂದೆ ತಾಯಿ ಬುದ್ಧಿ ಮಾತು ಹೇಳಬಾರದು, ಗದರ ಬಾರದು, ತಮ್ಮ ಮಕ್ಕಳಿಗೆ ಹೊಡೆಯ ಬಾರದು, ಏನೂ ಹೇಳಲೇ ಬಾರದು. ವಿದ್ಯಾರ್ಥಿ ಮನೋಶಾಸ್ತ್ರದ ಪ್ರಕಾರ ಕೆಲವೊಂದು ಒಳ್ಳೆಯದಲ್ಲದ ಗುಣಗಳನ್ನು ವಿದ್ಯಾರ್ಥಿಗಳು ಬೇಗ ಸಂಘ ದೋಷದಲ್ಲಿ ಕಲಿಯುವರು. ಅದನ್ನು ಬಿಡಿಸಲು ಸುಮ್ಮನೆ ಬಾಯಿ ಮಾತಿನಲ್ಲಿ ಹೇಳಿದರೆ ಅವರು ಕೇಳುವುದಿಲ್ಲ. ಹಾಗಂತ ಆಯುಧಗಳನ್ನು ಬಳಸಬೇಕು ಎಂದಲ್ಲ. ಹಿಂದಿನ ಕಾಲದ ಜನಪದದಲ್ಲಿ ಹೇಳಿರುವ ಹಾಗೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಹಾಗೆಯೇ ಬೆಳೆಯ ಸಿರಿ ಮೊಳಕೆಯಲ್ಲಿಯೇ ನೋಡಬೇಕು. ಮಕ್ಕಳು ಕುಂಬಾರರು ಮಾಡುವ ಮಡಕೆಯಂತೆ. ಒಳಗೆ ಪ್ರೀತಿಯಿಂದ ಕೈಯ್ಯಾಡಿಸುತ್ತಿರಬೇಕು, ಹೊರಗಿನಿಂದ ಉತ್ತಮ ರೂಪ ಬರಲು ಸ್ವಲ್ಪ ಆಕಾರವೂ ಬರಲು ಮೆಲ್ಲಗೆ ತಟ್ಟುತ್ತಿರಬೇಕು. ಹೆಚ್ಚು ತಟ್ಟಿದರೂ ಅಪಾಯಕಾರಿ. ವಿದ್ಯೆ, ಬುದ್ಧಿ, ಉತ್ತಮ ಗುಣಗಳನ್ನು ತಪ್ಪಿದರೆ ಭವಿಷ್ಯ ಅಪಾಯಕಾರಿ. ಹಾಗೆ ಆಗದೆ ಇರಲು ಬುದ್ಧಿ ಮಾತು, ತಪ್ಪು ತಿದ್ದುವುದು ಸಹಕಾರಿ. ಸಮಾಜದಲ್ಲಿ ಯುವ ಜನತೆ ಹಾಳಾಗಲು ಎಳವೆಯಲ್ಲಿ ಅವರನ್ನು ಮುದ್ದು ಮಾಡಿ ಬೆಳೆಸಿ, ಅವರ ತಪ್ಪುಗಳನ್ನು ತಿದ್ದದೆ, ನೀನು ಮಾಡಿದ್ದೆಲ್ಲಾ ಸರಿ ಎಂದು ಬೆಳೆಸಿರುವುದೂ ಒಂದು ಕಾರಣ ಹಾಗೂ ದುರಂತ ಅಲ್ಲವೇ?

ಶಾಲೆ ಒಂದು ಸಂಸ್ಥೆ. ಇಲ್ಲಿ ಬೇರೆ ಬೇರೆ ಜಾತಿ, ಧರ್ಮ, ಸಂಸ್ಕೃತಿ, ನೆಲೆಗಟ್ಟು, ಆಚರಣೆಯನ್ನು ನಂಬುವ ಕುಟುಂಬದಿಂದ ಬಂದ ವಿದ್ಯಾರ್ಥಿಗಳು ಜೊತೆಯಾಗಿ ಕಲೆತು ಕಲಿಯುವ ವಿದ್ಯಾ ಮಂದಿರವೇ ಜ್ಞಾನ ದೇಗುಲ. ಯಾವುದೇ ಜಾತಿ ಧರ್ಮದ ವಿದ್ಯಾರ್ಥಿಗಳೇ ಆದರೂ ಆ ಶಾಲೆಯ ರೀತಿ ರಿವಾಜುಗಳನ್ನು ಪಾಲಿಸಲೇ ಬೇಕು. ಅದನ್ನು ಪೋಷಕರ ಸಹಕಾರ ಇಲ್ಲದೇ ಶಾಲೆ ನಡೆಸಲು ಆಗದು. ಶಾಲೆಯಲ್ಲಿ ಬದಲಾವಣೆ ಬೇಕೆಂದು ಅನ್ನಿಸಿದರೆ ಪೋಷಕರೂ, ಶಿಕ್ಷಕರೂ, ಆಡಳಿತ ಮಂಡಳಿಯವರು ಕೂಡಾ ಒಪ್ಪಿ ಅದನ್ನು ಬದಲಾಯಿಸಬೇಕು. ಸರಕಾರಿ ಶಾಲೆ ಆದರೆ ಸರಕಾರದ ಮತ್ತು ವಿದ್ಯಾ ಇಲಾಖೆಯ ಕಾನೂನುಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲಿ ಪ್ರತಿ ಶಿಕ್ಷಕ, ವಿದ್ಯಾರ್ಥಿ, ಪೋಷಕ ಎಲ್ಲರೂ ಮುಖ್ಯರೇ. ಅಲ್ಲಿ ಶಿಕ್ಷಕರು ಮತ್ತು ಪೋಷಕರಿಗೆ ಕಲಿಕೆಯ ಜೊತೆಗೆ ಮಗುವನ್ನು ಒಳ್ಳೆಯ ಪ್ರಜೆಯಾಗಿ ರೂಪಿಸುವ ಜವಾಬ್ದಾರಿ ಇರುತ್ತದೆ. ಹಾಗೆಯೇ ವಿದ್ಯಾರ್ಥಿಗಳಿಗೆ ಹಿರಿಯರ ಮಾತನ್ನು ಪಾಲಿಸುವ, ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಇರುತ್ತದೆ. ಅವರ ಆಸೆ, ಆಕಾಂಕ್ಷೆಗಳಿಗೆ ಸಹ ಬೆಲೆ ಕೊಡಲಾಗುತ್ತದೆ.

ಅಕ್ಷರ ಜ್ಞಾನದ ಜೊತೆಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜೀವನ ಶಿಕ್ಷಣ ಕಲಿಯುವುದು ಕೂಡಾ ಅಗತ್ಯ. ಪರೀಕ್ಷೆಯನ್ನು ಯಾವಾಗ ಬೇಕಾದರೂ ಬರೆಯಬಹುದು ಆದರೆ ಸತ್ಯಸಂದತೆ, ಪ್ರಾಮಾಣಿಕತೆ, ದಯೆ, ಪ್ರೀತಿ, ಉತ್ತಮ ಹವ್ಯಾಸಗಳು, ಗಟ್ಟಿತನ, ಗೆಳೆಯರೊಡನೆ ಹೊಂದಿಕೊಂಡು ಬಾಳುವ ಗುಣ, ತಾಳ್ಮೆ, ಸಹನೆ, ಇದೆಲ್ಲವನ್ನೂ ಬದುಕಿನಲ್ಲಿ ಕಲಿಯಬೇಕಿದೆ ವಿದ್ಯಾರ್ಥಿಗಳು. ಮೂರು ವರ್ಷದಲ್ಲಿ ಕಲಿತದ್ದು ನೂರು ವರ್ಷಗಳವರೆಗೆ ಬಾಳ ಬೇಕಿದೆ ಕೂಡಾ. ನಕಲು ಮಾಡಿ ಎಂದು ಶಿಕ್ಷಕರು ಸುಮ್ಮನೆ ಬಿಟ್ಟು ಬಿಡಬೇಕೆ? ಶಿಕ್ಷಕರಿಗೆ ಬುದ್ಧಿ ಹೇಳುವ ಅವಕಾಶವೂ ಇಲ್ಲವೇ? ಪೋಷಕರು ಮಕ್ಕಳನ್ನು ಬೆಳೆಸುತ್ತಿರುವ ದಾರಿ ಸರಿ ಇಲ್ಲ. ಮಕ್ಕಳು ಏನು ಮಾಡಿದರೂ ಸರಿ. ಇತರರು ತಪ್ಪು ಎಂದು ಬೆಳೆಸಿದರೆ ಹೀಗೇ ಆಗೋದು. ಮಕ್ಕಳಿಗೆ ತಾವು ಕೂಡಾ ತಿದ್ದಿ ಬುದ್ಧಿ ಹೇಳ ಬೇಕೆ ಹೊರತು ತಮ್ಮ ತಪ್ಪಿಗೆ ಶಿಕ್ಷಕರನ್ನು ದೂರುವುದು ಅಲ್ಲ. ಮಕ್ಕಳ ಮನಸ್ಸನ್ನೂ ಗಟ್ಟಿ ಮಾಡಬೇಕು. ಜೀವನದಲ್ಲಿ ಮುಂದೆ ಅದೆಂಥ ದೊಡ್ಡ ಸವಾಲು ಬಂದರೂ ಎದುರಿಸಲು ಸಿದ್ಧರಾಗಬೇಕು ಅವರು. ಅದರ ಬದಲು ಕಷ್ಟಕ್ಕೆ ಹೆದರಿ ಬದುಕನ್ನು ತಾವೇ ಕೊನೆಗೊಳಿಸುವ ಯೋಚನೆ ತಪ್ಪು. ಇದರಲ್ಲಿ ದೃಶ್ಯ ಮಾಧ್ಯಮಗಳ ಪ್ರಭಾವವೂ ಇದೆ. ಈ ರೀತಿಯ ಚಿತ್ರಣಗಳನ್ನು ಅರ್ಧರ್ಧ ಗಂಟೆ ಲೈವ್ ಆಗಿ ತೋರಿಸುತ್ತಾ ಬಿತ್ತರಿಸುವುದು ಕೂಡಾ ತಪ್ಪೇ ಅಲ್ಲವೇ? ಸಾಮಾಜಿಕ ಜಾಲ ತಾಣಗಳು ಕೂಡಾ ಮಕ್ಕಳ ಸಮಯವನ್ನು ತಿಂದು, ಅವರು ಓದದೇ ಶಾಲೆಗೆ ಹೋಗಿ, ಕದ್ದು ಅಂಕ ಪಡೆಯುವ ಈ ದಾರಿಗೆ ಮುಂದಾಗುತ್ತಾರೆ. ಮೊಬೈಲ್ ಮಕ್ಕಳ ಕೈಗೆ ಕೊಡುವ ಪೋಷಕರೂ ಕೂಡಾ ಹೊಣೆ ಅಲ್ಲವೇ ಇಂತಹ ಘಟನೆಗಳಿಗೆ? ಮನಸ್ಸಿಗೆ ನೋವಾದಾಗ ಯಾರು ಮುಂದೆ ಸಿಗುತ್ತಾರೋ ಅವರನ್ನು ದೂಷಿಸುವುದು ಸರ್ವೇ ಸಾಮಾನ್ಯ. ಇದಕ್ಕೆಲ್ಲ ಸುಲಭವಾಗಿ ಕೈಗೆ ಸಿಗುವುದು ಶಿಕ್ಷಕರೇ! ಪೆಟ್ಟು ಕೊಟ್ಟರೆ ತಪ್ಪು(ಕೆಲವೊಂದು ಹಿಂಸಾತ್ಮಕ ಘಟನೆಗಳನ್ನು ಹೊರತು ಪಡಿಸಿ), ಬುದ್ಧಿ ಹೇಳುವುದು ತಪ್ಪು, ತಪ್ಪು ಮಾಡಿದರೆ ದೂಷಿಸುವುದು ತಪ್ಪು, ಆಟ ಆಡಿಸುವುದು ತಪ್ಪು, ಬಟ್ಟೆಯ ಬಗ್ಗೆ ಹೇಳುವುದು ತಪ್ಪು..ಹಾಗಾದರೆ ಬುದ್ಧಿ ಹೇಗೆ ಕಲಿಸುವುದು? ಶಾಲೆಗೆ ಯಾಕೆ ಕಳಿಸುವುದು? ಮನೆಯಲ್ಲೇ ಹೇಳಿ ಕೊಡಬಾರದೇ? ಶಿಕ್ಷಕರಿಗೂ ಮನಸ್ಸಿದೆ, ಕುಟುಂಬ ಇದೆ, ಜವಾಬ್ದಾರಿಗಳಿವೆ, ಒತ್ತಡಗಳಿವೆ, ನೋವುಗಳಿವೆ, ಅವರ ಮನಸ್ಸು ಕೂಡಾ ಮರುಗುತ್ತದೆ. ಅವರು ಯಾರೂ ತನ್ನ ವಿದ್ಯಾರ್ಥಿ ಸಾಯಲಿ ಎಂದು ಖಂಡಿತಾ ಎಂದೂ ಬಯಸುವುದಿಲ್ಲ. ಸಮಾಜ ಶಿಕ್ಷಕರ ಪರಿಧಿಯನ್ನು ಸಂಕುಚಿತ ಗೊಳಿಸುತ್ತಾ ಬಂದು ಬಯ್ಯೋ ಹಾಗಿಲ್ಲ, ಕೋಲು ಹಿಡಿಯುವ ಹಾಗಿಲ್ಲ, ಕಣ್ಣಲ್ಲೂ ಜೋರು ಮಾಡುವಂತಿಲ್ಲ, ಓದು, ಬರಿ ಅನ್ನುವ ಹಾಗಿಲ್ಲ, ಜಸ್ಟ್ ಅ ಗೈಡ್ ಅಷ್ಟೇ. ಇದನ್ನೇ ಮುಂದುವರೆಸಿಕೊಂಡು ಹೋಗಿ ಹತ್ತನೆ ತರಗತಿಯಲ್ಲಿ ಓದುತ್ತಿರುವ ಹಲವಾರು ವಿದ್ಯಾರ್ಥಿಗಳಿಗೆ ಇಂದಿಗೂ ತಮ್ಮ ಸ್ವಂತವಾದ ಒಂದು ವಾಕ್ಯವನ್ನು ಕೂಡಾ ರಚಿಸಲು ಬರುವುದಿಲ್ಲ. ಇದು ಇಪ್ಪತ್ತು ವರ್ಷಗಳ ನನ್ನ ಅನುಭವದಲ್ಲಿ ನಾನು ಕಂಡುಕೊಂಡ ಸತ್ಯ. ಮೊಬೈಲ್, ಟಿವಿ ಮತ್ತು ಅತಿ ಮುದ್ದು, ಸಮಯ ಕೊಡದೆ ಇರುವುದು ಇದಕ್ಕೆ ಕಾರಣ. ಇದರಿಂದಾಗಿ ಹತ್ತನೇ ತರಗತಿಯಲ್ಲಿ ಕಡಿಮೆ ಅಂಕಗಳು ಬಂದರೆ ಅದಕ್ಕೆ ಕಾರಣ ಶಿಕ್ಷಕರು.! ಯಾರನ್ನೂ ದೂರುವ ಹಾಗಿಲ್ಲ. ಶಿಕ್ಷಕರಿಗೆ ಯಾರೂ ಕೇಳುವವರೇ ಇಲ್ಲ!
ತಪ್ಪು ಎಲ್ಲರದ್ದೂ ಇದೆ. ಚಿಕ್ಕಂದಿನಿಂದ ಮಕ್ಕಳನ್ನು ಬೆಳೆಸುವಾಗ ಕುಟುಂಬ ಮತ್ತು ಶಾಲೆ ಅವರನ್ನು ಗಮನಿಸಿ, ತಪ್ಪು ತಿದ್ದಿ ಬದುಕಿನ ಬಗ್ಗೆ ತಿಳಿಸಿ ಕೊಟ್ಟಲ್ಲಿ ಬದುಕಿನ ಸಣ್ಣಪುಟ್ಟ ತೊಂದರೆಗಳನ್ನು ನಿಭಾಯಿಸಲು ಅದು ಸಹಕಾರಿ. ಅದನ್ನು ಬಿಟ್ಟು ಒಬ್ಬರು ಇನ್ನೊಬ್ಬರ ಮೇಲೆ ಗೊಬೆ ಕೂರಿಸುತ್ತ ಹೋದರೆ ಸಮಸ್ಯೆಗಳು ಹಾಗೆಯೇ ಮುಂದುವರೆದು ಎಲ್ಲರಿಗೂ ನಷ್ಟವೇ ಅಲ್ಲವೇ? ಆ ದಿಸೆಯಲ್ಲಿ ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ಕೊಡಲು ಪೋಷಕರು ಮತ್ತು ಶಿಕ್ಷಕರೆಲ್ಲ ಸಹಕರಿಸೋಣ ಅಲ್ಲವೇ? ನೀವೇನಂತೀರಿ?

——————————–

ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ  ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು. ವಿಳಾಸ – ಸ ಪ ಪೂರ್ವ ಕಾಲೇಜು ಮೂಲ್ಕಿ 574154



Leave a Reply

Back To Top