ಬಾಲ್ಯ ವಿವಾಹ.

ಜ್ಯೋತಿ ಡಿ.ಬೊಮ್ಮಾ

ಬಾಲ್ಯ ವಿವಾಹ
.
ಮರುಗಲಾಗದೆ ಮತ್ತೆನು ಮಾಡಲಾಗದು
ಮಗು ನಿನ್ನ ವಿಧಿ ಬರಹಕ್ಕೆ
ಹೆತ್ತವರ ಆಶಾಢಭೂತಿತನದಿಂದ ಬಾಲ್ಯದ
ಬಾಳಿಗೆ ಮದುವೆ ಬಂಧನ ವಿಧಿಸಿದ್ದಕ್ಕೆ…
ಮದುವೆ ಮಾಡಿ ಜವಾಬ್ದಾರಿಯಿಂದ
ಕಳಚಿಕೊಳ್ಳುವದೊಂದೆ ಅವರ ಪರಮೋದ್ದೇಶ.
ಮಗಳ ಚಿಕ್ಕ ವಯಸ್ಸು ಲೆಕ್ಕಿಸದೆ ಧಾರೆ
ಎರೆದು ಕೈ ತೊಳೆದುಕೊಳ್ಳುವ ಧಾವಂತ..
ಆಡುತ್ತ ಓದುತ್ತ ನಲಿಯಬೇಕಾದ ಮಗು
ಹೊತ್ತುಕೊಂಡಿತು ಸಂಸಾರದ ನೋಗ
ಸರೀಕರೆಲ್ಲ ನಕ್ಕು ನಲಿವಾಗ ಆಕೆ
ಧರಿಸಿದಳಾಗಲೆ ಗ್ರಹಿಣಿಯ ಗಂಭಿರ ಮೊಗ..
ವಯಸ್ಸಿಗೆ ಮೀರಿದ ಜವಾಬ್ದಾರಿಯಿಂದ
ನಲುಗಿತು ಬಾಲಿಕೆಯ ಶರೀರ
ಇಷ್ಟರಲ್ಲೆ ಹೋರಬೇಕಾಯಿತು
ಬಸಿರ ಭಾರ…
ನಿರಾಕರಿಸತೊಡಗಿತು ಚಿಕ್ಕ ಗರ್ಭಾಶಯ
ಪೋಷಿಸಲು ಮತ್ತೊಂದು ಜೀವ
ಮಗುವಿನೊಳಗೊಂದು ಮಗು ಬೆಳೆಯುವದು
ಸಹಿಸದಾಯಿತು ಇಡೀ ದೇಹ..
ಕುಗ್ಗತೊಡಗಿತು ಬಾಲಿಕೆ ತಾಳದೆ
ವಯಸ್ಸಿಗೆ ಮೀರಿದ ಭಾರ ಹೊತ್ತು
ಹೆತ್ತವರೇ ಈಗೇನು ಮಾಡುವಿರಿ !
ಕಂಡು ಈ ವಿಪತ್ತು..
ಪ್ರಸವ ವೇದನೆ ಸಹಿಸದಾಯಿತು
ಚಿಕ್ಕ ಕೋಮಲ ಶರೀರ
ದೇಹ ಬಿಟ್ಟು ಹೊರಟಿತು ಜೀವ
ಬೇಡವೆಂದು ಈ ಬದುಕ ಭಾರ..
ಬಾಲ್ಯದಲ್ಲಿ ವಿವಾಹ ಮಾಡದಿರಿ ಮಗಳಿಗೆ..
ಗೊತ್ತಿದ್ದು ಪರಿಣಾಮ…
ಕೈಯಾರೆ ಕೊಲ್ಲದಿರಿ ನಿಮ್ಮ ಕರುಳಿನ ಕುಡಿಗೆ.
********