ಕಾವ್ಯ ಸಂಗಾತಿ
ನಾಡವರೆ ಒಂದಾಗಿರಿ
ನರಸಿಂಗರಾವ ಹೇಮನೂರ
ಬನ್ನಿ ಬನ್ನಿರಿ ಕನ್ನಡಮ್ಮನ
ಮುಡಿಗೆ ಹೂವನು ತನ್ನಿರಿ
ನಾಡ ಕೆಣಕುವ ನುಡಿಯನೆದುರಿಸಿ
ತಾಯ ನೋವನು ಕಳೆಯಿರಿ
ಹೆಸರಾಯಿತು ಕರ್ನಾಟಕ
ಉಸಿರಾಯಿತು ಕನ್ನಡ
ಎಂದು ಬೀಗುವ ನಮಗೆ ಬಂದಿವೆ
ಇಲ್ಲ ಸಲ್ಲದ ಸಂಕಟ
ನಮ್ಮ ಗಡಿಯನು ನಮ್ಮ ನುಡಿಯನು
ಉಳಿಸ ಬೇಕಿದೆ ಸಂತತ
ಎಂದೊ ಕೊಟ್ಟಿಹ ವರದಿ ತೀರ್ಪನು
ಅಡಿಗಡಿಗೆ ಧಿಕ್ಕರಿಸುತ
ಗಡಿಯ ನೆರೆಹೊರೆಯವರು ನಮ್ಮನು
ಕಾಡುತಿರುವರು ಕೆಣಕುತ
ನಮ್ಮ ನೆಲಜಲಕಾಗಿ ಹೊಂಚಿಹ
ಭಂಡರನು ಇನ್ನಾದರು
ನಮ್ಮ ತಂಟೆಗೆ ಬಾರದಿರಲ್ಹೆಡೆಯೆತ್ತಿ
ತಡೆಯುವ ತಡವಾದರೂ
ಅಚ್ಚ ಕನ್ನಡ ಭಾಷೆ ಕೆಡಿಸುವ
ನುಸುಳುಕೋರರ ನುಗಿಯುತ
ಕಟ್ಟ ಬೇಕಿದೆ ನಾಡ ನುಡಿಯನು
ನಾಡವರೆ ಒಂದಾಗುತ
ಕನ್ನಡವನೆ ಕಲಿತು ಕಲಿಸುತ
ಕನ್ನಡದಿ ಮಾತಾಡುತ
ಕನ್ನಡಾಂಬೆಯ ಹಾಡಿ ಹೊಗಳುತ
ಕನ್ನಡಕೆ ಕೈ ಎತ್ತುತ!
ನರಸಿಂಗರಾವ ಹೇಮನೂರ