ನಿರ್ಮಲಾ ಹೆಗಡೆ ಕವಿತೆ-ಭಾವಸಂಗಾತಿ

ಕಾವ್ಯಸಂಗಾತಿ

ಭಾವಸಂಗಾತಿ

ನಿರ್ಮಲಾ ಹೆಗಡೆ

ಹೆಣೆಯುತ ಕನಸೊಂದು| ಸಾಗಿದೆ
ತಣಿಯುತ ಮನಸಿಂದು||
ಅನುರಣಿಸುವ ಸ್ವರಮಾಧುರ್ಯದ ರವ
ದಿನದಿನಕು ಶ್ರುತಿಬೆರೆಸಿದೆಯೊಂದು||

ಮಾತಿನ ಮೇನೆಯಲಿ|ವಿಹರಿಪ
ರೀತಿಯದೇನುಸುರಲಿ||
ಕಾಂತಿಯನೆರಚಿರಲೋಕುಳಿ ಮೊಗದಲಿ
ಸೋತ ಕಪೋಲ ರಂಗೇರಿ ಲಜ್ಜೆಯಲಿ||

ಒಲವಿನೊಳಳಿವಿಲ್ಲ| ತಳೆಯದ
ಗೆಲುವಿಗೆ ಸ್ಥಳವಿಲ್ಲ||
ಅಲರುವ ಮೊಗ್ಗಿನೊಳುಲಿದಿದೆ ಭೃಂಗವು
ಕೆಳೆವೆಳಸುತ ಬಳಿ ಸುಳಿದಿದೆಯಲ್ಲ||

ಮುತ್ತಿನ ಮತ್ತಿನಲಿ|ಸುತ್ತಿಹ
ಚಿತ್ತದ ಭಿತ್ತಿಯಲಿ||
ನೆತ್ತಿಯೊಳೊತ್ತಿರೆ ಬಾಗಿದ ರೆಪ್ಪೆ ಪ್ರ
ಮತ್ತತೆಯೊಳಗೋಲೈಸಿ ಉತ್ತರಿಸಿದೆ||


ನಿರ್ಮಲಾ ಹೆಗಡೆ

Leave a Reply

Back To Top