ವಿಡಂಬನೆ
ಮಳೆ ಬಂತು ಮಳೆ
ಬಿ.ಟಿ.ನಾಯಕ್
ಅದೊಂದು ದಿನ ಕೃಷ್ಣ ದೇವಸ್ಥಾನಕ್ಕೆ ಹೋಗಬೇಕಾಗಿ ಬಂತು. ನನ್ನ ಶ್ರೀಮತಿ ನನಗೆ ತಯಾರಾಗಲು ಹೇಳಿದಳು. ಏಕೆಂದರೇ, ನಾನು ದ್ವಿಚಕ್ರವಾಹನದ ಸಾರಥಿಯಲ್ಲವೇ ? ಹಾಗಂತ ಅನಿವಾರ್ಯತೆ ಕೂಡಿಬಂತು. ಅವಳಾದರೋ, ಒಳ್ಳೆಯ ತಯಾರಿ ಮಾಡಿ ಕೊಂಡಿದ್ದಳು.
ಅಲ್ಲಿಂದ ಹೊರಡುವಾಗ ಆಕೆ ಸ್ವಾಭಾವಿಕವಾಗಿ ನನಗೆ ಹೀಗೆ ಹೇಳಿದಳು;ನೋಡಿ, ಮಳೆ ಬಂದರೂ ಬರಬಹುದು, ನಾನು ಕಷ್ಟಪಟ್ಟು ಎಲ್ಲ ಬಟ್ಟೆಗಳನ್ನು ಒಗೆದು ಟೆರೇಸ್ಮೇಲೆ ಒಣಗಲಿಕ್ಕೆ ಹಾಕಿದ್ದೇನೆ. ಆ ಬಟ್ಟೆಗಳನ್ನು ತೆಗೆದು ಒಳಗೆ ಇಟ್ಟು ಹೋಗೋಣ. ನೀವು ಮೊದಲು ಟೆರೇಸ್ಗೆ ಹೋಗಿ ಅವುಗಳನ್ನೆಲ್ಲ ತೆಗೆದು ಕೆಳಕ್ಕೆ ತನ್ನಿರಿ.’ ಎಂದಳು.
ಗಂಡಸಿನ ಸ್ವಭಾವವೇ ಬೇರೆ ಅಲ್ಲವೇ, ಹಾಗಾಗಿ, ನಾನು ಆಕಾಶದ ಕಡೆಗೆ ನೋಡಿದೆ. ಯಾವ ಮಳೆಯ ಲಕ್ಷಣ ಸುತರಾಂ ಇರಲಿಲ್ಲ. ಆಕೆಗೆ ಹಾಗೆಯೆ ಹೇಳಿದೆ. ಆದರೇ ಅವಳು ಗೊಣ ಗುಟ್ಟಿದಳು.
‘ಏನಾದರೂ ಮಳೆ ಬಂದು ಬಟ್ಟೆಗಳು ನೆನೆದರೇ ನೀವು ನನ್ನನ್ನು ದೂಷಿಸಲೇಬಾರದು ನೋಡಿ ‘ ಎಂದಳು. ಅದಕ್ಕುತ್ತರವಾಗಿ ನಾನು ;
‘ಅಯ್ಯೋ, ಇವತ್ತು ಅದರ ಲಕ್ಷಣವೇ ಇಲ್ಲ, ಅಲ್ಲದೇ ಮಳೆ ಶಾಸ್ತ್ರಜ್ಞರೂ ಟೀವಿಲೀ ಆ ಬಗ್ಗೆ ಏನೂ ಹೇಳಿಲ್ಲ. ಅದರ ಚಿಂತೆ ಬಿಡು’ ಎಂದು ಆಕೆಗೆ ಹೇಳಿಬಿಟ್ಟೆ.
ಏನೋ ಪಾಪ, ಈ ಮಾತಿಗೆ ಸೋತೆನೆಂದು ಅಂದು ಕೊಂಡಳೋ ಹೇಗೆ ತಿಳಿಯಲಿಲ್ಲ. ಆದರೇ, ಅವಳ ಮುಖ ಮಾತ್ರ ಆ ಬಗ್ಗೆ ಸ್ವಲ್ಪ ಹಾಗೆಯೇ ಸಾರುತ್ತಿತ್ತು.
ಆಮೇಲೆ, ಅವಳು ತಯಾರಾಗಿ ಹೊರ ಬಂದಳು. ನಾನು ಮನೆಗೆ ಬೀಗ ಹಾಕಿ, ಸ್ಕೂಟರಗೆ ಚಾಲನೆ ಕೊಟ್ಟೆ. ಆ ದೇವಸ್ಥಾನ ನಮ್ಮ ಮನೆಯಿಂದ ಎರಡು ಕಿಲೋಮೀಟರು ದೂರದಲ್ಲಿ ಇದೆ. ಸುಮಾರು ಒಂದು ಅಥವಾ ಒಂದೂವರೆ ಕಿಲೋಮೀಟರು ಹೋಗಿದ್ದೆವು ಮಳೆ ರಪರಪನೇ ಹೊಡೆಯಲು ಪ್ರಾರಂಭವಾಗಿ ಬಿಟ್ಟಿತು. ಆಗ ಶ್ರೀಮತಿಯ ಗೊಣಗಾಟ ಆರಂಭವಾಯಿತು.
‘ನೋಡಿ ಮಳೆ ಬಂದೇ ಬಿಡ್ತು. ನಾನು ಹೇಳಿದರೇ ನಿಮಗೆ ಅಲಕ್ಷ್ಯ. ತಲೆ ಮೇಲೆ ಜೋರಾಗಿ ಮಳೆ ಹನಿಗಳು ಬೀಳುತ್ತಿವೆ. ನಿಮ್ಮ ಗಾಡಿಯ ವೇಗ ಹೆಚ್ಚು ಮಾಡಿ ಓಡಿಸಿರಿ ‘ ಎಂದಳು. ಇನ್ನು ಈ ಮಾತು ಕೇಳುವಂಥಹದೇ. ನಾನು ಹಾಗೆಯೇ ವೇಗ ಹೆಚ್ಚು ಮಾಡಿದೆ.
ಆದರೇ, ಎಲ್ಲಿಂದ ಬಂದ ಮಳೆಯೋ ಏನೋ, ಅದರ ರಭಸ ಹೆಚ್ಚಾಯಿತು. ನಾವಿಬ್ಬರೂ ಮಳೆಯಲ್ಲಿ ನೆನೆದು ಬಿಟ್ಟೆವು. ಅದೃಷ್ಟವಶಾತ್ , ಸ್ವಲ್ಪ ಸಮಯದಲ್ಲಿಯೇ ದೇವಸ್ಥಾನ ಸೇರಿಕೊಂಡೆವು . ಆಗ ಮಳೆಯ ವೇಗ ಇನ್ನೂ ಹೆಚ್ಚಾಯಿತು. ಒಂದು ತರಹ ಆಲಿಕಲ್ಲು
ಮಳೆ ಆಗುವಂತೆ ದೊಡ್ಡ ದೊಡ್ಡ ಹನಿಗಳು ಬೀಳತೊಡಗಿದವು. ನನಗೋ ಚಿಂತೆ ಕಾಡಲಾರಂಭಿಸಿತು. ಶ್ರೀಮತಿ ಹೇಳಿದ ಮಾತು ಕೇಳಬೇಕಿತ್ತು, ಅದನ್ನು ಅಲಕ್ಷ್ಯ ಮಾಡಿದೆ ಎಂದು ಮನಸ್ಸು ತುಂಬಾ ಕೊರೆಯುತ್ತಿತ್ತು. ನಾವು ಹೋಗೋದ್ರಲ್ಲಿ ಹೊರಗೆ ಹಾಕಿದ ಬಟ್ಟೆಗಳು ತೊಯ್ದು ಬಿಡುತ್ತವೆ ಎಂದು ತಲೆಯಲ್ಲೆಲ್ಲ
ಓಡಾಡತೊಡಗಿತು. ಅಲ್ಲದೇ, ಅವು ನೆನೆದ ರೀತಿಯ ಕಾಲ್ಪನಿಕ ಚಿತ್ರಣ ಮನಸ್ಸಿನಲ್ಲಿ ಹಾಯಿತು.
ಆ ಗುಂಗಿನಲ್ಲೇ ದೇವರ ಮುಂದಿನ ಗಂಟೆಯನ್ನು ಬಾರಿಸಿದೆ. ಶ್ರೀಮತಿ ಹಣ್ಣು ಹೂವುಗಳನ್ನು ಅರ್ಚಕರಿಗೆ ಸಮರ್ಪಿಸಿದಳು. ಆಗ ಅರ್ಚಕರು ಗೋತ್ರ, ನಕ್ಷತ್ರ ಹೇಳುವಂತೆ ಕೇಳಿದರು. ನಾನು
ನನ್ನ ಶ್ರೀಮತಿ ತೊಯ್ದು ನಡುಗಲು ಪ್ರಾರಂಭಿಸಿದೆವು. ಏಕೆಂದರೇ, ನಾವಿಬ್ಬರೂ ಪೂರ್ತಿ ತೊಯ್ದು ಕೊಂಡಿದ್ದೆವು. ಅಲ್ಲದೇ ,ನನ್ನ ಧ್ಯಾನ ಪರ ಕಾಯ ಧ್ಯಾನವಾಗಿತ್ತು. ಏನೋ ತಡವರಿಸಿ ಏನೋ ಅರ್ಚಕರಿಗೆ ಹೇಳಿದೆ. ಅವರು ಸಾಂಗವಾಗಿ ಪೂಜೆ ಮಾಡುತ್ತಲಿದ್ದರು, ಆದರೇ ನನ್ನ ಗಮನವೆಲ್ಲಾ ಮನೆ ಕಡೆಗೆ, ಅದೂ ಹೊರಗೆ ಹಾಕಿದ ಬಟ್ಟೆಗಳ ಕಡೆಗೆಯೇ ಕೇಂದ್ರೀಕೃತವಾಗಿತ್ತು. ಮನಸ್ಸು ಹೊಯ್ದಾಡುತ್ತಿತ್ತು ಮತ್ತು ಬಹಳೇ ಅಸಮಾಧಾನದಿಂದ ಕೂಡಿತ್ತು. ಏನು ವಿಚಿತ್ರವೋ ಏನೋ ರಭಸದ ಮಳೆ ನಿಲ್ಲಲೇ ಇಲ್ಲ. ಅರ್ಚಕರು ಫಲ, ಮಂತ್ರಾಕ್ಷತೆ ಕೊಟ್ಟರು. ಒಂದು ರೀತಿ ಯಾಂತ್ರಿಕವಾಗಿ ಪಡೆದೆ. ಆದರೇ,
ನನ್ನ ಶ್ರೀಮತಿಗೆ ಇದರ ಬಗ್ಗೆ ಏನೂ ಆತಂಕ ಇರಲಿಲ್ಲ. ಏಕೆಂದರೇ, ತನ್ನ ಒಬ್ಬ ಸ್ನೇಹಿತೆ ಬಹಳ ದಿನಗಳಾದ ಮೇಲೆ ಸಿಕ್ಕಳೆಂದು ಮಾತಿನಲ್ಲಿ ಮಗ್ನಳಾಗಿದ್ದಳು. ನನಗೋ ಮನೆ ಕಡೆಗೆ ಧ್ಯಾನ.
ನಿಜವಾಗಿ ಹೇಳಬೇಕೆಂದರೆ ಪೂಜೆ ಆಗುವಾಗ ನನ್ನ ಧ್ಯಾನ ದೇವರ ಕಡೆ ಇರಲೇ ಇಲ್ಲ. ಇನ್ನೇನು,
ಮಳೆಯ ರಭಸ ಕೊಂಚ ಕಡಿಮೆ ಆಯಿತು. ಆಗ ಶ್ರೀಮತಿಗೆ ಹೇಳಿದೆ;
‘ನೋಡೇ, ಹೇಗೋ ಸ್ವಲ್ಪ ಮಳೆ ಕಡಿಮೆಯಾಗಿದೆ ಹೊರಟು ಹೋಗೋಣ. ಇಲ್ಲದಿದ್ದರೆ ಮತ್ತೇ ಜಾಸ್ತಿಯಾದರೆ ಕಷ್ಟ ಎಂದೇ. ಅದಕ್ಕವಳು;
‘ಏನ್ರೀ , ಬರೋವಾಗ ನಮ್ಮ ಬಟ್ಟೆ ಎಲ್ಲ ಒದ್ದೆಯಾಗಿವೆ, ಈಗಲೂ ಹಾಗೆಯೆ ಹೋಗ್ಬೇಕಾ ? ಸ್ವಲ್ಪ
ತಡೆಯಿರಿ, ಈ ಮಳೆ ಕಡಿಮೆಯಾದ ಮೇಲೆ ಹೋಗೊಣ. ನನ್ನ ಗೆಳತೀ ‘ಸುಮಾ’ ಬಂದಿದ್ದಾಳೆ. ಇದೋ ಬಂದೆ ಎಂದು ಮತ್ತೇ ಗೆಳತಿ ಹತ್ತಿರ ಹೊರಟು ಹೋದಳು.
ಸ್ವಲ್ಪ ಹೊತ್ತಾದ ಮೇಲೆ ಮಳೆ ನಿಂತಿತು !
ಇನ್ನಾದರೂ ಬರಬಹುದೇನೋ ಎಂದು ನನ್ನ ಶ್ರೀಮತಿಯನ್ನು ಹುಡುಕತೊಡಗಿದೆ. ಆಕೆ ಒಂದು ಮೂಲೆಯಲ್ಲಿ ಸಿಕ್ಕಳು. ಇದ್ದಲ್ಲಿಗೆ ಹೋಗಿ, ಸ್ವಲ್ಪ ಜೋರಾಗಿಯೇ ಧ್ವನಿಮಾಡಿ ಕರೆದೆ. ಅವಳು ಅರ್ಥ ಮಾಡಿಕೊಂಡು ತಕ್ಷಣವೇ ಗೆಳತಿಗೆ ಹೀಗೆ ಹೇಳಿದಳು;
‘ಅಲ್ವೇ, ಇಲ್ಲಿ ಮಾತನಾಡೋದು ಏನೂ ಆಗಲೇ ಇಲ್ಲ, ಇನ್ನೊಂದು ದಿನ ಸೇರೋಣ. ಬರ್ತೀನಿ ಕಣೆ ‘ ಎಂದು ಹೇಳಿ ಬಂದಳು.
ಆಗ ನಾನು ಅವಸರದಿಂದ ಸ್ಕೂಟರ್ ಸ್ಟಾರ್ಟ್ ಮಾಡಿದೆ, ಶ್ರೀಮತಿಯನ್ನು ಕೂಡ್ರಿಸಿಕೊಂಡು ಭರ್ರನೇ
ಹೊರಟು ಬಿಟ್ಟೆ. ಅದಕ್ಕೆ ನನ್ನ ಶ್ರೀಮತಿ;
‘ಯಾಕ್ರೀ ಇಷ್ಟು ವೇಗ, ನಾನು ಬಿದ್ದರೆ ಏನು ಗತಿ, ಕೊಂಚ ವೇಗ ಕಡಿಮೆ ಮಾಡಿಕೊಳ್ಳಿ ‘ ಎಂದಳು.
‘ಸುಮ್ಮನೆ ಕೂತ್ಕೊಳೆ ನನ್ನ ಚಿಂತೆ ನನಗೆ. ಎಲ್ಲ ಬಟ್ಟೆಗಳನ್ನು ಹೊರಗೆ ಹಾಕಿದ್ದೇವೆ, ಅವೇನು ತೋಯ್ದು ತಪ್ಪಡಿ ಆಗಿರುತ್ತವೆ’. ಎಂದು ಹೇಳಿ, ಆಕೆಯ ಮಾತಿಗೆ ಕಿವಿಗೊಡದೆ ಸ್ಕೂಟರನ್ನು ಇನ್ನೂ ಜೋರಾಗಿ ಓಡಿಸಿದೆ.
ನಮ್ಮ ಮನೆ ಇನ್ನೂ ಕಾಲು ಕಿಲೋಮೀಟರು ದೂರ ಇತ್ತು, ಆಶ್ಚರ್ಯವೆಂದ್ರೇ ಅಲ್ಲಿ ಮಳೆನೇ ಇಲ್ಲ ! ಹಾಗೆಯೇ ಓಡಿಸುತ್ತಾ ಮನೆ ತಲುಪಿದೆ. ತಲೆ ಎತ್ತಿ ನೋಡುತ್ತೇನೆ ಟೆರೇಸ್ನಲ್ಲಿ ಬಟ್ಟೆಗಳು ಒಣಗಿ ಬೀಸುವ ಗಾಳಿಗೆ ತೂಗಾಡುತ್ತಾ ನಲಿಯುತ್ತಿವೆ. ಎಂತಹ ವಿಚಿತ್ರ ! ಅಲ್ಲಿ ಭರಪೂರ ಮಳೆ, ಇಲ್ಲಿ ನೋಡಿದರೇ ಇಲ್ಲವೇ ಇಲ್ಲ. ನನ್ನ ಮನಸ್ಸು ಆಗ ನೆಮ್ಮದಿಯಿಂದ ಕೂಡಿತು. ಒಂದು ದೊಡ್ಡ ಉಸಿರು ಬಿಟ್ಟು ಮನೆ ಬೀಗ ತೆಗೆದು ಒಳಕ್ಕೆ ಹೋದೆವು. ನಾವಿಬ್ಬರೂ ಭೋಜನ ಮುಗಿಸಿ ಒಂದು ಗಂಟೆ ವಿಶ್ರಾಂತಿ ಪಡೆದರಾಯಿತು ಎಂದು ಫ್ಯಾನ್ಗಳನ್ನು ಜೋರಾಗಿ ಇಟ್ಟು ಕೊಂಡು ಇಬ್ಬರೂ ಮಲಗಿಕೊಂಡೆವು. ಸ್ವಲ್ಪ ಆಯಾಸವಾದದ್ದರಿಂದ ಇಬ್ಬರಿಗೂ
ನಿದ್ದೆಯ ಮಂಪರು ಆವರಿಸಿತು.
ನಮಗೆ ಎಚ್ಚರವಾದಾಗ ಸಾಯಂಕಾಲ ಆರು ಗಂಟೆ ಆಗಿತ್ತು. ಏನೋ ರಭಸದ ಮಳೆಯ ಶಬ್ದ ಕೇಳಿತು, ಆಗ ನಾನು ಅವಸರವಾಗಿ ಎದ್ದು, ಶ್ರೀಮತಿಯನ್ನೂ ಎಬ್ಬಿಸಿದಾಗ ಅವಳೂ ಎದ್ದಳು. ಇಬ್ಬರೂ ಹೊರಗೆ ಬಂದು ನೋಡಿದಾಗ ಸಿಕ್ಕಾ ಪಟ್ಟೆ ಮಳೆಯಾಗಿ ಬಿಟ್ಟಿದೆ. ಅಯ್ಯೋ, ಆಗ ಒಣಗಿದ ಬಟ್ಟೆಗಳು ಈಗ ಎಲ್ಲಾ ಮಳೆಯಲ್ಲಿ ನೆನೆದು ‘ ಟಪ ಟಪ ‘ಎಂದು ಅವುಗಳಿಂದ ನೀರು ಇಳಿಯುತ್ತಿದ್ದವು.
ನಾನು ಮತ್ತು ನನ್ನ ಶ್ರೀಮತಿ ನಮ್ಮಮುಖಗಳನ್ನು ಪರಸ್ಪರ ನೋಡುತ್ತಲೇ ನಿಂತೆವು.
ಇದೇನು ಕರ್ಮ, ದೇವಸ್ಥಾನಕ್ಕೆ ಹೋದಾಗ ಮಳೆಯ ಹೊಡೆತದಿಂದ ನಲುಗಿದೇವು. ನಾವಲ್ಲಿದ್ದಾಗ ಮನೆ ಕಡೆಗೆಯೇ ಲಕ್ಷ್ಯ ಇದ್ದ ಕಾರಣ, ಪೂಜೆ ಕಡೆಗೆ ಗಮನ ಇರಲಿಲ್ಲ. ದೇವರ ಪೂಜೆ ನಡೆಯುವಾಗ, ಯಾಂತ್ರಿಕವಾಗಿ ನನಗರಿವಿಲ್ಲದೆಯೇ ಅದಕ್ಕೆ ಸಾಕ್ಷಿಯಾಗಿದ್ದೆ. ದೇವರ ಗುಡಿಗೆ ಬಂದು ಪರಮಾತ್ಮನ ದರ್ಶನದ ಲಾಭ ಇದ್ದರೂ ಇಲ್ಲದಂತಾಗಿತ್ತು. ಅಂದರೇ, ಭಗವಂತನ ದರ್ಶನ ಮನಃ ಪೂರ್ವಕ ಆಗಲೇ ಇಲ್ಲ. ಈಗ ಇಲ್ಲಿ ಬಂದು ವಿರಮಿಸಬೇಕೆಂದರೇ, ಇಲ್ಲಿಯೂ ಅದೇ ಆರ್ಭಟ !.
‘ಮಳೆ ಬಂತು ಮಳೆ’ ಎನ್ನುತ್ತಾ ರಾತ್ರಿಯೆಲ್ಲಾ ನಾನು ತಡವರಿಸುತ್ತಿದ್ದೆ ಎಂದು ನನ್ನ ಶ್ರೀಮತಿ ಮಾರನೇ ದಿನ ನನಗೆ ಹೇಳಿದಳು.
ಮಳೆ ಅಂದರೆ ಹಾಗೇನೇ.
ನಿಜ ಸರ್. ನಾವು ಅದನ್ನು ಬಯಸ ಬಹುದು ಅಥವಾ ಬಯಸದೇ ಇರಬಹುದು, ಆದರೇ ಅದು ತನ್ನದೇ ಆದ ಸೃಷ್ಟಿ ನಿಯಮವನ್ನು ಹೊಂದಿರುತ್ತವೆ. ಧನ್ಯವಾದಗಳು.
ನಿಜ ಸರ್. ನಾವು ಅದನ್ನು ಬಯಸ ಬಹುದು ಅಥವಾ ಬಯಸದೇ ಇರಬಹುದು, ಆದರೇ ಅದು ತನ್ನದೇ ಆದ ಸೃಷ್ಟಿ ನಿಯಮವನ್ನು ಹೊಂದಿರುತ್ತದೆ. ಧನ್ಯವಾದಗಳು.
ಮಳೆ ಬಂತು ಮಳೆ ಲೇಖನ ವಿಡಂಬನಾತ್ಮಕವಾಗಿದ್ದರೂ ನಿಜ ಸಂಗತಿ.
ನಿಜ ! ಅದು ಸೃಷ್ಟಿಯ ಸೊಬಗು ಏಂದೇ ಹೇಳಬೇಕಾಗುತ್ತದೆ. ಧನ್ಯವಾದಗಳು ಸೊಂಡೂರ್.