ನವರಾತ್ರಿಯ ನವರೂಪಗಳ ಆರಾಧನೆಯ ಹಿನ್ನೆಲೆ ಮತ್ತು ವಿಜಯ ದಶಮಿ

ವಿಶೇಷ ಲೇಖನ

ನವರಾತ್ರಿಯ ನವರೂಪಗಳ ಆರಾಧನೆಯ ಹಿನ್ನೆಲೆ ಮತ್ತು ವಿಜಯ ದಶಮಿ

ಸುಲೋಚನಾ ಮಾಲಿಪಾಟೀಲ

ಜಗತ್ತಿನಾದ್ಯಂತ ಎಲ್ಲಿ ಹಿಂದುಗಳು ವಾಸವಾಗಿದ್ದರೋ ಅಲ್ಲಿ ನವರಾತ್ರಿ ನವರೂಪಗಳ ಆರಾಧನೆಯ ಅವಶ್ಯವಾಗಿ ಜರಗುತ್ತಲಿರುತ್ತದೆ. ಹತ್ತನೆದಿನ ವಿಜಯ ದಶಮಿಯೆಂದು ವಿಜಯೋತ್ಸವದ ಹಬ್ಬ ಆಚರಣೆ ಮಾಡಲಾಗುತ್ತದೆ. ಶರನ್ನವರಾತ್ರಿಯ ಉತ್ಸವಗಳು ಬಹಳ ವಿಜ್ರಂಭಣೆಯಿಂದ ದೇಶದಾದ್ಯಂತ ಜರುಗುತ್ತದೆ. ಮಹಾಕಾಳಿ, ಮಹಿಷಾಸುರ ಮರ್ದಿನಿ, ಚಾಮುಂಡಿ, ನಂದಾ,  ರಕ್ತದಂತಿಕಾ, ಶಾಖಾಂಬರಿ, ದುರ್ಗಾ, ಮಾತಂಗಿ, ಭ್ರಾಮರಿಯೆನ್ನುವ ಒಂಬತ್ತು ರೂಪಗಳು ಉಲ್ಲೇಖದಲ್ಲಿವೆ. ಇನ್ನೂ ರೂಪಗಳ ಹಿಂದೆ ಒಂದೊಂದು ಕಥೆಗಳೇ ಘಟಿಸಿವೆ. ಆ ಕಥೆಗಳ ಆಧಾರದ ಮೇಲೆ ದೇವಿ ಅಲಂಕರಿತಳಾಗಿ ಅವತರಿಸಿರುವಂತೆ ಪೂಜಿಸಲಾಗುತ್ತದೆ. ಆದಿ ಶಕ್ತಿಯು ತ್ರೀಲೋಕದಲ್ಲಿರುವ ರಾಕ್ಷಸಿ ವೃತ್ತಿಯ ರಾಕ್ಷಸರನ್ನು ದಮನಮಾಡಲು ಅವತರಿತಳು ಎಂದು ಹೇಳಲಾಗುತ್ತದೆ. ಇನ್ನೂ ಒಂಬತ್ತು ಅವತಾರಗಳ ಹಿಂದಿನ ಕಥೆಯನ್ನು ಕೇಳಿದಾಗ, ಓದಿದಾಗ ಹಬ್ಬದ ಮಹತ್ವ ಬಗ್ಗೆ ಅರಿತುಕೊಂಡತಾಗುತ್ತದೆ.

ಮೊದಲನೆಯದಾಗಿ ಶೈಲಪುತ್ರಿಯ ಅವತಾರದ ಹಿಂದಿನ ಕಥೆ ಮತ್ತು ಆರಾಧನೆ. ಶೈಲ ಎಂದರೆ ಪರ್ವತ. ಪರ್ವತರಾಜನ ಪುತ್ರಿ, ಮಗಳು ಶೈಲಪುತ್ರಿ.

ಒಮ್ಮೆ ಪ್ರಜಾಪತಿ ಬ್ರಹ್ಮ ಮಹಾಯಾಗ ಏರ್ಪಡಿಸಿದ್ದ. ಅದಕ್ಕೆ ಶಿವನನ್ನು ಅಧ್ಯಕ್ಷನಾಗಿ ಬ್ರಹ್ಮ ನೇಮಕಮಾಡಿದ್ದನು. ದೇವತೆಗಳ ಮಹಾಯಾಗ ಆರಂಭವಾಗುತ್ತಿದ್ದಂತೆ ದಕ್ಷ ಪ್ರಜಾಪತಿ ಆಗಮಿಸುತ್ತಾನೆ. ಶಿವ ಮತ್ತು ಬ್ರಹ್ಮನ ಹೊರತಾಗಿ ಎಲ್ಲರೂ ಎದ್ದು ನಿಂತು ದಕ್ಷ ಪ್ರಜಾಪತಿಯ ಕುಶಲೋಪರಿಯನ್ನು ವಿಚಾರಿಸುತ್ತಾರೆ. ಮಾವ ಮತ್ತು ಅಳಿಯನ ನಡುವೆ ಅಭಿಮುಖ ಮತ್ತು ಮಾತುಗಳು ನಡೆಯುವುದಿಲ್ಲ. ಇದರಿಂದ ಅವಮಾನಿತನಾದ ದಕ್ಷನ ಕೋಪ ಇಮ್ಮಡಿಯಾಗುತ್ತದೆ. ಶಿವನನ್ನು ಅವಮಾನಿಸಲು ತಾನೂ ಕೂಡ ಮಹಾಯಜ್ಞವನ್ನು ಏರ್ಪಡಿಸುತ್ತಾನೆ. ತನ್ನ ಮಗಳು ದಾಕ್ಷಾಯಿಣಿ ಮತ್ತು ಶಿವನನ್ನು ಬಿಟ್ಟು ಉಳಿದ ಇಪ್ಪತ್ತೆಳು ಮಕ್ಕಳನ್ನು, ಅಳಿಯ, ಬಂಧುಬಾಂಧವರನ್ನು ಆಪ್ತರನ್ನು ಆಮಂತ್ರಿಸುತ್ತಾನೆ. ಈ ವಿಷಯ ದಾಕ್ಷಾಯಿಣಿಗೆ ತಿಳಿದು ತಾನು ತವರಿಗೆ ಹೋಗಲು ತಯಾರಾಗುತ್ತಾಳೆ. ಆಮಂತ್ರಣೆ ಇರದ ಯಜ್ಞಕ್ಕೆ ಶಿವನಿಗೆ ಹೋಗುವ ಮನಸ್ಸಾಗುವುದಿಲ್ಲ. ನಮ್ಮನ್ನು ಅವಮಾನಿಸಲು ಹಿಯಾಳಿಸಲು ಏರ್ಪಡಿಸಿದ್ದ ಮಹಾಯಜ್ಞವಾಗಿದೆ ಎಂದು ಶಿವನು ಎಷ್ಟು ತಿಳಿಹೇಳಿದರು ದಾಕ್ಷಾಯಿಣಿ ಕೇಳುವುದಿಲ್ಲ. ನಿನ್ನ ತಂದೆ ನನ್ನ ಮೇಲೆ ಬಹಳ ಕುಪಿತನಾಗಿದ್ದಾನೆ. ನಾನಂತೂ ಬರುವುದಿಲ್ಲ. ನೀನೊಬ್ಬಳೇ  ಹೋಗುವುದು ಉಚಿತವಲ್ಲವೆಂದು ಶಿವನು ದಾಕ್ಷಾಯಿಣಿ ಜೊತೆಗೆ ನಂದಿ ಮತ್ತು ಭೃಂಗಿಗಳನ್ನು ಕಳುಹಿಸಿ ಕೊಡುತ್ತಾನೆ. ತಂದೆ ಆಮಂತ್ರಿಸಲಾರದೆ ಇತ್ತ ದಾಕ್ಷಾಯಿಣಿ ಮಹಾಯಜ್ಞಕ್ಕೆ ಆಗಮಿಸಿರುವುದನ್ನು ಕಂಡು ತಂದೆ ದಕ್ಷ ಅವಳನ್ನು ನೋಡಿ ನೋಡದ ಹಾಗೆ ಕುಳಿತಿರುತ್ತಾನೆ. ಸಹೋದರಿಯರು ಕೂಡ ತಂದೆಯ ಅಪ್ಪಣೆಯಂತೆ ಮಾತನಾಡಿಸುವುದಿಲ್ಲ. ಆದರೆ ತಾಯಿ ಓಡಿಬಂದು ಮಗಳನ್ನು ಬರಮಾಡಿಕೊಳ್ಳುತ್ತಾಳೆ. ಈ ಎಲ್ಲ ಸನ್ನಿವೇಶಗಳನ್ನು ಕಂಡ ದಾಕ್ಷಾಯಿಣಿಗೆ ತನ್ನ ಪತಿ ಶಿವನ ಮಾತುಗಳು ನಿಜವೆನ್ನಿಸುತ್ತದೆ. ತನ್ನ ಗಂಡನಿಗೆ ಆಮಂತ್ರಿಸದೆ ಮಗಳು ಮೇಲೂ ದ್ವೇಷ ಸಾಧಿಸುವ ತಂದೆಯನ್ನು ಕಂಡು ಕುಪಿತಳಾಗುತ್ತಾಳೆ. ಅವಮಾನಿತಳಾದ ಮುಖ ಶಿವನಿಗೆ ಹೇಗೆ ತೊರಿಸುವದೆಂದು ತಂದೆ ದಕ್ಷನ ಜೊತೆಗೆ ಜಗಳಕ್ಕೆ ನಿಲ್ಲುತ್ತಾಳೆ. ಶಿವನಿಲ್ಲದ ಯಜ್ಞ ಯಾವ ಕೃತಾರ್ಥಕ್ಕಾಗಿ ಮಾಡುತ್ತಿರುವಿರಿ ಎಂದು ಆ ಅಗ್ನಿಕುಂಡದಲ್ಲಿ ಹಾರಿಬಿಡುತ್ತಾಳೆ.  ಇತ್ತ ಸುದ್ದಿ ತಿಳಿದ ಶಿವ ತನ್ನಲ್ಲಿದ್ದ ಬಿಟ್ಟ ಬಾಣದಿಂದ ದಕ್ಷನಿಗೆ ಹೊಡೆಯಲಾಗಿ ದಕ್ಷನ ಶಿರಚ್ಛೇದವಾಗಿ ಅಗ್ನಿಕುಂಡದಲ್ಲಿ ಬೀಳುತ್ತದೆ. ತನ್ನ ಪತ್ನಿಯನ್ನು ಕಳೆದುಕೊಂಡ ಶಿವ ಸತಿಯನ್ನು ಮರಳಿ ಪಡೆಯುವ ಸಲುವಾಗಿ ಉಗ್ರ ತಪಸ್ಸನ್ನು ಆಚರಿಸಿ ಶೈಲಪುತ್ರಿಯ ರೂಪದಲ್ಲಿ ಮರಳಿ ಪಡೆಯುತ್ತಾನೆ. ದಾಕ್ಷಾಯಿಣಿ ಮರುಜನ್ಮದಲ್ಲಿ ಪರ್ವತ ರಾಜನ ಮಗಳು ಶೈಲಪುತ್ರಿಯಾಗಿ  ಶಿವನನ್ನು ಸೇರುತ್ತಾಳೆ. ಶಿವನು ಪ್ರತಿವರ್ಷ ಹತ್ತು ದಿನಮಾತ್ರ ಪತ್ನಿಯನ್ನು ತವರಿಗೆ ಕಳುಹಿಸುತ್ತಾನೆ. ಕಿತ್ತಳೆಬಣ್ಣದ ವಸ್ತ್ರಾಭಳಗಳಿಂದ ಶುಶೋಭಿತಳಾಗಿ ದುರ್ವಿಕಾರ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಶಾಂತತೆ, ಬಲ, ಶೌರ್ಯ, ಇಂದ್ರಿಯ ಮೇಲೆ ನಿಗ್ರಹ ಶಕ್ತಿ ನೀಡಿ ಆಶಿರ್ವದಿಸಲು ದರ್ಶನ ನೀಡುತ್ತಾಳೆ.

ಎರಡನೇಯದಾಗಿ ಪಾರ್ವತಿ ದೇವಿಯ ಬ್ರಹ್ಮಚಾರಿಣಿಯ ಅವತಾರವಾಗಿದೆ. ಅತ್ಯಂತ ಕಠಿಣ ತಪಸ್ಸನ್ನು ಆಚರಿಸುವ ಮೂಲಕ ಶಿವನನ್ನು ಪಡೆದುಕೊಂಡವಳು. ಹಿಮಾಲಯನ ಮಗಳಾಗಿ ಉಮೇಯು ನಾರದರ ಉಪದೇಶದಂತೆ ಹಲವು ವರ್ಷ ಈಕೆ ಕೇವಲ ಫಲ ಪುಷ್ಪಗಳನ್ನು ಸೇವಿಸಿ ನೂರು ವರ್ಷಗಳ ಕಾಲ ತಪಸ್ಸನ್ನು ಆಚರಿಸುತ್ತಾಳೆ. ತದನಂತರ ಒಣಗಿದ ಎಲೆಗಳನ್ನು(ಪರ್ಣ) ಸೇವಿಸಿ ಮೂರುಸಾವಿರ ವರ್ಷ ತಪಸ್ಸನ್ನು ಆಚರಿಸುತ್ತಾಳೆ. ಇಷ್ಟು ಕಠೋರ ತಪಸ್ಸನ್ನು ಮಾಡಿದರೂ ಶಿವನು ಒಲಿಯದಿದ್ದಾಗ ಎಲ್ಲವನ್ನೂ ತ್ಯಜಿಸಿ ಬರೀ ಗಾಳಿಯ ಸೇವನೆಯಿಂದ ತಪಸ್ಸನ್ನು ಆಚರಿಸುತ್ತಾಳೆ. ಹೆತ್ತ ತಾಯಿ ಮೇನಾದೇವಿಯು ಮಗಳ ಕೃಶವಾದ ಶರಿರವನ್ನು ಕಂಡು ದುಃಖಿತಳಾಗುತ್ತಾಳೆ. ಉಮಾ ದೇವಿಯ ತಪಸ್ಸಿನಿಂದ ಮೂರು ಲೋಕಗಳಲ್ಲಿ ಹಾಹಾಕಾರ ಉಧ್ಭವವಾಗುತ್ತದೆ. ಕೊನೆಗೆ ಬ್ರಹ್ಮದೇವನು ಪ್ರತ್ಯಕ್ಷನಾಗಿ, ಹೇ ದೇವಿ ಇಷ್ಟೊಂದು ಕಠೋರ ತಪಸ್ಸು ಮಾಡಿದ್ದು ಸಾಕು. ನಿನ್ನ ಅಭಿಲಾಷೆ ಪೂರ್ಣಗೊಳ್ಳುತ್ತದೆ. ಇನ್ನೂ ನೀನು ಮನೆಗೆ ಮರಳು ಎಂದು ಹೇಳುತ್ತಾನೆ. ನಂತರ ಶಿವನು ಬ್ರಹ್ಮಚಾರಿಣಿಯನ್ನು ಹುಡುಕುತ್ತಾ ಬಂದು ಸತಿಯಾಗಿ ಸ್ವೀಕರಿಸುತ್ತಾನೆ.

ಬ್ರಹ್ಮಚಾರಿಣಿ ದೇವಿ ಬಿಳಿಯ ವಸ್ತ್ರ, ಕೈಯಲ್ಲಿ ಜಪಮಾಲೆ ಧರಿಸಿರುತ್ತಾಳೆ. ಈ ದೇವಿಯ ಆರಾಧನೆಯಿಂದ ಮನುಷ್ಯರಲ್ಲಿ ತ್ಯಾಗ, ವೈರಾಗ್ಯ, ಸದಾಚಾರ, ಸಂಯಮತೆ ವೃದ್ಧಿಯಾಗುತ್ತದೆ.

ಮೂರನೇಯದಾಗಿ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಪೂಜಿಸಿ ಆರಾಧಿಸುವ ದಿನವಾಗಿದೆ. ಅತೀ ಕಠೋರ ತಪಸ್ಸನ್ನು ಆಚರಿಸಿದ ನಂತರ ಮಾತೆ, ಶಿವನ ಆಗಮನವನ್ನು ನಿರಿಕ್ಷಿಸುತ್ತಿರುವಳು. ಕೈಲಾಸದ ಗಣಂಗಳೊಂದಿಗೆ ಶಿವನು ಪಾರ್ವತಿಯ ಜೊತೆ ಮದುವೆಯಾಗಲು ಅರಮನೆಯನ್ನು ಪ್ರವೇಶಿಸುತ್ತಾನೆ. ಶಿವನ ಭಯಂಕರವಾದ ಉಗ್ರ ರೂಪವನ್ನು ಕಂಡು ಪಾರ್ವತಿ ಭಯಭೀತಳಾಗಿ ಮೂರ್ಚೆ ಹೋಗುತ್ತಾಳೆ. ಆಗ ಪಾರ್ವತಿ ಚಂದ್ರಘಂಟಾರೂಪದಲ್ಲಿ ಅವತರಿಸಿ ಶಿವನನ್ನು ರಾಜಕುಮಾರನ ರೂಪದಲ್ಲಿ ಅವತರಿಸುವಂತೆ ವಿನಂತಿಸಿಕೊಳ್ಳುತ್ತಾಳೆ. ಶಿವ ಪಾರ್ವತಿಯರಿಬ್ಬರೂ ಸುಂದರ ಮದುಮಕ್ಕಳ ರೂಪಧಾರಣೆಯಲ್ಲಿ ಮದುವೆ ನೆರವೇರುತ್ತದೆ. ಚಂದ್ರಘಂಟೆ ದೇವಿ ಕೆಂಪು ಪಿತಾಂಬರ ಉಟ್ಟು ಮಲ್ಲಿಗೆಯ ಹೂವಿನ ಮಾಲೆಯಲ್ಲಿ ಅಲಂಕೃತಳಾಗಿ ಭಕ್ತರ ಇಷ್ಟಾರ್ಥ ನೆರವೇರಿಸುತ್ತಾಳೆ. ಮಸ್ತಕದಲ್ಲಿಯ ಚಂದ್ರಘಂಟೆನಾದದೊಂದಿಗೆ ಋಣಾತ್ಮಕ ಶಕ್ತಿಯನ್ನು ನೀಡುತ ಯಶಸ್ಸಿನ ಗುರಿ ಸಾಧಿಸಲು ಸಹಕರಿಸುತ್ತಾಳೆ. ಇವಳಿಗೆ ವಿಧವಿಧವಾದ ಹದಿನಾರು ಅರ್ಪಣೆಯ ನೈವೇದ್ಯಗಳೊಂದಿಗೆ  ಪೂಜಾ ವಿಧಿವಿಧಾನವನ್ನು ಸಮರ್ಪಿಸುತ್ತಾರೆ.

ನಾಲ್ಕನೇಯದಾಗಿ ಆದಿಶಕ್ತಿ ಪಾರ್ವತಿಯು ಕೂಷ್ಮಾಂಡಾದೇವಿಯ ರೂಪದಲ್ಲಿ  ಅವತರಿಸುವಳು. ಕುಷ್ಮಾಂಡಾ ಅಂದರೆ ಕುಂಬಳಕಾಯಿ. ಇದು ಪೃಧ್ವಿಯ ಸಂಕೇತ. ವಿಶ್ವವನ್ನು ಸೃಷ್ಟಿಸಿದ ಕುಷ್ಮಾಂಡಾ ದೇವಿ ತನ್ನ ಮಧು ಹಾಸ್ಯದಲ್ಲಿ  ಮೊದಲು ಅಂಡದ (ಮೊಟ್ಟೆ)ಮೂಲ ಬ್ರಹ್ಮಾಂಡದಲ್ಲಿ  ಸೃಷ್ಟಿಮಾಡಿದಳು. ಭೂಮಿಯ ಮೇಲಿನ ಕತ್ತಲೆಯನ್ನು ಅಳಿಸಿ ಸೂರ್ಯ ಚಂದ್ರನಿಂದ ಹಗಲು ರಾತ್ರಿಯ ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಮಾತೆಯಾಗಿರುವಳು. ನೀಲಿ ವಸ್ತ್ರಾಭರಣ ತೊಟ್ಟು, ತಾಯಿಯ ಅಷ್ಟ ಭುಜಗಳಲ್ಲಿ ಕ್ರಮವಾಗಿ ಕಮಂಡಲ, ಬಿಲ್ಲು ಬಾಣ, ಕಮಲ, ಅಮೃತ ಕಲಶ, ಚಕ್ರ, ಗದೆ ಮತ್ತು ಜಪಮಾಲೆಯನ್ನು ಹಿಡಿದು ಸಿಂಹಾಸನಾರೂಢಳಾಗಿದ್ದಾಳೆ. ಮಧು ಪ್ರೀಯಳಾದ ಮಾತೆಗೆ ಮಧುವನ್ನು (ಜೇನುತುಪ್ಪ)ನೈವ್ಯದ ಮಾಡುತ್ತಾರೆ. ಇವಳ ನಿವಾಸ ಸೂರ್ಯಮಂಡಲದ ಲೋಕದೊಳಗಿದೆ. ಇವಳ ತೇಜೊಪುಂಜದ ಮುಖ ಪ್ರಭಾವ ಎಲ್ಲಾ ದಿಕ್ಕುಗಳಲ್ಲಿ ಪಸರಿಸಿ ಈ ಭೂಮಂಡಲ ಬೆಳಗುತ್ತಿದೆ. ಇವಳ ಆರಾಧನೆಯಿಂದ ಜಗತ್ತಿನಲ್ಲಿ ರೋಗ, ಶೋಕಗಳು ನಿವಾರಣೆ ಹೊಂದಿ ಆಯುಷ್ಯವೃದ್ಧಿಸುವ, ಶಕ್ತಿ ಬಲವರ್ಥನೆಯ ವಾತಾವರಣ ನಿರ್ಮಾಣವಾಗುತ್ತದೆ.

ಐದನೇಯದಾಗಿ ಪಾರ್ವತಿಯು ಸ್ಕಂದಮಾತಾದೇವಿಯ ರೂಪದಲ್ಲಿ ದರ್ಶನ ನೀಡಿರುವಳು. ಇದರ ಹಿನ್ನೆಲೆಯ ಕಥೆ ತಾರಕಾಸುರ ರಾಕ್ಷಸನ ಸಂಹಾರ ಮಾಡುವುದಾಗಿದೆ. ತಾರಕಾಸುರನ ಉಪಟಳದಿಂದ ತ್ರೀಲೋಕದಲ್ಲಿಯ ದೇವತೆಗಳು, ಮಾನವರು, ದಾನವರು  ದುಃಖ ಪಿಡಿತರಾಗಿರುತ್ತಾರೆ. ತಾರಕಾಸುರನು ತಪಸ್ಸು ಮಾಡಿ ಶಿವಪಾರ್ವತಿ ಪುತ್ರರಿಂದ ಮಾತ್ರ ಮರಣವೆಂದು ವರ ಪಡೆದಿರುತ್ತಾನೆ. ವರ ಕೊಟ್ಟ ಶಿವನು ತನ್ನ ಮಕ್ಕಳಿಂದ ವಧೆಮಾಡಲಾರನೆಂಬ ನಂಬಿಕೆ ಅವನಲ್ಲಿರುತ್ತದೆ. ಆದರೆ ಶಿವ ಪಾರ್ವತಿಯರ ಮದುವೆಯಾದ ಬಳಿಕ ಸ್ಕಂದ(ಷಣ್ಮುಖ) ಪುತ್ರ ಹುಟ್ಟುತ್ತಾನೆ. ಮುಂದೆ ದೇವತೆಗಳೆಲ್ಲ ಸ್ಕಂದನನ್ನೆ ದೇವಸೈನ್ಯಕ್ಕೆ ಸೇನಾಪತಿಯನ್ನಾಗಿಸಿ  ಕೊಳ್ಳುತ್ತಾರೆ. ದೇವಿಯರು ಸೇರಿದಂತೆ ಎಲ್ಲ ದೇವತೆಗಳ ಶಕ್ತಿ .ಸ್ಕಂದನಿಗೆ ಧಾರೆಯೆರೆಯುತ್ತಾರೆ. ಸ್ಕಂದನು ದೇವಸೇನಾ ಸಮೇತನಾಗಿ ತಾರಕಾಸುರನ ಜೊತೆ ಯುದ್ಧಕ್ಕೆ ಇಳಿಯುತ್ತಾನೆ. ಘನಘೋರ ಯುದ್ಧದಲ್ಲಿ ಸ್ಕಂದ ಅತೀವ ದೈವಿ ಶಕ್ತಿಯಿಂದ ತಾರಕಾಸುರನನ್ನು ಕೊಂದು ಹಾಕುತ್ತಾನೆ.  ಜಗತ್ಕಲ್ಯಾಣಕ್ಕೆ ಮಗನನ್ನು ಹೆತ್ತು ಕೊಟ್ಟು ಮಾತೆ ಸ್ಕಂದಮಾತೆಯೆಂದು ಪೂಜಿಸಲ್ಪಡುತ್ತಾಳೆ. ಸ್ಕಂದ ಮಾತೆಯು ಬುಧಗ್ರಹದ ಮೇಲೆ ಅಧಿಪತ್ಯವನ್ನು ಹೊಂದಿರುತ್ತಾಳೆ.

ಒಂದು ಕೈಯಿಂದ ತೊಡೆಯ ಮೇಲೆ ಮಗನನ್ನು ಕೂಡ್ರಿಸಿ ಕೊಂಡು ಇನ್ನೊಂದು ಹಸ್ತ ಅಭಯ ಮುದ್ರೆಲ್ಲಿದ್ದು, ಇನ್ನೆರಡು ಕೈಯಲ್ಲಿ ಕಮಲವನ್ನು ಪಿಡಿದಿರುತ್ತಾಳೆ. ಸಿಂಹದ ಮೇಲೆ ಸವಾರಿ ಮಾಡಿ ತನ್ನ ಅದ್ಭುತ ರೂಪವನ್ನು ಭಕ್ತರಿಗೆ ತೋರಿಸಿಕೊಟ್ಟಿದ್ದಾಳೆ. ಮಾತೆಯ ಆರಾಧಕರು ದೇವಿಯನ್ನು ಹಳದಿ ಬಣ್ಣದಿಂದ ವಸ್ತ್ರಾಲಂಕಾರ ಮಾಡಿ ಬಾಳೆಹಣ್ಣಿನಿಂದ ವಿವಿಧ ಪದಾರ್ಥ ತಯಾರಿಸಿ ನೈವೆದ್ಯವನ್ನು ನೀಡುತ್ತಾರೆ. ಸಂಪತ್ತು ಸಮೃದ್ಧಿಯನ್ನು  ಮತ್ತು ಮಕ್ಕಳಿಲ್ಲದವರಿಗೆ ಮಕ್ಕಳನ್ನು ತಾಯಿ ಮತ್ತು ಮಗನ ಆಶಿರ್ವಾದಿಂದ ಪಡೆದುಕೊಳ್ಳುತ್ತಾರೆ.

ಆರನೇಯದಾಗಿ ಪಾರ್ವತಿಯು ಕಾತ್ಯಾಯಿನಿ ದೇವಿಯ ರೂಪ ಧಾರಣೆ ಮಾಡಲು ಎರಡು ಸಂದರ್ಭಗಳು ಕಾರಣವಾಗಿವೆ.

ಮೊದಲನೇಯದಾಗಿ ಮಹರ್ಷಿ ಕಾತ್ಯಾಯನರು ಭಗವತಿಯ ಉಪಾಸಕರಾಗಿದ್ದರು. ಭಗವತಿಯು ತಮ್ಮ ಪುತ್ರಿಯಾಗಿ ಜನಿಸಬೇಕೆಂಬ ಇಚ್ಛೆ ಅವರಲ್ಲಿತ್ತು. ಅದಕ್ಕಾಗಿ ಅನೇಕ ವರ್ಷ ಕಠೋರ ತಪಸ್ಸನ್ನು ಆಚರಿಸಿದ ಕಾತ್ಯಾಯನರ ನಿಷ್ಕಾಮ ಭಕ್ತಿಗೆ ಮೆಚ್ಚಿ ಅವರ ಮಗಳಾಗಿ ಅವತರಿಸಿದಳು.

ದಾನವ ಮಹಿಷಾಸುರನ  ಅತ್ಯಾಚಾರವು ಪೃಥ್ವಿಯಲ್ಲಿ ತುಂಬಾ ಹೆಚ್ಚಾದಾಗ ಬ್ರಹ್ಮ ವಿಷ್ಣು ಮಹೇಶ್ವರ ಮತ್ತು  ದೇವಾಧಿ ದೇವತೆಗಳು  ತಮ್ಮ ಅಂಶವನಿತ್ತು ಕಾತ್ಯಾಯಿನಿ ದೇವಿಯನ್ನು ಉದ್ಭವಿಸುತ್ತಾರೆ. ಮಹಿಷಾಸುರ ಶಕ್ತಿಯುತನಾಗಿರುತ್ತಾನೆ. ಅರ್ಧಮಾನವ ಅರ್ಧ ಎಮ್ಮೆಯ ರೂಪ ಅಂದರೆ ಮಹಿಷನ ರೂಪ ಹೊಂದಿರುತ್ತಾನೆ. ಅವನು ತನ್ನ ಆಕಾರವನ್ನು ಬದಲಾಯಿಸುವ ಸಾಮರ್ಥ್ಯವನ್ನು ಸಹ ಹೊಂದಿದವನಾಗಿರುತ್ತಾನೆ. ಅವನ ಸಂಹಾರಕ್ಕಾಗಿ ಕಾತ್ಯಾಯಿನಿ ದೇವಿಯು ಮೂರು ಕಣ್ಣು, ಕಪ್ಪು ಕೂದಲು, ಬಹು ಕೈಗಳ ಬಲದಿಂದ ಆತನ ವಧೆಮಾಡುತ್ತಾಳೆ. ಅದಕ್ಕೆ ಇವಳನ್ನು ಮಹಿಷಾಸುರ ಮರ್ದಿನಿ ಎಂತಲೂ ಕರೆಯಲಾಗುತ್ತದೆ. ಶಿವನು ಮಹಿಷಾಸುರನ ಮರ್ದನಕೆ ದೇವಿಗೆ ತ್ರೀಶೂಲವನ್ನು ಕೊಟ್ಟರೆ ವಿಷ್ಣು ಸುದರ್ಶನ ಚಕ್ರನೀಡುತ್ತಾನೆ. ಅಂಗಿ ದೇವನು ಬಾಣವನ್ನು, ವಾಯುದೇವನು ಬಿಲ್ಲು, ಇಂದ್ರ ದೇವನು ಗುಡುಗು, ಬ್ರಹ್ಮದೇವನು ನೀರಿನ ಕಮಂಡಲ ಮತ್ತು ರುದ್ರಾಕ್ಷಿಯನ್ನು ನೀಡಿರುತ್ತಾರೆ. ಇವಳು ವಜ್ರಮಂಡಲದ ಅಧಿಷ್ಠಾತ್ರಿ ದೇವಿಯಾಗಿಯೂ ಪ್ರತಿಷ್ಟೀತಳಾಗಿದ್ದಾಳೆ. ಕಾತ್ಯಾಯಿನಿ ದೇವಿಗೆ ನಾಲ್ಕು ಭುಜಗಳಿವೆ. ಒಂದು ಕೈಯಲ್ಲಿ ಕೊಳಲು ಇನ್ನೊಂದು ಕೈಯಲ್ಲಿ ಖಡ್ಗ ಮತ್ತು ಎರಡು ಕೈಗಳಲ್ಲಿ ಭಕ್ತರಿಗೆ ಆಶಿರ್ವದಿಸುವ ಮುದ್ರೆಯನ್ನು ಹೊಂದಿದ್ದು ಸಿಂಹಾಸನರೂಢಳಾಗಿದ್ದಾಳೆ. ದೇವಿಗೆ ಪೂರ್ಣ ಆತ್ಮಸಮರ್ಪಣ ಮಾಡುವ ಭಕ್ತನಿಗೆ ಕಾತ್ಯಾಯಿನಿಯ ದರ್ಶನವಾಗುತ್ತದೆ. ದೇವಿಯ ಉಪಾಸನೆ ಮೂಲಕ ಅರ್ಥ, ಧರ್ಮ, ಕಾಮ, ಮೋಕ್ಷವೆಂಬ ನಾಲ್ಕು ಪುರುಷಾರ್ಥಗಳು ಪಡೆದುಕೊಳ್ಳುತ್ತಾರೆ. ರೋಗ, ಶೋಕ, ಸಂತಾಪ, ಭಯ ಮುಂತಾದವುಗಳು ಭಕ್ತರಲ್ಲಿ ನಶಿಸಿ ಹೋಗುತ್ತವೆ. ಹಸಿರು ಬಣ್ಣದಲ್ಲಿ ಅಲಂಕೃತಳಾಗಿ ಬಂಗಾರದಂತಹ ತೇಜಸ್ಸಿನೊಂದಿಗೆ ಭಕ್ತರನ್ನು ದಯಪಾಲಿಸುತ್ತಾಳೆ.

ಏಳನೇಯದಾಗಿ ಪಾರ್ವತಿಯು ಆದಿಶಕ್ತಿ ಮಹಾಕಾಳಿಯ ರೂಪದಲ್ಲಿ  ರಕ್ತ ಬೀಜಾಸುರನನ್ನು ವಧೆ ಮಾಡಲು ಅವತರಿಸಿದ್ದಾಳೆ. ರಕ್ತಬೀಜಾಸುರನು ಅತ್ಯಂತ ಶಕ್ತಿಶಾಲಿ ಮಹಾರಕ್ಕಸನಾಗಿರುತ್ತಾನೆ. ಈತ ತನ್ನ ದೈತ್ಯ ಶಕ್ತಿಯಿಂದ ಶುಂಭ ನಿಶುಂಭ ರಾಕ್ಷಸರನ್ನು ಸಂಹರಿಸಿರುತ್ತಾನೆ. ಈತನ ಶಕ್ತಿಯ ವಿಶೇಷತೆ ಏನೆಂದರೆ ಆತನ ಶರೀರದಿಂದ ಒಂದು ತೊಟ್ಟು ರಕ್ತ ಬಿದ್ದಲ್ಲಿ ಆ ರಕ್ತದಿಂದ ಮತ್ತೊಬ್ಬ ರಕ್ತಬೀಜನು ಹುಟ್ಟಿಕೊಳ್ಳುತ್ತಿರುತ್ತಾನೆ. ಇದು ರಕ್ತಬೀಜಾಸುರನಿಗೆ ಬ್ರಹ್ಮದೇವ ಕೊಟ್ಟು ವರ ವಾಗಿರುತ್ತದೆ. ಈತ ಪಡೆದುಕೊಂಡ ವರಬಲದಿಂದ ಈತನನ್ನು ನಿಯಂತ್ರಿಸುವುದು ದೇವಾದಿದೇವತೆಗಳಿಗೆ  ಬಹು ಕಷ್ಟಕರವಾಗಿರುತ್ತದೆ. ಕಪ್ಪು ಮೈಕಟ್ಟಿನೊಂದಿಗೆ ಕೆರೆದ ಕೂದಲು, ಕೊರಳಲ್ಲಿ ರುಂಡಮಾಲಧಾರೆ, ಕೋರೆಯಾದ ಹಲ್ಲು, ಹಣೆಯಲ್ಲಿ ಮೂರನೇಯ ಕಣ್ಣು, ಉದ್ದವಾದ ನಾಲಿಗೆಯನ್ನು ಚಾಚಿ ಆದಿಶಕ್ತಿಯು ಮಹಾಕಾಳಿಯು ರೂಪ ಧರಿಸಿ ಬೀಜಾಸುರ ರಾಕ್ಷಸನ ವಧೆ ಮಾಡುತ್ತಾಳೆ. ಬಿಜಾಸುರನ ರಕ್ತವನ್ನೆಲ್ಲ ಕುಡಿದು ಗಂಟಲಲ್ಲಿ ಹಿಡಿದುಕೊಳ್ಳುತ್ತಾಳೆ. ಕೆಳಗೆ ಬಿದ್ದು ಹನಿ ರಕ್ತ ಕೂಡ ತನ್ನ ಉದ್ದನೇಯ ನಾಲಿಗೆಯಿಂದ ಸವರಿಕೊಳ್ಳುತ್ತಾಳೆ. ತನ್ನ ಮೇಲೆ ತನಗೆ ನಿಂಯಂತ್ರಣವಿಲ್ಲದೆ ರೌದ್ರಾವತಾರ ತಾಳಿದಾಗ ಶಿವನನ್ನು ತುಳಿಯುತ್ತಾಳೆ. ತತ್ಕ್ಷಣ ಮಹಾಕಾಳಿ ತನ್ನನ್ನು ನಿಯಂತ್ರಿಸಿಕೊಂಡು ಶಿವನಲ್ಲಿ ಕ್ಷಮೆ ಕೇಳುಕೊಳ್ಳುತ್ತಾಳೆ. ಈ ರೀತಿ ಬೀಜಾಸುರನ ವಧೆಯನ್ನು ಮಾಡಿದ ತರುವಾಯ ಶಿವನ ಸ್ಪರ್ಷಕೂಡ ಒಂದು ಕಾರಣವಾಗಿದೆ. ಪಾರ್ವತಿಯನ್ನು ಮರುಪಡೆಯಲು ಶಿವನು ಮಾಡಿದ ಸಹಕಾರ ಕೂಡವೆನ್ನಬಹುದು. ದೇವಿಯ ಮೈಯೆಲ್ಲ ಬೂದಿ ತುಂಬಿ ಕೊಂಡಿರುವುದರಿಂದ ಈ ದಿನ ಬೂದಿ ಬಣ್ಣದ ವಸ್ತ್ರ ತೊಡಿಸಿ ರಂಡಮುಂಡಗಳ ಅಲಂಕಾರದಲ್ಲಿ ದೇವಿಯನ್ನು ಪೂಜಿಸುತ್ತಾರೆ.

ತ್ರೀಲೋಕದಲ್ಲಿ ಅಶಾಂತತೆ ಅಳಿಸಿ ಶಾಶ್ವತವಾಗಿ ಶಾಂತತೆಯನ್ನು ಅನುಗ್ರಹಿಸುತ್ತಾಳೆ. ಆರಾಧಿಸುವ ಭಕ್ತರಲ್ಲಿಯೂ ಕೂಡ ನಕಾರಾತ್ಮಕ ಶಕ್ತಿ, ಭಯ ದೂರಮಾಡಿ ಸಂತೋಷ, ಸಂತೃಪ್ತಿಯನ್ನು ಕರುಣಿಸುವಳು. ದುಷ್ಟರನ್ನು ಶಿಕ್ಷಿಸಿ ಒಳ್ಳೆಯ ರಕ್ಷಣೆಯನ್ನು ಒದಗಿಸುವಳು. ಮಲ್ಲಿಗೆಯ ಹೂವು ಅವಳ ಪೂಜೆಗೆ ಶ್ರೇಷ್ಟವಾಗಿವೆ. ನವರಾತ್ರಿಯ ಏಳನೇಯ ದಿನವನ್ನು ಮಹಾಸಪ್ತಮಿಯೆಂದು ಸರಸ್ವತಿ ದೇವಿಯ ಪೂಜೆಯು ಆರಂಭವಾಗುತ್ತದೆ.

ಎಂಟನೇಯದಾಗಿ ಪಾರ್ವತಿಯು ಹದಿನಾರರ ಹರೆಯದ ಕನ್ಯೆ ಮಹಾಗೌರಿಯಾಗಿ ಭಕ್ತರ ಮನದಲ್ಲಿ ನೆಲೆ ಉರಿದ್ದಾಳೆ. ಮಹಾ ಎಂದರೆ ದೊಡ್ಡದು. ಪಾರ್ವತಿ ಭೂಲೋಕದಲ್ಲಿ ಜನಿಸಿ ಮಹಾತಪಸ್ವಿನಿಯಾಗಿ  ಶಾಂತಿ ಮತ್ತು ಏಕಾಗ್ರತೆಯ ಪ್ರತೀಕವಾಗಿ ಭೂಲೋಕದ ಮಾನವರಿಗೆ ಮಾನವನ ಜನ್ಮ ಒಂದು ತಪಸ್ಸು ಇದ್ದ ಹಾಗೆಯೆಂದು ಬಿಂಬಿಸಿದ್ದಾಳೆ. ಅರಿಷಡ್ವರ್ಗಗಳನ್ನು ನಾಶಮಾಡಲು ವಿವಿಧ ರೂಪಗಳಲ್ಲಿ ಅವತರಿಸಿದ ಮಾತೆ ಮತ್ತು ಶಿವನನ್ನು ಮರುಪಡೆಯಲು ದೀರ್ಘ ಕಾಲದ ತಪಸ್ಸಾಚರಣೆಯಲ್ಲಿ  ಹೂಬಳ್ಳಿಗಳು ಧೂಳುಮಣ್ಣಿನಿಂದ ಅವಳ ಶರೀರ ಮುಚ್ಚಿಕೊಂಡಿರುತ್ತದೆ. ಶಿವನು ಅವಳ ಅವಸ್ಥೆಯನ್ನು ಕಂಡು ಗಂಗೆಯನ್ನು ಧರೆಗೆ ಆಮಂತ್ರಿಸುತ್ತಾನೆ. ಗಂಗೆಯ ರಭಸಕ್ಕೆ ಪಾರ್ವತಿ ಮೈಮೇಲಿನ ಮೇಲಿನ ಕೊಳೆಯೆಲ್ಲ ತೊಳೆದು ಸ್ವಚ್ಛವಾಗಿ ಸ್ಪಟಿಕದಂತೆ ಹೊಳೆಯುವ ಮುಖ ಚಂದ್ರನಂತೆ ಶಾಂತತೆಯನ್ನು ಹೊಂದಿರುವಳು. ಅಲ್ಲಿ ಮಹಾಗೌರಿಯಾಗಿ ಹೊಸಜನ್ಮವನ್ನು ಪಡೆದು ಶಿವನನ್ನು ಅರಿಸುತ್ತಾಳೆ. ಮಹಾ ಗೌರಿ ಬಿಳಿ ಸೀರೆಯಲ್ಲಿ ಅಲಂಕೃತಳಾಗಿ ಶ್ವೇತ ವೃಷಭ ವಾಹನ ಮೇಲೆ ಕುಳಿತು  ಚತುರ್ಭುಜೆಯಾಗಿದ್ದಾಳೆ. ಒಂದು ಕೈಯಲ್ಲಿ ತ್ರೀಶೂಲ ಇನ್ನೊಂದು ಕೈಯಲ್ಲಿ ಡಮರು ಮತ್ತು ಇನ್ನೆರಡು ಕೈ ವರದ ಮುದ್ರೆ, ಅಭಯ ಮುದ್ರೆ ಯಾಗಿರುತ್ತದೆ. ಭಕ್ತರು ಮಹಾಗೌರಿಯನ್ನು ಆರಾಧಿಸುವ ಮೂಲಕ ದ್ವೇಷ, ಅಸೂಯೇಗಳನ್ನು ಬಿಟ್ಟು ಪ್ರೀತಿ ಸ್ನೇಹ, ಸತ್ಯನಿಷ್ಠೆ ಯಿಂದ ಬದುಕಲು ಆಶರ್ವದಿಸುತ್ತಾಳೆ. ಅಲ್ಲದೆ ವಿದ್ಯಾರ್ಥಿಗಳು ಶಾರದಾ ಮಾತೆಯ ಪೂಜೆಯನ್ನು ಈ ದಿನ ಮನೆಯಲ್ಲಿ ಆಚರಿಸುತ್ತಾರೆ.

ಇನ್ನೊಂದು ಕಥೆಯಲ್ಲಿ ಹಸಿದ ಸಿಂಹವು ತನ್ನ ಆಹಾರವನ್ನು ಹುಡುಕುತ್ತ ಸಂಚರಿಸುವಾಗ ಪಾರ್ವತಿಯ ಹತ್ತಿರ ಬರುತ್ತದೆ. ದೇವಿ ತಪಸ್ಸಿನಲ್ಲಿ ಏಕಚಿತ್ತದಿ ಮಗ್ನಳಾಗಿ ಕುಳಿತಿರುವುದನ್ನು ಕಂಡು ಅವಳ ಹತ್ತಿರದಲ್ಲೆ ಕಾಯುತ್ತಾ ಕುಳಿತುಕೊಳ್ಳುತ್ತದೆ. ಮಾತೇ ತನ್ನ ದೀರ್ಘ ತಪಸ್ಸಿನಿಂದ ಎಚ್ಚೆತ್ತು ನೋಡಲಾಗಿ ಅವಳ ಹತ್ತಿರ ಕುಳಿತ ಸಿಂಹವು ಕೃಷವಾಗಿ ಕಣ್ಣಲ್ಲಿ ಜೀವಹಿಡಿದು ಕೊಂಡಿರುತ್ತದೆ. ತನ್ನ ಜೊತೆ ಜೊತೆಗೆ ಸಿಂಹದ ಅವಸ್ಥೆಯನ್ನು ಕಂಡು ಆ ಸಿಂಹವನ್ನು ಮತ್ತು ನಂದಿಯನ್ನು ತನ್ನ ವಾಹನಗಳನ್ನಾಗಿ ಸ್ವೀಕಾರಮಾಡುತ್ತಾಳೆ. ಮಹಾಗೌರಿಯು ತೇಜಸ್ಸನ್ನು ಗಳಿಸಿ ಶಿವನನ್ನು ಸೇರಿದಂತೆ ಮಾನವನೂ ಕೊನೆಯಲ್ಲಿ ಸೇರುವುದು ಶಿವನನ್ನೆಯೆಂಬುದು ತಿಳಿದುಕೊಳ್ಳಬೇಕು. ಈ ರೀತಿ ಮಾತೆಯ ಎರಡು ಕಥೆಗಳು ಕೇಳಲಾಗಿದೆ.

ಒಂಬತ್ತನೇಯದಾಗಿ ಸಿಧ್ಧಿಧಾತ್ರಿಯು ಆರಾಧಿಸುವ ಭಕ್ತರ ಮನದಲ್ಲಿ ಸಿದ್ಧಿಯನ್ನು ಸಿದ್ಧಿಸಲು ನೆಲೆಸುತ್ತಾಳೆ. ಸಿಧ್ಧಧಾತ್ರಿಯೆಂದರೆ ಪರಿಪೂರ್ಣತೆಯ ಅವತಾರ. ಶಕ್ತಿ, ವೈಭವ, ಮತ್ತು ತನ್ನ ಮಹಿಮೆಯನ್ನು ಭಕ್ತರಿಗೆ ತೋರಿಸುವವಳಾಗಿದ್ದಾಳೆ. ಆಕೆ ಅಷ್ಟ ಮಹಾಸಿಧ್ಧಿಯನ್ನು ನಿರ್ಮಿಸಿ ತ್ರೀಮೂತ್ರಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕದ ಸಾಧನೆಯ ಪರಿಪೂರ್ಣತೆಯನ್ನು ಕಲ್ಪಿಸಿದ್ದಾಳೆ. ಸಿದ್ಧಿಧಾತ್ರಿಯೂ ಕೇತುವಿನ ಅಧಿಪತಿಯಾದ ಕಾರಣ ಭಕ್ತರ ಮೇಲೆ ಕೇತುವಿನಿಂದ ಆಗುವ ಕೇಡನ್ನು ನಿವಾರಿಸುತ್ತಾಳೆ. ನವರಾತ್ರಿಯ ಕೊನೆಯ ಅವತಾರದಲ್ಲಿ ಸಿಧ್ಧಧಾತ್ರಿಯೂ ಶಿಸ್ತುಬದ್ಧ ಆಧ್ಯಾತ್ಮಿಕ ಜೀವನ ನಡೆಸಲು ಪ್ರೇರೆಪಿಸುತ್ತಾಳೆ. ಪ್ರಕೃತಿಯ ಸೌಂದರ್ಯದ ಬಗ್ಗೆ ಪ್ರೇರೆಪಿಸುವ ನೆರಳೆಯ ಬಣ್ಣಿನಲ್ಲಿ ವಸ್ತ್ರಾಲಂಕಾರಳಾಗಿ ಮಾತೇಯ ಕೈಯಲ್ಲಿ ಶಂಖ, ರಾಜದಂಡ, ತಾವರೆ ಹಿಡಿದುಕೊಂಡು ಇನ್ನೊಂದು ಅಭಯ ಹಸ್ತದೊಂದಿಗೆ ಭಕ್ತರ ಮನವನ್ನು ಗೆದ್ದಿರುವಳು. ದುರ್ಗೆಯು ಶಿವನಲ್ಲಿ ಒಂದಾಗಿ ದೇಹ ರೂಪ ಒಂದೇಯಾಗಿ ತ್ರೀಲೋಕದಲ್ಲಿ  ಅರ್ಧನಾರೀಶ್ವರಾಗಿ ನೆಲೆಸಿದ್ದಾರೆ. ನವರಾತ್ರಿಯ ನವರೂಪಗಳು ಗೌರಿ, ಲಕ್ಷ್ಮಿ ಮತ್ತು ಸರಸ್ವತಿಯರಿಂದ ಕೂಡಿದ್ದಾಗಿರುತ್ತದೆ. ಈ ಮೂರು ರೂಪಗಳನ್ನೊಳಗೊಂಡ ದೇವಿಯೇ ದುರ್ಗೆಯಾಗಿರುವಳು. ಒಂಬತ್ತನೆಯ ದಿನ ಮನೆಯಲ್ಲಿರುವ ಎಲ್ಲಾ ಆಯುಧಗಳು ಪೂಜೆಯನ್ನು ಮಾಡುತ್ತಾರೆ.

ವಿಜಯ ದಶಮಿ

ನವರಾತ್ರಿ ಆರಂಭದ ಒಂಬತ್ತು ದಿನಗಳ ಕಾಲ ಪಾಡ್ಯದಿಂದ ಬೀದಿಗೆ, ತದಿಗೆ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ ನವಮಿ ಹೀಗೆ ಒಂಬತ್ತು ದಿನಗಳ ಕಾಲ ದೇವಿಯನ್ನು ಒಂಬತ್ತು ಬಣ್ಣಗಳ ವಸ್ತ್ರಾಭರಣದ ಅಲಂಕಾರ ಮತ್ತು ಒಂಬತ್ತು ಅವತಾರಗಳೊಂದಿಗೆ ಆರಾಧನೆ ಪೂಜೆಮಾಡಿ ಹತ್ತನೆ ದಿನ ವಿಜಯ ದಶಮಿಯಂದು ವಿಜಯೋತ್ಸವದ ಹಬ್ಬವೆಂದು ಆಚರಿಸಲಾಗುತ್ತದೆ. ಪಂಚವಿಕಾರಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳ ಪ್ರತೀಕವಾದ ಪಂಚವಿಕಾರಗಳನ್ನು ಸುಟ್ಟು ಹಾಕಿ ಸಹನೆ, ಸಹಯೋಗ, ಸ್ನೇಹ, ಧೈರ್ಯ, ಉಚಿತ ನಿರ್ಣಯ ಮತ್ತು ನಿರಿಕ್ಷಣೆ, ಬಲ, ಪ್ರೀತಿ ವಾತ್ಸಲ್ಯ, ನಂಬಿಕೆಯ ಪ್ರತೀಕವಾಗಿ ಧರ್ಮ ಮತಗಳನೆಲ್ಲ ಅಲ್ಲಗಳೆದು ಸಹೋದರತ್ವದ ಭಾವನೆಗಳೊಂದಿಗೆ ಹಬ್ಬ ಆಚರಿಸುವರು. ಒಂಬತ್ತು ದಿನಗಳ ಕಾಲ ವಿವಿಧ ಪೌರಾಣಿಕ, ಧಾರ್ಮಿಕ ಕಾರ್ಯಕ್ರಮಗಳು ನವರಾತ್ರಿಯ ಮೊದಲ ದಿನದಿಂದ ವಿಜಯದಶಮಿಯವರೆಗೆ ಕನ್ನಡ ನಾಡಹಬ್ಬಗಳಾಗಿ ವಿವಿಧೆಡೆ ಜರುಗುತ್ತವೆ. ನಮ್ಮ ದೇಶದ ಹಲವು ಪ್ರಾಂತಗಳಲ್ಲಿ ಅವರದೇಯಾದ ವಿಶಿಷ್ಟತೇಯಲ್ಲಿ ತನು ಮನ ಸೂರೆಗೊಳ್ಳುವಂತಹ ಹಬ್ಬ ಆಚರಣೆಯಲ್ಲಿರುತ್ತದೆ. ಮನೆಯಲ್ಲಿ ಪೌರಾಣಿಕ, ಆಧುನಿಕ ಕಥೆಗಳು ಬಿತ್ತರಿಸುವ ಗೊಂಬೆಗಳ ಪ್ರದರ್ಶನ ಮಾಡಿರುತ್ತಾರೆ. ಶಾಂತಿ ಸೌಹಾರ್ದತೆಯಲ್ಲಿ ಕೆಟ್ಟದರ ವಿರುದ್ಧ ಒಳ್ಳೆಯದನ್ನು ಸಾಧಿಸುವ ಮನಸ್ಸುಗಳ ಹಬ್ಬವಾಗಿದೆ. ಜಂಬುಸವಾರಿಯೊಂದಿಗೆ ಕಲಾವಿದರ ಕಲೆಗಳ ಆಗರ ಹೊಮ್ಮುವ ಮತ್ತು ಪ್ರವಾಸಿಗರಲ್ಲಿ ನಮ್ಮ ಸಂಪ್ರದಾಯ ಹಬ್ಬದ ವೈಭವ ಅವರ ಮನದಲ್ಲಿ ಅಚ್ಚುಹೊಡೆದಂತಿರುತ್ತದೆ. ಹಿರಿಯರು ಹಾರೈಸಿ ಸಿಹಿ ಹಂಚುವ ಹಬ್ಬವಾಗಿದೆ. ರಾಮಾಯಣ ಮತ್ತು ಮಹಾಭಾರತವಲ್ಲದೆ ತ್ರೀಲೋಕದಲ್ಲಿಯೂ ದಸರಾ ವಿಜಯೋತ್ಸವಕ್ಕೆ ವಿಶಿಷ್ಟ ಪ್ರಾಮುಖ್ಯತೆ ಎತ್ತಿ ತೋರಿಸುತ್ತದೆ. ನಮ್ಮ ದೇಶದ ಹಬ್ಬಗಳ್ಳಲ್ಲಿಯೇ ಅತೀ ದೊಡ್ಡ ಹಬ್ಬ. ಭಾರತಾಂಬೆ, ನಾಡದೇವತೆಯೆಂಬ ಹೆಸರಲ್ಲಿ ದೇವಿಯನ್ನು ಆರಾಧಿಸುವ ಹಬ್ಬವು ಹೌದು.

ದೇಶದ ಬಂಧು ಬಗಿನಿಯರಿಗೆ ದಸರಾ ಹಬ್ಬದ ಶುಭಾಶಯಗಳನ್ನು ಕೋರುತ್ತಾ ವಿಜಯ ದಶಮಿಯ ಮಹತ್ವ ಸಾರುವ ಲೇಖನಕ್ಕೆ ಪೂರ್ಣವಿರಾಮ ನೀಡುತ್ತೆನೆ.


Leave a Reply

Back To Top