DelhiSavi, #ರಾಗಿಮಸಾಲಾಮುದ್ದೆ.

ಇತರೆ

DelhiSavi, #ರಾಗಿಮಸಾಲಾಮುದ್ದೆ.

 ‘ಒಂದು ರಾಗಿ ಮುದ್ದೆ ತಿಂದ್ ಎರಡ್ ಗುದ್ದು ಕೊಟ್ರೇ..ಸೀದಾ ಹಿಮಾಲಯದ ಪಾದಾ ಸೇರ್ತೀರಾ.. ಹುಸ್ಸಾರ್.’

ಅಯ್ಯೋ ಎದೇನಿದು ಸುಮ್ ಸುಮ್ಮನೆ ಜಗಳಾ ಕಾಯ್ತಿದ್ದೀನಿ ಅನ್ಕೊಂಡ್ರಾ..

ಛೇ..ಛೇ. ಇಲ್ಲಾರೀ.. ನಾವು ಕರ್ನಾಟಕದವ್ರು ಶಾಂತಿ ಪ್ರೀಯರು.

ಆದ್ರೆ ಇವತ್ತು ನಮ್ಮ ಮನೆಯವರಿಗೆ ಬಿಸಿ ರಾಗಿ ಮುದ್ದೆ ತಿನ್ನೋ ಆಸೆ ಆಯ್ತು.  ಬೆಳಿಗ್ಗೆ ಮೂಲಂಗಿ ಹುಳಿ ಮಾಡಿದ್ದೆ. ಅದರ ಪರಿಮಳಕ್ಕೆ ಮೂಗುದ್ದಾ ಮಾಡಿಕೊಂಡು ಬಂದ ಪಕ್ಕದ ಮನೆ ಸೋನಿಯಾ ಭಾಭೀ – ಓ ಹೋ ಸವಿತಾ.. ಏನಿವತ್ತು ಸ್ಪೇಶಲ್ಲು..ಮಸಾಲಾ ಡೋಸಾ? ಅಂತಾ ಕೇಳಿದಾಗ-

‘ಇಲ್ಲಾ…ರಾಗಿ ಮಸಾಲ ಮುದ್ದೆ” ಅಂತ ಹಿಟ್ಟನ್ನ ಮುಂದೆ ಹಿಡಿದೆ…

ಅದಕ್ಕೆ.. ‘ಅರೇ ಕಿತನಾ ಕಾಲಾ ಹೈ’ ಅಂತ ಮುಖಾ ಸಿಂಡಾರಿಸುತ್ತಾ ಹಿಟ್ಟಿನತ್ತ ನೋಡಿದಾಗ ನನಗೆ ನಶಶಿಖಾಂತ ಕೋಪಾ ಏರೇ ಬಿಟ್ಟಿತು.

ಭಾಭೀ.. ಏಕ್  ರಾಗಿ ಬಾಲ್ ಖಾಕರ್, ದೋ ಲಾತ್ ಮಾರಾ ತೊ ಸೀದಾ ಹಿಮಾಲಯ್ ಕೆ ಗೋದ ಮೆ ಘುಸ್ ಜಾವೋಗೆ.’ ಅಂತ ಮೇಲಿನ ಡೈಲಾಗ್ ಇಟ್ಟು ಬಾಣಾ ಬಿಟ್ಟೆ.

ಹಹಹ.. ಆಯಮ್ಮ ಭಯಪಡುತ್ತಾ.. ‘ ಓ..ನಾನು ಆಮೇಲೆ ಬರ್ತೀ ಸವಿತಾ’ ಅಂತ ಹೊರಡೋಕೆ ಶುರು ಮಾಡಿದಾಗ ನಾ ಬಿಡಬೇಕಲ್ಲಾ..

ಪ್ರೀತಿಯಿಂದ ಕೈ ಹಿಡಿದು –      ‘ಅರೇ ಸೋನಿಯ ಭಾಭೀ ಕೂತ್ಕೊಳ್ಳಿ.. ಕಪ್ಪೂ ಅಂತ ಮುಖ ತಿರಿವಿದ್ರೆ ಹ್ಯಾಗೆ? ನಮ್ಮ ರಾಗಿ ಮುದ್ದೆಯಲ್ಲಿದ್ದ ಶಕ್ತಿಯ ರಹಸ್ಯ ನಿಮಗೆ ಹೇಳ್ತೀನಿ, ಟೇಸ್ಟಿ ಮುದ್ದೆ ಉಂಡೆಗಳನ್ನ ಮಾಡಿ ತಿನ್ನಿಸ್ತೀನಿ.. ಬನ್ನಿ ಅಂತ ಕೂರಿಸಿ ನನ್ನ ಮುದ್ದೆ ಕಾರ್ಯಕ್ರಮಾನ ಆರಂಭಿಸಿದೆ.

ರಾಗಿ ಮುದ್ದೆ ನಮ್ಮ ಕರ್ನಾಟಕದ ಗ್ತ್ರಾಮೀಣ ಜನರ ಮುಖ್ಯ ಆಹಾರದಲ್ಲಿ ಒಂದು. ಈಗೀಗ ಮಿಲ್ಲೆಟ್ ನಿಂದ ಸಿಗುವ ಪೌಷ್ಟಿಕ ಬಳುವಳಿಯ ಬಗ್ಗೆ ಅರಿವು ಮೂಡಿದಾಗಿನಿಂದ ಪಟ್ಟಣದವರೂ ಇದನ್ನ ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡಿದ್ದಾರೆ.

ರಾಗಿಯನ್ನ ‘ಸೂಪರ್ ಸಿರಿಯಲ್’ ಅಂತಾನೂ ಕರೀತಾರೆ ಅಂದಾಗ ಆಕೆಯ ಮುಖ ಸ್ವಲ್ಪ ತಿಳಿಯಾಯ್ತು. ಆಛ್ಚಾ.. ಅಂತ ಸ್ವಲ್ಪ ಆಸಕ್ತಿಯನ್ನ ತೋರಿಸುತ್ತ ನನ್ನ ಪಕ್ಕದಲ್ಲೇ ಬಂದು ನಿಂತರು. ಗಾಡಿ ಲೈನಿಗೆ ಬಂತು ಅಂತ ಖುಶಿಯಾಗಿ ನನ್ನ ಮಾತು ಮುಂದುವರೆಸಿದೆ.

ಯಾರಾದ್ರೂ ನಮ್ಮ ಅಡುಗೇನಾ ನೋಡ್ತಾರೇಂದ್ರೆ ಭೋ ಕುಸೀ ಆಕೈತೆ ಅಲವ್ರಾ?

‘ಹಿಟ್ಟು ತಿಂದಿ ಗಟ್ಟಿಯಾಗು’ ಎಂಬ ಗಾದೆಮಾತು ರಾಗಿಯ ಮಹತ್ವವನ್ನು ಸಾರುತ್ತದೆ ಗೊತ್ತಾ ಅಂದಾಗ ಮತ್ತೊಮ್ಮೆ ದೊಡ್ಡದಾಗಿ- ಅಛ್ಛಾ ಅಂದ್ರು.

ಸರಿ…ನನ್ನ ಮಗಾ ಬರೋದ್ರಲ್ಲಿ ಮುದ್ದೆ ರೆಡಿಯಾಗಬೇಕಿತ್ತು. ಕೆಲ್ಸಾ ಮಾಡ್ತಾ ನನ್ನ ವರ್ಣನೆ ಮುಂದುವರೆಸಿದೆ.

ಡಯಾಬಿಟೀಸ್, ಇರುವವರು ರಾಗಿಮುದ್ದೆಯನ್ನು ತಿನ್ನುವುದು ಒಳ್ಳೆಯದು. ರಾಗಿ ಮುದ್ದೆಯು ಮೂಲತಃ ಕರ್ನಾಟಕದ ದಕ್ಷಿಣ ಬಾಗದಲ್ಲಿ ಹೆಚ್ಚಾಗಿ ಉಪಯೋಗಿಸುವರಾದರೂಈ ಆಹಾರವು ಸಕ್ಕರೆ ಕಾಯಿಲೆ ಇರುವವರಿಗೆ ಉತ್ತಮ ಆಹಾರವಾದದ್ದರಿಂದ ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಕನ್ನಡಿಗರು ರಾಗಿಮುದ್ದೆಯನ್ನು ಬಳಸುತ್ತಿದ್ದಾರೆ. ರಾಗಿಯನ್ನು ಬಹುರಾಷ್ಟ್ರೀಯ ಕಂಪೆನಿಗಳಲ್ಲೊಂದಾದ ‘ನೆಸ್ಲೆ ಕಂಪೆನಿ’ಯವರು, ವಿಮಾನಯಾನದಲ್ಲಿನ ಯಾತ್ರಿಕರಿಗಾಗಿ ಕುರು-ಕುರು ಎಂದು ಬಾಯಿಗೆ ಹಾಕಿದಕೂಡಲೇ ಕರಗುವ ಆತಿರುಚಿಕರ ‘ಬಿಸ್ಕುಟ್’ ಗಳನ್ನು ತಯಾರಿಸಿ ವಿತರಿಸುತ್ತಿದ್ದಾರೆ. ಇದರಲ್ಲಿ ಹೇರಳವಾಗಿ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು, ಅಮೀನೋ ಆಸಿಡ್ ಮತ್ತೆ ಖನಿಜಾಂಶವಿದೆ.

ಇದನ್ನು ಎಲ್ಲಾ ವಯಸ್ಸಿನ ಜನರು ಸೇವಿಸಬಹುದು. ನವಯೌವ್ವನ ಕಾಪಾಡುತ್ತದೆ ನಮ್ಮ ರಾಗಿ. ಇನ್ನ

‘ಮಸಾಲಾ ರಾಗಿ ಮುದ್ದೆ’ ಮಾಡೋ ವಿಧಾನ.

ಇದಕ್ಕೆ ಬೇಕಾಗುವ ಸಾಮಗ್ರಿಗಳು-

1- ಕಪ್ ರಾಗಿ ಹಿಟ್ಟು, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ-2, ಸಣ್ಣಗೆ ಹೆಚ್ಚಿದ ಈರುಳ್ಳಿ- 1

ತುಪ್ಪ- 2 ಚಮಚಾ, ಹೆಚ್ಚಿದ ಕೊತ್ತಂಬರಿ, ಕರಿಬೇವಿನ ಸೊಪ್ಪು, ಜೀರಿಗೆ- 1/2 ಚಮಚ, ಹಸಿ ಶುಂಠಿ- ಅರ್ಧಾ ಇಂಚು, ರುಚಿಗೆ ತಕ್ಕಷ್ಟು ಉಪ್ಪು. ನೀರು 2 ಕಪ್ಪು.

ಮಾಡುವ ವಿಧಾನ-

೧. ದಪ್ಪ ಬಾಣಲೆಯಲ್ಲಿ ತುಪ್ಪಾ ಹಾಕಿ ಬಿಸಿಯಾದ ಬಳಿಕ ಜೀರಿಗೆ ಹಾಕಿ.

೨- ಈರುಳ್ಳಿ, ಹಸಿಮೆಣಸಿನಕಾಯಿ, ಹೆಚ್ಚಿದ ಕೊತ್ತಂಬರಿ, ಕರಿಬೇವಿನ ಸೊಪ್ಪು, ಶುಂಠಿ ತುರಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.

೩. ಎರಡು ಕಪ್ಪು ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ.

೪. ಕೊತಕೊತಾಂತ ಮರುಳೋಕೆ ಶುರುವಾದ ಮೇಲೆ ನಿಧಾನಕೆ ರಾಗಿ ಹಿಟ್ಟು ಹಾಕಿ.

೫. ಹಿಟ್ಟು ಗಂಟು ಬರದ ಹಾಗೆ ಸಣ್ಣ ಉರಿಯ ಮೇಲೆ ಮರದ ಕೋಲಿನಿಂದ ಅಂದರೆ ನಾನು ಲಟ್ಟಣಿಗೆಗೆ ಎಣ್ಣೆ ಹಚ್ಚಿ ಗೋಟಾಯಿಸ್ತಾ ಇದ್ದೀನಿ.

೬. ಹಿಟ್ಟು ಬೇಯುತ್ತಾ ಬಂದಂತೆ ಘಮಘಮ ಸುವಾಸನೆ ಬರುತ್ತೆ..

೭. ಈಗ ಪಾತ್ರೆಯನ್ನು ಕೆಳಗಿಳಿಸಿ, ನಿಧಾನವಾಗಿ ಮರದ ಬೋಗುಣಿಗೋ, ಇಲ್ಲದಿದ್ದರೆ ಒಂದು ದೊಡ್ಡ ತಟ್ಟೆಯ ಮೇಲೋ, ಬೇಸಿದ ಹಿಟ್ಟನ್ನು ಸುರಿದರೆ ಆಯ್ತು. ಇಲ್ಲಿಗೆ ರಾಗಿ ಮುದ್ದೆ ತಯಾರಿ ಮುಗಿದೇ ಹೋಯ್ತು.

೮. ಒಂದು ಪಾತ್ರೆಯಲ್ಲಿ ಸ್ವಲ್ಪ ತಣ್ಣನೆಯ ನೀರು ತೊಗೊಂಡು, ಕೈಯನ್ನು ಆ ನೀರಿನಲ್ಲಿ ಅದ್ದಿ-ಅದ್ದಿ, ಅದೇ ಸಮಯದಲ್ಲಿ ಬೇಸಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಸೌಟಿನಿಂದ ತೆಗೆದುಕೊಂಡು, ದುಂಡನೆಯ ಮುದ್ದೆಯ ಆಕಾರದಲ್ಲಿ ತಯಾರಿಸಿ. ಇದಕ್ಕೆ ಮುದ್ದೆ ತೊಳೆಸುವ/ಕಟ್ಟುವ ಪ್ರಕ್ರಿಯೆ ಎನ್ನುತ್ತಾರೆ.

ಸೋನಿಯಾ ಭಾಭೀಗೂ ಮುದ್ದೆ ಕಟ್ಟೋಕೆ ಹೇಳಿದೆ.. ಆಮೇಲೆ ಒಂದು ಬೌಲಿಗೆ ಎರಡು ಪುಟ್ಟ ಮುದ್ದೆಗಳನ್ನು ಹಾಕಿ, ಅವುಗಳಿಗೆ ತುಪ್ಪದ ಕಿರೀಟ ಇಟ್ಟು, ಮೊದಲೇ ಮಾಡಿದ್ದ ಮೂಲಂಗಿಯ ಘಮಘಮಿಸುವ ಹುಳಿಯನ್ನ ಸುರಿದಾಗ ಭಾಭಿಯ ಮುಖದಲ್ಲಿ ಕಿರುನಗೆ ಕಾಣಿಸ್ತು.

ಇನ್ನ ಬಾಯಲ್ಲಿ ಇಟ್ಟಾಗ ಏನಾಗಿರ ಬೇಡಾಂತ ನೀವೇ ಊಹಿಸಿಕೊಳ್ಳಿ.

ಆಯ್ತಾ.. ನೋಡಿ..ಬಡಬಡಾಂತ ಭಾಭೀ ಜೊತೆ ಮಾತಾಡೋದ್ರಲ್ಲಿ ವಿಡಿಯೋ ಮಾಡ್ಲೇ ಇಲ್ಲಾ.. ಮುಂದಿನ ಬಾರಿ ಮಾಡಿದ್ರಾಯ್ತು.

ನನ್ನ ಅಡಿಗೆಯ ಪುರಾಣ ಓದಿದವರಿಗೆ  ಧನ್ಯವಾದಗಳು.

ಸ್ನೇಹಿತರೇ.. ಕೇವಲ ಇತರರ ಅಡುಗೆಗೆ ಹೆಸರಿಡದೇ, ಮೊದಲು ಮಾಡಿ ನೋಡೋದನ್ನ ಕಲೀಬೇಕು.. ನೀವೇನಂತೀರಾ ??


Leave a Reply

Back To Top