ಪುಸ್ತಕ ಪರಿಚಯ : ಶರಣ್ಯ

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ : ಶರಣ್ಯ

‘ಜನಮಿಡಿತ’ ಪತ್ರಿಕೆಯ ಅಂಕಣಕಾರ್ತಿ ಹಾಗೂ  ದಾವಣಗೆರೆ ಭಾಗದ ಪ್ರತಿನಿಧಿಯೂ ಆಗಿರುವ ಶ್ರೀಮತಿ ಸುನಿತಾ ಪ್ರಕಾಶ್ ಅವರು ಇತ್ತೀಚಿಗೆ ತಮ್ಮ ಎರಡನೆಯ ಕೃತಿ “ಶರಣ್ಯ” ಎಂಬ ಕಥಾ ಸಂಕಲನವನ್ನು ಬಿಡುಗಡೆ ಮಾಡಿದರು. ಈ ಕೃತಿಯು ಇದಾಗಲೇ ವಿದ್ಯಾಧರ ಕನ್ನಡ ಪ್ರತಿಷ್ಠಾದ ಹಸ್ತಪ್ರತಿ ಕಥಾ ಪ್ರಶಸ್ತಿಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಮೊದಲು ಅವರ “ಒಲವಿನ ದೀವಿಗೆ” ಕವನ ಸಂಕಲನವು ಜನಮನ್ನಣೆಗೆ ಪಾತ್ರವಾಗಿದ್ದು ಸುನಿತಾರವರು ತಮ್ಮದೇ ಆದ ಛಾಪನ್ನು ಸಾಹಿತ್ಯ ಕ್ಷೇತ್ರದಲ್ಲಿ ಮೂಡಿಸುವಂತೆ ಆ ಕೃತಿ ಮಾಡಿತ್ತು. ಇದೀಗ “ಶರಣ್ಯ” ಲೇಖಕಿಗೆ ಇನ್ನೊಂದು ಗರಿಯನ್ನು ತೊಡಿಸುವುದರಲ್ಲಿ ಎರಡು ಮಾತಿಲ್ಲ!

ಮಿತ್ರರೇ, ಕಥೆ ಎಂದಾಕ್ಷಣ ಅದಕ್ಕೊಂದು ವಸ್ತು – ವಿಷಯ ಬೇಕು. ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡ ನಂತರ ಕಥೆಗಾರ ಬಹಳ ಜಾಣ್ಮೆಯಿಂದ ಅದರ ಹಂದರವನ್ನು ಹಣೆಯಬೇಕು. ಕಥೆಯನ್ನು ಹಣೆಯುವಾಗ ಕಥೆಗಾರ ಎಲ್ಲಿಯೂ ಎಡವದೆಯೇ ತನ್ನ ಕಥೆ ಓದುಗರ ಹೃದಯ ತಟ್ಟುವಂತೆ ಬರೆಯಬೇಕು. ಜೊತೆಗೆ ಅದನ್ನು ಓದುತ್ತಿರುವಾಗ, ಅದು ತನ್ನ ಸುತ್ತಲೂ ನಡೆಯುತ್ತಿದೆಯೇನೋ… ತಾನೂ ಆ ಕಥೆಯ ಒಂದು ಭಾಗವಾಗಿದ್ದೇನೇನೋ ಎನ್ನಿಸುವಂತೆ ದೃಶ್ಯೀಕರಣವಾಗುತ್ತಾ ಸಾಗಬೇಕು. ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಕಥೆ ಕೊನೆಯಲ್ಲಿ ಉಳಿಸಬೇಕು. ಆಗ ಮಾತ್ರ,  ಕಥೆಯೊಂದು ಗಟ್ಟಿಯಾಗಿ ಓದುಗರ ನೆನಪಿನ ಬುತ್ತಿಯಲ್ಲಿ ಅನುಗಾಲ ನಿಲ್ಲುತ್ತದೆ.

ಶ್ರೀಮತಿ ಸುನಿತಾ ಪ್ರಕಾಶ್ ಅವರ ಕಥೆಗಳು ಇಂತಹುದೇ ಗಟ್ಟಿತನವನ್ನು ಮೈಗೂಡಿಸಿಕೊಂಡ ಕಥೆಗಳು. ಮಹಿಳಾ ಪರವಾಗಿ ಧ್ವನಿಯನ್ನು ಹೊಂದಿರುವ ಕಥೆಗಳನ್ನು ರಚಿಸುವಲ್ಲಿ ಕತೆಗಾರ್ತಿ ಸಿದ್ಧಹಸ್ತರು ಎಂಬುದಕ್ಕೆ “ಶರಣ್ಯ”ವೇ ಸಾಕ್ಷಿ. ಕಥೆಯ ವಸ್ತುವಿಗಾಗಿ ಕಥೆಗಾರ್ತಿ ಹೊರಗೆಲ್ಲೋ ಎಡತಾಕಲಿಲ್ಲ! ತನ್ನ ಸುತ್ತ-ಮುತ್ತಣ ಆಗುತ್ತಿರುವ ಪ್ರಸ್ತುತ ವಿದ್ಯಮಾನಗಳನ್ನೇ ಆಯ್ಕೆ ಮಾಡಿಕೊಂಡು ಅದಕ್ಕೊಂದಷ್ಟು ಕುಸುರಿ ಕೆಲಸವನ್ನು ಮಾಡಿ ಒಪ್ಪ ಓರಣವಾಗಿಸಿ ನಮ್ಮ ಮುಂದಿಟ್ಟಿದ್ದಾರೆ. ಕಥೆಯಲ್ಲಿರುವ ಕಲಾತ್ಮಕತೆಯು ಎಂತವರನ್ನೂ ತನ್ನತ್ತ ಆಕರ್ಷಿಸುವಂತೆ ಇದೆ.

ಮಿತ್ರರೇ, ಕಥಾ ಸಂಕಲನದಲ್ಲಿ ಇರುವ 16 ಕಥೆಗಳು ವಿಭಿನ್ನವಾಗಿದ್ದು, ಪ್ರತಿಯೊಂದು ಕಥೆಯೂ ಸಮಾಜದ ಒಂದೊಂದು ಕ್ಷೇತ್ರದ ಮೇಲೆ ಬೆಳಕು ಚೆಲ್ಲುವಂತೆ ಮಾಡುತ್ತದೆ. ಎಲ್ಲಕ್ಕಿಂತಲೂ ಆಪ್ತವಾಗುವುದು ಬರಹದ ರೀತಿ. ಸರಳ ಪದಗಳಲ್ಲಿ ಕಥೆಗಳನ್ನು ಬರೆದರೂ… ಅಲ್ಲಲ್ಲಿ ಅಲಂಕಾರಗಳನ್ನು ಬಳಸಿ ಕಥೆಗಳಿಗೆ ಇನ್ನಷ್ಟು ಮೆರುಗನ್ನು ನೀಡಿದ್ದಾರೆ. ಕಥಾ ನಾಯಕಿಯ ಜೊತೆಯಲ್ಲಿ ಆಕೆ ದಿನ ನಿತ್ಯ ಉಪಯೋಗಿಸುವ ವಸ್ತುಗಳು ಮಾತನಾಡುವ ಪರಿಯಂತೂ ಮನಸ್ಸಿಗೆ ಮುದವನ್ನು ನೀಡುತ್ತದೆ. ತನ್ನ ಆಭರಣಗಳ ಜೊತೆ ಮಾತನಾಡುವ ಹೆಣ್ಣು; ಆಸ್ಪತ್ರೆಯಲ್ಲಿನ ಸಲಕರಣೆಗಳೊಂದಿಗೆ ಮಾತನಾಡುವ ದಾದಿ, ಓದುಗರ ಮನಸ್ಸನ್ನು ಗೆಲ್ಲುತ್ತಾರೆ.

“ಹೆರಿಗೆ ಯಂತ್ರವೀಗ ಸ್ತಬ್ಧವಾಗಿದೆ. ಹರಿದ ಜೊಳಿಗೆಯೋ, ಗೋಣಿ ಚೀಲವೋ ಅದೆಲ್ಲವನ್ನೂ ತೆಗೆದು ಬಿಸಾಕಲಾಗಿದೆ. ಹೊಸದೇನಾದರೂ ಸಾಧಿಸು” – ಹೃದಯ ಮುಟ್ಟುವ ಈ ಮಾತು “ಅವಳು ಮತ್ತು ಹರಿದ ಜೋಳಿಗೆ” ಕಥೆಯಲ್ಲಿ ಬರುತ್ತದೆ. 25ರ ಆಶಾ ಗಂಡನ ಮನೆಯವರಿಗೆ ಬೇಕಿರುವ ವಾರಸುದಾರನ ತೆವಲಿಗೆ ಬಲಿಯಾಗಿ… ಇದೀಗ ಏಳನೆಯ ಗರ್ಭಧರಿಸಿದ್ದಾಳೆ. ಹೆರಿಗೆಯ ನಂತರ ಆದ ತೊಂದರೆಯಿಂದ ಅವಳ ಗರ್ಭಕೋಶವನ್ನೇ ತೆಗೆಯಬೇಕಾದ ಅನಿವಾರ್ಯತೆ ಎದುರಿದೆ. ಆದರೆ, ಗಂಡನ ಮನೆಯವರು ವಾರಸುದಾರನ ಆಸೆಯಿಂದ ಒಪ್ಪಿಗೆ ನೀಡಲೊಲ್ಲರು!  ಕೊನೆಗೂ ತಂದೆ-ತಾಯಿಯ ಒಪ್ಪಿಗೆ ಪಡೆದು ಗರ್ಭಕೋಶ ತೆಗೆದು ಡಾಕ್ಟರ್, ಆಶಾಳಿಗೆ ಹೇಳುವ ಸಾಂತ್ವನದ ಮಾತುಗಳು ನೊಂದ ಎಷ್ಟೋ ಹೆಣ್ಣು ಮಕ್ಕಳಿಗೆ ಧೈರ್ಯದ ನುಡಿಯಂತೆ ಇದೆ.

ಇನ್ನು ಇತ್ತೀಚೆಗೆ ತೀರ ಸಾಮಾನ್ಯವಾದ ಸಾಮಾಜಿಕ ಜಾಲತಾಣದ ಸ್ನೇಹ; ಅದರಿಂದ ವಂಚಿತರಾಗಿ ಹಣ ಕಳೆದುಕೊಂಡು ದುಃಖಿಸುವ ಕಥೆ “ನಂಬಿಕೆ ದ್ರೋಹ” ಎಂಬ ಕಥೆಯಲ್ಲಿ ಕಾಣಬರುತ್ತದೆ. ಸ್ನೇಹದ ಮುಖವಾಡ ಧರಿಸಿ ಹೊಂಚು ಹಾಕಿ ಸಂಚು ಮಾಡಿ ಹಣವನ್ನು ದೋಚುವ ಮಂದಿಯ ಬಗ್ಗೆ ಎಚ್ಚರಿಸುವ ಈ ಕಥೆ, ಇತ್ತೀಚಿನ ದಿನಗಳಲ್ಲಿ ನಾವು ಆಗಾಗ ಅಲ್ಲಲ್ಲಿ ಕೇಳುವಂತಹದ್ದೆ.  ಕತೆಗಾರ್ತಿ ಇಂತಹ ವಂಚಕರ ಜಾಲದಿಂದ ದೂರವಿರುವಂತೆ ಮುಗ್ಧ ಮನಗಳಿಗೆ ಈ ಕಥೆಯ ಮೂಲಕ ಸಂದೇಶ ನೀಡಿದ್ದಾರೆ. ಹೀಗೆ ಎಲ್ಲಾ ಕಥೆಗಳನ್ನು ನಾನು ಹೇಳಿದರೆ ನೀವು ಓದಿ ಆನಂದಿಸುವುದು ಯಾವಾಗ?!  ಹಾಗಾಗಿ “ಶರಣ್ಯ”ದಲ್ಲಿರುವ ಉಳಿದ ಕಥೆಗಳನ್ನು ನೀವೇ ಓದುವ ಮೂಲಕ ಆನಂದವನ್ನು ಪಡೆಯಿರಿ.

ಮಿತ್ರರೇ, ಒಟ್ಟಿನಲ್ಲಿ ಇಲ್ಲಿರುವಂತಹ ಕಥೆಗಳೆಲ್ಲವೂ ಒಂದಿಲ್ಲೊಂದು ಸಂದೇಶವನ್ನು ಹೊತ್ತು, ಮಹಿಳೆಯ ಸುತ್ತ ಹಣೆದಿರುವ ಸುಂದರ ಕಥೆಗಳು. ಹೆಣ್ಣು ತನ್ನ ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಎದುರಿಸುವ ತೊಂದರೆ ಸವಾಲುಗಳ ಜೊತೆಗೆ… ಅದಕ್ಕೆ ದಿಟ್ಟವಾಗಿ ಪರಿಹಾರ ಕಂಡುಕೊಳ್ಳುವ ಮೂಲಕ ಎಲ್ಲವನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಹೆಣ್ಣಿಗಿದೆ ಎಂಬ ಸಂದೇಶವನ್ನು ನೀಡುವುದಂತೂ ಸತ್ಯ.


ಸುಮಾ ಕಿರಣ್

One thought on “ಪುಸ್ತಕ ಪರಿಚಯ : ಶರಣ್ಯ

Leave a Reply

Back To Top