ಪತ್ನಿಯ ದುಗುಡ
ಮಾಲತಿ ಹೆಗಡೆ
ಕತ್ತು ಚಾಚಿಕಣ್ಣು ಹಾಯುವವರೆಗೂ ನೋಡಿದರೂ ನೀ ಬರಲಿಲ್ಲ
ಹೊರೆಗೆಲಸಗಳು ಮುಗಿದು ಕತ್ತಲಾವರಿಸಿದರೂ ನೀ ಬರಲಿಲ್ಲ
ಸಂಜೆಗೊಂದಿಷ್ಟು ದೂರದ ಸಮುದ್ರತೀರದಲಿ ವಿಹರಿಸಬೇಕಿತ್ತು
ಆಟ ಪಾಟಗಳೆಲ್ಲ ಮುಗಿಸಿ ಮಕ್ಕಳು ಮಲಗಿದರೂ ನೀ ಬರಲಿಲ್ಲ
ಕಂಬನಿದುಂಬಿ ನಾಳೆಯಡುಗೆಗೆ ಖಾಲಿ ಡಬ್ಬಿಗಳ ತಡಕಾಡುತ್ತಿರುವೆ
ಅಳಿದುಳಿದಿದ್ದರಲ್ಲೇ ಮಾಡಿದ ಅಡುಗೆ ಆರಿದರೂ ನೀ ಬರಲಿಲ್ಲ
ಸಾಲ ಕೊಟ್ಟವರಿಗೆ ಅವಮಾನ ನುಂಗುತ್ತ ತಾರಮ್ಮಯ್ಯ ಆಡಿಸಿದೆ
ನೀಲ ನಭದಿ ಚಂದಿರ ನನ್ನನ್ನು ಅಣಕಿಸಿದರೂ ನೀ ಬರಲಿಲ್ಲ
ಮದಿರೆಗೆ ಮರುಳಾದವನಿಗೆ ಮಡದಿಯ ನೆನಪು ಕಿಸೆ ಬರಿದಾದಾಗ
ಮೈಮುದುಡಿ, ಕಣ್ಣಿಂಗಿ, ಮನಸು ನುಗ್ಗಾದರೂ ನೀ ಬರಲಿಲ್ಲ
************