ವ್ಯಕ್ತಿತ್ವ ವಿಕಸನ -ರೂಪ ಮಂಜುನಾಥ ಲೇಖನ

ಲೇಖನ ಸಂಗಾತಿ

ವ್ಯಕ್ತಿತ್ವ ವಿಕಸನ

ರೂಪ ಮಂಜುನಾಥ ಲೇಖನ

ವ್ಯಕ್ತಿತ್ವ ವಿಕಸನ

    ನನ್ನ ಅನುಭವದಲ್ಲಿ ಹೇಳುವುದಾದರೆ,ಈ ವ್ಯಕ್ತಿತ್ವ ವಿಕಾಸನವೆನ್ನುವುದು ಕೇವಲ ಕಲಿಕೆಯಿಂದ ಬರುವಂಥದ್ದಲ್ಲ.”ವಿಕಸನ”,ಎನ್ನುವ ಮಾತಿಗೆ ಅರ್ಥವೇನೆಂದರೆ,”ಹಂತಹಂತವಾಗಿ ತೆರೆದುಕೊಳ್ಳುವುದು”, ಎಂದಾಗುತ್ತದೆ.ಈ ವಿಷಯ ಚೆನ್ನಾಗಿ ಅರ್ಥವಾಗಬೇಕೆಂದರೆ, ಒಂದು ಹೂವನ್ನು ಗಮನಿಸಿ.ಮೊದಲಿಗೆ ಮೊಗ್ಗಾಗಿ ಇರುವುದು,ದಳಗಳನ್ನೇನಾದರೂ ಬಲವಂತವಾಗಿ ಬಿಡಿಸಿದರೆ, ಹಸಿಹಸಿಯಾದ ಅಪಕ್ವತೆಯ ಗಂಧ ಬೀರುತ್ತದೆ. ಅದೇ ಸೂರ್ಯನ ಕಿರಣಗಳ ಕಾಂತಿ ಮತ್ತು ಶಾಖದ ಸ್ಪರ್ಶದ ಹಿತಾನುಭವದಿಂದ ಹಂತಹಂತವಾಗಿ ಅರಳಿದೆಯಾದರೆ,ಒಂದೇ ಸಮನಾಗಿ ಸುಂದರವಾಗಿ ಅರಳಿ, ಸುಗಂಧವ ಪಸರಿಸುತ್ತಾ ಎಲ್ಲರಿಗೂ ಆನಂದಾನುಭವ ನೀಡಿ ತೃಪ್ತಿ ಪಡಿಸುತ್ತದೆ.

ಅಂದರೆ, ಈ ವ್ಯಕ್ತಿತ್ವವೆನ್ನುವುದು ಹುಟ್ಟಿದೊಡನೆಯೇ ಜೊತೆಯಾಗಿ ಬರುವುದೇನಲ್ಲ.ಕೆಲವು ಸಂದರ್ಭಗಳಲ್ಲಿ ಸಮಾಜದ ಸ್ಥಿತಿ ಗತಿಗಳನ್ನು  ಪ್ರಯತ್ನಪೂರ್ವಕವಾಗಿ ಅರ್ಥಮಾಡಿಕೊಂಡು ಜೀವನದಲ್ಲಿ ಕೆಲವು ಸದ್ವಿಚಾರಗಳನ್ನ ನಮ್ಮ ಆತ್ಮೋನ್ನತಿಗೆ,ಶ್ರೇಯಸ್ಸಿಗೆ,ಯಶಸ್ಸಿಗೆ ಬೇಕಾದ ರೀತಿಯಲ್ಲಿ ಅನುಷ್ಠಾನಕ್ಕೆ ತಂದುಕೊಳ್ಳಬೇಕಾಗುತ್ತದೆ.ಬದಲಾವಣೆ ಬಯಸದೆ ಕೇವಲ ಶಾಲಾಕಾಲೇಜುಗಳಲ್ಲಿ ಕಲಿತ  ವಿದ್ಯೆಯೊಂದಿದ್ದ ಮಾತ್ರಕ್ಕೆ ಎಲ್ಲ ಸಮಯಗಳಲ್ಲೂ ಆ ವಿದ್ಯೆ ಕೆಲಸಕ್ಕೆ ಬಾರದು.ಅಪರಿಪಕ್ವತೆಯಿಂದ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಪ್ರಯೋಜನಕ್ಕಿಂತಲೂ ಪ್ರಮಾದವನ್ನೇ ಸೃಷ್ಟಿಸುತ್ತವೆ.ನನ್ನ ಭಾವನೆಯಲ್ಲಿ ವಿದ್ಯೆಯ ಜೊತೆಗೆ ವಿನಯವೂ ಇದ್ದಾಗ ಮಾತ್ರ ವ್ಯಕ್ತಿತ್ವಕ್ಕೆ ಭೂಷಣ.ಭೂಷಣದ ಜೊತೆಗೆ ವ್ಯಕ್ತಿತ್ವದ ವಿಕಸನವೂ ಆಗಬೇಕಾದರೆ,

ಕೆಲವ ವಿಷಯಗಳನ್ನು ದಿನನಿತ್ಯ ಜೀವನದಲ್ಲಿ ಗಮನಿಸುತ್ತಾ, ದೃಢವಾಗಿ ಅನುಷ್ಠಾನಕ್ಕೆ ತರಬೇಕಾಗುತ್ತದೆ.        

ವ್ಯಕ್ತಿತ್ವ ವಿಕಸನದಲ್ಲಿ ಮುಖ್ಯವಾಗಿ ಬೇಕಾಗಿರುವುದು,ದೇಹ ಹಾಗೂ ಮನಸ್ಸುಗಳ ಸ್ವಾಸ್ಥ್ಯ,ವಿಷಯ ಗ್ರಹಿಕೆ,ಸೂಕ್ತವಾಗಿ ಪ್ರತಿಕ್ರಯಿಸುವ ಪ್ರಜ್ಞೆ,ಆವೇಶದಲ್ಲಿ ಸಮತೋಲನ, ಹಾಗೂ ಸಮಯದ ಸದುಪಯೋಗ.ಮುಖ್ಯವಾದ ಇವೈದು ವಿಷಯಗಳನ್ನ ಯಾರು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವರೋ, ಹಾಗೆಂದು ಈ ಎಲ್ಲ ವಿಷಯಗಳಲ್ಲಿ ಸಂಪೂರ್ಣ ಹಿಡಿತ ಯಾರಿಗೂ ಒಮ್ಮೆಗೇ ಸಿದ್ದಿಸುವುದೂ ಸಾಧ್ಯವಿಲ್ಲ.ಜೀವನಾನುಭವಗಳು,ಪುಸ್ತಕಗಳು,ಸದ್ಗುರುಗಳ ಸಾಂಗತ್ಯವಲ್ಲದೆ ಕಲಿಯುವ ಯಾವ ಮಾರ್ಗವಿದ್ದರೂ, ಗುರುತಿಸಿ, ಶ್ರದ್ದೆಯಿಟ್ಟು ನಮ್ಮ ಅರಿವನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

           ಬಹಳ ಮುಖ್ಯವಾಗಿ ಹೇಳುವುದಾದರೆ,ನಮ್ಮ ವ್ಯಕ್ತಿತ್ವ ವಿಕಾಸನವಾಗಬೇಕಾದರೂ, ನಾವು ಮತ್ತೊಬ್ಬರ ವ್ಯಕ್ತಿತ್ವವನ್ನು ವಿಕಸಿಸುವ ಪ್ರಯತ್ನದಲ್ಲಿದ್ದೆವಾದರೂ, ನಮಗೆ ಮೊದಲಿಗೆ ಬೇಕಿರುವುದು ಆರೋಗ್ಯವಾದ ಶರೀರ.ದೇಹ ರೋಗಗಳ ಗೂಡಾದರೆ,ಏನು ತಾನೆ ಸಾಧಿಸಲು ಸಾಧ್ಯ?ಹಾಗೆಂದ ಮಾತ್ರಕ್ಕೆ ಏನೇ ದೇಹ ಸಹಕರಿಸದಿದ್ದರೂ ಧೃಢವಾದ ಮನಸ್ಸಿನಿಂದ ಸಾಧಿಸುವ ಕಾರ್ಯ ಸರ್ ಸ್ಟೀಫನ್ ಹಾಕಿನ್ಸ್ ರಂಥ ಅತೀ ವಿರಳ ಮಹಾತ್ಮರಿಂದ ಮಾತ್ರ ಸಾಧ್ಯ.ನಮ್ಮ ಮುಖದಲ್ಲಿ ಕಾಂತಿಯಿದ್ದರೆ, ದೇಡ ಸಧೃಡವಾಗಿದ್ದರೆ ನಮ್ಮ ಮಾತಿನಲ್ಲಿ ಕಿಮ್ಮತ್ತಿರುತ್ತದೆ. “ ಅಯ್ಯೋ, ಇವ್ರನ್ನ ನೋಡಿದರೇನೇ ಒಳ್ಳೆ ತುಸುಕುಲಾಂಟಿ ಥರ ಇದ್ದಾರೆ, ಇವ್ರೇನು ಇನ್ನೊಬ್ಬರನ್ನ ಇನ್‌ಸ್‌ಪೈರ್ ಮಾಡ್ತರೇ?”ಎಂದು ಮೂಗು ಮುರಿಯದೇ ಇರುವರೇ? ಹೌದ್ರೀ.ಇದು ಪ್ರೆಸೆಂಟೇಷನ್ ಯುಗ. ನಮ್ಮನ್ನ ನಾವು ಹೇಗೆ ಪ್ರೆಸೆಂಟ್ ಮಾಡಿಕೊಳ್ತೀವೋ, ಆಗಲೇ ಮುಕ್ಕಾಲು ಭಾಗ ಜನರು ಇನ್ಸ್‌ಪೈರ್ ಆಗಿಹೋಗ್ತಾರೆ.ಫಸ್ಟ್ ಇಂಪ್ರೆಸ್ಸಿಂಗ್ ಈಸ್ ಮೋಸ್ಟ್ ಇಂಪಾರ್ಟೆಂಟ್.ನಮ್ಮ ವಯಸ್ಸಿಗೆ ಬೇಕಾದ ವ್ಯಾಯಾಮ ದಿನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು,ಕಟುಮಸ್ತಾಗಿದ್ದರೆ ಒಂದು ಗಂಟೆಯಾದರೂ ಸತತವಾಗಿ ನಿಂತು ಸಭೆಯಲ್ಲಿ ಜನರನ್ನು ಉತ್ತೇಜಿಸುವಂಥ ಮಾತುಗಳನ್ನಾಡಲು ಸಾಧ್ಯ. ಬದಲಿಗೆ ನಾವೇ, ಸಾವಾರಿಸಿಕೊಂಡು ಆಗಾಗ ನೀರು ಕುಡಿದರೆ,ಹಾಸ್ಯಾಸ್ಪದವಾಗುತ್ತೇವೆ.ಆದರಿಂದಲೇ ಆರೋಗ್ಯವೆನ್ನುವುದು ತ್ವರಿತದಲ್ಲಿ ಪಡೆದುಕೊಳ್ಳುವ ಸಾಧನವಲ್ಲ. ಅದಕ್ಕೆ ಎಲ್ಲಾ ಕಾಲದಲ್ಲೂ ಸತತವಾಗಿ ಪೋಷಣೆಬೇಕು.ಆಹಾರ ಸೇವಿಸುವುದರಲ್ಲೂ ಬಹಳ ಗಮನ ಬೇಕಾಗುತ್ತದೆ. ಏನು ಸಿಕ್ಕರದು, ಎಲ್ಲಿ ಸಿಕ್ಕರಲ್ಲಿ ಹಿಡಿತವಿಲ್ಲದೆ ತಿನ್ನುವ ಅಭ್ಯಾಸ ಕೂಡದು.ತಿಂದಿದ್ದನ್ನು ಅರಗಿಸುವ ಅಭ್ಯಾಸ ಇಟ್ಟುಕೊಳ್ಳಲೇಬೇಕು.ಆದಷ್ಟೂ ಸೂರ್ಯಕಿರಣಗಳಿಂದ ದೊರಕುವ ವಿಟಮಿನ್ ಡಿ, ಶುದ್ದ ಗಾಳಿ ಸೇವನೆ, ಪ್ರಾಣಾಯಾಮ ಹಾಗೂ ಧ್ಯಾನಗಳನ್ನು ಮಾಡುತ್ತಾ ದೇಹ ಹಾಗೂ ಮನಸುಗಳ ಸ್ವಾಸ್ಥತೆಯನ್ನು ಕಾಪಾಡಿಕೊಳ್ಳಬೇಕು.ಹಣ್ಣುತರಕಾರಿಗಳನ್ನು ಆದಷ್ಟೂ ಸಂಸ್ಕರಿಸದೇ ನೈಸರ್ಗಿಕವಾಗಿ ಅವು ದೊರಕಿದಂತೆಯೇ ತಿನ್ನುವ ಅಭ್ಯಾಸವಿದ್ದರೆ, ರೋಗಗಳಿಂದ ಬಲುದೂರ ಉಳಿಯುಲು ಸಾಧ್ಯ.ರೋಗನಿರೋಧಕ ಶಕ್ತಿ ನಮ್ಮಲ್ಲಿ ಬೆಳೆಯುತ್ತದೆ. ಸಮತೋಲನವಾದ ಆಹಾರ ಬಹು ಮುಖ್ಯ. ಕನಿಷ್ಟ ಪ್ರತಿದಿನ ಒಂದು ಗಂಟೆಯಾದರೂ ದೇಹವನ್ನು ದಂಡಿಸಿ ಬೆವರಬೇಕು. ಎಸಿ ಕಾರುಗಳಲ್ಲಿ ತಿರುಗುತ್ತಾ, ಎಸಿ ಛೇಂಬರುಗಳಲ್ಲಿ ಕೆಲಸ ಮಾಡುತ್ತಾ, ಕೆಲಸಮಯವೂ ಬಿಸಿಲನ್ನು ತಡೆಯದೆ ಹೋದರೆ,ಹಲವಾರು ಖಾಯಿಲೆಗಳನ್ನು ಹೊಂದಿ ನಿತ್ರಾಣನಾಗಿದ್ದರೆ,ಆ ವ್ಯಕ್ತಿ ಎಷ್ಟು ದೊಡ್ಡ ಪದವಿಯನ್ನು ಜೀವನದಲ್ಲಿ ಗಳಿಸಿದ್ದರೂ, ಎಷ್ಟು ಕೋಟಿ ಸಂಪಾದನೆ ಮಾಡಿದ್ದರೂ ಇನ್ನೊಬ್ಬರಿಗೆ ಮಾದರಿ ಆಗಲಾರ. ಹಾಗಿರುವವನು ಯಾರ ಮೇಲೂ ಪ್ರಭಾವ ಬೀರಲಾರ.ಆರೋಗ್ಯದ ದೇಹದೊಂದಿಗೆ ಮುಖದಲ್ಲಿ ಕಾಂತಿ,ವಿಶ್ವಾಸ, ಲವಲವಿಕೆ ಇದ್ದರೆ,ಯಾರಾನ್ನಾದರೂ ಆಯಸ್ಕಾಂತದಂತೆ ಸೆಳೆಯಬಹುದು.

     ಇನ್ನು ಯಾರೊಡನೆ ಮಾತನಾಡಲು  ನಿಂತಾಗ ನಮ್ಮ ಮಾತುಗಳು ಸರಳವಾಗಿಯೂ ,ಮಧುರವಾಗಿಯೂ,ಆಕರ್ಷಕವಾಗಿರಬೇಕು.ಹಾಗೇ ಯಾರನ್ನಾಗಲೀ,ನಿಂದಿಸದೆ, ನೋಯಿಸದೆ, ಉದ್ರೇಕಿಸದೇ,ವಿಷಯವನ್ನು ಮನವರಿಕೆ ಮಾಡುವಂತಿರಬೇಕು.ಮತ್ತು ನಾವು ಯಾವ ವಿಷಯ ಮಾತನಾಡಲು ನಿಂತಿರುತ್ತೇವೆಯೋ, ಆ ವಿಷಯದ ಬಗ್ಗೆ ಸಾಕಷ್ಟು ಕೂಲಂಕುಷವಾದ ವಿವರ ತಿಳಿದಿರಬೇಕು. ಅಷ್ಟೇ ಆತ್ಮವಿಶ್ವಾಸದಿಂದ ಮಾತನಾಡಬೇಕು.ಹಾಗೆೇ ವಿಪರೀತವಾದ ಉತ್ಸಾಹದಿಂದ,ಆವೇಶದಿಂದ ಮಾತನಾಡುವುದೂ ಕೂಡದು. ಸ್ಥಿತಪ್ರಜ್ಞತೆ ಕಾಪಾಡಿಕೊಳ್ಳುವುದು ಬಹಳ ಅಗತ್ಯ. ಸುತ್ತಿ ಬಳಸಿ ಮಾತನಾಡದೇ, ಸಭೆಗೆ ನೇರವಾಗಿ ವಿಷಯವನ್ನು ಅರಿಕೆ ಮಾಡಿ ಸಮಯಕ್ಕೆ ನ್ಯಾಯ ಒದಗಿಸುವ ಛಾತಿ ಇರಬೇಕಾಗುತ್ತದೆ. ಪೂರ್ವಾಗ್ರಹ ಪೀಡಿತರಾಗದೇ,ಬಲಹೀನರಾಗದೇ, ಆಶಾವಾದಿಗಳಾಗಿ,ವಿಷಯವನ್ನು ಮಂಡನೆ ಮಾಡಬೇಕು.ಕೋಟಿ ಕೊಟ್ಟರೂ ಕೂಡಾ ಕಳೆದ ಒಂದು ಕ್ಷಣವನ್ನೂ ಹಿಂದಕ್ಕೆ ತರಲಾಗುವುದಿಲ್ಲ. ಅಂಥ ಅತ್ಯಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ,ಸಾರ್ಥಕ ಪಡಿಸಿಕೊಳ್ಳಬೇಕು.ಸಾಮಾನ್ಯರಿಗೂ ಸಾಧಕರಿಗೂ ಭಗವಂತ ನೀಡಿರುವುದು,ದಿನಕ್ಕೆ ಇಪ್ಪತ್ತು ನಾಲ್ಕು ಗಂಟೆಗಳೇ.ಆದರೆ,ಅದರ ಸದ್ಬಳಕೆ ನಮಗೆ ಬಿಟ್ಟ ವಿಷಯ.

       ಹಾಗೇ, ಯಾವ ವ್ಯಕ್ತಿಯು ಬಲು ಧನಿಕನಾಗಿಯೋ,ಉನ್ನತ ಹುದ್ದೆಯ ಸಂಪಾದಿಸಿದವರೋ ಆಗಿದ್ದರೆ, ಅಂಥವರ ಸಾಂಗತ್ಯದಿಂದ ಮಾತ್ರಕ್ಕೆ ವ್ಯಕ್ತಿತ್ವ ವಿಕಸನ ಆಗದು.ಯಾವ ವ್ಯಕ್ತಿಯ ಸಂಪರ್ಕ, ಹಾಗೂ ಮಾರ್ಗದರ್ಶನದಲ್ಲಿ ನಮಗೆ ಮನಃಶಾಂತಿ ದೊರೆಯುವುದೋ,ಜೀವಿಸಲು ಸುಲಭ ಮಾರ್ಗಗಳು ಕಾಣುವುದೋ,ಯಾವ ಕ್ಲಿಷ್ಟಕರವಾದ ವಿಚಾರಕ್ಕೂ ಸ್ಪಷ್ಟವಾದ ಉತ್ತರ ದೊರಕುವುದೋ,ನಮಗೆ ಒಂದು ದಿಕ್ಕುತೋರುವ ಹಿರಿಯನಿದ್ದಾನೆ(ಕಿರಿಯರಾದರೂ, ಅನುಭವದಲ್ಲಿ ಹಿರಿತನವಿದ್ದರೆ, ತಪ್ಪಿಲ್ಲ)ಎನ್ನುವ ಭರವಸೆಯ ಭಾವನೆ ಮೂಡುವುದೋ, ಯಾರ ಸಹವಾಸದಲ್ಲಿ ನಮ್ಮ ವ್ಯಕ್ತಿತ್ವ ಊರ್ಧ್ವಮುಖಿಯಾಗಿ ತೆರೆದುಕೊಳ್ಳುತ್ತದೆ ಎನಿಸಿವುದೋ,ಅಂಥವರಿಂದ ಮಾತ್ರವೇ ನಮ್ಮಲ್ಲಿ ಸಕಾರಾತ್ಮಕ ಬದಲಾವಣೆಗಳಾಗಲು ಸಾಧ್ಯ.

                       ವ್ಯಕ್ತಿತ್ವ ವಿಕಸನವೆನ್ನುವುದು ಒಬ್ಬ ವ್ಯಕ್ತಿಯ ಹಾರ್ಡ್ವೇರ್ ಮತ್ತು ಸಾಫ್‌ಟ್ವೇರ್ಗಳ ಸಮ್ಮಿಲನದಿಂದಾಗುವಂಥದ್ದು.ಗಳಿಸಿದ ವಿದ್ಯೆ,ಪದವಿಗಳು ಅವನ ಹಾರ್ಡ್‌ವೇರಾದರೆ, ಲೋಕಜ್ಞಾನ,ಚತುರ ನಿರ್ಧಾರಗಳು, ಸಕಾಲದಲ್ಲಿ ತೆಗೆದುಕೊಳ್ಳುವ ತೀರ್ಮಾನ,ಸಮಾಜದ ಬಗೆಗಿನ ಅಂತಃಕರಣ ಇವುಗಳು ಅವನ ಸಾಫ್‌ಟ್‌ವೇರ್.ವ್ಯಕ್ತಿಯು ಮುಖ್ಯವಾಗಿ ಐದು ರೀತಿಗಳಲ್ಲಿ ಆಲೋಚಿಸುತ್ತಾನೆ.ಒಂದು, ಸಕಾರಾತ್ಮಕ ಚಿಂತನೆ, ಎರಡು, ನಕಾರಾತ್ಮಕ ಚಿಂತನೆ, ಮೂರು,ವಿಷಕಾರೀ ಚಿಂತನೆ, ನಾಲ್ಕನೆಯದು,ವ್ಯರ್ಥ ಚಿಂತನೆ, ಐದನೆಯದು, ಕ್ರಿಯಾತ್ಮಕ ಚಿಂತನೆ.ವ್ಯಕ್ತಿತ್ವ ವಿಕಸನಕ್ಕೆ ಮೊದಲನೆಯ ಮತ್ತು ಕೊನೆಯ ಚಿಂತನೆ ಬಹಳ ಸಹಾಯಕಾರಿಯಾಗುತ್ತವೆ.

ಬೈಬಲ್ ನಲ್ಲಿ ಹೇಳಿರುವಂತೆ, “As a man think, so he is”, ಅನ್ನುವಂತೆ,ನಮ್ಮ ಆಲೋಚನೆಗಳು, ನಮ್ಮ ಉದ್ದೇಶಗಳಲ್ಲಿ ಸ್ಪಷ್ಟತೆ ಇರಬೇಕು.ಜೊತೆಗೆ, “where the attention goes, there the energy flows”ಎನ್ನುವಂತೆ,ನಮ್ಮ ಶಕ್ತಿ ನಮ್ಮ ಗಮನದತ್ತಲೇ ಹರಿದು, ಗುರಿ ಮುಟ್ಟಲು ನೆರವಾಗುತ್ತದೆ.

             ಒಳ್ಳೆಯ ಸಂಸ್ಕಾರಗಳು, ಆಲೋಚನೆಗಳನ್ನು ಹೊಂದಿ, ಸನ್ಮಾರ್ಗದತ್ತ ನಡೆದು ಜೀವನದ ಉನ್ನತಿಗಾಗಿ ಉತ್ತಮ ಗುಣಗಳನ್ನು ಅನುಷ್ಠಾನಕ್ಕೆ ತಂದುಕೊಳ್ಳಬೇಕು.ಸುಖಕ್ಕೆ ಹಿಗ್ಗದೆ ಕಷ್ಟಕ್ಕೆ ಕುಗ್ಗದೆ,ಎಸೆದರೆ ನೆಲಕ್ಕಂಟುವ ಮಣ್ಣಿನ ಮುದ್ದೆಯಾಗದೆ, ಪುಟಿದೇಳುವ ಚೆಂಡಿನಂತೆ ನಾವಿರಬೇಕು.ಒಂದು ವಿಷಯದಲ್ಲಿ ಸೋಲುಂಡರೆ ಧೃತಿಗೆಟ್ಟು ಕುಸಿಯದೆ,ಬೂದಿಯಿಂದ ಎದ್ದುಬರುವ ಫೀನಿಕ್ಸ್ ಪಕ್ಷಿಯಂತೆ ಮತ್ತೆ ಗರಿಗೆದರಿ ಹಾರುವುದನ್ನು ಕಲಿಯಬೇಕು.ಸಾಧಕರ ಜೀವನ“ Bed of roses”, ಆಗಿರುವುದಿಲ್ಲ. ಅವರ ಸತತ ಹೋರಾಟ,ಸೋಲೊಪ್ಪಿಕೊಳ್ಳದೆ ಮರುಯತ್ನ ಮಾಡುವ ಅಚಲ ನಿರ್ಧಾರ, ಸತತ ಪರಿಶ್ರಮ,ತಾಳ್ಮೆ,ವಿವೇಚನೆ, ಅವರನ್ನು ಎತ್ತರಕ್ಕೆ ನಿಲ್ಲಿಸುತ್ತದೆ.ಸಫಲರನ್ನಾಗಿ ಮಾಡುತ್ತದೆ.

   ನಮ್ಮೆಲ್ಲರ ಅಭಿಮಾನದ ಹೆಮ್ಮೆಯ ಸಾಧಕರುಗಳಾದ ವಿಜ್ಞಾನಿ ಹಾಗೂ ಭಾರತದ ಮಾಜಿ ಅಧ್ಯಕ್ಷರಾದ,  ಅಬ್ದುಲ್ ಕಲಾಂರವರಾಗಲೀ,ನಮ್ಮ ಈಗಿನ ಜನಪರನಾಯಕ ಪ್ರಧಾವ ಮಂತ್ರಿ ನರೇಂದ್ರ ಮೋದಿಯವರಾಗಲೀ,ವರನಟ ಡಾ॥ ರಾಜ್‌ಕುಮಾರ್ ರವರಾಗಲೀ,ರಿಲಯನ್ಸ್ ಕಂಪನಿಯ ಯಶಸ್ವೀ ಪುರುಷ ಧೀರೂ ಭಾಯ್ ಅಂಬಾನಿಯವರಾಗಲೀ ಅತೀ ಸಾಮಾನ್ಯ ಕುಟುಂಬದಿಂದ ಬಂದವರೇ ಆದರೂ, ಅವರ ಕಾಯಕ ನಿಷ್ಠೆ ಅವರನ್ನಷ್ಟು ಎತ್ತರಕ್ಕೆ ಕೊಂಡೊಯ್ಯಿತು.ಜಗಜ್ಯೋತಿ  ಬಸವಣ್ಣನವರು ಹೇಳಿದಂತೆ ಈ ಮಹಾನುಭಾವರುಗಳು”ಕಾಯಕದಲ್ಲೇ ಕೈಲಾಸ”,ಕಂಡವರು.They were masters of their minds,not slaves.ನಮ್ಮ ಧ್ಯೇಯ, ಉದ್ದೇಶ, ಗುರಿಯನ್ನು ಮುಟ್ಟುವವರೆಗೂ ವಿಶ್ರಾಂತಿ ತೆಗೆದುಕೊಳ್ಳದೆ,ಸತತ ಪ್ರಯತ್ನ ಮಾಡುವ ಅಚಲ ಮನಸ್ಸಿರಬೇಕು.

        ಬೀಗಿ ಬದುಕದೇ, ಬಾಗಿ ಬದುಕುವುದು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಇನ್ನೊಂದು ಮಹಾ ಗುಣ.ಒಂದು ಗಜ, ಮಾವುತನ ಭರ್ಜಿಗೆ ಹೆದರಿ ಬಾಗಿ , ಅವನ ಮಾತನ್ನ ಕೇಳಿದೆಯಾದರೆ, ಭಗವಂತನ ಉತ್ಸವವನ್ನು ಹೊರುವ ಸೌಭಾಗ್ಯ ಅದರದಾಗುತ್ತದೆ.ಆದೇ ಆ ಗಜವು ಸೋಲದಿದ್ದರೆ ಸರಪಳಿಯಲ್ಲಿ ಬಿಗಿದು, ಬಂಧಿಯಾಗಿಸುತ್ತಾರೆ. ಆದರೂ ಬಾಗದಿದ್ದಾಗ ಅಡವಿಗೆ ಬಿಟ್ಟುಬರುತ್ತಾರೆ.ವಿನಯದಿಂದ ಜ್ಞಾನ ಸಂಪಾದನೆ ಮಾಡಿದಷ್ಟೂ ವ್ಯಕ್ತಿ ಮೇಲೇರಲು ಸಾಧ್ಯವಾಗುತ್ತದೆ.ನಾನತ್ವವೆಂಬ ಅಹಂ ಬೆಳೆಸಿಕೊಂಡರೆ,ಬೆಳವಣಿಗೆ ಅಸಾಧ್ಯ.ಹಿರಿಯರ, ಜ್ಞಾನಿಗಳ,ಸಹವಾಸದಲ್ಲಿ ಸೌಜನ್ಯದಿಂದ ವರ್ತಿಸಿ ಜ್ಞಾನ ಸಂಪಾದನೆ ಮಾಡಿಕೊಳ್ಳುವವನು ಎಲ್ಲರಿಂದಲೂ ಪೂಜನೀಯನಾಗುತ್ತಾನೆ.

ಸರ್ವಜ್ಞ ಮಹಾಕವಿಯು ತಾನು ಹೇಗೆ  ಸರ್ವಜ್ಞನೆನಿಸಿಕೊಂಡೆ ಎಂದು ತಮ್ಮ ತ್ರಿಪದಿಯೊಂದರಲ್ಲಿ ಹೀಗೆ ಒಕ್ಕಣಿಸಿದ್ದಾರೆ……

ಸರ್ವಜ್ಞನೆಂಬುವನು ಗರ್ವದಿಂದಾವನೇ?

ಸರ್ವರೊಳಗೊಂದು ನುಡಿಯ ಕಲಿತು,

ವಿದ್ಯೆಯ ಪರ್ವತವೇ ಆದ ಸರ್ವಜ್ಞ.

ಎಂದು ಮಹಾಕವಿಯು, ಎಷ್ಟು ವಿನಮ್ರಭಾವದಿಂದ,ಹೇಳಿಕೊಂಡಿರುವಲ್ಲಾ!

ಅಂತೆಯೇ ಸಾಧಕರಿಗೆ ವಿಧೇಯತೆಯೂ ಒಂದು ಬಹು ಮುಖ್ಯವಾದ ಬೇಕಾದ ಗುಣ.

          ವ್ಯಕ್ತಿತ್ವ ವಿಕಸನವೆನ್ನುವ ವಿಷಯವು ಇಷ್ಟಕ್ಕೆ ಮಾತ್ರವೇ ಮುಗಿಸುವಂತಹ ಪುಟ್ಟ ವಿಷಯವಲ್ಲ.ಅದರ ವ್ಯಾಪ್ತಿ ಬಹಳ ವಿಸ್ತಾರವಾದದ್ದು. ಆದರೂ ನಿಯಮxaxxxxxವಿರುವ ಪರಿಮಿತಿಯಲ್ಲಿ ಲೇಖನಿಸಿದ್ದೇನೆ.ಕನಿಷ್ಟ, ಇಲ್ಲಿ ತಿಳಿಸಿರುವಷ್ಟು ಗುಣಗಳನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡೆವಾದರೆ,ನಮ್ಮ ವ್ಯಕ್ತಿತ್ವ ಸಾಕಷ್ಟು ವಿಕಸನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

————————–

.

ರೂಪ ಮಂಜುನಾಥ

2 thoughts on “ವ್ಯಕ್ತಿತ್ವ ವಿಕಸನ -ರೂಪ ಮಂಜುನಾಥ ಲೇಖನ

Leave a Reply