ಪ್ರಸ್ತುತ

ಅಕ್ಷರಸಂತ ಹಾಜಬ್ಬ

ಕೆ.ಶಿವು ಲಕ್ಕಣ್ಣವರ

ಸ್ವಂತ ದುಡುಮೆಯಿಂದ ಶಾಲೆ ಕಟ್ಟಿಸಿದ ಹರೆಕಳ ಹಾಜಬ್ಬರು ಪದ್ಮಶ್ರೀ ಪಡೆದ ಸಾಹಸಗಾಥೆ..!

ಆ ವ್ಯಕ್ತಿ ಕೋಟ್ಯಾಧಿಪತಿಯಲ್ಲ. ಸ್ವಂತಮನೆಯೂ ಅವನಿಗೆ ಇರಲಿಲ್ಲ. ಉನ್ನತ ವಿದ್ಯಾಭ್ಯಾಸವಂತೂ ದೂರದ ಬೆಟ್ಟವಾದರೂ ಅಕ್ಷರ ಸ್ನೇಹಿ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹರೆಕಳ ಹಾಜಬ್ಬನವರು ತಮ್ಮ ಜೀವನ ಸುಃಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು…

ಹಾಜಬ್ಬನವರು ಕಿತ್ತಳೆ ವ್ಯಾಪಾರದಿಂದ ಅವರಿಗೆ ದಿನಕ್ಕೆ ಲಭಿಸುವುದು ಕೇವಲ 100 ರಿಂದ 120ರೂಪಾಯಿ. ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ಮಾರುವ ಮೂಲಕ ಅಕ್ಷರದ ಕನಸುಗರು. ಹಾಜಬ್ಬ ಅವರು ಬೆಳಗಾಗುತ್ತಲೇ ಬಿಳಿ ಆಂಗಿ ಬಿಳಿ ಪಂಚೆ ಧರಿಸಿ ಮಂಗಳೂರಿನ ಬಸ್‌ ನಿಲ್ದಾಣಗಳಲ್ಲಿ ಬುಟ್ಟಿ ಹಿಡಿದು ಕಿತ್ತಳೆ ಹಣ್ಣು ಮಾರುವ ಕಾಯಕ ಮುಂದುವರಿಸಿದ್ದಾರೆ…

ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೇಕಳ ಇವರ ಊರು…

ಹಾಜಬ್ಬ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದು, ಪುತ್ರ ಪೈಂಟಿಂಗ್ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ…

ಹೀಗೆ ಹಣ್ಣು ಮಾರುವಾಗ ವಿದೇಶಿ ವ್ಯಾಪಾರಿಯೊಬ್ಬರು ಇಂಗ್ಲೀಷ್ ನಲ್ಲಿ ಹಣ್ಣಿನ ಬೆಲೆ ಕೇಳುತ್ತಾರೆ. ಶಿಕ್ಷಣ ಇಲ್ಲದ ಹಾಜಬ್ಬರಿಗೆ ಬೆಲೆ ಹೇಳಲು ಗೊತ್ತಾಗುವುದಿಲ್ಲ. ಇದರಿಂದ ಮನನೊಂದ ಹಾಜಬ್ಬ ಅವರಿಗೆ ಶಿಕ್ಷಣ ಎಷ್ಟು ಮುಖ್ಯ ಅನ್ನೋದು ಮನದಟ್ಟು ಆಗುತ್ತದೆ. ತನ್ನದೇ ಊರಿನಲ್ಲಿದ್ದ ಮಕ್ಕಳಿಗೆ ಹತ್ತಿರದಲ್ಲೇ ಇದ್ದ ಖಾಸಗಿ ಶಾಲೆಗೆ ಸೇರಿಸಲು ಊರಿನ ಜನರು ಪರದಾಡುವುದನ್ನ ನೋಡಿ ಹಾಜಬ್ಬ ನಮ್ಮ ಊರಿಗೆ ಉಚಿತ ಶಿಕ್ಷಣ ಸಿಗೋ ಶಾಲೆ ಬೇಕು ಅನ್ನೋ ನಿರ್ಧಾರಕ್ಕೆ ಬರುತ್ತಾರೆ. ಹೇಗಾದರೂ ಮಾಡಿ ಶಾಲೆ ಕಟ್ಟಲೇ ಬೇಕು ಅಂತ ನಿರ್ಧಾರ ಮಾಡಿ ಶಾಲೆ ಕಟ್ಟಲು, ಜಾಗಕ್ಕಾಗಿ ಸರ್ಕಾರಿ ಕಛೇರಿಗಳನ್ನು ಅಲೆಯೋದಕ್ಕೆ ಶುರು ಮಾಡಿದರು. ಮೂರು ದಿನಗಳ ನಂತರ ಹಾಜಬ್ಬರ ಆಸೆಯಂತೆ ಸರ್ಕಾರದಿಂದ ಸ್ವಲ್ಪ ಜಾಗ ಸಿಕ್ಕುತ್ತದೆ. ಜಾಗ ಸಿಕ್ಕ ನಂತರ ಅಧಿಕಾರಿಗಳು ಸ್ಥಳ ಕೊಟ್ಟು ಕೈ ತೊಳೆದು ಕೊಳ್ಳುತ್ತಾರೆ. ಆದರೆ ಹಾಜಬ್ಬ ಸುಮ್ಮನಾಗೋದಿಲ್ಲ. ಹಾಜಬ್ಬ ಅಂದಿನಿಂದ ಹೆಚ್ಚಿನ ಸಮಯ ಕಿತ್ತಳೆ ಹಣ್ಣು ಮಾರೋದಕ್ಕೇ ಶುರು ಮಾಡುತ್ತಾರೆ.
ಯಾಕೆಂದರೆ ಕಿತ್ತಳೆ ಹಣ್ಣನ್ನು ಮಾರಿ ಬಂದ ಹಣದಿಂದ ಹಾಜಬ್ಬ ತನ್ನ ಹೆಂಡತಿ ಮಕ್ಕಳನ್ನ ಸಾಕಬೇಕಿತ್ತು. ಇನ್ನು ಹಣ್ಣು ಮಾರಿ ಬಂದ ನಂತರ ಹಳೆ ಬಟ್ಟೆ ತೊಟ್ಟು ಹಾಜಬ್ಬ ಶಾಲೆಗೆ ಕೊಟ್ಟ ಜಾಗವನ್ನು ಸಮತಟ್ಟು ಮಾಡೋ ಕೆಲಸ ಪ್ರಾರಂಭ ಮಾಡ್ತಾರೆ. ಇದಾದ ನಂತ್ರ ಹೆಚ್ಚುಹೊತ್ತು ಹಣ್ಣು ಮಾರಿ ಕೊಡಿಟ್ಟ ಹಣದಲ್ಲಿ ಶಾಲೆ ಕಟ್ಟಲು ಜಲ್ಲಿ ಸೀಮೆಂಟ್ ಇಟ್ಟಿಗೆಯನ್ನು ತರಿಸಿ ಶಾಲೆ ಕಟ್ಟಡ ಕಟ್ಟಲು ಶುರು ಮಾಡುತ್ತಾರೆ…

1995ರಿಂದ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುತ್ತಾರೆ. 1999-2000ರ ಸಾಲಿಗೆ ನ್ಯೂಪಡುಗೆ ಪ್ರಾಥಮಿಕ ಶಾಲೆ ಮಂಜೂರಾಗುತ್ತದೆ. ಆದರೆ ಮೂಲ ಸೌಕರ್ಯದ ವ್ಯವಸ್ಥೆ ಮಾಡುವುದು ಕಷ್ಟಕರವಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಹಾಜಬ್ಬ ಸರಕಾರಿ ಇಲಾಖೆ ಸೇರಿದಂತೆ ದಾನಿಗಳ ಸಹಕಾರದಿಂದ ಶಾಲಾ ಕಟ್ಟಡ ಸೇರಿದಂತೆ, ಮೈದಾನ ನಿರ್ಮಿಸಿಕೊಡುತ್ತಾರೆ. 1999ರಲ್ಲಿ ಹರೇಕಳದಲ್ಲಿ ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಪಾಠ ಶಾಲೆ ಶುರುವಾಗುತ್ತದೆ. ಶಾಲೆ ಕಟ್ಟಿ ಸುಮ್ಮನಾಗದ ಹಾಜಬ್ಬ ಶಾಲೆಯ ಕಸ ಗುಡಿಸೋದು ,ತೊಳೆಯೋ ಕೆಲಸವನ್ನು ತಾವೇ ಮಾಡುತ್ತಾರೆ…

ಕಿತ್ತಲೆ ವ್ಯಾಪಾರ ಮುಗಿಸಿ ಮನೆಗೆ ಹೋದವರೇ ಹಳೆ ಬಟ್ಟೆ ತೊಟ್ಟುಕೊಂಡು ಜಾಗ ಸಮತಟ್ಟು ಮಾಡಲು ಶುರುವಿಟ್ಟುಕೊಳ್ಳುತ್ತಾರೆ. ಅದೆಷ್ಟೋ ದಿನದ ನಂತರ ಜಾಗ ಸಮತಟ್ಟುಗೊಳ್ಳತದೆ.
ನಂತರ ಕಿತ್ತಳೆ ಹಣ್ಣಿನ ವ್ಯಾಪಾರದಲ್ಲಿ ಶಾಲೆಗಾಗಿ ಉಳಿಸಿದ ಹಣದಲ್ಲಿ ಜಲ್ಲಿ, ಕಲ್ಲು, ಸಿಮೆಂಟು ತಂದು ರಾಶಿ ಹಾಕುತ್ತಾರೆ. ಹಣ ಇದ್ದಷ್ಟು ಕೆಲಸದವರನ್ನು ನೇಮಿಸಿ ಕಟ್ಟಡ ಕೆಲಸ ಶುರುವಿಟ್ಟುಕೊಳ್ಳುತ್ತಾರೆ. ಹಣ ಖಾಲಿಯಾದರೆ ತಾನೇ ಮೇಸ್ತ್ರಿಯಾಗಿ ಕೆಲಸ ಮಾಡುತ್ತಾರೆ. ಅಂತೂ, ಹಾಜಬ್ಬರ ಸಂತೋಷಕ್ಕೆ ಪಾರವೇ ಇರುದಿಲ್ಲ. ಚಿಕ್ಕ ಮಗುವಿನಂತೆ ಕುಣಿತ್ತಾರೆ. ದಿನಾ ಶಾಲೆಯಲ್ಲಿ ನೆಲ ಒರೆಸುವುದರಿಂದ ಹಿಡಿದು, ಅಂಗಳ ಗುಡಿಸುವುದನ್ನೂ ತಾನೇ ನಿರ್ವಹಿಸಿ ಕಿತ್ತಳೆ ವ್ಯಾಪಾರಕ್ಕೆ ತೆರಳುತ್ತಾರೆ. ಅಷ್ಟರಲ್ಲಿ ಹಾಜಬ್ಬರ ಪತ್ನಿ ಮೈಮುನಾ ಆರೋಗ್ಯ ಕೈಕೊಡುತ್ತದೆ. ಆದರೆ ಮಗುವಿನ ಮನಸ್ಸಿನ ಹರೆಕಳ ಹಾಜಬ್ಬರಿಗೆ ಹೊಸತೊಂದು ಆಶೆ ಹುಟ್ಟಿಕೊಳ್ಳುತ್ತದೆ. ಅದು ಐದನೇ ತರಗತಿಯವರೆಗೆ ಇದ್ದ ಶಾಲೆಯನ್ನು ಏಳನೇ ತರಗತಿಯವರೆಗೆ ವಿಸ್ತರಿಸುವುದು…

ಒಂದು ಸರ್ಕಾರ ಮಾಡಬೇಕಾದ ಎಲ್ಲಾ ಕೆಲಸವನ್ನು ಕೇವಲ ಕಿತ್ತಳೆ ಹಣ್ಣು ಮಾರಾಟ ಮಾಡಿದ ದುಡ್ಡಿನಲ್ಲಿ ಹಾಜಬ್ಬ ಮಾಡುತ್ತಿರುವುದನ್ನು ಗಮನಿಸಿದ ಹಲವಾರು ಸಂಘ ಸಂಸ್ಥೆಗಳು ಹಾಜಬ್ಬರನ್ನು ಕರೆದು ಸನ್ಮಾನಿಸುತ್ತವೆ. ಆ ಸನ್ಮಾನದ ಪತ್ರದ ಜೊತೆ ನೀಡುವ ಕವರಿನಲ್ಲಿ ಐನೂರು ರೂಪಾಯಿಯೋ, ಒಂದು ಸಾವಿರ ರೂಪಾಯಿಯೋ ಇರುತ್ತಿದ್ದವು. ಅದೆಲ್ಲವೂ ಬಳಕೆಯಾಗುತ್ತಿದ್ದುದು ಶಾಲೆಯ ಕಲ್ಲು,ಜಲ್ಲಿ, ಮರಳು, ಸಿಮೆಂಟಿಗೆ. ಹಾಜಬ್ಬರ ಶಾಲೆ ಪ್ರಚಾರಕ್ಕೆ ಬಂದ ನಂತರ ಮಂಗಳೂರಿನಲ್ಲಿರುವ ಕೆಲವೊಂದು ಪ್ರತಿಷ್ಠಿತ ಕಂಪನಿಗಳೂ ಹಾಜಬ್ಬರ ಸಾಧನೆ ಕಂಡು ಹರೆಕಳ ಗ್ರಾಮಕ್ಕೆ ಬಂದು ಶಾಲೆ ವೀಕ್ಷಿಸಿ ಒಂದಷ್ಟು ದಾನ ಮಾಡಿದ್ದಾರೆ. ಒಂದೆರಡು ಲಕ್ಷ ರೂಪಾಯಿ ದಾನ ಮಾಡಿ ಗೊಡೆಯಲ್ಲಿ ಹೆಸರು ಕೆತ್ತಿಸಿಕೊಳ್ಳುತ್ತಾರೆ. ಆದರೆ ಶಾಲೆಯ ಎಲ್ಲೂ ಹಾಜಬ್ಬರ ಹೆಸರಾಗಲೀ, ಫೋಟೋ ಆಗಲಿ ಕಾಣ ಸಿಗುವುದಿಲ್ಲ…

ಒಮ್ಮೆ ಕಟ್ಟಡದ ಕಾಂಕ್ರೀಟ್ ಕೆಲಸ ನಡೆಯುತ್ತಿದ್ದಾಗ ಸಿಮೆಂಟಿಗೆ ನೀರು ಹಾಕಲು ಕಟ್ಟಡದ ಮೇಲೆ ಹೋದ ಹಾಜಬ್ಬ ಆಯ ತಪ್ಪಿ ಮೇಲಿಂದ ಕೆಳಗೆ ಬಿದ್ದು ಬಿಟ್ಟರು. ತನ್ನ ಕೈಗೆ ಬಂದ ಸನ್ಮಾನದ ದುಡ್ಡುಗಳೆಲ್ಲಾ ಕಟ್ಟಡದ ಪಾಲಾಗಿತ್ತು. ಖಾಸಗಿ ಆಸ್ಪತ್ರೆಗೆ ಸೇರಿದರೆ ಬಿಲ್ಲು ತೆರಲು ದುಡ್ಡಿಲ್ಲ. ಅದಕ್ಕಾಗಿ ಸರಕಾರಿ ಆಸ್ಪತ್ರೆಯಲ್ಲಿ ತುಂಬಾ ಸಮಯ ಚಿಕಿತ್ಸೆ ಪಡೆಯಬೇಕಾಯಿತು. ಇದರಿಂದಾಗಿ ಹಾಜಬ್ಬರ ಹೈಸ್ಕೂಲ್ ಕಟ್ಟಡ ನೆನೆಗುದಿಗೆ ಬಿತ್ತು. ಅಂತೂ ಇಂತೂ ಸಾವರಿಸಿಕೊಂಡ ಹಾಜಬ್ಬ ಆಸ್ಪತ್ರೆಯಿಂದ ಬಿಡುಗಡೆ ಆದವರೇ ಮತ್ತೆ ಕಟ್ಟಡ ನಿರ್ಮಾಣಕ್ಕೆ ತೊಡಗಿಕೊಳ್ಳುತ್ತಾರೆ. ಕೊನೆಗೂ ಹೈಸ್ಕೂಲ್ ಕಟ್ಟಡ ಪೂರ್ಣಗೊಳ್ಳುತ್ತದೆ…

ಹಾಜಬ್ಬ ಇಷ್ಟೆಲ್ಲಾ ಮಾಡಿದ್ದು ಸರಕಾರಿ ಶಾಲೆಯೊಂದರ ನಿರ್ಮಾಣಕ್ಕೆ. ಅಲ್ಲಿರುವುದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ. ಇಡೀ ಶಾಲೆಗೆ ಸರಕಾರಿ ಜಮೀನೊಂದು ಹೊರತುಪಡಿಸಿ ಉಳಿದೆಲ್ಲಾ ಹಣ ಬಳಕೆಯಾಗಿದ್ದು ಹಾಜಬ್ಬರದ್ದು ಮತ್ತು ದಾನಿಗಳದ್ದು. ಕನ್ನಡಪ್ರಭ ಮತ್ತು ಸಿಎನ್ಎನ್-ಐಬಿಎನ್ ಸನ್ಮಾನ ಸೇರಿದಂತೆ ಸಂಘ ಸಂಸ್ಥೆಗಳು ಮಾಡಿದ ಸನ್ಮಾನದ ದುಡ್ಡು ಮತ್ತು ಕಿತ್ತಳೆ ಹಣ್ಣಿನ ವ್ಯಾಪಾರದಿಂದಲೇ ಒಂದು ಪೂರ್ಣ ಪ್ರಮಾಣದ ಸರಕಾರಿ ಶಾಲೆಯನ್ನು ನಿರ್ಮಿಸಿದರು. ಹಾಜಬ್ಬರ ಮಗ ಹಾಜಬ್ಬರೇ ನಿರ್ಮಿಸಿದ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದವರೆಗೆ ಹಾಜಬ್ಬರೇ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿದ್ದರು. ಕಳೆದ ಜೂನ್‌ನಿಂದ ಹಾಜಬ್ಬರ ಮಕ್ಕಳ ಹೈಸ್ಕೂಲ್ ವಿದ್ಯಾಬ್ಯಾಸ ಪೂರ್ಣಗೊಂಡಿದೆ. ಈಗ ಹಾಜಬ್ಬರಿಗೂ ಹೈಸ್ಕೂಲ್‌ಗೂ ಸಂಬಂಧವೇ ಇಲ್ಲ. ತಾನೇ ಕಟ್ಟಿದ ಶಾಲೆಗೆ ತಾನೊಬ್ಬ ‘ಸಾರ್ವಜನಿಕ’ಮಾತ್ರ. ಆದರೆ ಹಾಜಬ್ಬ ಈಗಲೂ ಬೆಳಿಗ್ಗೆ ಶಾಲೆಗೆ ಹೋಗಿ ಸ್ವಚ್ಚತೆ ನಿರ್ವಹಿಸಿ ಬರುತ್ತಾರೆ…

ರಾಜ್ಯೋತ್ಸವ ಪ್ರಶಸ್ತಿ,
2004 ರಲ್ಲಿ ಕನ್ನಡಪ್ರಭ ಪತ್ರಿಕೆ ಹಾಜಬ್ಬರನ್ನು “ವರ್ಷದ ವ್ಯಕ್ತಿ” ಎಂದು ಪ್ರಶಸ್ತಿ ನೀಡುತ್ತದೆ.
ಸಿಎನ್ಎನ್-ಐಬಿಎನ್ ಪ್ರಶಸ್ತಿ ಕೂಡ ದಕ್ಕುತ್ತದೆ.
ಪದ್ಮಶ್ರೀ ಪ್ರಶಸ್ತಿ ಈಗ ಸಿಗುತ್ತದೆ…

ಇಂತಹ ಸಾಧಕ ಹರೇಕಳ ಹಾಜಬ್ಬ ಎಂತಹವಿರಿಗಾದರೂ‌ ಮಾದರಿಯಾಗುತ್ತಾರೆ…
‌‌‌‌‌‌‌ ‌‌‌‌ *************************

One thought on “ಪ್ರಸ್ತುತ

Leave a Reply

Back To Top