ಗಝಲ್
ಸುಜಾತಾ ಲಕ್ಮನೆ
ಧುಮ್ಮಿಕ್ಕಿ ಇಳಿದು ಬಾ ಜಲಧಾರೆಯಂತೆ ಕರೆವೆ ನನ್ನೊಳಗೆ
ಒತ್ತಾಸೆಯಾಗಿ ನಿಲ್ಲು ಬಾ ನದಿ ದಂಡೆಗಳಂತೆ ಹರಿವೆ ನಿನ್ನೊಳಗೆ
ನನ್ನ ನೆರಿಗೆ ನೆರಿಗೆಯೊಳಗೂ ಹುದುಗಿ ಹೀಗೆ ಕಾಡುವುದೇಕೆ
ಚಿತ್ತಾರದಂಚಿನ ಸೆರಗಾಗಿ ಬೀಸಿ ಬಾ ತೊನೆವೆ ತೆಕ್ಕೆಯೊಳಗೆ
ಮುಸ್ಸಂಜೆ ಮಾಧುರ್ಯ ಮಗುಚಿ ಬಿದ್ದಿದೆ ಇಲ್ಲಿ ನೀನಿಲ್ಲದೆ
ಸಂಪ್ರೀತಿ ಕೊಡವ ಹೊತ್ತು ಬಾ ಮಧು ಸುರಿವೆ ಒಳಗೊಳಗೆ
ಸುರಚಾಪದಲ್ಲೇನಿಹುದು ಬಿಡು ಅಂಥ ಬಣ್ಣ ಬಣ್ಣದ ಆಟೋಪ
ರಂಗಿನೋಕುಳಿಯ ಎರಚಿ ಬಾ ಆಡೋಣವೆ ಕಣ್ ಕಣ್ಣೊಳಗೆ
ಜೀವ ಸೊಬಗನ್ನೆಲ್ಲ ಒಂದೇ ಗುಕ್ಕಿನಲ್ಲಿ ಸೂರೆಗೊಂಡರೆ ಸಾಕೆ
ಗುಟುಕು ಗುಟುಕಾಗಿ ಹೀರು ಬಾ ಉಸಿರಾಗುವೆ ಎದೆಯೊಳಗೆ
ಪ್ರೀತಿಗೊಂದಿಷ್ಟು ಬದ್ಧತೆಯ ಬೆರೆಸಿ ಸಂತಸದಿ ಸಾಗೋಣ ಮುಂದೆ
ಮೌನದಲೂ ಮಾತಾಗಿ ಮತ್ತೇರಿ ಬಾ ಮುತ್ತಾಗುವೆ ಮನದೊಳಗೆ
“ಸುಜೂ” ಳ ಪರಮ ಸುಖದ ಕನಸ ಪರಿಯ ಬಣ್ಣಿಸಲೆಂತು ಹೇಳು
ಪರಿ ಪರಿಯಲಿ ಬಯಸಿ ಒಲಿದೊಲಿದು ಬಾ ಪಲ್ಲವಿಸುವೆ ಬಾಳೊಳಗೆ